Sunday, July 12, 2020

ಆರ್ಯಸಂಸ್ಕೃತಿ ದರ್ಶನ - 1 (Arya Samskruti Darshana - 1)

ಸತ್ಯ ಒಂದು ಪದ ವಿವೇಚನೆ

 

 
" ಸತ್ಯ" ಎನ್ನುವ ಪದದ ಬಳಕೆ ಅಪೂರ್ವವೇನೂ ಅಲ್ಲ. ನಿಜ, ಇದ್ದುದನ್ನು ಇದ್ದಂತೆ ಹೇಳುವುದು ಎಂಬ ಅರ್ಥದಲ್ಲಿ ಇದನ್ನು ಬಳಸಲಾಗುತ್ತಿದೆ. ಆಡಿದ ಮಾತನ್ನು ಬದಲಾಯಿಸದಿರುವುದು, ಸತ್ಯಸಂಧತೆಯ ಕುರುಹೆಂಬುದಾಗಿ ಪರಿಗಣಿಸಲ್ಪಡುತ್ತಿದೆ. "ಸತ್ಯವೇ ದೇವರು, ಅದನ್ನು ಬಿಟ್ಟರೆ ಬೇರೆ ದೇವರಿಲ್ಲ" ಎಂಬ ಮಾತನ್ನೂ ಹೆಗ್ಗಳಿಕೆಗಾಗಿ ಬಳಸುವ ರೂಢಿಯೂ ಉಂಟು. 

"ಸತ್ಯ"- ಎಂಬ ಪದವನ್ನು ಮೊದಲು ಬಳಕೆಯಲ್ಲಿ ಯಾವ ಅರ್ಥದಲ್ಲಿ ಬಳಸಿದರು? ಅದರ ಬಗ್ಗೆ ಇರುವ ವಿವರವೇನು? ಇಂದು ನಾವು ಬಳಸುತ್ತಿರುವ ಅರ್ಥಕ್ಕೂ ಮೂಲದ ಅರ್ಥಕ್ಕೂ ಇರುವ ಸಾಮ್ಯ- ವೈಷಮ್ಯಗಳೇನು?  ಎನ್ನುವುದು ವಿಚಾರಾರ್ಹವಾಗಿದೆ. ಆ ಪದದೊಡನೆ ಸೇರಿರುವ ಭಾವಗಳು ಎಷ್ಟು ಗಹನವಾದವು  ಎಂಬುದನ್ನು ಪರಿಚಯ ಮಾಡಿಕೊಳ್ಳುವುದೂ ನ್ಯಾಯವಾದ ಕೆಲಸ.

"ಸತ್" ಎಂಬ ಧಾತುವಿನಿಂದ ಹುಟ್ಟಿದ ಪದ ಸತ್ಯವೆಂಬುದು. ಅದರ ಮೂಲಾರ್ಥ "ಇರುವುದು" ಎಂಬುದೇ ಆಗಿದೆ. ಯಾವುದು ಇದೆಯೋ ಅದು "ಸತ್" ಎಂಬುದು ಅದರ ಅರ್ಥವಾಯಿತು. ಏನಿದೆಯೋ ಅದು ಸತ್ಯವೆಂದರೆ ವಿಶ್ವದಲ್ಲಿ ಇರುವುದೆಲ್ಲವೂ ಸತ್ಯವೇ ಆಯಿತಲ್ಲವೇ? ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಹೌದು, ವಿಶ್ವದಲ್ಲಿ ಇರುವುದೆಲ್ಲವೂ ಸತ್ಯವೇ ಸರಿ. ಆದರೆ ಯಾವ ವಸ್ತು ಇರುವುದೊಂದನ್ನೇ ಗುರುತಾಗಿದೆಯೋ "ಇಲ್ಲ" ಎಂಬ ವ್ಯವಹಾರ ಯಾವ ವಿಷಯದಲ್ಲಿ ಹುಟ್ಟುವುದೇ ಇಲ್ಲವೋ ಅಂತಹ ವಸ್ತುವನ್ನು ಸತ್ಯ ಎಂದು ಕರೆದರೆ ಆಗ "ಸತ್ಯ" ಎನ್ನುವ ಪದದ ಅರ್ಥವೇನು? ಎಂದು ಹುಡುಕಬೇಕಾಗುತ್ತದೆ. ಏಕೆಂದರೆ ವಿಶ್ವದಲ್ಲಿ ನಾವು ಕಾಣುವ ವಸ್ತುಗಳೆಲ್ಲವೂ ಕಂಡು-ಮರೆಯಾಗುವುವೇ ಸರಿ. ಇಲ್ಲ ಎಂಬ ವ್ಯವಹಾರ ಅವುಗಳಲ್ಲುಂಟು. ಈಗ ಬಾಳುತ್ತಿರುವ ವ್ಯಕ್ತಿಗಳು 500 ವರ್ಷಗಳ ಹಿಂದೆ ಇರಲಿಲ್ಲ, ಅಥವಾ ಇನ್ನೂ 500 ವರ್ಷಗಳ ಬಳಿಕ ಇರುವುದಿಲ್ಲ. ಈಗ ಇದ್ದಾರೆ. ಮುಂದೆ ಅವರ ವಿಷಯದಲ್ಲಿ ಇಲ್ಲ ಎನ್ನುವ ವ್ಯವಹಾರ ಉಂಟು. ಆದ್ದರಿಂದ ಕಾಲದ ಮಿತಿಗೆ ಒಳಪಟ್ಟ ಎಲ್ಲಾ ಬದುಕುಗಳೂ ಒಂದಲ್ಲ ಒಂದು ಕಾಲದಲ್ಲಿ ಇಲ್ಲ ಎಂಬ ವ್ಯವಹಾರಕ್ಕೆ ಒಳಗಾಗುತ್ತವೆ. ಹಿಂದಿತ್ತು, ಇಂದಿಲ್ಲ. ಇಂದಿದೆ, ಮುಂದಿಲ್ಲ. ಇಂದಿಲ್ಲ, ಮುಂದಿರುತ್ತದೆ ಎಂಬ ವ್ಯವಹಾರ ನಾವು ಕಾಣುವ, ಕಾಣುತ್ತಿರುವ, ಕಾಣಬಹುದಾದ ಎಲ್ಲಾ ವಸ್ತುಗಳಿಗೂ ಉಂಟು. ಆದರೆ ಹಿಂದೆಯೂ ಇತ್ತು, ಇಂದೂ ಇದೆ ಮುಂದೆಯೂ ಇರುತ್ತದೆ ಎಂಬ ವ್ಯವಹಾರವನ್ನು ಯಾವ ವಸ್ತುವಿನ ಬಗ್ಗೆಯಾದರೂ ನಾವು ಮಾಡಬಲ್ಲೆವಾದರೆ ಅಂತಹ ವಸ್ತು ಎಂದೆಂದಿಗೂ ಇಲ್ಲ ಎಂಬ ವ್ಯವಹಾರಕ್ಕೆ ವಿಷಯವಾಗುವುದಿಲ್ಲ. ಆದುದರಿಂದ "ಸತ್ಯ" ಎನ್ನುವ ಪದದ ಮೌಲಿಕ ಅರ್ಥಕ್ಕೆ ವಿಷಯವಾಗಬಹುದು. ಇರುವಿಕೆಯೇ ಯಾವುದರ ಲಕ್ಷಣವೋ ಅದು ಸತ್ಯ. 

ಈ ಲಕ್ಷಣವನ್ನು ಇಟ್ಟುಕೊಂಡು ನಾವು ಹುಡುಕಹೊರಟರೆ ಅಂತಹ ವಸ್ತುವೊಂದು ದೊರಕೀತೇ?  ಅಂತಹ ವಸ್ತುವನ್ನು ಯಾರಾದರೂ ಎಲ್ಲಿಯಾದರೂ ಹುಡುಕಿ ತಾವು ಕಂಡೆವೆಂದು ಹೇಳಿರುವುದುಂಟೇ? ಅವರ ಹೇಳಿಕೆಗಳು ಸಪ್ರಮಾಣವೆಂದು ನಂಬಲು ಆಧಾರವಿದೆಯೇ? ಎಂಬ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಏಳುವುದು ನಿಜ.

"ತ್ರಿಕಾಲಾಬಾಧಿತ ಸತ್ಯ"-  ಮೂರು ಕಾಲದಲ್ಲಿ ತಡೆಯಿಲ್ಲದ ಇರುವಿಕೆ ಉಳ್ಳದ್ದು, ಸತ್ತಾ ಮಾತ್ರಂ -ಇರುವಿಕೆಯನ್ನು ಮಾತ್ರವೇ ಲಕ್ಷಣವಾಗಿ ಉಳ್ಳಂತಹ ವಸ್ತು ಉಂಟೆಂದೂ,  ಅದು ದೇಶಕಾಲಗಳ ಪರಿಮಿತಿಯನ್ನು ದಾಟಿದುದೆಂದೂ  ಹೇಳುವ ಹೇಳಿಕೆಯನ್ನು ನಮ್ಮ ಸಾಹಿತ್ಯಗಳಲ್ಲಿ ಬಹಳವಾಗಿ ನೋಡುತ್ತೇವೆ. ಅದು ಕಾಲ್ಪನಿಕವೋ? ನೈಜವೋ? ಹಾಗೊಂದು ವಸ್ತುವಿರುವುದಾದರೆ ಇಂದಿನವರೆಗೆ ಅದು ಏಕೆ ಹಾಗೆ ಗೋಚರವಾಗುತ್ತಿಲ್ಲ? ಎಂಬ ಪ್ರಶ್ನೆಗಳು ಇಲ್ಲಿ ಏಳುತ್ತವೆ. 

ಹಾಗಾದರೆ ಆ ಸತ್ಯ ಗೋಚರವಾದುದೆಲ್ಲಿ? ಅದನ್ನು ಸಾರಿದವರ ಅನ್ವೇಷಣೆಯ ಹಾದಿ ಮತ್ತು ವಿಧಾನಗಳು ಯಾವುವು? ಎಂಬ ವಿಚಾರವು ಇಲ್ಲಿ ಪ್ರಸ್ತುತವಾಗುತ್ತದೆ. 

ವಿಸ್ತಾರವಾಗಿರುವ ವೃಕ್ಷದ ಮೂಲವನ್ನು ಸಸ್ಯವಿಜ್ಞಾನಿ ಎಲ್ಲಿ ನೋಡುತ್ತಾನೆ? ಅದರ ಬೀಜದಲ್ಲಿ ಅಲ್ಲವೇ? ಆ ಬೀಜವು ವೃಕ್ಷದ ವಿಕಾಸದ ಆರಂಭದ ಹಿಂದಿನ ಸ್ಥಿತಿ. ಆ ಬೀಜದ ಸ್ಥಿತಿಯಿಂದ ಆರಂಭಿಸಿ ಮತ್ತೆ ಬೀಜದವರೆಗೆ ವಿಕಾಸವಾದರೆ ವೃಕ್ಷದ ವಿಕಾಸ ಪೂರ್ಣವಾದಂತೆ. ಬೀಜ, ವೃಕ್ಷದ ನಡುವಣ ಅವಸ್ಥೆಯಲ್ಲಿ ಮರೆಯಾದಂತಿದ್ದರೂ- ಆ ಮರದ ಎಲೆ, ಹೂವು, ಮಿಡಿ, ಕಾಯಿ,ಹಣ್ಣು ಮೊದಲಾದ ವಿಕಾಸದ ಪ್ರತಿ ಹಂತಕ್ಕೂ ಅದರ ಗುಪ್ತ ಶಕ್ತಿಯೇ ಕಾರಣ. ಬೀಜವು  ಮರದ ವಿಕಾಸದಲ್ಲಿ ಉದ್ದಕ್ಕೂ ಹೊರ ರೂಪದಲ್ಲಿ ಮರೆಯಾಗಿದ್ದರೂ -ವೃಕ್ಷದ ವಿಕಾಸಕ್ಕೆ ಕಾರಣವಾದ ರೂಪದಲ್ಲಿ ಅದು ಇದ್ದೇ ಇದೆ ಎನ್ನಲು ಅಡ್ಡಿಯಿಲ್ಲ. ಆದ್ದರಿಂದ ವೃಕ್ಷದ ದೃಷ್ಟಿಯಿಂದ ಯೋಚಿಸಿದಾಗ, ವೃಕ್ಷಕ್ಕೆ ಮೊದಲು ಬೀಜ ಇದೆ- ನಡುವೆಯೂ ಅದರ ಶಕ್ತಿಯೇ ವೃಕ್ಷರೂಪದಲ್ಲಿ ವಿಕಾಸಗೊಂಡಿದೆ, ಮತ್ತೆ ಕೊನೆಯಲ್ಲಿ ಬೀಜರೂಪದಲ್ಲಿಯೇ ನಿಲ್ಲುತ್ತದೆ. ಅಂತೆಯೇ ವಿಶ್ವವೃಕ್ಷದ ವಿಕಾಸಕ್ಕೆ ಮೊದಲು- ಅನಂತರವೂ ಇದ್ದು ಅದರ ವಿಕಾಸದಲ್ಲಿ ಮರೆಯಾಗಿ ಇರುವ ವಸ್ತುವು ಒಂದಿದ್ದರೆ ಅದನ್ನು ತ್ರಿಕಾಲದಲ್ಲಿಯೂ ಇರುವ ಬದುಕು ಎನ್ನಲು ಅಡ್ಡಿಯಿಲ್ಲ ಅಲ್ಲವೇ?  ಅಂತಹ ಬದುಕೊಂದು ಉಂಟೆ? ಅದು ಅನುಭವ ಗೋಚರವೇ? ಇಂದೂ ಅದು ಅನುಭವಕ್ಕೆ ಬರುವ ವಿಷಯವೇ? ಎಂಬ ಪ್ರಶ್ನೆಗಳು ಇಲ್ಲಿ ಬರುತ್ತವೆ. ಆ ಬಗ್ಗೆ ಉಂಟು ಎಂದು ಹೇಳುವವರಿದ್ದಾರೆ, ಅನುಭವವೇ ಆ ನಿಲುವನ್ನು ಅವರಲ್ಲಿ ಮೂಡಿಸಿದೆ ಎಂದು ನಂಬಲರ್ಹವಾದ ಹೇಳಿಕೆಗಳಿವೆ. ಇಂದೂ ಆ ದಿಕ್ಕನ್ನು ಹಿಡಿದು ಅನ್ವೇಷಣೆ ಮಾಡಿದರೆ ಅಂತಹ ಅನುಭವವನ್ನು ಪಡೆಯುವುದು ಸಾಧ್ಯವೆಂದು ನಂಬಲು ಬೇಕಾದ ವಿಷಯವಿದೆ.

ವಿಸ್ತಾರವಾಗಿರುವ ವೃಕ್ಷದ ಗುಟ್ಟನ್ನು ಹಿನ್ನೋಟದಿಂದ ಸಸ್ಯವಿಜ್ಞಾನಿಯು ಅರಿಯುವಂತೆ ವಿಸ್ತಾರವಾಗಿರುವ ವಿಶ್ವದ ಗುಟ್ಟನ್ನೂ ಹಿನ್ನೋಟದಿಂದ ಅರಿಯಬಹುದು. ಪ್ರಾಣಗಳನ್ನು ಸಂಯಮ ಮಾಡಿ ಒಳಮುಖವಾಗಿ ಮನಸ್ಸಂಚಾರ ಮಾಡಿಸಿದರೆ, ಒಂದು ನೆಲೆಯಲ್ಲಿ ಜೀವನವನ್ನೆಲ್ಲ ಆಡಿಸುವ ಬೇರಿನಂತಹ ಬದುಕನ್ನು ಕಾಣಬಹುದೆಂದು ಅದನ್ನು ಕಂಡವರ ಅನುಭವವು ಸಾರುತ್ತದೆ. ಅದೇ ಜೀವನದ ಬೇರೂ ಮತ್ತು ಎಲ್ಲಾ ಜೀವಿಗಳ ಉಗಮ ಸ್ಥಾನವಾದ ವಿಶ್ವದ ಬೇರೂ ಆಗಿರುವುದೆಂದೂ, ಅದು ಅಳಿವಿಲ್ಲದ್ದೆಂದೂ, ಅನುಭವಿಗಳು ಸಾರಿದ್ದಾರೆ ಮತ್ತು ತತ್ಸಮಾನ ಅನುಭವವನ್ನು ಪಡೆದ ಭಿನ್ನಭಿನ್ನ ಕಾಲದಲ್ಲಿದ್ದ ಅನುಭವಿಗಳೂ ಅದೇ ಮಾತುಗಳನ್ನು ಸಂತೋಷದಿಂದ ಆಡಿದ್ದಾರೆ. ಅಂತಹ ಬದುಕು ಮಹರ್ಷಿ ಹೃದಯ ಗೋಚರವಾಗಿತ್ತು. ಭಿನ್ನಭಿನ್ನ ಕಾಲಗಳಲ್ಲಿ ಬದುಕಿದ್ದ ಜ್ಞಾನಿಗಳ ಅನುಭವ ಗೋಚರವಾಗಿತ್ತು. ಇಂದೂ ಅದರ ಅನುಭವವನ್ನು ಪಡೆದ ಗುರುವನ್ನೂ ನಾವು ಕಂಡಿದ್ದೆವು. ತನ್ನಿರ್ದಿಷ್ಟವಾದ ಹಾದಿಯಿಂದ ಸತ್ಯವನ್ನು ಸಾಧಿಸಿದವರನ್ನೂ ಕಂಡಿದ್ದೇವೆ. ಆದ್ದರಿಂದ ಅಂತಹ ಬದುಕೊಂದು ಉಂಟು- ಎಂಬುದು ಆ ವಸ್ತುವಿನಷ್ಟೇ ಸತ್ಯ. ಅದಷ್ಟೇ ಅಲ್ಲ, ಅದನ್ನು ಕಂಡು ಬಾಳಿದವರೂ ಉಂಟು- ಬಾಳುವುದೂ ಸಾಧ್ಯ.

ಆದ್ದರಿಂದ ಸತ್ಯವೆನ್ನುವುದು ಇಂದ್ರಿಯಗಳಿಗೆ ಗೋಚರವಾಗುವ ವಿಷಯವನ್ನು ಹೇಳುವಷ್ಟು ಸೀಮಿತವಾದ ವ್ಯಾಪ್ತಿಯದಲ್ಲ. ಇಂದ್ರಿಯಗಳನ್ನು ಸಂಯಮ ಮಾಡಿ ಒಳಮುಖವಾಗಿ ಮನಸ್ಸೆಳೆದು ನಿಗೂಢವಾದ ಹೃದಯದಲ್ಲಿ ಅರಿವಿಗೆ ಬರುವ ಒಳಬೆಳಕು- ಎಂಬುದು ಜ್ಞಾನಿಗಳ ನಿಲುವು.

ಆ ಒಳಬೆಳಕಿನ ಆಧಾರದ ಮೇಲೆ ಅಳವಡಿಸಿಕೊಂಡ ಬಾಳು ತಾನೇ ಸತ್ಯಮಯವಾದ ಬಾಳು! ಆದ್ದರಿಂದಲೇ ಛಾಂದೋಗ್ಯ ಉಪನಿಷತ್ತಿನ ಒಂದು ಮಾತು ಹೀಗೆ ಹೇಳುತ್ತದೆ. "ಸತ್ಯಂ" ಎಂಬಲ್ಲಿ ಸ-ತಿ -ಯಂ ಎಂಬ ಮೂರು ಅಕ್ಷರಗಳಿವೆ. 'ಸ' ಎಂಬುದು ಅಮರತ್ವವನ್ನೂ 'ತಿ' ಎಂಬುದು ಮರ ಭಾವವನ್ನೂ 'ಯಂ' ಎಂಬುದು ಅವೆರಡರ ಸೇರುವಿಕೆ, ಹೊಂದಾಣಿಕೆಯನ್ನೂ ತಿಳಿಸುತ್ತದೆ. ಈ ದೃಷ್ಟಿಯಿಂದ ಮರಾಮರಗಳ ಸಾಮರಸ್ಯವೇ ಸತ್ಯ.

ಅಂದರೆ ಜೀವನದಲ್ಲಿ ಅಮರವಾದ ಬದುಕೂ ಇದೆ. ಅಂತೆಯೇ ಅದು ಮರವಾದ ಪ್ರಕೃತಿಯ ಕ್ಷೇತ್ರದಲ್ಲಿ ತನ್ನನ್ನು ವಿಸ್ತರಿಸಿಕೊಂಡಿದೆ. ಮರಭಾವದಲ್ಲಿ ಇಳಿದರೂ ಅದರ ಅಮರತ್ವಕ್ಕೆ ಧಕ್ಕೆಯಾಗದಂತೆ ಜೀವನವನ್ನು  ಸತ್ಯದಲ್ಲಿಯೇ ನಿಲ್ಲುವಂತೆ ಅಳವಡಿಸಿಕೊಳ್ಳುವುದೇ ಸತ್ಯಮಯ ಜೀವನದ ತಿರುಳು. ಉಪನಿಷತ್ತು ಸಾರುವುದೂ ಅದನ್ನೇ. ಹೀಗೆ ಮರಾಮರಗಳ ಅಳವಡಿಕೆಯಲ್ಲಿ ಸತ್ಯಜ್ಯೋತಿಯು ಮರೆಯಾಗದಂತೆ ಅಳವಡಿಸುವಿಕೆಯೇ ಭಾರತೀಯ ಜ್ಞಾನಿಗಳ ಜೀವನ ಯೋಜನೆಯ ಒಳಮರ್ಮ. ಅಂತೆಯೇ ಅವರ ಘೋಷಣೆ-"ಸತ್ಯಮೇವ ಜಯತೇ ನಾನೃತಂ" ಎಂಬುದು. 

ಈ ಬಾಳಿನ ಮರ್ಮವನ್ನು ನನ್ನ ಬುದ್ಧಿಭೂಮಿಕೆಯಲ್ಲಿ ಬಿತ್ತರಿಸಿದ ಶ್ರೀರಂಗ ಮಹಾಗುರುವಿಗೆ ನಮಿಸಿ ಸತ್ಯ ಜ್ಯೋತಿಯ ಅಡಿದಾವರೆಗೆ ಈ ಬರಹವನ್ನು ಅರ್ಪಿಸುತ್ತೇನೆ. 

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಜನವರಿ 1983 (ಸಂಪುಟ 5 - ಸಂಚಿಕೆ 3) ರಲ್ಲಿ  ಪ್ರಕಟವಾಗಿದೆ.