Wednesday, July 15, 2020

ಆತ್ಮ ಸಾಕ್ಷಿಯ ಆಶಯ ( Athma Sakshiya Ashaya )

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಅದೊಂದು ಬಗೆಹರಿಯದ ವ್ಯಾಜ್ಯ. ಕೋರ್ಟಿನಲ್ಲಿ ವಾದ-ಪ್ರತಿವಾದಗಳು ಇನ್ನೇನು ಆರಂಭವಾಗುವ ಸಮಯ. ಅಷ್ಟರಲ್ಲಿ ವ್ಯಾಜ್ಯದ ಪ್ರಮುಖ ಸಾಕ್ಷಿಯ ಆಗಮನವಾಯಿತು. ಸತ್ಯ ಹೇಳಬೇಕಾದದ್ದು ಅವನ ಕರ್ತವ್ಯವಾಗಿತ್ತು. ಸಾಕ್ಷಿಯು ಕಟಕಟೆಯಲ್ಲಿ ಬಂದು ನಿಂತ. ಆದರೆ ಆರೋಪಿಯು ಸಾಕಷ್ಟು ಬೆದರಿಕೆಯನ್ನು ಹಾಕಿದ್ದ. ಹಾಗಾಗಿ ಮುಂದೆ ಸಾಕ್ಷಿಯ ಬಳಿ ಪ್ರಶ್ನೆಗಳನ್ನು ಕೇಳಿದಾಗ ಆರೋಪಿಯ ಬೆದರಿಕೆಯ ಪ್ರಭಾವಕ್ಕೊಳಗಾಗಿ ಘಟನೆಯನ್ನು ತಿರುಚಿ, ಆರೋಪಿಯ ಪರವಾಗಿಯೇ ಮಾತನಾಡಿದ. ಆರೋಪಿಯು ಶಿಕ್ಷೆಯಿಂದ ಬಚಾವಾಗುವ ಹಂತ ತಲುಪಿತ್ತು.  

ಆದರೆ ನ್ಯಾಯಾಧೀಶನಿಗೆ ಸಾಕ್ಷಿಯ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಸಾಕ್ಷಿಯ ಮನಸ್ಸಿಗೂ ಮಾತಿಗೂ ತಾಳೆ ಬರದಿದ್ದುದು ಸ್ಪಷ್ಟವಾಗಿತ್ತು. ಸಾಕ್ಷಿಯನ್ನು ಪ್ರತ್ಯೇಕವಾಗಿ ಒಂದು ಕೋಣೆಗೆ ಕರೆದುಕೊಂಡು ಹೋಗಿ ಸಾಕ್ಷಿಗೆ - "ನಿನಗೆ ಯಾರಿಂದಲೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ" ಎಂಬ ಧೈರ್ಯವಿತ್ತ. ಎಲ್ಲ ಮಾನಸಿಕ ಸಂಕೋಲೆಗಳಿಂದ ಸಾಕ್ಷಿಯನ್ನು ಬಿಡಿಸಿದ. ಸತ್ಯವನ್ನು ಹೇಳುವಂತೆ ವಿಜ್ಞಾಪಿಸಿಕೊಂಡ. ಆಗ ಸಾಕ್ಷಿಯು ಯಾವ ಪ್ರಲೋಭನೆ, ಬೆದರಿಕೆಗಳಿಗೂ ವಶನಾಗದೇ ನಡೆದ ಘಟನೆ ಹೇಳಿ, ಆರೋಪದ  ಪುರಾವೆಯನ್ನೂ ನೀಡಿ, ನ್ಯಾಯ ತೀರ್ಮಾನಕ್ಕೆ ಸಹಕರಿಸಿದ. ಆರೋಪಿಗೂ ಶಿಕ್ಷೆಯಾಯಿತು.  

ಆ ಸಾಕ್ಷಿಯ ಜಾಗದಲ್ಲಿ, ನಮ್ಮ ಆತ್ಮಸಾಕ್ಷಿಯನ್ನು ಇಟ್ಟುಕೊಂಡು ಅವಲೋಕನ ಮಾಡಬೇಕಾದ ಕಥೆಯಿದು. ಭಗವಂತನ ಮಡಿಲಲ್ಲಿ ಆಟವಾಡುತ್ತಿದ್ದ ನಾವು ಈ ಪ್ರಕೃತಿಯಲ್ಲಿ ಇಳಿದು, ಪ್ರಕೃತಿಯ ಮಾಯಾಜಾಲಕ್ಕೆ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ಆಲೋಚನೆಗಳನ್ನೂ,  ಪ್ರವೃತ್ತಿಗಳನ್ನೂ, ಈ ಪ್ರಕೃತಿಯೇ ಆಳುತ್ತಿದೆ. ಅದರ ಪ್ರಭಾವಕ್ಕೊಳಗಾದ ನಮ್ಮ ಮನಸ್ಸುಗಳನ್ನು ನಮ್ಮ ಪೂರ್ವ ಸಂಸ್ಕಾರಕ್ಕನುಗುಣವಾಗಿ ಹರಿಯಬಿಟ್ಟಿದ್ದೇವೆ. ಕಾಮ-ಕ್ರೋಧಾದಿ ಅರಿಷಡ್ವರ್ಗಗಳು ಮನಸ್ಸಿನಲ್ಲಿ ಅಲೆಯನ್ನು ಎಬ್ಬಿಸುತ್ತಿವೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ಅವುಗಳ ಪ್ರಭಾವಕ್ಕೊಳಗಾಗಿ ನನಗೆ ಆಸ್ತಿ ಬೇಕು, ಹಣ ಬೇಕು, ಕೀರ್ತಿ ಬೇಕು ಇತ್ಯಾದಿ ತಮ್ಮ ಅಪೇಕ್ಷೆಗಳನ್ನು ಬಿಚ್ಚಿಡುವುದನ್ನು ಕಾಣುತ್ತೇವೆ. ಆದರೆ ಇವೆಲ್ಲ ಆಸೆಗಳು ಆತ್ಮಮೂಲವಾಗಿ ಬಂದಿದೆಯೇ? ಅಥವಾ ಪ್ರಕೃತಿಯ ಮಾಯೆಯಿಂದ ಪ್ರೇರಿತವಾಗಿದೆಯೇ? ಎಂಬುದನ್ನು ಅರಿಯಲಾಗುತ್ತಿಲ್ಲ. ಆ ನ್ಯಾಯಾಧೀಶನಂತೆ ಜ್ಞಾನಿಯಾದ ಗುರುವೊಬ್ಬನು ಇವೆಲ್ಲವುಗಳಿಂದ ನಮ್ಮನ್ನು ಬಿಡಿಸಬಲ್ಲನಾದರೆ ನಾವೂ ಆತ್ಮದ ಕೂಗಿಗೆ ಓಗೊಡ ಬಹುದೇನೋ!

ಶ್ರೀರಂಗ ಮಹಾಗುರುಗಳ ದಿಗ್ದರ್ಶನ ಇಲ್ಲಿ ಸ್ಮರಣೀಯ. " ಕಣ್ಣಿಗೆ ದೃಶ್ಯ, ಕಿವಿಗೆ ಶಬ್ದ , ನಾಲಗೆಗೆ ರುಚಿ ಹೀಗೆ ಎಲ್ಲಾ ಇಂದ್ರಿಯಗಳಿಗೂ ಒಂದೊಂದು ವಿಷಯವಿದೆಯೋ, ಹಾಗೆಯೇ ಜೀವಕ್ಕೂ ಒಂದು ವಿಷಯವಿದೆ. ಬಯಕೆಯಿದೆ. ಪ್ರಕೃತಿಯಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಆ ಬಯಕೆಯ ಕೂಗು ನಮ್ಮವರೆಗೂ ತಲುಪುತ್ತಿಲ್ಲ. ಜೀವಕ್ಕೆ ದೇವನೇ ವಿಷಯ. ಈ ಪ್ರಕೃತಿಯ ಸಂಕೋಲೆಗಳಿಂದ ಬಿಡಿಸಿಕೊಂಡಾಗ, ಜೀವದ ಕೂಗು "ನಾನು ಭಗವಂತನಿಂದ ಬಂದಿದ್ದೇನೆ. ಮತ್ತೆ ಅಲ್ಲಿಗೆ ಹೋಗಿ ತಲುಪಬೇಕು" ಎಂಬುದಾಗಿ ಕೇಳುತ್ತಲೇ ಇದೆ, ಎಂದು  ಅನುಭವದಿಂದ ವಿವರಿಸುತ್ತಿದ್ದರು. ಅಂತಹ ಜೀವದ ಕೂಗಿಗೆ ಓಗೊಟ್ಟು, ನಮ್ಮ ಜೀವನ ನಡೆಸುವಂತೆ ನಮ್ಮ ಇಂದ್ರಿಯ ಮನೋಬುದ್ಧಿಗಳು ಅಣಿಯಾಗಲಿ ಎಂದು ಆಶಿಸೋಣ. ಅದಕ್ಕಾಗಿ ಜ್ಞಾನಿಗಳು ನಿರ್ದೇಶಿಸಿದ ಅಂತಹ ಸಂಸ್ಕಾರಗಳನ್ನು ನಮ್ಮದಾಗಿಸಿಕೊಳ್ಳೋಣ.   

ಸೂಚನೆ: 8/06/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.