ಶ್ರಾವಣ ಶುಕ್ಲ ಪಂಚಮಿಯು ನಾಗಪಂಚಮೀ ಎಂದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ನಾಗಪೂಜೆಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಕೇಳುತ್ತೇವೆ.
ತನ್ನ ಬುದ್ಧಿಸಾಮರ್ಥ್ಯಗಳಿಂದ ನಿಸರ್ಗದ ಆಳ-ಅಗಲಗಳ ಅಳತೆಯನ್ನು ಮಾಡುತ್ತಾ ಅನೇಕ ರಂಗಗಳಲ್ಲಿ ಯಶಸ್ಸನ್ನು ಸಾಧಿಸಿದ ಮಾನವನೆಲ್ಲಿ? ತಾನು ಹುಟ್ಟಿದಂದಿನಿಂದ ನಿಸರ್ಗವಿಟ್ಟಂತೆಯೇ ಇರುವ ಯಾವ ಹೆಗ್ಗಳಿಕೆಯೂ ಇಲ್ಲದ ನಾಗವೆಲ್ಲಿ? ಅಂತಹ ಕ್ಷುದ್ರ ವಿಷಜಂತುವನ್ನು ನಿಸರ್ಗದ ಮಹಾನ್ವೇಷಕನಾದ ಮಾನವನು ಪೂಜಿಸುವುದು ಮನುಕುಲಕ್ಕೇ ಅಪಮಾನವಲ್ಲವೇ?
ನಾಗಪೂಜೆ ಹೇಗೆ ಸಮರ್ಥನೀಯ? ಜೀವನಕ್ಕೆ ಅದು ಯಾವ ಮೇಲ್ಮೆಯನ್ನು ತರುತ್ತದೆ? ನಾಗಪೂಜೆಯು, ಕ್ಷುದ್ರ ವಿಷಜಂತುವಿನ ಮೂಢ ಆರಾಧನೆಯೇ ಆದರೆ ಅದನ್ನು ಕೈಬಿಡುವುದೇ ಲೇಸು. ಇದಲ್ಲದೇ ವಸ್ತುನಿಷ್ಠವಾದ ವಿಷಯಗಳೂ ಆ ಪೂಜೆಯಲ್ಲಿವೆ ಎಂಬುದಾದರೆ ಅಂತಹ ಮೌಲಿಕವಾದ ವಿಷಯಗಳು ಬೆಳಕಿಗೆ ಬರಬೇಕಾಗುತ್ತದೆ. ಮಹರ್ಷಿ ಹೃದಯ ವೇದಿಗಳಾದ ಶ್ರೀರಂಗ ಮಹಾಗುರುಗಳ ನೋಟದಿಂದ ಇಷ್ಟು ಸಣ್ಣ ಲೇಖನದಲ್ಲಿ ಎಷ್ಟನ್ನು ಹೇಳಲು ಸಾಧ್ಯವೋ ಅಷ್ಟನ್ನು ಮಾತ್ರ ಗಮನಿಸೋಣ.
ಮಹರ್ಷಿ ಪ್ರಣೀತ ಆಚರಣೆ:
ಜೀವನವನ್ನು, ಒಳತುಂಬುನೋಟದಿಂದ ಅನ್ವೇಷಿಸಿದಾಗ ಬಂದ ನಿಷ್ಕರ್ಷೆಯಿಂದ ಜೀವನದ ನಡವಳಿಕೆಗಳನ್ನು ರೂಪಿಸಿದ ನಮ್ಮ ಸನಾತನ ಭಾರತೀಯ ಮಹರ್ಷಿಗಳಿಂದಲೇ ಈ ನಾಗಪೂಜೆಯೂ ರೂಪವನ್ನು ತಳೆದಿದೆ ಎಂಬುದನ್ನು ನಾವು ಗಮನಿಸಬೇಕು. ಅವರು ಪೂಜಿಸಿದ ಆ ನಾಗ ಕೇವಲ ಕ್ಷುದ್ರಜಂತು ಮಾತ್ರವಲ್ಲ ಎನ್ನುವುದೂ ಅಷ್ಟೇ ಸತ್ಯವಾದ ವಿಷಯ. ಹಾಗಾದರೆ ಯಾವುದು ಆ ನಾಗ? ಎಲ್ಲಿದೆ?
ನಾಗ-ಕುಂಡಲಿನೀ
ಪ್ರತಿ ಜೀವಿಗಳ ಮೂಲಾಧಾರ ಎಂಬ ಶರೀರದ ಕೇಂದ್ರದಲ್ಲಿ ಸುಪ್ತವಾಗಿ ಸುತ್ತು ಹಾಕಿಕೊಂಡಿರುವ ಕುಂಡಲಿನೀ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯೇ ಅವರು ಗುರುತಿಸಿದ ನಾಗ ಶಕ್ತಿ. ಅದು ಮೆದುಳುಬಳ್ಳಿಯಾಗಿ ವಿಕಾಸಗೊಂಡು ನಂತರ ಬೆನ್ನುಮೂಳೆಯಾಗುವ ಸುಷುಮ್ನೆಯೇ ಜೀವಿಯ ಇಹ ಮತ್ತು ಪರಗಳಿಗೆ ಆಧಾರವಾದ ಶಕ್ತಿಯನ್ನೊದಗಿಸುವ ಕೇಂದ್ರ. ನಮ್ಮ ಭೌತಿಕ ಜೀವನಕ್ಕೆ ಅಗತ್ಯವಾದ ಕೇಂದ್ರಗಳೂ ಆ ಮೂಳೆಯ ಪರ್ವಸ್ಥಾನದಿಂದಲೇ ಅರಳುತ್ತವೆಎಂಬುದನ್ನು ಆಧುನಿಕ ವಿಜ್ಞಾನವೂ ಒಪ್ಪುತ್ತದೆ. ಬೆನ್ನೆಲುಬೇ ಜೀವನದ ಆಧಾರ ಎನ್ನುವ ಮಾತೂ ಜನಜನಿತವಾಗಿದೆ.
ಶಂಕರ ಭಗವತ್ಪಾದರು ತಮ್ಮ ಯೋಗತಾರಾವಳಿಯಲ್ಲಿ ಆ ನಾಗನನ್ನು ಹೀಗೆ ವರ್ಣಿಸುತ್ತಾರೆ:
"ಉಡ್ಯಾಣ, ಜಾಲಂಧರ, ಮೂಲ ಎಂಬ ಬಂಧಗಳಿಂದ ನಾಗ ಶಕ್ತಿಯು ಎಚ್ಚರಗೊಳಿಸಲ್ಪಡುತ್ತದೆ. ಆಗ ಹಿಮ್ಮುಖವಾಗಿ ಸುಷುಮ್ನೆಯನ್ನು ಪ್ರವೇಶಿಸಿದ ಪ್ರಾಣಶಕ್ತಿಯು ತನ್ನ ಗತಾಗತಿಯನ್ನು ಬಿಡುತ್ತದೆ" ಎಂದು.
ಜೀವನದ ಕಟ್ಟುಗಳಿಂದ ಪಾರಾಗಲು ಕೆಲವು ಚೌಕಟ್ಟಿಗೆ ಒಳಪಡಬೇಕಾಗುತ್ತದೆ. ಮೂಲಬಂಧವೆಂಬುದು ಪೃಷ್ಠಾಸ್ಥಿಮೂಲದಲ್ಲಿ ಏರ್ಪಡುವ ಒಂದು ಕಟ್ಟು. ಉಡ್ಯಾಣಬಂಧವು ಉದರ ಅಥವಾ ನಾಭಿದೇಶದಲ್ಲಿ ಏರ್ಪಡುವ ಕಟ್ಟು. ಜಾಲಂಧರವೆಂಬುದು ಕಂಠಪ್ರದೇಶದಲ್ಲಿ ಏರ್ಪಡುವ ಒಂದು ಕಟ್ಟು. ಈ ಮೂರೂ ಕಟ್ಟುಗಳೂ ಏರ್ಪಟ್ಟಾಗ ಆ ಸಂದರ್ಭದಲ್ಲಿ ಏಳುವ ನಾಗಶಕ್ತಿ, ಕುಂಡಲಿನೀ ಶಕ್ತಿ. ಅದುವೇ ಅವರು ಪೂಜಿಸಿದ ನಾಗಶಕ್ತಿ. ತಮ್ಮ ಒಳಮುಖಜೀವನದ ನಡೆಯಿಂದ ಸುಷುಮ್ನೆಯನ್ನು ಪ್ರವೇಶಿಸುವ ಸಾಹಸಕ್ಕಿಳಿದು, ಆ ಬಗ್ಗೆ ಸೂಕ್ತ ಮಾರ್ಗದರ್ಶನ, ಗುರುವಿನ ಅನುಗ್ರಹವನ್ನು ಪಡೆದು ಸಾಧನೆ ಮಾಡುವವರಿಗೆ ಪ್ರಾಣಶಕ್ತಿಯು ಸುಷುಮ್ನೆಯಲ್ಲಿ ಪ್ರವೇಶಿಸತೊಡಗಿದಾಗ ಆ ಸುಪ್ತನಾಗವು ಎಚ್ಚರಗೊಳ್ಳುತ್ತದೆ ಮತ್ತು ತನ್ನ ಸುತ್ತುಗಳನ್ನು ಬಿಚ್ಚುತ್ತದೆ. ಆ ಶಕ್ತಿಯು ಶರೀರದ ಆರೂ ಕೇಂದ್ರಗಳನ್ನು ಭೇದಿಸಿಕೊಂಡು ಏಳನೆಯದಾದ ಸಹಸ್ರಾರವೆಂಬ ಪರಮ ಆನಂದದ ಎಡೆಯಲ್ಲಿ ನೆಲೆ ನಿಲ್ಲುತ್ತದೆ.
ಹೀಗೆ ಅವರು ಆರಾಧಿಸಿರುವ ನಾಗ ಹೊರ ವಿಷಜಂತುವಲ್ಲ. ಜೀವನಕ್ಕೆ ಚೈತನ್ಯವನ್ನೆರೆಯುವ ಜೀವನದ ಸಾರವಾದ ಶಕ್ತಿ. ಅದರ ಹಾದಿ ಹಿಡಿದು ಹೊರಟಾಗ ಜೀವಿಗಳನ್ನು ನೆಲೆ ಮುಟ್ಟಿಸಬಲ್ಲ ಮಹಾಶಕ್ತಿ. ಆ ಸುಷುಮ್ನಾಂತರ್ಗತವಾದ ಮಹಾಶಕ್ತಿಯೇ ಜೀವನದ ಒಳಹೊರ ರಹಸ್ಯಗಳನ್ನು ಬಿಚ್ಚಿಕೊಡುವ ಭಂಡಾರವಾದುದರಿಂದಲೇ ಅದರ ಆರಾಧನೆ. ಒಳಗೆ ಪ್ರಣವರೂಪವಾಗಿ ಮೊಳಗುವ ಮಹಾಶಕ್ತಿಯೂ ಅದೇ.
ನಾಗಪಂಚಮಿಯ ದಿನ ಅಂತಹ ನಾಗಪೂಜೆಗೆ ಬೇಕಾದ ಧರ್ಮವು ಕಾಲದಲ್ಲಿಯೇ ಕೂಡಿಬರುವುದರಿಂದ ಅಂದು ಮಾಡುವ ಪೂಜೆಗೆ ವಿಶೇಷತೆಯಿರುವುದು. ಆ ಪೂಜೆಯ ವ್ಯವಸ್ಥೆಯಲ್ಲಿಯೂ ರಹಸ್ಯವಿದೆ. ಆ ಶಕ್ತಿಯು ಯಾವ ಅಮೃತ ರಸವನ್ನು ಚಂದ್ರಮಂಡಲದಿಂದ ಒಸರುತ್ತದೆಯೋ ಅದಕ್ಕೆ ಪ್ರತೀಕವಾದ, ಅಮೃತವೆಂದೇ ಹೆಸರು ಪಡೆದಿರುವ ಹಾಲು ತುಪ್ಪಗಳಿಂದಲೇ ಅದಕ್ಕೆ ಪೂಜೆ. ಬರೆಯುವ ಚಿತ್ರವೂ ಒಳಮುಖವಾದ ಪ್ರಾಣವೃತ್ತಿಯುಳ್ಳ, ಜ್ಞಾನಿಗಳಲ್ಲಿ ಪ್ರಬುದ್ಧವಾದ ಮಹಾಕುಂಡಲಿನಿಯ ಚಿತ್ರವನ್ನು ಸೂಚಿಸುವ ಐದು ಅಥವಾ ಏಳು ಹೆಡೆಯ ಸರ್ಪ.
ಹೊರಸರ್ಪವೇಕೆ ಪೂಜಾರ್ಹ?:
ಒಳನಡೆಯುಳ್ಳ ನಾಗಶಕ್ತಿಯನ್ನು ಗಮನಿಸಿದ ಜ್ಞಾನಿಗಳಿಗೆ ಹೊರಗಿನ ಈ ಸರ್ಪದಲ್ಲಿ ಒಂದೆರಡು ಅಂಶಗಳಲ್ಲಿ ಆ ಒಳ ಸರ್ಪವನ್ನು ಬಹುಪಾಲು ಹೋಲುವ ಹೊರಲಕ್ಷಣಗಳು ಕೂಡಿಬಂದಿರುವುದು ಗುರುತಿಗೆ ಸಿಕ್ಕಿತು. ಹೀಗೆ ಹೊರಗೆ ಅದನ್ನು ಕಂಡೊಡನೆ ಒಳನಡೆಯತ್ತ ಸೂಚನೆ ನೀಡುವ ಒಳ ನಾಗಶಕ್ತಿಯ ನೆನಪನ್ನು ತರುವ ಲಕ್ಷಣವುಳ್ಳ ಸರ್ಪಗಳನ್ನೂ ಒಳನಾಗಶಕ್ತಿಯ ಗೌರವದ ಪ್ರತೀಕವಾಗಿ ಪುಜಾರ್ಹವೆಂದು ಗುರುತಿಸಿದರು. ಆದ್ದರಿಂದ ಶುದ್ಧ ಧವಳವರ್ಣ, ಗೋಧಿನಾಗರ ಈ ಬಗೆಯ ಸರ್ಪಗಳ ಹೆಡೆ ಎತ್ತುವಿಕೆ ಆ ಒಳನಡೆಯನ್ನೇ ಹೋಲುವುದರಿಂದ ಹೆಡೆಯೆತ್ತಿದ
ಈ ನಾಗಪಂಚಮಿಯಂದು ಈ ನಾಗಾರಾಧನೆಯ ಒಳ ನೋಟವನ್ನು ಭಾವಿಸಿ ನಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸುವಂತಾಗಲಿ.ನಾಗದರ್ಶನ ಶುಭವೆಂದುದು ಆ ಒಳನಡೆಯತ್ತ ಅದು ಸೂಚಕವೆಂಬ ಕಾರಣದಿಂದಲೇ.
ಹೀಗೆ ಪೂಜಾವಿಧಾನದಲ್ಲಿಯೂ ತಾವು ಒಳನೋಟದಿಂದ ಕಂಡ ನಾಗದ ಕಡೆಗೆ ಅದನ್ನರಿಯದ ಜೀವಿಗಳನ್ನು ಸೆಳೆಯುವುದೇ ಜ್ಞಾನಿಗಳ ನಾಗಪೂಜೆಯ ತಿರುಳು. ಜೀವಿಗಳಿಗೆ ಚೈತನ್ಯದ ನೆಲೆಯಿಂದ ಯಾವರೂಪದಲ್ಲಿ ಶಕ್ತಿಯು ಹರಿದುಬರುತ್ತದೆಯೋ ಆ ರೂಪದಿಂದ ಅವರನ್ನು ಹಿಂತಿರುಗಿಸಿ ನೆಲೆಮುಟ್ಟಿಸುವಂತೆ ಮಾಡಿದ ಭಾರತಮಹರ್ಷಿಗಳ ಮಹಾ ಯೋಜನೆಯಿದಾಗಿದೆ. ಅದು ನಾವಿಂದು ಚರಿತ್ರೆಯಲ್ಲಿ ಓದುವ ಆರ್ಯರದೋ-ದ್ರಾವಿಡರದೋ ಕೊಡುಗೆಯಲ್ಲ. ಅದು ಒಳಗೆ ತುಂಬಿ ಬೆಳಗುವ ಕುಂಡಲಿನಿಯ ರಹಸ್ಯವರಿತ ಜ್ಞಾನಿಗಳ ಕರುಣೆಯ ಕೊಡುಗೆ.