ಲೇಖಕರು: ಡಾII ನಂಜನಗೂಡು ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)
ರೌದ್ರರಸಕ್ಕೆ ಕ್ರೋಧವೇ ಸ್ಥಾಯಿಭಾವ. ನಾರದರು ಶ್ರೀರಾಮನನ್ನು ಕ್ರೋಧದಲ್ಲಿ 'ಕಾಲಾಗ್ನಿಸದೃಶ'ನೆಂತಲೂ ಮತ್ತು ಕ್ಷಮೆಯಲ್ಲಿ 'ಪೃಥ್ವೀಸಮ'ನೆಂದೂ ವರ್ಣಿಸುತ್ತಾರೆ. ಎರಡು ವಿರುದ್ಧಭಾವಗಳು ಭಿನ್ನಭಿನ್ನ ಸನ್ನಿವೇಶಗಳಲ್ಲಿ ಶ್ರೀರಾಮನಲ್ಲಿ ವ್ಯಕ್ತವಾಗಿರುವುದನ್ನು ಕಾಣುತ್ತೇವೆ. ಕ್ಷಮಾಗುಣವೇ ಪ್ರಧಾನವಾಗಿರುವ ಶ್ರೀರಾಮನ ಜೀವನದಲ್ಲಿ ರೌದ್ರರಸವೂ ಅಲ್ಲಲ್ಲಿ ಹಾದುಹೋಗುವುದು ಅವನ ವ್ಯಕ್ತಿತ್ವಕ್ಕೆ ಕ್ಷೋಭೆಯನ್ನುಂಟುಮಾಡದೇ ಶೋಭೆಯನ್ನೇ ತಂದಿದೆ. ಶ್ರೀರಾಮನ ಕೋಪವು ಅಸ್ಥಾನ-ಅಕಾಲ-ಅಕಾರಣದ್ದಲ್ಲ. ಹಾಗಾಗಿ ಅದು ಸ್ವಾಗತಾರ್ಹ.
ಯುದ್ಧಭೂಮಿಯಲ್ಲಿ ವಿಭೀಷಣನ ಮೇಲೆ ರಾವಣನು ಪ್ರಯೋಗಿಸಿದ ಶಕ್ತ್ಯಾಯುಧವನ್ನು ಲಕ್ಷ್ಮಣನು ತಡೆದಾಗ, ರಾವಣನು ಎಂಟು ಘಂಟೆಗಳುಳ್ಳ ಘೋರವಾದ ಆಯುಧವನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿ ಅವನನ್ನು ಬೀಳಿಸುತ್ತಾನೆ. ಇದನ್ನು ನೋಡಿ ದುಃಖಗೊಂಡ ಶ್ರೀರಾಮನು ಕೋಪಗೊಂಡು ವಾನರರನ್ನು ಕುರಿತು 'ಇಂದು ರಾಮನ ರಾಮತ್ವವನ್ನು ಹರಿಶ್ರೇಷ್ಠರು ನೋಡಲಿ, ಅರಾವಣಮರಾಮಂ ವಾ ಜಗದ್ರಕ್ಷ್ಯಥ ವಾನರಾಃ', ಈಗ ಜಗತ್ತು ಅರಾವಣ ಅಥವಾ ಅರಾಮವಾಗುತ್ತದೆ' ಎಂದು ನುಡಿದು ರಾವಣನೊಡನೆ ಸೆಣೆಸಿ, ಅವನು ಹಿಮ್ಮೆಟ್ಟುವಂತೆ ಮಾಡುತ್ತಾನೆ.
ರಾವಣನ ಮೂಲಬಲವನ್ನು ಕಂಡು ಕಪಿಸೈನ್ಯವು ತತ್ತರಿಸಲು, ಕೋಪಗೊಂಡ ಶ್ರೀರಾಮನು ಪರಮಾಸ್ತ್ರವಾದ ಗಂಧರ್ವಾಸ್ತ್ರವನ್ನು ಪ್ರಯೋಗಿಸಿ ರಾಕ್ಷಸರನ್ನು ಮೋಹಿತರನ್ನಾಗಿ ಮಾಡಿ ಪರಸ್ಪರ ತಮ್ಮನ್ನೇ ಹೊಡೆದುಕೊಂಡು ಸಾಯುವಹಾಗೆ ಮಾಡುತ್ತಾನೆ. 'ದಿವಸಸ್ಯಾಷ್ಟಮೇ ಭಾಗೇ', ದಿವಸದ ಎಂಟನೆಯ ಒಂದು ಭಾಗದ ಅವಧಿಯಲ್ಲಿ ರಾಕ್ಷಸರ ಸೇನೆಯನ್ನು ಧೂಳೀಪಟಮಾಡುತ್ತಾನೆ. ಈ ಹಿಂದೆ, ಜನಸ್ಥಾನದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಶ್ರೀರಾಮ ಕೇವಲ ಒಂದೂವರೆ ಗಂಟೆಯೊಳಗೆ ಸಂಹರಿಸಿರುತ್ತಾನೆ ಎಂಬುದನ್ನು ಸ್ಮರಿಸಬಹುದು. ಈ ಅದ್ಭುತಕಾರ್ಯವನ್ನು ನೋಡಿ ಆಶ್ಚರ್ಯಚಕಿತರಾದ ಸುಗ್ರೀವಾದಿಗಳನ್ನು ಕುರಿತು ಶ್ರೀರಾಮನು ಈ ದಿವ್ಯವಾದ ಅಸ್ತ್ರದ ಪ್ರಯೋಗವು 'ಮಮ ವಾ ತ್ರ್ಯಂಬಕಸ್ಯ ವಾ' 'ನನ್ನಲ್ಲಿ ಅಥವಾ ಶಿವನಲ್ಲಿ ಮಾತ್ರ'ಎಂದು ಹೇಳುತ್ತಾನೆ.
ಸ್ವಾಭಾವಿಕವಾಗಿಯೇ ಶಾಂತಸ್ವರೂಪಿಯಾದ ಶ್ರೀರಾಮನಿಗೆ ಯುದ್ಧಭೂಮಿಯಲ್ಲಿ ರಾವಣನನ್ನು ನೋಡಿದಾಕ್ಷಣ ಅವನು ಋಷಿದೇವತೆಗಳ ವಿಷಯದಲ್ಲಿ ಮತ್ತು ಸೀತಾದೇವಿಯ ವಿಷಯದಲ್ಲಿ ಅವನೆಸಗಿದ ಪಾಪಗಳೆಲ್ಲವೂ ಸ್ಮರಣೆಗೆ ಬರುತ್ತದೆ. ಶಾಂತಮೂರ್ತಿಯಾದ ಶ್ರೀರಾಮನು 'ರಾಘವಃ ಕ್ರೋಧಮಾಹರತ್' ಕೋಪವನ್ನು ತನ್ನಲ್ಲಿ ಆವಾಹಿಸಿಕೊಂಡನೆಂದು ವಾಲ್ಮೀಕಿಗಳು ಬಣ್ಣಿಸುತ್ತಾರೆ. ಸಾರಥಿಯಾದ ಮಾತಲಿಯ ಸಲಹೆಯಂತೆ ಬ್ರಹ್ಮದತ್ತವಾದ ಅಮೋಘವಾದ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ, ಅವನ ಮೇಲೆ ಪ್ರಯೋಗಿಸಿ, ಸಂಹರಿಸುತ್ತಾನೆ.
'ಕೋಪವೆಂಬುದನರ್ಥಸಾಧನ' ಎಂಬಿವೇ ಮಾತುಗಳಿಂದ ಬಗೆಬಗೆಯಾಗಿ ಕೋಪದ ದುಷ್ಪರಿಣಾಮಗಳು ವರ್ಣಿತವಾಗಿದ್ದರೂ, ಯಾರು, ಯಾರಮೇಲೆ ಮತ್ತು ಯಾವಕಾರಣಕ್ಕಾಗಿ ಕೋಪಿಸಿಕೊಂಡರೆಂಬುದು ಗಮನಿಸಬೇಕಾದ ಅಂಶ. ಮಾವುತ ದುರ್ಮಾರ್ಗಕ್ಕೆ ಹೋಗುತ್ತಿರುವ ಆನೆಯ ಮೇಲಷ್ಟೇ ಕೋಪಗೊಂಡು ಅಂಕುಶದಿಂದ ತಿವಿದು ಸನ್ಮಾರ್ಗಕ್ಕೆ ತರುತ್ತಾನಷ್ಟೆ. ವೈದ್ಯನು ರೋಗಾಣುಗಳನ್ನಷ್ಟೇ ಶಸ್ತ್ರಚಿಕಿತ್ಸೆಯಿಂದ ನಾಶಮಾಡಿ ದೇಹವನ್ನು ರಕ್ಷಿಸುತ್ತಾನೆ. ಭಗವಂತನ ಅವತಾರೋದ್ದೇಶವಾದ 'ವಿನಾಶಾಯ ಚ ದುಷ್ಕೃತಾಮ್' ಎಂಬುದು ಕೈಗೊಡಬೇಕಾದರೆ 'ಕೋಪ'ವೆಂಬ 'ಸಾಧನ' ಮುಖ್ಯವಾಗಿರುತ್ತದೆ. 'ಅಯ್ಯೋ ಪಾಪ, ಈ ರೋಗಾಣುಗಳನ್ನು ಹೇಗೆ ಸಾಯಿಸುವುದು?' ಎಂದು ವೈದ್ಯನಲ್ಲಿ ಕರುಣರಸವು ಅಸ್ಥಾನದಲ್ಲಿ ಅಕಾಲದಲ್ಲಿ ಹರಿದುಬಿಟ್ಟರೆ ರೋಗಿಯ ಗತಿ ಏನು? ಎಂಬ ಉಕ್ತಿಯ ಮೂಲಕ ತತ್ತ್ವವನ್ನು ಮನಸ್ಸಿಗೆ ಇಳಿಸಿದ ಶ್ರೀರಂಗಮಹಾಗುರುವಿಗೆ ನಮೋ ನಮಃ.