Saturday, July 11, 2020

ಧರ್ಮ ಸಂಸ್ಥಾಪನೆಯೇ ನ್ಯಾಯವ್ಯವಸ್ಥೆಯ ಗುರಿ (Dharma Sansthapaneye Nyayavyavastheya Guri)

ಲೇಖಕರು: ನಾಗರಾಜ್  ಗುಂಡಪ್ಪ.

(ಪ್ರತಿಕ್ರಿಯಿಸಿರಿ lekhana@ayvm.in)

 


ಪ್ರಸ್ತುತ ಅಂತರರಾಷ್ಟ್ರೀಯ ನ್ಯಾಯದಿನದಂದು ಭಾರತೀಯ ನ್ಯಾಯ ಪದ್ಧತಿಯನ್ನು ಪರಾಮರ್ಶೆ ಮಾಡುವುದು ಸಂದರ್ಭೋಚಿತವಾಗಿದೆ. ನ್ಯಾಯ ಎಂದರೆ ತಕ್ಷಣ ನಮ್ಮ ಮನಸ್ಸಿನ ಮುಂದೆ ನಿಲ್ಲುವುದು ಕಾನೂನು, ಕೋರ್ಟ್, ಕಛೇರಿ ಮೊದಲಾದ ವ್ಯವಸ್ಥೆಗಳು. ಆದರೆ ಈ ವ್ಯವಸ್ಥೆಯ ಹಿಂದಿರುವ ತತ್ತ್ವಗಳಾವುವು, ಚಿಂತನೆ ಏನು ಎನ್ನುವುದರ ಕಡೆ ಗಮನ ಹರಿಸುವುದೂ ಸಹ ಬಹಳ ಮುಖ್ಯ. ಈ ನೇರದಲ್ಲಿ ಗಮನಿಸಿದಾಗ ಪ್ರಾಚೀನ ಭಾರತದಲ್ಲಿ ಬೆಳೆದಿರುವ ಚಿಂತನೆಯು ಬಹು ವ್ಯಾಪಕವಾಗಿದೆ. ನ್ಯಾಯದ ಬಗೆಗಿನ ಚಿಂತನೆಯು ಶ್ರುತಿ, ಸ್ಮೃತಿ, ಇತಿಹಾಸ, ಪುರಾಣ, ದರ್ಶನ ಶಾಸ್ತ್ರಗಳಲ್ಲೆಲ್ಲಾ ನಿರೂಪಿಸಲ್ಪಟ್ಟಿದೆ. ಈ ಸುದೀರ್ಘ ಸಾಹಿತ್ಯಮಾಲೆಯಲ್ಲಿ ಕಂಡುಬರುವ, ಆಧುನಿಕ ಚಿಂತನೆಯಿಂದ ವಿಭಿನ್ನವಾಗಿರುವ ಸನಾತನ ಭಾರತೀಯವಾದ ಅಂಶಗಳೆಂದರೆ:


೧. ನ್ಯಾಯವು ಧರ್ಮ ಮೂಲವಾಗಿರುತ್ತದೆ. 

೨. ನ್ಯಾಯವು ವ್ಯವಹಾರ ಕ್ಷೇತ್ರದಲ್ಲಿ ವಿಸ್ತಾರವಾದರೂ ಸಹ ಅದು ದೈವಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳನ್ನೂ ವ್ಯಾಪಿಸಿದೆ. 

 

ಧರ್ಮಕ್ಕೂ ನ್ಯಾಯ ವ್ಯವಸ್ಥೆಗೂ ಸಂಬಂಧವೇನು?ಅಧ್ಯಾತ್ಮ ಕ್ಷೇತ್ರದವರೆವಿಗೂ ನ್ಯಾಯದ ವ್ಯಾಪ್ತಿ ಏಕಿರಬೇಕು? ಎನ್ನುವ ಪ್ರಶ್ನೆಗಳಿಗೆ ಉತ್ತರ ದೊರಕುವುದು ಸುಲಭಸಾಧ್ಯವಾದುದೇನಲ್ಲ! ಈ ನಿಟ್ಟಿನಲ್ಲಿ ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳು ಧರ್ಮ, ಅಧ್ಯಾತ್ಮ, ವ್ಯವಹಾರ, ನ್ಯಾಯಗಳ ಪರಸ್ಪರ ಸಂಬಂಧವನ್ನು ಸರಳವಾಗಿ, ಮನೋಜ್ಞವಾಗಿ ನಿರೂಪಿಸಿದ್ದಾರೆ. ಈ ನೋಟವನ್ನು ಆಧರಿಸಿ ನ್ಯಾಯವ್ಯವಸ್ಥೆಯ ಮೂಲವನ್ನು ವಿವರಿಸುವುದು ಈ ಲೇಖನದ ಉದ್ದೇಶ. 

 

ಧರ್ಮ ಎನ್ನುವ ಪದ ಸ್ಥಿತಿ ಅಥವಾ ಅವಸ್ಥೆ ಎನ್ನುವ ಅರ್ಥವನ್ನು ಹೊಂದಿದೆ. ಶ್ರೀರಂಗ ಮಹಾಗುರುಗಳು ಇದನ್ನು ಸರಳವಾಗಿಸಲು ನಾರ್ಮಲ್ ಕಂಡೀಷನ್(normal condition)  ಎನ್ನುವ ಪದವನ್ನು ಬಳಸಿದ್ದಾರೆ. ಉದಾಹರಣೆಗೆ, ಕಣ್ಣಿನ ನಾರ್ಮಲ್ ಕಂಡೀಷನ್ನೇ ಕಣ್ಣಿನ ಧರ್ಮ. ಕಣ್ಣು ತನ್ನ ನಾರ್ಮಲ್ ಕಂಡೀಷನ್ ನಲ್ಲಿದ್ದರೆ ಅದು ತನ್ನ ಸಹಜ ಸ್ವಭಾವವಾದ ನೋಡುವ ಕೆಲಸವನ್ನು ಮಾಡುತ್ತಿರುತ್ತದೆ. ನಿದ್ರೆಯಿಂದಾಗಿ ಕಣ್ಣಿನಲ್ಲಿ ಜಿಬರು ಮುಂತಾದ ಅಶುಚಿ ಏರ್ಪಟ್ಟರೆ, ವ್ಯಕ್ತಿಯು ಕಣ್ಣು ತೊಳೆದುಕೊಳ್ಳುವುದಕ್ಕೆ ಕಣ್ಣೇ, ತುಡಿತ, ತುರಿತ ಮೊದಲಾದ ಸೂಚನೆಗಳನ್ನು ಕೊಡುತ್ತದೆ. ಹೀಗೆ ಗಮನಿಸಿದಾಗ, ಕಣ್ಣಿನ ನಾರ್ಮಲ್ ಕಂಡೀಷನ್ ಅನ್ನು ಸಾಧ್ಯ ಧರ್ಮವೆಂದೂ ಕಣ್ಣಿನ ನಾರ್ಮಲ್ ಕಂಡೀಷನ್ ಅನ್ನು ಕಾಪಾಡುವುದಕ್ಕಾಗಿ ಮಾಡುವ ತೊಳೆದುಕೊಳ್ಳುವುದು ಮೊದಲಾದ ಕೆಲಸಗಳನ್ನು ಸಾಧನ ಧರ್ಮವೆಂದೂ ಹೇಳಬಹುದು. ಈ ಉದಾಹರಣೆಯನ್ನು ವಿಸ್ತರಿಸಿದರೆ ಒಬ್ಬ ಮನುಷ್ಯನಿಗೆ ಸಮಗ್ರವಾದ ನಾರ್ಮಲ್ ಕಂಡೀಷನ್ ಮಾನವನ ಧರ್ಮ ಮತ್ತು ಇಡೀ ಸೃಷ್ಟಿಯ ಸಮಗ್ರ ನಾರ್ಮಲ್ ಕಂಡೀಷನ್ ಧರ್ಮವಾಗುತ್ತದೆ. ಒಬ್ಬ ವ್ಯಕ್ತಿಯ ಸಮಗ್ರ ಸ್ಥಿತಿ ಅಂದರೆ, ಜಾಗ್ರತ್, ಸ್ವಪ್ನ, ಸುಷುಪ್ತಿ (ನಿದ್ರಾವಸ್ಥೆ) ಮತ್ತು ತುರೀಯ (ಸಮಾಧಿ ಸ್ಥಿತಿ)ಗಳೆಲ್ಲವೂ ಚೆನ್ನಾಗಿದ್ದಾಗ ಆ ಸ್ಥಿತಿಯನ್ನು ಪೂರ್ಣವಾಗಿ ನಾರ್ಮಲ್ ಎಂದು ಕರೆಯಬಹುದು. ತುರೀಯ ಸ್ಥಿತಿಯಲ್ಲಿಯೇ ಆತ್ಮದರ್ಶನವಾಗುವುದರಿಂದ, ಧರ್ಮವು ಅಧ್ಯಾತ್ಮ ಕ್ಷೇತ್ರದವರೆವಿಗೂ ವ್ಯಾಪಿಸಿದೆ. 

 

ಧರ್ಮವನ್ನು ಸಾಧ್ಯ ಧರ್ಮ ಹಾಗೂ ಸಾಧನ ಧರ್ಮವೆಂದು ಎರಡಾಗಿ ಪರಿಗಣಿಸಿಯಾಯಿತು. ನಾವು ವೈಯಕ್ತಿಕವಾಗಿ ಪಾಲಿಸಬೇಕಾದ ಸಾಧನ ಧರ್ಮವು ಆಚಾರವೆನಿಸಿಕೊಳ್ಳುತ್ತದೆ ಮತ್ತು ಸಮಾಜದಲ್ಲಿ ಪರಸ್ಪರವಾಗಿ ಪಾಲಿಸಬೇಕಾದ ಸಾಧನ ಧರ್ಮವು ವ್ಯವಹಾರವೆನಿಸಿಕೊಳ್ಳುತ್ತದೆ. ನ್ಯಾಯ ವ್ಯವಸ್ಥೆಯ ಪ್ರಧಾನ ಗುರಿ  ವ್ಯವಹಾರವನ್ನು ಕಾಪಾಡುವುದೇ ಆಗಿರುವುದರಿಂದ, ನ್ಯಾಯವು ಪ್ರಧಾನವಾಗಿ ಧರ್ಮವನ್ನು ಕಾಪಾಡುವುದಕ್ಕಾಗಿಯೇ ಇರುವುದಾಗಿದೆ. ಉದಾಹರಣೆಗೆ, ಒಬ್ಬನಿಗೆ ಹೂವನ್ನು ಕೊಟ್ಟು ಇದನ್ನು ಕಾಪಾಡಿಕೊಂಡಿರು ಎಂದು ಹೇಳಿದರೆ, ಆತ ಹೂವನ್ನು ಹೇಗೆ ಕಾಪಾಡಬೇಕು? ಯಾರೂ ಕಸಿದುಕೊಳ್ಳಬಾರದು ಎಂದು ಭದ್ರವಾಗಿ ಹೂವನ್ನು ಹಿಡಿದುಕೊಂಡುಬಿಟ್ಟರೆ ಅದು ನಲುಗಿ ಅದರ ಧರ್ಮವಾದ ಸೌಕುಮಾರ್ಯವನ್ನು ಕಳೆದುಕೊಳ್ಳುತ್ತದೆ. ಅಂದರೆ, ಹೂವನ್ನು ರಕ್ಷಿಸಬೇಕಾದರೆ, ಪ್ರಧಾನವಾಗಿ ಅದರ ಸೌಕುಮಾರ್ಯ, ಸುಗಂಧ ಮೊದಲಾದ ಧರ್ಮವನ್ನೇ ರಕ್ಷಿಸಬೇಕು. ಹೀಗೆ ಉದ್ದಕ್ಕೂ ಗಮನಿಸುತ್ತಾ ಬಂದರೆ, ವ್ಯವಹಾರಗಳಲ್ಲಿ ಪದಾರ್ಥ ವಿನಿಮಯವಿದ್ದರೂ ವ್ಯವಹಾರದ ಒಳ ತಿರುಳು ಪದಾರ್ಥಗಳ ಮತ್ತು ಅದರ ಪರಿಣಾಮ ರೂಪವಾದ ಧರ್ಮವೇ ಆಗಿದೆ. 

ಸಮಗ್ರ ಜೀವನದ ವ್ಯವಹಾರ ಸ್ವರೂಪವನ್ನು ಕ್ರೋಢೀಕರಿಸಿದರೆ ಆಗ ನೀತಿ ಸಂಹಿತೆಯುಂಟಾಗುತ್ತದೆ ಮತ್ತು ಈ ನೀತಿ ಸಂಹಿತೆಯೇ ಕಾನೂನು ಮತ್ತು ನ್ಯಾಯ ವ್ಯವಸ್ಥೆಯಾಗಿ ವಿಸ್ತಾರಗೊಳ್ಳುತ್ತದೆ. ಈ ನೀತಿ ಸಂಹಿತೆಯು ಸೃಷ್ಟಿನಿಯಮಕ್ಕನುಗುಣವಾಗಿದ್ದಾಗ ವ್ಯವಹಾರವು ದುರ್ವ್ಯವಹಾರವಾಗದೇ ಧರ್ಮವಾಗಿಯೇ ಇದ್ದು ಸಮಾಜದಲ್ಲಿ ಶಾಂತಿ ನೆಮ್ಮದಿಗಳು ನೆಲೆಸುತ್ತವೆ. ಸೃಷ್ಟಿ ನಿಯಮಾವಳಿಗೆ ರಾಜ ಯಾರು ಎಂದರೆ, ಆತ್ಮನೇ ರಾಜನಾಗಿದ್ದಾನೆ. ಅದರಂತೆ ಸೃಷ್ಟಿಯ ನಡೆಯನ್ನು ಬಲ್ಲ, ಆತ್ಮವಂತನಾದ ವ್ಯಕ್ತಿಯೇ ಇಹಲೋಕದಲ್ಲಿ ರಾಜನಾಗಲು ಯೋಗ್ಯನಾಗಿರುತ್ತಾನೆ. "ನಾವಿಷ್ಣುಃ ಪೃಥಿವೀಪತಿಃ"- ಅಂದರೆ ವಿಷ್ಣುವಿನ ಅಂಶವಿಲ್ಲದೇ ಒಬ್ಬ ವ್ಯಕ್ತಿ ರಾಜನಾಗಲಾರ ಎನ್ನುವ ವಾಕ್ಯವೂ ಸಹ ರಾಜನು ಭೂಲೋಕದಲ್ಲಿ ವಿಷ್ಣುವಿನ ಪ್ರತಿನಿಧಿಯಾಗಿ ರಾಜ್ಯವನ್ನಾಳಬೇಕೆಂಬುದನ್ನು ಎತ್ತಿ ಹೇಳುತ್ತದೆ. 


ಇಂತಹ ರಾಜನು ತನ್ನ ರಾಜದಂಡದ ಪ್ರಭಾವದಿಂದ ಅಥವಾ ದಂಡನೀತಿಯ ಬಲದಿಂದ ರಾಜ್ಯವನ್ನಾಳುತ್ತಾನೆ. ಈ ರಾಜದಂಡ ಯಾವುದು ಎಂದು ಕೇಳಿದರೆ, ಅದು ಯೋಗಿಗಮ್ಯ ರಹಸ್ಯವಾಗಿದ್ದು ಶ್ರೀರಂಗಮಹಾಗುರುಗಳು, ನಮ್ಮ ಬೆನ್ನುಮೂಳೆಯೇ ಮೇರುದಂಡವೆನಿಸಿಕೊಂಡು, ಅದೇ ರಾಜದಂಡವೂ ಆಗಿದೆಯೆಂದು ತಿಳಿಸಿದ್ದಾರೆ. ಆತ್ಮವಸ್ತು ಅಥವಾ ಚೈತನ್ಯವು ಮಾನವನ ಶರೀರದಲ್ಲಿ ಬೆನ್ನುಮೂಳೆಯ ಮೂಲಕವೇ ಪ್ರಸರಿಸುವುದರಿಂದ ಬೆನ್ನುಮೂಳೆಯಲ್ಲೇ ಸಕಲ ಸೃಷ್ಟಿನಿಯಮಗಳೂ ಅಡಗಿವೆ. ಇದರ ಪ್ರತೀಕವಾಗಿರುವ ರಾಜದಂಡವನ್ನಿಟ್ಟುಕೊಂಡು ವಿಷ್ಣುವಿನ ಪ್ರತಿನಿಧಿಯಾಗಿ ಒಬ್ಬ ರಾಜ ಆಳುತ್ತಿರುವಾಗ ಕೃತಯುಗವೇ ಉಂಟಾಗುತ್ತದೆ. ಮಹಾಭಾರತದ ಶಾಂತಿಪರ್ವದಲ್ಲಿ, ರಾಜನೇ ಕಾಲಕ್ಕೆ ಕಾರಣನಾಗುವನು ಎನ್ನುವ ಮಾತೂ ಸಹ ಇದೇ ವಿಷಯವನ್ನು ಒತ್ತಿ ಹೇಳುತ್ತದೆ. 


ಈ ಅಂತರರಾಷ್ಟ್ರೀಯ ನ್ಯಾಯದಿನದಂದು, ಎಂದಾದರೊಮ್ಮೆ ಇಂತಹ ಆತ್ಮವಂತನಾದ ರಾಜನು ರಾಜದಂಡದಿಂದ ಭೂಲೋಕವನ್ನು ಆಳಿ ಎಲ್ಲೆಡೆಯೂ ಶಾಂತಿ ಸಮೃದ್ಧಿಗಳು ನೆಲೆಸಲಿ ಎಂದು ಆಶಿಸೋಣ.

ಸೂಚನೆ:  11/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.