ಲೇಖಕರು : ವಿದ್ವಾನ್ ನರಸಿಂಹ ಭಟ್ಟ
ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲಕ್ರಮೇಣ ತು || -ನೀತಿಸಾರ ೯
ಅರ್ಥ-ಶಿಷ್ಯನಾದವನು ಜ್ಞಾನವನ್ನು ಆಚಾರ್ಯರಿಂದ ಕಾಲುಭಾಗ ಇನ್ನು ಕಾಲುಭಾಗವನ್ನು ತನ್ನ ಮೇಧಾಬಲದಿಂದ ಇನ್ನು ಕಾಲು ಭಾಗವನ್ನು ತನ್ನ ಸಹಪಾಠಿಗಳಿಂದ ಇನ್ನುಳಿದ ಕಾಲುಭಾಗವನ್ನು ಮುಂದಿನ ಕಾಲದಲ್ಲಿ ಬರುವ ಅನುಭವದಿಂದ ಪಡೆಯುತ್ತಾನೆ.
ವಿವರಣೆ - ಪರಿಪೂರ್ಣಜ್ಞಾನದಿಂದ ಮಾತ್ರ ಪೂರ್ಣಜೀವನ ಸಾಧ್ಯ. ನೂರಕ್ಕೆ ನೂರು ಪ್ರತಿಶತ ಜ್ಞಾನಸಂಪಾದನೆ ಹೇಗೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಯಾವುದೇ ವಿಷಯದ ಪರಿಪೂರ್ಣ ಜ್ಞಾನ ನಮಗೆ ಬರಬೇಕಾದರೆ 'ಶ್ರವಣ ಮನನ ನಿಧಿಧ್ಯಾಸನ' ಎಂಬ ಮೂರು ಸ್ತರದ ಪ್ರಯತ್ನ ಬೇಕು. ಆತ್ಮಸ್ವರೂಪದ ಸಾರವನ್ನು ಅರಿಯಬೇಕಾದರೆ ಆ ವಿಷಯದ ಬಗ್ಗೆ ಚೆನ್ನಾಗಿ ಕೇಳಬೇಕು. ಅಂದರೆ ನೂರಕ್ಕೆ ನೂರು ಗಮನವಿಟ್ಟು ಕೇಳಿದಾಗ ನಮಗೆ ತಿಳಿಯುವುದು ಕೇವಲ ಇಪ್ಪತ್ತೈದು ಭಾಗ ಮಾತ್ರ. ನೂರಕ್ಕೆ ನೂರು ಕೇಳಿಸಿಕೊಂಡಾಗ ಮಾತ್ರ ಅದರ ಬಗ್ಗೆ ನಮ್ಮ ಮೇಧಾಬಲದಿಂದ ಮನನ ಮಾಡಲು ಸಾಧ್ಯ. ಆಗ ನಮಗೆ ಇನ್ನು ಇಪ್ಪತ್ತೈದು ಅಂದರೆ ಐವತ್ತು ಭಾಗ ಅರಿವಾಗುತ್ತದೆ. ಶ್ರವಣ ಮತ್ತು ಮನನದ ಬಲದಿಂದ ಅದರ ಬಗ್ಗೆ ಆಳವಾದ ಚಿಂತನೆಗೆ ಸಾಧ್ಯ. ಇದನ್ನು ಸಹಪಾಠಿಗಳ ಜೊತೆ ಸೇರಿ ಮಾಡಬೇಕು. ತಮಗೆ ಗೊತ್ತಾದ ವಿಷಯಗಳನ್ನು ಹಂಚಿಕೊಂಡು ಗೊತ್ತಾಗದ ವಿಷಯವನ್ನು ಇತರರಿಂದ ಚರ್ಚೆ ಮಾಡಿ ತಿಳಿದಾಗ ಇನ್ನುಳಿದ ಕಾಲು ಭಾಗ ಸೇರಿದರೆ ನೂರಕ್ಕೆ ಎಪ್ಪತ್ತೈದರಷ್ಟು ಜ್ಞಾನವನ್ನು ಸಂಪಾದಿಸಬಹುದು. ಇನ್ನುಳಿದ ಜ್ಜಾನವನ್ನು ನಮ್ಮ ಅನುಭವದಿಂದ ಪಡೆಯಬೇಕು. ಹೀಗೆ ಪರಿಪೂರ್ಣವಾದ ಅರಿವನ್ನು ಸಂಪಾದಿಸಲು ಪಾಠವನ್ನು ಕೇಳುವುದು ತಾನು ಸ್ವತಃ ಅದರ ಬಗ್ಗೆ ಚಿಂತಿಸುವುದು ಮತ್ತು ತನ್ನ ಸಹಪಾಠಿಗಳಿಂದ ಚರ್ಚೆ ಮಾಡುವುದು ಇವೆಲ್ಲದರಲ್ಲೂ ನೂರಕ್ಕೆ ನೂರು ಭಾಗ ಕೂಡಿಬಂದಾಗ ಮಾತ್ರ ಸಾಧ್ಯ. ನಾವು ಆಚಾರ್ಯರಿಂದ ಕೇಳುವುದರಲ್ಲೆ ನೂರಕ್ಕೆ ಹತ್ತೋ ಇಪ್ಪತ್ತೋ ಐವತ್ತೋ ಹೀಗೆ ನ್ಯೂನತೆ ಉಂಟಾದರೆ ಫಲಿತಾಂಶವೂ ನೂರಕ್ಕೆ ನೂರು ಸಿಗಲು ಸಾಧ್ಯವೇ ಇಲ್ಲ ಎಂಬ ಎಚ್ಚರಿಕೆಯನ್ನೂ ಈ ಸೂಕ್ತಿ ತಿಳಿಸುವುದು.
To know more about Astanga Yoga Vijnana Mandiram (AYVM) please visit our Official Website, Facebook and Twitter pages