ಮಾತಾ ಪಿತಾ ಚ ವೈ ಶತ್ರುಃ ಯೇನ ಬಾಲೋ ನ ಪಾಠ್ಯತೇ |
ಸಭಾಮಧ್ಯೇ ನ ಶೋಭೇತ ಹಂಸಮಧ್ಯೇ ಬಕೋ ಯಥಾ|| - ನೀತಿಸಾರ ೭
ಅರ್ಥ- ಯಾವ ತಂದೆ ತಾಯಿ ಮಗುವಿನ ಬಾಲ್ಯದಲ್ಲಿ ಓದಿಸುವುದಿಲ್ಲವೋ ಅವರು ಆತನ ಶತ್ರುವಾಗುತ್ತಾರೆ. ಹಂಸಗಳ ಮಧ್ಯದಲ್ಲಿ ಹೇಗೆ ಬಕಪಕ್ಷಿಯು ಶೋಭಿಸುವುದಿಲ್ಲವೋ ಹಾಗೆ ವಿದ್ಯೆ ಇಲ್ಲದವನು ಸಭಾಮಧ್ಯದಲ್ಲಿ ಶೋಭಿಸಲಾರ.
ಸಭಾಮಧ್ಯೇ ನ ಶೋಭೇತ ಹಂಸಮಧ್ಯೇ ಬಕೋ ಯಥಾ|| - ನೀತಿಸಾರ ೭
ಅರ್ಥ- ಯಾವ ತಂದೆ ತಾಯಿ ಮಗುವಿನ ಬಾಲ್ಯದಲ್ಲಿ ಓದಿಸುವುದಿಲ್ಲವೋ ಅವರು ಆತನ ಶತ್ರುವಾಗುತ್ತಾರೆ. ಹಂಸಗಳ ಮಧ್ಯದಲ್ಲಿ ಹೇಗೆ ಬಕಪಕ್ಷಿಯು ಶೋಭಿಸುವುದಿಲ್ಲವೋ ಹಾಗೆ ವಿದ್ಯೆ ಇಲ್ಲದವನು ಸಭಾಮಧ್ಯದಲ್ಲಿ ಶೋಭಿಸಲಾರ.
ವಿವರಣೆ - ಓದು ಪ್ರತಿಯೊಬ್ಬನಿಗೂ ಬೇಕು. ಅದಕ್ಕೊಂದು ಕಾಲವಿದೆ. ಸಕಾಲದಲ್ಲಿ ಓದಿದಾಗ ಅದಕ್ಕೆ ವಿಶೇಷವಾದ ಮತ್ತು ಶೀಘ್ರವಾದ ಫಲ ಉಂಟು. ಇದಕ್ಕೆ ಬಾಲ್ಯ ತುಂಬಾ ಪ್ರಶಸ್ತವಾದ ಕಾಲ. ಬಾಲ್ಯದಲ್ಲಿ ವಿದ್ಯೆಯನ್ನು ಅರ್ಜನೆ ಮಾಡದಿದ್ದರೆ ಯೌವನದಲ್ಲಿ ಅರ್ಥಸಂಪಾದನೆ ಮಾಡದಿದ್ದರೆ ಕೊನೆಗಾಲದಲ್ಲಾದರೂ ದೇವರ ಬಗ್ಗೆ ಚಿಂತನೆ ಮಾಡದಿದ್ದರೆ ನಾಲ್ಕನೆ ಅವಧಿಯಲ್ಲಿ ಕಿಂಕರ್ತವ್ಯಮೂಢನಾಗುತ್ತಾನೆ. ಬಾಲಕನಾದವನಿಗೆ ಯಾವುದನ್ನು ಓದಬೇಕು ಯಾವುದನ್ನು ಓದಬಾರದು ಎಂಬ ವಿವೇಕ ಇರುವುದಿಲ್ಲ. ಅದಕ್ಕೆ ತಂದೆತಾಯಂದಿರ ಮಾರ್ಗದರ್ಶನ ಅತ್ಯಂತ ಅವಶ್ಯ. ತಂದೆತಾಯಂದಿರ ಜವಾಬ್ದಾರಿ ಈ ಸಮಯದಲ್ಲಿ ವಿಶೇಷವಾಗಿರುತ್ತದೆ. ಇದನ್ನು ಸರಿಯಾಗಿ ನಿಭಾಯಿಸಬೇಕು. ಇದಕ್ಕೆ ಪಾಲಕರಿಗೆ ಮೊದಲು ವಿವೇಕ ಅನಿವಾರ್ಯ. ಯಾವ ತಂದೆತಾಯಂದಿರು ಬಾಲ್ಯದಲ್ಲಿ ವಿದ್ಯೆಯನ್ನು ಚೆನ್ನಾಗಿ ಗಳಿಸಿದವರಾಗಿರುತ್ತಾರೋ ಅವರು ಪಿತೃಸ್ಥಾನಕ್ಕೆ ಬಂದಾಗಲೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬಲ್ಲರು. ತಂದೆತಾಯಿಯಾದವರು ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದಿದ್ದಾಗ ಮಕ್ಕಳ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ. 'ಬೆಳೆವ ಸಿರಿ ಮೊಳಕೆಯಲ್ಲಿ ನೋಡು' 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ!' ಇತ್ಯಾದಿ ಗಾದೆಮಾತುಗಳು ಬಾಲ್ಯವಿದ್ಯಾಭ್ಯಾಸದ ಮಹತ್ತ್ವವನ್ನು ಸಾರುತ್ತವೆ. ಬಾಲ್ಯದಲ್ಲಿ ಸಮರ್ಪಕವಾದ ವಿದ್ಯೆ ಸಿಗದಿದ್ದವರು ದೊಡ್ಡವರಾದ ಮೇಲೆ ಎಷ್ಟೇ ಪ್ರಯತ್ನಪಟ್ಟರೂ ಅವರು ಗಳಿಸಿದ ಅರಿವಿನಲ್ಲಿ ಅಷ್ಟೊಂದು ಗಟ್ಟಿತನ ಬರಲಾರದು. ಮುಗ್ಧವಾದ ಮಕ್ಕಳ ಮನಸ್ಸನ್ನು ಸರಿಯಾಗಿ ಪಳಗಿಸಿದಾಗ ಅದರಿಂದ ಎಂತಹ ಮಹತ್ಕಾರ್ಯವನ್ನೂ ಸಾಧಿಸಬಹುದು ಎಂಬುದನ್ನು ತಿಳಿದು ಪಾಲಕರು, ತಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಬಾಲ್ಯದಿಂದಲೇ ಚೆನ್ನಾಗಿ ಮಾಡಲು ತಮ್ಮ ಜೀವನವನ್ನೇ ಮುಡಿಪಾಗಿಡಬೇಕು. ವ್ಯತ್ಯಾಸವಾದಲ್ಲಿ ಮಕ್ಕಳೇ ಪಾಲಕರ ಶತ್ರುಗಳಾಗುತ್ತಾರೆ. ಅಂತವರು ಸಮಾಜದಲ್ಲೂ ಮನ್ನಣೆಯನ್ನು ಪಡೆಯಲಾರರು. ಭವಿಷ್ಯದಲ್ಲಾಗುವ ಅವಮಾನವನ್ನು ತಡೆಯಲು ಮುಂಜಾಗ್ರತೆಯಾಗಿ ಬಾಲ್ಯದಲ್ಲೇ ಮಕ್ಕಳನ್ನು ಓದಿಸುವುದು ಉತ್ತಮ ಎಂಬುದು ಈ ಸುಭಾಷಿತದ ಸಾರ.
ಸೂಚನೆ: 18/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.