Thursday, July 9, 2020

ಗುರುಭಕ್ತಿಯ ಪಾಠ (Gurubhaktiya Patha)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀ ಶಂಕರಭಗವತ್ಪಾದರ ಶಿಷ್ಯವಾತ್ಸಲ್ಯಕ್ಕೆ ಕೈಗನ್ನಡಿಯಂತಿರುವ ಒಂದು ಪ್ರಸಂಗ. ಆನಂದಗಿರಿ, ಅವರ ನೆಚ್ಚಿನ ಶಿಷ್ಯರಲ್ಲೊಬ್ಬರು. ಇವರಿಗೆ ಗುರುಗಳು ಮಾಡುತ್ತಿದ್ದ ವೇದಾಂತ ಪಾಠದಲ್ಲಿ ಅಷ್ಟಾಗಿ ಆಸಕ್ತಿ ಇರುವಂತೆ ಕಾಣುತ್ತಿರಲಿಲ್ಲ. ಪಾಠವನ್ನು ಮಾಡುವಾಗ ಕಲ್ಲಿನಂತೆ ಸುಮ್ಮನೆ ಇರುತ್ತಿದ್ದರು. ವಿಷಯಗಳನ್ನು ಪ್ರಶ್ನಿಸಿ ತಿಳಿದುಕೊಳ್ಳುವುದಾಗಲಿ ಅಥವಾ ಜಿಜ್ಞಾಸೆ ಪರಿಹಾರಕ್ಕಾಗಿ ಶ್ರಮಿಸುವುದಾಗಲಿ ಇವರಲ್ಲಿ ಕಾಣುತ್ತಿರಲಿಲ್ಲ.  ಆದರೆ ಸದಾಕಾಲವೂ ಗುರುವಿನ  ಸೇವೆಯಲ್ಲಿ ನಿರತರಾಗಿದ್ದರು. ಗುರು-ಶಿಷ್ಯರ ಸಂಬಂಧ ಹೇಗಿರಬೇಕು? ಗುರುವಿನಲ್ಲಿ ಯಾವ ರೀತಿ ವಿನೀತನಾಗಿ ಇರಬೇಕು ಎಂಬುದಕ್ಕೆ ಇವರು ಉತ್ತಮ ನಿದರ್ಶನ .

 ಇವರ ದಿನಚರಿಯಲ್ಲಿ ಗುರುಸೇವೆಯು ಪ್ರಧಾನ ಕರ್ತವ್ಯವಾಗಿತ್ತು . ತಾನೇ  ಮೊದಲು ಸ್ನಾನ ಮಾಡಿ, ನಂತರ ಗುರುಗಳ ಕಮಂಡಲ, ವಸ್ತ್ರಾದಿಗಳನ್ನು ತೊಳೆಯುವುದು, ಪಾಠ ಪ್ರವಚನಕ್ಕೆ ಮೃದುವಾದ ಆಸನ ಸಿದ್ಧಪಡಿಸುವುದು, ದಂತಧಾವನಕಾಷ್ಠ, ವಸ್ತ್ರಾದಿಗಳನ್ನು ಸಿದ್ಧಪಡಿಸುವುದು, ದಿನವೂ ಪಾದ ಸೇವೆ ಮಾಡುವುದು ಇವರ ಕಾಯಕವಾಗಿತ್ತು . ಗುರುವಿನ ಮಾತನ್ನು ಎಂದೂ ಉಪೇಕ್ಷಿಸಿದೆ, ಅತ್ಯಂತ ವಿನಯದಿಂದ ಕೇಳುವುದು. ಹೋದ ಕಡೆ ಅನುಸರಿಸುವುದು, ಹಿತವಾದ ಕೆಲಸವನ್ನು ಮಾಡುವುದು ಹೀಗೆ ಬಗೆ ಬಗೆಯಾಗಿ ಗುರು ಸೇವಾ ಕೈಂಕರ್ಯವನ್ನು ನೆರವೇರಿಸುತ್ತಿದ್ದರು.

ಒಂದು ದಿನ, ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಶಂಕರಭಗವತ್ಪಾದರು ಶಿಷ್ಯರಿಗೆ ಪಾಠವನ್ನು ಅನುಗ್ರಹಿಸಲು ಅಣಿಯಾಗಿದ್ದರು. ಗಿರಿಯು ಆ ವೇಳೆಗೆ ಗುರುಗಳ ವಸ್ತ್ರ ತೊಳೆಯಲು ನದಿಯ ಕಡೆಗೆ ಹೋಗಿದ್ದರು. ಅಷ್ಟರಲ್ಲಿ ಉಳಿದ ಶಿಷ್ಯರು ಶಾಂತಿ ಪಾಠವನ್ನು ಪ್ರಾರಂಭಿಸಿ ಎಂದು ಬಿನ್ನವಿಸಿದರು. ಭಗವತ್ಪಾದರು- "ಸ್ವಲ್ಪ ನಿಲ್ಲಿ, ಗಿರಿಯು ಕ್ಷಣಮಾತ್ರದಲ್ಲಿ ಬರಲಿದ್ದಾನೆ" ಎಂದರು. ಗುರುಗಳ ಮಾತನ್ನು ಕೇಳಿ-  " ಒಂದು ದಿನವೂ ಗಿರಿಯು ಪಾಠವನ್ನು ಒಪ್ಪಿಸಿಲ್ಲ. ಪ್ರಶ್ನೆಗಳನ್ನು ಕೇಳಿ ಸಂದೇಹ ಪರಿಹರಿಸಿಕೊಂಡಿಲ್ಲ, ಶಾಸ್ತ್ರಜ್ಞಾನದಲ್ಲಿ ಮಂದಬುದ್ಧಿಯವನಾದ , ಇವನನ್ನು ಕಾಯುವುದೇಕೆ ?" ಎಂದು ಶಿಷ್ಯರು ವಿಜ್ಞಾಪಿಸಿಕೊಂಡರು. ತಮ್ಮ ಸಹಪಾಠಿ ಗಿರಿಯ ಬಗೆಗಿನ ತಾತ್ಸಾರ ಭಾವ , ಮತ್ತು ತಮ್ಮ ಬಗ್ಗೆ  ಅಹಂಕಾರ ಇವು ಶಂಕರರ ಗಮನಕ್ಕೆ ಬಂದಿತು. ಇವರೆಲ್ಲರಿಗೂ ಗಿರಿಯ ಭಕ್ತಿಯ ಪರಾಕಾಷ್ಠೆಯನ್ನು ಪರಿಚಯಿಸಬೇಕೆಂದು ನಿಶ್ಚಯಿಸಿದರು.

ಶಂಕರರು ಕುಳಿತಲ್ಲಿಂದಲೇ ಗಿರಿಯನ್ನು ಅನುಗ್ರಹಿಸಿದರು. ಗಿರಿಯು ಗುರುಗಳ ವಸ್ತ್ರವನ್ನು ತೊಳೆದು ನದಿಯ ಸೋಪಾನವನ್ನು ಹತ್ತಿ ಬರುತ್ತಾ  ಒಂದು ಆಶುಕವಿತೆಯನ್ನು ರಚಿಸಿದರು. "ವಿದಿತಾಖಿಲ ಶಾಸ್ತ್ರ ಸುಧಾ ಜಲಧೇ ಮಹಿತೋಪನಿಷತ್ ಕಥಿತಾರ್ಥನಿಧೇ, ಹೃದಯೇ ಕಲಯೇ ವಿಮಲಂ ಚರಣಂ,ಭವ ಶಂಕರ ದೇಶಿಕ ಮೇ ಶರಣಂ" ಎಂದು ಆರಂಭವಾಗುವ  ಅದು ಶ್ರೇಷ್ಠವಾದ ಗುರುಸ್ತುತಿಯೂ ಆಗಿತ್ತಲ್ಲದೇ ಉಪನಿಷತ್ತುಗಳ ಸಾರವನ್ನು ಧರಿಸಿದ ಎಂಟು ಶ್ಲೋಕಗಳಿಂದ ಕೂಡಿದ ಸುಂದರವಾದ ಸ್ತೋತ್ರಮಾಲೆಯಾಗಿತ್ತು. ತೋಟಕ ವೃತ್ತದಲ್ಲಿದ್ದು, ಮುಂದೆ "ತೋಟಕಾಷ್ಟಕ" ಎಂಬುದಾಗಿ ಪ್ರಸಿದ್ಧವಾಯಿತು. ಗಿರಿಯ ನಾಮಧೇಯ ತೋಟಕಾಚಾರ್ಯ ಎಂದಾಯಿತು.

ಗುರುಭಕ್ತಿಯ ಪರಮಫಲವಾಗಿ ಎಲ್ಲ ವಿದ್ಯೆಗಳೂ ತೋಟಕಾಚಾರ್ಯರಿಗೆ ಒಲಿದವು. ಇತರ ಶಿಷ್ಯರಿಗೆ ಸರ್ವಥಾ ಅಹಂಕಾರ ವರ್ಜ್ಯವೆಂಬ ಪಾಠವಾಗಿ ಪಶ್ಚಾತಾಪವೂ ಆಯಿತು. ಶಂಕರ ಭಗವತ್ಪಾದರ ಜೀವನದ ಈ ಘಟನೆ ನಮ್ಮೆಲ್ಲರಿಗೂ ದಾರಿದೀಪವಾಗಲಿ ಎಂದು ಆಶಿಸೋಣ. 

ಸೂಚನೆ:  9/7/2020 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.