Sunday, July 19, 2020

ರಾಮಾಯಣದಲ್ಲಿ ಬೀಭತ್ಸ ರಸ (Ramayanadalli Bibhathsa Rasa)

 ಲೇಖಕರು: ಡಾII ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in)   



ಬೀಭತ್ಸರಸಕ್ಕೆ ಜುಗುಪ್ಸೆಯೇ ಸ್ಥಾಯಿಭಾವ.  ಪ್ರಾಯಃ ಬೀಭತ್ಸರಸವು ಯುದ್ಧಾನಂತರ ಯುದ್ಧಭೂಮಿಯಲ್ಲಿ ಅಭಿವ್ಯಕ್ತವಾಗುವ ರಸವಾಗಿದೆ. ಈ ರಸವೇ ಪ್ರಾಯಶಃ ನಿರ್ವೇದಕ್ಕೂ ಕಾರಣವಾಗುತ್ತದೆ. ಜನಸ್ಥಾನದಲ್ಲಿ ಸಂಭವಿಸಿದ ಯುದ್ಧದ ನಂತರ ಮತ್ತು ಲಂಕೆಯಲ್ಲಿ ನಡೆದ ಭಯಂಕರವಾದ ಯುದ್ಧದ ನಂತರ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ ಈ ರಸ ಅಭಿವ್ಯಕ್ತವಾಗಿರುವುದನ್ನು ಕಾಣುತ್ತೇವೆ.

ಅವತಾರದ ಉದ್ದೇಶಗಳಲ್ಲಿ ಒಂದಾದ ದುಷ್ಟಶಿಕ್ಷಣವು, ದೇಹದಲ್ಲಿ ಸೇರಿಕೊಂಡು ದೇಹವನ್ನೇ ನಾಶಮಾಡುವ ರೋಗಾಣುಗಳ ನಿರ್ಮೂಲನದಂತೆ. ಈ ವಿಷಯದಲ್ಲಿ 'ಸಹಬಾಳ್ವೆ' ಸಲ್ಲ. ಹದಿಮೂರು ವರ್ಷಗಳ ಕಾಲ ದಂಡಕಾರಣ್ಯದ ಋಷ್ಯಾಶ್ರಮಗಳಲ್ಲಿ ವಾಸಿಸಿದ ಶ್ರೀರಾಮ, ಅಗಸ್ತ್ಯಾಶ್ರಮಕ್ಕೆ ಬಂದು, ತನ್ನ ವೈಷ್ಣವಧನುಸ್ಸನ್ನು ತೆಗೆದುಕೊಂಡು, ಸಪತ್ನೀಸಹೋದರನಾಗಿ ಪಂಚವಟಿಗೆ ಬಂದು ನೆಲೆಸುತ್ತಾನೆ.  ಲಕ್ಷ್ಮಣನಿಂದುಂಟಾದ ಸಹೋದರಿ ಶೂರ್ಪಣಖಿಯ ವೈರೂಪ್ಯದಿಂದ ಕುಪಿತರಾದ ಖರದೂಷಣಾದಿಗಳು, ಹದಿನಾಲ್ಕು ಸಾವಿರ ರಾಕ್ಷಸರೊಡನೆ ಅಕ್ರಮಣಮಾಡಿದಾಗ, ಅಸಹಾಯಶೂರನಾಗಿ, ಏಕಾಕಿಯಾಗಿ ಜನಸ್ಥಾನದಲ್ಲಿ ಯುದ್ಧಮಾಡಿ ಕೊಲ್ಲುತ್ತಾನೆ ಶ್ರೀರಾಮ.

ದೂಷಣನು ಶ್ರೀರಾಮನಿಂದ ವಧಿಸಲ್ಪಡುತ್ತಿದ್ದರೂ ತನ್ನ ದೌಷ್ಟ್ಯವನ್ನು ಪ್ರದರ್ಶಿಸುತ್ತಾ, ಋಷ್ಯಾಶ್ರಮಗಳಲ್ಲೆಲ್ಲಾ ಓಡಾಡಿ ವಸಾ-ರಕ್ತ-ಮಾಂಸಾದಿಗಳನ್ನು ಎಲ್ಲಾ ಕಡೆಯಲ್ಲೂ ಚೆಲ್ಲುತ್ತಾ ಅಪವಿತ್ರಗೊಳಿಸುತ್ತಾನೆ. ತಪೋಭೂಮಿಯು ಅಂದು ಯುದ್ಧಭೂಮಿಯಾಗಿ ಎಲ್ಲೆಲ್ಲೂ ಕತ್ತರಿಸಲ್ಪಟ್ಟ ರಾಕ್ಷಸರ ತೋಳುಗಳಿಂದಲೂ, ಕತ್ತುಗಳಿಂದಲೂ, ತಲೆಗಳಿಂದಲೂ, ಕಣುಗಳಿಂದಲೂ, ಕಿವಿಗಳಿಂದಲೂ, ಕಾಲುಗಳಿಂದಲೂ, ಹೀಗೆ ಅನೇಕ ದೇಹಭಾಗಗಳಿಂದ ತುಂಬಲ್ಪಟ್ಟಿತ್ತು ಮತ್ತು ಇವನ್ನು ತಿನ್ನಲು ಬಂದಿದ್ದ ಹದ್ದುಗಳಿಂದಲೂ, ಕಾಗೆಗಳಿಂದಲೂ ಮತ್ತು ಪ್ರಾಚೀಕಪಕ್ಷಿಗಳಿಂದಲೂ ತುಂಬಿತ್ತು. ಈ ದೃಶ್ಯವು ನೋಡುವವರ ಮನಸ್ಸಿನಲ್ಲಿ ಜುಗುಪ್ಸೆಯನ್ನು ಉಂಟುಮಾಡಿ ಬೀಭತ್ಸರಸದ ಅಭಿವ್ಯಕ್ತಿಗೆ ಕಾರಣವಾಯಿತು.
ಅಂತೆಯೇ, ಲಂಕೆಯಲ್ಲಿ ಕಪಿಸೈನ್ಯಕ್ಕೂ ರಾಕ್ಷಸಸೈನ್ಯಕ್ಕೂ ನಡೆದ ಯುದ್ಧದಲ್ಲಿ ಇದೇ ರೀತಿಯ ಅಥವಾ ಇದಕ್ಕಿಂತಲೂ ಭಯಂಕರವಾದ ಜುಗುಪ್ಸೆಯನ್ನು ಉಂಟುಮಾಡುವ ಸನ್ನಿವೇಶವು ಒದಗಿತ್ತು. ಕತ್ತರಿಸಲ್ಪಟ್ಟ ರಾಕ್ಷಸರ ಮತ್ತು ಕಪಿಗಳ ದೇಹಾಂಗಗಳಿಂದಲೂ, ಅಶ್ವ-ಗಜ-ರಥಾದಿಗಳ ಭಾಗಗಳಿಂದಲೂ ತುಂಬಿತ್ತು ರಣರಂಗ. ಇದನ್ನು ನೋಡಿದವರಿಗೆ ಜುಗುಪ್ಸೆಯನ್ನೂ, ಸಂಸ್ಕಾರಿಗಳಿಗೆ ಮತ್ತು ಪರಿಪಕ್ವವಾದ ಮನಸ್ಸುಳ್ಳವರಿಗೆ ನಿರ್ವೇದವನ್ನೂ ಉಂಟುಮಾಡುವುದರಲ್ಲಿ ಸಂಶಯವಿಲ್ಲ. ಶೃಂಗಾರಾದಿ ಸಕಲರಸಗಳೂ ರಸಪುರುಷನಾದ ಪರಮಾತ್ಮನಲ್ಲಿ, ಶಾಂತರಸದಲ್ಲಿ ತಮ್ಮ ನೆಲೆಯನ್ನು ಕಾಣುತ್ತವೆಂಬ ಶ್ರೀರಂಗಮಹಾಗುರುವಿನ ಮಾತು ಎಷ್ಟು ನೈಜ!

ಇದರಲ್ಲಿ ಒಂದು ವಿಷಯ ಗಮನಾರ್ಹ. ಯುದ್ಧದಲ್ಲಿ ಸತ್ತ ರಾಕ್ಷಸರ ದೇಹಾದಿಗಳನ್ನು ಆಗಾಗ ಸಮುದ್ರಕ್ಕೆ ಎಸೆದು ಯುದ್ಧಭೂಮಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಲಾಗುತ್ತಿತ್ತು.  ಕಪಿಗಳ ದೇಹಗಳು ಮಾತ್ರ ರಣರಂಗದಲ್ಲಿಯೇ ಬಿದ್ದಿದ್ದವು.  ಇದು ಒಂದು ದೃಷ್ಟಿಯಿಂದ ಒಳಿತೇ ಆಯಿತು.  ಯುದ್ಧವೆಲ್ಲಾ ಮುಗಿದ ಬಳಿಕ ಶ್ರೀರಾಮನನ್ನು ಅಭಿನಂದಿಸಲು ಬಂದ ಇಂದ್ರನು, ಶ್ರೀರಾಮನ ಪ್ರಾರ್ಥನೆಗೆ ಓಗೊಟ್ಟು, ಸ್ವರ್ಗಲೋಕದಿಂದ ಗರುಡನಿಂದ ಅಮೃತವನ್ನು ತರಿಸಿ, ರಣರಂಗದಲ್ಲಿ ಅಮೃತಸೇಚನೆಯನ್ನು ಮಾಡಿಸುತ್ತಾನೆ.  ಆಗ ಶ್ರೀರಾಮನ ಕಾರ್ಯಕ್ಕಾಗಿ ಬಂದು ಯುದ್ಧದಲ್ಲಿ ಹೋರಾಡಿ ಅಸುನೀಗಿದ್ದ ವಾನರರೆಲ್ಲರೂ ಮಲಗಿ ಎದ್ದವರಂತೆ ಮತ್ತೆ ಜೀವವನ್ನು ಪಡೆಯುತ್ತಾರೆ. ಭಕ್ತರ ವಿಷಯದಲ್ಲಿ 'ಅಭಯಂ ಸರ್ವಭೂತೇಭ್ಯಃ ದದಾಮ್ಯೇತದ್ವ್ರತಂ ಮಮ' ಎಂಬ ಭಗವಂತನ ಭರವಸೆಗೆ ಇದೊಂದು ಉತ್ತಮ ನಿದರ್ಶನ. 

ಸೂಚನೆ:  19/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.