ಜಗನ್ಮಾತೆಗೆ ನಮಸ್ಕಾರ !
ಲೇಖಕರು : ವಿದ್ವಾನ್ ಶೇಷಾಚಲ ಶರ್ಮಾ
ಒಂದೇ ಭಗವತ್ತತ್ತ್ವವು ಲೀಲಾಭೇದದಿಂದ ಅನೇಕ ದಿವ್ಯವಾದ ನಾಮ ರೂಪಗಳನ್ನು ಧರಿಸುತ್ತದೆ. ಸಾಧಕನಾದ ಭಕ್ತನು ತನ್ನ ಪ್ರಕೃತಿ ಮತ್ತು ಅಭಿರುಚಿಗೆ ತಕ್ಕಂತೆ ಬೇರೆ ಬೇರೆ ನಾಮರೂಪಗಳಿಂದ ಭಗವದುಪಾಸನೆಯನ್ನು ಮಾಡುತ್ತಾನೆ. ಭಗವಂತನು ಸಾಕಾರನೂ ಹೌದು. ನಿರಾಕಾರನೂ ಹೌದು; ಸಗುಣನೂ ಹೌದು, ನಿರ್ಗುಣನೂ ಹೌದು. ಸೃಷ್ಟಿಪ್ರಕ್ರಿಯೆಯಲ್ಲಿ ಸೃಷ್ಟಿಕರ್ತ(ಬ್ರಹ್ಮ)ನೆನಿಸಿ, ಸ್ಥಿತಿಲೀಲೆಯಲ್ಲಿ ವಿಷ್ಣುವೆನಿಸಿ, ಸಂಹಾರಲೀಲೆಯಲ್ಲಿ ಈಶ್ವರನೆನಿಸುವವನು ಒಬ್ಬನೇ ಭಗವಂತನು. ಭಗವಂತನು ಸರ್ವವ್ಯಾಪಿಯಾದ ಪರಬ್ರಹ್ಮನು. ಅದೇ ಭಗವತ್ತತ್ತ್ವವು, ಶಕ್ತಿ, ದೇವೀ, ಜಗಜ್ಜನನೀ- ಮುಂತಾದ ನಾಮಗಳಿಂದ ಸೇವಿಸಲ್ಪಡುತ್ತದೆ. ವಸ್ತುತಃ ಶಕ್ತಿ ಮತ್ತು ಶಕ್ತ - ಇವರಲ್ಲಿ ಭೇದವಿಲ್ಲ. ಜಗತ್ತಿನಲ್ಲಿ ಒಂದಲ್ಲ ಒಂದುರೂಪದಿಂದ ಶಕ್ತಿಯ ಉಪಾಸನೆಯು ನಡೆಯುತ್ತಲೇ ಇದೆಯೆಂದು ಹೇಳಬಹುದು. ಶಕ್ತಿಯ ಉಪಾಸನೆಯು ಬಹಿರ್ಮುಖವಾಗಿಯೂ ನಡೆಯಬಹುದು. ಅಂತೆಯೇ ಅಂತರ್ಮುಖವಾಗಿಯೂ ಇರಬಹುದು. ಎಲ್ಲ ಶಕ್ತಿಗಳೂ ಆತ್ಮಚೈತನ್ಯದಲ್ಲಿ ಕೇಂದ್ರೀಕೃತವಾಗುತ್ತವೆ. ಭಗವದುಪಾಸನೆ ಅಥವಾ ಶಕ್ತಿಯ ಉಪಾಸನೆಯ ಪರಮ ಲಕ್ಷ್ಯ ಆತ್ಮಚೈತನ್ಯದ ಪ್ರಬೋಧ. ಷೋಡಶಕಲನಾದ ಪುರುಷನಲ್ಲಿ ಈ ಶಕ್ತಿಯು ಅಮೃತಕಲೆಯೆಂದು ಕರೆಯಲ್ಪಡುತ್ತದೆ.(ಪುರುಷೇ ಷೋಡಶಕಲೇ ತಾಮಹುರಮೃತಾಂ ಕಲಾಮ್) ಶಕ್ತಿಯ ಮಹಿಮೆಯಿಂದಲೇ ಶಿವನು ಸೃಷ್ಟಿ-ಸ್ಥಿತಿ-ಲಯ ವ್ಯಾಪಾರಗಳನ್ನು ನಡೆಸಲು ಸಮರ್ಥನಾಗುತ್ತಾನೆ. ಹರಿಹರ ಬ್ರಹ್ಮಾದಿಗಳೂ ದೇವೀ ಶಕ್ತಿಯನ್ನು ಆರಾಧಿಸುತ್ತಾರೆ ಎಂದು ಶಂಕರಭಗವತ್ಪಾದರು
ಸೌಂದರ್ಯಲಹರಿಯಲ್ಲಿ ವರ್ಣಿಸಿದ್ದಾರೆ :-
"ಶಿವ: ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ
ನ ಚೇದೇವಂ ದೇವೋ ನ ಖಲು ಕುಶಲ: ಸ್ಪಂದಿತುಮಪಿ ।
ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ
ಪ್ರಣಂತುಂ ಸ್ತೋತುಂ ವಾ ಕಥಮಕೃತ ಪುಣ್ಯ: ಪ್ರಭವತಿ ।।"
ಮಾತೃರೂಪದಿಂದ ದೇವೀಶಕ್ತಿಯನ್ನು ಉಪಾಸನೆ ಮಾಡುವುದು ಒಂದು ಶ್ರೇಷ್ಠವೂ ಪ್ರಶಸ್ತವೂ ಆದ ಸಾಧನೆ. ತಾಯಿಯ ದಯೆ ಅಪಾರವಾದುದು, ಅವ್ಯಾಜವಾದುದು. ಲೋಕದಲ್ಲಿ ಮಕ್ಕಳು ತಂದೆಗಿಂತ ತಾಯಿಯನ್ನು ಅಧಿಕವಾಗಿ ಆಶ್ರಯಿಸುತ್ತಾರೆ. ತಾಯಿಯ ಹೃದಯ ಸ್ವಾಭಾವಿಕವಾಗಿ ಸೌಹಾರ್ದ ಮತ್ತು ವಾತ್ಸಲ್ಯಗಳಿಂದ ತುಂಬಿರುತ್ತದೆ. ಈ ಮಾತೃಭಾವದ ಸ್ಪೂರ್ತಿಯೇ ಆಧ್ಯಾತ್ಮಿಕ ಮಾರ್ಗದಲ್ಲೂ ಜನನ್ಮಾತೆಯ ಉಪಾಸನೆಗೆ ಪ್ರೇರಕವಾಗಿದೆ. ದ್ವಿಜರೆಲ್ಲರೂ ವೇದಮಾತೆಯಾದ ಗಾಯತ್ರಿಯನ್ನು ಉಪಾಸನೆಮಾಡುತ್ತಾರೆಯಷ್ಟೇ. ಆದ್ದರಿಂದ ದ್ವಿಜರೆಲ್ಲರೂ ಶೈವರೇ ; ಶೈವರೂ ಅಲ್ಲ, ವೈಷ್ಣವರೂ ಅಲ್ಲ:-
"ಸರ್ವೇ ಶಾಕ್ತಾ ದ್ವಿಜಾ: ಪ್ರೋಕ್ತಾ ನ ಶೈವಾ ನ ಚ ವೈಷ್ಣವಾ:।
ಆದಿಶಕ್ತಿಮುಪಾಸಂತೇ ಗಾಯತ್ರೀಂ ವೇದಮಾತರಂ ।।"
"ಯಾ: ಶ್ರೀ: ಸ್ವಯಂ ಸುಕೃತಿನಾಂ ಭವನೇಷ್ವಲಕ್ಷ್ಮೀ:
ಪಾಪಾತ್ಮನಾಂ ಕೃತಧಿಯಾಂ ಹೃದಯೇಷು ಬುದ್ಧಿ:
ಶ್ರದ್ದಾ ಸತಾಂ ಕುಲಜನ ಪ್ರಭವಸ್ಯ ಲಜ್ಜಾ
ತಾಂ ತ್ವಾಂ ನತಾ: ಸ್ಮ ಪರಿಪಾಲಯ ದೇವಿ ವಿಶ್ವಮ್ ।।"
"ಯಥಾಶಿವಸ್ತಥಾ ದುರ್ಗಾ ಯಾ ದುರ್ಗಾ ವಿಷ್ಣುರೇವ ಸಃ
ಅತ್ರ ಯಃ ಕುರುತೇ ಭೇದಂ ಸ ನರೋ ಮೂಢದುರ್ಮತಿ: ।।
ದೇವೀವಿಷ್ಣು ಶಿವಾದೀನಾಮೇಕತ್ವಂ ಪರಿಚಿಂತಯೇತ್ ।
ಭೇದಕೃನ್ನರಕಂ ಯಾತಿ ರೌರವಂ ನಾತ್ರ ಸಂಶಯಃ ।।
"ಅಹಂ ಬ್ರಹ್ಮಸ್ವರೂಪಿಣೀ, ಮತ್ತಃ ಪ್ರಕೃತಿ ಪುರುಷಾತ್ಮಕಂ ಜಗತ್"
( ನಾನು ಬ್ರಹ್ಮ ಸ್ವರೂಪಿಣೀ. ಪ್ರಕೃತಿ - ಪುರುಷಾತ್ಮಕವಾದ ಜಗತ್ತು ನನ್ನಿಂದಲೇ ಉಂಟಾಗಿದೆ.)
("ಆತ್ಮಾಕಾರೇಣ ಸಂವಿತ್ತಿರ್ಬುಧೈರ್ರ್ವಿದ್ಯೇತಿ ಗೀಯತೇ")
"ಯಾ ದೇವೀ ಸರ್ವಭೂತೇಷು ವಿದ್ಯಾರೂಪೇಣ ಸಂಸ್ಥಿತಾ "ಸರ್ವದೇವಮಯೀ ವಿದ್ಯಾ "ತಯಾ ಸರ್ವಮಿದಂ ತತಮ್ "
"ತ್ವಯೈತದ್ ಧಾರ್ಯತೇ ವಿಶ್ವಂ ತ್ವಯೈತತ್ ಸೃಜ್ಯತೇ ಜಗತ್ ।
ತ್ವಯೈತತ್ ಪಾಲ್ಯತೇ ದೇವಿ ತ್ವಮತ್ಸ್ಯನ್ತೇ ಚ ಸರ್ವದಾ ।।
ಸೃಷ್ಟಿ ಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನಿ ।।
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ ।।
ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ।।
"ಯಜ್ಞವಿದ್ಯಾ ಮಹಾವಿದ್ಯಾ ಗುಹ್ಯವಿದ್ಯಾ ಚ ಶೋಭನೇ ।
ಆತ್ಮವಿದ್ಯಾ ಚ ದೇವಿ ತ್ವಂ ವಿಮುಕ್ತಿಫಲದಾಯಿನೀ ।।"
ಎಂದು ಮುಂತಾಗಿ ವರ್ಣಿತಳಾಗಿದ್ದಾಳೆ. ಅಮ್ಮಾ! ಮಾತೆ! ಸಮಸ್ತ ಭೂತಗಳ ಹೃದಯದಲ್ಲಿ ಬೆಳಕಾಗಿ ಬೆಳಗುತ್ತಿರುವವಳು ನೀನೇ. ನಿನ್ನೊಳಗೆ ಲೋಕಗುರುವಾದ ಭಗವಂತನೂ ಆ ಗುರುಭಗವಂತನೊಳಗೆ ನೀನೂ ಕಾರುಣ್ಯಾಮೃತ ರೂಪದಿಂದ ಮಹಾ ಶಕ್ತಿಯಾಗಿ ಬೆಳಗುತ್ತಿರುವಿರಿ! ದಯಾಮಾನದೀರ್ಘನಯನಳಾಗಿ ನೀನು ದೇಶಿಕನ ರೂಪವನ್ನು ತಾಳಿ ನಿನ್ನ ಕಂದಗಳಿಗೆ ಜ್ಞಾನದ ಏಳಿಗೆಯನ್ನು ನೀಡುತ್ತಿರುವೆ! ಲೋಕಗುರುವಿನ ಹೃದಯದಿಂದ ಅನುಗ್ರಹಶಕ್ತಿಯಾಗಿ ಹರಿದು ಪ್ರಕಾಶಿಸುವವಳೂ ನೀನೆ! ಅಮ್ಮಾ! ಎಂದು ಭಕ್ತಿಯಿಂದ ಅಂತರಂಗದಲ್ಲಿ ನಿನ್ನನು ಕರೆಯುವ ಕಂದಗಳಿಗೆ ಒಳಗಿನಿಂದಲೇ ಓಗೊಟ್ಟು ಹೃದಯವನ್ನು ಚೈತನ್ಯಾಮೃತದಿಂದ ತುಂಬಿ ಅನುಗ್ರಹಿಸುವವಳು ನೀನೇ! ದೇವಾಲಯಗಳಲ್ಲಿ ಭಗವಂತನ ಸಂದರ್ಶನಕ್ಕೆ ಹೋಗುವ ಭಕ್ತರು ಮೊದಲು ಪ್ರಣವರೂಪಳಾದ ನಿನಗೆ ಪ್ರಣಾಮ ಸಲ್ಲಿಸಿ ನಿನ್ನ ಅನುಗ್ರಹವನ್ನು ಪಡೆದು ಮಂದಿರದೊಳಗೆ ಪ್ರವೇಶಿಸಿ ನಿನ್ನ ಬೆಳಕಿನ ತುದಿರೂಪವಾದ ಭಗವತ್ತತ್ತ್ವವನ್ನು ಹೊಂದುತ್ತಾರೆ! ಮಹಾತಾಯಿ! ಆದುದರಿಂದಲೇ ನಿನ್ನ ಪ್ರಣವ ಘೋಷರೂಪದಿಂದ ಶ್ರುತಿಯು ಮೊದಲಿಗೆ ಮ"ಾತೃ ದೇವೋ ಭವ!" ಎಂದು ಸಾರುತ್ತಿದೆ. ನಿನ್ನ ಅಪ್ರಾಕೃತವಾದ ವಾತ್ಸಲ್ಯದ ಒಂದು ಕಿರಣವೇ ಲೌಕಿಕ ತಾಯಂದಿರ ಹೃದಯಗಳಿಂದ ಅವರ ಕಂದಗಳ ಕಡೆಗೆ ಹರಿಯುತ್ತದೆ. ನೀನೇ ಮಹಾ ಮಾತೃ ಶಕ್ತಿ ! ನೀನೇ ತ್ರಿಮೂರ್ತಿ ಸುಂದರಿಯಾದ ಮಹಾಚೈತನ್ಯ ಶಕ್ತಿ! ಭೋಗ- ಮೋಕ್ಷಗಳನ್ನು ನೀಡುವವಳು ನೀನೇ ! ಮಹಾಕಾಳೀ ರೂಪದಿಂದ ನೀನು ಭಕ್ತರ ಅಂತಃಕರಣದಲ್ಲಿನ ಆಸುರೀ ಸಂಪತ್ತನ್ನು ನಾಶಪಡಿಸುವೆ! ಅಂತಃಕರಣದ ಕುಸಂಸ್ಕಾರಗಳನ್ನು ಹೋಗಲಾಡಿಸುವೆ! ಮಹಾಲಕ್ಷ್ಮೀ ರೂಪದಿಂದ ಭಕ್ತರ ಅಂತಃಕರಣದಲ್ಲಿ ಬೆಳಗುತ್ತಾ ದೈವೀಸಂಪತ್ತನ್ನು ತುಂಬಿಕೊಡುತ್ತೀಯೆ ! ಬ್ರಹ್ಮಜ್ಞಾನಸ್ವರೂಪಿಣಿಯಾದ ಮಹಾ ಸರಸ್ವತಿಯಾಗಿ ನಿನ್ನ ಕಂದಗಳಿಗೆ ಆತ್ಮಜ್ಞಾನಸಂಪತ್ತನ್ನು ತುಂಬಿಕೊಡುತ್ತೀಯೆ! ನಿನ್ನ ದಯೆ ತುಂಬ ದೊಡ್ಡದು ಮಹಾತಾಯಿ! ನಿನ್ನ ಅನುಗ್ರಹವೇ ಪರಮಾಶ್ರಯ! ಅಮ್ಮ ! ಮಹಾಮಾತೆ! ಜಗನ್ಮಾತೆ! ನಿನಗೆ ಪ್ರಾಣಪ್ರಣಾಮಗಳು!
ದೇವಿ ತ್ವಯಾ ತತಮಿದಂ ಜಗದಾತ್ಮಶಕ್ತ್ಯಾ
ನಿಶ್ಶೇಷ ದೇವಗಣ ಶಕ್ತಿ ಸಮೂಹ ಮೂರ್ತ್ಯಾ ।
ತ್ವಾಮಂಬಿಕಾಮಖಿಲ ದೇವ ಮಹರ್ಷಿ ಮಾನ್ಯಾಮ್
ಭಕ್ತ್ಯಾ ನತೋsಸ್ಮಿ ದಯಯಾ ಕುರು ಸಂವಿದಾಭಾಮ್ ।।
ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಜನವರಿ 1983 (ಸಂಪುಟ 5 - ಸಂಚಿಕೆ 3) ರಲ್ಲಿ ಪ್ರಕಟವಾಗಿದೆ.