ಲೇಖಕರು : ವಿದ್ವಾನ್ ನರಸಿಂಹ ಭಟ್ಟ
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ || -ಭಗವದ್ಗೀತಾ ೫.೧೮
ಅರ್ಥ- ವಿದ್ಯಾ ಮತ್ತು ಅದರಿಂದ ಬಂದ ವಿನಯದಿಂದ ಕೂಡಿದ ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಅನೆಯಲ್ಲಿ, ನಾಯಿಯಲ್ಲಿ ಮತ್ತು ನಾಯಿಯನ್ನು ತಿಂದು ಜೀವಿಸುವ ಮನುಷ್ಯನಲ್ಲಿಯೂ ಜ್ಞಾನಿಯಾದವರು ಸಮಾನ ದೃಷ್ಟಿಯುಳ್ಳವನಾಗುತ್ತಾರೆ.
ವಿವರಣೆ -ಪ್ರಪಂಚವು ವೈವಿಧ್ಯವಾಗಿದೆ. ಇಂತಹ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು ಎಂಬುದನ್ನು ಇಲ್ಲಿ ಹೇಳಲಾಗಿದೆ. ನೋಡುವ ವ್ಯಕ್ತಿಯಲ್ಲಿ ಇಲ್ಲ ಏಕತೆ. ದೃಷ್ಟಿಯಲ್ಲಿದೆ. ವ್ಯಕ್ತಿಯು ದೃಷ್ಟಿಯನ್ನು ಸಂಪಾದನೆ ಮಾಡಿದ್ದಾನೆ. ಯಾವನು ತಪಸ್ಸು ಜ್ಞಾನ ವೈರಾಗ್ಯಗಳಿಂದ ಈ ದೃಷ್ಟಿಯನ್ನು ಸಂಪಾದಿಸಿರುತ್ತಾನೋ ಅಂತವನಿಗೆ 'ಸಮದರ್ಶೀ' ಎಂದು ಕರೆಯುತ್ತಾರೆ. ಅವನನ್ನೆ 'ಪಂಡಿತ' ಎಂದೂ ಕರೆದರು. 'ಪಂಡಾ ಪರಾತ್ಮವಿಜ್ಞಾನಂ ತತ್ ಅಸ್ಯ ಸಂಜಾತಮ್ ಇತಿ ಪಂಡಿತಃ' ಎಂಬ ವ್ಯುತ್ಪತ್ತಿಯಂತೆ ಆತ್ಮಗಳಿಗೆಲ್ಲ ಶ್ರೇಷ್ಠನಾದ ಪರಾತ್ಮ-ಪರಮಾತ್ಮನನ್ನು ಯಾರು ತಿಳಿದಿರುತ್ತಾನೋ ಅಂತವನನ್ನು ಪಂಡಿತ ಎಂದು ಕರೆಯುತ್ತಾರೆ. ಅವನಿಗೆ ಮಾತ್ರ ಸಮದರ್ಶಿತ್ವ ಬರಲು ಸಾಧ್ಯ. ಹೇಗೆ ಕೃಷಿಕನಾದನು ಕೇವಲ ಬೀಜ ಎಲೆ ಕಾಯಿ ಹಣ್ಣು ಅಂತ ಕಾಣದೇ ಮಾವಿನ ಬೀಜ ಮಾವಿನ ಎಲೆ ಮಾವಿನ ಹಣ್ಣು ಹೀಗೇ ಎಲ್ಲೆಲ್ಲೂ ಮಾವನ್ನೇ ಕಾಣುತ್ತಾನೆ. ಅಂತೆಯೇ ಈ ಸೃಷ್ಟಿಯ ಚರಾಚರ ಎಲ್ಲಾ ವಸ್ತುಗಳಲ್ಲೂ ಜ್ಞಾನಿಯಾದವನು ಸಮನಾದ ಭಗವಂತನನ್ನು ಬಿಟ್ಟು ಬೇರೆ ಏನನ್ನೂ ಕಾಣುವುದಿಲ್ಲ. ಆದ್ದರಿಂದ ಅವನಿಗೆ ಯಾರ ಮೇಲೂ ಅತಿಯಾದ ಮಮತೆಯಾಗಲೀ ಅತಿಯಾದ ದ್ವೇಷವಾಗಲೀ ತೋರುವುದಿಲ್ಲ. ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತಾನೆ. ಇದು ಜ್ಞಾನಿಯಾದವನ ದೃಷ್ಟಿ. ಇದೇ ದೃಷ್ಟಿಯನ್ನು ಎಲ್ಲರೂ ಪಡೆಯುವಂತಾದರೆ ಎಲ್ಲಿ ಕ್ರೋಧ? ಎಲ್ಲಿ ಅಸೂಯೆ? ಎಲ್ಲಿ ದುರ್ಗುಣಗಳಿಗೆ ಸ್ಥಳ?