Thursday, July 30, 2020

ಸಕಲೈಶ್ವರ್ಯಗಳನ್ನೂ ಗಳಿಸಿ ನಲಿಯೋಣ (Sakalaishvaryagalannu Galisi Naliyona)

ಲೇಖಕರು: ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಇಂದಿನ ಪರಿಕಲ್ಪನೆ

ಮಾನವ ಮಾತ್ರರೆಲ್ಲರನ್ನೂ ಆಕರ್ಷಿಸಿ ಆನಂದವೀಯಬಲ್ಲದು ಐಶ್ವರ್ಯ. ಧನ-ಕನಕ, ಸುಖ-ಸೌಲಭ್ಯದ ಸಾಮಗ್ರಿಗಳು ಎಲ್ಲವೂ ಐಶ್ವರ್ಯವೆಂಬುದಾಗಿ ಪರಿಗಣಿಸಲ್ಪಡುತ್ತವೆ. ಇವುಗಳನ್ನು ಗಳಿಸಲು ಸಾಧ್ಯವಾದಷ್ಟು ಪ್ರಯತ್ನವೆಸಗುವುದೇ ನಮ್ಮೆಲ್ಲರ ಗುರಿಯೂ ಆಗಿದೆ. ದುಡಿಮೆಯ ಜೊತೆಗೆ ಐಶ್ವರ್ಯಕ್ಕೆ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿ ಆಕೆಯ ಪ್ರಸನ್ನತೆಯನ್ನು ಪಡೆದು ಸಂಪತ್ಸಮೃದ್ಧಿಯನ್ನು ಗಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಅಷ್ಟೇ ಅಲ್ಲದೆ ಇಂತಹ ಐಶ್ವರ್ಯದಿಂದ ವಂಚಿತನಾದವನಲ್ಲಿ "ಅಯ್ಯೋ ಪಾಪ, ಲಕ್ಷ್ಮೀಕಟಾಕ್ಷವಿಲ್ಲದವನು" ಎಂದು ಮರುಕವನ್ನೂ ತೋರುತ್ತೇವೆ. ಐಶ್ವರ್ಯಗಳಿಗೆಲ್ಲ ಒಡತಿಯಾದ ಲಕ್ಷ್ಮಿದೇವಿಯನ್ನು ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ವೀರಲಕ್ಷ್ಮಿ, ಸಂತಾನಲಕ್ಷ್ಮಿ, ಗಜಲಕ್ಷ್ಮಿ, ಮಹಾಲಕ್ಷ್ಮಿ ಎಂಬುದಾಗಿ ಅಷ್ಟಲಕ್ಷ್ಮಿಯರ ರೂಪದಲ್ಲಿ ಪೂಜಿಸುವುದುಂಟು. ಇಲ್ಲಿ ವಿದ್ಯೆ, ಸಂತಾನ ಇತ್ಯಾದಿ ಎಲ್ಲವೂ ಐಶ್ವರ್ಯವೆಂಬುದಾಗಿಯೇ ಭಾವಿಸಲ್ಪಡುತ್ತವೆ. ಆದರೆ ಇವಿಷ್ಟು ಮಾತ್ರವೇ ಐಶ್ವರ್ಯವಲ್ಲ ಎಂಬುದು ಆ ಪದವನ್ನು ತಂದವರ ಆಶಯವನ್ನು ತಿಳಿದಾಗ ಅರಿವಾಗುವುದು.

'ಐಶ್ವರ್ಯ' ಪದದ ಅರ್ಥ:

ಐಶ್ವರ್ಯ ಎಂಬ ಪದವನ್ನು ತಂದ ಭಾರತೀಯಮಹರ್ಷಿಗಳ ದೃಷ್ಟಿಯಲ್ಲಿ ಈ ಪದವು 'ಈಶ್ವರಭಾವ-ಈಶ್ವರ ಸಂಬಂಧವುಳ್ಳದ್ದು' ಎಂಬರ್ಥವನ್ನು ಹೊಂದಿದೆ. ಈಶ್ವರನಿಂದ ಬಂದದ್ದು ಐಶ್ವರ್ಯ. ವಿಶ್ವವೆಲ್ಲವೂ ಈಶ್ವರನಿಂದಲೇ ವಿಕಸಿತವಾಗಿದೆಯಾದ್ದರಿಂದ ಸೃಷ್ಟಿಯ ಎಲ್ಲ ತರಹದ ಸಿರಿ-ಸಂಪತ್ತುಗಳೂ ಐಶ್ವರ್ಯವೇ ಆಗಿವೆ. ಅವುಗಳಲ್ಲಿ ಭೋಗಕ್ಕೆ ಸಂಬಂಧಿಸಿದವುಗಳನ್ನು ಮಾತ್ರವೇ ನಾವು ಐಶ್ವರ್ಯವೆಂಬ ಸಂಕುಚಿತ ಭಾವನೆಯಿಂದ ನೋಡುತ್ತೇವೆ. ಸೃಷ್ಟಿಯಲ್ಲಿ ಭೋಗದ ಜೊತೆಯಲ್ಲಿ ಯೋಗಭೂಮಿಕೆಯೆಂಬುದೂ ಉಂಟೆಂಬ ಸತ್ಯವನ್ನು ಋಷಿದೃಷ್ಟಿಯು ನೆನಪಿಸುತ್ತಿದೆ.

ಯೋಗೈಶ್ವರ್ಯ - ಆತ್ಮೈಶ್ವರ್ಯ:

ಯೋಗಮಾರ್ಗದಲ್ಲಿ ಸಾಗಿ ಅದರ ತುಟ್ಟತುದಿಯ ಸ್ಥಾನವಾದ ಸಮಾಧಿಯಲ್ಲಿ ಸಿಗುವ ಆನಂದವು ಭೌತಿಕವಾದ ಆನಂದದ ಪರಮಾವಧಿಯೇನುಂಟೋ ಅದಕ್ಕಿಂತಲೂ ಕೋಟಿಕೋಟಿ ಪಾಲು ಹೆಚ್ಚಿನದು ಎಂಬುದು ಮಹರ್ಷಿಗಳ ಅನುಭವವಾಣಿ. ಇದನ್ನೇ 'ಯೋಗೈಶ್ವರ್ಯ' ಎಂಬುದಾಗಿ ಕರೆದಿದ್ದಾರೆ. ಈ ಐಶ್ವರ್ಯವನ್ನು ಪಡೆದು ಅದರ ಅನುಭವದ ಆನಂದವನ್ನು ಸವಿದವರು ಲೋಕಜೀವನದಲ್ಲಿ ತೊಡಗಿದಾಗ ಅಲ್ಲಿಯ ಆನಂದ-ತಂಪುಗಳು ಹೊರಜೀವನದಲ್ಲೂ ಹರಿಯುವುವು. ಆ ಹರಿವೆಯೇ ಬಾಳನ್ನು ಶಾಂತಿಸಮೃದ್ಧಿ-ಸಂತೃಪ್ತಿಗಳಿಂದ ತುಂಬುವುದೆಂಬುದು ಜ್ಞಾನಿಗಳು ಕಂಡರುಹಿದ ಸರ್ವಕಾಲೀನ ಸತ್ಯ.

ಯೋಗೈಶ್ವರ್ಯ-ಭೋಗೈಶ್ವರ್ಯಗಳ ಮೇಳನ:

ಮನಸ್ಸು ಭೌತಿಕಸುಖ ಸಂಪತ್ತುಗಳನ್ನು ಮಾತ್ರವೇ ಹಿಂಬಾಲಿಸಿ ಹೊರಟರೆ ಅವು ಎಷ್ಟು ದೊರೆತರೂ ಮತ್ತಷ್ಟು ಬೇಕೆಂಬ ಬಯಕೆ(ರಾಗ), ವೇಗಗಳಿಗೆ ನಮ್ಮನ್ನು ತಳ್ಳುತ್ತವೆ.  ಕಾಮ-ಕ್ರೋಧಾದಿಗಳಿಗೆ ತುತ್ತಾಗಿಸಿ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುತ್ತವೆ. ಕ್ರಮೇಣ ನಮ್ಮ ಜೀವನವನ್ನು ಸನ್ಮಾರ್ಗದಿಂದ ಜಾರಿಸಲೂ ಬಹುದು. ಈ ಜಾರುವಿಕೆಯಿಂದ ತಪ್ಪಿಸುವ ಉಪಾಯವನ್ನು ಅರಿಯುವುದು ಅತ್ಯಾವಶ್ಯಕವೇ ಆಗಿದೆ.

"ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂಬ ಆರ್ಷವಾಣಿಯಂತೆ ಭೌತಿಕಜೀವನಕ್ಕೇ ಅಂಟಿಕೊಳ್ಳುವ ಪ್ರವೃತ್ತಿ(ಬಂಧ), ಭಗವಂತನನ್ನು  ಪಡೆಯುವುದು(ಮೋಕ್ಷ) ಇವೆರಡಕ್ಕೂ ಮನಸ್ಸೇ ಕಾರಣವಾದ್ದರಿಂದ ಸನ್ಮಾರ್ಗದಲ್ಲಿ ನಡೆಯಲಿಚ್ಚಿಸುವವರಿಗೆ ಮನೋನಿಯಂತ್ರಣವು ಸಾಧಿಸಲೇಬೇಕಾದ ಒಂದು ಗುರಿ. ಇದರಿಂದಾಗಿ ಪುರಾಷಾರ್ಥಮಯವಾದ ಜೀವನವನ್ನು ನಡೆಸಿ ಇಹ-ಪರಗಳಲ್ಲಿ ಆನಂದವನ್ನು ಪಡೆಯಬಹುದು.

ಅಂದಮಾತ್ರಕ್ಕೆ ಲೌಕಿಕವಾದ ಭೋಗೈಶ್ವರ್ಯವು ಬೇಡವೆಂಬ ಅಭಿಪ್ರಾಯವನ್ನು ಇಲ್ಲಿ ಸೂಚಿಸುತ್ತಿಲ್ಲ. ಋಷಿದೃಷ್ಟಿಯು ಅರ್ಥ-ಕಾಮಗಳಿಂದ ವಂಚಿತರಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಅವುಗಳನ್ನು ಧರ್ಮ-ಮೋಕ್ಷಗಳ ಹದ್ದುಬಸ್ತಿನಲ್ಲಿ ಗಳಿಸಿ ಸೇವಿಸಬೇಕೆನ್ನುವುದೇ ಅವರ ಆಶಯವಾಗಿತ್ತು. ಸಂತೆಯ ವ್ಯಾಪಾರಕ್ಕೆ ಬಂದ ಮೇಲೆ ವ್ಯಾಪಾರದಲ್ಲಿ ನಿರುತ್ಸಾಹವನ್ನು ತೋರಬೇಕಿಲ್ಲ. ನಮಗೆ ಉಪಯುಕ್ತವಾದ, ಪ್ರಿಯವಾದ, ಒಳ್ಳೆಯ ಪದಾರ್ಥಗಳನ್ನು ಆಯ್ಕೆ ಮಾಡಿ ಖರೀದಿಸೋಣ. ಆದರೆ ವ್ಯಾಪಾರದಲ್ಲಿಯೇ ನಿರತರಾಗಿ, ಮನೆಗೆ ಹಿಂದಿರುಗಬೇಕೆನ್ನುವುದನ್ನೇ ಮರೆತು ಬಿಡಬಾರದು ಎಂಬ ಜ್ಞಾನಿಗಳ ಎಚ್ಚರಿಕೆಯ ಮಾತನ್ನು ಅವಶ್ಯವಾಗಿ ನೆನಪಿಡಲೇ ಬೇಕು. ಅರ್ಥ ಸಂಪಾದನೆಯು ಜೀವನದಲ್ಲಿ ಅತಿಮುಖ್ಯ ಪಾತ್ರವನ್ನು ವಹಿಸುವುದೆಂಬುದು ನಿಸ್ಸಂಶಯ.  ಆದರೆ ಅದನ್ನು ಹೇಗೆ, ಎಷ್ಟು ಸಂಪಾದಿಸಬೇಕು? ಸಂಪಾದಿಸಿದ ಅರ್ಥದ ವಿನಿಯೋಗ ಹೇಗಾಗಬೇಕು ಎಂಬಂಶಗಳ ಕಡೆಗೆ ಗಮನ ಹರಿಸಬೇಕಾಗಿದೆ. ಶ್ರೀರಂಗಮಹಾಗುರುಗಳ ವಾಣಿಯೊಂದು ಇಲ್ಲಿ ಉಲ್ಲೇಖಾರ್ಹವಾಗಿದೆ – "ಅರ್ಥವು ಅನರ್ಥವಾಗದೆ ಪರಮಾರ್ಥದಲ್ಲಿ ನಿಂತು ಸಾರ್ಥಕವಾಗುವ ಪಕ್ಷೇ ಅದನ್ನು ಕ್ಷಣಕ್ಷಣದಲ್ಲಿಯೂ ಸಂಪಾದಿಸಲು ನಾವು ಉದ್ಯುಕ್ತರಾಗುತ್ತೇವೆ "

ಧರ್ಮಮಾರ್ಗದಲ್ಲಿ ಚಲಿಸಿ, ನ್ಯಾಯಮಾರ್ಗದಲ್ಲಿ ಗಳಿಸಿದ್ದನ್ನು ಭೋಗಿಸಿ ತೃಪ್ತಿಯಾಗಿರುವುದೊಂದೇ ಜೀವನದಲ್ಲಿ ನೆಮ್ಮದಿಗೆ ದಾರಿ. 'ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ' ಎಂಬ ಶಂಕರಭಗವತ್ಪಾದರ ವಾಣಿಯು ಸ್ಮರಣೀಯವಾಗಿದೆ. ಇಂತಹ ಸಂತೃಪ್ತಿಯ ಮನೋಭಾವವೇ ಯೋಗೈಶ್ವರ್ಯಕ್ಕೆ ಅದ್ಭುತಸಾಧನವು. ಯೋಗ-ಭೋಗಗಳೆರಡಕ್ಕೂ ಆಯತನವಾದದ್ದು ಮಾನವಶರೀರ ಎಂಬ ಸತ್ಯವನ್ನು ಮನಗಂಡವರು ಭಾರತೀಯಮಹರ್ಷಿಗಳು. ಭೋಗೈಶ್ವರ್ಯದ ಸಂಪಾದನೆಯು ಯೋಗೈಶ್ವರ್ಯದ ಜೊತೆಗೂಡಿ ಬಂದಾಗ ಲೋಕಕಲ್ಯಾಣ-ಆತ್ಮಕಲ್ಯಾಣಗಳು ಎರಡರ ಪ್ರಾಪ್ತಿಯೂ ಸುನಿಶ್ಚಿತ ಎಂಬುದನ್ನು ಸುಸ್ಪಷ್ಟವಾಗಿ ಸಾರಿದ್ದಾರೆ.

ಐಶ್ವರ್ಯಕ್ಕೆ ಅಧಿದೇವತೆ:

ಧನ-ಧಾನ್ಯ ಸಮೃದ್ಧಿಗೆ ಮಹಾಲಕ್ಷ್ಮಿಯೇ ಅಧಿದೇವತೆ. ಆಕೆಯ ಪ್ರಸನ್ನತೆಯನ್ನು ಗಳಿಸುವುದು ಸಂಪತ್ಸಮೃದ್ಧಿಗೆ ಸುಮಾರ್ಗ. ಅಂತೆಯೇ ಯೋಗೈಶ್ವರ್ಯಕ್ಕೂ ಆಕೆಯ ಪ್ರಸನ್ನತೆಯೇ ಸಾಧನವಾಗುತ್ತದೆ. ದೇವಾಲಯಗಳಲ್ಲಿಯೂ ದೇವರ ದರ್ಶನಕ್ಕೆ ಮೊದಲು ಅಮ್ಮನವರ ದರ್ಶನವನ್ನು ಮಾಡುವ ರೂಢಿ ಇದೆ. ಕಾರಣ, ಆಕೆಯ ಪ್ರಸನ್ನತೆಯನ್ನು ಪಡೆದಾಗ ನಮ್ಮ ಪ್ರಕೃತಿಯು ದೇವನ ದರ್ಶನಕ್ಕೆ, ಅದರಿಂದಾಗಬೇಕಾಗಿರುವ ಆನಂದಾನುಭವಕ್ಕೆ ಅಣಿಯಾಗುತ್ತದೆ.

ಜೀವನದಲ್ಲಿ ಶಾಂತಿ-ನೆಮ್ಮದಿಗಳನ್ನು ಪಡೆಯಲು ಧನಲಕ್ಷ್ಮಿಯಲ್ಲಿ ಆತ್ಮಧನವನ್ನು ಬೇಡೋಣ, ವಿದ್ಯಾಲಕ್ಷ್ಮಿಯಲ್ಲಿ ಆತ್ಮವಿದ್ಯೆಯನ್ನು ಬಯಸಿ ಪ್ರಾರ್ಥಿಸೋಣ, ಧೈರ್ಯಲಕ್ಷ್ಮಿಯಲ್ಲಿ ಧರ್ಮಮಾರ್ಗದಲ್ಲಿಯೇ ಸಾಗಲು ಬೇಕಾದ ಧೃತಿಯನ್ನು ಕೋರೋಣ, ವಿಜಯಲಕ್ಷ್ಮಿಯಲ್ಲಿ ಆತ್ಮಯಾತ್ರೆಯ ವಿಜಯವನ್ನೂ, ಸಂತಾನಲಕ್ಷ್ಮಿಯಲ್ಲಿ ಜ್ಞಾನಸಂತಾನವನ್ನೂ ಕೋರಿ ಪ್ರಾರ್ಥಿಸೋಣ. ಇವಿಷ್ಟರ ಜೊತೆಜೊತೆಗೆ  ಧರ್ಮಮಯ ಜೀವನಕ್ಕೆ ಪೋಷಕವಾಗುವಂತೆ ಧನ-ಧಾನ್ಯ ಮುಂತಾದ ಲೌಕಿಕಸಂಪತ್ತುಗಳನ್ನೂ ಆಕೆಯಲ್ಲಿ ಬೇಡುವುದು ಉಚಿತವೇ ಆಗಿದೆ. ಆದ್ದರಿಂದ ಯೋಗ-ಭೋಗ ಐಶ್ವರ್ಯಗಳನ್ನು ಜಗನ್ಮಾತೆಯ ಅನುಗ್ರಹದಿಂದ ಪಡೆದು ನಲಿದು ಸುಖಿಸೋಣ.

ಸೂಚನೆ:  19/12/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.