Sunday, July 26, 2020

ಆರ್ಯಸಂಸ್ಕೃತಿ ದರ್ಶನ - 3 (Arya Samskruti Darshana - 3)

ಕುಂಕುಮ
ಲೇಖಕರು ಡಾ|| ಎಸ್.ವಿ.ಚಾಮು
ಪ್ರದೇಶಾನುಗುಣವಾಗಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ, ನಮ್ಮದೇಶದಲ್ಲಿ ಕನ್ಯಾಕುಮಾರಿಯಿಂದ ಹಿಡಿದು  ಹಿಮಾಲಯದವರೆಗೆ ಸ್ತ್ರೀಯರ ವೇಷಭೂಷಣಗಳಲ್ಲಿ ಸಾವಿರಾರು ವರ್ಷಗಳಿಂದ ಏಕ ಪ್ರಕಾರತೆಯು ಇರುತ್ತದೆ. ಸೀರೆಯು ನಮ್ಮ ದೇಶದ ಸ್ತ್ರೀಯರ ರಾಷ್ಟ್ರೀಯ ಉಡುಗೆಯಾಗಿರುತ್ತದೆ. ಜಡೆಯನ್ನು ಹಾಕಿಕೊಳ್ಳುವುದು, ಬೈತಲೆ ಮಾಡಿಕೊಳ್ಳುವುದು, ಬಳೆ ಹಾಕಿಕೊಳ್ಳುವುದು, ಕುಂಕುಮವನ್ನಿಟ್ಟುಕೊಳ್ಳುವುದು, ಓಲೆ, ಉರುಟು, ಮೂಗುತಿ ಮುಂತಾದ ಆಭರಣಗಳನ್ನು ಧರಿಸುವುದು ನಮ್ಮ  ಸ್ತ್ರೀಯರ ಸಾರ್ವತ್ರಿಕವಾದ ಅಲಂಕಾರ ಹಾಗೂ ತೊಡಿಗೆಗಳಾಗಿರುತ್ತವೆ. ಈ ಏಕ ಪ್ರಕಾರತೆಯು ಈಚಿನ ವಿಷಯವಲ್ಲ. ಬಹಳ ಹಿಂದಿನ ಕಾಲದಿಂದಲೂ ಅದು ಇದೆ ಎಂಬುದಕ್ಕೆ ಪುರಾತನವಾದ ಕಾವ್ಯ ಮತ್ತು ಶಿಲ್ಪಗಳು ಸಾಕ್ಷಿಯಾಗಿವೆ.

ಒಂದು ಕಡೆ ಇವೆಲ್ಲವೂ ಅಲಂಕಾರಸಾಧನಗಳಾಗಿ, ಹಿಂದೂ ಜನಗಳು ತಂದ ಸೌಂದರ್ಯದದೃಷ್ಟಿಯನ್ನು ಪ್ರತೀಕಿಸುತ್ತವೆ. ಮತ್ತೊಂದು ಕಡೆ ಅವುಗಳು ಹಲವು ಆಳವಾದ ಸಂಕೇತಾರ್ಥದಿಂದಕೂಡಿ ಭಾರತೀಯರ ಉನ್ನತವಾದ ಮತ್ತು ವ್ಯಾಪಕವಾದ ನೋಟ ಹಾಗೂ ವಿಜ್ಞಾನಬುದ್ಧಿಗಳನ್ನು ಪ್ರಕಟಪಡಿಸುತ್ತವೆ. ಲೋಕದಲ್ಲಿ ಸಂಕೇತ( Symbol) ಒಂದು ಸಾಧಾರಣವಾದ ಪದಾರ್ಥವನ್ನು ಅವಲಂಬಿಸಿರುತ್ತದೆ. ಆದರೆ ಅದರ ಅರ್ಥ ಈ ಪದಾರ್ಥವನ್ನು ಮೀರಿ ಹೋಗುತ್ತದೆ. ಆ ಪದಾರ್ಥದ ಮೇಲೆ ಯಾವ ಭಾವನೆಯನ್ನು ಜನರು ಇಡುತ್ತಾರೋ ಅದರ ಮೇಲೆ ಅದು ತನ್ನ ಅರ್ಥ ಅಥವಾ ಮೌಲ್ಯವನ್ನು ತೆಗೆದುಕೊಳ್ಳುತ್ತದೆ.

ಇಂದು ಈ ವೇಷಭೂಷಣಗಳು ತ್ಯಾಗಕ್ಕೆ ವಿಷಯವಾಗುವುದನ್ನು ನೋಡುತ್ತೇವೆ. ಶಾಲಾಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ತಾಯಂದಿರ ಬಾಲಿಶತನದಿಂದ ಸಣ್ಣಮಕ್ಕಳು ಹೊಸ ವಿಧವಾದ ಉಡುಗೆತೊಡಿಗೆಗಳನ್ನು ತಮ್ಮದಾಗಿ ಮಾಡಿಕೊಳ್ಳಲು ಆರಂಭಿಸಿರುತ್ತಾರೆ. ತಲೆ ಕೂದಲುಗಳನ್ನು ಕತ್ತರಿಸಿಕೊಳ್ಳುವುದು, ಬಳೆ, ಓಲೆ, ಮೂಗುತಿ ಇತ್ಯಾದಿಗಳನ್ನು ತೊಡದಿರುವುದು, ಗಂಡಸರ ಉಡುಪುಗಳನ್ನು ಧರಿಸುವುದು, ಬೆಲ್-ಬಾಟ್ಸ್, ಜೀನ್ಸ್ ಮುಂತಾದವುಗಳನ್ನು ಹಾಕಿಕೊಳ್ಳುವುದು, ಬರೀ ಹಣೆಯಲ್ಲಿರುವುದು ಇತ್ಯಾದಿಗಳು ಅವರಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಚಿಕ್ಕಂದಿನಲ್ಲಿ ಮಾಡಿದ ಅಭ್ಯಾಸಗಳು ವಯಸ್ಸಾದನಂತರವೂ ಮುಂದುವರಿಯಬಹುದಾದುದರಿಂದ ಕಾಲ ಕಳೆದಂತೆ ಇವು ಸಾರ್ವತ್ರಿಕವಾದ ಉಡುಗೆಯ ಶೈಲಿಗಳಾತ್ತವೆಯಂದು ನಿರೀಕ್ಷಿಸಬಹುದು.

ಇವೆಲ್ಲವೂ ನಮ್ಮ ಸಂಸ್ಕೃತಿಯ ದೃಷ್ಟಿಯಿಂದ ಹೇಳುವುದಾದರೆ ಬಹಳ ದೊಡ್ದ ಪರಿವರ್ತನೆಗಳು. ನಮ್ಮ ಪರಂಪರಾನುಗತವಾದ ಉಡುಗೆ ತೊಡಿಗೆಗಳಲ್ಲಿ ಅಸೌಂದರ್ಯದ ಅಂಶಗಳು ಇಲ್ಲದಿದ್ದರೂ ಸ್ತ್ರೀಯರು ಏಕೆ ಅವುಗಳನ್ನು ತ್ಯಜಿಸಿ, ಸೌಂದರ್ಯಕ್ಕೆ ಅಷ್ಟೇನೂ ಪೋಷಕವಾಗಿಲ್ಲದಿರುವ ಹೊಸ ಉಡುಗೆಯ ಶೈಲಿಗಳನ್ನು ತಮ್ಮದಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಉಂಟಾಗುತ್ತದೆ. ಅದಕ್ಕೆ ಉತ್ತರ ಹೇಳುವುದು ಸ್ವಲ್ಪ ಜಟಿಲವಾದ ಕೆಲಸವೇ ಸರಿ. ಸಿನೇಮಾ ನಟಿಯರ ಅನುಕರಣೆ, ಪರಂಪರೆಯ ಬಗ್ಗೆ ಅಶ್ರದ್ಧೆ, ಅನಾದರಣೆ ಮತ್ತು ವಿರೋಧ, ಉಡುಗೆತೊಡಿಗೆಗಳಲ್ಲಿ ನಿಮಿಷ ನಿಮಿಷಕ್ಕೂ ಹೊಸ ಹೊಸ ಫ್ಯಾಷನ್ಗಳನ್ನು ಸೃಷ್ಟಿಸುತ್ತಿರುವವರ ಸಂಖ್ಯೆಯಲ್ಲಿ ವೃದ್ಧಿ, ಜನರಲ್ಲಿ ದುಡ್ಡು ಕಾಸಿನ ಹೆಚ್ಚಳ, ಎಲ್ಲ ವಿಧವಾದ ವೃತ್ತಿಗಳಿಗೂ ಸ್ತ್ರೀಯರ ಪ್ರವೇಶ, ಪತ್ರಿಕೆಗಳು, ವಿಲಾಸಿಪುರುಷರ ಪ್ರೋತ್ಸಾಹ "ಸ್ತ್ರೀ ವಿಮುಕ್ತಿ ಆಂದೋಳನ (Women Lib Movements) ದ" ಪ್ರಭಾವ.  ಪಾಶ್ಚಾತ್ಯ ನಾಗರಿಕತೆಯಲ್ಲಿ ಅನುರಾಗ ಇತ್ಯಾದಿ ಅನೇಕ ಕಾರಣಗಳು ಮನಸ್ಸಿಗೆ ಬರುತ್ತವೆ. ಸ್ಥಳಾಭಾವದಿಂದ ಅವುಗಳ ಬಗ್ಗೆ ಇಲ್ಲಿ ವಿವರಗಳಿಗೆ ಹೋಗದಿರಬೇಕಾಗಿದೆ.

ಈ ಹೊಸ ದಾರಿಯಲ್ಲಿ ನಡೆಯುವುದರಿಂದ ನಾವೂ ನವನಾಗರಿಕತೆಯಲ್ಲಿ ಭಾಗವಹಿಸಿದಂತೆ ಆಗುತ್ತದೆಂಬುದು ನಿಜ. ಆದರೆ ಆ ರೀತಿ ಮಾಡುವುದರಿಂದ ನಮ್ಮ ಜನತೆಯು ಸಭ್ಯತೆಯಿಂದ ಅಸಭ್ಯತೆಗೂ, ವಿಚಾರದಿಂದ ಅವಿಚಾರಕ್ಕೂ, ಸಂಯಮಶೀಲತೆಯಿಂದ ಅಸಂಯಮಶೀಲತೆಗೂ ನಡೆದಂತೆ ಆಗುತ್ತದೆಂಬುದೂ ಅಷ್ಟೇ ನಿಜ. ಮೇಲೆ ಹೇಳಿದ ಅಲಂಕಾರವಸ್ತುಗಳಲ್ಲಿ ಒಂದಾದ ಕುಂಕುಮವನ್ನು ತೆಗೆದುಕೊಂಡು ಈ ಮಾತಿಗೆ ಒಂದು ಸಂಗ್ರಹವಾದ ವಿವರಣೆಯನ್ನು  ನೀಡುತ್ತೇವೆ.

ಕುಂಕುಮವು ಸ್ತ್ರೀಯರ ಮುಖಕ್ಕೆ ಅಪೂರ್ವವಾದ ಶೋಭೆಯನ್ನು ಕೊಡುವ ಅಲಂಕಾರ ಸಾಮಗ್ರಿ. "ವಿಹೀನತಿಲಕೇವ  ಸ್ತ್ರೀ ನೋತ್ತರಾದಿಕ್ಪ್ರಕಾಶತೇ|" (ಹೇಮಂತಋತುವಿನಲ್ಲಿ ಉತ್ತರದಿಕ್ಕು ಹಣೆಯಲ್ಲಿ ತಿಲಕವಿಲ್ಲದ ಸ್ತ್ರೀಯಂತೆ ಪ್ರಕಾಶಿಸುತ್ತಿಲ್ಲ) ಎಂಬ ಆದಿಕವಿಯ ನುಡಿಯು ಈ ಸಂದರ್ಭದಲ್ಲಿ ನೆನೆಪಿಗೆ ಬರುತ್ತದೆ. ತಾಳಿ, ಉರುಟು, ಬಳೆಗಳ ಜೊತೆಗೆ ಅದು ಸ್ತ್ರೀಯ ಸೌಮಂಗಲ್ಯದ ಚಿಹ್ನೆಯೂ ಸಹ ಆಗಿರುತ್ತದೆ. ಪತಿಯೇ ಸರ್ವಸ್ವ, ಅವನಿಲ್ಲದೇ ಜೀವನವೇ ಇಲ್ಲ ಎಂಬ ಧಾರ್ಮಿಕ ವಾತಾವರಣದಲ್ಲಿ ಜೀವಿಸುವ ಭಾರತೀಯ ಸ್ತ್ರೀಗೆ ಅವಳ ಸೌಭಾಗ್ಯವನ್ನು ಸೂಚಿಸುವ ಕುಂಕುಮವು ಆಳವಾದ ಭಾವಾರ್ಥವನ್ನು ತೆಗೆದುಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಕುಂಕುಮಕ್ಕೆ ಅಷ್ಟು ಮಹತ್ವ ಕೊಡಲು ಕಾರಣವೇನು, ಅದುಕೇವಲ ಭಾವನೆಯೋ ಅಥವಾ ಇನ್ನೂ ಆಳವಾದ ಕಾರಣವೇನಾದರೂ ಇದೆಯೋ ಎಂಬ ಪ್ರಶ್ನೆ ಏಳುತ್ತದೆ. ಅದರ ಅರ್ಥವು ಮನಸ್ಸಿಗೆ ಬಾರದಿರುವುದರಿಂದ, ಅದರ ಅರ್ಥವು ಸಮಾಜದಲ್ಲಿ ಜನಜನಿತವಾಗಿ ಅನೇಕ ವಿಧವಾದ ಕಲ್ಪನೆಗಳು ಪ್ರಚಲಿತವಾಗಿವೆ. ಕುಂಕುಮವನ್ನಿಟ್ಟುಕೊಳ್ಳದಿದ್ದರೆ ಪತಿಯ ಪ್ರಾಣಕ್ಕೇ ಅಪಾಯವುಂಟಾಗುತ್ತದೆಂಬ ನಂಬಿಕೆಯು ಅವುಗಳಲ್ಲಿ ಒಂದು. ಈ ನಂಬಿಕೆಯು ಪತಿಪ್ರಾಣಳಾದ ಭಾರತೀಯ ಮಹಿಳೆಯ ಭಾವಸಮೃದ್ಧಿಗೆ ಕನ್ನಡಿ ಹಿಡಿಯುತ್ತದೆ. ಆದುದರಿಂದ ಈ ನಂಬಿಕೆಯನ್ನು ನಾವು ಕಡೆಗಣಿಸಲಾರೆವು. ಆಳವಾದ ಪ್ರೀತಿಯು ಆಶೀರ್ವಾದರೂಪವು ಉಕ್ಕಿಹರಿದಾಗ ಅಂತಹ ಆಶೀರ್ವಾದಕ್ಕೆ ನಾವು ಹೇಗೆ ಬೆಲೆಯಿಲ್ಲ ಎನ್ನುವುದಿಲ್ಲವೋ ಹಾಗೆಯೇ, ಕುಂಕುಮದಲ್ಲಿ ಒಬ್ಬ ಸತೀಮಣಿಯು ಇಡುವ ಭಾವನೆಗೂ  ಸಹ ಅರ್ಥವಿಲ್ಲ ಎಂದು ಹೇಳಲಾಗುವುದಿಲ್ಲ.

ಆದರೆ ಭಾವನೆಗೆ ದ್ವಾರವೆಂದು ಹೇಳಿದುದರಿಂದ ಕುಂಕುಮದ ಅರ್ಥವನ್ನು ಹೊರಗೆಡಹಿದಂತಾಗುವುದಿಲ್ಲ.ಆಧುನಿಕ ಕಾಲದ ಬುದ್ಧಿವಂತರಿಗೆ ಅದರಿಂದ ವಿಶ್ವಾಸವುಂಟಾಗುವುದಿಲ್ಲ. " ಪ್ರಪಂಚದ ಎಲ್ಲ ದೇಶಗಳಲ್ಲಿಯೂ ವಿವಾಹಿತ ಸ್ತ್ರೀಯರು ಇರುತ್ತಾರೆ. ಅವರಾರೂ ಕುಂಕುಮವನ್ನು ಇಟ್ಟುಕೊಳ್ಳುವುದೇ ಇಲ್ಲ. ಅದರಿಂದ ಅವರ ಗಂಡಂದಿರು ಯಾರೂ ಸಾಯುವುದಿಲ್ಲ. ಇದು ಹಿಂದೂ ಜನರ ಮೂಢನಂಬಿಕೆಗಳಲ್ಲೊಂದು" ಎಂದು ಅವರು ಅಂದುಬಿಡುತ್ತಾರೆ. ವಸ್ತುತಃ ಕುಂಕುಮದ ಸಭ್ಯತೆಗೆ ಅಪರಿಚಿತರಾದ ವಿದೇಶೀ ಸ್ತ್ರೀಯರನ್ನು ನೋಡಿಯೇ ಹಿಂದೂ ಸ್ತ್ರೀಯರು ಕುಂಕುಮವನ್ನು ತ್ಯಾಗಮಾಡುತ್ತಿದ್ದಾರೆ. ಆದುದರಿಂದ ನಾವು ಕುಂಕುಮದ ಅರ್ಥವನ್ನು ಅರಿಯಬೇಕಾದರೆ ನಂಬಿಕೆಯಿಂದ ಅದರ ಹಿಂದಿರುವ ವಿಜ್ಞಾನದ  ಕಡೆಗೆ ತಿರುಗಬೇಕು.

ಕುಂಕುಮವು ಪುರುಷ ಮತ್ತು ಪ್ರಕೃತಿಗಳ ವಿಷಯದಲ್ಲಿ ಭಾರತೀಯ ಮಹರ್ಷಿಗಳು ತಂದ ದೃಷ್ಟಿಯನ್ನು ಸಂಕೇತಿಸುವ ಒಂದು ಚಿಹ್ನವಾಗಿರುತ್ತದೆ. ಎಲ್ಲಿಂದ ಎಲ್ಲಿಗೆ ಹೋದರೂ ನಾವು ಜೀವಸೃಷ್ಟಿಯು ಸ್ತ್ರೀ ಪುರುಷಾತ್ಮಕವಾಗಿರುವುದನ್ನು ನೋಡುತ್ತೇವೆ. ಹಾಗೆ ಇರುವುದರಿಂದಲೇ ಸೃಷ್ಟಿಯು ಮುಂದುವರಿದುಕೊಂಡು ಹೋಗಲು ಸಾಧ್ಯವಾಗಿರುತ್ತದೆ. ಅದರಲ್ಲಿ ಸ್ತ್ರೀಪುರುಷರ ಪಾತ್ರಗಳು ಬೇರೆ ಬೇರೆಯಾಗಿದ್ದರೂ ಒಂದು ಮತ್ತೊಂದಕ್ಕೆ ಪೋಷಕವಾಗಿರುತ್ತದೆ. ಒಂದು ಮತ್ತೊಂದನ್ನು ಅವಲಂಬಿಸಿರುತ್ತದೆ. ಪುರುಷನು ಬೀಜರೂಪ. ಸ್ತ್ರೀಯು ಆ ಬೀಜವನ್ನು ಧರಿಸುವ ಕ್ಷೇತ್ರರೂಪಿಣಿ. ಪುರುಷನು ಜನಕ, ಸ್ತ್ರೀಯು ಜನನಿ. ಹೊರಗಡೆ ದೃಷ್ಟಿಯಿಂದ ನೋಡಿದಾಗ, ಸೃಷ್ಟಿಕಾರ್ಯವು ಸ್ತ್ರೀಪುರುಷರೂಪರಾದ ವ್ಯಕ್ತಿಗಳು ಸ್ವೇಚ್ಛೆಯಿಂದ ಮಾಡುವ ಕೆಲಸವಾಗಿರುವಂತೆ ಕಂಡುಬರುತ್ತದೆ. ಆಳವಾಗಿ ವಿಚಾರಮಾಡಿದಾಗ, ಎಲ್ಲ ಕಾಲ ದೇಶಗಳಿಗೆ ಸೇರಿದ, ಎಲ್ಲ ವ್ಯಕ್ತಿಗಳೂ ಒಂದು ಅಚಿಂತ್ಯವಾದ, ಅನಾದಿಯಾದ ಮತ್ತು ಅನಿವಾರ್ಯವಾದ ಸೃಷ್ಟಿಶಕ್ತಿಯ ಆಟದ ಗೊಂಬೆಗಳು. ಇಚ್ಛೆಯಿರಲಿ ಅಥವಾ ಇಚ್ಛೆಯಿಲ್ಲದಿರಲಿ ಅದರ ಸಂಕಲ್ಪಕ್ಕೆ ಮತ್ತು ಶಕ್ತಿಗೆ ಬಾಗಿ ನಡೆಯುವುದಲ್ಲದೆ ಅವರ ಮುಂದೆ ಬೇರೆ ದಾರಿ ಇಲ್ಲ ಎಂಬುದು ಸ್ಪಷ್ಟಪಡುತ್ತದೆ. ಅವರೆಲ್ಲರೂ ಆ ಶಕ್ತಿಯ ರೂಪಾಂತರಗಳು.

ಒಂದೇ ಮೂಲಶಕ್ತಿಯು ಇಬ್ಬಗೆಯಾಗಿ ತನ್ನನ್ನು ವಿಭಾಗ ಮಾಡಿಕೊಂಡು ಈ ಸೃಷ್ಟಿಕಾರ್ಯವನ್ನು ನಡೆಸುತ್ತಿದೆ ಎಂಬುದು ಆ ಮಹರ್ಷಿಗಳ ನಿರ್ಣಯ. ಅವರು ಅದನ್ನು ಪ್ರಕೃತಿಪುರುಷ, ಶಿವಶಕ್ತಿ, ವಿಷ್ನುಲಕ್ಷ್ಮೀ ಮುಂತಾದ ಹೆಸರುಗಳಿಂದ ನಿರ್ದೇಶಿಸಿರುತ್ತಾರೆ. ಸೃಷ್ಟಿಯೆಲ್ಲವೂ ಪುಂಪ್ರಕೃತ್ಯಾತ್ಮಕರೂಪವಾಗಿರುತ್ತದೆ, ಶಿವಶಕ್ತ್ಯಾತ್ಮಕವಾಗಿರುತ್ತದೆ ಅಥವಾ ವಿಷ್ಣುಲಕ್ಷ್ಯಾತ್ಮಕವಾಗಿದೆ ಎಂಬುದು ಅವರ ಮತ. ಅದಕ್ಕೆ ಅವರು ಕೊಟ್ಟಿರುವ ಹಲವು ವಿವರಣೆಗಳು ಗಮನಾರ್ಹವಾಗಿರುತ್ತವೆ. ಅವರ ಅಭಿಪ್ರಾಯದಲ್ಲಿ ಸ್ತ್ರೀಯಾಗಿರಲಿ, ಪುರುಷನಾಗಿರಲಿ, ಶರೀರದ ಬಲಭಾಗ ಪುರುಷಭಾಗ, ಎಡಭಾಗ ಸ್ತ್ರೀಭಾಗ. ಅಷ್ಟೇ ಅಲ್ಲದೆ ಸೃಷ್ಟಿಗೆ ಮಾಧ್ಯಮವಾದ ಶರೀರವನ್ನು ಇನ್ನೂ ಆಳವಾದ ದೃಷ್ಟಿಯಿಂದ ನೋಡಿ, ಅದರಲ್ಲಿ ಶರೀರದ ಸಮಸ್ತ ಇಂದ್ರಿಯ ವ್ಯಾಪಾರಗಳಿಗೂ ಕಾರಣವಾದ ಮೂಲಾಧಾರದಿಂದ ಆಜ್ಞೆಯವರೆಗೆ ಇರುವ ಷಟ್ಚಕ್ರಗಳನ್ನು ಶಕ್ತಿಸ್ಥಾನವೆಂದೂ, ಅದರಿಂದ ಮೇಲಿರುವುದನ್ನು ಶಿವಸ್ಥಾನವೆಂದೂ ಅವರು ತಿಳಿಯುತ್ತಾರೆ. ಅದೇ ರೀತಿ ಶರೀರದಲ್ಲಿ ನಡೆಯುವ ಭೌತಿಕ ಮತ್ತು  ಮಾನಸಿಕ ಕಾರ್ಯಗಳೆಲ್ಲಕ್ಕೂ ಚಾಲಕ ಶಕ್ತಿಯಾದ, "ಹ" ಎಂದು ಶಬ್ದ ಮಾಡುತ್ತಾ ಹೊರಗೆ ಬರುವ ಮತ್ತು "ಸ" ಎಂದು ಶಬ್ದ ಮಾಡುತ್ತಾ ಒಳಗೆ ಹೋಗುವ, ಪ್ರಾಣವೂ ಸಹ ಪ್ರಕೃತಿ ಪುರುಷಾತ್ಮಕವಾದುದು, " ಹಂ ಪುಮಾನ್ ಪ್ರಕೃತಿಸ್ತು ಸಃ " ಎಂಬುದು ಅವರ ಮತ್ತೊಂದು ಮಹತ್ವಪೂರ್ಣವಾದ ಅನ್ವೇಷಣೆ. ಕಡೆಯದಾಗಿ ವಾಕ್ಕು ಪ್ರಕೃತಿ, ಅರ್ಥ ಪುರುಷ ಎಂಬ ನಿರ್ಣಯಕ್ಕೆ ಅವರು ಬಂದಿರುತ್ತಾರೆ.

ಶರೀರದ ರಚನೆ ಮತ್ತು ವ್ಯಾಪಾರ ಎರಡೂ ಎಲ್ಲಾ ಸ್ತರದಲ್ಲಿಯೂ ಶಿವಶಕ್ತ್ಯಾತ್ಮಕವಾದವು. ಶರೀರದಲ್ಲಿ ಗೂಢವಾಗಿರುವ ಶಿವಶಕ್ತಿಯರೇ ಅವಕ್ಕೆ ಮೂಲಕಾರಣರು ಎಂಬುದು ಮೇಲಿನ ವಿವರಗಳ ತಾತ್ಪರ್ಯ. ಆದರೆ ಋಷಿಗಳ ಸೃಷ್ಟಿ ವಿವೇಚನೆಯು ಅಲ್ಲಿಗೇ ನಿಲ್ಲಲಿಲ್ಲ. ಅವರು ಧ್ಯಾನಯೋಗದಿಂದ ತಮ್ಮ ಉಸಿರಿಗೆ ಉಸಿರೂ, ಜೀವಕ್ಕೆ ಜೀವವೂ ಆದ  ಶಿವಶಕ್ತಿಯರನ್ನು ತಮ್ಮ ಶರೀರವೆಂಬ ದೇಗುಲವನ್ನು ಪ್ರವೇಶಿಸಿ ಸಾಕ್ಷಾತ್ಕರಿಸಿಕೊಂಡವರಾಗಿದ್ದರು. ಉಪನಿಷತ್ತುಗಳಲ್ಲಿ "ಬ್ರಹ್ಮರಂಧ್ರವೆಂಬ ಮಹಾಸ್ಥಾನದಲ್ಲಿ ಶಿವೆಯು ಸರ್ವದಾ ಇರುತ್ತಾಳೆ. ಭ್ರೂಮಧ್ಯದಲ್ಲಿ ಚಿಚ್ಛಕ್ತಿಯು ಇರುತ್ತಾಳೆ. ಲಲಾಟಾಗ್ರಭಾಗದಲ್ಲಿರುವ ವ್ಯೋಮಾಂಬುಜದಲ್ಲಿ ಮಾಯಾಶಕ್ತಿಯು ಇರುತ್ತಾಳೆ. ನಾಮರೂಪಳಾದ ಪರಾಶಕ್ತಿಯು ಹಣೆಯ ಮಧ್ಯದಲ್ಲಿರುತ್ತಾಳೆ. ಮನೋರೂಪಳಾದ ಬಿಂದುಮಯೀ ಶಕ್ತಿಯು ಹಣೆಯ ಕೆಳಭಾಗದಲ್ಲಿರುತ್ತಾಳೆ. ಮನೋರೂಪವಾದ ಬಿಂದುವಿನ ಮಧ್ಯದಲ್ಲಿ ಜೀವಾತ್ಮನು ಸೂಕ್ಷ್ಮರೂಪದಲ್ಲಿರುತ್ತಾನೆ. ಭ್ರೂಮಧ್ಯಾಕಾಶದಲ್ಲಿ ಸಚ್ಚಿದಾನಂದ ತೇಜಸ್ಸಿನ ಪುಂಜವಾದ ಪರಬ್ರಹ್ಮನನ್ನು ಯೋಗಿಯು ನೋಡುತ್ತಾನೆ. ಭ್ರೂಮಧ್ಯದಲ್ಲಿರುವ ಬಿಲದಲ್ಲಿ ದೃಷ್ಟಿಯನ್ನಿರಿಸಿದಾಗ ಎಲ್ಲಕ್ಕಿಂತಲೂ ಮೇಲಿರುವ ಒಳ ಬೆಳಕು ಕಂಡುಬರುತ್ತದೆ" ಮುಂತಾದ ಮಾತುಗಳನ್ನು  ಓದುತ್ತೇವೆ. ಈ ಮಾತುಗಳಲ್ಲಿ ಪುರಾತನ ಭಾರತೀಯ ಮಹರ್ಷಿಗಳು ಮಾಡಿದ ಜ್ಞಾನೋಪಾಸನೆಯ ಸಾರವು ಅಡಗಿದೆ. ಅವು ಜ್ಞಾನದ ಪರಮೋನ್ನತಸ್ಥಿತಿಯನ್ನು ಮುಟ್ಟಿದಾಗ ಕಾಣುವ ದರ್ಶನ ಮತ್ತು ಉಂಟಾಗುವ ಅನುಭವಗಳನ್ನು ಹೇಳುತ್ತವೆ. ಮನುಷ್ಯರ ಅಸ್ತಿತ್ವಕ್ಕೆ ಮೂಲವಾದ ಪರಮಶಕ್ತಿಯ ಕಡೆಗೆ ನಿರ್ದೇಶನ ಮಾಡುತ್ತವೆ.

ಅವನ್ನು ತಮ್ಮ ಜೀವನದ ಕೇಂದ್ರಬಿಂದುವಾಗಿ ಮಾಡಿಕೊಂಡು ಒಂದು ಸುಸಂಸ್ಕೃತವಾದ ನಾಗರೀಕತೆಯನ್ನು ರಚಿಸಿಕೊಂಡಿದ್ದು ಭಾರತೀಯರ ವೈಶಿಷ್ಟ್ಯ. ಅವನ್ನು ಸಾಧಿಸಿ ಅವರು ತಮ್ಮ ಜೀವನವನ್ನು ಸತ್ಯಮಯವಾಗಿಯೂ, ಮಂಗಳಮಯವಾಗಿಯೂ ಮತ್ತು ಸುಂದರವಾಗಿಯೂ ಮಾಡಿಕೊಂಡರು. ಅವುಗಳ ನೆನೆಪು ಮರೆಯದಂತೆ ಇರುವುದಕ್ಕೋಸ್ಕರವಾಗಿ ಪದೇ ಪದೇ ಅವುಗಳ ಜ್ಞಾಪಕವನ್ನುಂಟುಮಾಡುವ ಚಿಹ್ನೆಗಳಿಂದ ತಮ್ಮ ಶರೀರವನ್ನು ಅಲಂಕರಿಸಿಕೊಂಡರು. ಅವಕ್ಕೆ ಅನುಗುಣವಾಗಿ ತಮ್ಮ ಉಡುಗೆ ತೊಡಿಗೆಗಳನ್ನು ಬಹಳ ಕುಶಲತೆಯಿಂದ ಅಳವಡಿಸಿಕೊಂಡರು. ತಾವು ಸಾಧಿಸಿದ್ದ ಅಚ್ಚನ್ನು ಅವುಗಳ ಮೇಲೆ ಒತ್ತಿದರು.

ಆ ರೀತಿ ಅವರು ಬಳಕೆಗೆ ತಂದ ಚಿಹ್ನೆಗಳ ಪೈಕಿ ಕುಂಕುಮುವೂ ಒಂದು. ಅದು ಸೃಷ್ಟಿಯಲ್ಲಿ ಪ್ರಕೃತಿ ರೂಪಿಣಿಯಾದ ಸ್ತ್ರೀಯಪಾತ್ರವನ್ನು ಸಮಗ್ರವಾಗಿ ಮತ್ತು ಸಾರಭೂತವಾಗಿ ಪ್ರತಿಬಿಂಬಿಸುವ ಚಿಹ್ನೆಯಾಗಿದೆ. ಅದನ್ನು ಇಡುವುದು ಚಿಚ್ಛಕ್ತಿಯ ಸ್ಥಾನವಾದ ಭ್ರೂಮಧ್ಯ ಚಕ್ರದ ನೇರದಲ್ಲಿ. ಮನೋರೂಪಳಾದ ಬಿಂದುಮಯೀ ಶಕ್ತಿಯು ಇರುವ ಸ್ಥಾನದಲ್ಲಿ. ಆ ರೀತಿ ಮಾಡುವುದರ ಮೂಲಕ ಭಾರತೀಯ ನಾರಿಯು ಯಾವ ರಹಸ್ಯಮಯವಾದ ಕೇಂದ್ರದಿಂದ ತಾಯ್ತನ ರೂಪವಾದ ತನ್ನ ಸಾಮರ್ಥ್ಯವು ಉತ್ಪನ್ನವಾಗುತ್ತದೆಯೋ ಆ ದೈವೀಕೇಂದ್ರವನ್ನು ನಿರ್ದೇಶಿಸುತ್ತಾಳೆ. ಈ ವಿಜ್ಞಾನದ ಅರಿವಿನಿಂದ ಕೂಡಿಯೇ ಎಲ್ಲರೂ ಕುಂಕುಮವನ್ನಿಟ್ಟುಕೊಳ್ಳುತ್ತಾರೆಯೇ ಎಂದು ಒಬ್ಬರು ಪ್ರಶ್ನಿಸಬಹುದು. ಅದರ ಪರಿಚಯವಿಲ್ಲದಿದ್ದರೂ, ಆ ಸ್ಥಾನವೇ ಅಂತಹದುದಾದುರಿಂದ, ಮನಸ್ಸಿನ ಮೇಲೆ ಅದು ತನ್ನ ಪರಿಣಾಮವನ್ನುಂಟು ಮಾಡುತ್ತದೆಂದು ಹೇಳಬಹುದು. ಪ್ರಕೃತಿರೂಪವಾದ ಚೈತನ್ಯಶಕ್ತಿಯು ಕುಂಕುಮವನ್ನಿಡುವವರಲ್ಲಿ ಮತ್ತು ಇಡದವರಲ್ಲಿ ಇಬ್ಬರಲ್ಲಿಯೂ ಕೆಲಸ ಮಾಡುತ್ತದೆ. ಇಡುವವರಲ್ಲಿ ಸಂಸ್ಕೃತಿ ಇದೆ, ಇಡದವರಲ್ಲಿ ಸಂಸ್ಕೃತಿ ಇಲ್ಲ ಎಂದು ಹೇಳಬೇಕಾಗುತ್ತದೆ. ಕ್ರೈಸ್ತ ಪಾದ್ರಿಗಳು "ಕುಂಕುಮವು ಶೋಣಿತವನ್ನು ಸೂಚಿಸುತ್ತದೆ. ಹಿಂದೂ ಸ್ತ್ರೀಯರು ನಾಚಿಕೆಯಿಲ್ಲದೆ ಅದನ್ನು ತಮ್ಮ ಹಣೆಯ ಮೇಲೆ ಧರಿಸಿ ತಮ್ಮ ಕಾಮವಾಸನೆಯನ್ನು ಪ್ರಕಟಿಸುತ್ತಾರೆ" ಎಂದು ಅಪಪ್ರಚಾರ ಮಾಡಿರುತ್ತಾರೆ. ಸ್ತ್ರೀಯ ಸೌಭಾಗ್ಯವಿರುವುದು ಅವಳ ತಾಯ್ತನದಲ್ಲಿ, ಅದರ ಭೌತಿಕರೂಪವಾದ ಶೋಣಿತವು ಸೃಷ್ಟಿಯಲ್ಲಿ ಅಮೂಲ್ಯವಾದ ಸ್ಥಾನವನ್ನಿರಿಸಿಕೊಂಡಿರುತ್ತದೆಂಬುದರಲ್ಲಿ ಸಂದೇಹವಿಲ್ಲ. ಆದರೆ ಹಿಂದೂಸ್ತ್ರೀಯು ಕುಂಕುಮವನ್ನಿಟ್ಟುಕೊಂಡಾಗ ಚಿಂತಿಸುವುದು ಶೋಣಿತವನ್ನು ಕುರಿತಲ್ಲ. ಅವಳು ಅದನ್ನಿಡುವುದು ವಿಶ್ವದ ಮಾತಾಪಿತೃಗಳಾದ ಪಾರ್ವತೀಪರಮೇಶ್ವರರಿರುವ, ಅನ್ವರ್ಥವಾದ ಹೆಸರುಳ್ಳ ಆಜ್ಞಾಚಕ್ರದಲ್ಲಿ. ಆ ಜಾಗದಲ್ಲಿ ಕುಂಕುಮವನ್ನಿಡುವುದರಿಂದಲೇ ಅವಳು ತನ್ನ ಮತ್ತು ಎಲ್ಲರ ಬಾಳಿಗೆ ಕಾರಣರಾದ ಆದಿದಂಪತಿಗಳನ್ನು ಸ್ಮರಿಸುತ್ತಾಳೆಂದು ಹೇಳಬಹುದು. ಅದು ಅವಳು ಅವರಿಗೆ ಸಲ್ಲಿಸುವ ಪೂಜೆ,ಉಪಚಾರ.  

ಕುಂಕುಮವು ಬರೀ ಸೃಷ್ಟಿವಿಜ್ಞಾನವನ್ನು ಮಾತ್ರ ಪ್ರತೀಕಿಸುವ ಚಿಹ್ನವಲ್ಲ, ಅದರ ಕಲ್ಪವನ್ನೂ ಮತ್ತು ಅದರ ವಿಷಯದಲ್ಲಿ ಸಮಾಜದಲ್ಲಿ ಬಂದಿರುವ ಪರಂಪರೆಗಳನ್ನೂ ನೋಡಿದಾಗ ಅದು ಜ್ಞಾನ ಮತ್ತು ಯೋಗಗಳನ್ನೂ ತನ್ನಲ್ಲಿ ಒಳಗೊಂಡಿರುವುದು ಸ್ಪಷ್ಟವಾಗುತ್ತದೆ. ಬರೀ ಹಣೆಯಲ್ಲಿ ಪೂಜೆ ಇತ್ಯಾದಿ ಶುಭಕರ್ಮಗಳನ್ನು ಮಾಡಬಾರದೆಂಬ ಪರಂಪರೆ ಬಂದಿರುತ್ತದೆ. ಕಾರಣ ಭಾರತೀಯರ ದೃಷ್ಟಿಯಲ್ಲಿ ಆಜ್ಞಾಚಕ್ರ ಮತ್ತು ಅದರ ಮೇಲಿನ ಜಾಗಗಳು ಪ್ರಬೋಧಗೊಳ್ಳದಿದ್ದರೆ ಪೂಜಾಕಾರ್ಯವು ಸಂಪನ್ನವಾಗುವುದೇ ಇಲ್ಲ. ಕುಂಕುಮವು ಬಿಂದುರೂಪವಾಗಿರುತ್ತದೆ ಅಥವಾ ತಿಲಕ ರೂಪವಾಗಿರುತ್ತದೆ. "ಬಿಂದುರೀಶ್ವರಸಂಜ್ಞಃ" ತಿಲಕವಂತೂ ದೀಪಶಿಖೆಯ ಆಕಾರದಲ್ಲಿದ್ದು, ಅಧ್ಯಾತ್ಮದೀಪವನ್ನೇ ಸಂಕೇತಿಸುತ್ತದೆ. ಸರಿಯಾದ ಮನೋಧರ್ಮದಿಂದ ಕೂಡಿ ಕುಂಕುಮವನ್ನು ಧರಿಸಿದ ಮಾತ್ರದಿಂದಲೇ ಒಬ್ಬ ಸ್ತ್ರೀಯು ಪವಿತ್ರಳಾಗುತ್ತಾಳೆಂಬುದರಲ್ಲಿ ಸಂದೇಹವಿಲ್ಲ. ಒಬ್ಬ ಸ್ತ್ರೀಯ ವಯಸ್ಸು  ಮತ್ತು ಅವಸ್ಥೆಗೆ ಅನುಗುಣವಾಗಿ ಕುಂಕುಮದ ಸ್ಥಾನ, ವರ್ಣ ಮತ್ತು ಆಕಾರಗಳಲ್ಲಿ ಸಹ ವ್ಯತ್ಯಾಸವಾಗುತ್ತದೆ. ತನ್ನ ತಾಯ್ತನದ ಕರ್ತವ್ಯವನ್ನು ನಿರ್ವಹಣೆ ಮಾಡಿ ಮುಗಿಸಿದನಂತರ, ಸ್ತ್ರೀಗೆ ಸಹ ತನ್ನ ಆತ್ಮೋದ್ಧಾರ ಮಾಡಿಕೊಳ್ಳುವ ಸಮಯ ಬರುತ್ತದೆ. ಅದಕ್ಕೆ ಅನುಗುಣವಾಗಿ ಅವಳು ಕುಂಕುಮದಲ್ಲಿ ವ್ಯತ್ಯಾಸ ಮಾಡಿಕೊಳ್ಳುತ್ತಾಳೆ. ಜ್ಞಾನನೇತ್ರಕ್ಕೆ ಕಾಣುವ ದಿವ್ಯವಾದ ಆಕಾರಗಳಿಂದ ತನ್ನ ಹಣೆಯನ್ನು ಅಲಂಕರಿಸಿಕೊಳ್ಳುತ್ತಾಳೆ. ಪರಂಪರಾಗತವಾಗಿ ಬಂದ ಆಕಾರಗಳನ್ನು ಹಣೆಯಲ್ಲಿ ಏಕಾಗ್ರವಾದ ಮನಸ್ಸಿನಿಂದ ಧರಿಸುವುದರ ಮೂಲಕ, ಅವುಗಳ ಮೂಲವಿರುವೆಡೆಗೆ ಹೋಗುವ ಆಶಯದಿಂದ ಕೂಡಿರುತ್ತಾಳೆ.      

ಪತಿಯು ಮೃತನಾದಾಗ ಕುಂಕುಮವನ್ನಿಟ್ಟುಕೊಳ್ಳುವುದನ್ನು ನಿಲ್ಲಿಸಿ ಬಿಡುವ ಪದ್ಧತಿ ಸಹ ಇರುತ್ತದೆ. ಕಾರಣ "ಪುರುಷ" ರೂಪನಾದ ಪತಿಯು ಮರೆಯಾದನಂತರ " ಪ್ರಕೃತಿ"  ರೂಪಳಾದ ಸತಿಗೆ ಸೃಷ್ಟಿಯಲ್ಲಿ ಮಾಡುವ ಕರ್ತವ್ಯವಿಲ್ಲ. ಆದಕಾರಣ ಆನಂತರ ಸಂಪ್ರದಾಯಾನುಸಾರ ಬೇರೆ ಬೇರೆ ಚಿಹ್ನಗಳು ಅವಳ ಹಣೆಯಲ್ಲಿ ಕುಂಕುಮದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ.

ಹೀಗೆ ಕುಂಕುಮವು ಆಳವಾದ ಆಧ್ಯಾತ್ಮಿಕ  ಮತ್ತು ಧಾರ್ಮಿಕ ಅರ್ಥವನ್ನು ಹೊತ್ತ ಚಿಹ್ನವಾಗಿದೆ. ಅದನ್ನು ತ್ಯಾಗ ಮಾಡುತ್ತಿರುವವರು ತಮ್ಮ ಆಧ್ಯಾತ್ಮಿಕ ಸಂಸ್ಕೃತಿಯಿಂದ ತಮ್ಮನ್ನು ಬೇರೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಹಣೆ ಎಷ್ಟು ಶೂನ್ಯವಾಗಿರುತ್ತದೆಯೋ ಮನಸ್ಸೂ ಆಷ್ಟೇ ಶೂನ್ಯವೆಂಬುದನ್ನು ಅವರು ಜ್ಞಾಪಿಸಿಕೊಳ್ಳುವ ಮಾರ್ಗವನ್ನು ಹಿಡಿಯುತ್ತಿದ್ದಾರೆ. ಅದು ವಿಷಾದಕ್ಕೆ ವಿಷಯವೆಂಬುದರಲ್ಲಿ ಸಂದೇಹವಿಲ್ಲ. 

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ನವಂಬರ 1981 ರಲ್ಲಿ  ಪ್ರಕಟವಾಗಿದೆ.