Wednesday, July 8, 2020

ಅರ್ಥವರಿಯದೆ ಅರಚುವ ಹಕ್ಕಿಗಳು

ಲೇಖಕರು: ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)


ಸಾಧು ಒಬ್ಬ ನಿತ್ಯವೂ ಸ್ವಲ್ಪಸಮಯ ವನಪ್ರದೇಶದಲ್ಲಿಯ ಪಕ್ಷಿಗಳ ಚಿಲಿಪಿಲಿನಾದವನ್ನು ಆಲಿಸುತ್ತಲಿದ್ದ. ಒಮ್ಮೆ ಬೇಡನೊಬ್ಬ ಬಲೆಹರಡಿ ಹಕ್ಕಿಗಳನ್ನು ಹಿಡಿದೊಯ್ದುದ್ದನ್ನು ನೋಡಿದ. ಆತ ಮರುದಿನವೂ ಬೇಟೆಗೆ ಬರುವನೆಂಬುದನ್ನರಿತ ಸಾಧುವು ಉಳಿದಿರುವ ಹಕ್ಕಿಗಳನ್ನಾದರೂ ಎಚ್ಚರಿಸಿ ಕಾಪಾಡೋಣವೆಂದು ಹಕ್ಕಿಗಳನ್ನು ಕುರಿತು "ನಾಳೆಯೂ ಬೇಡನು ಬಲೆಯನ್ನು ಹರಡಿ ನಿಮ್ಮನ್ನು ಹಿಡಿಯುವನು. ಎಚ್ಚರಿಕೆಯಿಂದಿರಿ" ಎಂದ. ತನ್ನ ಮಾತುಗಳು ಅವುಗಳನ್ನು ಎಚ್ಚರಗೊಳಿಸಿವೆಯೆಂಬುದನ್ನು ಊರ್ಜಿತಪಡಿಸಿಕೊಳ್ಳಲು ಅವುಗಳನ್ನು ಕೇಳಿದ  "ನಾನು  ಏನು ಹೇಳಿದೆ ಹೇಳಿ." ಹಕ್ಕಿಗಳೆಲ್ಲವೂ ಒಕ್ಕೊರಲಿಂದ ನುಡಿದವು "ಬೇಡ ಬರುತ್ತಾನೆ ಬಲೆಹರಡಲು, ಎಚ್ಚರಿಕೆ, ಎಚ್ಚರಿಕೆ".  ಸಾಧುವು ತೃಪ್ತನಾಗಿ ಹಿಂದಿರುಗಿದ.

ಮರುದಿನ ಬೇಡನು ಬರುತ್ತಿದ್ದಂತೆಯೇ ಹಕ್ಕಿಗಳು "ಬೇಡ ಬರುತ್ತಾನೆ ಬಲೆಹರಡಲು. ಎಚ್ಚರಿಕೆ, ಎಚ್ಚರಿಕೆ" ಎಂದು  ಕೂಗಿಕೊಂಡವು. ನೆನ್ನೆಯಂತೆಯೇ ಇಂದೂ ಹಕ್ಕಿಗಳು ಸಿಗುತ್ತವೆಂಬ ನಿರೀಕ್ಷೆಯಲ್ಲಿದ್ದ ಬೇಡನು ಇದರಿಂದ ನಿರಾಶನಾಗಿಯೇ ಬಲೆಯನ್ನು ಹರಡಿ ದಾನ್ಯದ ಕಣಗಳನ್ನು ಎರಚಿ ಅಲ್ಲೇ ವಿಶ್ರಮಿಸಿದ. ನಿದ್ರೆಯಿಂದ ಎಚ್ಚೆತ್ತು ನೋಡಿದವನಿಗೆ ಕಾದಿತ್ತು ಅಚ್ಚರಿ. ಎಲ್ಲ ಹಕ್ಕಿಗಳೂ ಬಲೆಯಮೇಲೆಯೇ ಕುಳಿತು ಕಾಳುಗಳನ್ನು ತಿನ್ನುತ್ತಾ "ಬೇಡ ಬರುತ್ತಾನೆ ಎಚ್ಚರಿಕೆ" ಎಂದು ಅರಚುತ್ತಲಿದ್ದವು! ಬೇಡನು ತಡೆಯಲಾರದ ನಗುವಿನೊಡನೆ ಹಕ್ಕಿಗಳನ್ನು ಹೊತ್ತುಕೊಂಡು ಮನೆಗೆ ತೆರಳಿದ. ಹಕ್ಕಿಗಳು ಪಾರಾಗಿರುತ್ತವೆಂಬ ನಿಶ್ಚಯದಿಂದ ಬಂದ ಸಾಧುವು ಕಂಡದ್ದು-ಬೇಡನು ಹೊತ್ತುಕೊಂಡು ಹೋಗುತ್ತಿದ್ದಂತೆ ಹಕ್ಕಿಗಳು ಕೂಗುತ್ತಿದ್ದವು "ಬೇಡ ಬರುತ್ತಾನೆ ಎಚ್ಚರಿಕೆ"! ಮಾತನಾಡಬಲ್ಲ ಹಕ್ಕಿಗಳಿಗೆ ಮಾತನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ(ಸಂಸ್ಕಾರ)ವಿರಲಿಲ್ಲವಷ್ಟೆ!

ಹಿಂದೊಮ್ಮೆ ಎಲ್ಲೋಕೇಳಿದ ಕಥೆಯಾದರೂ ನಮ್ಮ ಕಥೆಯೂ ಹೀಗಾಗುವುದುಂಟು. ಜ್ಞಾನಿಗಳು ಹೃದಯಗುಹೆಯಲ್ಲನುಭವಿಸಿದ ಆತ್ಮದರ್ಶನ, ತತ್ಪರಿಣಾಮವಾದ ಪರಮಾನಂದವು ಭಾಷಾ(ಮಂತ್ರ-ಸ್ತೋತ್ರ-ಸಾಹಿತ್ಯಗಳ) ರೂಪದಲ್ಲಿ ಹೊರಹೊಮ್ಮಿರುವುದುಂಟು. ಶ್ರೀರಂಗಮಹಾಗುರುಗಳ ಆಶಯವೆಂದರೆ ಪದಾರ್ಥದ ಅನುಭವದಿಂದ ಪದವೂ, ಭಾವದಿಂದ ಭಾಷೆಯೂ ಹೊರಡುತ್ತವೆ. ಕೇಳುವವರಿಗೆ ತಕ್ಕ ಸಂಸ್ಕಾರವಿದ್ದಾಗ ಪದವು- ಪದಾರ್ಥದೆಡೆಗೂ, ಭಾಷೆಯು-ಭಾವದೆಡೆಗೂ ಒಯ್ಯುತ್ತವೆ. ಪಂಚಭಕ್ಷ್ಯ ಪರಮಾನ್ನಗಳು ಎಲೆಯ ಮೇಲಿದ್ದರೂ ಎಲೆಗೆ ತಮ್ಮ ಸವಿಯನ್ನು ಉಣಿಸಲಾರವಷ್ಟೇ! ಅಂತೆಯೇ ಸಂಸ್ಕಾರವಿಲ್ಲದವರ ನಾಲಿಗೆಯಲ್ಲಾಗುವ ಆತ್ಮಭಾವಭರಿತವಾಕ್ಯ-ಚರ್ವಣೆಯು ಜೀವಿಗೆ ಆತ್ಮಭಾವದ ಸವಿ-ಸಿಹಿಗಳನ್ನು ಉಣಿಸಲಾರದು. ಆದರೆ ಶ್ರದ್ಧಾ-ಭಕ್ತಿಯಿಂದ ಪ್ರಯತ್ನಿಸಿದಾಗ ಕಾಲಕ್ರಮದಲ್ಲಿ ಸಂಸ್ಕಾರವಂತರಾಗಬಹುದು. ನಂತರ ಭಾವವರಿತು ಗುರೂಪದಿಷ್ಟವಾಗಿ ನುಡಿದಾಗ ಋಷಿಪ್ರೋಕ್ತವಾದ ಮಂತ್ರ-ಸ್ತೋತ್ರಗಳು ಅವರನ್ನು ಆತ್ಮಭಾವದೆಡೆಗೇ ಒಯ್ಯುವುದು ನಿಶ್ಚಿತ.  

ಸೂಚನೆ: 8/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.