Sunday, July 5, 2020

ಅಭಿವಾದನದ ಮಹಿಮೆ (Abhivadanada Mahime)

ಲೇಖಕರು : ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


 ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |
ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾ ಯಶೋ ಬಲಮ್ || ಸುಭಾಷಿತರತ್ನಭಾಂಡಾಗಾರ

ಅರ್ಥ-ಯಾವಾಗಲೂ ನಮಸ್ಕಾರ ಮಾಡುವ ಸ್ವಭಾದವನ ಮತ್ತು ಅನವರತವೂ ವೃದ್ಧರ ಸೇವೆಯನ್ನು ಮಾಡುವವನ ಆಯುಷ್ಯ, ವಿದ್ಯಾ, ಯಶಸ್ಸು ಮತ್ತು ಬಲ ಎಂಬ ಈ ನಾಲ್ಕು ಗುಣಗಳು ಬೆಳೆಯುತ್ತವೆ.

ವಿವರಣೆ - ದೊಡ್ಡವರಿಗೆ ಅಭಿವಾದನ ಮಾಡುವುದರಿಂದ ಮತ್ತು ಸೇವೆ ಮಾಡುವುದರಿಂದ ಈ ನಾಲ್ಕು ಗುಣಗಳು ಬೆಳೆಯಲು ಹೇಗೆ ಸಾಧ್ಯ? ಎಂಬ ಸಹಜ ಪ್ರಶ್ನೆ ಉದ್ಭವಿಸುತ್ತದೆ. 'ಅಭಿ' ಎಂಬ ಉಪಸರ್ಗ ಮತ್ತು 'ವದಿ' ಎಂಬ ಧಾತುವಿನ ಸಂಯೋಗದಿಂದ 'ಅಭಿವಾದನ' ಎಂಬ ಶಬ್ದ ಉಂಟಾಗಿದೆ. ಅಂದರೆ ನಮಸ್ಕಾರ ಮತ್ತು ಸ್ತುತಿ ಮಾಡುವುದು ಎಂದರ್ಥ. ವ್ಯಕ್ತಿಯಲ್ಲಿರುವ ಒಳ್ಳೆಯ ಗುಣವನ್ನು ಎತ್ತಿ ಹೇಳುವುದೇ ಸ್ತುತಿ. ಈ ಹೇಳುವಿಕೆ ಮುಕ್ತಕಂಠದಿಂದ ಆಗಬೇಕು. ಅತಿಶಯೋಕ್ತಿಯು ಆಗಬಾರದು. ಅಥವಾ ನ್ಯೂನೋಕ್ತಿಯೂ ಆಗಬಾರದು. ಇರುವ ವಿಷಯವನ್ನು ಹಾಗೇ ಹೇಳಬೇಕು. ಹಾಗೇ ಮುಕ್ತಕಂಠದಿಂದ ಯಾವುದೇ ವ್ಯಕ್ತಿಯನ್ನು ಉತ್ಕೀರ್ತನೆ ಮಾಡುತ್ತಾ ಹೋದರೆ ಅ ಗುಣಗಳನ್ನು ನಮ್ಮಲ್ಲಿ ಸಾತ್ಮ್ಯ ಮಾಡಿಕೊಳ್ಳುವತ್ತ ನಮ್ಮ ಮನಸ್ಸು ಹರಿಯುತ್ತದೆ. ನಾವೂ ಒಂದು ದಿನ ಅವರಂತೆ ಸದ್ಗುಣಿಗಳಾಗುತ್ತೇವೆ. ಅಭಿವಾದನವು ಬೇರೆಯವರ ಔನ್ನತ್ಯ - ಶ್ರೇಷ್ಠತ್ವವನ್ನು ನಾವು ಭಾವಿಸುವ ವಿಧಾನ. ಆ ಗುಣಗಳಿಗೆ ಬಾಗುವಿಕೆ. ಹೀಗೆ ಬಗ್ಗಿದಾಗ ಮಾತ್ರ ಅವರಲ್ಲಿರುವ ಗುಣಗಳು ನಮ್ಮತ್ತ ಹರಿಯಲು ಸಾಧ್ಯ. ಹರಿಯುವಿಕೆಯು ಮೇಲಿಂದ ಕೆಳಕ್ಕೆ ತಾನೆ! ಈ ಅಭಿವಾದನ ಮತ್ತು ಹಿರಿಯರ ಸೇವೆ ನಮ್ಮಲ್ಲಿ ನಮ್ರತೆಯನ್ನು ಮೈಗೂಡಿಸಿಕೊಡುತ್ತವೆ. ಇದರಿಂದ ಆಯುಷ್ಯ ಹೆಚ್ಚಾಗುವ ಮಾರ್ಮಿಕ ಅಂಶಗಳನ್ನು ಅವರು ನಮಗೆ ಆಶೀರ್ವಾದ ರೂಪದಲ್ಲಿ ಅನುಗ್ರಹಿಸುತ್ತಾರೆ. ಅವರಿಂದ ಅನೇಕ ಬಗೆಯ ವಿದ್ಯೆಗಳ ಮರ್ಮವೂ ತಿಳಿಯುತ್ತದೆ. ಯಾರು ಹಿರಿಯರಿಗೆ ಗೌರವವನ್ನು ಸಲ್ಲಿಸುವ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾನೋ ಅಂತಹವನನ್ನು ಸಮಾಜವೂ ಗುರುತಿಸಿ ಗೌರವಿಸಿದಾಗ ಅವನ ಯಶಸ್ಸೂ ಹಿಗ್ಗುವುದಿಲ್ಲವೇ!! ಹಿರಿಯರ ಬೆಂಬಲ ಸಿಕ್ಕಿದರೆ ನಾವು ಯಾವುದೇ ಕೆಲಸ ಮಾಡುವುದಾದರೂ ಅದಕ್ಕೆ ಬೇಕಾದ ಬಾಹ್ಯಬಲ ಮತ್ತು ಮಾನಸಿಕಬಲ ಸಿಕ್ಕಂತೆ ಮತ್ತು ಆ ಕಾರ್ಯ ಫಲಿಸುವುದೂ ಅಷ್ಟೇ ನಿಶ್ಚಯ. ಹಿರಿಯರ ಆಶೀರ್ವಾದಕ್ಕೆ ಅದೆಷ್ಟು ಬಲವಿದೆ.!  

ಸೂಚನೆ: 4/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.