Sunday, July 19, 2020

ಯೋಗ - ಭೋಗಗಳನ್ನೂ ನೀಡುವ ಶ್ರಾವಣ (Yoga - Bhogagalannu Niduva Sravana)

ಲೇಖಕರು: ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in
ಬೇಸಿಗೆಯ ಬಿರುಬೇಗೆಯನ್ನು ಕಳೆದು ಲೋಕಕ್ಕೆ ತಂಪನ್ನುಂಟುಮಾಡುವ  ಕಾಲ ವರ್ಷಋತು. ಮಳೆಯ ಚಟಪಟ ಧ್ವನಿ, ತುಂಬಿ ಹರಿಯುವ ನದಿಪ್ರವಾಹ, ಜಲಪಾತಗಳಲ್ಲಿ  ಭೋರ್ಗರೆಯುತ್ತ ಧುಮುಕುವ ಜಲಧಾರೆ, ಮೋಡಗಳ ಆಗಮನವನ್ನು ಕಂಡು ಸಂತಸದಿಂದ ನರ್ತಿಸುವ ಮಯೂರಗಳು, ಗಿಡಮರಗಳಲ್ಲಿ ಕಾಣಿಸಿಕೊಳ್ಳುವ ಚಿಗುರುಗಳು – ಹೀಗೆ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಆಕರ್ಷಕ ದೃಶ್ಯಗಳೆಷ್ಟು!  ಬಿತ್ತನೆಗಾಗಿ ಹಾತೊರೆಯುವ ರೈತಾಪಿವರ್ಗದವರ ಭಾಗ್ಯನಿಧಿಯ ಹೆಬ್ಬಾಗಿಲು. ಇಂತಹ ಋತುವಿನ ಪ್ರಥಮ ಹೆಜ್ಜೆಯೇ ಶ್ರಾವಣಮಾಸ.ಶ್ರಾವಣವು ಲೌಕಿಕವಾದ ಆಕರ್ಷಣೆಯೊಂದಿಗೆ ಜನರಲ್ಲಿ ದೈವಿಕ ಹಾಗೂ ಆಧ್ಯಾತ್ಮಿಕ ಆಕರ್ಷಣೆಯನ್ನೂ ಉಂಟುಮಾಡುವುದಾಗಿದೆ ಎಂಬುದನ್ನು ಪತ್ತೆ ಮಾಡಿದೆ ಭಾರತೀಯ ಮಹರ್ಷಿಗಳ ಯೋಗದೃಷ್ಟಿ.

ಭಾರತೀಯ ಮಹರ್ಷಿಗಳು ಕಾಲಶರೀರದಲ್ಲಿ ಅನೇಕ ಪರ್ವಸ್ಥಾನಗಳನ್ನು ಗುರುತಿಸಿದ್ದಾರೆ. ಗಿಡಮರಗಳಲ್ಲಿನ ಪರ್ವಸ್ಥಾನಗಳು(ಗಿಣ್ಣುಗಳು) ಗಿಡದ ಪೋಷಣೆ-ರಕ್ಷಣೆ-ವಿಕಾಸಗಳಿಗೆ ಕಾರಣವಾಗುವಂತೆಯೇ ಕಾಲಶರೀರದಲ್ಲಿನ ಪರ್ವಸ್ಥಾನಗಳೂ ಸಹ ಮಾನವರ ರಕ್ಷಣೆ, ಪೋಷಣೆ, ವಿಕಾಸಗಳಿಗೆ ಹೇತುವಾಗಿರುವುದನ್ನು ಋಷಿಗಳು ಕಂಡುಕೊಂಡರು. ಸಾಧಕರ ಮನಸ್ಸನ್ನು ಸುಲಭವಾಗಿ ಒಳಯೋಗಮಾರ್ಗದೆಡೆಗೆ ತಿರುಗಿಸುವ ಇಂತಹ ಕಾಲಗಳನ್ನು ಹಬ್ಬ-ಹರಿದಿನಗಳೆಂದು ಹೆಸರಿಸಿದರು. ದೇವತಾಪೂಜೆಗೂ ಪರಮಾತ್ಮ ಧ್ಯಾನಕ್ಕೂ ಪುಷ್ಟಿಯನ್ನು ನೀಡುವ ಈ ದಿನಗಳನ್ನು ವಿಶೇಷವಾಗಿ ದೇವತಾ ಪೂಜೆಗಳಿಗೆ ಮೀಸಲಾಗಿಡುವ ಪದ್ಧತಿಯನ್ನು ತಂದರು. ಯಾವ ಕಾಲವು ಯಾವ ದೇವತೆಯ ಪೂಜೆಗೆ ಪೋಷಕವೆನ್ನುವುದನ್ನೂ ಅರಿತು ಆಯಾ ದಿನಗಳಲ್ಲಿ ಆಯಾ ದೇವತೆಗಳ ಪೂಜಾಕಲ್ಪವನ್ನು ರೂಪಿಸಿದರು ಎಂಬುದಾಗಿ ಋಷಿದೃಷ್ಟಿಯು ಕಂಡರುಹಿದ ಸೃಷ್ಟಿಮರ್ಮವನ್ನು ಶ್ರೀರಂಗಮಹಾಗುರುಗಳು ಬಿಚ್ಚಿಟ್ಟರು.

ಶ್ರಾವಣವು ಇಂತಹ ಅನೇಕ ಹಬ್ಬ-ವ್ರತಗಳನ್ನೊಳಗೊಂಡ ಪವಿತ್ರವೂ ಮಂಗಳಮಯವೂ ಆದ ವಿಶೇಷಕಾಲವಾಗಿದೆ. ನಾಗರಪಂಚಮಿ, ರಕ್ಷಾಬಂಧನ, ವರಮಹಾಲಕ್ಷ್ಮೀವ್ರತ, ಕೃಷ್ಣಾಷ್ಟಮಿ ಮುಂತಾದ ಪ್ರಸಿದ್ಧ ಹಬ್ಬಗಳು ವರ್ಷದ ಈ ಭಾಗವನ್ನು ಅಲಂಕರಿಸುವ ಪರ್ವಗಳು.

ಶ್ರಾವಣ ಶುಕ್ಲ ಪಂಚಮಿಯನ್ನು 'ನಾಗಪಂಚಮಿ' ಎಂಬುದಾಗಿ  ದೇಶದ ಅನೇಕ ಭಾಗಗಳಲ್ಲಿ ಆಚರಿಸುತ್ತಾರೆ. ನಾಗದೇವತೆಯ ಪೂಜೆಗೆ ಮೀಸಲಾದ ದಿನ ಇದು. ಇದೇ ತಿಂಗಳ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರವು ವರಮಹಾಲಕ್ಷ್ಮೀವ್ರತ ಎಂಬುದಾಗಿ ಪ್ರಸಿದ್ಧವಾಗಿದೆ. ಮಂಗಲದೇವತೆಯೂ, ಶ್ರೀಮನ್ನಾರಾಯಣನ ಶಕ್ತಿರೂಪಿಣಿಯೂ ಆದ ಮಹಾಲಕ್ಷ್ಮಿಯು ಐಶ್ವರ್ಯಕ್ಕೂ ಅಧಿದೇವತೆಯಾಗಿದ್ದಾಳೆ. ಭೋಗೈಶ್ವರ್ಯ-ಯೋಗೈಶ್ವರ್ಯಗಳೆರಡನ್ನೂ ದಯಪಾಲಿಸುವ ಜಗನ್ಮಾತೆ. ಆಕೆಯನ್ನು ವ್ರತ-ಪೂಜಾದಿಗಳಿಂದ ಪ್ರಸನ್ನಗೊಳಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗುವ ಪವಿತ್ರ ಸನ್ನಿವೇಶವಿದು. ಭೃಗುವಾರವನ್ನು(ಶುಕ್ರವಾರವನ್ನು) ಭೃಗುನಂದಿನಿಯಾದ ದೇವಿಯ ಪೂಜೆಗೆ  ಆರಿಸಿಕೊಂಡಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆಯೆಂಬುದು ಜ್ಞಾನಿಗಳ ಮತ.  ದೇಹ ಪ್ರಕೃತಿಯಲ್ಲಿಯೂ ಮಹಾಲಕ್ಷ್ಮೀ ಸಂಬಂಧವಾದ ಕೇಂದ್ರಗಳನ್ನು ಸಹಜವಾಗಿಯೇ ತೆರೆಯಿಸುವ ಗುಣದಿಂದ ಕೂಡಿರುವುದರಿಂದ ಶುಕ್ರವಾರವನ್ನು ಈ ಪೂಜೆಗೆ ಆರಿಸಿಕೊಳ್ಳಲಾಗಿದೆ. ಇದು ಹಬ್ಬಗಳ ಆಚರಣೆಯ ವ್ಯವಸ್ಥೆಯ ಹಿಂದಿರುವ ವೈಜ್ಞಾನಿಕ ದೃಷ್ಟಿಯನ್ನು ಎತ್ತಿ ತೋರುವುದಾಗಿದೆ. ಪ್ರತಿ ಶುಕ್ರವಾರವೂ ಲಕ್ಷ್ಮಿಪೂಜೆಗೆ ವಿಶೇಷವೇ ಆದರೂ ಶ್ರಾವಣಶುಕ್ರವಾರದಲ್ಲಿ ಪ್ರಕೃತಿಯನ್ನು ಅರಳಿಸುವ ಶಕ್ತಿಯು ಹೆಚ್ಚುಪ್ರಮಾಣದಲ್ಲಿರುವುದರಿಂದ ಈ ದಿನದಲ್ಲಿ ವಿಶೇಷಪೂಜೆಯು ವಿಧಿಸಲ್ಪಟ್ಟಿಲದೆ.

ಶ್ರಾವಣದ ಹುಣ್ಣಿಮೆಯನ್ನು ರಕ್ಷಾಬಂಧನವೆಂಬುದಾಗಿ ಉತ್ತರಭಾರತದಲ್ಲಿ ಆಚರಿಸುತ್ತಾರೆ. ಕೆಲವು ದಶಕಗಳಿಂದ ದಕ್ಷಿಣಭಾರತದಲ್ಲೂ ಈ ಆಚರಣೆಯನ್ನು ರೂಢಿಸಿಕೊಳ್ಳಲಾಗಿದೆ. ಹೆಣ್ಣುಮಕ್ಕಳು ತಮ್ಮ ಸಹೋದರರಲ್ಲಿಯ ಪ್ರೀತಿಯನ್ನು ವಿಶೇಷವಾಗಿ ಭಾವಿಸುವ ದಿನವಿದು. ಬಣ್ಣಬಣ್ಣದ ಸುಂದರವಾದ ಕಂಕಣಗಳನ್ನು(ರಾಖೀ) ತಮ್ಮ ಪ್ರೀತಿಯ ಕುರುಹಾಗಿ ಅವರ ಕೈಗೆ ಕಟ್ಟುತ್ತಾರೆ. ಪ್ರತಿಯಾಗಿ, ಸಹೋದರರು ಅವರನ್ನು ಉಡುಗೊರೆಗಳಿಂದ ಸಂತೋಷಗೊಳಿಸುವುದು ರೂಢಿ. ಬಂಧು ಮಿತ್ರರೆಲ್ಲರೂ ಭೇಟಿಯಾಗಿ ಸಂತೋಷ-ಸಡಗರಗಳಿಂದ ಪರಸ್ಪರ ಪ್ರೀತಿ, ಬಾಂಧವ್ಯ, ವಿಶ್ವಾಸಗಳನ್ನು ಹಂಚಿಕೊಳ್ಳುವ ರಮಣೀಯವಾದ ಸನ್ನಿವೇಶ. ಈ ದಿನವನ್ನು ಉಪನಯನ ಸಂಸ್ಕಾರವಾದವರು 'ಉಪಾಕರ್ಮ' ಎಂಬುದಾಗಿ ಆಚರಿಸುತ್ತಾರೆ. ಸಂಸ್ಕಾರ ಪೂರ್ವಕವಾಗಿ ವೇದಗಳನ್ನು ಕಲಿಯುವ ಕರ್ಮವಾದ್ದರಿಂದ ಉಪಾಕರ್ಮವೆಂಬ ಹೆಸರು.

ಶ್ರಾವಣದ ಕೃಷ್ಣಪಕ್ಷದ ಅಷ್ಟಮಿಯನ್ನು ವೇಣುಗಾನಲೋಲನಾದ ಶ್ರೀಕೃಷ್ಣನ ಜಯಂತಿಯೆಂದು ಕರೆಯಲಾಗುತ್ತದೆ. ರೋಹಿಣೀನಕ್ಷತ್ರಕ್ಕೆ ಪ್ರಾಧಾನ್ಯವನ್ನು ಕೊಟ್ಟು ಶ್ರಾವಣದಲ್ಲಿ ಆ ನಕ್ಷತ್ರದಂದು ಕೃಷ್ಣಜಯಂತಿಯನ್ನು ಆಚರಿಸುವ ಕ್ರಮವೂ ಉಂಟು. ಭಾರತದ ಆದ್ಯಂತ ಎಲ್ಲ ಕಡೆಗಳಲ್ಲಿಯೂ ಈ ಹಬ್ಬವನ್ನು  ಆಚರಿಸಲಾಗುತ್ತದೆ. ಕೃಷ್ಣಜನನವು ರಾತ್ರಿಯಲ್ಲಿ ಸಂಭವಿಸಿದ್ದರಿಂದ ರಾತ್ರಿ ಸಮಯದಲ್ಲೇ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಯೋಗ-ಭೋಗಗಳೆರಡಕ್ಕೂ ಸ್ಥಾನವುಂಟು. ಬಾಲರೊಡನೆ ಬಾಲನಾಗಿಯೂ, ಗೊಲ್ಲರೊಡನೆ ಗೋಪಾಲನಾಗಿಯೂ, ರಾಜರೊಡನೆ ರಾಜನೀತಿಜ್ಞನಾಗಿಯೂ, ಜ್ಞಾನಿಗಳೊಡನೆ ಜ್ಞಾನಿಯಾಗಿಯೂ ಇದ್ದ  ಶ್ರೀಕೃಷ್ಣನ ಉತ್ಸವದಲ್ಲಿ ಆಬಾಲವೃದ್ಧರೆಲ್ಲರಿಗೂ ಸ್ಥಾನವುಂಟು ಎಂಬುದನ್ನು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದರು. .

ವರ್ಷಾಕಾಲದ ಪ್ರಭಾವದಿಂದ ಗಿಡಮರಗಳು ನವನವೋನ್ಮೇಷದಿಂದ ಕಂಗೊಳಿಸುತ್ತವೆ. ಆದ್ದರಿಂದ ಆ ಸಮಯದಲ್ಲಿ ಸುಲಭವಾಗಿ ಲಭ್ಯವಾಗುವ ತಳಿರುತೋರಣಗಳಿಂದಲೂ, ನಾನಾವರ್ಣದ  ಪುಷ್ಪಗಳಿಂದಲೂ, ತರಕಾರಿ, ಹಣ್ಣುಗಳಿಂದಲೂ ಪೂಜಾಮಂಟಪವನ್ನು ಸಿಂಗರಿಸುತ್ತಾರೆ. ನಂತರ ಆ ಮಂಟಪದಲ್ಲಿ ಕೃಷ್ಣಮೂರ್ತಿಯನ್ನು ಬಿಜಯಮಾಡಿಸಿ ವಿಜೃಂಭಣೆಯಿಂದ  ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಅನೇಕ ವಿಧವಾದ ಭಕ್ಷ್ಯ-ಭೋಜ್ಯಗಳು ಭಗವಂತನ ನೈವೇದ್ಯಕ್ಕೆ ಸಿದ್ಧವಾಗುತ್ತವೆ. ಇದಕ್ಕಾಗಿ ಎಂಟು-ಹತ್ತು ದಿನಗಳು ಮುಂಚೆಯಿಂದಲೇ ಉತ್ಸುಕರಾಗಿ ಸಿದ್ಧತೆಗಳನ್ನು ಕೈಗೊಳ್ಳುತ್ತಾರೆ. ಮನೆಗಳಲ್ಲಿ ಸಡಗರವೋ ಸಡಗರ.

ಪೂಜಾನಂತರ ನಿವೇದಿತವಾದ ಭಕ್ಷ್ಯ-ಭೋಜ್ಯಗಳು ಪ್ರಸಾದರೂಪವನ್ನು ತಾಳುತ್ತವೆ. ಅವುಗಳ ಸ್ವೀಕಾರವು ನಾಲಿಗೆಗೆ ರುಚಿಯಾಗಿ ಸಂತೋಷವನ್ನು ನೀಡುವುದಷ್ಟೇ ಅಲ್ಲ;. ಅದರಲ್ಲಿ ತುಂಬಿರುವ ಭಗವದ್ರಸವು ಮನಸ್ಸನ್ನು ಭಗವನ್ಮಯವಾಗಿಸುವಂತಹ ಯೋಜನೆಯು ಪೂಜಾವಿಧಾನದಲ್ಲಿದೆ. ಯೋಗ-ಭೋಗಗಳ ಮೇಳನಕ್ಕೆ ಇಲ್ಲಿ ಅವಕಾಶವುಂಟು ಎಂಬುದನ್ನು ಶ್ರೀರಂಗಮಹಾಗುರುಗಳು ಒತ್ತಿ ಹೇಳಿದ್ದರು.

ವರ್ಷಋತುವಿನಲ್ಲಿ ಹಂಸಪಕ್ಷಿಗಳು ಮಾನಸಸರೋವರಕ್ಕೆ ತೆರಳಿ ಅಲ್ಲಿ ಮಿಂದು ಆನಂದಿಸುವಂತೆ ಪರಮಹಂಸರೂ ಸಹ ತಮ್ಮ ಹೃದಯಗುಹೆಯಲ್ಲಿನ ಮಾನಸಸರೋವರದಲ್ಲಿ ಮುಳುಗಿ ಆತ್ಮಾನಂದವನ್ನು ಸವಿಯುವ  ಋತು ವರ್ಷಋತು.  ಸಂನ್ಯಾಸಿಗಳ ಚಾತುರ್ಮಾಸ್ಯವ್ರತವು ಶ್ರಾವಣದಲ್ಲಿಯೇ ಪ್ರಾರಂಭವಾಗಿ ನಾಲ್ಕು ತಿಂಗಳುಗಳ ಕಾಲ ಮುಂದುವರಿಯುತ್ತದೆ. ಈ ಸಮಯವು ಸಂನ್ಯಾಸಿಗಳ ಹೊರಸಂಚಾರಕ್ಕೆ ತೊಡಕನ್ನೊಡ್ಡುತ್ತದೆ. ಅವರು  ಓಡಾಟವನ್ನು ತ್ಯಜಿಸಿ ಒಂದೆಡೆಯಲ್ಲಿ ನೆಲೆಸಿ ಪ್ರಣವಧ್ಯಾನದಲ್ಲಿ ನಿರತರಾಗಲು ನಿಸರ್ಗವು ವಿಶೇಷ ಪೋಷಣೆಯನ್ನು ಒದಗಿಸಿಕೊಡುವ ಕಾಲವಿದು.

ಇಷ್ಟು ಸಂಭ್ರಮ ಸಡಗರಗಳಿಗೆ ಎಡೆಯಾದ ಶ್ರಾವಣವು ಸಧ್ಯದಲ್ಲೇ  ಬರಲಿದೆ. ಆಗ ಬರಲಿರುವ  ಹಬ್ಬಗಳನ್ನು ಯೋಗ-ಭೋಗಮಯವಾಗಿ ಅನುಭವಿಸಲು ಸಿದ್ಧರಾಗೋಣ.


ಸೂಚನೆ:  19/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.