ಲೇಖಕರು: ಶ್ರೀ ನಾಗರಾಜ್ ಗುಂಡಪ್ಪ
ಮಹಾಭಾರತದ ಯುದ್ಧದ ನಂತರ ಯುಧಿಷ್ಠಿರನು ಅಶ್ವಮೇಧ ಯಾಗವನ್ನು ಮಾಡುತ್ತಾನೆ. ಯಾಗದ ಉದ್ದೇಶವು ಧರ್ಮವಿಸ್ತರಣೆಯಾಗಿದ್ದು, ಅದಕ್ಕಾಗಿ ರಾಜ್ಯ ವಿಸ್ತಾರವನ್ನು ಮಾಡುವುದಾಗಿದೆ. ಈ ಯಾಗದ ನಿಯಮದಂತೆ ಒಂದು ಕುದುರೆಯನ್ನು ಸ್ವತಂತ್ರವಾಗಿ ಅಲೆಯಲು ಬಿಟ್ಟು ಅದು ಸೀಮೆಯನ್ನು ದಾಟಿ ಹೊರ ರಾಜ್ಯವನ್ನು ಪ್ರವೇಶಿಸಿದಾಗ, ಒಂದೋ ಅಲ್ಲಿಯ ರಾಜ ತಾನು ಸಾಮಂತನೆಂದು ಘೋಷಿಸಿ, ಯುಧಿಷ್ಠಿರನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಬೇಕು; ಇಲ್ಲವಾದಲ್ಲಿ ಅಶ್ವವನ್ನು ಕಟ್ಟಿ ಯುದ್ಧ ಮಾಡಬೇಕು. ಈ ಯಾಗಾಶ್ವವು ಅಲೆಯುತ್ತಾ ಸುಧನ್ವನ ರಾಜ್ಯವನ್ನು ಪ್ರವೇಶಿಸುತ್ತದೆ. ಸುಧನ್ವ ಕೃಷ್ಣ ಪರಮಾತ್ಮನ ಪರಮ ಭಕ್ತ; ಆದರೆ, ಯಾಗಾಶ್ವದ ವಿಷಯದಲ್ಲಿ ಒಂದು ಪ್ರಮಾದವನ್ನು ಮಾಡಿಬಿಡುತ್ತಾನೆ. ಯುಧಿಷ್ಠಿರ ಧರ್ಮರಾಜನಾದುದರಿಂದ ಅವನ ಸಾರ್ವಭೌಮತ್ವವನ್ನೊಪ್ಪಿಕೊಳ್ಳಬೇಕಾಗಿತ್ತು. ಮತ್ತು ಯಾಗಾಶ್ವದ ರಕ್ಷಣೆಗಾಗಿರುವ ಅರ್ಜುನನ ಬೆನ್ನ ಹಿಂದೆ ತನ್ನ ಪರಮ ಆರಾಧ್ಯ ದೈವವಾದ ಕೃಷ್ಣನೇ ಇರುವಾಗ ಕೃಷ್ಣಾರ್ಪಣ ಬುದ್ಧಿಯಿಂದ ರಾಜ್ಯವನ್ನು ಸಮರ್ಪಿಸಬೇಕಾಗಿತ್ತು. ಆದರೂ ಯಾಗಾಶ್ವವನ್ನು ಕಟ್ಟಿಬಿಡುತ್ತಾನೆ. ಹೀಗಾಗಿ ಸುಧನ್ವ-ಅರ್ಜುನರ ನಡುವೆ ಯುದ್ಧ ಅನಿವಾರ್ಯವಾಗುತ್ತದೆ.
ಯುದ್ಧ ದೀರ್ಘ ಕಾಲ ಸಾಗುತ್ತದೆ, ಯಾರೂ ಸೋಲುವುದೂ ಇಲ್ಲ, ಗೆಲ್ಲುವುದೂ ಇಲ್ಲ. ಕೊನೆಗೆ ಅರ್ಜುನ ಪ್ರತಿಜ್ಞೆ ಮಾಡುತ್ತಾನೆ - ನಾನು ನಿಜವಾದ ಕೃಷ್ಣ ಭಕ್ತನೇ ಆಗಿದ್ದರೆ ನಿನ್ನನ್ನು ಮೂರು ಬಾಣಗಳೊಳಗೆ ಕೊಲ್ಲುತ್ತೇನೆ ಎಂದು. ತಕ್ಷಣವೇ ಸುಧನ್ವನು, ನಾನು ನಿಜವಾದ ಕೃಷ್ಣ ಭಕ್ತನೇ ಆಗಿದ್ದರೆ ನಿನ್ನ ಮೂರೂ ಬಾಣಗಳನ್ನೂ ತುಂಡು ಮಾಡುತ್ತೇನೆ ಎಂದು. ಭಗವಂತನಿಗೇ ದ್ವಂದ್ವವನ್ನು ತಂದೊಡ್ಡಿಬಿಟ್ಟರು ಭಕ್ತರು. ಭಗವಂತ ಇಬ್ಬರ ಮಾತನ್ನೂ ನಿಜ ಮಾಡಬೇಕು - ಹೇಗೆ? ಅರ್ಜುನ ಪ್ರಯೋಗ ಮಾಡಿದ ಮೊದಲೆರಡು ಬಾಣಗಳನ್ನು ಸುಧನ್ವ ತುಂಡರಿಸುತ್ತಾನೆ. ಮೂರನೇ ಬಾಣವನ್ನೂ ತುಂಡರಿಸುತ್ತಾನೆ, ಆದರೆ, ಮೂರನೇ ಬಾಣದ ಮುಂದಿನ ತುಂಡು ಸುಧನ್ವನವರೆವಿಗೂ ಹೋಗಿ ಚುಚ್ಚಿ ಕೊಲ್ಲುತ್ತದೆ. ಇಬ್ಬರ ಮಾತೂ ನಿಜವಾಯಿತು, ಅರ್ಜುನನಿಗೆ ವಿಜಯ ದೊರೆಯಿತು. ಕೃಷ್ಣ ಪರಮಾತ್ಮ ಸುಧನ್ವನಿಗೂ ಮರಣಾನಂತರ, ತನ್ನ ಸಾಯುಜ್ಯವನ್ನೇ ಕರುಣಿಸುತ್ತಾನೆ. ಹೀಗೆ, ಅವನ ಭಕ್ತಿಗೂ ಫಲ ದೊರಕಿತು.
ಸಾರಾಂಶವೆಂದರೆ, ಭಕ್ತಿಗೆ ಫಲ ಇದ್ದೇ ಇದ್ದರೂ ಸಹಾ ಧರ್ಮಕ್ಕೇ ವಿಜಯ. ಭಕ್ತಿ ಉತ್ತಮ ಮೌಲ್ಯವೇ ಮತ್ತು ಭಕ್ತಿಗೆ ತಕ್ಕ ಫಲ ಉಂಟೇ ಉಂಟು; ಆದರೆ ಎಷ್ಟೇ ಭಕ್ತಿ ಇರಲಿ, ಜ್ಞಾನವಿರಲಿ, ವೈರಾಗ್ಯವಿರಲಿ, ಧರ್ಮವನ್ನು ಮೀರುವಂತಿಲ್ಲ; ಭಗವಂತ ಧರ್ಮವನ್ನೇ ಎತ್ತಿ ಹಿಡಿಯುತ್ತಾನಾದುದರಿಂದ ಧರ್ಮಕ್ಕೇ ಎಂದಿಗೂ ಜಯ ಎಂಬುದನ್ನು ಕಥೆಯು ಸಾರುತ್ತದೆ.