Saturday, July 11, 2020

ರಾಮಾಯಣದಲ್ಲಿ ಭಯಾನಕ ರಸ (Ramayanadalli Bhayanaka Rasa)

ಲೇಖಕರು: ಡಾII ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in)

ಭಯಾನಕವೆಂಬ ರಸಕ್ಕೆ ಭಯವೇ ಸ್ಥಾಯಿಭಾವ.  'ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ' –' ಯುದ್ಧದಲ್ಲಿ ಕೋಪಗೊಂಡ ಯಾವನಿಗೆ ದೇವತೆಗಳೂ ಹೆದರುತ್ತಾರೆ ?' ಎಂಬ ವಾಲ್ಮೀಕಿಗಳ ಪ್ರಶ್ನೆಗೆ ಉತ್ತರಿಸುತ್ತಾ ನಾರದರು, ಶ್ರೀರಾಮನನ್ನು, ವೀರ್ಯದಲ್ಲಿ ವಿಷ್ಣುವಿಗೆ ಸಮಾನನೆಂದೂ, ಕೋಪದಲ್ಲಿ ಕಾಲಾಗ್ನಿಗೆ ಸದೃಶನೆಂದೂ, ಮಹೇಷ್ವಾಸನೆಂದೂ ಪ್ರಶಂಸಿಸುವರು.  ಶ್ರೀರಾಮನಲ್ಲಿ ಭಯಾನಕ ರಸವು ದಂಡಕಾರಣ್ಯದಲ್ಲಿ ಖರದೂಷಣರಾದಿಯಾಗಿ ಹದಿನಾಲ್ಕು ಸಹಸ್ರ ರಾಕ್ಷಸರ ವಧೆಯ ಸಮಯದಲ್ಲಿ, ಸಮುದ್ರರಾಜನನ್ನು ನಿಯಂತ್ರಿಸುವ ಸಮಯದಲ್ಲಿ, ರಾಮಕುಂಭಕರ್ಣರ ಯುದ್ಧ ಸನ್ನಿವೇಶದಲ್ಲಿ ಮತ್ತು ರಾಮರಾವಣರ ಯುದ್ಧಸಂದರ್ಭದಲ್ಲಿ ಅಭಿವ್ಯಕ್ತವಾಗಿರುವುದನ್ನು ಸ್ಮರಿಸಬಹುದು.

ಲಕ್ಷ್ಮಣನಿಂದ ವಿಕೃತಾನನಳಾದ ಶೂರ್ಪಣಖಿಯು ಜನಸ್ಥಾನದಲ್ಲಿಯೇ ಇದ್ದ ತನ್ನ ಸಹೋದರರಾದ ಖರ-ದೂಷಣರಿಗೆ ದೂರಿಡುತ್ತಾಳೆ.  ಹದಿನಾಲ್ಕು ಸಾವಿರ ರಾಕ್ಷಸರೊಡನೆ ಬಂದ ಖರ-ದೂಷಣ-ತ್ರಿಶಿರಸ್-ರನ್ನು ಶ್ರೀರಾಮ ಅಸಹಾಯಶೂರನಾಗಿ, ಏಕಾಕಿಯಾಗಿ ನಿಂತು ಸದೆಬಡೆಯುತ್ತಾನೆ.  ಖರ ಮತ್ತು ಶ್ರೀರಾಮರ ಯುದ್ಧವು ಬಹಳ ಭಯಂಕರವಾಗಿದ್ದು ದೇವ-ಗಂಧರ್ವ-ಸಿದ್ಧ-ಚಾರಣ-ಯಕ್ಷರಾದಿಯಾಗಿ ಎಲ್ಲರಿಗೂ ದಿಗ್ಭ್ರಮೆ ಹುಟ್ಟಿಸುವಂತಿದ್ದರೂ ಶ್ರೀರಾಮನು ಅವನನ್ನು ಸಂಹರಿಸುತ್ತಾನೆ. ಖರ ಮತ್ತು ಶ್ರೀರಾಮಚಂದ್ರರ ಯುದ್ಧವು 'ಖರ-ನಖರಾಯುಧಯೋರಿವ' ಎಂದರೆ, 'ಕತ್ತೆ ಮತ್ತು ಮೃಗೇಂದ್ರರ ನಡುವಿನ ಯುದ್ಧದಂತೆ' ಎಂದು ಭೋಜರಾಜ ಚಂಪೂರಾಮಾಯಣದಲ್ಲಿ ವರ್ಣಿಸುತ್ತಾನೆ.

ಸಮುದ್ರದಲ್ಲಿ ಸೇತುಬಂಧನವನ್ನು ಮಾಡುವುದಕ್ಕೆ ನಿಶ್ಚಯಿಸಿದ ಶ್ರೀರಾಮ, ಸಮುದ್ರರಾಜನ ಮನವೊಲಿಸಲು ದರ್ಭಾಸನದಲ್ಲಿ ಕುಳಿತು ಪ್ರಾರ್ಥಿಸಲು, ಸಮುದ್ರರಾಜನು ಬಾರದೇ ಇದ್ದಾಗ ಅತ್ಯಂತ ಕೋಪಗೊಂಡ ಶ್ರೀರಾಮನು 'ಸಮುದ್ರಂ ಶೋಷಯಿಷ್ಯಾಮಿ ಪದ್ಭ್ಯಾಂ ಯಾಂತು ಪ್ಲವಂಗಮಾಃ'- 'ಸಮುದ್ರವನ್ನು ಒಣಗಿಸಿಬಿಡುತ್ತೇನೆ. ಕಪಿಗಳು ನಡೆದೇ ಹೋಗಲಿ' ಎಂದು ಹೇಳಿ ಬ್ರಹ್ಮಾಸ್ತ್ರವನ್ನು ಹೂಡುತ್ತಾನೆ.  ಶ್ರೀರಾಮನ ಕೋಪಕ್ಕೆ ಭಯಗೊಂಡ ಸಮುದ್ರರಾಜನು ತ್ವರೆಯಿಂದ ಬಂದು ಕ್ಷಮೆಯಾಚಿಸಿ ಶ್ರೀರಾಮನಿಗೆ ಸೇತುಬಂಧನದಲ್ಲಿ ಸಹಾಯವಾಗಿ ನಿಲ್ಲುತ್ತಾನೆ.
ಕುಂಭಕರ್ಣನ ಅದ್ಭುತವಾದ ಪರಾಕ್ರಮ ಮತ್ತು ಯುದ್ಧವೈಖರಿಗೆ ಕಪಿಸೇನೆಯು 'ನಮಗೆ ಜೀವಿತವು ಪ್ರಿಯವಾದದ್ದು, ಇನ್ನು ಇವನೊಡನೆ ಯುದ್ಧ ಸಾಕು' ಎಂದು ತತ್ತರಿಸಿ ಓಡಿಹೋಗುವಾಗ, ನೀಲ-ಅಂಗದ-ಸುಗ್ರೀವ-ಹನುಮಂತರಾದಿಯಾಗಿ ಯಾರೂ ಅವನ ಮುಂದೆ ನಿಲ್ಲದಾದಾಗ, ಲಕ್ಷ್ಮಣನೊಡನೆ ಸೆಣೆಸಿ ಅವನನ್ನು ಶ್ಲಾಘಿಸಿ, ಶ್ರೀರಾಮನ ಮುಂದೆ ದ್ವಂದ್ವಯುದ್ಧಕ್ಕೆ ಬರುತ್ತಾನೆ ಕುಂಭಕರ್ಣ.  ತಾನು ವಿರಾಧ-ಖರ-ದೂಷಣ-ತ್ರಿಶಿರಸ್-ಕಬಂಧ-ವಾಲೀ-ಮಾರೀಚಾದಿಗಳಲ್ಲ ಎಂದು ಹೇಳಿಕೊಂಡು ಶ್ರೀರಾಮನೊಡನೆ ಭಯಂಕರವಾದ ಯುದ್ಧವನ್ನೇ ಮಾಡುತ್ತಾನೆ.  ಕಡೆಯಲ್ಲಿ ಶ್ರೀರಾಮನು ಐಂದ್ರಾಸ್ತ್ರವನ್ನು ಅಭಿಮಂತ್ರಿಸಿ ಅವನನ್ನು ಸಂಹರಿಸುತ್ತಾನೆ.

ಇನ್ನು ರಾಮರಾವಣರ ಯುದ್ಧವು ಅತ್ಯಂತ ಭಯಂಕರವಾಗಿ ನಡೆಯುತ್ತದೆ.  ಪರಸ್ಪರ ಅಸ್ತ್ರಗಳನ್ನು ಹೂಡಿ ಒಬ್ಬರನ್ನೊಬ್ಬರು ಜಯಿಸಲು ಪ್ರಯತ್ನಿಸುತ್ತಾರೆ.  ವಾಲ್ಮೀಕಿಮಹರ್ಷಿಗಳು ರಾಮರಾವಣಯುದ್ಧವನ್ನು ರಾಮರಾವಣಯುದ್ಧಕ್ಕೇ ಹೋಲಿಸುತ್ತಾ, ಅನನ್ವಯಾಲಂಕಾರವನ್ನು ಬಳಸಿ- ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ| ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ || ಎಂದು ಬಣ್ಣಿಸುತ್ತಾರೆ. ಶ್ರೀರಾಮನಿಗೆ ರಾವಣನನ್ನು ವಧಿಸುವ ವಿಷಯದಲ್ಲಿ ದಿಕ್ಕೇ ತೋಚದಂತಾದಾಗ ಅಗಸ್ತ್ಯಮಹಷಿಗಳು ಬಂದು ಅವನಿಗೆ ಆದಿತ್ಯಹೃದಯವನ್ನು ಬೋಧಿಸುತ್ತಾರೆ. ರಾವಣನ ತಲೆಯನ್ನು ಒಂದಾದ ಮೇಲೊಂದರಂತೆ ಕತ್ತರಿಸಿದಾಗಲೂ ಮತ್ತೆ ಮತ್ತೆ ಬರುತ್ತಿರಲು ಮಾತಲಿಯ ಸಲಹೆಯಂತೆ ಬ್ರಹ್ಮಾಸ್ತ್ರವನ್ನು ಹೂಡಿ ರಾವಣನನ್ನು ಸಂಹರಿಸುತ್ತಾನೆ.
'ಶ್ರೀರಾಮನು, ದುಷ್ಟರಿಗೆ 'ಭಯಕೃತ್' ಆಗಿ, ಸಜ್ಜನರಿಗೆ 'ಭಯನಾಶನನಾಗಿ' ಹೊರದೃಷ್ಟಿಯಲ್ಲಿ ನಿಗ್ರಹವಾದರೂ ಒಳದೃಷ್ಟಿಯಿಂದ ಅನುಗ್ರಹವನ್ನೇ ಮಾಡುತ್ತಾ, ತನ್ನ ಅವತಾರದ ಪರಮೋದ್ದೇಶವಾದ ಧರ್ಮಸ್ಥಾಪನೆಯನ್ನು ಮಾಡಿದ'ನೆಂಬ ಶ್ರೀರಂಗಗುರುವಿನ ವಾಣಿಯು ಸ್ಮರಣೀಯವಾಗಿದೆ.

ಸೂಚನೆ:  11/07/2020 
ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.