Tuesday, July 7, 2020

ದೇವನು ನಿರ್ಮಿಸಿದ ಅದ್ಭುತಯಂತ್ರ (Devanu Nirmisida Adbhutayantra)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)

ಸುಖ-ಶಾಂತಿ-ಆನಂದಗಳನ್ನು ಬಯಸುವುದು ಮನುಷ್ಯನ ಸಹಜಸ್ವಭಾವವೇ ಆಗಿದೆ.  ಯುಗಯುಗಾಂತರಗಳಿಂದಲೂ ಈ ಉದ್ದೇಶದಿಂದಲೇ ಮಾನವನು ತನ್ನ ಜೀವನವನ್ನು ರೂಪಿಸಿಕೊಳ್ಳುತ್ತಲಿರುವನು.  ಇಂದಿನ ಆಧುನಿಕ ಪ್ರಪಂಚವೂ ಇದಕ್ಕೆ ಹೊರಾತಾದದ್ದಲ್ಲ. ಈ ನಿಟ್ಟಿನಲ್ಲಿ ಜನರು ಸತತ ಅನ್ವೇಷಣೆಗಳ ಫಲವಾಗಿ ಹೊಸಹೊಸ ಯಂತ್ರಗಳನ್ನು ರಚಿಸಿ ತಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳುವ ಪ್ರಯತ್ನವನ್ನು ಕೈಗೊಳ್ಳುತ್ತಿದ್ದಾರೆ. ಮನುಕುಲವು ಈ ಪ್ರಗತಿ ನೀಡುವ ಸೌಲಭ್ಯಗಳಿಂದ ಸುಖಿಸುತ್ತಿರುವುದು ನಿಜ. ಆದರೆ ಈ ಸುಖವು ಶಾಶ್ವತವಾಗಿಲ್ಲದೆ ದುಃಖಮಿಶ್ರಿತವಾಗಿಯೇ ಇದೆಯೆನ್ನುವ ಸತ್ಯವನ್ನು ಅಲ್ಲಗಳಿಯುವಂತಿಲ್ಲ.

ಹೀಗೆ ಯಂತ್ರಪ್ರಪಂಚದಲ್ಲೇ ಜೀವನ ಮಾಡುತ್ತಿರುವ ಮಾನವನು ಸದಾಕಾಲವೂ ಹೊತ್ತು ತಿರುಗುತ್ತಿರುವ ಯಂತ್ರವೊಂದಿದೆ. ಮಾನವನಿಗೆ 'ಮಾನವ'ನೆಂಬ ಗುರುತನ್ನು ನೀಡುವ ಮಾನವ ಶರೀರವೇ ಆ ಯಂತ್ರ. ಆ ಯಂತ್ರವನ್ನೂ, ಅದರಿಂದೊದಗಬಹುದಾದ ಸುಖವನ್ನೂ ಪರಿಚಯಿಸಿಕೊಳ್ಳುವುದು ಪ್ರತಿಮಾನವನ ಹಕ್ಕು-ಕರ್ತವ್ಯವಾಗಿದೆಯೆನಿಸುತ್ತದೆ.
ಆಧುನಿಕ ವಿಜ್ಞಾನವು ಶರೀರದೊಳಗೆ ಹೊರಗಣ್ಣಿಗೆ ಕಾಣದಿರುವ ಸೂಕ್ಷ್ಮಾಂಶಗಳನ್ನೂ ಯಂತ್ರಗಳ ಸಹಾಯದಿಂದ ಕಣ್ಮುಂದೆ ತೋರಿಸುತ್ತಿದೆ. ಇನ್ನು ಪರಿಚಯಿಸಿಕೊಳ್ಳಬೇಕಾದದ್ದೇನಿದೆ? ಇಂದ್ರಿಯತೃಪ್ತಿ, ಊಟ-ತಿಂಡಿ-ಮೋಜುಗಳಿಂದ ಮನೋಲ್ಲಾಸ, ವಿದ್ಯೆ-ಅನ್ವೇಷಣೆಗಳಿಂದ ಬುದ್ಧಿಗೆ ಸಂತಸ ಇಷ್ಟೂ ದೊರಕುತ್ತಲಿದೆ. ಪಡೆಯಲು ಇನ್ಯಾವ ಸುಖವುಳಿದಿದೆ? ಎನಿಸುತ್ತದೆ. ಆದರೆ ಇಷ್ಟಕ್ಕಿಂತಲೂ ವಿಭಿನ್ನವಾದ ಶಾಶ್ವತವಾದ, ಸುಖ-ಸಂತೋಷ ಒಂದಿದೆಯೆನ್ನುವುದು ಸಿದ್ಧವಾದರೆ  ಸುಖವನ್ನರುಸುವವರು ಅದರ ಪರಿಚಯಕ್ಕೆ ಯತ್ನಿಸುವುದು ವಿವೇಕವಲ್ಲವೇ?
ಹೊರಗಣ್ಣು ಸ್ಥೂಲವಾದ ಅಂಶಗಳನ್ನು ತೋರಿಸುತ್ತದೆ. xray, ಮೈಕ್ರೋಸ್ಕೋಪ್, scanner ಇತ್ಯಾದಿಗಳು ನೀಡುವ ದೃಷ್ಟಿಯು ಶರೀರದೊಳಗಿನ ಸೂಕ್ಷ್ಮಾಂಶಗಳನ್ನು  ತೋರಿಸಿಕೊಡುತ್ತಿದೆ. ಆದರೆ ಭಾರತೀಯಮಹರ್ಷಿಗಳ ಯೋಗವೆಂಬ ದಿವ್ಯದೃಷ್ಟಿಯು ಮಾನವಶರೀರದೊಳಗೆ ಸ್ಥೂಲ-ಸೂಕ್ಷ್ಮಗಳಿಗೂ ಹಿಂದಿರುವ ಪರವಸ್ತುವನ್ನು ದರ್ಶನ ಮಾಡಿಸಿತು. ಆ ದೃಷ್ಟಿಯಿಂದ ಅವರಿಗೆ ಒಳಗೆ ಸುಸ್ಪಷ್ಟವಾಗಿ ಕಂಡದ್ದು ದೈವಿಕ-ಅಧ್ಯಾತ್ಮ ಕ್ಷೇತ್ರಗಳು(ಪ್ರಪಂಚಗಳು). ದೇವತಾಶಕ್ತಿಗಳು ಮೂರ್ತಾಕಾರವಾಗಿ ಬೆಳಗುತ್ತಿರುವ  ಅನೇಕ  ಸ್ಥಾನಗಳುಳ್ಳದ್ದು  ದೈವೀಕ್ಷೇತ್ರ. ಶರೀರದ ಬೆನ್ನುಹುರಿಯಲ್ಲಡಗಿರುವ ಷಟ್ಚಕ್ರಗಳು, ಅದರ ಮೇಲಿನ ಸಹಸ್ರಾರಚಕ್ರದಲ್ಲಿ ಬೆಳಗುವ ಪರಂಜ್ಯೋತಿ-ಇವು ಅಧ್ಯಾತ್ಮಕ್ಷೇತ್ರ. ಆ ಜ್ಯೋತಿ ಕೋಟಿಸೂರ್ಯ ಸಮಾನವಾದರೂ ಅತ್ಯಂತ ತಂಪಾಗಿರುವ ಅದ್ಭುತ ಪ್ರಕಾಶವೆಂಬುದು ಅವರ ಅನುಭವ! ಭೌತಿಕದ ಜೊತೆಗೆ ದೈವಿಕ-ಆಧ್ಯಾತ್ಮಿಕಕ್ಷೇತ್ರಗಳನ್ನೂ ಅರಿತಾಗ ಮಾತ್ರವೇ ಶರೀರಯಂತ್ರದ ಪೂರ್ಣಪರಿಚಯವಾದಂತೆ ಎನ್ನುವುದು ಮಹರ್ಷಿಗಳ ನಿಲುವು. ನಮ್ಮ ಅರಿವಿಗೆ ಬರದಿದ್ದರೂ ಈ ಶರೀರಯಂತ್ರದ ಚಾಲನೆಗೆ ಶಕ್ತಿಯನ್ನು ನೀಡುತ್ತಿರುವುದು ಒಳಗೆ ಬೆಳಗುವ ದೇವತೆಗಳೇ ಎಂಬುದು ಅವರಿಗೆ ಖಚಿತವಾಗಿತ್ತು.
ಇದನ್ನರಿತು ದೇವತೆಗಳನ್ನು ಪೂಜಿಸಿದಾಗ ಅವರ ಪ್ರಸನ್ನತೆಯು ಲಭಿಸಿ ಐಹಿಕಸುಖಪ್ರಾಪ್ತಿಯ ದಾರಿ ಸುಗಮವಾಗುವುದು. ಅಧ್ಯಾತ್ಮಕ್ಷೇತ್ರದ ತುಟ್ಟತುದಿಯಲ್ಲಿ ಬೆಳಗುವ ಪರಂಜ್ಯೋತಿಯ ದರ್ಶನದಿಂದಾಗುವ ಲಾಭವಾದರೋ ಭೌತಿಕ ಸುಖಗಳಿಂದ ದೊರಕಬಹುದಾದ ಉಚ್ಚತಮ ಆನಂದಕ್ಕಿಂತಲೂ ಕೋಟಿಕೋಟಿ ಪಾಲಿನ ಆನಂದ-ನೆಮ್ಮದಿ-ಶಾಂತಿ, ಶಾಶ್ವತಸುಖ, ಸುಖದಪರಮಾವಧಿ!

ಆಧುನಿಕ ವಿಜ್ಞಾನಿಗಳು ತಮ್ಮ ಅನ್ವೇಷಣೆಗಳು ಲೋಕೋಪಕಾರಿಯಾಗುವಂತೆ ವ್ಯವಸ್ಥೆಗಳನ್ನು ಕಲ್ಪಿಸುವಂತೆಯೇ ಮಹರ್ಷಿಗಳೂ ಸಹ ಲೋಕ-ಹಿತಚಿಂತಕರಾಗಿದ್ದರು.  ಅಂತರಂಗ ಅನುಭವಗಳಿಂದ ತಾವು ಪಡೆದ ಆನಂದವನ್ನು ಲೋಕವೆಲ್ಲವೂ ಪಡೆದು ನಲಿಯಲಿ ಎಂಬ ಉದಾರಮನಸ್ಸಿನಿಂದ ಅದಕ್ಕೆ ಬೇಕಾದ ಮಾರ್ಗದರ್ಶನವನ್ನು ನೀಡಿದರು.   ದೇಹಯಂತ್ರದಲ್ಲಿನ  ಒಳಕೇಂದ್ರಗಳ ಅನುಭವಕ್ಕೆ ಪೋಷಕ-ಮಾರಕವಾದ ಪದಾರ್ಥ ಹಾಗೂ ಆಚರಣೆಗಳ ಪಟ್ಟಿಯನ್ನೇ ಅನ್ವೇಷಣೆಯಿಂದರಿತು ಸಾರಿತು ಅವರ ವೈಜ್ಞಾನಿಕಮತಿ. ಮಾನವಶರೀರವನ್ನು ಹೊರತುಪಡಿಸಿ ಇನ್ಯಾವ ಶರೀರದಲ್ಲೂ ಪರಮಾತ್ಮನನ್ನು ತೋರಿಸುವಂತಹ ರಚನೆಯಿಲ್ಲ ಎಂಬುದು ಮಹರ್ಷಿಗಳು ಸಾರಿದ ಸತ್ಯ. ಅದನ್ನೇ ಶ್ರೀರಂಗಮಹಾಗುರುಗಳು  "ಭಗವಂತನನ್ನು ಕಾಣುವುದು ಪ್ರತಿಮಾನವನ ಜನ್ಮ-ಸಿದ್ಧ ಹಕ್ಕು" ಎಂಬುದಾಗಿ ಒತ್ತಿ ಒತ್ತಿ ಹೇಳುತ್ತಿದ್ದರು.

ಗಗನಹಾರಿ-ವಿಮಾನವನ್ನು ಕೇವಲ runwayದಲ್ಲಿ ಓಡಿಸುವುದರಲ್ಲಿಯೇ ತೃಪ್ತರಾದರೆ? ಅಥವ ಗಣಕಯಂತ್ರವನ್ನು ಪ್ರಾಥಮಿಕದರ್ಜೆಯ ಕೂಡಿ-ಕಳೆಯುವಲೆಕ್ಕಕ್ಕೆ ಮಾತ್ರವೇ ಉಪಯೋಗಿಸಿದರೆ? ಆಗ ಯಂತ್ರಗಳ ಪೂರ್ಣಸಾಮರ್ಥ್ಯವನ್ನರಿತವರು ಹೇಗೆ ಪ್ರತಿಕ್ರಯಿಸಬೇಕು? ಹಾಸ್ಯಾಸ್ಪದವಲ್ಲವೇ! ಅಂತೆಯೇ, ಮಾನವಶರೀರಯಂತ್ರದಿಂದ ಮಾತ್ರವೇ ದೊರಕಬಹುದಾದ ವಿಶೇಷ ಲಾಭದ ಕಡೆ ಗಮನಹರಿಸದೆ ಭೌತಿಕಸುಖಗಳಿಂದ ಮಾತ್ರವೇ ತೃಪ್ತರಾದರೆ ಬಲ್ಲವರ ಪಾಲಿಗೆ ಅದು ಶೋಚನೀಯಸ್ಥಿತಿಯಾಗುವುದು.
ಆದ್ದರಿಂದ ಭೌತಿಕಸುಖದೊಂದಿಗೆ ಋಷಿಪ್ರಣೀತವಾದ ದೈವೀಸುಖ-ಆತ್ಮಸುಖಗಳನ್ನೂ ಪಡೆಯುವ ಪ್ರಯತ್ನವೆಸಗಿ ಹೊತ್ತುಬಂದಿರುವ ಅದ್ಭುತಯಂತ್ರದ ಪರಿಪೂರ್ಣ ಉಪಯೋಗವನ್ನು ಪಡೆಯೋಣ.

ಸೂಚನೆ: 7/7/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.