Wednesday, July 22, 2020

ಶಾಸ್ತ್ರಗಳು ನಮಗೇಕೆ ಬೇಕು? (Shastragalu Namageke Beku?)

ಲೇಖಕರು:ಶ್ರೀರಾಮ ಚಕ್ರವರ್ತಿ 
 (ಪ್ರತಿಕ್ರಿಯಿಸಿರಿ lekhana@ayvm.in) ವಿಶಾಲ ಗಂಭೀರವಾದ ಸಮುದ್ರ, ಅದರ ಮೇಲೆ ಒಂದು ಸುಂದರವಾದ ನೌಕೆ. ಆ ನೌಕೆಯಲ್ಲಿ ಹತ್ತಾರು ಪ್ರಯಾಣಿಕರಿದ್ದಾರೆ. ಆ ಹಡಗು ಸಮುದ್ರತೀರವನ್ನು ತಲುಪಲು, ಅಲೆಗಳ ಏರಿಳಿತಗಳಿಗೆ ಅನುಗುಣವಾಗಿ ತೂಗುತ್ತಾ, ತೇಲುತ್ತಾ  ಮುಂದೆ-ಮುಂದೆ ಸಾಗುತ್ತಿತ್ತು. ಸಮುದ್ರದ ಭೋರ್ಗರೆತ ಹೆಚ್ಚಾಗಲಾರಂಭಿಸಿತು,  ಮಂದವಾಗಿದ್ದ ಅಲೆಗಳ ರಭಸ ಜೋರಾಯಿತು, ಚಂಡಮಾರುತದ ಲಕ್ಷಣಗಳು ಕಂಡುಬಂದವು. ಪರಿಣಾಮವಾಗಿ ನೌಕೆಯಲ್ಲಿಅಲ್ಲೋಲಕಲ್ಲೋಲವುಂಟಾಯಿತು , ಪ್ರಯಾಣಿಕರಲ್ಲಿ  ಆತಂಕ ಮತ್ತುಗಾಬರಿಯ ವಾತಾವರಣ ಆವರಿಸಿತು. ಇದನ್ನರಿತುಕೊಂಡ ನಾವಿಕರು ಪ್ರಯಾಣಿಕರಿಗೆ ಧೈರ್ಯವನ್ನು ತುಂಬುತ್ತಾ, ಹೆದರಬೇಕಾಗಿಲ್ಲ ನಾವು ಹೇಳುವ ನಿಯಮಗಳನ್ನು ಅನುಸರಿಸಿದರೆ, ಆಜ್ಞೆ ಮಾಡಿದ ಸ್ಥಳಗಳಲ್ಲಿಯೇ ಕುಳಿತುಕೊಳ್ಳುವುದೇ ಆದರೆ ನೀವು ಸುರಕ್ಷಿತವಾಗಿ ದಡವನ್ನು ಸೇರಬಹುದು ಎಂದು ಆಶ್ವಾಸನೆಯಿತ್ತರು.

ಇಷ್ಟೆಲ್ಲಾ ಸ್ಪಷ್ಟವಾಗಿ ತಿಳಿಸಿದ್ದರೂ ಸಹ ಎಷ್ಟೋಮಂದಿ ಪ್ರಯಾಣಿಕರು ಆದೇಶವನ್ನು ಮೀರಿ ನಡೆದರು.  ಪರಿಣಾಮ ಹಲವಾರು ಸಂಕಷ್ಟಕ್ಕೆ ಸಿಲುಕಿದರು ಮತ್ತು ಕೆಲವರು ಪ್ರಕೃತಿಯ ವಿಕೋಪಕ್ಕೊಳಗಾಗಿ ಕೊಚ್ಚಿಯೂ ಹೋದರು. ಆದರೆ, ನಾವಿಕನ ಆದೇಶವನ್ನು ಪಾಲಿಸುತ್ತ ಒಂದು ಸಣ್ಣ ಮಗುವು ಮಾತ್ರ ನೆಮ್ಮದಿಯಾಗಿ ನಿಗದಿತ ಸ್ಥಾನದಲ್ಲಿ  ಕುಳಿತಿತ್ತು. ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಇದನ್ನು ಗಮನಿಸಿದ ಮತ್ತೊಬ್ಬ ಪ್ರಯಾಣಿಕ ಆಶ್ಚರ್ಯದಿಂದ ಪ್ರಶ್ನಿಸಿದ "ನೀನು ಹೇಗೆ ಅಷ್ಟು ಧೈರ್ಯದಿಂದ ವರ್ತಿಸಿದೆ? ನಿನಗೆ ಭಯವಾಗಲಿಲ್ಲವೇ?". ಅದಕ್ಕೆ ಮಗುವು  "ನಾವಿಕರು ನನ್ನ ತಂದೆ. ಅವರು ನನ್ನನ್ನು ಭದ್ರವಾಗಿ ತಲುಪಿಸುತ್ತಾರೆಂದು ನನಗೆ ಸಂಪೂರ್ಣ ನಂಬಿಕೆಯಿತ್ತು, ಹಾಗಾಗಿ ಯಾವ ರೀತಿಯ ಭಯವು ಆಗಲಿಲ್ಲ".  

ಜೀವನದಲ್ಲಿ, ನಾವಿಕನಿತ್ತಂತಹ ಶಾಸನಗಳನ್ನು ಅನೇಕಬಾರಿ ನಾವು ಎದುರಿಸುತ್ತೇವೆ. ಅಂತಹ ಅನೇಕ ವಿಧಿ-ನಿಷೇಧಗಳ ಕಟ್ಟಳೆಗಳನ್ನು ನಮ್ಮಶಾಸ್ತ್ರಗಳು ಮಾಡುತ್ತವೆ. ಸತ್ಯವನ್ನು ಹೇಳು, ಅಸತ್ಯ ನುಡಿಯಬೇಡು ಇತ್ಯಾದಿಗಳು. ಹಾಗಾದರೆ ಇಲ್ಲಾವ ಪ್ರಯಾಣ? ಇದರ ಉದ್ದೇಶವೇನು. ಈ ನಮ್ಮ ಜೀವನವೇ ಪ್ರಯಾಣ, ಅದರಲ್ಲಿ ನಾವೇ ಪ್ರಯಾಣಿಕರು, ಸಂಸಾರವೆಂಬ ಭೀಕರ ಸಮುದ್ರವನ್ನು ದಾಟಿ, ಜನನ-ಮರಣಗಳಿಂದ ಮೋಕ್ಷವನ್ನು ಪಡೆಯುವುದೇ ನಾವು ತಲುಪಬೇಕಾದ ದಡ. ನಿಪುಣರಾದ ನಾವಿಕರು ಭಾರತೀಯ ಮಹರ್ಷಿಗಳು. ಅವರು ಧರ್ಮ-ಮೋಕ್ಷಗಳ ಪರಿಚಯವನ್ನುಚೆನ್ನಾಗಿ ಬಲ್ಲವರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅಲೆಗಳ ನಡುವೆ ನಮ್ಮನ್ನು ಸ್ಥಿರವಾಗಿ ಧರ್ಮದಲ್ಲಿ ನಿಲ್ಲಿಸುವಂಥಹ ಆದೇಶವೇ ಶಾಸ್ತ್ರಗಳು. ಆ ಪದವೇ ಹೇಳುವಂತೆ, " ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಭಿಧೀಯತೇ ",  ಅಂದರೆ ಯಾವುದರ ನಿಯಮಕ್ಕೆ (ಶಾಸನಕ್ಕೆ) ಒಳಪಟ್ಟರೆ ನಮ್ಮ ರಕ್ಷಣೆಯಾಗುವುದೋ ಅದೇ ಶಾಸ್ತ್ರ. ನಾವಿಕನ ಮಾತಿನಂತೆ ತಜ್ಞರ ಹಿತವಚನವಿದು. ಮಹರ್ಷಿಗಳ ಶಾಸ್ತ್ರದಲ್ಲಿ ಮಗುವಿನಂತೆ ಪೂರ್ಣ ಭರವಸೆಯನ್ನಿಟ್ಟು ಬಾಳಾಟವನ್ನು ರೂಪಿಸಿಕೊಳ್ಳುವುದಾದರೆ, ನಾವೂ ಸಹ ಸುರಕ್ಷಿತವಾಗಿ ದಡವನ್ನು ಸೇರಬಹುದು. ಇಲ್ಲವಾದ್ದಲ್ಲಿ ಪ್ರಕೃತಿಯ ವೇಗಕ್ಕೆ ಸಿಲುಕಿ ದಾರಿತಪ್ಪಿಹೋಗುವುದು ನಿಶ್ಚಿತ. "ಸೃಷ್ಟಿ, ಸ್ಥಿತಿ, ಲಯಗಳು ಎಲ್ಲಿಯವರೆಗೆ ನಡೆಯುತ್ತಿರುತ್ತವೆಯೋ ಅಲ್ಲಿಯವರೆಗೂ ಸೃಷ್ಟಿ ವಿದ್ಯಾ ರಹಸ್ಯರೂಪಗಳಾದ ವೇದಶಾಸ್ತ್ರಗಳೂ ನಿತ್ಯವಾಗಿಯೇ ಇರುತ್ತವೆ".ಎಂಬ ಶ್ರೀರಂಗ ಮಹಾಗುರುಗಳ ಮಾತು ಸ್ಮರಣೀಯ. ಮಹರ್ಷಿ ಯೋಜಿತವಾದ ಶಾಸ್ತ್ರೋಕ್ತ ಜೀವನವು ನಮ್ಮದಾಗಲಿ ಎಂದು ಆಶಿಸೋಣ, ಅಂತೆಯೇ ಬಾಳೋಣ. 

ಸೂಚನೆ: 22/07/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.