Showing posts with label author_videvansheshachalasharma. Show all posts
Showing posts with label author_videvansheshachalasharma. Show all posts

Monday, June 14, 2021

ಆರ್ಯಸಂಸ್ಕೃತಿ ದರ್ಶನ - 46 - ಅಂತಃಕರಣಶುದ್ಧಿಯ ಉಪಾಯಗಳು (Arya Samskruti Darshana - 46 - Antahkaranasuddhiya upayagalu)

ಲೇಖಕರು : ಶ್ರೀ ಶೇಷಾಚಲ ಶರ್ಮರು



 ಸನಾತನವಾದ  ವೈದಿಕಧರ್ಮವೇ ಸಾರ್ವಭೌಮವಾದ ಮಾನವಧರ್ಮ. ವೈದಿಕಧರ್ಮ ಪರಂಪರೆಯಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧಿಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಬಹಿರಂಗಶುದ್ಧಿಯ ಗುರಿಯು ಅಂತಃಕರಣದ ಶುದ್ಧಿಯೇ ಆಗಿದೆ.  ಧರ್ಮದಿಂದ ಶ್ರೇಯಸ್ಸು (ಆತ್ಮಸುಖ) ಮತ್ತು ಪ್ರೇಯಸ್ಸು (ಇಂದ್ರಿಯು ಕಲ್ಯಾಣ) ಎರಡೂ ಸಿದ್ಧಿಸುವುದು. ಆದ್ದರಿಂದಲೇ "ಯತೋಽಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ" ಎಂಬುದಾಗಿ ಧರ್ಮದ ಲಕ್ಷಣವನ್ನು ಮಹರ್ಷಿಗಳು ನಿರೂಪಿಸಿದರು.

ಭಕ್ತಿಯಿಂದ ಭಗವಂತನನ್ನು ಭಜಿಸಿ ಆತ್ಮದರ್ಶನವನ್ನು ಪಡೆಯುವುದೇ ಪರಮಧರ್ಮ. ಪವಿತ್ರತಮನಾದ ಪರಮಾತ್ಮನ ಪಾವನವಾದ ಸ್ಮರಣೆಯಿಂದಲೇ ಪರಮಶುದ್ಧಿಯು ಲಭಿಸುವುದು. ಆದುದರಿಂದಲೇ ಪ್ರತಿದಿನವೂ ಜೀವನದ ಪರಮಶುದ್ಧಿಗಾಗಿ ಆಚರಿಸುವ ಸಂಧ್ಯೋಪಾಸನೆಯ ಆರಂಭದಲ್ಲಿ-

"ಯಃ ಸ್ಮರೇತ್ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ" ಎಂಬುದಾಗಿ ಪವಿತ್ರತಮನಾದ ಪುಂಡರೀಕಾಕ್ಷನನ್ನು ಸ್ಮರಿಸುವುದು. ಸಾಮಾನ್ಯವೂ ಸಾರ್ವತ್ರಿಕವೂ ಆದ ಧರ್ಮದ ಹತ್ತು ಲಕ್ಷಣಗಳು ಮನುವಹರ್ಷಿಯಿಂದ ಹೀಗೆ ಉಕ್ತವಾಗಿವೆ-

ಧೃತಿಃ ಕ್ಷಮಾ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ ।

ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ॥

ಇವುಗಳೆಲ್ಲವೂ ಬಾಹ್ಯಶುದ್ಧಿಯ ಮೂಲಕ ಅಂತಃಕರಣಶುದ್ಧಿಯನ್ನು ಪಡೆಯುವ ಸಾಧನಗಳಾಗಿವೆ. ಶುಚಿತತ್ತ್ವಕ್ಕೆ ಮಹತ್ತ್ವವನ್ನು ನೀಡಲು ಶೌಚವನ್ನು ಧರ್ಮ ಸಾಧನಗಳಲ್ಲಿ ಪರಿಗಣಿಸಲಾಗಿದೆ. ಶುಚಿಯಾಗಿ ಇರುವುದೇ ಶೌಚ. ಬಾಹ್ಯ ಮತ್ತು ಆಂತರಿಕಶುಚಿಯು ಧರ್ಮಸಾಧಕನಿಗೆ ಅನಿವಾರ್ಯವಾದುದು. ಶರೀರದ ಕಲ್ಮಶವನ್ನು ಪರಿಹರಿಸಿಕೊಂಡರೆ ಬಾಹ್ಯ ಶುದ್ಧಿಯು ಸಿದ್ಧಿಸುವುದು. ಅಂತಃಕರಣದ ದೋಷಗಳನ್ನು ಹೋಗಲಾಡಿಸಿಕೊಂಡು ಅಂತರಿಕ ಶುದ್ಧಿಯನ್ನು ಪಡೆಯಬೇಕು. ಎರಡು ವಿಧವಾದ ಶುದ್ಧಿಯನ್ನು ಪಡೆಯಲು ಬೋಧಾಯನಧರ್ಮಸೂತ್ರದಲ್ಲಿ ಉಪಾಯಗಳು ಹೀಗೆ ನಿರ್ದಿಷ್ಟವಾಗಿವೆ :-

ಅಬ್ಧಿಃ ಶುದ್ಧ್ಯಂತಿ ಗಾತ್ರಾಣಿ ಬುದ್ಧಿರ್ಜ್ಞಾನೇನ ಶುದ್ಧ್ಯತಿ ।

ಅಹಿಂಸಯಾ ಚ ಭೂತಾತ್ಮಾ ಮನಃ ಸತ್ಯೇನ ಶುದ್ಧ್ಯತಿ ॥

ಮನುಮಹರ್ಷಿಯು ಈ ವಿಷಯವನ್ನೇ ಸ್ವಲ್ಪ ವಿಸ್ತರಿಸಿ ಈ ರೀತಿ ಹೇಳಿದ್ದಾನೆ -

ಜ್ಞಾನಂ ತಪೋsಗ್ನಿರಾಹಾರೋ ಮೃನ್ಮನೋ ವಾರ್ಯುಪಾಂಜನಮ್ । 

ವಾಯುಃ ಕರ್ಮಾರ್ಕಕಾಲೌಚ ಶುದ್ಧೇಃ ಕರ್ತ್ಯಣಿ ದೇಹಿನಾಮ್ ॥

 (ಜ್ಞಾನ, ತಪಸ್ಸು, ಅಗ್ನಿ, ಆಹಾರ, ಮೃತ್ತಿಕೆ, ಮನಸ್ಸು, ನೀರು, ಉಪಲೇಪನ, ವಾಯು, ಕರ್ಮ, ಸೂರ್ಯ, ಕಾಲ - ಇವು ದೇಹಿಗಳಿಗೆ ಶುದ್ಧಿ ಸಾಧನಗಳು)

ತತ್ತ್ವಸಾಕ್ಷಾತ್ಕಾರವನ್ನು ಪಡೆಯಲು ಸಮರ್ಥವಾಗಿ ನಿತ್ಯಯಾತ್ಮಕವಾಗಿರುವ ಪರಿಶುದ್ಧವಾದ ಅಂತಃಕರಣವೃತ್ತಿಯೇ ಬುದ್ಧಿ ಎನಿಸುವುದು. ಪರಮಾತ್ಮಜ್ಞಾನ (ಬ್ರಹ್ಮಜ್ಞಾನ) ದಿಂದ ಇಂತಹ ಪರಿಪೂರ್ಣ ಶುದ್ಧಿಯು ಪ್ರಾಪ್ತವಾಗುತ್ತದೆ. ಬಹಿರಿಂದ್ರಿಯಗಳ ಮೂಲಕ ವಿಷಯಗಳ ಸಂಬಂಧವನ್ನು ಹೊಂದಿ ಕರ್ಮ ಪ್ರವೃತ್ತವಾದ ಅಂತಃಕರಣ ಅಧವಾ ಇಂತಹ ಅಂತಃಕರಣವನ್ನು ಉಪಾಧಿಯಾಗಿ ಉಳ್ಳ ಜೀವನನ್ನು ಭೂತಾತ್ಮಾ ಎಂದು ಕರೆಯುತ್ತಾರೆ. ಸರ್ವ ಭೂತಗಳಲ್ಲಿ ಸಮದರ್ಶನವನ್ನು ಬೆಳೆಸಿಕೊಂಡು ಕಾಯ, ವಾಕ್, ಮನಸ್ಸುಗಳಿಂದ ಯಾರಿಗೂ ಹಿಂಸೆಯನ್ನುಂಟುಮಾಡದಿರುವುದರಿಂದ ಈ ರೀತಿಯ ಅಂತಃಕರಣ ಶುದ್ಧಿಯು ಉಂಟಾಗುತ್ತದೆ. ಸಂಕಲ್ಪ-ವಿಕಲ್ಪರೂಪವಾದ ವೃತ್ತಿಗಳಿಂದ ಕೂಡಿದ ಅಂತಃಕರಣವೇ ಮನಸ್ಸು. ಸಂಕಲ್ಪಾವಸ್ಥೆಯಲ್ಲೇ ಮನಸ್ಸು ಪರಿಶುದ್ಧವಾಗಬೇಕು. ಇಲ್ಲದಿದ್ದರೆ ಅಂತರಂಗ-ಬಹಿರಂಗ ಶುದ್ಧಿಗಳು ಸಿದ್ಧಿಸುವುದಿಲ್ಲ. ಶರೀರ, ಮಾತು, ಮನಸ್ಸುಗಳಿಂದ ಸತ್ಯವನ್ನು ಅವಲಂಬಿಸುವುದರಿಂದ ಮನಸ್ಸು ಸಂಕಲ್ಪಾವಸ್ಥೆಯಲ್ಲೇ ಪರಿಶುದ್ಧವಾಗುತ್ತದೆ. ಭೂತಾತ್ಮನ ಪರಿಶುದ್ಧಿಗೆ ವಿದ್ಯೆ ಮತ್ತು ತಪಸ್ಸುಗಳೂ ಸಾಧನಗಳೆಂದು ಮನುವು ಒತ್ತಿಹೇಳಿದ್ದಾನೆ. ಅರ್ಥಶುದ್ಧಿ, ಕ್ಷಮೆ, ದಾನ, ಜಪ, ತಪಸ್ಸು - ಮುಂತಾದವುಗಳೂ ಅಂತಃಕರಣ ಶುದ್ಧಿಯ ಸಾಧನಗಳು.

ಚಿತ್ತವೃತ್ತಿಯ ನಿರೋಧದಿಂದ ಚಿತ್ತವು ಪರಿಶುದ್ಧವಾಗಿ ಸಮಾಧಿಸಿದ್ಧಿಯುಂಟಾಗುತ್ತದೆ. ಅಂತಃಕರಣವೇ ಯೋಗಶಾಸ್ತ್ರದಲ್ಲಿ ಚಿತ್ತವೆಂಬುದಾಗಿ ಉಕ್ತವಾಗಿದೆ. ಸಮಾಧಿಸಿದ್ಧಿಯಿಂದ ಪರಮಾತ್ಮದರ್ಶನ ಪ್ರಾಪ್ತವಾಗುತ್ತದೆ. ಚಿತ್ತಶುದ್ಧಿಯನ್ನು ಹೊಂದಿ ಸಮಾಧಿಯನ್ನು ಸಾಧಿಸಲು ಯೋಗಶಾಸ್ತ್ರವು ಅಷ್ಟಾಂಗಯೋಗವನ್ನು ಪರಮಸಾಧನವನ್ನಾಗಿ ವಿಧಿಸುತ್ತದೆ. ಸರ್ವವಿಧವಾದ ಧರ್ಮಾಚರಣೆಯ ಪ್ರಾರಂಭದಲ್ಲಿ ಪ್ರಾಣಾಯಾಮವು ವಿಹಿತವಾಗಿದೆಯಷ್ಟೆ. ಚಿತ್ತಶುದ್ಧಿಯನ್ನು ಪಡೆಯಲು ಇದು ಅತ್ಯಂತ ಪ್ರಧಾನವಾದ ಸಾಧನ. ಪ್ರಾಣಾಯಾಮವು ಭಗವದ್ಧ್ಯಾನಕ್ಕೆ ಉತ್ತಮ ಸೋಪಾನ. ಭಗವದ್ಧ್ಯಾನದಿಂದ ಸಕಲದೋಷಗಳೂ ನಿವಾರಣೆಯಾಗಿ ಪರಿಪೂರ್ಣವಾದ ಅಂತರಂಗ-ಬಹಿರಂಗ ಶುದ್ಧಿಯು ಉಂಟಾಗುತ್ತದೆ. ವೃದ್ಧ ಶಾಖಾತಪಸ್ಮೃತಿಯಲ್ಲಿ ಭಗವದ್ಧ್ಯಾನದ ಮಹಿಮೆಯು ಹೀಗೆ ಉಕ್ತವಾಗಿದೆ :-

" ಪ್ರಾಣಾಯಾಮಸಹಸ್ರೇಣ ಯತ್ ಪಾಪಂ ನಶ್ಯತೇ ನೃಣಾಮ್ ।

ಕ್ಷಣಮಾತ್ರೇಣ ತತ್ಪಾಪಂ ಹರೇರ್ಧ್ಯಾನಾತ್ ಪ್ರಣಶ್ಯತಿ ॥"

(ಸಾವಿರ ಪ್ರಾಣಾಯಾಮಗಳಿಂದ ನಾಶವಾಗಬಲ್ಲ ಪಾಪವು ಭಗವಂತನ ಧ್ಯಾನದಿಂದ ಕ್ಷಣ ಮಾತ್ರದಲ್ಲಿ ನಾಶವಾಗುತ್ತದೆ.)

  ಧರ್ಮಕ್ಕೆ ವಿರೋಧವಿಲ್ಲದಂತೆ ಅರ್ಥ-ಕಾಮಗಳನ್ನು ಸೇವಿಸಿದರೆ ಚಿತ್ತಶುದ್ಧಿಗೆ ಕಾರಣವಾದ ಧರ್ಮಸಿದ್ಧಿಯುಂಟಾಗುತ್ತದೆ. ಇದರಿಂದ ಆತ್ಮ ದರ್ಶನ ಲಾಭವುಂಟಾಗುತ್ತದೆ. ಧರ್ಮಕ್ಕೆ ವಿರುದ್ಧವಾಗಿ ವಿಷಯಗಳನ್ನು ಸೇವಿಸುವುದರಿಂದ ಪ್ರಜ್ಞಾನಾಶವುಂಟಾಗಿ ಮನುಷ್ಯನು ಸ್ವರೂಪಜ್ಞಾನವನ್ನು ಕಳೆದುಕೊಳ್ಳುತ್ತಾನೆ. ಆದ ಕಾರಣ ವಿಷಯಾಸಕ್ತಿಯಿಂದ ದೂರವಿರುವುದು ಚಿತ್ತಶುದ್ಧಿಯ ಉಪಾಯಗಳಲ್ಲಿ ಬಹುಮುಖ್ಯವಾದುದು. ಮನಸ್ಸಿನ ದೋಷಗಳ ಪರಿಹಾರಕ್ಕೆ ಧೀ, ಧೈರ್ಯ, ಆತ್ಮಜ್ಞಾನ - ಮುಂತಾದವುಗಳು ಪರಮೌಷಧವೆಂದು ಜ್ಞಾನಿಗಳು ಬೋಧಿಸುತ್ತಾರೆ :-

" ಧೀ ಧೈರ್ಯಾತ್ಮಾದಿವಿಜ್ಞಾನಂ ಮನೋದೋಷೌಷಧಂ  ಪರಮ್ ।

ಚಿತ್ತಶುದ್ಧಿಯನ್ನು ಪಡೆಯಲು ಅಹಾರಶುದ್ಧಿಯೂ ಅತ್ಯಂತ ಪ್ರಮುಖವಾದ ಸಾಧನ.

"ಆಹಾರಶುದ್ಧೌ ಸತ್ತ್ವಶುದ್ಧಿಃ, ಸತ್ತ್ವಶುದ್ಧೌ ಧ್ರುವಾಸ್ಮೃತಿಃ, ಸ್ಮೃತಿಲಂಭೇ ಸರ್ವಗ್ರಂಥೀನಾಂ ವಿಪ್ರಮೋಕ್ಷಃ" ಎಂದು ಛಾಂದೋಗ್ಯ ಉಪನಿಷತ್ತು ತಿಳಿಸುತ್ತದೆ. ಆಹಾರಶುದ್ಧಿಯಿಂದ ಅಂತಃಕರಣಶುದ್ಧಿಯುಂಟಾಗುತ್ತದೆ. ಅಂತಃಕರಣಶುದ್ಧಿಯಿಂದ ತಡೆಯಿಲ್ಲದ ಆತ್ಮಸ್ವರೂಪಾನುಸಂಧಾನವುಂಟಾಗುತ್ತದೆ. ಆತ್ಮಸ್ವರೂಪಾನುಸಂಧಾನದಿಂದ ಹೃದಯಗ್ರಂಥಿಮೋಕ್ಷವುಂಟಾಗುತ್ತದೆ. ಇಲ್ಲಿ ಆಹಾರವೆಂದರೆ ಬಾಯಿಂದ ತಿನ್ನುವ ಆಹಾರವೆಂದಷ್ಟೇ ಅರ್ಥವಲ್ಲ. ಭೋಕ್ತೃವೆನಿಸಿದ ಜೀವನು ತನ್ನ ಭೋಗಕ್ಕಾಗಿ ಆಹರಣ ಮಾಡುವ ಅಂದರೆ ತೆಗೆದುಕೊಳ್ಳುವ ಶಬ್ದಾದಿ ವಿಷಯವಿಜ್ಞಾನವೆಲ್ಲವೂ ಆಹಾರವೆನಿಸುತ್ತದೆ ಎಂದು ಶ್ರೀಶಂಕರಭಗವತ್ಪಾದರು ವಿವರಿಸಿದ್ದಾರೆ. ಅನ್ನವೂ ಬ್ರಹ್ಮಸ್ವರೂಪ. ಅನ್ನವನ್ನು ಭುಂಜಿಸುವವನೂ ಬ್ರಹ್ಮಸ್ವರೂಪ. ವಿಷ್ಣು ಸಹಸ್ರನಾಮದಲ್ಲಿ ಅನ್ನ ಮತ್ತು ಅನ್ನಾದ - ಎರಡೂ ಭಗವಂತನ ನಾಮಗಳೇ ಆಗಿವೆ. ತಿನ್ನಲ್ಪಡುವುದೂ ಅನ್ನವೇ. ತಿನ್ನುವವನೂ ಅನ್ನವೇ. "ಅದ್ಯತೇಽತ್ತಿಚ ಭೂತಾನಿ । ತಸ್ಮಾದನ್ನಂ ತದುಚ್ಯತ ಇತಿ ।"  ಎಂಬುದಾಗಿ ಉಪನಿಷತ್ತು ಅನ್ನಬ್ರಹ್ಮವನ್ನು ಕೊಂಡಾಡುತ್ತದೆ.

ಈ ರೀತಿಯಾಗಿ ಅಹಾರ, ವಿಹಾರ, ವಿಚಾರ, ವ್ಯವಹಾರ, ವ್ಯಾಪಾರ - ಇವೆಲ್ಲವುಗಳ ಶುದ್ಧಿಯಿಂದ ಅಂತಃಕರಣಶುದ್ಧಿಯು ಸಿದ್ಧಿಸುತ್ತದೆ. ಅಂತಃಕರಣಶುದ್ಧಿಯ ಗುರಿ ಸ್ವರೂಪಜ್ಞಾನ ಪ್ರಾಪ್ತಿ.

"ಪಂಚೇಂದ್ರಿಯ, ದೇಹ, ಬುದ್ಧಿ, ಮನಸ್ಸು, ದ್ರವ್ಯ, ದೇಶ, ಕ್ರಿಯೆ - ಇವುಗಳ ಶುದ್ಧಿಯೇ ಆಚಾರ. ಒಂದು ವಸ್ತುವಿನ ಸಹಜಸ್ವರೂಪವು ಕಾಲ, ದೇಶ, ಸನ್ನಿವೇಶಗಳಿಗೆ ಸಿಕ್ಕಿ ವಿಕೃತವಾದಾಗ ಆ ವಿಕಾರವನ್ನು ಹೋಗಲಾಡಿಸಿ ಅದನ್ನು ತನ್ನ ಸಹಜ ಸ್ಥಿತಿಯಲ್ಲಿಡಲು ಮಾಡುವ ಕ್ರಿಯೆಯೇ ಆಚಾರ. ಋಷಿಗಳು ನಮಗೆ ಆಚಾರವನ್ನು ಕೊಟ್ಟರು. ಜ್ಞಾನ, ಆನಂದ, ಸಮಾಧಿಯ ಸ್ಥಿತಿಯನ್ನು ಅಷ್ಟು ಏತಕ್ಕೆ ಪುನಃ ಪುನಃ ಮಹರ್ಷಿಗಳು ಹೊಗಳುತ್ತಾರೆ? ಎಂದರೆ ಅದು ಮನುಷ್ಯನ ಸಹಜ ಸ್ಥಿತಿ. ಅದನ್ನು ಅವನು ಕಳೆದುಕೊಂಡಿದ್ದಾನೆ. ಆ ಸಹಜ ಸ್ಥಿತಿಯನ್ನು ಅವನು ಮತ್ತೆ ಸಂಪಾದಿಸಲಿ ಎಂದು ಅದರ ನೆನಪನ್ನುಂಟುಮಾಡಲು ಹಾಗೆ ಹೊಗಳುತ್ತಾರೆ. "ಆತ್ಮನ ಹಿತಕ್ಕೆ ಅನುಕೂಲವಾದುದೆಲ್ಲವೂ ಶುದ್ಧಿಯೇ. ಶಿಷ್ಟರೂ, ಆಪ್ತರೂ, ವಿಜ್ಞಾನಿಗಳೂ ಆದ ಮಹರ್ಷಿಗಳ ಕಡೆಯಿಂದ ಆಚಾರ ವಿಜ್ಞಾನವನ್ನು ತಿಳಿಯಬೇಕು" - ಶ್ರೀರಂಗಮಹಾಗುರುಗಳ ಈ ಅಮೃತವಚನಗಳನ್ನು ಉಲ್ಲೇಖಿಸಿ ಅಂತಃಕರಣಶುದ್ಧಿ ತತ್ತ್ವದ ಈ ವಿಚಾರವನ್ನು "ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ" ಎಂಬಂತೆ ಧರ್ಮ ಪ್ರಭುವಾದ ಪರಮಾತ್ಮನ ಪರಮಶುದ್ಧವಾದ ಪಾದಾರವಿಂದಗಳಲ್ಲಿ ಅರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೪ ಸಂಚಿಕೆ:೫, ಆಗಸ್ಟ್ ೧೯೯೨ ತಿಂಗಳಲ್ಲಿ  ಪ್ರಕಟವಾಗಿದೆ. 


Sunday, November 29, 2020

ಆರ್ಯಸಂಸ್ಕೃತಿ ದರ್ಶನ - 19 (Arya Samskruti Darshana - 19)

ಪಂಚಾಯತನ ಪೂಜಾ
ಲೇಖಕರು: ವಿದ್ವಾನ್||ಶ್ರೀ ಶೇಷಾಚಲಶರ್ಮಾ



ಆಸ್ತಿಕ ಭಾವನೆಯುಳ್ಳ ಜನರಲ್ಲಿ ದೇವತಾಪೂಜೆ, ದೇವತೋಪಾಸನೆಗಳು ಆಚರಣೆಯಲ್ಲಿರುವುದು ಸರ್ವವಿದಿತವಾದ ವಿಷಯ. ಉಪಾಸನೆಯೆಂದರೆ ಉಪಸಮೀಪೇ  ಆಸನಂ--ಅರ್ಥಾತ್ ಬಳಿಯಲ್ಲಿ ಇರುವುದು ಎಂದು ಶಬ್ದಾರ್ಥ. ದೇವತೋಪಾಸನೆ ಎಂಬಲ್ಲಿ ನಮ್ಮ  ಇಷ್ಟದೇವತೆಯ ಸಾನ್ನಿಧ್ಯದಲ್ಲಿಯೇ ನಾವು ಎಂದರೆ ನಮ್ಮ ಅಂತಕರಣ ಮತ್ತು ಬಹಿಃಕರಣಗಳು ಸದಾ ನೆಲೆಸಿರುವುದು ಎಂದು ತಾತ್ಪರ್ಯ. ಇಂತಹ ಉಪಾಸನೆಯ ಅಂಗವಾಗಿ ಪೂಜಾ ಎಂಬ ಕರ್ಮವನ್ನು ಆಚರಿಸುವುದು ಶಾಸ್ತ್ರವಿಹಿತವಾದ ಆಚರಣೆ. ಲೌಕಿಕವಾಗಿಯೂ, ನಮಗಿಂತ ಶ್ರೇಷ್ಠರಾದವರನ್ನು, ಎಂದರೆ ಗುರುಹಿರಿಯರನ್ನು ಪೂಜಿಸುವುದು-ಗೌರವಿಸುವುದು ವಾಡಿಕೆಯಲ್ಲಿದೆ. ಪೂಜೆಯಲ್ಲಿಯೂ ಬಾಹ್ಯಪೂಜೆ ಮತ್ತು ಅಂತರಂಗ ಪೂಜೆ ಅಥವಾ ಮಾನಸಪೂಜೆ ಎಂದು ಎರಡು ವಿಧವಿದೆ. ಎರಡು ವಿಧ ಪೂಜೆಗಳೂ ಶಾಸ್ತ್ರವಿಹಿತವಾದುವುಗಳು ಮತ್ತು ಸಂಪ್ರದಾಯ ಕ್ರಮದಲ್ಲಿ ಆಚರಿಸಲ್ಪಡತಕ್ಕವುಗಳು. ಮನಸ್ಸನ್ನು ಅಂತರ್ಮುಖವಾಗಿ ಮಾಡಲು ಪ್ರಾರಂಭದಲ್ಲಿ ಬಾಹ್ಯಪೂಜೆಯು ಅವಶ್ಯಕವಾಗಿರುತ್ತದೆ. ಮಾನಸಪೂಜೆಯ ಸಿದ್ಧಿಯನ್ನು ಪಡೆದಮೇಲೆಯೂ ಉಪಾಸಕನು ಲೋಕಯಾತ್ರೆಯನ್ನು ನಡೆಸುವಾಗ ತನ್ನ ಅಂತಃಕರಣ ಮತ್ತು ಬಹಿಃಕರಣಗಳು ಸದಾ ಭಗವನ್ಮಯವಾಗಿರುವಂತೆ ಮಾಡಿಕೊಳ್ಳಲು ಅಂತರಂಗಪೂಜೆ ಮತ್ತು ಬಹಿರಂಗ ಪೂಜೆಗಳನ್ನು ಆಚರಿಸುತ್ತಾನೆ. ಮತ್ತು ಲೋಕಶಿಕ್ಷಣಕ್ಕಾಗಿಯೂ ಅಂತಹವನು ಬಾಹ್ಯಪೂಜೆಯನ್ನು ವಿಧಿವತ್ತಾಗಿ ಆಚರಿಸುತ್ತಾನೆ. ತಾನು ಒಳಗೆ ಅನುಭವಿಸಿದುದನ್ನು ಹೊರಗೂ ತುಂಬಿಕೊಳ್ಳಲು ಬಾಹ್ಯಪೂಜೆಯೂ ಅವಶ್ಯಕವಾಗುತ್ತದೆ. ಅಂತರಂಗ ಪೂಜೆಯ ಶಕ್ತಿಯಿಂದ ಪವಿತ್ರವಾದ ಕರಣಗಳು ಬಾಹ್ಯವಾಗಿಯೂ ಅಂತಹ ಪವಿತ್ರ ಭಾವನೆಗಳನ್ನೇ ಹೊರಸೂಸುತ್ತಾ ಬಾಹ್ಯ ವ್ಯಾಪಾರಗಳನ್ನು ನಡೆಸುತ್ತವೆ. ಅಂತರಂಗದಲ್ಲಿ ಆಡುವ ದೈವೀಶಕ್ತಿಯ ಪ್ರಭಾವದಿಂದ ಬಾಹ್ಯಕರಣಗಳು ಮಾಡುವ ವ್ಯಾಪಾರಗಳೆಲ್ಲಾ ಒಂದು ರೀತಿಯಲ್ಲಿ ಪೂಜೆಯೆನಿಸುತ್ತವೆ. ಯಾವ ಮಹಾಶಕ್ತಿಯು ವಿಶ್ವದ ವಸ್ತುಗಳನ್ನು ಸೃಷ್ಟಿಸಿ ಅವುಗಳಲ್ಲಿ ಅಪ್ರತಿಹತವಾಗಿ ವ್ಯಾಪಿಸಿ ಸಂಚರಿಸುತ್ತಿದೆಯೋ, ಅಂತಹ ಶಕ್ತಿಯ ಆಕರ್ಷಣೆ ಮತ್ತು ಪ್ರಭಾವಗಳಿಂದ ಅಂತಃಕರಣ ಮತ್ತು ಬಹಿಃಕರಣಗಳು ಆಡತೊಡಗಿದಾಗ ಸೃಷ್ಟೀಶನಿಗೆ ಸಲ್ಲಬೇಕಾದ ವಸ್ತುಗಳು ಹೇಗಾದರೂ ಒದಗಿಬಂದು ಅವನ ಪೂಜಿಯು ಸಮರ್ಪಕವಾಗಿ ನಡೆದೇ ನಡೆಯುತ್ತದೆ. ಆ ಮಹಾಶಕ್ತಿಯ ಆವಿರ್ಭಾವ -ತಿರೋಭಾವಗಳ ರಹಸ್ಯಕ್ಕನುಗುಣವಾಗಿ ಆಯಾ ಪೂಜೆಯಲ್ಲಿನ ದ್ರವ್ಯಗಳು, ಪೂಜಾಸಾಮಗ್ರಿಗಳು, ಕ್ರಿಯಾಕಲಾಪಗಳು, ಬಂಧ -ಮುದ್ರೆಗಳು ಇರುತ್ತವೆ. ಸಿದ್ಧಪುರುಷನಲ್ಲಿ ಇವೆಲ್ಲಾ ಸಹಜವಾಗಿ ಸಂಗೃಹೀತವಾಗುತ್ತವೆ. ಸಾಧಕನಾದವನು ಇವುಗಳನ್ನು ದೈವೀಭಾವಕ್ಕೆ ಸಲ್ಲುವಂತೆ ಸಂಗ್ರಹಿಸಬೇಕಾದರೆ ಶಾಸ್ತ್ರವಿಧಿಗಳನ್ನು ಪಾಲಿಸಬೇಕು. ಅಂತರಂಗಪೂಜೆಯಲ್ಲಿ ತತ್ತ್ವಗಳೇ ಸಹಜವಾಗಿ ಪೂಜಾಸಾಮಗ್ರಿಯಾಗುತ್ತವೆ. ಆಯಾತತ್ತ್ವಗಳ ಶಕ್ತಿಗಳೇ ಸೃಷ್ಟಿಯ ದ್ರವ್ಯಗಳಲ್ಲೂ ಹರಿಯುವುದರಿಂದ, ಬಾಹ್ಯದೃಷ್ಟಿ ಮತ್ತು ಅಂತರ್ದೃಷ್ಟಿಗಳ ಸಾಮರಸ್ಯದಿಂದ ವಿಶಿಷ್ಟವಾದ ಪೂಜಾಸಾಮಗ್ರಿಯನ್ನು ಬಳಸಿದರೆ, ಬಹಿರಂಗದಲ್ಲಿ ದ್ರವ್ಯಮಯವಾಗಿ ನಡೆಯುವ ಪೂಜೆಯು ಅಂತರಂಗದಲ್ಲಿ ತತ್ತ್ವಮಯವಾಗಿ ವ್ಯಾಪಿಸಿ, ಸೃಷ್ಟಿಯ ಮೂಲ ಮಹಾಶಕ್ತಿಗೆ ಪೂಜೆಯನ್ನು ಸಲ್ಲಿಸಿದಂತಾಗುತ್ತದೆ. ಅಂತರಂಗ ಪೂಜೆಯ ಹಾಗೂ ಬಹಿರಂಗ ಪೂಜೆಯ ಗುಟ್ಟು ಈ ಪ್ರಕ್ರಿಯೆಯಲ್ಲಿ ಅಡಗಿದೆ. ಎಲ್ಲ ವಿಧವಾದ ಪೂಜೆಗಳ ಹಿಂದೆ ತಾತ್ತ್ವಿಕವಾದ ಒಂದು ರಹಸ್ಯವಿದೆ. ತತ್ತ್ವದೃಷ್ಟಿಯಿಂದ ನೋಡಿದಾಗ ವಿವಿಧ ಪೂಜಾ ವಿಧಾನಗಳ ಸಾಮರಸ್ಯ ಮನಸ್ಸಿಗೆ ಬರುತ್ತದೆ.

ಸಾಧಕನು ಪೂಜಿಸುವ ದೇವತೆಗಳ ಸಂಖ್ಯೆಯನ್ನು ಶಾಸ್ತ್ರಗಳಲ್ಲಿ ಪರಿಶೀಲಿಸಿದರೆ ಲೆಕ್ಕ ಮಾಡುವುದೇ ಕಷ್ಟವೆನಿಸುವಂತಿದೆ. ಒಂದು, ಎರಡು, ಮೂರು, ಐದು, ಮೂವತ್ತಮೂರು, ಹೀಗೇ ಬೆಳೆಯುತ್ತಾ ಮೂವತ್ತಮೂರು ಕೋಟಿ ದೇವತೆಗಳೆಂದು ಹೇಳುವುದನ್ನು ಶಾಸ್ತ್ರ, ಪುರಾಣ, ಇತಿಹಾಸಗಳಲ್ಲಿ ಕಾಣುತ್ತೇವೆ. "ಏಕಂ ಸದ್ವಿಪ್ರಾ ಬಹುಧಾ ವದಂತಿ" ಎಂಬಂತೆ ವಿಶ್ವವ್ಯಾಪಿಯಾದ ಪರಮಾತ್ಮನೊಬ್ಬನನ್ನೇ ಬೇರೆ ಬೇರೆ ಹೆಸರಿನಿಂದ ಜ್ಞಾನಿಗಳು ಕರೆಯುತ್ತಾರೆಂದು ಶ್ರುತಿಯು ಒಂದೆಡೆ ತಿಳಿಸುತ್ತದೆ. ಬೀಜದಲ್ಲಿ ಅಡಗಿರುವ ಒಂದೇ ಮಹಾಶಕ್ತಿಯು ಅಂಕುರ, ಕಾಂಡ, ಶಾಖೆ, ಉಪಶಾಖೆ, ಹೂ, ಕಾಯಿ, ಹಣ್ಣು  -- ಎಂಬುದಾಗಿ ವಿಕಾಸಹೊಂದಿದಾಗ ಬೇರೆ ಬೇರೆ ನಾಮರೂಪಗಳನ್ನು ತಾಳುವುದು ಸರಿಯಷ್ಟೆ. ಆದರೆ ವಿವಿಧವಾದ ಈ ನಾಮರೂಪಗಳಲ್ಲಿ ಅವ್ಯಾಹತವಾಗಿ ಆಡುತ್ತಿರುವುದು ಆ ಮಹಾಶಕ್ತಿಯೊಂದೇ. ಆ ಮಹಾಶಕ್ತಿಯನ್ನು ಸೇವಿಸುವವನು ಕಾಲ-ದೇಶಗಳ ಉಪಾಧಿಯ ಸ್ಥಿತಿಯಲ್ಲಿ ವಿವಿಧ ನಾಮರೂಪಗಳನ್ನು ಸೇವಿಸಬೇಕಾದುದೇನೋ ನಿಜ. ಆದರೆ ಆ ವೈವಿಧ್ಯದ ಮೂಲಕ ತಾತ್ತ್ವಿಕವಾಗಿ ಸಾಮರಸ್ಯವನ್ನೇ ಅವನು ಸೇವಿಸಬೇಕಾದುದು ಎಂಬುದನ್ನು ಮರೆಯಬಾರದು.

ದೇವಪೂಜಾಕಲ್ಪದಲ್ಲಿ ಪಂಚದೇವಪೂಜೆ ಅಥವಾ ಪಂಚಾಯತನ ಪೂಜೆ ಬಹಳ ವ್ಯಾಪಕವಾಗಿ ಆಚರಣೆಯಲ್ಲಿದೆ. ಈ ಪೂಜೆ ಬಹಳ ಗಂಭೀರವಾದುದು ಮತ್ತು ಅತ್ಯಂತ ತಾತ್ತ್ವಿಕವಾಗಿದ್ದು, ಆಧ್ಯಾತ್ಮಿಕ ದಿವ್ಯ ರಹಸ್ಯಗಳನ್ನು ಒಳಗೊಂಡಿದೆ. ಬೇರೆ ಬೇರೆ ದೇವಪೂಜೆಗಳನ್ನು ಮಾಡವವರೂ ಪೂಜಾಸಿದ್ಧಿಗಾಗಿ ಪಂಚಾಯತನ ಪೂಜೆಯನ್ನು ಆಚರಿಸುತ್ತಾರೆ. ಈ ಪಂಚಾಯತನ ಪೂಜೆಯ ರಹಸ್ಯವು ಅತ್ಯಂತ ಉತ್ತಮೋತ್ತಮವಾದ ಸ್ಫೂರ್ತಿದಾಯಕವಾದ ಪೂಜೆಯಾಗಿದೆ. ಗಣೇಶ, ದೇವೀ, ಶಂಕರ, ವಿಷ್ಣು ಮತ್ತು ಸೂರ್ಯ –ಇವರೇ ಪಂಚಾಯತನ ಪೂಜೆಯ ದೇವತೆಗಳು. ಶಾಸ್ತ್ರಗ್ರಂಥಗಳಲ್ಲಿ

"ಆದಿತ್ಯಂ ಗಣನಾಥಂ ಚ ದೇವೀಂ ರುದ್ರಂ ಚ ಕೇಶವಂ|
ಪಂಚದೈವತಮಿತ್ಯುಕ್ತಂ ಸರ್ವಕರ್ಮಸು ಪೂಜಯೇತ್||

ಎಂಬುದಾಗಿ ಸರ್ವಕಾರ್ಯಗಳಲ್ಲಿಯೂ ಈ ಐದು ಮಂದಿ ದೇವತೆಗಳನ್ನು ಪೂಜಿಸಬೇಕು ಎಂಬ ವಿಧಿಯನ್ನು ಕಾಣುತ್ತೇವೆ. ಈ ಐದು ದೇವತೆಗಳಲ್ಲಿ ಭೇದವನ್ನೆಣಿಸದೆ ಅಭೇದ ಭಾವನೆಯನ್ನು ಹೊಂದುವುದೇ ಸರ್ವಶ್ರೇಷ್ಠವಾದ ಯೋಗವೆಂಬುದಾಗಿ ಗಣೇಶ ಪುರಾಣದಲ್ಲಿ ಉಕ್ತವಾಗಿದೆ:-
 "ಶಿವೇ ವಿಷ್ಣೌ ತಥಾ ಶಕ್ತೌ ಸೂರ್ಯೇ ಮಯಿ ನರಾಧಿಪ।
ಯಾಭೇದ ಬುದ್ಧಿರ್ಯೋಗಃ ಸ ಸಮ್ಯಗ್ಯೋಗ್ಯತಮೋ ಮತಃ||"

ಶ್ರೇಷ್ಠತಮ ಯೋಗವೆನಿಸಿದ ಈ ಪಂಚಾಯತನ ಪೂಜೆಯ ರಹಸ್ಯವಾದರೂ ಏನು? ಸೃಷ್ಟಿಯು ಪಂಚಭೂತಾತ್ಮಕವಾಗಿದೆ. ಮೂಲಪರತತ್ತ್ವದಿಂದ ಪಂಚಭೂತಗಳು ವಿಕಾಸಗೊಂಡು ಈ ಕಾರ್ಯ ಪ್ರಪಂಚರೂಪವಾಗಿ ತೋರುತ್ತಿವೆ. ಬ್ರಹ್ಮಾಂಡದಲ್ಲಿ ತಮ್ಮ ವಿಕಾಸ ಕ್ರಮವಿರುವಂತಯೇ ಪಿಂಡಾಂಡದಲ್ಲಿಯೂ ಕ್ರಮಬದ್ಧವಾಗಿ ತತ್ತ್ವಗಳು ವಿಕಾಸಗೊಂಡಿವೆ. ಪಿಂಡಾಂಡ-ಬ್ರಹ್ಮಾಂಡಗಳ ಸಾಮರಸ್ಯವೇ ಯೋಗ ಸಾಧನೆಯ ರಹಸ್ಯ. ಪಂಚಭೂತಗಳು ಕ್ರಮವಾಗಿ ಪೃಥ್ವೀ, ಜಲ, ತೇಜಸ್ಸು, ವಾಯು ಮತ್ತು ಆಕಾಶ ಎಂಬುದಾಗಿ ಐದು ಇವೆ. ಪಂಚಾಯತನ ಪೂಜೆಯ ದೇವತೆಗಳ ಭಾವನೆಯಲ್ಲಿಯೂ ಒಂದು ಕ್ರಮ ವಿದೆ. ಕ್ರಮವಾಗಿ ಗಣೇಶ, ದೇವೀ, ಶಿವ, ವಿಷ್ಣು ಮತ್ತು ಸೂರ್ಯ ಎಂಬುದಾಗಿ ಈ ಪೂಜೆಯಲ್ಲಿ ದೇವತೆಗಳು ಭಾವಿಸಲ್ಪಡುತ್ತಾರೆ. ಈ ದೇವತಾಶಕ್ತಿಗಳಿಗೂ ಪಂಚಭೂತಗಳಿಗೂ ತಾತ್ವಿಕವಾದ ಸಂಬಂಧವಿದೆ. ಈ ಪಂಚಭೂತಶಕ್ತಿಗಳೇ ಸೂಕ್ಷ್ಮ-ಸ್ಥೂಲ ವಿಧಾನಗಳಿಂದ ನಮ್ಮಶರೀರೇಂದ್ರಿಯ ಮನಸ್ಸು ಪ್ರಾಣಗಳ ರೂಪದಲ್ಲಿ ವಿಕಾಸ ಹೊಂದಿವೆ. ಈ ಐದು ದೇವತೆಗಳೂ ಒಂದೊಂದು ಭೂತಕ್ಕೆ ಅಧಿಪತಿಗಳು. ಪೃಥಿವೀ ತತ್ತ್ವಕ್ಕೆ ಶಿವನು ಅಧಿಪತಿ; ಜಲ ತತ್ತ್ವಕ್ಕೆ ಗಣೇಶನು; ತೇಜಸ್ತತ್ತ್ವಕ್ಕೆ ದೇವಿಯು; ವಾಯು ತತ್ತ್ವಕ್ಕೆಸೂರ್ಯನು; ಆಕಾಶ ತತ್ತ್ವಕ್ಕೆ ವಿಷ್ಣು; ಈ ವಿಷಯವನ್ನೇ ಶಾಸ್ತ್ರವು

"ಆಕಾಶಸ್ಯಾಧಿಪೋ ವಿಷ್ಣುರಗ್ನೇಶ್ಚೈವ ಮಹೇಶ್ವರೀ |
ವಾಯೋಃ  ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ||

ಎಂದು ವರ್ಣಿಸುತ್ತದೆ. ಪೃಥ್ವೀ ತತ್ತ್ವಕ್ಕೂ ಶಿವನಿಗೂ ಸಂಬಂಧವಿರುವುದರಿಂದ ಪಂಚಾಯತನ ಪೂಜೆಯ ಒಂದು ಕಲ್ಪದ ಪ್ರಕಾರ ಶಿವನನ್ನು ಪಾರ್ಥಿವ ಲಿಂಗರೂಪದಲ್ಲಿ ಪೂಜಿಸಬೇಕೆಂಬ ವಿಧಾನವಿದೆ. ಜಲತತ್ತ್ವಕ್ಕೆ ಸೇರಿದ ಗಣಪತಿಯನ್ನು ಆರಂಭದಲ್ಲಿ ಪೂಜಿಸಿ ಜಲತತ್ತ್ವದಲ್ಲಿ ಲಯಗೊಳಿಸಬೇಕು, "ಅಪ ಏವ ಸಸರ್ಜಾದೌ" ಎಂದು ಸೃಷ್ಟಿವಿಕಾಸ ಕ್ರಮದಲ್ಲಿ ಜಲತತ್ತ್ವಕ್ಕೆ ಆದ್ಯತೆ ಇದೆ. "ಗಣೇಶಾದಿ ಪಂಚದೇವತಾಭ್ಯೋ ನಮಃ" ಎಂಬ ಕ್ರಮವು ಈ ತಾತ್ತ್ವಿಕ ರಹಸ್ಯವನ್ನು ಒಳಗೊಂಡಿದೆ. ಅಗ್ನಿ ತತ್ತ್ವಕ್ಕೆ ಸೇರಿದ ದೇವಿಯ ಪೂಜೆಯಲ್ಲಿ ಪ್ರಧಾನವಾಗಿ ಅಗ್ನಿಕುಂಡದಲ್ಲಿ ಹೋಮರೂಪದಿಂದ ಮಾಡಬೇಕಾದ ವಿಧಾನವಿದೆ. ಆಕಾಶತತ್ತ್ವದಲ್ಲಿ ವಿಷ್ಣುವಿನ ಪೂಜೆ ಪ್ರಣವೋಪಾಸನೆ ಮುಂತಾದ ಶಬ್ದ ರೂಪವಾಗಿ ನಡೆಯುತ್ತದೆ, ಸೂರ್ಯನು ಜಗತ್ತಿನ ಆತ್ಮಭೂತನು. ಪ್ರಾಣರೂಪನು. "ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ" ಎಂದು ವರ್ಣಿತನಾಗಿದ್ದಾನೆ. ಒಂದೇ ದೇವತೆಯನ್ನು ಪ್ರಧಾನವಾಗಿ ಇಷ್ಟದೇವತೆಯನ್ನಾಗಿ ಮಾಡಿಕೊಂಡು ಪೂಜಿಸುವವರು ಮಧ್ಯದಲ್ಲಿ ಇಷ್ಟದೇವತೆಯನ್ನಿಟ್ಟು ಇತರನಾಲ್ಕುಕಡೆಗೆ ನಾಲ್ಕು ದೇವತೆಗಳನ್ನು ಇಟ್ಟು ಪೂಜೆಮಾಡುತ್ತಾರೆ.  ಸಂಪ್ರದಾಯಭೇದದಿಂದ ಉಪಾಸನಾಭೇದ ಕಂಡುಬಂದರೂ, ಒಟ್ಟಿನಲ್ಲಿ ಪಂಚದೇವತಾಪೂಜೆಯು ಎಲ್ಲ ಸಂಪ್ರದಾಯಗಳಲ್ಲಿಯೂ ಕಂಡುಬರುತ್ತದೆ. ಆದರೆ ಕೆಲವು ಸಂಪ್ರದಾಯಗಳಲ್ಲಿ ಮೂಲ ತಾತ್ತ್ವಿಕ ಸ್ವರೂಪವು ಮರೆಯಾಗಿ, ಮಧ್ಯಕಾಲದಲ್ಲಿ ಅವಿವೇಕದಿಂದ ಕೆಲವು ವಿಷಯಗಳು ಸೇರಿಕೊಂಡು ತಾತ್ತ್ವಿಕವಾದ ಸಂಪ್ರದಾಯಕ್ಕೆ ವಿರುದ್ಧವಾದ ಆಚರಣೆಯು ನಡೆಯುತ್ತಿರುತ್ತದೆ. ತತ್ತ್ವವನ್ನರಿತು ಸಂಪ್ರದಾಯವನ್ನು ಬೆಳೆಸುವ ಜ್ಞಾನಿಯಾದ ಗುರುವಿನ ಉಪದೇಶವನ್ನು ಪಡೆದು ಪೂಜಾ ಸಾಧನವನ್ನು ಮಾಡಿದರೆ ಅದರ ಫಲವು ನಿಶ್ಚಯವಾಗಿಯೂ ಪ್ರಾಪ್ತವಾಗುತ್ತದೆ. ಪ್ರಕೃತಿಭೇದದಿಂದ ಅಧಿಕಾರಿಗಳು ಭಿನ್ನ ಭಿನ್ನವಾಗುವುದರಿಂದ ಸಂಪ್ರದಾಯ ಭೇದಗಳು ಉಂಟಾಗುವುದು ಸಹಜವಾಗಿಯೇ ಇದೆ -
"ಮಾನವಾನಾಂ ಪ್ರಕೃತಯಃ ಪಂಚಧಾ ಪರಿಕೀರ್ತಿತಾಃ|
ಯತೋ ನಿರೂಪ್ಯತೇ ಸರ್ಗಃ ಪಂಚಭೂತಾತ್ಮಕೋಬುಧೈಃ||
ಭಿನ್ನಾ ಯದ್ಯಪಿ ಭೂತಾನಾಂ ಪ್ರಕೃತಿಃ ಪ್ರಕೃತೇರ್ವಶಾತ್|
ತಥಾಪಿ ಪಂಚತತ್ತ್ವಾನಾಮಾನುಸಾರೇಣ ತತ್ತ್ವವಿತ್||
ಪ್ರಮೇಯ ತತ್ತ್ವಪ್ರಾಚುರ್ಯಂ ವಿಮೃಶ್ಯ ವಿಧಿಪೂರ್ವಕಮ್|
ಉಪಾಸನಾಧಿಕಾರಸ್ಯ ಪಂಚಭೇದಮವರ್ಣಯತ್||

"ಜ್ಞಾನಿಗಳು ಸೃಷ್ಟಿಯು ಪಂಚಭೂತಾತ್ಮಕವಾಗಿದೆಯೆಂದು ಹೇಳುತ್ತಾರೆ. ಆದ್ದರಿಂದಲೇ ಮನುಷ್ಯರ ಪ್ರಕೃತಿಗಳೂ ಐದು ವಿಧವಾಗಿರುತ್ತವೆ. ಪ್ರಕೃತಿಯ ವಶದಿಂದ ಜೀವಿಗಳ ಸ್ವಭಾವವು ಯದ್ಯಪಿ ಭಿನ್ನ ಭಿನ್ನವಾಗಿರುತ್ತದೆ. ಆದರೂ ತತ್ತ್ವಜ್ಞಾನಿಯಾದವನು ಪಂಚತತ್ತ್ವಗಳ ಕ್ರಮವನ್ನು ಅನುಸರಿಸಿ, ಪ್ರಮೇಯುಭೂತವಾದ ತತ್ತ್ವಗಳ ಪ್ರಾಚುರ್ಯವನ್ನು ವಿಧಿಪೂರ್ವಕವಾಗಿ ವಿಮರ್ಶಿಸಿ, ಉಪಾಸನೆಯ ಅಧಿಕಾರದಲ್ಲಿ ಐದು ಭೇದಗಳನ್ನು ವರ್ಣಿಸಿದ್ದಾನೆ."
ಪ್ರಾಮಾಣಿಕವಾಗಿ ಪರಮ ಪುರುಷಾರ್ಥವನ್ನು ಪಡೆಯಲಪೇಕ್ಷಿಸುವ ಸಾಧಕನು ಸದ್ಗುರುವಿನಿಂದ ಉಪದೇಶ ಪಡೆದು ಬಹಿರಂಗಪೂಜೆ ಮತ್ತು ಅಂತರಂಗ ಪೂಜೆಗಳ ರಹಸ್ಯವನ್ನು ಅರಿತು ಇಷ್ಟದೇವತೆಯನ್ನು ಉಪಾಸನೆ ಮಾಡಿ ಪೂಜಿಸಬೇಕು. ಈ ರೀತಿಯ ಪೂಜೆಯು ಒಂದು ಮಹಾ ಯೋಗವೇ ಸರಿ. ಹೀಗೆ ಪೂಜೆ ಮತ್ತು ಉಪಾಸನೆಗಳು ನಡೆದರೆ, ಪಂಚವಿಧವಾದ ಉಪಾಸನೆಯೂ ಏಕರೂಪವಾದ ಬ್ರಹ್ಮೋಪಾಸನೆಯೇ ಆಗುತ್ತದೆ. "ಉಪಾಸನಮ್ ಪಂಚವಿಧಂ ಬ್ರಹ್ಮೋಪಾಸನಮೇವತತ್||" ಎಂದು ಶಾಸ್ತ್ರವು ಸಾರುತ್ತದೆ. ಬ್ರಹ್ಮಾಂಡದ ಸ್ವರೂಪವನ್ನು ಪಿಂಡಾಡದ ರಹಸ್ಯವನ್ನೂ ಅರಿತು ಸಾಧಕನು ಯೋಗಾಯತನವೂ, ದೇವಾಯತನವೂ ಆದ ತನ್ನ ಶರೀರದಲ್ಲಿ ಪರಾಶಕ್ತಿಯ ಆವಿರ್ಭಾವ, ಊರ್ಧ್ವಗತಿ, ಪರಮ ಪದದ ನೆಲೆಗಳನ್ನು ಗುರುವಿನ ಅನುಗ್ರಹದಿಂದ ಅರಿತು, ಮೇರುದಂಡಸ್ಥವಾದ ಮೂಲಾಧಾರಾದಿ ಚಕ್ರಗಳಲ್ಲಿ ತಾತ್ವಿಕ ಪೂಜೆಯನ್ನು ನಡೆಸಬೇಕು. ಮೂಲಾಧಾರ ಚಕ್ರದಲ್ಲಿ ಪೃಥ್ವೀತತ್ತ್ವ ಶಕ್ತಿಯು ನೆಲೆಸಿದೆ. ಸ್ವಾಧಿಷ್ಠಾನದಲ್ಲಿ ಜಲತತ್ತ್ವ ಶಕ್ತಿ; ಮಣಿಪೂರದಲ್ಲಿ ಅಗ್ನಿತತ್ತ್ವ ಶಕ್ತಿ; ಅನಾಹತ ಚಕ್ರದಲ್ಲಿ ವಾಯುತತ್ತ್ವಶಕ್ತಿ; ವಿಶುದ್ಧಿ ಚಕ್ರದಲ್ಲಿ ಆಕಾಶ ತತ್ತ್ವಶಕ್ತಿ. ಆಜ್ಞಾಚಕ್ರವು ಗುರುಪೀಠ. ಇಲ್ಲಿ ಗುರುತತ್ತ್ವವನ್ನು ಪೂಜಿಸಬೇಕು.ಹೀಗೆ ಪಂಚ ತತ್ತ್ವಗಳ ಶಕ್ತಿಗಳನ್ನು ಬಹಿರಂಗಪೂಜೆಯ ಜೊತೆಗೆ ತಾತ್ತ್ವಿಕವಾಗಿ ಅಂತರಂಗದಲ್ಲಿ ಸಾಧಿಸಿ ಪರಮಪದವಾದ ಸಹಸ್ರಾರದಲ್ಲಿ ತನ್ನ ಇಷ್ಟದೈವವನ್ನು ಪರಬ್ರಹ್ಮರೂಪದಿಂದ ಉಪಾಸಿಸಿ ಪರಮಾತ್ಮೈಕ್ಯವನ್ನು ಹೊಂದಬೇಕು. ಹೀಗೆ ಬ್ರಹ್ಮಾತ್ಮಭಾವದಿಂದ ಪಂಚಾಯತನ ಪೂಜೆಯನ್ನು ಆಚರಿಸುವವರು ಆ ಬ್ರಹ್ಮಶಕ್ತಿಯೇ ಗಣೇಶಾದಿರೂಪದಿಂದ ಮೂಲಾಧಾರಾದಿ ಚಕ್ರಗಳಲ್ಲಿ ವ್ಯಕ್ತವಾಗುವುದೆಂಬುದನ್ನು ಮರೆಯಬಾರದು. ಆದ್ದರಿಂದಲೇ ಶಿವ, ವಿಷ್ಣು, ಶಕ್ತಿ, ಸೂರ್ಯ ಮತ್ತು ಗಣೇಶರಲ್ಲಿ ಅಭೇದಬುದ್ಧಿಯನ್ನು ಹೊಂದುವದೇ ಶ್ರೇಷ್ಠತಮವಾದ ಮಹಾಯೋಗ. ಆದ್ದರಿಂದಲೇ
"ಉಭಯೋರಂತರಂ ನಾಸ್ತಿ ಹ್ಯಾದಿತ್ಯಸ್ಯ ಶಿವಸ್ಯ ಚ "
(ಆದಿತ್ಯ ಮತ್ತು ಶಿವರಲ್ಲಿ ಅನ್ಯೋನ್ಯ ಭೇದವಿಲ್ಲ)
"ತ್ರಿಮೂರ್ತ್ಯಾತ್ಮಾ ತ್ರಿದೇವಾತ್ಮಾ ಸರ್ವದೇವಮಯೋರವಿಃ"
(ತ್ರಿಮೂರ್ತಿರೂಪನೂ, ತ್ರಿದೇವಾತ್ಮಕನೂ ಆದ ಸೂರ್ಯನು ಸರ್ವದೇವಮಯನು)
ಹೀಗೆಯೇ ಗಣಪತಿಯನ್ನು ಕುರಿತು,
"ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ| ತ್ವಂಸಾಕ್ಷಾದಾತ್ಮಾಸಿತ್ಯಮ್|"
(ಇದೆಲ್ಲವೂ ನೀನೇ, ನೀನೇ ಬ್ರಹ್ಮ. ನೀನೇ ಸಾಕ್ಷಾತ್ ಶಾಶ್ವತವಾದ ಆತ್ಮ )
ಎಂದು ಮುಂತಾದಾಗಿ ಶ್ರುತಿ ಮುಂತಾದೆಡೆಗಳಲ್ಲಿ ಪಂಚದೇವತೆಗಳಿಗೂ ಪರಬ್ರಹ್ಮನಿಗೂ ಐಕ್ಯವನ್ನು ವರ್ಣಿಸಿರುವುದನ್ನು ಕಾಣುತ್ತೇವೆ. ದೇವಿಯೂ ಪರಬ್ರಹ್ಮರೂಪಳೇ. ಎಲ್ಲ ದೇವತೆಗಳನ್ನೂ ಅಂತರಂಗಕ್ಕೆ ಪೋಷಕವಾದ  ಉಚಿತ ಬಾಹ್ಯದ್ರವ್ಯಗಳಿಂದ ಪೂಜಿಸಿ, ಅಂತರಂಗದಲ್ಲಿ ತತ್ತ್ವಮಯವಾಗಿ, ಯೋಗಮಯವಾಗಿ, ಪೂಜೆಯನ್ನು ನಡೆಸಿ, ಕೊನೆಗೆ ಪರಬ್ರಹ್ಮನಲ್ಲಿ ಐಕ್ಯಗೊಳಿಸಬೇಕು. ಇದೇ ಪೂಜಾರಹಸ್ಯ. ಇದೇ ಯೋಗರಹಸ್ಯ. ಇದೇ ಬ್ರಹ್ಮಾನುಭವ.

ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್|
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ||

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ:  ೧೦. ೧೯೮೧ : ಆಗಸ್ಟ್  ತಿಂಗಳಲ್ಲಿ  ಪ್ರಕಟವಾಗಿದೆ.   

Sunday, October 18, 2020

ಆರ್ಯಸಂಸ್ಕೃತಿ ದರ್ಶನ - 15 (Arya Samskruti Darshana - 15)

ಮೌನವ್ಯಾಖ್ಯಾನದ ಮಹತ್ವ

ಲೇಖಕರು : ವಿದ್ವಾನ್ ಶ್ರೀ ಶೇಷಾಚಲ ಶರ್ಮಾ


 
ಗುರುವು ಶಿಷ್ಯರಿಗೆ ತತ್ತ್ವವನ್ನು ಉಪದೇಶಿಸುವ ಮಾರ್ಗಗಳು ಅಸಂಖ್ಯಾತವಾಗಿವೆ. ಚೋದಕ, ಬೋಧಕ ಮತ್ತು ಮೋಕ್ಷಪ್ರದ ಎಂದು ಮೂರು ವಿಧವಾದ  ಗುರುಗಳನ್ನು ಶಾಸ್ತ್ರವು ನಿರ್ದೇಶಿಸುತ್ತದೆ. ಚೋದಕನು ತತ್ತ್ವ ದರ್ಶನಕ್ಕೆ ಬೇಕಾದಪ್ರೇರಣೆಯನ್ನು ನೀಡುತ್ತಾನೆ. ಬೋಧಕನು "ನಾನಾ ದೇಶಿಕ ವಕ್ತ್ರಸ್ಥೈರುಪಾಯೈರ್ಯುಕ್ತಿ ಕಲ್ಪಿತೈಃ"-  ಎಂದು ಹೇಳುವಂತೆ ನಾನಾ ವಿಧವಾದ ಉಪಾಯಗಳಿಂದ ಶಿಷ್ಯನಿಗೆ ತತ್ತ್ವವನ್ನು ಬೋಧಿಸುತ್ತಾನೆ.  ಮೋಕ್ಷಪ್ರದನಾದ ಗುರುವು ಶಿಷ್ಯನಿಗೆ ಪರಮಾನಂದ ಪದವನ್ನು ಸಾಕ್ಷಾತ್ತಾಗಿ ದೊರಕಿಸಿಕೊಡುತ್ತಾನೆ. ಆದ್ದರಿಂದಲೇ "ಪರತತ್ವವೇ  ಮೋಕ್ಷಪ್ರದಗುರು" ಎಂಬುದಾಗಿ ಶಾಸ್ತ್ರಗಳು ಸಾರುತ್ತವೆ. ಪರಿಪೂರ್ಣ ಪರತತ್ತ್ವವನ್ನು ಸದಾ ಅನುಭವಿಸುತ್ತಾ, ಬ್ರಹ್ಮಭಾವದಿಂದ ಬೆಳಗುತ್ತಿರುವ ಸದ್ಗುರುವು ಚೋದಕನೂ , ಬೋಧಕನೂ ಆಗಿ ಕೊನೆಗೆ ಮೋಕ್ಷಪ್ರದನೂ ಆಗುತ್ತಾನೆ. ನೇರವಾಗಿ ಪರತತ್ತ್ವ  ಸ್ಥಿತಿಗೇರಿಸುವ ಉಪದೇಶ ವಿಧಿಗಳಲ್ಲಿ, ಮೌನವ್ಯಾಖ್ಯಾನದ ವಿಧಾನವು ಪರಮ ಶ್ರೇಷ್ಠವೂ ವಸ್ತು ನಿಷ್ಠವೂ ಆಗಿದೆ.

"ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ|
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನ ಸಂಶಯಾಃ||

ಇದೊಂದು ಆಶ್ಚರ್ಯದ ಸಂಗತಿ. ವಟವೃಕ್ಷದ (ಆಲದ ಮರದ)  ಬುಡದಲ್ಲಿ, ಗುರು ಶಿಷ್ಯರು ಆಸೀನರಾಗಿದ್ದಾರೆ. ಶಿಷ್ಯರಾದರೋ ಬಹಳ ವೃದ್ಧರಾದವರು, ಗುರುವು ಮಾತ್ರ ಯುವಕನಾಗಿದ್ದಾನೆ. ಗುರುವಿನ ವ್ಯಾಖ್ಯಾನ ವಿಧಾನವೆಂದರೆ, ಮೌನ. ಅದರಿಂದ ಶಿಷ್ಯರ ಸಮಸ್ತ ಸಂದೇಹಗಳು ನಿವೃತ್ತವಾದವು.

ಪರತತ್ತ್ವ ಜಿಜ್ಞಾಸುಗಳು ಈ ವಿಧವಾದ ಸನ್ನಿವೇಶವನ್ನು ಬಹಳ ಭಕ್ತಿ ಶ್ರದ್ಧೆಗಳಿಂದ ಅನುಸಂಧಾನ ಮಾಡುತ್ತಾರೆ. ಈ ಪದ್ಯವನ್ನು ಹಾಡಿ ಹಾಡಿ ನಲಿಯುತ್ತಾರೆ. ಮೌನ ವ್ಯಾಖ್ಯಾನದ ರಹಸ್ಯವು ಸಾಮಾನ್ಯ ಬುದ್ಧಿಗೆ ಎಟುಕುವುದಿಲ್ಲ. ಮೌನ ವ್ಯಾಖ್ಯಾನದ ರಹಸ್ಯವನ್ನು ಮೌನದಿಂದಲೇ ಭೇದಿಸಿ ಅರಿಯಬೇಕು. ಆಧುನಿಕ ವಿದ್ಯಾಭ್ಯಾಸ  ಕ್ಷೇತ್ರಗಳಲ್ಲಿ ಶಿಕ್ಷಣ ವಿಧಾನಗಳ ಬಗ್ಗೆ ಬಹಳ ಸಂಶೋಧನೆಗಳು ನಡೆದಿವೆ. ವೈಜ್ಞಾನಿಕವಾದ ಹೊಸ ಹೊಸ ಬೋಧನಾ ವಿಧಾನಗಳೂ ರೂಪಿತವಾಗಿವೆ ಮತ್ತು ಆಗುತ್ತಲಿವೆ. ಆದರೆ ಮೌನ ವ್ಯಾಖ್ಯಾನದ ರಹಸ್ಯವಾಗಲೀ, ಮಹತ್ವವಾಗಲೀ ಆಧುನಿಕ ವಿಜ್ಞಾನಿಯ ಅಥವಾ ಸಂಶೋಧಕನ ಮನಸ್ಸಿಗೆ ತಟ್ಟಿದೆ ಎಂದು ಹೇಳಲಾಗುವುದಿಲ್ಲ. ಉಪದೇಶ ವಿಧಾನಗಳಲ್ಲಿ ವಾಗ್ವಿಧಾನಕ್ಕೆ ಅನಿವಾರ್ಯವಾದ ಪ್ರಧಾನ ಸ್ಥಾನ ಇರುವುದು ಸರಿಯಷ್ಟೆ. ವಾಗ್ವಿಧಾನವು ಪ್ರಭಾವಯುತವೂ, ಸಫಲವೂ ಆಗುವುದಕ್ಕಾಗಿ, ಅದಕ್ಕೆ ಪೋಷಕವಾದ ಇತರ ಲೌಕಿಕ  ಸಾಧನೆಗಳನ್ನು ಬೋಧಕನು ಆಶ್ರಯಿಸುವುದು ಆವಶ್ಯಕವಾಗುತ್ತದೆ. ವೈಜ್ಞಾನಿಕ ವಿಧಾನದಿಂದ ಆ ರೀತಿಯ ಸಾಧನಗಳನ್ನು ಪ್ರಯೋಗಿಸಿ ಬೊಧನೆ ಮಾಡಿದರೆ, ಶಿಷ್ಯನ ಮನಸ್ಸಿನಲ್ಲಿ ಜ್ಞಾನದ ಪ್ರಬೋಧವು ಶೀಘ್ರವಾಗಿ ಆಗುವುದಷ್ಟೇ ಅಲ್ಲದೆ, ಸ್ಥಿರವಾಗಿ ನೆಲೆಗೊಳ್ಳುತ್ತದೆ. ಇದು ಆಧುನಿಕ ಮನೋವಿಜ್ಞಾನಕ್ಕೆ ಸಮ್ಮತವಾದ ಸಿದ್ಧಾಂತವಾಗಿದೆ.

ಆದರೆ ಮೌನ ವ್ಯಾಖ್ಯಾನವು ಸಹಜವೂ.ಸುಂದರವೂ, ಅತ್ಯಂತ ವಿಜ್ಞಾನಯುಕ್ತವೂ ಆಗಿದೆಯೆಂದ ತಿಳಿಯಬೇಕು. ಮೌನ ವ್ಯಾಖ್ಯಾನದ ಪ್ರಭಾವವಂತೂ ಅತ್ಯಧ್ಬುತವಾದುದು. ಇದರಲ್ಲಿ ಗುರುವು ತ್ರಿಮೂರ್ತಿ ಸ್ವರೂಪನೂ, ವಿದ್ಯಾಮಯನೂ,ಸಾಕ್ಷಾತ್ ತತ್ತ್ವಮಯನೂ ಆಗಿರುತ್ತಾನೆ. ಶಿಷ್ಯನು ಸರ್ವಭಾವದಿಂದ ಗುರುವನ್ನು ಆಶ್ರಯಿಸುವವನಾಗಿರಬೇಕು. ಸಾಮಾನ್ಯವಾಗಿ ಲೋಕ ಜೀವನದಲ್ಲಿ ಒಬ್ಬ ವ್ಯಕ್ತಿಯಲ್ಲಿ ಉಂಟಾಗುವ ಮನೋಭಾವಗಳು ಎದುರಾಳಿಯ ಮೇಲೆ ಕೂಡಲೇ ಪ್ರಭಾವ ಬೀರುವುದನ್ನು ನಾವು ಕಾಣತ್ತೇವೆ. ಸಂತೋಷದಿಂದ ಉಬ್ಬಿ ಮುಖದಲ್ಲೂ ಸಂತೋಷಮುದ್ರೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯನ್ನು ನೋಡಿದಕೂಡಲೇ, ಎದುರಾಳಿಯ ಮನಸ್ಸಿನಲ್ಲಿಯೂ ಸಂತೋಷಭಾವ  ಉಂಟಾಗಿ, ಮುಖದಲ್ಲಿ ನಗುವಿನ ಮುದ್ರೆ ಮೂಡುತ್ತದೆ. ಒಬ್ಬ ವ್ಯಕ್ತಿಯು ಕೋಪದಿಂದ ಕೆಂಪೇರಿದ ಮುಖವುಳ್ಳವನಾಗಿ ಛಡಪಡಿಸುತ್ತಿರುವುದನ್ನು ನೋಡಿದ ಕೂಡಲೇ ಎದುರಾಳಿಯ ಮನಸ್ಸಿನಲ್ಲಿಯೂ ಕೋಪಾಂಕುರವುಂಟಾಗಿ, ಮುಖಮುದ್ರೆ ಬದಲಾಯಿಸುವುದನ್ನು ಕಾಣುತ್ತೇವೆ. ಶೋಕಗ್ರಸ್ತನಾಗಿ ಕರುಣಾಕ್ರಂದವನ್ನು ಮಾಡುತ್ತಿರುವ ವ್ಯಕ್ತಿಯನ್ನು ನೋಡಿದ ಕೂಡಲೇ, ಹಾಗೆ ನೋಡಿದವವನ  ಹೃದಯವೂ ಕರಗಿ ಕರುಣ ಭಾವವನ್ನು ತಾಳುತ್ತದೆ. ಹಾಗೆ ಪ್ರತಿಕ್ರಿಯೆಯನ್ನು ಹೊಂದಬೇಕೆಂದು ಮಾತಿನಿಂದ ಯಾರೂ ಉಪದೇಶ ಮಾಡದಿದ್ದರೂ, ಇಂತಹ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿಯಲ್ಲುಂಟಾಗುವ ಲೌಕಿಕ ಭಾವಗಳು ಎದುರಾಳಿಯ ಮೇಲೆ ಪ್ರಭಾವ ಬೀರುವುದು ಸಹಜವಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿ ಎದರಾಳಿಯೂ ಸಂಸ್ಕಾರವಂತನಾಗಿರಬೇಕು. ಅಂದರೆ, ಸಂತೋಷ, ಕೋಪ, ಶೋಕ ಇತ್ಯಾದಿ ಮನೋಭಾವಗಳ ಸಂಸ್ಕಾರವಿಲ್ಲದವನು ಆಯಾಭಾವಗಳಿಂದ ಪ್ರಭಾವಿತನಾಗುವುದಿಲ್ಲ. ಉದಾಹರಣೆಗೆ-ಆಗತಾನೇ ಹುಟ್ಟಿದ ಮಗುವಿನ ಮುಂದೆ ಈ ರೀತಿಯ ಭಾವಗಳನ್ನು ಪ್ರದರ್ಶಿಸಿದರೆ, ಅದರ ಮೇಲೆ ಗಮನಾರ್ಹವಾದ ಯಾವ ಪ್ರಭಾವವೂ  ಉಂಟಾಗುವುದಿಲ್ಲ. ಅಂತೆಯೇ ಸ್ಥಿತಪ್ರಜ್ಞನಾದ ಯೋಗಿಯ ಮೇಲೂ ಈ ರೀತಿಯಾದ ಭಾವಗಳು ಬೀರಲಾರವು.

ಈ ರೀತಿಯ ವೈಜ್ಞಾನಿಕ ಹಿನ್ನೆಲೆಯಲ್ಲಿ ಮೌನೋಪದೇಶದ ರಹಸ್ಯವನ್ನು ಅರಿಯುವುದು ಆವಶ್ಯಕ. ವಟವೃಕ್ಷದ ಬುಡದಲ್ಲಿ ಈ ಮೌನವ್ಯಾಖ್ಯಾನದ ಆಶ್ಚರ್ಯ ಘಟನೆಯನ್ನು ವರ್ಣಿಸುವುದರಲ್ಲಿ ಒಂದು ವಿಶೇಷ ರಹಸ್ಯವಿದೆ. ವಟ ವೃಕ್ಷವು ಬಿಳಲುಬಿಟ್ಟುಕೊಂಡು ಬೆಳೆಯುತ್ತಾ (ವಿಸ್ತರಿಸುತ್ತಾ) ಹೋಗುವ ಸ್ವಭಾವವುಳ್ಳದ್ದು. ಈ ಸಂಸಾರವೂ ಹಾಗೆಯೇ ವಿಸ್ತಾರ ಹೊಂದುತ್ತಿರುವುದು. ಹೀಗೆ ವಟವೃಕ್ಷವು ಸಂಸಾರದ ಸಹಜವಾದ ಪ್ರತೀಕವಾಗಿದೆ. ಇಂತಹ ವೃಕ್ಷದ ಮೂಲದಲ್ಲಿ ತತ್ತ್ವೋಪದೇಶಮಾಡಲು ಗುರುವು ಕುಳಿತಿರುವುದು, ಅಂತಹ ಉಪದೇಶವನ್ನು ಪಡೆಯಲು ಶಿಷ್ಯರು ಅಂತಹ ಗುರುವನ್ನು ಆಶ್ರಯಿಸಿರುವುದು:- ಈ ಗುರು ಶಿಷ್ಯ ಸಮಾಗಮ ಎಷ್ಟುಸಮಂಜಸವಾಗಿದೆ! ಎಂದಿಗೂ ಕಂದದಿರುವ ಜ್ಞಾನ ಪ್ರಬೋಧದ ತಾರುಣ್ಯ ಗುರುವಿನಲ್ಲಿ ತುಂಬಿದೆ. ಶಿಷ್ಯರಾದರೋ ಸಂಸಾರ ಚಕ್ರದಲ್ಲಿ ಸಿಕ್ಕಿ, ಬಳಲಿ, ಬೆಂಡಾಗಿ, ವೃದ್ಧರಾಗಿದ್ದಾರೆ. ತಾಪತ್ರಯದಿಂದ ಪೀಡಿತರಾದ ಅವರ ಶರೀರ, ಇಂದ್ರಿಯ, ಮನಸ್ಸು, ಬುದ್ಧಿಗಳು, ತತ್ತರಿಸಿ ಜೀರ್ಣವಾಗಿವೆ. ಆದರೆ ಈಗ ತತ್ತ್ವದ ಜಜ್ಞಾಸುಗಳಾದ ಅವರಲ್ಲಿ ಗುರುಭಕ್ತಿ,  ಪ್ರಾಮಾಣಿಕತೆ, ತತ್ತ್ವನಿಷ್ಠೆ, ಮುಂತಾದ ಉತ್ತಮ ಶಿಷ್ಯಗುಣಗಳು ಜಾಗೃತವಾಗಿವೆ. ಇಂತಹ ಸುಸಂಧರ್ಭದಲ್ಲಿ ಗುರು ಶಿಷ್ಯರಿಗೆ ನೇರವಾಗಿ ತತ್ತ್ವ ಬೋಧವುಂಟಾಗುವಂತೆ, ಮೌನವ್ಯಾಖ್ಯಾನದಿಂದ ಉತ್ತಮೋಪದೇಶವನ್ನು ಮಾಡುತ್ತಾನೆ. ಶಿಷ್ಯರು ಅತ್ಯಂತ ಪರಿಪಾಕ ಹೊಂದಿದ ಮನಸ್ಸುಳ್ಳವರಾಗಿ, ಪರತತ್ತ್ವಮಯನಾದ ಗುರುವಿಗೆ ಅಭಿಮುಖವಾಗಿ ಕುಳಿತಿದ್ದಾರೆ. ಶಿಷ್ಯರಿಗೆ ಮಾಡಬೇಕಾದ ಚೋದನೆ, ಬೋಧನೆಗಳೆರಡರ ಹಂತವನ್ನೂ ದಾಟಿಯಾಗಿದೆ. ಇನ್ನು ಉಳಿದಿರುವುದು, ನೇರವಾದ ಪರತತ್ತ್ವ ಪ್ರಾಪ್ತಿ,. ಕೂರ್ಮವು ತನ್ನ ಅಂಗಗಳನ್ನು ಒಳಗೆ ಎಳೆದುಕೊಳ್ಳುವಂತೆ, ಗುರುವು ಸಮಸ್ತ ಇಂದ್ರಿಯಗಳನ್ನೂ ಉಪಸಂಹಾರ ಮಾಡಿಕೊಂಡು, ಮನೋಬುದ್ಧಿಗಳನ್ನು ಪರಮಾತ್ಮನಲ್ಲಿ ನಿಲ್ಲಸಿ, ಸಹಜವಾದ ಮಹಾ ಮೌನದ ಸ್ಥಿತಿಯಲ್ಲಿದ್ದಾನೆ. ನಿವಾತ ದೀಪದಂತೆ ಒಳಗೆ ಬೆಳಗುತ್ತಿರುವ ಅಂತರ್ಜ್ಯೋತಿಯ ಪ್ರಕಾಶದಿಂದ ತುಂಬಿ ಹೋಗಿದ್ದಾನೆ. ಆ ಪರಮಾನಂದ ಭಾವಕ್ಕೆ ಸಹಜವಾದ ಶಾಂಭವೀ ಮುದ್ರೆಯು ಗುರುವಿನಲ್ಲಿ ಮೂಡಿದೆ. ಜಾಲಂಧರ, ಉಡ್ಡೀಯನ, ಮೂಲ ಎಂಬ ಮೂರು ಬಂಧಗಳು ಯೋಗೈಶ್ವರ್ಯ ಸಂಪನ್ನನಾದ ಗುರುವಿನ ಶ್ರೀ ವಿಗ್ರಹದಲ್ಲಿ ಸಹಜವಾಗಿ ಏರ್ಪಟ್ಟಿವೆ.

"ಜಾಲಂಧರೋಡ್ಡೀಯನ ಮೂಲಬಂಧಾನ್
ಜಲ್ಪಂತಿ ಕಂಠೋಧರ ಪಾಯು ಸಂಸ್ಥಾನ್|
ಬಂಧ ತ್ರಯೇಸ್ಮಿನ್ ಪರಿಚೀಯಮಾನೇ
ಬಂಧಃ ಕುತೋ ದಾರುಣ ಕಾಲ ಪಾಶಾತ್||

ಜೀವದೇವರ ಏಕೀಭಾವವನ್ನುಹೊಂದಿರುವ ಜ್ಞಾನ ಮುದ್ರೆ, ಆ ಜ್ಞಾನವನ್ನು ಸೂಚಿಸುವ ವ್ಯಾಖ್ಯಾಮುದ್ರೆಗಳು ಸಹಜವಾಗಿ ಶೋಭಿಸುತ್ತಿವೆ. ಗುರುವಿನ ಮುಖದಲ್ಲಿ ಬೆಳಗುತ್ತಿರುವ ಬ್ರಹ್ಮಾನಂದದ ಪ್ರಕಾಶವು, ಸುಕೃತಿ ಜೀವಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಗುರುವಿನ ಈ ಮೌನಮುದ್ರೆಯಲ್ಲಿ ವಿಶ್ವವನ್ನೇ ತನ್ನೆಡೆಗೆ ಎಳೆದಕೊಳ್ಳುವ ಯೋಗೈಶ್ವರ್ಯದ ಪ್ರಭಾವ ಅನಿರ್ವಚನೀಯವಾದುದು. ಗುರುವಿನ ಪರಮ ಕರುಣೆಗೆ ಪಾತ್ರರಾದ ಶಿಷ್ಯರು ಅವನ ಈ ಯೋಗೈಶ್ವರ್ಯದ ಪ್ರಭಾವಕ್ಕೆ ಸಿಕ್ಕಿದರು. ಶಿಷ್ಯರ ದೇಹ, ಪ್ರಾಣ, ಮನಸ್ಸು, ಇಂದ್ರಿಯ, ಬುದ್ಧಿಗಳು ಪಾವನವಾದವು. ಶುದ್ಧಾತ್ಮರಾದ ಅವರು ಗುರುವಿನೊಂದಿಗೆ ಏಕೀ ಭಾವವನ್ನು ಹೊಂದಿ, ತಾವೂ ಆ ಮಹಾಮೌನದ ಮುದ್ರೆಗೆ ಏರಿದರು. ತಿಳಿಯಬೇಕಾದುದನ್ನು ತಿಳಿದರು. ಪಡೆಯಬೇಕಾದುದನ್ನು ಪಡೆದು ಧನ್ಯರಾದರು. ಈ ಯೋಗೈಶ್ವರ್ಯದ ಸ್ಥಿತಿಯಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ. ಅದು ತತ್ತ್ವನಿರ್ಣಯದ ಸ್ಥಿತಿ. ಆ ಸ್ಥಿತಿಯಲ್ಲಿ ಹೃದಯಗ್ರಂಥಿಯು ಭೇದಗೊಂಡು, ಸಂಶಯಗಳೆಲ್ಲಾ ನಿರ್ಮೂಲಗೊಂಡು, ಸಕಲ ಕರ್ಮಗಳೂ ಕ್ಷಯ ಹೊಂದಿ, ಕೇವಲ ಪರಾತ್ಪರ ಸತ್ಯ ವಸ್ತುವಿನ ಸಾಕ್ಷಾತ್ಕಾರವೊಂದೇ  ನೆಲೆಗೊಳ್ಳುತ್ತದೆ:-

"ಭಿದ್ಯತೇ ಹೃದಯಗ್ರಂಥಿಃ   ಛಿದ್ಯಂತೇ ಸರ್ವ ಸಂಶಯಾಃ |
ಕ್ಷೀಯಂತೇ ಚಾಸ್ಯ ಕರ್ಮಾಣಿ, ತಸ್ಮಿನ್ ದೃಷ್ಟೇ ಪರಾವರೇ||"  

ಇದೇ ಗುರುವಿನ ಮಹಾ ಮೌನವ್ಯಾಖ್ಯಾನದ ಮಹಿಮೆ, ಯೋಗೇಶ್ವರನಾದ ಅಂತಹ ಗುರುವಿಗೆ ಪ್ರಾಣ ಪ್ರಣಾಮಗಳು. ಅಂತಹ ಗುರುವನ್ನು ಸರ್ವಭಾವಗಳಿಂದಲೂ ಉಪಾಸಿಸಿ, ತತ್ತ್ವ ಸಾಕ್ಷಾತ್ಕಾರ ಪಡೆದು ಧನ್ಯರಾದ ಶಿಷ್ಯರಿಗೂ ಪ್ರಾಣ ಪ್ರಣಾಮಗಳು:--

"ಗುರುರೇವ ಪರಂಬ್ರಹ್ಮ ಗುರುರೇವ ಪರಾಗತಿಃ|
ಗುರುರೇವ ಪರಾವಿದ್ಯಾ ಗುರುರೇವ ಪರಾಯಣಂ||"

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಸಂಪುಟ :3 ಸಂಚಿಕೆ:3 ರಲ್ಲಿ ಪ್ರಕಟವಾಗಿದೆ.

Sunday, October 11, 2020

ಆರ್ಯಸಂಸ್ಕೃತಿ ದರ್ಶನ - 14 (Arya Samskruti Darshana - 14)

ತೀರ್ಥಯಾತ್ರೆ

ಲೇಖಕರು : ವಿದ್ವಾನ್ ಶ್ರೀ ಶೇಷಾಚಲ ಶರ್ಮಾ


  

"ಗುಡಿಯಿಲ್ಲದ ಹಳ್ಳಿಯಿಲ್ಲ", "ದೇವಾಲಯವಿಲ್ಲದ ಊರು ಇಲ್ಲ", ದೇವಾಲಯವಿಲ್ಲದೆಡೆ ಮನುಷ್ಯನು ವಾಸಮಾಡಬಾರದು'' ಎಂದು ಮುಂತಾದ ನಾಡುನುಡಿ ಗಳು ಪ್ರಸಿದ್ಧವಾಗಿವೆ. ನಮ್ಮ ಭಾರತ ಭೂಮಿಯಲ್ಲಿ ಸನಾತನ ಸಂಪ್ರದಾಯವನ್ನು ಅನುಸರಿಸಿ ಸಾಮಾನ್ಯವಾಗಿ ಜನರು ತೀರ್ಥಯಾತ್ರೆ, ಕ್ಷೇತ್ರದರ್ಶನವನ್ನು ಮಾಡುವುದು
ವಾಡಿಕೆಯಲ್ಲಿದೆ. ಭವ್ಯವೂ, ದಿವ್ಯವೂ ಆದ ಭಾರತಭೂಮಿಯಲ್ಲಿನ ತೀರ್ಥಕ್ಷೇತ್ರಗಳ ರಹಸ್ಯ ಮತ್ತು ಹಿನ್ನೆಲೆಗಳು ಪ್ರಾಚೀನ ಮಹರ್ಷಿಗಳ ಹೃನ್ಮೂಲದಿಂದ ಹೊರಹೊಮ್ಮಿ ದವು. ತೀರ್ಥವೆಂದರೆ ಸಾಮಾನ್ಯವಾಗಿ ಪವಿತ್ರ ಜಲವುಳ್ಳ ಪೂಜ್ಯವಾದ ಸ್ಥಾನ ಎಂಬ ಅಭಿಪ್ರಾಯವಿದೆ. ಅಂತೆಯೇ ದೇವತಾದಿ ಸಂಬಂಧದಿಂದ ಪವಿತ್ರವೂ ಪೂಜ್ಯವೂ ಆದ ಪ್ರದೇಶ ಕ್ಷೇತ್ರವೆನಿಸುತ್ತದೆ. ಪವಿತ್ರವಾದ ಭಾವನೆಯ ಹಿನ್ನೆಲೆಯಲ್ಲಿ ತೀರ್ಥವೂ ಪವಿತ್ರವಾದ ಕ್ಷೇತ್ರವೇ ಆಗುತ್ತದೆ. ಕ್ಷೇತ್ರವೂ ಪವಿತ್ರವಾದ ತೀರ್ಥವೇ ಆಗುತ್ತದೆ, 

ತೀರ್ಥಕರ ಎಂಬುದು ಭಗವಂತನ ಪವಿತ್ರ ನಾಮಗಳಲ್ಲಿ ಒಂದಾಗಿದೆ. ಬ್ರಹ್ಮ ಜ್ಞಾನಿಯಾದ ಬ್ರಾಹ್ಮಣನ ಚರಣಗಳು ಪವಿತ್ರವಾದ ತೀರ್ಥ. ಬ್ರಾಹ್ಮಣನ ಬಲಕಿವಿ ಯನ್ನು ತೀರ್ಥವೆಂದು ಕರೆಯುತ್ತಾರೆ. ವೇದಜ್ಞನಾದ ಬ್ರಾಹ್ಮಣನ ಕೈಯಲ್ಲಿ ದೇವ ತೀರ್ಥ, ಋಷಿತೀರ್ಥ, ಬ್ರಹ್ಮತೀರ್ಥ, ಪಿತೃತೀರ್ಥ ಎಂಬ ನಾಲ್ಕು ತೀರ್ಥಗಳಿವೆ. ಮತ್ತೊಂದು ದೃಷ್ಟಿಯಿಂದ ತೀರ್ಥವನ್ನು ಜಂಗಮತೀರ್ಥ, ಮಾನಸತೀರ್ಥ, ಸ್ಥಾವರ ತೀರ್ಥ ಎಂದು ಮೂರುವಿಧವಾಗಿ ಕರೆಯುತ್ತಾರೆ.  ಹ್ಮಜ್ಞಾನಸಂಪನ್ನನಾದ ಬ್ರಾಹ್ಮಣನೇ ಜಂಗಮತೀರ್ಥ. ಸತ್ಯ, ಕ್ಷಮಾ, ಇಂದ್ರಿಯ ನಿಗ್ರಹ, ದಯೆ, ಆರ್ಜವ, ದಾನ, ದಮ, ಸಂತೋಷ, ಬ್ರಹ್ಮಚರ್ಯ, ಪ್ರಿಯವಾದಿತಾ, ಜ್ಞಾನ, ಧೃತಿ, ಪುಣ್ಯ-ಇವೇ ಮಾನಸ ತೀರ್ಥ. ಮನಶ್ಶುದ್ಧಿಯೇ ಶ್ರೇಷ್ಠತಮವಾದ ತೀರ್ಥವೆನಿಸುತ್ತದೆ. ಸ್ಥಾವರತೀರ್ಥವನ್ನು ಭೌಮತೀರ್ಥವೆಂದೂ ಕರೆಯುತ್ತಾರೆ. ಯೋಗಾಯತನವಾದ ಶರೀರದಲ್ಲಿ ಪವಿತ್ರವಾದ ಭಾಗಗಳಿರುವಂತೆ ಪೃಥ್ವಿಯಮೇಲೂ ಕೆಲವು ಪವಿತ್ರ ಪ್ರದೇಶಗಳು ಇವೆ. ಅವೇ ಭೌಮ (ಸ್ಥಾವರ) ತೀರ್ಥಗಳು. ತೀರ್ಥದ ಪುಣ್ಯತ್ವಕ್ಕೆ ಕಾರಣವನ್ನು ಹೀಗೆ ಹೇಳುತ್ತಾರೆ:-

" ಪ್ರಭಾವಾದಧ್ಬುತಾಧ್ಬೂಮೇಃ ಸಲಿಲಸ್ಯ ಚ ತೇಜಸಾ|
ಪರಿಗ್ರಹಾನ್ಮುನೀನಾಂ ಚ ತೀರ್ಥಾನಾಂ ಪುಣ್ಯತಾ ಸ್ಮೃತಾ|| "

(ಭೂಮಿಯ ಅಧ್ಬುತವಾದ ಪ್ರಭಾವದಿಂದಲೂ, ನೀರಿನ ವಿಶೇಷ ತೇಜಸ್ಸಿ(ಶಕ್ತಿ) ನಿಂದಲೂ, ಜ್ಞಾನಿಗಳ ಸ್ವೀಕಾರ ಸಂಬಂಧದಿಂದಲೂ ತೀರ್ಥಗಳಗೆ ಪುಣ್ಯತ್ವ ಉಂಟಾಗುತ್ತದೆ.) ಈ ಮೂರು ವಿಧವಾದ ತೀರ್ಥಗಳಲ್ಲಿ ಪವಿತ್ರ ಭಾವನೆಯಿಂದ ಸ್ನಾನ ಮಾಡಿ ಶುದ್ಧಾತ್ಮನಾದವನು ಉತ್ತಮ ಶ್ರೇಯಸ್ಸನ್ನು ಪಡೆಯುತ್ತಾನೆ.

"ತಸ್ಮಾತ್ ಭೌಮೇಷು ತೀರ್ಥೇಷು ಮಾನಸೇಷು ಚ ನಿತ್ಯಶಃ|
ಉಭಯೇಷ್ವಪಿ ಯಃ ಸ್ನಾತಿ ಸ ಯಾತಿ ಪರಮಾಂ ಗತಿಂ||
ಧ್ಯಾನಪೂತೇ ಜ್ಞಾನಜಲೇ ರಾಗದ್ವೇಷಮಲಾಪಹೇ|
ಯಃ ಸ್ನಾತಿ ಮಾನಸೇ ತೀರ್ಥೇ ಸ ಯಾತಿ ಪರಮಾಂ ಗತಿಂ||"

(ಆದ್ದರಿಂದ ಭೌಮ ತೀರ್ಥಗಳು ಮತ್ತು ಮಾನಸತೀರ್ಥಗಳು- ಇವೆರಡರಲ್ಲಿಯೂ ಯಾವಾಗಲೂ ಸ್ನಾನಮಾಡುವವನು ಪರಮಶ್ರೇಯಸ್ಸನ್ನು ಪಡೆಯುತ್ತಾನೆ. ರಾಗ ದ್ವೇಷಗಳೆಂಬ ಮಲವನ್ನು ತೊಡೆದುಹಾಕುವ ಮತ್ತು ಧ್ಯಾನದಿಂದ ಪವಿತ್ರವಾದ ಜ್ಞಾನಜಲರೂಪವಾದ ಮಾನಸ ತೀರ್ಥದಲ್ಲಿ ಸ್ನಾನಮಾಡುವವನು ಪರಮಶ್ರೇಯಸ್ಸನ್ನು ಹೊಂದುತ್ತಾನೆ) . ತೀರ್ಥಫಲಕ್ಕೆ ಅಧಿಕಾರಿಗಳು ಯಾರೆಂಬುದನ್ನು  ಹೀಗೆ ಹೇಳುತ್ತಾರೆ:-

"ಯಸ್ಯ ಹಸ್ತೌ ಚ ಪಾದೌ ಚ ಮನಶ್ಚೈವ ಸುಸಂಯತಂ|
ವಿದ್ಯಾ ತಪಶ್ಚ ಕೀರ್ತಿಶ್ಚ ಸ ತೀರ್ಥಫಲಮಶ್ನುತೇ||
ಅಕೋಪನೋsಮಲಮತಿಃ ಸತ್ಯವಾದೀ ಧೃಢವ್ರತಃ|
ಆತ್ಮೋಪಮಶ್ಚ ಭೂತೇಷು ಸ ತೀರ್ಥಫಲಮಶ್ನುತೇ||"

( ಕೈಗಳನ್ನೂ, ಕಾಲುಗಳನ್ನೂ, ಮನಸ್ಸನ್ನೂ, ಯಾವನು ಸಂಯಮಗೊಳಿಸಿದ್ದಾನೆಯೋ ಅಂದರೆ ಯಾವನು ಬಹಿರಿಂದ್ರಿಯ ಮತ್ತು ಅಂತರಿಂದ್ರಿಯಗಳ ಸಂಯಮವನ್ನು ಮಾಡಿದ್ದಾನೆಯೋ, ಯಾವನಲ್ಲಿ ವಿದ್ಯೆ, ತಪಸ್ಸು, ಕೀರ್ತಿಗಳು ಇರುತ್ತವೆಯೋ ಅಂತಹವನು ತೀರ್ಥಫಲವನ್ನು ಹೊಂದುತ್ತಾನೆ. ಕೋಪರಹಿತನೂ, ಶುದ್ಧ ಬುದ್ಧಿಯುಳ್ಳವನೂ, ಸತ್ಯವಾದಿಯೂ, ದೃಢವ್ರತನೂ, ಸಕಲಪ್ರಾಣಿಗಳನ್ನೂ ತನ್ನಂತಯೇ ಭಾವಿಸುವವನೂ ಆದವನೇ ತೀರ್ಥಫಲವನ್ನು ಪಡೆಯುತ್ತಾನೆ.) ಯಾರಿಗೆ ತೀರ್ಥಫಲವಿಲ್ಲವೆಂಬುದನ್ನೂ ಹೀಗೆ ವರ್ಣಿಸುತ್ತಾರೆ :-

"ಅಶ್ರದ್ಧಧಾನಃ ಪಾಪಾತ್ಮಾ ನಾಸ್ತಿಕೋಚ್ಛಿನ್ನ ಸಂಶಯಃ |
ಹೇತುನಿಷ್ಠಶ್ಚ ಪಂಚೈತೇ ನ ತೀರ್ಥಫಲಭಾಗಿನಃ ||"

(ಶ್ರದ್ದೆಯಿಲ್ಲದವನು, ಪಾಪಾತ್ಮನು, ನಾಸ್ತಿಕನು, ಸಂಶಯ ಪರಿಹಾರವಾಗದವನು, ಹೇತುವಾದದಲ್ಲಿಯೇ ಆಸಕ್ತನಾದವನು-ಈ ಐದು ಮಂದಿಯ ತೀರ್ಥಫಲಕ್ಕೆ ಭಾಗಿಗಳಾಗುವುದಿಲ್ಲ.)

'ಯೇವೈಕಾದಶಸಂಖ್ಯಾನಿ ಯಂತ್ರಿತಾನೀಂದ್ರಿಯಾಣಿ ವೈ|
ಸ ತೀರ್ಥ ಫಲಮಾಪ್ನೋತಿ ನರೋನ್ಯಃ ಕ್ಷೇಶಭಾಗ್ ಭವೇತ್ ||"

(ಹನ್ನೊಂದು ಇಂದ್ರಿಯಗಳನ್ನೂ ಸಂಯಮ ಮಾಡಿರುವವನೇ ತೀರ್ಥಫಲವನ್ನು ಪಡೆಯುತ್ತಾನೆ. ಬೇರೆ ಮನುಷ್ಯನು (ತೀರ್ಥಯಾತ್ರೆಯನ್ನು ಮಾಡಿ) ಕೇವಲ ಕ್ಲೇಶ ವನ್ನು ಹೊಂದುತ್ತಾನೆ.)
ಋಷಿಗಳು ಅತೀಂದ್ರಿಯವೂ, ಅವ್ಯಕ್ತವೂ ಆದ ತತ್ತ್ವವನ್ನು ತಮ್ಮ ಅಂತರ್ಹೃದಯದಲ್ಲಿ ಅನುಭವಿಸಿಕೊಂಡು ಕೆಲವು ಸಾಧನಗಳ ಮೂಲಕ ಲೋಕಕಲ್ಯಾಣ ಕ್ಕಾಗಿ ಹೊರತಂದರು. ಸಾಧನವಿಲ್ಲದಿದ್ದರೆ ಉತ್ತಮವಾದ ವೈಜ್ಞಾನಿಕ ಯಂತ್ರವೇ ಆದರೂ ವ್ಯರ್ಥವಾಗುತ್ತದೆ. ವೀಣಾವಾದನದ ಪ್ರಯೋಗವನ್ನು ತಿಳಿಯದೆ ಕೇವಲ ಮೂಢಭಾವನೆಯಿಂದ ವೀಣಾವಾದ್ಯಕ್ಕೆ ಪೂಜೆ ಮಾಡುತ್ತಿದ್ದರೆ ಎಷ್ಟರಮಟ್ಟಿನ ಫಲ ದೊರಕೀತು? ವೀಣೆಯು ಗೆದ್ದಲು ಹಿಡಿದು ಹಾಳಾಗಿಹೋಗುತ್ತಿದ್ದರೂ ಮೂಢ ಭಕ್ತಿಯಿಂದ "ಇದು ನಮ್ಮ ವಂಶಪರಂಪರೆಯಿಂದ ಬಂದ ವೀಣೆ'' ಎಂದು ಆಡಂಬರದಿಂದ ಪೂಜೆ ಮಾಡುತ್ತಿದ್ದರೆ, ಅಂತಹ ವೀಣೆಯಿಂದ ಏನು ಫಲವನ್ನು ಪಡೆಯಲು ಸಾಧ್ಯ? ಋಷಿ ಸಂಸ್ಕೃತಿಯ ರಹಸ್ಯ ಮತ್ತು ಹಿನ್ನೆಲೆಗಳನ್ನು ಅರಿಯದ ವಿದೇಶೀಯರು ಅಜ್ಞತೆಯಿಂದ ನಮ್ಮ ಪ್ರಾಚೀನ ಸಂಪ್ರದಾಯಗಳನ್ನೂ, ತೀರ್ಥಕ್ಷೇತ್ರಗಳನ್ನೂ ಅವಹೇಳನ ಮಾಡುವುದನ್ನು ಕಾಣುತ್ತೇವೆ. ಆದರೆ ಮತ್ತೊಂದು ಕಡೆ ಭಾರತೀಯರೆನಿಸಿದವರೇ ಕೆಲವರು ನಮ್ಮ ಪವಿತ್ರವಾದ ಪ್ರಾಚೀನ ಸಂಪ್ರದಾಯಗಳ ಮಹತ್ವವನ್ನು ಅವಿವೇಕದಿಂ ದಲೂ, ಅವಜ್ಞತೆಯಿಂದಲೂ ನಿಂದಿಸುತ್ತಾರೆ. ಮತ್ತೆ ಕೆಲವರು ಅಂಧಶ್ರದ್ಧೆ,-ಅತಿಶ್ರದ್ಧೆಗಳನ್ನು ಹೊಂದಿ ತತ್ತ್ವದಿಂದ ದೂರವಾಗುತ್ತಾರೆ. ಭಾರತಭೂಮಿಯು ಋಷಿಗಳ ಪವಿತ್ರವಾದ ಮನೋಧರ್ಮದ ಅಭಿವ್ಯಕ್ತಿಗೆ ಒಂದು ಉತ್ತಮವಾದ ಸಾಧನವಾಗಿದೆ. ಆದ್ದರಿಂದಲೇ,

"ಭಾತಿ ಸರ್ವೇಷು  ವೇದೇಷು ರತಿಃ ಸರ್ವೇಷು ಜಂತುಷು |
ತರಣಂ ಸರ್ವತೀರ್ಥಾನಾಂ ತೇನ ಭಾರತಮುಚ್ಯತೇ||"

ಎಂಬ ಋಷಿವಚನವು ಭಾರತಭೂಮಿಗೂ ಅನ್ವಯಿಸುತ್ತದೆ. ಋಷಿಗಳು ಶರೀರವನ್ನು ಯೋಗಾಯತನವನ್ನಾಗಿಯೂ, ಪುರುಷಾರ್ಥ ಸಾಧನವನ್ನಾಗಿಯೂ ಮಾಡಿಕೊಂಡಂತೆ, ತಮ್ಮ ಜನ್ಮಕ್ಕೆಡೆಯಾದ ಪವಿತ್ರ ಭಾರತ ಭೂಮಿಯನ್ನೂ ಪುರುಷಾರ್ಥ ಸಾಧನವನ್ನಾಗಿ ಮಾಡಿ ಬೆಳಗಿಸಿದರು. ಅವರ ಆಂತರ್ದರ್ಶನ ಮತ್ತು ಮನೋಧರ್ಮಗಳ ಮಹತ್ವದಿಂದ ಈ ಭಾರತಭೂಮಿ ಪುಣ್ಯತೀರ್ಥವೂ, ಪವಿತ್ರಕ್ಷೇತ್ರವೂ ಆಗಿವೆ.
ಆತ್ಮಜ್ಞಾನಿಯಾದವನು ಇರುವ ಜಾಗವೇ ಪವಿತ್ರ ತೀರ್ಥ. ಅವನ ಮಾತು ದರ್ಶನ, ಸ್ಪರ್ಶನ - ಎಲ್ಲವೂ ಪವಿತ್ರತೀರ್ಥವೇ: -

"ತತ್ರೈವ ಗಂಗಾ ಯಮುನಾ ಚ ವೇಣೀ ಗೋದಾವರೀ ಸಿಂಧು ಸರಸ್ವತೀ ಚ|
ಸರ್ವಾಣಿ ತೀರ್ಥಾನಿ ವಸಂತಿ ತತ್ರ ಯತ್ರಾಚ್ಯುತೋದಾರಕಥಾಪ್ರಸಂಗಃ ||
ನಿಗೃಹೀತೇಂದ್ರಿಯಗ್ರಾಮಃ ಯತ್ರ ಕುತ್ರಾಶ್ರಮೇ ವಸವ್ |
ತತ್ರ ತತ್ರ ಕುರುಕ್ಷೇತ್ರಂ ನೈಮಿಷಂ ಪುಷ್ಕರಂ ಗಯಾ ||

(ಎಲ್ಲಿ ಅಚ್ಯುತನ ಉದಾರವಾದ ಕಥಾಪ್ರಸಂಗ ನಡೆಯುತ್ತದೋ ಅಲ್ಲಿಯೇ ಗಂಗಾ ಯಮುನಾ, ತ್ರಿವೇಣೀ, ಗೋದಾವರೀ, ಸಿಂಧು, ಸರಸ್ವತೀ-ಇವುಗಳು ಇರುತ್ತವೆ. ಎಲ್ಲ ತೀರ್ಥಗಳೂ ಅಲ್ಲಿಯೇ ನೆಲೆಸಿರುತ್ತವೆ. ಇಂದ್ರಿಯ ಸಮೂಹವನ್ನು ನಿಗ್ರಹಿಸಿದವನು ಯಾವ ಆಶ್ರಮದಲ್ಲೇ ಇರಲಿ, ಅಲ್ಲಿಯೇ ಕುರುಕ್ಷೇತ್ರ, ನೈಮಿಷ, ಪುಷ್ಕರ, ಗಯಾ-ಇವುಗಳು ಇರುತ್ತವೆ. ತಮ್ಮ ಅಂತರ್ದರ್ಶನ ಮತ್ತು ಮನೋಧರ್ಮಗಳ ಮುದ್ರೆಯನ್ನು ಭಾರತಭೂಮಿಯ ಮೇಲಿನ ತೀರ್ಥಕ್ಷೇತ್ರಗಳಲ್ಲಿಯೂ ಒತ್ತಿ, ಅವುಗಳಿಗೆ ಅದಕ್ಕನುಗುಣವಾದ-"ಗಂಗಾ, ಯಮುನಾ, ಸರಸ್ವತೀ, ಪ್ರಯಾಗ, ಕಾಶೀ, ಗಯಾ, ಹರಿದ್ವಾರ, ಹೃಷೀಕೇಶ, ಪುರುಷೋತ್ತಮ ಕ್ಷೇತ್ರ, ಜ್ಞಾನಾಶ್ವತ್ಥ, ಶ್ರೀರಂಗ, ರಾಮೇಶ್ವರ, ಚಿದಂಬರ ಮುಂತಾದ ಹೆಸರುಗಳನ್ನಿಟ್ಟರು. ಅವರು ತಮ್ಮ ಯೋಗಮಯ ಶರೀರದ ಭೂಮಧ್ಯದೇಶದಲ್ಲಿ ವಾಸ್ತವವಾಗಿ ಪ್ರಕಾಶಿಸುವ ಕಾಶೀಕ್ಷೇತ್ರವನ್ನು ಕಂಡುಕೊಂಡರು; ದಹರಾಯೋಧ್ಯೆಯನ್ನು ಸಂದರ್ಶಿಸಿದರು; ಪ್ರಾಣರೂಪವಾದ ಗಯಾ ಕ್ಷೇತ್ರವನ್ನು ವೀಕ್ಷಿಸಿದರು (ಪ್ರಾಣಾಗಯಾ ಇತಿಪ್ರೋಕ್ತಾಃ) ; ಅವರ ಹೃನ್ಮಧ್ಯ ಚಿದಂಬರದಲ್ಲಿ (ಚಿದಂಬರಂತು  ಹೃನ್ಮಧ್ಯೇ) ನಟರಾಜನು ನರ್ತಿಸಿದನು. ಇಡಾಗಂಗೆ-ಪಿಂಗಳಾಯಮುನೆಯರು  ಸುಷುಮ್ನಾ ಸರಸ್ವತಿಯಲ್ಲಿ  ಸಂಗಮಗೊಳ್ಳಲಾಗಿ ಅಂತಹ ಅಂತರಂಗ ತ್ರಿವೇಣೀ ಸಂಗಮ, ಪ್ರಯಾಗದಲ್ಲಿ ಜ್ಞಾನಸ್ನಾನ ಮಾಡಿ ಅವರು ಪವಿತ್ರಾತ್ಮರಾದರು. ಆದ್ದರಿಂದಲೇ ಸ್ವಯಂ ಹರಿಪದದಲ್ಲಿದ್ದ ಗಂಗಾದಿ ತೀರ್ಥಗಳು ಭಾರತ ಭೂಮಿಯಲ್ಲಿ ನದಿರೂಪಗಳಾಗಿದ್ದು ಕೊನೆಗೆ ನದೀರೂಪವನ್ನು ಬಿಟ್ಟು ಶ್ರೀಹರಿಪದಕ್ಕೆ ಹೋಗಿ ಸೇರುತ್ತವೆಯೆಂದು ಹೇಳುತ್ತಾರೆ:-

"ಕಲೇಃ ಪಂಚಸಹಸ್ರಂ ಚ ವರ್ಷಂ ಸ್ಥಿತ್ವಾ ಚ ಭಾರತೇ|
  ಜಗ್ಮುಸ್ತಾಶ್ಚ ಸರಿದ್ರೂಪಂ ವಿಹಾಯ ಶ್ರೀಹರೇಃ ಪದಂ||
ಅಂತೆಯೇ,
"ಕಾಶೀಕ್ಷೇತ್ರಂ ಶರೀರಂ ತ್ರಿಭುವನಜನನೀ ವ್ಯಾಪಿನೀ ಜ್ಞಾನಗಂಗಾ|
 ಭಕ್ತಿಃ ಶ್ರದ್ಧಾ ಗಯೇಯಂ  ನಿಜಗುರುಚರಣಧ್ಯಾನ ಯೋಗಃ ಪ್ರಯಾಗಃ||
ವಿಶ್ವೇಶೋsಯಂ ತುರೀಯಂ ಸಕಲಜನಮನಃ ಸಾಕ್ಷೀಭೂತೋಂsತರಾತ್ಮಾ|
ದೇಹೇ ಸರ್ವಂ ಮದೀಯೇ ಯದಿ ವಸತಿ ಪುನಸ್ತೀರ್ಥಮನ್ಯತ್ ಕಿಮಸ್ತಿ||
"ಯೋಗ ಶರೀರವೇ ಕಾಶೀಕ್ಷೇತ್ರ. ಜ್ಞಾನವೇ ತ್ರಿಭುವನಜನನಿಯೂ, ವಿಶಾಲವ್ಯಾಪಿನಿಯೂ ಆದ ಗಂಗೆ, ಭಕ್ತಿಶ್ರದ್ಧೆಗಳೇ ಗಯೆ. ನಿಜಗುರು ಚರಣಧ್ಯಾನಯೋಗವೇ ಪ್ರಯಾಗ. ಸಕಲಜನಮನಃಸಾಕ್ಷಿಯೂ, ಅಂತರಾತ್ಮನೂ ಆದ ತುರೀಯ ಬ್ರಹ್ಮ ತತ್ತ್ವವೇ ವಿಶ್ವೇಶ್ವರನು. ಹೀಗೆ (ಯೋಗಮಯ)ದೇಹದಲ್ಲಿ (ತತ್ತ್ವಮಯವಾದ)  ಎಲ್ಲಾ ತೀರ್ಥಗಳೂ ನೆಲೆಸಿರುವಾಗ, ಇನ್ನು ಬೇರೆ ತೀರ್ಥ ಯಾವುದಿದೆ ? " ಎಂಬುದೇ ಜ್ಞಾನಿಗಳ ಪರಮಾರ್ಥ ಸಿದ್ಧಾಂತ. ತೀರ್ಥಕರನಾದ ಸಾಕ್ಷಾತ್ ನಾರಾಯಣನು ಮಹಾತ್ಮರ ಅಂತರ್ಹೃದಯದಲ್ಲಿ  ನೆಲೆಸಿರುವುದರಿಂದ  ಅಂತಹ ಮಹಾತ್ಮರ ಸಂಪರ್ಕದಿಂದ ಬಾಹ್ಯ ತೀರ್ಥಕ್ಷೇತ್ರಗಳು ತೀರ್ಥೀಕೃತವಾಗುತ್ತವೆ:-

"ತೀರ್ಥೀಕುರ್ವಂತಿ ತೀರ್ಥಾನಿ ಸ್ವಾಂತಸ್ಥೇನ ಗದಾಭೃತಾ|"

ತೀರ್ಥಕ್ಷೇತ್ರಗಳು ಋಷಿಗಳ ಜ್ಞಾನಭೂಮಿ-ಮನೋಭೂಮಿಗಳ ಪ್ರತೀಕಗಳಾಗಿವೆ. ಪರಮ ಪದಕ್ಕೇರುವ ದಿವ್ಯ ಸೋಪಾನಗಳಾಗಿವೆ. ಆತ್ಮಭಾವ-ಬ್ರಹ್ಮಭಾವಗಳನ್ನು ಪ್ರಬೋಧಗೊಳಿಸುವ ಶ್ರೇಷ್ಠತಮವಾದ ಅಭಿಜ್ಞಾನಗಳಾಗಿವೆ. ತೀರ್ಥಕ್ಷೇತ್ರಗಳಲ್ಲಿ ಸನ್ನಿವೇಶ ಮತ್ತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ – ಎಲ್ಲವೂ ನಮ್ಮ ಮನಸ್ಸನ್ನು ಪ್ರಕೃತಿಯ ಕಡೆಗೆ ಒಯ್ಯುವ ಮಹಾರಾಜಮಾರ್ಗಗಳಾಗಿವೆ. ತೀರ್ಥಗಳಲ್ಲಿ  ಸ್ನಾನ ಮಾಡುವಾಗ ಮಾಡುವ ಪವಿತ್ರ ಸಂಕಲ್ಪ, ದಿವ್ಯ ಕ್ಷೇತ್ರಗಳ ಹಾಗೂ ದೇವಾಲಯಗಳ ಪ್ರದಕ್ಷಿಣೆ ವಿಧಿ –ಮುಂತಾದ ಆರ್ಷವಿಧಾನಗಳಲ್ಲೆಲ್ಲಾ ಈ ದೈವೀ ಸ್ಫೂರ್ತಿಯು ತುಂಬಿದೆ.

ಸ್ವಯಂ ತೀರ್ಥಪಾದನೂ ಋಷಿಹೃದಯನೂ ಆದ ಶ್ರಿ ಶ್ರೀರಂಗ ಗುರುಭಗವಂತನು ತಾನು ಒಮ್ಮೆ ಒಂದು ದಿವ್ಯಕ್ಷೇತ್ರದಲ್ಲಿ ಯಾತ್ರೆ ಕೈಗೊಂಡಾಗ ತನಗೆ ಸಹಜವಾದ ದೈವೀಭಾವದಿಂದ ಅಲ್ಲಿ ದೇವತಾದರ್ಶನವನ್ನು ಮಾಡಿದ ಬಗೆಯನ್ನು ವರ್ಣಿಸುತ್ತಾ ನಮ್ಮ ಹೃದಯವನ್ನು ತೀರ್ಥೀಕರಿಸಿದ್ದನು. ಅವನ ಅಮೃತವಚನಗಳನ್ನೇ ಇಲ್ಲಿ ಮುಂದಿಟ್ಟು ಈ "ತೀರ್ಥಯಾತ್ರೆ"ಗ ಮಂಗಳನ್ನು ಮಾಡುತ್ತೇನೆ.

" ಈ ಬೆಟ್ಟವನ್ನು ಮೆಟ್ಟಲು ಮೆಟ್ಟಲಾಗಿ ಹತ್ತುತ್ತಿರುವಾಗ ನನ್ನ ಒಳಗಡೆಯ ಪ್ರಪಂಚದಲ್ಲಿ ಹೀಗೆ ತತ್ತ್ವಗಳ ಸೋಪಾನವನ್ನು ಹತ್ತಿ ಹೋಗುತ್ತಿರುವುದನ್ನು ನೆನೆಯುತ್ತಿದ್ದೆ. ಬೆಟ್ಟದ ಬೇರೆ ಬೇರೆ ಮಟ್ಟದಲ್ಲಿ ಬೇರೆ ಬೇರೆ ದೃಶ್ಯಗಳು ಕಾಣುವಂತೆ ನನ್ನ ಒಳಗಿನ ಆರೋಹಣದಲ್ಲಿಯೂ ಬೇರೆಬೇರೆ ಚಕ್ರಗಳಲ್ಲಿ ಬೇರೆ ಬೇರೆ ಬಗೆಯದರ್ಶನಗಳು ಆಗುತ್ತಿವೆ. ಈ ತತ್ತ್ವಗಳ ಸೋಪಾನಗಳೆಲ್ಲವನ್ನೂ ಹತ್ತಿ ಮೇಲೆ ಉನ್ನತವಾದ ಜಾಗದಲ್ಲಿ ದೇವಾಲಯದೊಳಗೆ ಬಂದೆ. ಅಮ್ಮನವರ ಸನ್ನಿಧಿಯಲ್ಲಿ ದೀರ್ಘದಂಡ ಪ್ರಣಾಮ ಮಾಡಿದೆ. ನನ್ನ ಕೈಗಳೆರಡನ್ನೂ ಇಂದ್ರಿಯಗಳೆಲ್ಲ ಬಂದು ಸೇರುವ ಜಾಗವಾದ ತಲೆಯನ್ನು ದಾಟಿಸಿ ಮುಂದಕ್ಕೆ ಚಾಚಿ, "ಅಮ್ಮಾ ! ತಾಯಿ ! ನೀನು ಇಂದ್ರಿಯ ಪ್ರಪಂಚವನ್ನು ದಾಟಿ ಅವುಗಳಿಗೆ ತುಂಬಾ ಹೊರಗಿರುವವಳು' (ಅವುಗಳಿಗಿಂತಲೂ  ತುಂಬಾ ಒಳೆಗಿರುವವಳು), ಎಂದು ಧ್ಯಾನಿಸುತ್ತಾ ಸಾಷ್ಟಾಂಗ ಪ್ರಣಾಮ ಮಾಡಿದೆ. ಒಳಗೆ ಹೋದರೆ ಜಗನ್ಮಾತೆಯು ಪ್ರಸನ್ನಳಾಗಿ ಕುಳಿತಿದ್ದಾಳೆ. ಅವಳು ಮೇಲುಗಡೆ ಎರಡು ಕೈಗಳಲ್ಲಿ ಮೇಲ್ಮುಖವಾದ ಎರಡು ಪದ್ಮಗಳನ್ನು ಹಿಡಿದಿದ್ದಾಳೆ, ಅವು ಹೃದಯ ಮತ್ತು ಸಹಸ್ರಾರ ಪದ್ಮಗಳು. ನಮ್ಮಲ್ಲಿಯೂ  ಈ ತತ್ತ್ವಗಳಿವೆ, ಆದರೆ ಅವು ಕೆಳಮುಖವಾಗಿ ಅರಳಿವೆ. ಈ ಮಹಾತಾಯಿಯಾದರೋ ಊರ್ಧ್ವರೇತನ ಮಹಾ ಯೋಗೇಶನೂ ಆದ ನಾರಾಯಣನ ಪತ್ನೀ.ಪತಿಗೆ ತಕ್ಕಂತೆ ಪತ್ನಿಯ ಮಾರ್ಗ. ಅದಕ್ಕೇ ಆಕೆಯು ಮೇಲ್ಮುಖವಾಗಿ ಅರಳಿರುವ ಕಮಲಗಳನ್ನು ಎತ್ತಿ ಹಿಡಿದಿರುವಳು—" ಊರ್ಧ್ವಂ ಗಚ್ಛಂತಿ `ಸತ್ಯಸ್ಥಾ!" ಕೆಳಗಡೆ ಕೈಗಳಲ್ಲಿ ಒಂದು ಕೆಳಮುಖವಾಗಿ ಪ್ರವೃತ್ತಿ ಮಾರ್ಗವನ್ನು ಸೂಚಿಸುತ್ತಿದೆ. ಮತ್ತೊಂದನ್ನು ಮೇಲ್ಮುಖವಾಗಿಸಿ ನಿವೃತ್ತಿ ಮಾರ್ಗವನ್ನು ತೋರಿಸುತ್ತಿದ್ದಾಳೆ ಮಹಾ ತಾಯಿ. ಆ ನಿವೃತ್ತಿ ಮಾರ್ಗದಿಂದ ಬಂದ ಜ್ಞಾನದ ಸುಖದ ರೇಖೆಯು ಆಕೆಯ ಮುಖದ ಮುಗುಳ್ನಗೆಯಲ್ಲಿ ಮೂಡಿದೆ, "ಅಮ್ಮಾ ತಾಯಿ ! ನಮ್ಮ ಹೃದಯಪದ್ಮ
ಸಹಸ್ರಾರ ಪದ್ಮಗಳು ಮೇಲ್ಮುಖವಾಗಿ ಅರಳಿ, ನಮ್ಮ ಪ್ರಕೃತಿಯು ನಿನ್ನಂತೆಯೇ ಶುದ್ದವಾಗಿ ನಾರಾಯಣನ ದರ್ಶನ ಮಾಡಲು ಅನುಗುಣವಾದ ಪ್ರಕೃತಿಯಾಗಲಿ ಎಂದು ಆಕೆಯನ್ನು ಪ್ರಾರ್ಥಿಸಿಕೊಂಡು, ಆಕೆಯ ಅನುಮತಿಯಿಂದ ಭಗವಂತನ ಸನ್ನಿಧಿಗೆ ಬಂದೆ. ಅಲ್ಲಿ ಜಯ ವಿಜಯರು ದ್ವಾರಪಾಲಕರಾಗಿ ನಿಂತಿದ್ದಾರೆ. ಭಗವಂತನ ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸದಂತೆ ಕಾವಲು ಕಾಯುತ್ತಿದ್ದಾರೆ. ಒಳಗೆ ಹೋದರೆ ಭಗವಂತನು ನಿಂತಿದ್ದಾನೆ. ಮಾನವರ ಅಳತೆಯನ್ನು ಮೀರಿದ, ಮಹಾ ಪುರುಷ ಹತ್ತು ತಾಳ ಪ್ರಮಾಣದಲ್ಲಿ ನಿಂತಿದ್ದಾನೆ, ಅವನಿಗೆ ನಾಲ್ಕು ಕೈಗಳು, ಎಲ್ಲ ಮನುಷ್ಯರಿಗೆ ಇರುವಂತೆ ಎರಡು ಕೈಗಳಿದ್ದು ಜೊತೆಗೆ ಇನ್ನೆರಡು ಕೈಗಳು ಹೆಚ್ಚಾಗಿವೆ. ಹೊರಗಿನಿಂದ ನೋಡಿದರೆ ಅವನು ಮನುಷ್ಯರಂತೆ ಕಾಣುತ್ತಾನೆ. ಆದರೆ ಅವನಲ್ಲಿ ಇನ್ನೂ ಏನೋ ಹೆಚ್ಚಿನದು ಇದೆ. ಬಲಗಡೆ ಮೇಲ್ಭಾಗದ ಕೈಯಲ್ಲಿ ಚಕ್ರವಿದೆ, ಎಡಗಡೆ ಮೇಲ್ಭಾಗದ ಕೈಯಲ್ಲಿ ಶಂಖವಿದೆ. ಎರಡೂ ಮೇಲ್ಮುಖವಾಗಿವೆ.  ಒಂದು ಬುದ್ಧಿ ತತ್ತ್ವ ಮತ್ತೊಂದು ಮನಸ್ತತ್ತ್ವ, 'ಮಾನವರಲ್ಲಿ ಮನಸ್ಸು-ಬುದ್ಧಿಗಳು ಅಧೋ ಮುಖವಾಗಿ ಪ್ರವೃತ್ತಿ ಮಾರ್ಗದಲ್ಲಿಪ್ರವರ್ತಿಸಿದರೆ, ಮಹಾಪುರುಷನಾದ ನಿನ್ನಲ್ಲಿ ಅವು ಊರ್ಧ್ವಮುಖವಾಗಿ ಹತ್ತಿವೆ." ಜ್ಞಾನಿನಾಮೂರ್ಧ್ವಗೋ ಭವತಿ|". ಆ ಯೋಗದ ಸ್ಥಿತಿಯನ್ನು ತಲುಪಿದ ಮೇಲೆ  ಈ ಭೌತಿಕ ಜಗತ್ತು " ಪಾದೋsಸ್ಯ ವಿಶ್ವಾ ಭೂತಾನಿ " ಎಂಬಂತೆ ಕೇವಲ ಕಾಲು ಅಂಶಕ್ಕೆ ಇಳಿಯುತ್ತದೆ. ಆಗ ತ್ರಿಪಾದ್ವಿಭೂತಿಯ ಪರಿಚಯವಾಗತ್ತದೆ. " ಅಮೃತ ಸ್ವರೂಪವು ಈ ಜಗತ್ತಿಗಿಂತಲೂ ಬಹು ವಿಶಾಲವಾದುದು. ಅದನ್ನರಿಯಿರಿ" ಎಂದು ಸೂಚಿಸುತ್ತಾ ತನ್ನ ಕೆಳಗಡೆ ಎಡಗೈಯನ್ನು ತನ್ನ ಮೊಳಕಾಲಿನ ಮೇಲಿಟ್ಟಿದ್ದಾನೆ ಭಗವಂತ. ಕೆಳಭಾಗದ ಬಲಗೈಯಿಂದ ಭಕ್ತರಿಗೆ ಅಭಯವನ್ನು ನೀಡುತ್ತಾ  " ನನ್ನ ತ್ರಿಪಾದ್ವಿಭೂತಿಯನ್ನು ಆಶ್ರಯಿಸಿರಿ" ಎಂದು ಉಪದೇಶಿಸುತ್ತಿದ್ದಾನೆ. ಇಂತಹ ಭಗವಂತನಿಗೆ ದಿವ್ಯ ಘಂಟಾನಾದದೊಡನೆ " ತದ್ವಿಷ್ಣೋಃ ಪರಮಂ ಪದಂ" ಎಂಬ ಮಂತ್ರದೊಡನೆ ಅವನ ಪರಂಜ್ಯೋತಿಯ ಪ್ರತೀಕವಾಗಿ ಹೊರಗೆ ಕರ್ಪೂರದ ದೀಪದಿಂದ ಆರತಿ ಮಾಡುತ್ತಿದ್ದಾರೆ. ಹೀಗೆ ನಾನು ಪಾದಾದಿ ಕಿರೀಟಾಗ್ರದವರೆಗೆ ಮಹಾಪುರುಷನ ದರ್ಶನವನ್ನು ಮಾಡಿದೆ."
"ತೀರ್ಥೀಕುರ್ವಂತಿ ತೀರ್ಥಾನಿ ಸ್ವಾಂತಸ್ಥೇನ ಗದಾಭೃತಾ|"

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ : 03 ಸಂಚಿಕೆ:11 ಡಿಸೆಂಬರ್ :1981 ರಲ್ಲಿ ಪ್ರಕಟವಾಗಿದೆ.
 

Sunday, September 20, 2020

ಆರ್ಯಸಂಸ್ಕೃತಿ ದರ್ಶನ - 11 (Arya Samskruti Darshana - 11)

ಆದರ್ಶನಾರೀ
ಲೇಖಕರು : ಪ್ರೊ||ಶೇಷಾಚಲ ಶರ್ಮ



ಭಾರತೀಯ ಧರ್ಮ, ಸಂಸ್ಕೃತಿ, ಸಾಹಿತ್ಯ ವಿಚಾರಧಾರೆಗಳಲ್ಲಿ ಸ್ತ್ರೀಯ ಬಗ್ಗೆ ಆದರ ಮತ್ತು ಗೌರವಪೂರ್ಣವಾದ ಭಾವನೆ ತುಂಬಿದೆ. ಕೆಲವೆಡೆ ಧರ್ಮಶಾಸ್ತ್ರ ಮುಂತಾದ ಗ್ರಂಥಗಳಲ್ಲಿ ಸ್ತ್ರೀಯನ್ನು ನಿಂದೆ ಮಾಡಿರುವುದು ಕಂಡುಬರುವುದೇನೋ ನಿಜ.  ಆದರೆ ಪ್ರಾಕೃತ ಭಾವಗಳಿಗೆ ಸಿಕ್ಕಿ ಆದರ್ಶನಾರೀತ್ವದಿಂದ ದೂರ ಸರಿಯುವ ಸ್ವಭಾವ ಸ್ತ್ರೀಯಲ್ಲಿ ಕಂಡಾಗ ಧರ್ಮ ನಿರೂಪಣೆಗೆ ತೊಡಗಿದ ಶಾಸ್ತ್ರ ಹಾಗೆ ತಾನೆ ಹೇಳ ಬೇಕಾಗುತ್ತೆ. ಅಷ್ಟೇ ಏಕೆ ನಮ್ಮ ಧಾರ್ಮಿಕ ವಾಙ್ಮಯದಲ್ಲಿ ಆದರ್ಶ ಪುರುಷಭಾವದಿಂದ ಜಾರುವ ಪುರುಷನ ಬಗ್ಗೆ ನಿಂದೆಯೇನೂ ಕಡಿಮೆಯಿಲ್ಲ. ಆರೋಗ್ಯ ಶಾಸ್ತ್ರದಲ್ಲಿ ಅನಾರೋಗ್ಯವನ್ನ ವರ್ಣನೆಮಾಡಿ ನಿಂದಿಸುವುದು, ಮನುಷ್ಯನು ಅನಾರೋಗ್ಯದಿಂದ ದೂರವಿದ್ದು ಆರೋಗ್ಯವನ್ನು ರಕ್ಷಿಸಿಕೊಳ್ಳಲಿ ಎಂಬ ಉದ್ದೇಶದಿಂದ ಮಾತ್ರ.

ನಮ್ಮ ಶ್ರುತಿ, ಸ್ಮೃತಿ, ಪುರಾಣ ಮೊದಲಾದ ಗ್ರಂಥಗಳು ಸ್ತ್ರೀಯ ಮಹತ್ವವನ್ನು ವಿಶೇಷವಾಗಿ ಪ್ರಶಂಸೆ ಮಾಡಿರುವುದನ್ನು ಕಾಣುತ್ತೇವೆ. ಸದ್ರೂಪವಾದ ಸತ್ಯ ವಸ್ತುವನ್ನು ಸಾಕ್ಷಾತ್ಕರಿಸಿಕೊಂಡು ಸತಿಯೆರೆನಿಸಿದ ಸ್ತ್ರೀಯರು ಪುರುಷರೇ ಸರಿ ಎಂದು ವೇದಮಂತ್ರ ತಿಳಿಸುತ್ತದೆ. ಇಲ್ಲಿ ಪುರುಷ ಎಂದರೆ ಬ್ರಹ್ಮಪುರವೆನಿಸಿದ ಈ ಶರೀರದಲ್ಲಿ  ಪೂರ್ಣವಾಗಿ ಬೆಳೆಗುವ ಬ್ರಹ್ಮಚೈತನ್ಯ. ಶತಪಥ ಬ್ರಾಹ್ಮಣವು ಪತ್ನಿಯು ಪುರುಷನ ಅರ್ಧ ಭಾಗವೆಂದು ತಿಳಿಸುತ್ತದೆ.

" ಅರ್ಧೋ ಹ ವಾ ಏಷ  ಆತ್ಮನೋ ಯಜ್ಜಾಯಾ ತಸ್ಮಾದ್ಯಾವಜ್ಜಾಯಾಂ ನ ವಿಂದತೇ ನೈವ ತಾವತ್ ಪ್ರಜಾಯತೇ, ಅಸರ್ವೋ ಹಿ ತಾವದ್ಭವತಿ | 
ಅಥ ಯದೈವ ಜಾಯಾಂ ವಿಂದತೇsಥ ಪ್ರಜಾಯತೇ ತರ್ಹಿ ಹಿ ಸರ್ವೋ ಭವತಿ||"

ಪತ್ನಿಯೆಂದರೆ (ಪುರುಷನಿಗೆ) ತನ್ನ ಅರ್ಧ ಭಾಗವೇ. ಆದ್ದರಿಂದ ಪತ್ನಿಯನ್ನು ಪಡೆಯದಿದ್ದರೆ ಸಂತಾನವಿಲ್ಲ. ಅಲ್ಲಿಯವರೆಗೂ (ಪುರುಷನು) ಅಪೂರ್ಣನಾಗಿಯೇ ಇರುತ್ತಾನೆ. ಯಾವಾಗ ಅವನು ಪತ್ನಿಯನ್ನು ಪಡೆಯುತ್ತಾನೆಯೋ ಆಗ ಸಂತಾನವನ್ನು ಹೊಂದುತ್ತಾನೆ. ಹಾಗಾದರೆ ಮಾತ್ರ ಪುರುಷನು ಪೂರ್ಣನಾಗುತ್ತಾನೆ. ಮಹಾಭಾರತವು ಸ್ತ್ರೀಯನ್ನು ಕುರಿತು ಈ ರೀತಿ ಪ್ರಶಂಸೆ ಮಾಡುತ್ತದೆ.

" ಸ್ತ್ರಿಯೋ ಯತ್ರ ಪೂಜ್ಯಂತೇ ರಮಂತೇ ತತ್ರ ದೇವತಾಃ|
  ಅಪೂಜಿತಾಶ್ಚ ಯತ್ರೈತಾಃ ಸರ್ವಾಸ್ತತ್ರಾಫಲಾ  ಕ್ರಿಯಾಃ|
  ತದಾ ಚೈತತ್ ಕುಲಂ ನಾಸ್ತಿ ಯದಾ ಶೋಚಂತಿ ಜಾಮಯಃ|
  ಚಾಮೀಶಪ್ತಾನಿ ಗೇಹಾನಿ  ನಿಕೃತಾ ನೀವ ಕೃತ್ಯಯಾ|
  ನೈವ ಭಾಂತಿ ನ ವರ್ಧಂತೇ ಶ್ರಿಯಾ ಹೀನಾನಿ ಪಾರ್ಥಿವ||
                                                      (ಮ.ಭಾ. ಅನು)

ಇದರ ಅರ್ಥ ಹೀಗಿದೆ :- " ಎಲ್ಲಿ ಸ್ತ್ರೀಯರು ಪೂಜಿತರಾಗುತ್ತಾರೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಎಲ್ಲಿ ಸ್ತ್ರೀಯರು ಪೂಜಿತರಾಗುವುದಿಲ್ಲವೋ ಅಲ್ಲಿ ಎಲ್ಲ ಕ್ರಿಯೆಗಳೂ ನಿಷ್ಫಲವಾಗುತ್ತವೆ. ಕುಲಸ್ತ್ರೀಯರು ದುಃಖಪಟ್ಟರೆ ಕುಲವೇ ನಾಶ ಹೊಂದುತ್ತದೆ. ಕುಲಸ್ತ್ರೀಯರ ಶಾಪಕ್ಕೊಳಗಾದ ಮನೆಗಳು ಅಭಿಚಾರಕೃತ್ಯಗಳಿಂದ ನಾಶಹೊಂದಿದವುಗಳಂತೆ ಶ್ರೀ ಹೀನವಾಗಿ ಶೋಭಿಸುವುದಿಲ್ಲ ಮತ್ತು ಏಳಿಗೆ ಹೊಂದುವುದಿಲ್ಲ.

ಧರ್ಮಸಿದ್ಧಿಗೆ ಸ್ತ್ರೀಯೇ ಮೂಲಕಾರಣವೆಂದು (ಸ್ತ್ರೀಪ್ರತ್ಯಯೋ ಹಿ ವೈ ಧರ್ಮಃ) ಶಾಸ್ತ್ರಗಳು ಸಾರುತ್ತವೆ. ತ್ಯಾಗ, ಪ್ರೆಮ, ದಯೆ, ಔದಾರ್ಯ ಮುಂತಾದ ಉತ್ತಮ ಆದರ್ಶಗುಣಗಳ ಮೂರ್ತರೂಪವೇ ಸ್ತ್ರೀಯೆಂದು ಹೇಳಬಹುದು. ಪುಣ್ಯಶೀಲರೂ, ಸಾಧ್ವಿಯರೂ ಆದ ಸ್ತ್ರೀಯರು ಲೋಕಮಾತೆಯರೆಂದು ಪೂಜಿತರಾಗುತ್ತಾರೆ.  ಆದ್ದರಿಂದಲೇ ಸ್ತ್ರೀಯರು ಜಗಜ್ಜನನಿಯ ಪ್ರತಿರೂಪರು. ಸ್ತ್ರೀಯಲ್ಲಿ ಬೆಳಗುವ ಕನ್ಯಾಭಾವ, ಗೃಹಿಣೀತ್ವ ಮತ್ತು ಮಾತೃತತ್ವಗಳು ಪರಮ ಪವಿತ್ರವಾದವು. ಆದ್ದರಿಂದಲೇ ಸರ್ವಾವಸ್ಥೆಯಲ್ಲೂ ಸ್ತ್ರೀಗೆ ರಕ್ಷಣೆನೀಡುವುದು ಧರ್ಮವೆಂದು ಶಾಸ್ತ್ರಗಳು ವಿಧಿಸುತ್ತವೆ. ಕನ್ಯಾವಸ್ಥೆಯಲ್ಲಿ ಸ್ತ್ರೀಯರಿಗೆ ಉಚಿತವಾದ ಶಿಕ್ಷಣ ದೊರೆಯಬೇಕು. ವಿದ್ಯಾವತಿಯರಾದ ಸ್ತ್ರೀಯರಿಂದಲೇ ಕುಲಧರ್ಮಗಳು ಶಾಶ್ವತವಾಗಿ ನೆಲೆಗೊಳ್ಳುತ್ತವೆ. ವಿದ್ಯೆ, ಕಲೆಗಳು ವಿದ್ಯಾದೇವಿಯಾದ ಸರಸ್ವತಿಯಿಂದ ತಾನೇ ಹರಿದು ಬರಬೇಕು. ಕನ್ಯಾಭಾವದಲ್ಲಿ ವಿದ್ಯಾರಹಸ್ಯವನ್ನು ತಿಳಿದು ಕುಲವತಿಯಾದ ನಾರೀ ಮುಂದೆ ಗೃಹಿಣೀ ಧರ್ಮವನ್ನು ಚೆನ್ನಾಗಿ ಸಂರಕ್ಷಿಸುತ್ತಾಳೆ. ಆದ್ದರಿಂದಲೇ ಅವಳು ಶ್ವಶುರಗೃಹರಾಜ್ಯಕ್ಕೆ ಸಮ್ರಾಜ್ಞಿಯಾಗುತ್ತಾಳೆ. ಸ್ತ್ರೀಗೆ ಇಂತಹ ಉತ್ತಮ ಸಮ್ರಾಜ್ಞೀ ಪದವನ್ನು ಶ್ರುತಿಯೇ ವಿಧಿಸುತ್ತದೆ. ಗೃಹಸ್ಥಧರ್ಮಕ್ಕೆ ಆಶ್ರಯವಾದ ದಾಂಪತ್ಯಭಾವ ಪರಮಪಾವನವಾದುದು. ಇತರ ಆಶ್ರಮಗಳಿಗೆ ಗೃಹಸ್ಥಾಶ್ರಮವು ತಾಯಿಯಂತೆ ಪರಮಾಶ್ರಯವಾದುದು. ವಿವಾಹಮಂಗಳ ಸಮಯದಲ್ಲಿ ವರನು ವಧುವನ್ನು ಕುರಿತು ಹೇಳುವ ಈ ಮಾತುಗಳು ದಾಂಪತ್ಯಭಾವದ  ಪರಮೋನ್ನತ  ದಿವ್ಯಸ್ವರೂಪವನ್ನು ಸ್ಫೂರ್ತಿಯುತವಾಗಿ ತಿಳಿಸುತ್ತವೆ:- ಸಾಮಾಹಮಸ್ಮಿ  ಋಕ್ತ್ವಂ, ದ್ಯೌರಹಂ ಪೃಥ್ವೀ ತ್ವಂ, ತ್ವಾವೇಹಿ ವಿವಹಾವಹೈ, ಸಹ ರೇತೋ ದಧಾವಹೈ, ಪ್ರಜಾಂ ಪ್ರಜನಯಾವಹೈ, ಪುತ್ರಾನ್ ವಿಂದಾವಹೈ ಬಹೂನ್,  ತೇ ಸಂತು ಜರದಷ್ಟಯಃ, ಸಂಪ್ರಿಯಾ ರೋಚಿಷ್ಣು ಸುಮನಸ್ಯಮಾನೌ, ಪಶ್ಯೇಮ ಶರದಃಶತಂ  ಜೀವೇಮ ಶರದಃಶತಂ ಶೃಣುಯಾಮ ಶರದಃಶತಂ.

(ನಾನು ಸಾಮವಾಗಿದ್ದೇನೆ, ನೀನು  ಋಕ್ ಆಗಿದ್ದೀಯೆ, ನಾನು ದ್ಯುಲೋಕ, ನೀನು ಪೃಥ್ವೀ, ಆದ ಕಾರಣ ನೀನು ಬಾ, ನಾವಿಬ್ಬರೂ ವಿವಾಹವಾಗೋಣ.  ನಾವಿಬ್ಬರೂ  ಒಟ್ಟಿಗೆ ತೇಜಸ್ಸನ್ನು ಧರಿಸೋಣ. ನಾವಿಬ್ಬರೂ ಪ್ರಜೆಯನ್ನು ಪಡೆಯೋಣ. ಬಹುಮಂದಿ ಪುತ್ರರನ್ನು ಪಡೆಯೋಣ. ನೀನು ಚಿರಕಾಲಬಾಳು. ನಾವಿಬ್ಬರು ಪರಸ್ಪರ ಪ್ರೀತಿವಂತರೂ,  ಕಾಂತಿಯುತರೂ, ಶುಭ ಮತ್ತು ಪ್ರಸನ್ನ ಮನಸ್ಸುಳ್ಳವರೂ ಆಗಿ ನೂರುವರ್ಷಗಳು ನೋಡೋಣ. ನೂರು ವರ್ಷಗಳು ಬಾಳೋಣ. ನೂರು ವರ್ಷಗಳು ಕೇಳೋಣ.)

ಐಕಾತ್ಮ್ಯ ಸಾಧನೆಯೇ ದಾಂಪತ್ಯದ ಗುರಿ. ಆದರಿಂದಲೇ ಲೌಕಿಕವಾದ ದ್ರವ್ಯ ಪರಿಗ್ರಹ ವಿಷಯದಲ್ಲೇ ಆಗಲಿ ಅಥವಾ ಪುಣ್ಯಫಲದ ವಿಷಯದಲ್ಲೇ ಆಗಲಿ  ಪತಿಪತ್ನಿಯರಲ್ಲಿ ವಿಭಾಗ ಸಲ್ಲದು. (ಜಾಯಾಪತ್ಯೋರ್ನ ವಿಭಾಗೋ ವಿದ್ಯತೇ, ಪುಣ್ಯಫಲೇಷು  ದ್ರವ್ಯಪರಿಗ್ರಹೇಷು ಚ ) ಎಂದು ಆಪಸ್ತಂಬ  ಧರ್ಮಸೂತ್ರವು ತಿಳಿಸುತ್ತದೆ. ಗೃಹಸ್ಥಾಶ್ರಮವು ಸುಖಪ್ರಾಪ್ತಿಗಾಗಿ ಇದೆ. ಅಂತಹ ಸುಖಕ್ಕೆ ಪತ್ನಿಯೇ ಮೂಲ. (ಗೃಹಾಶ್ರಯಃ ಸುಖಾರ್ಥಾಯ ಪತ್ನೀಮೂಲಂ ಹಿ ತತ್ಸುಖಂ) ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಸೇವಕರು ಇವರುಗಳಿಂದ ಸರ್ವಥಾ ತುಂಬಿದ್ದರೂ, ಭಾರ್ಯೆಯಿಲ್ಲದ ಗೃಹಸ್ಥನ ಮನೆಯು ಶೂನ್ಯವೇ ಸರಿ:-

ಪುತ್ರಪೌತ್ರವಧೂಭೃತ್ಯೈಃ ಸಂಕೀರ್ಣಮಪಿ  ಸರ್ವತಃ|
ಭಾರ್ಯಾಹೀನಗೃಹಸ್ಥಸ್ಯ  ಶೂನ್ಯಮೇವ ಗೃಹಂ  ಭವೇತ್||
                                                                  (ಮ.ಭಾ.)
ಧರ್ಮಮೂರ್ತಿಯಾದ ನಾರೀಮಣಿಯು ಮಹಾಲಕ್ಷ್ಮಿಯ ನಿವಾಸಸ್ಥಾನವಾಗಿರುತ್ತಾಳೆ. ಮಹಾಭಾರತದಲ್ಲಿ ರುಕ್ಮಿಣಿ ಮತ್ತು ಲಕ್ಷ್ಮಿಯರ ಸಂಭಾಷಣೆಯ ಪ್ರಸಂಗವೊಂದು ವರ್ಣಿತವಾಗಿದೆ. ಉತ್ತಮ ನಾರಿಯರಲ್ಲಿ ತಾನು ಸದಾ ನೆಲೆಸಿರುವುದಾಗಿ ಲಕ್ಷ್ಮಿಯು ರುಕ್ಮಿಣಿಯೊಡನೆ ಹೇಳುತ್ತಾಳೆ:-

ಸತ್ಯಾಸು ನಿತ್ಯಂ ಪ್ರಿಯದರ್ಶನಾಸು
ಸೌಭಾಗ್ಯಯಕ್ತಾಸು ಗುಣಾನ್ವಿತಾಸು|
ವಸಾಮಿ ನಾರೀಷು ಪತಿವ್ರತಾಸು
ಕಲ್ಯಾಣಶೀಲಾಸು  ವಿಭೂಷಿತಾಸು||

( ಸತ್ಯನಿಷ್ಠರೂ, ರೂಪವೇಷಗಳಿಂದ ನೋಡಲು ಪ್ರಿಯರೂ, ಸೌಭಾಗ್ಯವುಳ್ಳವರೂ, ಗುಣಸಂಪನ್ನರೂ, ಪತಿವ್ರತೆಯರೂ, ಕಲ್ಯಾಣಮಯವಾದ ಶೀಲವುಳ್ಳವರೂ, ಆದ ನಾರಿಯರಲ್ಲಿ ನಾನು ಸದಾ ವಾಸಮಾಡುತ್ತೇನೆ)
ಮೃದುವಾದ ಸ್ವಭಾವ, ಮಧುರವಾದ ಮಾತು,  ಧರ್ಮಪರತೆ, ಪ್ರೀತಿ, ಕಾರುಣ್ಯ, ಸೇವಾನಿಷ್ಠೆ ಮಂತಾದ ಸದ್ಗಣಗಳಿಂದ ನಾರಿಯು ನಮ್ಮ ಧರ್ಮ ಸಮಾಜದಲ್ಲಿ ಪರಮ ಪವಿತ್ರವೂ, ಪೂಜ್ಯವೂ ಆದ ಸ್ಥಾನವನ್ನು ಪಡೆದಿದ್ದಾಳೆ. ಮಹಾಭಾರತದಲ್ಲಿ ಜಗಜ್ಜನನಿಯಾದ ಪಾರ್ವತಿಯು ಉತ್ತಮ ಸ್ತ್ರೀಯನ್ನು ಹೀಗೆ ವರ್ಣಿಸುತ್ತಾಳೆ:- "ಉತ್ತಮವಾದ ಸ್ವಭಾವ, ಮಾತು, ಆಚರಣೆಗಳಿಂದ ಕೂಡಿ, ರೂಪವೇಷಗಳಿಂದ ಸುಖವೀಯುವವಳಾಗಿ ಅನನ್ಯಭಾವದಿಂದ ಪತಿಯ ವಿಷಯದಲ್ಲಿ ಸುಮುಖಳಾಗಿರುವ ನಾರಿಯೇ ಧರ್ಮಚಾರಿಣಿಯು. ತನ್ನ ಪತಿಯನ್ನು ಸದಾ ದೇವಸದೃಶವಾಗಿ ಕಾಣುವವಳೇ ಧರ್ಮಪರಾಯಣಿ. ಅವಳೇ ಧರ್ಮ ಫಲಕ್ಕೆ ಭಾಗಿಯಾದವಳು. ಪತಿಯನ್ನು ದೇವನಂತೆ ಭಾವಿಸಿ ಸೇವೆ, ಪರಿಚರ್ಯೆಗಳನ್ನು ಮಾಡುವವಳೂ, ನೋಡಿದಮಾತ್ರಕ್ಕೆ ಸುಖಪ್ರದಳೂ, ಉತ್ತಮ ನಿಯಮವುಳ್ಳವಳೂ ಆಗಿ ಎಂದಿಗೂ ಅಪ್ರಸನ್ನಳಾಗದೆ ಅನನ್ಯಭಾವದಿಂದ ಪುತ್ರನ ಮುಖವನ್ನು ಹೇಗೋ ಹಾಗೆ ಪತಿಯ ಮುಖವನ್ನು ಸದಾ ನಿರೀಕ್ಷಿಸುವವಳೂ, ಸಾಧ್ವಿಯೂ ಆದವಳು ಧರ್ಮಚಾರಿಣಿಯು. ಒಟ್ಟಿಗೆ ಆಚರಿಸಬೇಕಾದ ಮಂಗಳಮಯ ದಂಪತಿ ಧರ್ಮವನ್ನು ಶ್ರವಣಮಾಡಿ ಪತಿಯೊಡನೆ ಸಮಾನವಾದ ವ್ರತವುಳ್ಳವಳಾದ ನಾರಿಯೇ ಧರ್ಮಪರಾಯಣಳು. ಸಾಧ್ವಿಯಾದವಳು ಯಾವಾಗಲೂ ತನ್ನ ಪತಿಯನ್ನ ದೇವತೆಯಂತೆ ಕಾಣುತ್ತಾಳೆ. ಇದೇ ದಂಪತಿಗಳಿಗೆ ಸಹ ಧರ್ಮವಿಹಿತವಾದ ಮಂಗಳಮಯ ಧರ್ಮ. ಪತಿಯ ವಿಷಯದಲ್ಲಿ ಆಸೆಪಡುವಂತೆ ಯಾವಳ ಮನಸ್ಸು ಕಾಮ, ಭೋಗ, ಐಶ್ವರ್ಯ ಸುಖಗಳಲ್ಲಿ ಆಸೆಪಡುವುದಿಲ್ಲವೋ ಅಂತಹ ನಾರಿಯೇ ಧರ್ಮಭಾಗಿನಿಯು. ಅತ್ತೆ, ಮಾವಂದಿರ ಪಾದ ಸೇವೆಮಾಡುತ್ತಾ, ಗುಣಸಂಪನ್ನಳಾಗಿ, ಸದಾ ತಾಯಿ ತಂದೆಯರಲ್ಲಿ ನಿಷ್ಠೆಯುಳ್ಳ ನಾರಿಯೇ ತಪೋಧನಳು. ಬ್ರಹ್ಮಜ್ಞಾನಿಗಳು, ದುರ್ಬಲರು, ಅನಾಥರು, ದೀನರು, ಕುರುಡರು, ದರಿದ್ರರು- ಇವರುಗಳನ್ನು ಅನ್ನದಿಂದ ಸಂರಕ್ಷಿಸುವವಳಾದ ನಾರಿಯೇ ಪತಿಯ ಧರ್ಮಪಾಲನೆಯಲ್ಲಿ ಪಾಲ್ಗೊಳ್ಳುವ ಧರ್ಮಚಾರಿಣಿಯ."

ಸುಸ್ವಭಾವಾ ಸುವಚನಾ ಸುವೃತ್ತಾ ಸುಖದರ್ಶನಾ|
ಅನನ್ಯಚಿತ್ತಾ ಸುಮುಖೀ ಭರ್ತುಃ ಸಾ ಧರ್ಮಚಾರಿಣೀ||
ಸಾಭವೇದ್ಧರ್ಮಪರಮಾ  ಸಾ ಭವೇದ್ಧರ್ಮಭಾಗಿನೀ|
ದೇವವತ್ ಸತತಂ ಸಾಧ್ವೀ ಯಾ ಭರ್ತಾರಂ ಪ್ರಪಶ್ಯತಿ ||
ಶುಶ್ರೂಷಾಂ ಪರಿಚಾರಂ ಚ ದೇವವದ್ಯಾ ಕರೋತಿ ಚ |
ನಾನ್ಯಭಾವಾ ಹ್ಯವಿಮನಾಃ ಸುವ್ರತಾ ಸುಖದರ್ಶನಾ ||
ಪುತ್ರ ವಕ್ತ್ರಮಿವಾಭೀಕ್ಷ್ಣಂ ಭರ್ತುರ್ವದನಮೀಕ್ಷತೇ |
ಯಾ ಸಾಧ್ವೀ ನಿಯತಾಹಾರಾ ಸಾ ಭವೇದ್ಧರ್ಮಚಾರಿಣೀ||
ಶ್ರುತ್ವಾ ದಂಪತಿಧರ್ಮಂ ವೈ ಸಹಧರ್ಮಂ ಕೃತಂ ಶುಭಂ|
ಯಾ ಭವೇದ್ಧರ್ಮಪರಮಾ ನಾರೀ ಭರ್ತೃಸಮವ್ರತಾ||
ದೇವವತ್ ಸತತಂ ಸಾಧ್ವೀ ಭರ್ತಾರಮನುಪಶ್ಯತಿ  |
ದಂಪತ್ಯೊರೇಷ  ವೈ ಧರ್ಮಃ ಸಹಧರ್ಮಕೃತಃ ಶುಭಃ||
ಸ್ಪೃಹಾ ಯಸ್ಯಾ ಯಥಾ ಪತ್ಯೌ ಸಾ ನಾರೀ ಧರ್ಮ ಭಾಗಿನೀ||
ಶ್ವಶ್ರೂಶ್ವಶುರಯೋಃ ಪಾದೌ ಜೋಷಯನ್ತೀ ಗುಣಾನ್ವಿತಾ|
ಮಾತಾಪಿತೃಪರಾ ನಿತ್ಯಂ ಯಾ ನಾರೀ ಸಾ ತಪೋಧನಾ||
ಬ್ರಾಹ್ಮಣಾನ್ ದುರ್ಬಲಾನಾಥಾನ್ ದೀನಾಂಧ ಕೃಪಣಾಂಸ್ತಥಾ|
ಬಿಭರ್ತ್ಯನ್ನೇನ  ಯಾ ನಾರೀ ಸಾ ಪತಿವ್ರತಭಾಗಿನೀ||

ನಾರಿಯಲ್ಲಿ ಬೆಳಗುವ ಪವಿತ್ರವೂ  ಮಂಗಳವೂ ಆದ ಮಾತೃತ್ವವನ್ನು ಗುರುತಿಸಿದ ನಮ್ಮ ಧರ್ಮ ಪರಂಪರೆ, ಮಾತೆಗೆ ಪ್ರಥಮ ಪೂಜ್ಯಸ್ಥಾನವನ್ನು ನೀಡಿದೆ. ಶಿವಶಕ್ತಿನಿಕೇತನವಾಗಿ ಶಿವಾಲಯವೂ, ವಿಷ್ಣುಲಕ್ಷ್ಮೀ ನಿಕೇತನವಾಗಿ ವಿಷ್ಣ್ವಾಲಯೂ ಆದ ಯೋಗ ಭೋಗಾಯತನ ಶರೀರವನ್ನು ತುಂಬಿಕೊಟ್ಟ ಮಾತೆಯನ್ನು ಗೌರವಿಸಿ,  "ಮಾತೃದೇವೋಭವ" ಎಂದು ಉಪನಿಷದ್ವಾಣಿಯು ಮೊಳಗುತ್ತದೆ. ಮಾತೃಭಾವದಿಂದ ದೇವತ್ವಕ್ಕೇರಿದ ನಾರೀಮಣಿಯು ಸಕಲಜೀವಿಗಳನ್ನೂ ಭರಿಸಿ ಪೋಷಿಸುವ ಸಾಕ್ಷಾತ್ ಮಂಗಳಮಯಿಯಾದ ಅನ್ನಪೂರ್ಣೆಯೇ ಸರಿ. ಭಾರತ ನಾರಿಯೆಂದರೆ ಭಾ ರೂಪವಾದ ಆತ್ಮಜ್ಯೋತಿಯಿಂದ ಮನೆಯನ್ನೂ, ಮನವನ್ನೂ ಬೆಳಗುವ ಪರಮ ಮಂಗಳದೇವತೆ. ಭಾವ, ರಾಗ, ತಾಳಗಳ ಸಾಮರಸ್ಯದಿಂದ ಬೆಳಗುವ ಗೃಹಲಕ್ಷ್ಮೀ. ಆದರ್ಶ ನಾರಿಯಲ್ಲಿ  ದೇವತ್ವವನ್ನು ಗುರತಿಸಿ ಗೌರವವಿತ್ತು ಪೂಜಿಸಿದ ಋಷಿದೃಷ್ಟಿಗೆ ನಮೋ ನಮಃ.

ಎಲ್ಲೆಲ್ಲೂ ವಿವಾಹ ಮಂಗಳಕಾರ್ಯಗಳು ನೆರವೇರುತ್ತಿರುವ ಕಾಲವಿದು. ಈ ಶುಭ ಸಮಯದಲ್ಲಿ ಮಂಗಳಮಹಾಲಕ್ಷ್ಮಿಯರಾಗಿ ಜನ್ಮಾತೆಯ ರೂಪದಿಂದ  ಬೆಳಗುವ ನಾಡ ಸೋದರೀನಾರೀಮಣಿಯರಿಗೆ ದಿವ್ಯಸ್ಫೂರ್ತಿಯನ್ನು ಭಗವಂತ ಭಗವತಿಯರು ನೀಡಲಿ ಎಂದು ಹಾರೈಸಿ, ಶ್ರೀಶ್ರೀರಂಗಗುರುಭಗವಂತನ ಮಂಗಳವಚನಸುಧೆಯನ್ನು ಆಸ್ವಾದಿಸುತ್ತಾ ಈ ಲೇಖನವನ್ನು  ಮುಗಿಸುತ್ತೇನೆ.
"ಸ್ತ್ರೀತ್ವವನ್ನು ಧರಿಸಿ, ಪರಮಪುರುಷನಿಗೆ ನರ, ನಾರಾಯಣ ಎರಡು ರೂಪಗಳಲ್ಲಿಯೂ ಭಾರ್ಯೆಯಾಗಿ ತ್ರಿಧಾಮದಲ್ಲಿಯೂ ಗೃಹಿಣಿಯಾಗಿದ್ದಾಳೆ ಸೀತೆ. ಅಂತಹ ಜಗನ್ಮಾತೆಯ ಗುಣಲಕ್ಷಣವನ್ನು ಧರಿಸಿದವಳೇ ಸ್ತ್ರೀ."

ಸ್ತ್ರೀಯು ಪುರುಷನ (ಪರಮಪುರುಷನ-ಶ್ರೀಪತಿಯ) ಆತ್ಮ (ಸತ್ಯ) ಕ್ರೀಡೆಗೂ, ಧರ್ಮರತಿಗೂ ಸಹ ಒಂದು ಸುಂದರವೂ ಮಂಗಳವೂ ಆದ ಗೃಹವಾಗಿದ್ದಾಳೆ. ಅಂತಃ ಬಹಿಃ ಸತ್ಯ-ಶಿವ-ಸೌಂದರ್ಯವನ್ನು  ಪ್ರಕಟಿಸುವವಳಾಗಿದ್ದಾಳೆ.
"ಮನೆಯಲ್ಲಿ ವಾಸಮಾಡುವ ದಂಪತಿಗಳ ವಿಷಯವೂ ರಮಣೀಯವಾಗಿದೆ. ಬ್ರಹ್ಮಚಾರಿಯು ಜ್ಞಾನಿಯಾದ ಗುರುವಿನಲ್ಲಿ ಶಿಕ್ಷಣ ಪಡೆದು, ಗುರುಕುಲದಲ್ಲಿದ್ದು ಜ್ಞಾನವನ್ನು ಪಡೆದವನು. ಜ್ಞಾನವೇ ಮುಖ್ಯವಾದುದು ಎಂದು ಅರಿತು ಜ್ಞಾನಕ್ಕೆ ಕ್ಷೇತ್ರವಾಗಿ ಪವಿತ್ರ ಸ್ಥಳವಾದ ಕಾಶಿಗೆ ಯಾತ್ರೆ ಹೊರಟನು. ಇದನ್ನು ತಿಳಿದ ಕನ್ಯಾಪಿತೃವು ಮುಂದೆ ಲಕ್ಶ್ಮೀರೂಪಳಾದ ಕನ್ಯೆಯನ್ನು ಇಟ್ಟುಕೊಂಡು ಜ್ಞಾನದ ಸಂತಾನವನ್ನು ಲೋಕದಲ್ಲಿ ಬೆಳಸಲು ಕನ್ಯಾದಾನ ಮಾಡಿದನು."

ದ್ಯಾವಾಪೃಥಿವ್ಯಾವಿವ ನಿತ್ಯಯುಕ್ತೌ ಕಲ್ಯಾಣದೌ ಪುಂಪ್ರಕೃತಿಸ್ವರೂಪೌ|
ಜಗತ್ರಯಾದ್ಯೌ ಗೃಹಿಣೌ ಸತಾಂ ವೋ ದಾಂಪತ್ಯಭಾವೇ ಪರಮಂ ಪ್ರಮಾಣಂ||

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಮಾರ್ಚ್ ಸಂಪುಟ:3 ಸಂಚಿಕೆ:8 ರಲ್ಲಿ ಪ್ರಕಟವಾಗಿದೆ. 

Sunday, September 13, 2020

ಆರ್ಯಸಂಸ್ಕೃತಿ ದರ್ಶನ - 10 (Arya Samskruti Darshana - 10)

ಸರ್ವಧರ್ಮ ಸಮನ್ವಯ
ಲೇಖಕರು : ಪೂಜ್ಯ ವಿದ್ವಾನ್ ಶೇಷಾಚಲ ಶರ್ಮ 



ಧರ್ಮ ಎಂಬ ಶಬ್ಧವನ್ನು ಕೇಳಿದ ಕೂಡಲೇ ಮೊದಲಿಗೆ ನಮ್ಮ ಬುದ್ಧಿಗೆ ತೋರುವುದು ಹಿಂದೂ ಧರ್ಮ, ಮಹಮ್ಮದೀಯ ಧರ್ಮ, ಕ್ರಿಶ್ಚಿಯನ್ ಧರ್ಮ, ಮುಂತಾದವು. ಇದಕ್ಕೆ ಕಾರಣ ಆಂಗ್ಲ ಭಾಷೆಯ ರಿಲಿಜಿಯನ್ ಎಂಬ ಪದಕ್ಕೆ ಪರ್ಯಾಯವಾಗಿ ಧರ್ಮ ಎಂಬ ಶಬ್ಧವು ರೂಢಿಗೆ ಬಂದಿರುವುದೇ ಆಗಿದೆ. ಆಧುನಿಕ ವೈಜ್ಞಾನಿಕ ಸಂಪರ್ಕವಿಧಾನಗಳು ಪ್ರಪಂಚದ ಜನಾಂಗಗಳ ಭೌಗೋಳಿಕ ದೂರಗಳನ್ನು ತೊಡೆದು ಹಾಕಿ ಮಾನವರ ಪರಸ್ಪರ ಸಂಬಂಧ ಮತ್ತು ವ್ಯವಹಾರಗಳನ್ನು ಬಹಳ ಮಟ್ಟಿಗೆ ಸಮೀಪಗೊಳಿಸಿಬಿಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಜನಾಂಗದ ಧರ್ಮ, ಆಚಾರ ಮತ್ತು ವ್ಯವಹಾರಗಳು ಮತ್ತೊಂದು ಜನಾಂಗದ ಧರ್ಮ, ಆಚಾರ ಮತ್ತು ವ್ಯವಹಾರಗಳಿಂದ ಪ್ರಭಾವಿತವಾಗುವುದು ಸಹಜವಾಗಿಯೇ ಇದೆ. ಸಮಾಜಗಳಲ್ಲಿ ಪರಸ್ಪರ ಸಹಾನುಭೂತಿ, ತಾಳ್ಮೆಗಳು ಇರುವವರೆಗೂ ಬೇರೆ ಬೇರೆ ಧರ್ಮಗಳ ಪ್ರಭಾವಗಳು ನೆಮ್ಮದಿಯ ಜೀವನಕ್ಕೆ ತೊಡಕನ್ನುಂಟುಮಾಡುವುದಿಲ್ಲ. ಆದರೆ ಮಾನವ ಪ್ರಕೃತಿಯು ಸರ್ವತ್ರ ಸಮರಸವಾದುದೆಂದು ಹೇಳಲಾಗುವುದಿಲ್ಲ, ಕೆಲವೊಮ್ಮೆ ಧಾರ್ಮಿಕ ಮತಾಂದತೆಯು ಉಲ್ಬಣಗೊಂಡು ಸಾಮಾಜಿಕ ಮರ್ಯಾದೆಗಳು ಅಸ್ತವ್ಯಸ್ತವಾಗುತ್ತವೆ. ಧಾರ್ಮಿಕ ಸುಧಾರಕರೆನ್ನಿಸಿಕೊಂಡ ಕೆಲವು ವಿಶಿಷ್ಟ ವ್ಯಕ್ತಿಗಳು ಸಮಾಜದ ಒಳಿತನ್ನು ಸಾಧಿಸುವ ಉದ್ದೇಶದಿಂದ ಸರ್ವಧರ್ಮ ಸಮನ್ವಯ ವಾದವನ್ನು ಮುಂದಿಟ್ಟು ಜನತೆಗೆ ಹಿತೋಪದೇಶವನ್ನು ಮಾಡ ಹೊರಟರೂ ಅದು ಸಂಪೂರ್ಣ ಫಲಕಾರಿಯಾಗಿದೆ ಎಂದು ಹೇಳಲಾಗುವುದಿಲ್ಲ. ಈ ಸ್ಥಿತಿಯನ್ನು ಗಮನಿಸಿ ಕೆಲವು ರಾಷ್ಟ್ರಗಳಂತೂ ಧರ್ಮರಹಿತ ಅಥವಾ ಸೆಕ್ಯುಲರ್ ರಾಜ್ಯದ ಸಿದ್ಧಾಂತವನ್ನು ತಾಳಿವೆ. ಸೆಕ್ಯುಲರ್ ರಾಜ್ಯ ವ್ಯವಸ್ತೆಯನ್ನುಳ್ಳವೆನಿಸುವ ರಾಷ್ಟ್ರಗಳಲ್ಲೂ ಸಮಾಜದ ಸ್ತರದಲ್ಲಿ ಧಾರ್ಮಿಕ ಸಹನೆ-ಸಹಾನುಭೂತಿಗಳು ನೆಲೆಸಿವೆ ಎಂದು ಹೇಳಿಕೊಳ್ಳುವುದು ಕಷ್ಟವೇ ಎಂದು ಹೇಳಬಹುದು. ರಾಜಕೀಯ ದೃಷ್ಟಿಯಿಂದ ಸರ್ವಧರ್ಮ ಸಮನ್ವಯ ಸಿದ್ಧಾಂತವನ್ನು ವಿಮರ್ಶಿಸುವುದು ಪ್ರಕೃತ ಈ ಲೇಖನದ ಉದ್ದೇಶವಲ್ಲ. ಅಂತೂ ಮಾನವ ಪ್ರಕೃತಿಯು ಸಹಜವಾಗಿ ವೈಷಮ್ಯಯುಕ್ತವಾಗಿರುವುದರಿಂದ, ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಸರ್ವಧರ್ಮ ಸಮನ್ವಯದ ವಾದವು ಎಷ್ಟುಮಟ್ಟಿಗೆ ಸ್ಥಿರವಾಗುವುದೆಂಬುದು ಸಮಸ್ಯೆಯೇ ಆಗಿರುತ್ತದೆ. ಮಾನವ ಸಮಾಜವೇ ಏಕೆ, ಸಚೇತನವಾದ ಜೀವಿಗಳು ಮತ್ತು ಜಡ ವಸ್ತುಗಳಲ್ಲಿಯೂ ಕೂಡ ಪ್ರಕೃತಿ ವೈಷಮ್ಯದ ಕಾರಣದಿಂದ ಏರು ಪೇರುಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ಉಲ್ಬಣಗೊಂಡಾಗ ಜೀವನ ಮರ್ಯಾದೆಗಳು ಡೋಲಾಯಮಾನವಾಗುತ್ತವೆ.

ಧಾರ್ಮಿಕ ಸಹನೆಯನ್ನು ಬೋಧಿಸುವಾಗ ಧರ್ಮದ ಯಥಾರ್ಥ ಸ್ವರೂಪವನ್ನು ಅರಿತಿರಬೇಕು. ಕಾಲ, ದೇಶ, ಪ್ರಕೃತಿ ಮತ್ತು ಪರಿಸ್ಥಿತಿಗಳ ವಶದಿಂದ ಸಹಜವಾಗಿಯೇ ರೂಪಭೇದವನ್ನು ತಾಳುವ ಧರ್ಮವನ್ನು ಸಮನ್ವಯಗೊಳಿಸುವ ಪ್ರಯತ್ನದಲ್ಲಿ ವಿವೇಕ ಮತ್ತು ಜಾಗರೂಕತೆಗಳಿರಬೇಕು. ಧರ್ಮ ಸಮನ್ವಯ ಸಿದ್ಧಾಂತವನ್ನು ಯಾವ ಪ್ರಕರಣಕ್ಕೆ ಹೊಂದಿಸಬೇಕು, ಯಾವ ಪ್ರಕರಣದಲ್ಲಿ ಧರ್ಮ ಸಮನ್ವಯ ಸಿದ್ಧಾಂತವು ಫಲಕಾರಿಯಾಗುವುದಿಲ್ಲ ಎಂಬುದರ ಬಗ್ಗೆ ದೀರ್ಘದರ್ಶಿಯಾದ ವಿವೇಚನೆಯಿರಬೇಕು. ಇಲ್ಲದಿದ್ದರೆ ಸಮನ್ವಯವನ್ನು ಮಾಡಹೊರಟು ವೈಷಮ್ಯ ವಿರೋಧಗಳನ್ನು ಮತ್ತಷ್ಟು ಉಲ್ಬಣಗೊಳಿಸಿ ಸಾಮಾಜಿಕ ನೆಮ್ಮದಿಗೆ ಭಂಗ ಉಂಟುಮಾಡಿದಂತಾಗುತ್ತದೆ. ಉದಾಹರಣೆಗೆ ಭಗವದ್ಗೀತೆಯಲ್ಲಿ "ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ| ಶುನಿಚೈವ ಶ್ವಪಾಕೇಚ ಪಂಡಿತಾಃ ಸಮ ದರ್ಶಿನಃ ||"  (ವಿದ್ಯಾ ವಿನಯಗಳಿಂದ ಕೂಡಿದ ಬ್ರಾಹ್ಮಣ, ಗೋವು, ಆನೆ, ನಾಯಿ, ನಾಯಿಯನ್ನು ತಿನ್ನುವವ—ಇವರೆಲ್ಲರ ವಿಷಯದಲ್ಲಿಯೂ ಪಂಡಿತರು ಸಮದರ್ಶಿಗಳಾಗಿರುತ್ತಾರೆ) ಎಂಬ ಸಮದರ್ಶನ ಸಿದ್ಧಾಂತವು ಮಂಡಿಸಲ್ಪಟ್ಟಿದೆ. ಈ ಸಮದರ್ಶನದ ಯಥಾರ್ಥ ಸ್ವರೂಪವನ್ನು ಗಮನಿಸದೆ, ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಲೋಕ ಜೀವನದ ವಿಧಾನಗಳನ್ನು ಆದರ್ಶವಾಗಿಟ್ಟುಕೊಂಡು ಸಮನ್ವಯ ಮಾಡಹೊರಟರೆ  "ವಿನಾಯಕಂ ಪ್ರಕುರ್ವಾಣೋ ರಚಯಾಮಾಸ ವಾನರಂ" ಎಂಬ ಗಾದೆಗೆ ಅವಕಾಶ ಕೊಟ್ಟಂತಾಗುತ್ತದೆ. ಮೇಲಿನ ಗೀತಾ ಶ್ಲೋಕದಲ್ಲಿ ನಿರ್ದಿಷ್ಟರಾದ ಬ್ರಾಹ್ಮಣ, ಗೋವು, ಆನೆ, ನಾಯಿ, ನಾಯಿಯನ್ನು ತಿನ್ನುವವ—ಇವರನ್ನು ಸಮ ದೃಷ್ಟಿಯಿಂದ ಭಾವಿಸಬೇಕು ಎಂಬ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಒಂದು ಸಭೆ ಸೇರಿಸಿ ಇವರೆಲ್ಲರಿಗೂ ಸಮಾನ ಗೌರವವನ್ನು ಸಲ್ಲಿಸುವುದು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಪ್ರಾಯೋಗಿಕವಾಗುವುದು ಸಾಧ್ಯವೇ? ಒಂದೇ ವೇದಿಕೆಯ ಮೇಲೆ ಉತ್ತಮವಾದ ಸಮಾನ ಕುರ್ಚಿಗಳನ್ನು ಆಸನಗಳನ್ನಾಗಿ ಕಲ್ಪಿಸಿ, ಸನ್ಮಾನಿತರಾಗುವ ಇವರೆಲ್ಲರನ್ನೂ ಕೂರಿಸುವುದು ಎಷ್ಟು ಹಾಸ್ಯಸ್ಪದವಾಗುತ್ತದೆ| ತೊಡಲು ಒಂದೇ ವಿಧವಾದ ಹೊಸ ವಸ್ತ್ರಗಳನ್ನು ಅವರಿಗೆ ಅರ್ಪಿಸಿದರೆ ಅವುಗಳನ್ನು ಅವರು ಧರಿಸುವುದೆಂತು? ಅಂತೆಯೇ ಅವರೆಲ್ಲರಿಗೂ ಸಮಾನವಾದ ಆಹಾರ ಪಾನೀಯಗಳನ್ನು ಒದಗಿಸಿ ಸಮದೃಷ್ಟಿಯನ್ನು ತೋರಿಸಿದರೆ ಎಂತಹ ಆಭಾಸವಾಗುತ್ತದೆ? ಆದ್ದರಿಂದ ಇಲ್ಲಿ ಗೀತೆಯ ಸಮದರ್ಶನದ ತತ್ತ್ವವೇನು? ಎಂಬುದನ್ನು ಬಹಳ ವಿವೇಕದಿಂದ ಅವಧರಿಸಬೇಕು. ಮೇಲಿನ ಉಪಚಾರಗಳಿಂದ ಗೀತೆಯ ಸಮದರ್ಶನ ಸಿದ್ಧಾಂತವು ಪ್ರಯೋಗಕ್ಕೆ ಬರುವುದಿಲ್ಲವೆಂದು ಗೀತೆಯನ್ನು ಹಳಿಯಹೊರಟರೆ ತಪ್ಪು ಯಾರದು? ಹಾಗಾದರೆ ಈ ಸಮದರ್ಶನ ಸಿದ್ಧಾಂತದ ಸಮಸ್ಯೆಯನ್ನು ಬಿಡಿಸುವುದೆಂತು ಎಂಬ ಪ್ರಶ್ನೆಯು ಸಹಜವಾಗಿಯೇ ಏಳಬಹುದು. ಗೀತಾಚರ್ಯನ ಹೃದಯವನ್ನು ಅರಿತುಕೊಂಡಾಗ ಮಾತ್ರ ಸಮರ್ಪಕವೂ ಸಮಾಧಾನಕರವೂ ಆದ ಉತ್ತರವು ದೊರಕುತ್ತದೆ. ಮೇಲೆ ನಿರ್ದಿಷ್ಟರಾದ ವ್ಯಕ್ತಿಗಳ ರೂಪ, ಸ್ವಭಾವ, ಆಹಾರ, ವಿಹಾರ, ವ್ಯವಹಾರಗಳೆಲ್ಲಾ ವಿಭಿನ್ನವಾಗಿದ್ದರೂ ಅವರಲ್ಲಿ ಎಲ್ಲ ಕಾಲ, ಎಲ್ಲ ಪರಿಸ್ಥಿತಿಗಳಲ್ಲೂ ಸಮಾನವಾಗಿ ಬೆಳಗುತ್ತಿರುವ ಚೈತನ್ಯ ತತ್ತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡು, ಆ ಜೀವವನ್ನು ಹತಗೊಳಿಸದಂತೆ ಅದಕ್ಕೆ ಹಿತವನ್ನುಂಟು ಮಾಡುವಂತಹ ಉಪಚಾರಗಳನ್ನು ಸಲ್ಲಿಸಿದರೆ, ಸಮದರ್ಶನ ಸಿದ್ಧಾಂತವನ್ನು ವಿರೋಧವಿಲ್ಲದಂತೆ ಪಾಲಿಸಿದಂತಾಗುತ್ತದೆ. ಇದರಿಂದ ವ್ಯವಹಾರಕ್ಕೂ ಬಾಧೆಇಲ್ಲ. ಪರಮಾರ್ಥಕ್ಕೂ ಹಾನಿ ಇಲ್ಲ. ಸಮ ಎಂದರೆ ಸರ್ವಭೂತಗಳಲ್ಲಿಯೂ ಅವಿಚ್ಚಿನ್ನವಾಗಿ ಬೆಳಗುತ್ತಿರುವ ಬ್ರಹ್ಮ ಚೈತನ್ಯ ಎಂಬುದಾಗಿ ಭಾಗವತದಲ್ಲಿ ವರ್ಣಿತವಾಗಿದೆ. ಸರ್ವಭೂತಗಳಲ್ಲಿಯೂ ಬ್ರಹ್ಮದರ್ಶನವನ್ನು ಮಾಡುವವನೇ ಸಮದರ್ಶಿ ಎನಿಸುವನು. ಇಂತಹ ಸಮದರ್ಶಿಯು ಮಾತ್ರ ಸಮಸ್ತ  ಭೂತ ಗಳಲ್ಲಿಯೂ ಬೆಳಗುತ್ತಿರುವ ಬ್ರಹ್ಮ ಶಕ್ತಿಯ ವಿಲಾಸಕ್ಕೆ ವಿರೋಧವುಂಟಾಗುವಂತಹ ಕಾರ್ಯವನ್ನು ಮಾಡುವುದಿಲ್ಲ. ಧರ್ಮ ಸಮನ್ವಯವನ್ನು ಅಪೇಕ್ಷಿಸುವವರಿಗೂ ಈ ದೃಷ್ಟಿ ಇರಬೇಕು. ವ್ಯವಹಾರದಲ್ಲಿ ಆಚಾರ ರೂಪದಲ್ಲಿರುವ ಕ್ರಿಯಾ ಕಲಾಪಗಳನ್ನೇ ಧರ್ಮವೆಂದು ಭಾವಿಸಿ ಅಂತಹ ಕ್ರಿಯಾ ಕಲಾಪಗಳನ್ನು ಒಂದರೊಡನೆ ಮತ್ತೊಂದನ್ನು ಸಂಕರಿಸಿ ಧಾರ್ಮಿಕ ಸಮನ್ವಯವನ್ನು ಸಾಧಿಸುವುದು ಮರೀಚಿಕಾ ಜಲದಿಂದ ಬಾಯಾರಿಕೆ ಇಂಗಿಸಿಕೋಂಡಂತೆ. ಸಮಸ್ತ ಭೂತಗಳನ್ನೂ ಒಂದಕ್ಕೊಂದು ವಿರೂಧವಿಲ್ಲದಂತೆ ಧರಿಸಿರುವ ಮಹಾಶಕ್ತಿಯೇ ಮೂಲ ಧರ್ಮ.  ಅದೇ ಕಾಲ, ದೇಶ, ದೇಹ, ಪರಿಸ್ಥಿತಿಗಳ ವಶದಿಂದ ಬೇರೆ ಬೇರೆಯಂತೆ ತೋರುತ್ತದೆ. ಆ ಮೂಲ ಸದ್ವಸ್ತುವು ಮರೆಯಾಗದಂತೆ ಜೀವನದಲ್ಲಿ ಬೆಳೆದು ಬಂದಿರುವುದೇ ಸನಾತನ ಧರ್ಮ. ಮೇಲುನೋಟದಿಂದ ಧರ್ಮ ಸ್ವರೂಪವನ್ನು ನಿರ್ಣಯಿಸುವುದು ಕಷ್ಟ. ಆದ್ದರಿಂದಲೇ " ಧರ್ಮಸ್ಯ ತತ್ತ್ವಂ ನಿಹಿತಂಗುಹಾಯಾಮ್" ಎಂದು ಹೇಳುವುದು. ಧರ್ಮ ಸಮನ್ವಯ ಮಾಡುವ ಪ್ರಯತ್ನದಲ್ಲಿ ಧರ್ಮ ಸಂಕರಕ್ಕೆ ಅವಕಾಶ ಮಾಡಿಕೊಟ್ಟು ಮೂಲ ಧರ್ಮ ಮರೆಯಾಗುವಂತೆ ಮಾಡಬಾರದು. ಮೂಲ ಧರ್ಮವು ಅವಿಕೃತವಾದ ಒಂದೇ ತತ್ತ್ವವಾದರೂ ಧರ್ಮದ ಪ್ರತೀಕಗಳು ವಿಭಿನ್ನವಾಗಿವೆ. ಪ್ರತೀಕಗಳನ್ನು ಸಮನ್ವಯಗೊಳಿಸಿದರೆ ಧರ್ಮ ಸಮನ್ವಯವನ್ನು ಸಾಧಿಸಿದಂತೆ ಆಗುವುದಿಲ್ಲ. " ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ" ಎಂಬ ಭಗವದ್ವಾಣಿಯ ಅಭಿಪ್ರಾಯವನ್ನು ಚೆನ್ನಾಗಿ ಅರಿಯಬೇಕು. ವ್ಯವಹಾರದಲ್ಲಿ ಕಾಣ ಬರುವ ಧರ್ಮಾಚಾರಗಳನ್ನು ಬಿಟ್ಟುಬಿಡಬೇಕೆಂದು ಈ ಮಾತಿನ ತಾತ್ಪರ್ಯವಲ್ಲ.  ದೇಹಧರ್ಮ, ಇಂದ್ರಿಯ ಧರ್ಮ, ಮನೋಧರ್ಮ ಮುಂತಾದುವುಗಳಲ್ಲಿಯೇ ಆಸಕ್ತನಾಗಿರುವವನಿಗೆ ಆತ್ಮ ದರ್ಶನವಿಲ್ಲ. ದೇಹೇಂದ್ರಿಯಾದಿ ಧರ್ಮಗಳಲ್ಲಿಯೇ ಆಸಕ್ತನಾದವನಿಗೆ ಲೋಕದ ಕಡೆಗೆ ಆಕರ್ಷಣೆಯೇ ಪ್ರಬಲವಾಗಿರುತ್ತದೆ. ದೇಹಾದಿ ಧರ್ಮಗಳನ್ನು ದಾಟಿದರೆ ನಿರುಪಾಧಿಕವಾದ ಆತ್ಮಧರ್ಮವೊಂದೇ ಬೆಳಗುತ್ತದೆ. ಮೂಲ ತತ್ತ್ವವನ್ನು ಅರಿತವನು ಮಾತ್ರ ಧರ್ಮ ಸಮನ್ವಯದ ರಹಸ್ಯವನ್ನು ತಿಳಿದಿರುತ್ತಾನೆ.

"ಕತ್ತಲಲ್ಲಿ ಕಣ್ಣು ತೆರೆದು ನೋಡಿದರೂ ಏನೂ ಕಾಣುವುದಿಲ್ಲ. ಏನಾದರೂ ಕಾಣಬೇಕಾದರೆ ಬೆಳಕಿನ ಸಹಾಯ ಬೇಕು. ಅಂತೆಯೇ ಜ್ಞಾನದ ಬೆಳಕಿನಲ್ಲಿ ಜೀವನವನ್ನು ನೋಡಿ".
"ಜ್ಞಾನವನ್ನು ಹೊಂದುವ ವಿಧಾನವೇ ಯೋಗ. ಅದನ್ನು ಹೊಂದುವುದು ಸ್ತ್ರೀ ಪುರುಷರೆಲ್ಲರ ಹಕ್ಕು ಮತ್ತು ಕರ್ತವ್ಯ. ಜ್ಞಾನ ದೀಪವನ್ನು ನೋಡುವ ಕಣ್ಣೇ ಸತ್ಯವನ್ನು ನೋಡುವ ಕಣ್ಣು. ಅದನ್ನು ನೋಡಿ ಮಾಡುವ ಕೆಲಸವೇ ಧರ್ಮದ ಕೆಲಸ."

" ದೇಹ ಧರ್ಮ, ಇಂದ್ರಿಯ ಧರ್ಮ, ಮನೋಧರ್ಮ, ಬುದ್ಧಿಧರ್ಮ, ಎಲ್ಲ ಧರ್ಮಗಳೂ ಆತ್ಮನಲ್ಲಿ ನಿಲ್ಲಬೇಕು. ಹೀಗೆ ಎಲ್ಲ ಧರ್ಮಗಳೂ ಆತ್ಮ ಧರ್ಮದಲ್ಲಿ ಸಮಾನವಾಗಿ ಸಮನ್ವಯಗೊಂಡಾಗ ಅಲ್ಲಿ ಮಾತ್ರ ಸರ್ವಧರ್ಮ ಸಮನ್ವಯ ಸಾಧ್ಯ."

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಮಾರ್ಚ್ ಸಂಪುಟ:3 ಸಂಚಿಕೆ:5 ರಲ್ಲಿ ಪ್ರಕಟವಾಗಿದೆ.