Tuesday, July 28, 2020

ಭಾರತದ ವಿಶೇಷ ಈ ಕೋಗಿಲೆ (Bharatada Vishesha e Kogile)

ಲೇಖಕರು: ಪ್ರಮೋದ್  ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)

  
ಒಂದು ದಟ್ಟವಾದ ಕಾಡಿನಲ್ಲಿ ಒಂದು ವಿಶಾಲವಾದ ಮರವಿದೆ.  ಆ ಮರವು ಅನೇಕ ಶಾಖೋಪಶಾಖೆಗಳಿಂದ ಕೂಡಿದೆ. ಹಾಗೂ ಆ ಶಾಖೆಗಳು ಫಲ ಪುಷ್ಪ ಭರಿತವಾಗಿವೆ. ಫಲಗಳು ಕೂಡ ಅತ್ಯಂತ ಸಿಹಿಯಾಗಿವೆ. ಅಂತಹ ಒಂದು ಕಾಡಿನಲ್ಲಿ, ಕೋಗಿಲೆಯೊಂದು ಬುಡದಿಂದ ಶಾಖೆಗೆ ಹಾರಿ, ಒಂದು ಶಾಖೆಯ ಮೇಲೆ ಕುಳಿತು, ಅದರಲ್ಲಿರುವ ರಸವತ್ತಾದ  ಫಲವನ್ನು ಆಸ್ವಾದನೆ ಮಾಡ ತೊಡಗಿತು. ಫಲದ ರಸ ಚಪ್ಪರಿಸುತ್ತಿದ್ದಂತೆ ತೃಪ್ತಿಯಾಗಿ ಸುಮಧುರವಾಗಿ ಕುಹೂ ಕುಹೂ ಎಂದು ಹಾಡುತ್ತಿದೆ. ಆ ಮರವು ಅತ್ಯಂತ ಪ್ರಾಚೀನವಾಗಿದ್ದರೂ  ನಿತ್ಯನೂತನವಾಗಿದೆ. ಆ ಕೋಗಿಲೆಯ ಗಾನವು ಭಾರತ ದೇಶದಲ್ಲಿ ಅಲ್ಲದೆ ಇಡೀ ವಿಶ್ವದಲ್ಲಿ ಪ್ರಖ್ಯಾತವಾಗಿದೆ. ಯಾರು ಈ ಕೋಗಿಲೆ ಎಂದು ತಿಳಿಯಲು ಈ ಶ್ಲೋಕವನ್ನು ಗಮನಿಸೋಣ.

ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ ।
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ।।

ಈ ಕೋಗಿಲೆಯು ಆದಿಕವಿಯಾದ ವಾಲ್ಮೀಕಿ ಮಹರ್ಷಿಗಳು. ಕೋಗಿಲೆಯ ಹಾಡೇ ರಾಮಾಯಣ. ನಮ್ಮ ಶರೀರವೇ ಈ ಮರ. ಇದು ಸಾಧಾರಣ ಮರವಲ್ಲ, ಅಮರವಾದ ಮರ. ನಮೆಲ್ಲರ ಶಿರದಲ್ಲಿ ಬೆಳಗುವ ಪರಂಜ್ಯೋತಿಯೇ ಈ ಮರದ ಬೇರು. ಆ ಪರಂಜ್ಯೋತಿಯಿಂದಲೇ  ಎಲ್ಲ ವಿದ್ಯೆಗಳೂ ಕಲೆಗಳೂ ವಿಕಾಸವಾಗಿವೆ. ಆ ವಿದ್ಯೆ ಹಾಗೂ ಕಲೆಗಳೇ ಈ ಮರದ ನಾನಾ ಶಾಖೆಗಳು. ಅಂತಹ  ಒಂದು ಶಾಖೆ ಕಾವ್ಯ. ಶ್ರೀಮದ್ ರಾಮಾಯಣವು ಅಂತಹ ಕಾವ್ಯವೆಂಬ ಶಾಖೆಯಲ್ಲಿ ಬಿಟ್ಟಿರುವಂತಹ ಮೊಟ್ಟಮೊದಲನೆಯ ಫಲ. ಅತ್ಯಂತ ಸಿಹಿಯಾದ ಫಲ. ಆ ಕೋಗಿಲೆ ಯಾವುದು ಎಂದರೆ, ಶ್ರೀಮದ್ ವಾಲ್ಮೀಕಿ ರಾಮಾಯಣವನ್ನು ರಚಿಸಿದಂತಹ ವಾಲ್ಮೀಕಿ ಮಹರ್ಷಿಗಳು. ಆ ಕೋಗಿಲೆಯು ಬುಡದಿಂದ ಶಾಖೆಯನ್ನು ಹತ್ತಿತು ಎಂದರೇನು? ವಾಲ್ಮೀಕಿ ಮಹರ್ಷಿಗಳು ತಮ್ಮ ದಿವ್ಯವಾದ ತಪಸ್ಸಿನಿಂದ ಅಂತರಂಗ ಪ್ರಪಂಚದಲ್ಲಿ ಹಾರಿ, ಆತ್ಮಾರಾಮರಾಗಿ ಶಿಖರದಲ್ಲಿ ಬೆಳಕನ್ನು ಕಂಡರು. ಆ ಬೆಳಕೇ ಮೈವೆತ್ತು  ಶ್ರೀರಾಮನಾಗಿ ತಮ್ಮ ಹೃದಯದಲ್ಲಿ  ಕಂಡುಕೊಂಡರು. ಈ ರಾಮರಸವೆಂಬ ಫಲವನ್ನು ಆಸ್ವಾದಿಸುತ್ತಿದ್ದಂತೆ ರಾಮಾಯಣವೆಂಬ ಮಹಾಕಾವ್ಯವು ಸಹಜವಾಗಿ ಹೊರಬಂದಿತು. ಆದ್ದರಿಂದ ರಾಮಾಯಣವು ಕೇವಲ ಶ್ರೀರಾಮ, ಸೀತೆ ರಾವಣ ಇವರ ಕಾಲ್ಪನಿಕವಾದ ಒಂದು ಕಥೆ ಅಲ್ಲ; ವೇದ  ಉಪನಿಷತ್ತುಗಳು ಸೃಷ್ಟಿಯ ಮೂಲದಲ್ಲಿ ಬೆಳಗುವ ಯಾವ ಪರಂಜ್ಯೋತಿ ತತ್ತ್ವವನ್ನು ತಿಳಿಸುತ್ತದೆಯೋ, ಅದೇ  ತತ್ತ್ವ  ಹಾಗೂ ಅನುಭವವನ್ನು ರಾಮಾಯಣವೂ ತಿಳಿಸುತ್ತದೆ.

ಮಾವಿನಹಣ್ಣನ್ನು ತಿಂದವನಿಗೇ ಮಾವಿನ ಅನುಭವ. ಅಂತೆಯೇ ರಾಮಾಯಣ ಮಹಾಕಾವ್ಯ, ಶ್ರೀರಾಮನ ವ್ಯಕ್ತಿತ್ವ ಧರ್ಮಗಳನ್ನು ಆಸ್ವಾದಿಸುವನು ಉಪನಿಷತ್ತುಗಳು ಹೇಳುವ  ಬ್ರಹ್ಮಾನುಭವವನ್ನೇ ಪಡೆಯುತ್ತಾನೆ. ರಾಮಾಯಣದ ಕಥೆಯ ಗುರುಮುಖೇನ ಅನುಸಂಧಾನವು ಯೋಗಾನುಭವಕ್ಕೆ ಸುಲಭವಾದ ಮಾರ್ಗವಾಗಿದೆ. ಮಹಾನಾಯಕನಾದ  ಶ್ರೀ ರಾಮಚಂದ್ರ ಪ್ರಭುವು 'ಸ್ಥೂಲ ದೃಷ್ಟಿಗೆ ನರ, ಸೂಕ್ಷ್ಮ ದೃಷ್ಟಿಗೆ ದೇವತೆ ಪರಾ ದೃಷ್ಟಿಗೆ ಪರಂಜ್ಯೋತಿ' ಎಂದು  ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ವಾಲ್ಮೀಕಿಎಂಬ  ಕೋಗಿಲೆಯನ್ನು ಸ್ಮರಿಸಿಕೊಂಡು ನಾವೂ ರಾಮಾಯಣವೆಂಬ ಮಹಾಫಲವನ್ನು ಆಸ್ವಾದಿಸುವಂತೆ ಭಗವಂತನನ್ನು ಪ್ರಾರ್ಥಿಸೋಣ.

ಸೂಚನೆ: 27/07/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.