Sunday, July 26, 2020

ಮಾತೃದೇವೋ ಭವ! ಪಿತೃದೇವೋ ಭವ! (Matrdevo Bhava! PitrRdevo Bhava!)

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)


ಲೋಕದಲ್ಲಿ ಓಡಾಡುವ ಪ್ರತಿಯೊಂದು ಜೀವಿಯ ಹಿಂದೆಯೂ ತಂದೆತಾಯಿಯರ ಉಪಕಾರ ಅಡಗಿದೆ. ಈ ಲೋಕಕ್ಕೆ ನಮ್ಮನ್ನು ತಂದು  ತಂದೆತಾಯಿಯರು, ಲಾಲನೆ-ಪೋಷಣೆಗಳಿಂದ ನಮ್ಮನ್ನು ಸ್ವತಂತ್ರವಾಗಿ ವ್ಯವಹರಿಸಲು ಸಮರ್ಥರನ್ನಾಗಿ ಮಾಡುತ್ತಾರೆ. ಇತರ ಪ್ರಾಣಿಗಳ ಶರೀರದ ಗಾತ್ರ ಮತ್ತು ತೂಕಗಳಿಗೆ ಸಾಪೇಕ್ಷವಾಗಿ ಹೋಲಿಸಿದರೆ, ಮನುಷ್ಯನಲ್ಲಿ ಮೆದುಳಿನ ಆಕಾರವು ಹಿರಿದಾದದ್ದು. ಮನುಷ್ಯನ ಮೆದುಳು ಹೆಚ್ಚು ಬೆಳವಣಿಗೆಯನ್ನು ಹೊಂದಿ ಮನುಕುಲವನ್ನು ಜಗತ್ತಿನಲ್ಲಿ ಅವನನ್ನು ಅಗ್ರಸ್ಥಾನದಲ್ಲಿ ಇರಿಸಿದೆ. ಮನುಷ್ಯರಲ್ಲಿ  ಸುದೀರ್ಘಕಾಲದ ಗರ್ಭಧಾರಣೆ ಮತ್ತು ಪೋಷಣೆ, ಈ ತೀಕ್ಷ್ಣಬುದ್ಧಿಶಕ್ತಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಿದೆ ಎಂಬುದು ವಿಜ್ಞಾನದ ನಿಲುವೂ ಆಗಿದೆ. ಇನ್ನು, ಮಕ್ಕಳು  ಬೆಳೆಯುವ ಹಂತದಲ್ಲಿ ಕಲಿಯುವ ಮೊಟ್ಟಮೊದಲನೆಯ ನಡೆ, ನುಡಿ, ಆಚಾರ, ವ್ಯವಹಾರವೆಲ್ಲಕ್ಕೂ ಪೋಷಕರ ಅನುಕರಣೆಯೇ ಆಧಾರ.  


ಪಡೆದ ಉಪಕಾರವನ್ನು ಸ್ಮರಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ನಾಯಿ ಮುಂತಾದ ಅನೇಕ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಆದರೆ ಇದನ್ನೂ ಮೀರಿ ಹಿಮ್ಮುಖನಾದ ನೋಟವನ್ನು ಹರಿಸಿ, ನಾನು ಎಲ್ಲಿಂದ ಬಂದೆ ? ಯಾರು ನನ್ನನ್ನು ಇಲ್ಲಿಗೆ ತಂದವರು?  ಮುಂತಾದ ಆತ್ಮವಿಮರ್ಶೆಯನ್ನು ನಡೆಸುವ ಶಕ್ತಿ ಮನುಷ್ಯನ ವೈಶಿಷ್ಟ್ಯ. ಇಂತಹ ಪಶ್ಚಿಮಾಭಿಮುಖವಾದ ಒಳದೃಷ್ಟಿಯನ್ನು ಇನ್ನೂ ಆಳಕ್ಕೆ ಹರಿಸಿ ತಪಸ್ಯೆಯಾಗಿ ಬೆಳೆಸಿದವರು, ಭಾರತೀಯ ಮಹರ್ಷಿಗಳು. ತಂದೆತಾಯಿಯರ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ ಅವರು "ಮಾತೃದೇವೋ ಭವ! ಪಿತೃದೇವೋ ಭವ!"  ಎಂದು ಉದ್ಘೋಷಿಸಿದ್ದು ಸ್ವಾಭಾವಿಕವೇ ಸರಿ. 


ಮಹರ್ಷಿಗಳು ಜನ್ಮಕೊಟ್ಟ ತಂದೆ-ತಾಯಿಗಳನ್ನೂ ಮೀರಿ ಅವರಲ್ಲಿ ಆಡುವ ತಂದೆತನ-ತಾಯಿತನಗಳನ್ನು ಹಿಂಬಾಲಿಸಿಹೋದರು. ಪ್ರಕೃತಿಮಾತೆಯು ವೃಕ್ಷ-ವನಸ್ಪತಿಗಳಿಂದ ಜೀವಕೋಟಿಗಳನ್ನು ಸಲಹುತ್ತಿದ್ದಾಳೆ. ಸಸಿಗಳಿಗೆ ಆಹಾರ ಸಿದ್ಧಪಡಿಸಲು ಮಣ್ಣು, ಜಲ, ಗಾಳಿಗಳನ್ನು ನೀಡಿ, ಪಾಕಮಾಡುವ ಬೆಳಕು-ಉಷ್ಣತೆಗಳನ್ನು ಧರಿಸಿ, ಬೆಳೆಯುವುದಕ್ಕೆ ಸ್ಥಳಾವಕಾಶವನ್ನು ನೀಡಿದ್ದಾಳೆ. ಆಕೆಯ ಈ ಔದಾರ್ಯವು ತಾಯಿತನದ ಉತ್ಕೃಷ್ಟ ನಿದರ್ಶನವೆಂದು ಭಾವಿಸಿದ ಋಷಿಗಳು ಆಕೆಯನ್ನು ಪೃಥ್ವೀಮಾತೆಯೆಂದು ಕೊಂಡಾಡಿದರು. ದೂರದಲ್ಲಿರುವಂತೆ ಕಂಡರೂ, ಪ್ರಖರವಾದ ಕಿರಣಗಳನ್ನು ಸೂಸುವ ಸೂರ್ಯನು ನಮಗೆ ಅತ್ಯಂತ ಉಪಕಾರಿ. ಸೂರ್ಯದೇವನು ತಂದುಕೊಡುವ ಪ್ರಕಾಶದಿಂದಲೇ ಪೃಥ್ವೀಮಾತೆಯ ಪಾಕಶಾಲೆ ಜರುಗುವುದರಿಂದ ಆತನನ್ನೂ ಆತನು ಬೆಳಗುವ ದ್ಯುಲೋಕವನ್ನೂ ತಂದೆಯೆಂದು ಭಾವಿಸಿ,' ದ್ಯೌ: ಪಿತಾ; ಪೃಥಿವೀ ಮಾತಾ,' ಎಂದರು. 


ಈ ತಂದೆತಾಯಿತನವನ್ನು ಎಲ್ಲೆಡೆ ಕಂಡವರು ಋಷಿಗಳು. ಮಗುವು ಸ್ಥೂಲರೂಪದಲ್ಲಿ ತಾಯಿಯ ಗರ್ಭದಿಂದ ಹೊರಬರುವುದು ಪ್ರತ್ಯಕ್ಷ ಸತ್ಯ ಆದರೆ, ಬೀಜಪ್ರದನಾದ ತಂದೆಯ ಪಾತ್ರ ಪರೋಕ್ಷವಾಗಿರುತ್ತದೆ.  ಸೃಷ್ಟಿಯಲ್ಲಿ ಬೆಳೆಯುವ ಸಸಿಯ ಹಿಂದಿರುವ ಬೀಜದಲ್ಲಿ ತಂದೆತನವನ್ನೂ, ಪೋಷಕಾಂಶಗಳನ್ನು ನೀಡಿ, ಬೆಳೆಸುವ ಭೂಮಿಯಲ್ಲಿ ತಾಯಿತನವನ್ನೂ ಕಂಡರು. ಸಂಗೀತಕಚೇರಿಯಲ್ಲಿ ವಿಸ್ತಾರವಾಗಿ ಗಾಯಕನು ಹಾಡುವ ಸಂಗೀತವೇ ತಾಯಿಯಾದರೆ, ಸ್ವರಗಳಿಗೆಲ್ಲಾ ಆಧಾರವಾಗಿರುವ ಹಿಂಬದಿಯ ತಂಬೂರಿಶ್ರುತಿಯನ್ನು ತಂದೆ ಎನ್ನಬಹುದು. ಅತ್ತ ತಂಬೂರಿಶ್ರುತಿಯನ್ನೇ ಗಮನಿಸಿದರೆ, ಅದನ್ನೇ ತಾಯಿಯೆಂದು ಭಾವಿಸಿದರೆ, ಶ್ರುತಿಯ ಹಿಂದಿರುವ ಲಯವೇ ತಂದೆ. ಸ್ಥೂಲವಾದ ಜಗತ್ತನ್ನು  ಪ್ರಕೃತಿ-ಮಾತಾ ಎಂದು ಕರೆಯುವುದುಂಟು. ಗೂಢವಾಗಿ ಚೈತನ್ಯರೂಪದಲ್ಲಿ ಅಡಗಿರುವ ಚೈತನ್ಯಶಕ್ತಿಯನ್ನು ಪುರುಷ ಎಂದು ಕರೆಯುತ್ತಾರೆ. ಇಲ್ಲಿ ಪುರುಷ-ಸ್ತ್ರೀ, ಎಂಬ ಅರ್ಥವಲ್ಲ. ಹೊರಮೈ ಗಂಡಾದರೂ ಹೆಣ್ಣಾದರೂ, ಅದನ್ನುಪ್ರಕೃತಿಯೆಂದೇ ವ್ಯವಹರಿಸುತ್ತಾರೆ. ಹೀಗೆ ತಾಯಿತನವು ಪ್ರತ್ಯಕ್ಷಗೋಚರ; ತಂದೆತನ ಗೂಢ.- ಇಂದು ಈ ಆಲೋಚನೆಯನ್ನು ಮುಂದುವರಿಸಿದರೆ, ಬಲ್ಬ್ನ ಹೊರಮೈ ತಾಯಿತನವನ್ನು ಪ್ರತಿನಿಧಿಸಿದರೆ, ಅಲ್ಲಿ ಗೂಢವಾಗಿ ಹರಿವ ವಿದ್ಯುತ್ ಶಕ್ತಿಯು ಚೈತನ್ಯರೂಪಿಯಾದ ತಂದೆಯೆನಿಸುತ್ತದೆ. 


ವಾಸ್ತವಿಕವಾಗಿ ನೋಡಿದರೆ, ಮಾತಾ-ಪಿತಾ ಅಥವಾ ಪ್ರಕೃತಿ-ಪುರುಷ ಎಂಬ ಯುಗಳತತ್ತ್ವಗಳು ಸೃಷ್ಟಿಯೆಲ್ಲವನ್ನೂ ವ್ಯಾಪಿಸಿವೆ; ಸೃಷ್ಟಿಯನ್ನು ಧರಿಸಿವೆ. ಅವರಿಬ್ಬರೂ ಅವರವರ ಪಾತ್ರಗಳನ್ನು ವಹಿಸಿದರೇನೇ ವ್ಯವಹಾರ. ಇಲ್ಲವಾದರೆ ಅಪಹಾರ. ಸೂರ್ಯ-ಭೂಮಿಗಳು ಒಟ್ಟು ಸೇರಿ ಕೆಲಸಮಾಡಿದ್ದರಿಂದ ಜೀವಗಳ ಉಗಮಕ್ಕೆ ಭುವಿಯಲ್ಲಿ ಸೂಕ್ತ ಸನ್ನಿವೇಶಗಳು ಒದಗಿದವು. ಜೀವಸೃಷ್ಟಿಯ ಆದಿಯಾಯಿತು. ಬೀಜ-ಕ್ಷೇತ್ರ ಸೇರಿದರೆ ಫಲ-ಪುಷ್ಪ ಭರಿತ ವೃಕ್ಷವುಂಟು. ಸಂಗೀತ ಕಚೇರಿಯಲ್ಲಿ ಆಲಾಪನೆಯು ಶ್ರುತಿಯೊಡನೆ ಸೇರದಿದ್ದರೆ, ಕೇಳುಗರ ವಿಲಾಪವೇ ಫಲ. ಚೈತನ್ಯ ಶಕ್ತಿಯು, ಸ್ಥೂಲಶರೀರವನ್ನು ಬಿಟ್ಟರೆ ವಿಲಾಪ. ತಂದೆ-ತಾಯಿಯರ ಒಗ್ಗೂಡುವಿಕೆಯಿಂದ, (ಚೈತನ್ಯ-ಸ್ಥೂಲ ಶರೀರಗಳ ಸೇರುವಿಕೆಯಿಂದ) ನಾವೆಲ್ಲರೂ ಆದೆವು. ಬಲ್ಬ್, ವಿದ್ಯುತ್ ಒಂದಾದರೆ ಸುತ್ತಲೂ ಪ್ರಕಾಶ.   


ಅಂತೆಯೇ ಮತ್ತೊಂದು ವಿಶೇಷಾರ್ಥದಲ್ಲಿ ಪುರುಷ-ಪ್ರಕೃತಿಗಳ ಸೇರುವಿಕೆಯನ್ನು ಹೇಳುತ್ತಾರೆ, ಮಹರ್ಷಿಗಳು. ನಮ್ಮ ಮೈ-ಮನಗಳು ಸದಾಕಾಲವೂ ಸುತ್ತಲೂ ಇರುವ ಆಕರ್ಷಕ ವಿಷಯಗಳಲ್ಲಿ ಮುಳುಗುತ್ತಿರುತ್ತದೆ. ಅಲ್ಲಿ ಆಕರ್ಷಣೆ ಮುಗಿದ ಕೂಡಲೇ, ಪುನಃ ಅಲೆದಾಟ ಪ್ರಾರಂಭ. ಅದೇ ಅಲೆದಾಡುವ ನಮ್ಮ ಮೈಮನಗಳು ಒಳಮುಖವಾಗಿ ಮುಳುಗಿದರೆ ಅದು ತಪವೇ ಸರಿ. ಮನವು ಒಳ ಚೈತನ್ಯದೊಡನೆ ಸೇರಿದರೆ, ಇದು ವಿಶೇಷವಾದ ಯೋಗ(ಸೇರುವಿಕೆ). ಎಣೆಯಿಲ್ಲದ ಆನಂದದ ಈ ಗಣಿಯನ್ನು ಜ್ಞಾನ, ಪರಮಾವಸ್ಥಾ ಎಂದು ಹೇಳುತ್ತಾರೆ. 


ಶ್ರೀರಂಗಮಹಾಗುರುಗಳು ತಂದೆಯ ಬಗ್ಗೆ ಹೀಗೊಂದು ಆದರ್ಶವಾದ ವ್ಯಾಖ್ಯೆಯನ್ನು ಕೊಟ್ಟಿದ್ದಾರೆಳ ಮಾತಿನಲ್ಲಿ "ತಂದೆ, ಏನು ತಂದೆ? ಎಂದರೆ ಜ್ಞಾನವನ್ನು ತಂದೆ ಎನ್ನುವವನೇ ತಂದೆ" ಎಂಬುದಾಗಿ. ಆದರೆ ಅದನ್ನು ಉಣಬಡಿಸಲು, ಪ್ರಕೃತಿ-ಮಾತೆಯೆಂದೂ, ಕುಂಡಲಿನೀದೇವಿ ಎಂದೂ ಕರೆಯಲ್ಪಡುವ ತಾಯಿಯು ಮುಂದಾಗಬೇಕು, ಅನುಗ್ರಹಿಸಬೇಕು. ಆ  ಅಪ್ರಾಕೃತ ತಂದೆ-ತಾಯಿಯರ ಪಾತ್ರವನ್ನೇ, ಭುವಿಯಲ್ಲಿ, ಮನೆಮನೆಯಲ್ಲೂ ತಂದೆ-ತಾಯಿಯರು ವಹಿಸಬೇಕು;  ಜ್ಞಾನದತ್ತ ಪ್ರಚೋದಿಸಬೇಕು.  ಒಳ ಯೋಗಭೂಮಿಯಲ್ಲಾಗಲೀ, ಹೊರ ಲೋಕವ್ಯವಹಾರದಲ್ಲಾಗಲೀ, ನಮಗೆ ದೊರಕುವ ಪ್ರತಿಯೊಂದು ಸಣ್ಣ-ಪುಟ್ಟ ಸಂತೋಷವೂ ತಂದೆ-ತಾಯಿಯರ ಅನುಗ್ರಹವೇ ಸರಿ. ತಂದೆ ತಾಯಿಯರು- ಜನ್ಮ ಕೊಟ್ಟವರಿರಬಹುದು, ದಿವಿ-ಭುವಿಗಳಾಗಬಹುದು, ಅಥವಾ ಜಗನ್ಮಾತಾಪಿತೃಗಳಾಗಬಹುದು. ಈ ಪೋಷಕರ ದಿನಾಚರಣೆಯಂದು ಇವರೆಲ್ಲರನ್ನೂ ಸ್ಮರಿಸಿ, ಕೃತಾರ್ಥರಾಗೋಣ.


ಸೂಚನೆ: 25/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.