Wednesday, July 1, 2020

ಉತ್ಸಾವಿದ್ದರೆ ಸಾಕೇ? ಧೈರ್ಯವೂ ಬೇಕು (Utsaviddare Sake? Dhairyavu Beku)

ಲೇಖಕಿ : ಶ್ರೀಮತಿ ಚಂಪಕಾ ನರಸಿಂಹ ಭಟ್
 (ಪ್ರತಿಕ್ರಿಯಿಸಿರಿ lekhana@ayvm.in)



ಒಮ್ಮೆ ಗುರುಗಳು ತಮ್ಮ ಶಿಷ್ಯರೊಡಗೂಡಿ ಸ್ನಾನಕ್ಕೆಂದು ನದಿಗೆ ಹೋಗುತ್ತಾರೆ. ಎಲ್ಲರೂ ಸ್ನಾನವನ್ನು ಮಾಡುತ್ತಿರುತ್ತಾರೆ. ಆಗ ಒಬ್ಬ ಶಿಷ್ಯ ಆಯ ತಪ್ಪಿ ಜಾರಿ ನದಿಯ ಪ್ರವಾಹದಲ್ಲಿ ಬೀಳುತ್ತಾನೆ. ಉಳಿದ ಶಿಷ್ಯರಿಗೆ ಸಹಪಾಠಿಯ ಅಪಾಯವನ್ನು ಕಂಡು ಆತಂಕವಾಗುತ್ತದೆ. ಅಲ್ಲೇ ಇದ್ದ ಒಬ್ಬ ಶಿಷ್ಯನಿಗೆ ಗುರುಗಳು ಕೇಳುತ್ತಾರೆ- "ನದಿಗೆ ಇಳಿದು ಆತನನ್ನು ರಕ್ಷಿಸುವೆಯಾ?" ಆಗ ಆತ ಹೇಳಿದ-"ಆಗಬಹುದು ಗುರುಗಳೇ!" ಎಂದು ಹೇಳಿ ಉತ್ಸಾಹದಿಂದ ನದಿಗೆ ಜಿಗಿದ. ಆದರೆ ಅವನೂ ಪ್ರವಾಹದಲ್ಲಿ ಸಿಕ್ಕಿ ತನ್ನ ಮಿತ್ರನನ್ನು ತರಲು ವಿಫಲನಾಗುತ್ತಾನೆ. ಅನಂತರ ಗುರುಗಳು ಇನ್ನೊಬ್ಬ ಶಿಷ್ಯನಿಗೆ ಕೇಳುತ್ತಾರೆ-"ಅಯ್ಯಾ ನೀನಾದರೋ ಅವರಿಬ್ಬರನ್ನೂ ರಕ್ಷಿಸಬಲ್ಲೆಯಾ?" ಎಂದು. ಆತ ಧೈರ್ಯದಿಂದ "ಆಗಬಹುದು ಗುರುಗಳೇ!" ಎಂದು ನದಿಗೆ ಜಿಗಿದು ಇಬ್ಬರನ್ನೂ ಪ್ರವಾಹದಿಂದ ರಕ್ಷಿಸಿದ.

ಇಲ್ಲಿ ನಾವು ಎರಡು ವಿಷಯವನ್ನು ಗಮನಿಸಬೇಕು. ಒಂದು ಉತ್ಸಾಹ. ಇನ್ನೊಂದು ಧೈರ್ಯ. ಉತ್ಸಾಹ ಎಂದರೆ ಕಾರ್ಯಕ್ಕೆ ಬೇಕಾದ ಕ್ಷಮತೆ. ಮೊದಲನೆಯವನಿಗೆ ನದಿಯನ್ನು ಈಜುವ ಸಾಮರ್ಥವಿದೆ. ಆದರೆ ಧೈರ್ಯವಿರಲಿಲ್ಲ. ಹಾಗಾಗಿ ಆತನ ಪ್ರಯತ್ನ ವಿಫಲವಾಯಿತು. ಅದೇ ಎರಡನೆಯವನಿಗೆ ಉತ್ಸಾಹದ ಜೊತೆ ಧೈರ್ಯವೂ ಇತ್ತು. 'ಧೈರ್ಯ' ಎಂದರೆ ತಾನು ಮಾಡುವ ಕಾರ್ಯದಲ್ಲಿ ಫಲವನ್ನು ಕಂಡೇಕಾಣುತ್ತೇನೆ ಎಂಬ ಮನಸ್ಸಿನ ಸ್ಥಿರತೆ. ಹಾಗಾಗಿ ಆತ ಉತ್ಸಾಹದ ಜೊತೆ ಧೈರ್ಯದಿಂದ ಕಾರ್ಯಪ್ರವೃತ್ತನಾದ್ದರಿಂದ ನದಿಯಪ್ರವಾಹದಲ್ಲಿ ಸಿಲುಕಿರುವ ತನ್ನ ಮಿತ್ರನನ್ನು ಬದುಕಿಸಲು ಸಮರ್ಥನಾದ. ಧೈರ್ಯವಿದ್ದಾಗ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಆರಂಭಿಸಿದ ಕಾರ್ಯವು ಫಲವನ್ನು ಕೊಡುತ್ತದೆ. "ಸಾರ್ವಭೌಮಕೆ ನಾಕು ಗುಣಕೆ ಗುಣರಾಜ್ಯದಲಿ| ಧೈರ್ಯ ಮೊದಲನೆಯದೆರಡನೆಯದು ಮತಿಯೋಜೆ|| ಸರ್ವದಯೆ ಮೂರನೆಯದದುವೆ ನೀತಿಯ ಮೂಲ| ನಿರ್ಮಮತ್ವವೇ ಮುಕುಟ ಮಂಕುತಿಮ್ಮ|| ಎಂದು ಡಿ.ವಿ.ಜಿಯವರು ಧೈರ್ಯಕ್ಕೆ ಮೊದಲನೆಯ ಸ್ಥಾನವನ್ನು ಕೊಟ್ಟಿದ್ದಾರೆ. "ಸತ್ಯಾರ್ಥವನ್ನು ಗ್ರಹಿಸುವ ಬುದ್ಧಿಯನ್ನೇ ಧೈರ್ಯ" ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು

ಸೂಚನೆ: 1/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.