Sunday, September 20, 2020

ಆರ್ಯಸಂಸ್ಕೃತಿ ದರ್ಶನ - 11 (Arya Samskruti Darshana - 11)

ಆದರ್ಶನಾರೀ
ಲೇಖಕರು : ಪ್ರೊ||ಶೇಷಾಚಲ ಶರ್ಮಭಾರತೀಯ ಧರ್ಮ, ಸಂಸ್ಕೃತಿ, ಸಾಹಿತ್ಯ ವಿಚಾರಧಾರೆಗಳಲ್ಲಿ ಸ್ತ್ರೀಯ ಬಗ್ಗೆ ಆದರ ಮತ್ತು ಗೌರವಪೂರ್ಣವಾದ ಭಾವನೆ ತುಂಬಿದೆ. ಕೆಲವೆಡೆ ಧರ್ಮಶಾಸ್ತ್ರ ಮುಂತಾದ ಗ್ರಂಥಗಳಲ್ಲಿ ಸ್ತ್ರೀಯನ್ನು ನಿಂದೆ ಮಾಡಿರುವುದು ಕಂಡುಬರುವುದೇನೋ ನಿಜ.  ಆದರೆ ಪ್ರಾಕೃತ ಭಾವಗಳಿಗೆ ಸಿಕ್ಕಿ ಆದರ್ಶನಾರೀತ್ವದಿಂದ ದೂರ ಸರಿಯುವ ಸ್ವಭಾವ ಸ್ತ್ರೀಯಲ್ಲಿ ಕಂಡಾಗ ಧರ್ಮ ನಿರೂಪಣೆಗೆ ತೊಡಗಿದ ಶಾಸ್ತ್ರ ಹಾಗೆ ತಾನೆ ಹೇಳ ಬೇಕಾಗುತ್ತೆ. ಅಷ್ಟೇ ಏಕೆ ನಮ್ಮ ಧಾರ್ಮಿಕ ವಾಙ್ಮಯದಲ್ಲಿ ಆದರ್ಶ ಪುರುಷಭಾವದಿಂದ ಜಾರುವ ಪುರುಷನ ಬಗ್ಗೆ ನಿಂದೆಯೇನೂ ಕಡಿಮೆಯಿಲ್ಲ. ಆರೋಗ್ಯ ಶಾಸ್ತ್ರದಲ್ಲಿ ಅನಾರೋಗ್ಯವನ್ನ ವರ್ಣನೆಮಾಡಿ ನಿಂದಿಸುವುದು, ಮನುಷ್ಯನು ಅನಾರೋಗ್ಯದಿಂದ ದೂರವಿದ್ದು ಆರೋಗ್ಯವನ್ನು ರಕ್ಷಿಸಿಕೊಳ್ಳಲಿ ಎಂಬ ಉದ್ದೇಶದಿಂದ ಮಾತ್ರ.

ನಮ್ಮ ಶ್ರುತಿ, ಸ್ಮೃತಿ, ಪುರಾಣ ಮೊದಲಾದ ಗ್ರಂಥಗಳು ಸ್ತ್ರೀಯ ಮಹತ್ವವನ್ನು ವಿಶೇಷವಾಗಿ ಪ್ರಶಂಸೆ ಮಾಡಿರುವುದನ್ನು ಕಾಣುತ್ತೇವೆ. ಸದ್ರೂಪವಾದ ಸತ್ಯ ವಸ್ತುವನ್ನು ಸಾಕ್ಷಾತ್ಕರಿಸಿಕೊಂಡು ಸತಿಯೆರೆನಿಸಿದ ಸ್ತ್ರೀಯರು ಪುರುಷರೇ ಸರಿ ಎಂದು ವೇದಮಂತ್ರ ತಿಳಿಸುತ್ತದೆ. ಇಲ್ಲಿ ಪುರುಷ ಎಂದರೆ ಬ್ರಹ್ಮಪುರವೆನಿಸಿದ ಈ ಶರೀರದಲ್ಲಿ  ಪೂರ್ಣವಾಗಿ ಬೆಳೆಗುವ ಬ್ರಹ್ಮಚೈತನ್ಯ. ಶತಪಥ ಬ್ರಾಹ್ಮಣವು ಪತ್ನಿಯು ಪುರುಷನ ಅರ್ಧ ಭಾಗವೆಂದು ತಿಳಿಸುತ್ತದೆ.

" ಅರ್ಧೋ ಹ ವಾ ಏಷ  ಆತ್ಮನೋ ಯಜ್ಜಾಯಾ ತಸ್ಮಾದ್ಯಾವಜ್ಜಾಯಾಂ ನ ವಿಂದತೇ ನೈವ ತಾವತ್ ಪ್ರಜಾಯತೇ, ಅಸರ್ವೋ ಹಿ ತಾವದ್ಭವತಿ | 
ಅಥ ಯದೈವ ಜಾಯಾಂ ವಿಂದತೇsಥ ಪ್ರಜಾಯತೇ ತರ್ಹಿ ಹಿ ಸರ್ವೋ ಭವತಿ||"

ಪತ್ನಿಯೆಂದರೆ (ಪುರುಷನಿಗೆ) ತನ್ನ ಅರ್ಧ ಭಾಗವೇ. ಆದ್ದರಿಂದ ಪತ್ನಿಯನ್ನು ಪಡೆಯದಿದ್ದರೆ ಸಂತಾನವಿಲ್ಲ. ಅಲ್ಲಿಯವರೆಗೂ (ಪುರುಷನು) ಅಪೂರ್ಣನಾಗಿಯೇ ಇರುತ್ತಾನೆ. ಯಾವಾಗ ಅವನು ಪತ್ನಿಯನ್ನು ಪಡೆಯುತ್ತಾನೆಯೋ ಆಗ ಸಂತಾನವನ್ನು ಹೊಂದುತ್ತಾನೆ. ಹಾಗಾದರೆ ಮಾತ್ರ ಪುರುಷನು ಪೂರ್ಣನಾಗುತ್ತಾನೆ. ಮಹಾಭಾರತವು ಸ್ತ್ರೀಯನ್ನು ಕುರಿತು ಈ ರೀತಿ ಪ್ರಶಂಸೆ ಮಾಡುತ್ತದೆ.

" ಸ್ತ್ರಿಯೋ ಯತ್ರ ಪೂಜ್ಯಂತೇ ರಮಂತೇ ತತ್ರ ದೇವತಾಃ|
  ಅಪೂಜಿತಾಶ್ಚ ಯತ್ರೈತಾಃ ಸರ್ವಾಸ್ತತ್ರಾಫಲಾ  ಕ್ರಿಯಾಃ|
  ತದಾ ಚೈತತ್ ಕುಲಂ ನಾಸ್ತಿ ಯದಾ ಶೋಚಂತಿ ಜಾಮಯಃ|
  ಚಾಮೀಶಪ್ತಾನಿ ಗೇಹಾನಿ  ನಿಕೃತಾ ನೀವ ಕೃತ್ಯಯಾ|
  ನೈವ ಭಾಂತಿ ನ ವರ್ಧಂತೇ ಶ್ರಿಯಾ ಹೀನಾನಿ ಪಾರ್ಥಿವ||
                                                      (ಮ.ಭಾ. ಅನು)

ಇದರ ಅರ್ಥ ಹೀಗಿದೆ :- " ಎಲ್ಲಿ ಸ್ತ್ರೀಯರು ಪೂಜಿತರಾಗುತ್ತಾರೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಎಲ್ಲಿ ಸ್ತ್ರೀಯರು ಪೂಜಿತರಾಗುವುದಿಲ್ಲವೋ ಅಲ್ಲಿ ಎಲ್ಲ ಕ್ರಿಯೆಗಳೂ ನಿಷ್ಫಲವಾಗುತ್ತವೆ. ಕುಲಸ್ತ್ರೀಯರು ದುಃಖಪಟ್ಟರೆ ಕುಲವೇ ನಾಶ ಹೊಂದುತ್ತದೆ. ಕುಲಸ್ತ್ರೀಯರ ಶಾಪಕ್ಕೊಳಗಾದ ಮನೆಗಳು ಅಭಿಚಾರಕೃತ್ಯಗಳಿಂದ ನಾಶಹೊಂದಿದವುಗಳಂತೆ ಶ್ರೀ ಹೀನವಾಗಿ ಶೋಭಿಸುವುದಿಲ್ಲ ಮತ್ತು ಏಳಿಗೆ ಹೊಂದುವುದಿಲ್ಲ.

ಧರ್ಮಸಿದ್ಧಿಗೆ ಸ್ತ್ರೀಯೇ ಮೂಲಕಾರಣವೆಂದು (ಸ್ತ್ರೀಪ್ರತ್ಯಯೋ ಹಿ ವೈ ಧರ್ಮಃ) ಶಾಸ್ತ್ರಗಳು ಸಾರುತ್ತವೆ. ತ್ಯಾಗ, ಪ್ರೆಮ, ದಯೆ, ಔದಾರ್ಯ ಮುಂತಾದ ಉತ್ತಮ ಆದರ್ಶಗುಣಗಳ ಮೂರ್ತರೂಪವೇ ಸ್ತ್ರೀಯೆಂದು ಹೇಳಬಹುದು. ಪುಣ್ಯಶೀಲರೂ, ಸಾಧ್ವಿಯರೂ ಆದ ಸ್ತ್ರೀಯರು ಲೋಕಮಾತೆಯರೆಂದು ಪೂಜಿತರಾಗುತ್ತಾರೆ.  ಆದ್ದರಿಂದಲೇ ಸ್ತ್ರೀಯರು ಜಗಜ್ಜನನಿಯ ಪ್ರತಿರೂಪರು. ಸ್ತ್ರೀಯಲ್ಲಿ ಬೆಳಗುವ ಕನ್ಯಾಭಾವ, ಗೃಹಿಣೀತ್ವ ಮತ್ತು ಮಾತೃತತ್ವಗಳು ಪರಮ ಪವಿತ್ರವಾದವು. ಆದ್ದರಿಂದಲೇ ಸರ್ವಾವಸ್ಥೆಯಲ್ಲೂ ಸ್ತ್ರೀಗೆ ರಕ್ಷಣೆನೀಡುವುದು ಧರ್ಮವೆಂದು ಶಾಸ್ತ್ರಗಳು ವಿಧಿಸುತ್ತವೆ. ಕನ್ಯಾವಸ್ಥೆಯಲ್ಲಿ ಸ್ತ್ರೀಯರಿಗೆ ಉಚಿತವಾದ ಶಿಕ್ಷಣ ದೊರೆಯಬೇಕು. ವಿದ್ಯಾವತಿಯರಾದ ಸ್ತ್ರೀಯರಿಂದಲೇ ಕುಲಧರ್ಮಗಳು ಶಾಶ್ವತವಾಗಿ ನೆಲೆಗೊಳ್ಳುತ್ತವೆ. ವಿದ್ಯೆ, ಕಲೆಗಳು ವಿದ್ಯಾದೇವಿಯಾದ ಸರಸ್ವತಿಯಿಂದ ತಾನೇ ಹರಿದು ಬರಬೇಕು. ಕನ್ಯಾಭಾವದಲ್ಲಿ ವಿದ್ಯಾರಹಸ್ಯವನ್ನು ತಿಳಿದು ಕುಲವತಿಯಾದ ನಾರೀ ಮುಂದೆ ಗೃಹಿಣೀ ಧರ್ಮವನ್ನು ಚೆನ್ನಾಗಿ ಸಂರಕ್ಷಿಸುತ್ತಾಳೆ. ಆದ್ದರಿಂದಲೇ ಅವಳು ಶ್ವಶುರಗೃಹರಾಜ್ಯಕ್ಕೆ ಸಮ್ರಾಜ್ಞಿಯಾಗುತ್ತಾಳೆ. ಸ್ತ್ರೀಗೆ ಇಂತಹ ಉತ್ತಮ ಸಮ್ರಾಜ್ಞೀ ಪದವನ್ನು ಶ್ರುತಿಯೇ ವಿಧಿಸುತ್ತದೆ. ಗೃಹಸ್ಥಧರ್ಮಕ್ಕೆ ಆಶ್ರಯವಾದ ದಾಂಪತ್ಯಭಾವ ಪರಮಪಾವನವಾದುದು. ಇತರ ಆಶ್ರಮಗಳಿಗೆ ಗೃಹಸ್ಥಾಶ್ರಮವು ತಾಯಿಯಂತೆ ಪರಮಾಶ್ರಯವಾದುದು. ವಿವಾಹಮಂಗಳ ಸಮಯದಲ್ಲಿ ವರನು ವಧುವನ್ನು ಕುರಿತು ಹೇಳುವ ಈ ಮಾತುಗಳು ದಾಂಪತ್ಯಭಾವದ  ಪರಮೋನ್ನತ  ದಿವ್ಯಸ್ವರೂಪವನ್ನು ಸ್ಫೂರ್ತಿಯುತವಾಗಿ ತಿಳಿಸುತ್ತವೆ:- ಸಾಮಾಹಮಸ್ಮಿ  ಋಕ್ತ್ವಂ, ದ್ಯೌರಹಂ ಪೃಥ್ವೀ ತ್ವಂ, ತ್ವಾವೇಹಿ ವಿವಹಾವಹೈ, ಸಹ ರೇತೋ ದಧಾವಹೈ, ಪ್ರಜಾಂ ಪ್ರಜನಯಾವಹೈ, ಪುತ್ರಾನ್ ವಿಂದಾವಹೈ ಬಹೂನ್,  ತೇ ಸಂತು ಜರದಷ್ಟಯಃ, ಸಂಪ್ರಿಯಾ ರೋಚಿಷ್ಣು ಸುಮನಸ್ಯಮಾನೌ, ಪಶ್ಯೇಮ ಶರದಃಶತಂ  ಜೀವೇಮ ಶರದಃಶತಂ ಶೃಣುಯಾಮ ಶರದಃಶತಂ.

(ನಾನು ಸಾಮವಾಗಿದ್ದೇನೆ, ನೀನು  ಋಕ್ ಆಗಿದ್ದೀಯೆ, ನಾನು ದ್ಯುಲೋಕ, ನೀನು ಪೃಥ್ವೀ, ಆದ ಕಾರಣ ನೀನು ಬಾ, ನಾವಿಬ್ಬರೂ ವಿವಾಹವಾಗೋಣ.  ನಾವಿಬ್ಬರೂ  ಒಟ್ಟಿಗೆ ತೇಜಸ್ಸನ್ನು ಧರಿಸೋಣ. ನಾವಿಬ್ಬರೂ ಪ್ರಜೆಯನ್ನು ಪಡೆಯೋಣ. ಬಹುಮಂದಿ ಪುತ್ರರನ್ನು ಪಡೆಯೋಣ. ನೀನು ಚಿರಕಾಲಬಾಳು. ನಾವಿಬ್ಬರು ಪರಸ್ಪರ ಪ್ರೀತಿವಂತರೂ,  ಕಾಂತಿಯುತರೂ, ಶುಭ ಮತ್ತು ಪ್ರಸನ್ನ ಮನಸ್ಸುಳ್ಳವರೂ ಆಗಿ ನೂರುವರ್ಷಗಳು ನೋಡೋಣ. ನೂರು ವರ್ಷಗಳು ಬಾಳೋಣ. ನೂರು ವರ್ಷಗಳು ಕೇಳೋಣ.)

ಐಕಾತ್ಮ್ಯ ಸಾಧನೆಯೇ ದಾಂಪತ್ಯದ ಗುರಿ. ಆದರಿಂದಲೇ ಲೌಕಿಕವಾದ ದ್ರವ್ಯ ಪರಿಗ್ರಹ ವಿಷಯದಲ್ಲೇ ಆಗಲಿ ಅಥವಾ ಪುಣ್ಯಫಲದ ವಿಷಯದಲ್ಲೇ ಆಗಲಿ  ಪತಿಪತ್ನಿಯರಲ್ಲಿ ವಿಭಾಗ ಸಲ್ಲದು. (ಜಾಯಾಪತ್ಯೋರ್ನ ವಿಭಾಗೋ ವಿದ್ಯತೇ, ಪುಣ್ಯಫಲೇಷು  ದ್ರವ್ಯಪರಿಗ್ರಹೇಷು ಚ ) ಎಂದು ಆಪಸ್ತಂಬ  ಧರ್ಮಸೂತ್ರವು ತಿಳಿಸುತ್ತದೆ. ಗೃಹಸ್ಥಾಶ್ರಮವು ಸುಖಪ್ರಾಪ್ತಿಗಾಗಿ ಇದೆ. ಅಂತಹ ಸುಖಕ್ಕೆ ಪತ್ನಿಯೇ ಮೂಲ. (ಗೃಹಾಶ್ರಯಃ ಸುಖಾರ್ಥಾಯ ಪತ್ನೀಮೂಲಂ ಹಿ ತತ್ಸುಖಂ) ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಸೇವಕರು ಇವರುಗಳಿಂದ ಸರ್ವಥಾ ತುಂಬಿದ್ದರೂ, ಭಾರ್ಯೆಯಿಲ್ಲದ ಗೃಹಸ್ಥನ ಮನೆಯು ಶೂನ್ಯವೇ ಸರಿ:-

ಪುತ್ರಪೌತ್ರವಧೂಭೃತ್ಯೈಃ ಸಂಕೀರ್ಣಮಪಿ  ಸರ್ವತಃ|
ಭಾರ್ಯಾಹೀನಗೃಹಸ್ಥಸ್ಯ  ಶೂನ್ಯಮೇವ ಗೃಹಂ  ಭವೇತ್||
                                                                  (ಮ.ಭಾ.)
ಧರ್ಮಮೂರ್ತಿಯಾದ ನಾರೀಮಣಿಯು ಮಹಾಲಕ್ಷ್ಮಿಯ ನಿವಾಸಸ್ಥಾನವಾಗಿರುತ್ತಾಳೆ. ಮಹಾಭಾರತದಲ್ಲಿ ರುಕ್ಮಿಣಿ ಮತ್ತು ಲಕ್ಷ್ಮಿಯರ ಸಂಭಾಷಣೆಯ ಪ್ರಸಂಗವೊಂದು ವರ್ಣಿತವಾಗಿದೆ. ಉತ್ತಮ ನಾರಿಯರಲ್ಲಿ ತಾನು ಸದಾ ನೆಲೆಸಿರುವುದಾಗಿ ಲಕ್ಷ್ಮಿಯು ರುಕ್ಮಿಣಿಯೊಡನೆ ಹೇಳುತ್ತಾಳೆ:-

ಸತ್ಯಾಸು ನಿತ್ಯಂ ಪ್ರಿಯದರ್ಶನಾಸು
ಸೌಭಾಗ್ಯಯಕ್ತಾಸು ಗುಣಾನ್ವಿತಾಸು|
ವಸಾಮಿ ನಾರೀಷು ಪತಿವ್ರತಾಸು
ಕಲ್ಯಾಣಶೀಲಾಸು  ವಿಭೂಷಿತಾಸು||

( ಸತ್ಯನಿಷ್ಠರೂ, ರೂಪವೇಷಗಳಿಂದ ನೋಡಲು ಪ್ರಿಯರೂ, ಸೌಭಾಗ್ಯವುಳ್ಳವರೂ, ಗುಣಸಂಪನ್ನರೂ, ಪತಿವ್ರತೆಯರೂ, ಕಲ್ಯಾಣಮಯವಾದ ಶೀಲವುಳ್ಳವರೂ, ಆದ ನಾರಿಯರಲ್ಲಿ ನಾನು ಸದಾ ವಾಸಮಾಡುತ್ತೇನೆ)
ಮೃದುವಾದ ಸ್ವಭಾವ, ಮಧುರವಾದ ಮಾತು,  ಧರ್ಮಪರತೆ, ಪ್ರೀತಿ, ಕಾರುಣ್ಯ, ಸೇವಾನಿಷ್ಠೆ ಮಂತಾದ ಸದ್ಗಣಗಳಿಂದ ನಾರಿಯು ನಮ್ಮ ಧರ್ಮ ಸಮಾಜದಲ್ಲಿ ಪರಮ ಪವಿತ್ರವೂ, ಪೂಜ್ಯವೂ ಆದ ಸ್ಥಾನವನ್ನು ಪಡೆದಿದ್ದಾಳೆ. ಮಹಾಭಾರತದಲ್ಲಿ ಜಗಜ್ಜನನಿಯಾದ ಪಾರ್ವತಿಯು ಉತ್ತಮ ಸ್ತ್ರೀಯನ್ನು ಹೀಗೆ ವರ್ಣಿಸುತ್ತಾಳೆ:- "ಉತ್ತಮವಾದ ಸ್ವಭಾವ, ಮಾತು, ಆಚರಣೆಗಳಿಂದ ಕೂಡಿ, ರೂಪವೇಷಗಳಿಂದ ಸುಖವೀಯುವವಳಾಗಿ ಅನನ್ಯಭಾವದಿಂದ ಪತಿಯ ವಿಷಯದಲ್ಲಿ ಸುಮುಖಳಾಗಿರುವ ನಾರಿಯೇ ಧರ್ಮಚಾರಿಣಿಯು. ತನ್ನ ಪತಿಯನ್ನು ಸದಾ ದೇವಸದೃಶವಾಗಿ ಕಾಣುವವಳೇ ಧರ್ಮಪರಾಯಣಿ. ಅವಳೇ ಧರ್ಮ ಫಲಕ್ಕೆ ಭಾಗಿಯಾದವಳು. ಪತಿಯನ್ನು ದೇವನಂತೆ ಭಾವಿಸಿ ಸೇವೆ, ಪರಿಚರ್ಯೆಗಳನ್ನು ಮಾಡುವವಳೂ, ನೋಡಿದಮಾತ್ರಕ್ಕೆ ಸುಖಪ್ರದಳೂ, ಉತ್ತಮ ನಿಯಮವುಳ್ಳವಳೂ ಆಗಿ ಎಂದಿಗೂ ಅಪ್ರಸನ್ನಳಾಗದೆ ಅನನ್ಯಭಾವದಿಂದ ಪುತ್ರನ ಮುಖವನ್ನು ಹೇಗೋ ಹಾಗೆ ಪತಿಯ ಮುಖವನ್ನು ಸದಾ ನಿರೀಕ್ಷಿಸುವವಳೂ, ಸಾಧ್ವಿಯೂ ಆದವಳು ಧರ್ಮಚಾರಿಣಿಯು. ಒಟ್ಟಿಗೆ ಆಚರಿಸಬೇಕಾದ ಮಂಗಳಮಯ ದಂಪತಿ ಧರ್ಮವನ್ನು ಶ್ರವಣಮಾಡಿ ಪತಿಯೊಡನೆ ಸಮಾನವಾದ ವ್ರತವುಳ್ಳವಳಾದ ನಾರಿಯೇ ಧರ್ಮಪರಾಯಣಳು. ಸಾಧ್ವಿಯಾದವಳು ಯಾವಾಗಲೂ ತನ್ನ ಪತಿಯನ್ನ ದೇವತೆಯಂತೆ ಕಾಣುತ್ತಾಳೆ. ಇದೇ ದಂಪತಿಗಳಿಗೆ ಸಹ ಧರ್ಮವಿಹಿತವಾದ ಮಂಗಳಮಯ ಧರ್ಮ. ಪತಿಯ ವಿಷಯದಲ್ಲಿ ಆಸೆಪಡುವಂತೆ ಯಾವಳ ಮನಸ್ಸು ಕಾಮ, ಭೋಗ, ಐಶ್ವರ್ಯ ಸುಖಗಳಲ್ಲಿ ಆಸೆಪಡುವುದಿಲ್ಲವೋ ಅಂತಹ ನಾರಿಯೇ ಧರ್ಮಭಾಗಿನಿಯು. ಅತ್ತೆ, ಮಾವಂದಿರ ಪಾದ ಸೇವೆಮಾಡುತ್ತಾ, ಗುಣಸಂಪನ್ನಳಾಗಿ, ಸದಾ ತಾಯಿ ತಂದೆಯರಲ್ಲಿ ನಿಷ್ಠೆಯುಳ್ಳ ನಾರಿಯೇ ತಪೋಧನಳು. ಬ್ರಹ್ಮಜ್ಞಾನಿಗಳು, ದುರ್ಬಲರು, ಅನಾಥರು, ದೀನರು, ಕುರುಡರು, ದರಿದ್ರರು- ಇವರುಗಳನ್ನು ಅನ್ನದಿಂದ ಸಂರಕ್ಷಿಸುವವಳಾದ ನಾರಿಯೇ ಪತಿಯ ಧರ್ಮಪಾಲನೆಯಲ್ಲಿ ಪಾಲ್ಗೊಳ್ಳುವ ಧರ್ಮಚಾರಿಣಿಯ."

ಸುಸ್ವಭಾವಾ ಸುವಚನಾ ಸುವೃತ್ತಾ ಸುಖದರ್ಶನಾ|
ಅನನ್ಯಚಿತ್ತಾ ಸುಮುಖೀ ಭರ್ತುಃ ಸಾ ಧರ್ಮಚಾರಿಣೀ||
ಸಾಭವೇದ್ಧರ್ಮಪರಮಾ  ಸಾ ಭವೇದ್ಧರ್ಮಭಾಗಿನೀ|
ದೇವವತ್ ಸತತಂ ಸಾಧ್ವೀ ಯಾ ಭರ್ತಾರಂ ಪ್ರಪಶ್ಯತಿ ||
ಶುಶ್ರೂಷಾಂ ಪರಿಚಾರಂ ಚ ದೇವವದ್ಯಾ ಕರೋತಿ ಚ |
ನಾನ್ಯಭಾವಾ ಹ್ಯವಿಮನಾಃ ಸುವ್ರತಾ ಸುಖದರ್ಶನಾ ||
ಪುತ್ರ ವಕ್ತ್ರಮಿವಾಭೀಕ್ಷ್ಣಂ ಭರ್ತುರ್ವದನಮೀಕ್ಷತೇ |
ಯಾ ಸಾಧ್ವೀ ನಿಯತಾಹಾರಾ ಸಾ ಭವೇದ್ಧರ್ಮಚಾರಿಣೀ||
ಶ್ರುತ್ವಾ ದಂಪತಿಧರ್ಮಂ ವೈ ಸಹಧರ್ಮಂ ಕೃತಂ ಶುಭಂ|
ಯಾ ಭವೇದ್ಧರ್ಮಪರಮಾ ನಾರೀ ಭರ್ತೃಸಮವ್ರತಾ||
ದೇವವತ್ ಸತತಂ ಸಾಧ್ವೀ ಭರ್ತಾರಮನುಪಶ್ಯತಿ  |
ದಂಪತ್ಯೊರೇಷ  ವೈ ಧರ್ಮಃ ಸಹಧರ್ಮಕೃತಃ ಶುಭಃ||
ಸ್ಪೃಹಾ ಯಸ್ಯಾ ಯಥಾ ಪತ್ಯೌ ಸಾ ನಾರೀ ಧರ್ಮ ಭಾಗಿನೀ||
ಶ್ವಶ್ರೂಶ್ವಶುರಯೋಃ ಪಾದೌ ಜೋಷಯನ್ತೀ ಗುಣಾನ್ವಿತಾ|
ಮಾತಾಪಿತೃಪರಾ ನಿತ್ಯಂ ಯಾ ನಾರೀ ಸಾ ತಪೋಧನಾ||
ಬ್ರಾಹ್ಮಣಾನ್ ದುರ್ಬಲಾನಾಥಾನ್ ದೀನಾಂಧ ಕೃಪಣಾಂಸ್ತಥಾ|
ಬಿಭರ್ತ್ಯನ್ನೇನ  ಯಾ ನಾರೀ ಸಾ ಪತಿವ್ರತಭಾಗಿನೀ||

ನಾರಿಯಲ್ಲಿ ಬೆಳಗುವ ಪವಿತ್ರವೂ  ಮಂಗಳವೂ ಆದ ಮಾತೃತ್ವವನ್ನು ಗುರುತಿಸಿದ ನಮ್ಮ ಧರ್ಮ ಪರಂಪರೆ, ಮಾತೆಗೆ ಪ್ರಥಮ ಪೂಜ್ಯಸ್ಥಾನವನ್ನು ನೀಡಿದೆ. ಶಿವಶಕ್ತಿನಿಕೇತನವಾಗಿ ಶಿವಾಲಯವೂ, ವಿಷ್ಣುಲಕ್ಷ್ಮೀ ನಿಕೇತನವಾಗಿ ವಿಷ್ಣ್ವಾಲಯೂ ಆದ ಯೋಗ ಭೋಗಾಯತನ ಶರೀರವನ್ನು ತುಂಬಿಕೊಟ್ಟ ಮಾತೆಯನ್ನು ಗೌರವಿಸಿ,  "ಮಾತೃದೇವೋಭವ" ಎಂದು ಉಪನಿಷದ್ವಾಣಿಯು ಮೊಳಗುತ್ತದೆ. ಮಾತೃಭಾವದಿಂದ ದೇವತ್ವಕ್ಕೇರಿದ ನಾರೀಮಣಿಯು ಸಕಲಜೀವಿಗಳನ್ನೂ ಭರಿಸಿ ಪೋಷಿಸುವ ಸಾಕ್ಷಾತ್ ಮಂಗಳಮಯಿಯಾದ ಅನ್ನಪೂರ್ಣೆಯೇ ಸರಿ. ಭಾರತ ನಾರಿಯೆಂದರೆ ಭಾ ರೂಪವಾದ ಆತ್ಮಜ್ಯೋತಿಯಿಂದ ಮನೆಯನ್ನೂ, ಮನವನ್ನೂ ಬೆಳಗುವ ಪರಮ ಮಂಗಳದೇವತೆ. ಭಾವ, ರಾಗ, ತಾಳಗಳ ಸಾಮರಸ್ಯದಿಂದ ಬೆಳಗುವ ಗೃಹಲಕ್ಷ್ಮೀ. ಆದರ್ಶ ನಾರಿಯಲ್ಲಿ  ದೇವತ್ವವನ್ನು ಗುರತಿಸಿ ಗೌರವವಿತ್ತು ಪೂಜಿಸಿದ ಋಷಿದೃಷ್ಟಿಗೆ ನಮೋ ನಮಃ.

ಎಲ್ಲೆಲ್ಲೂ ವಿವಾಹ ಮಂಗಳಕಾರ್ಯಗಳು ನೆರವೇರುತ್ತಿರುವ ಕಾಲವಿದು. ಈ ಶುಭ ಸಮಯದಲ್ಲಿ ಮಂಗಳಮಹಾಲಕ್ಷ್ಮಿಯರಾಗಿ ಜನ್ಮಾತೆಯ ರೂಪದಿಂದ  ಬೆಳಗುವ ನಾಡ ಸೋದರೀನಾರೀಮಣಿಯರಿಗೆ ದಿವ್ಯಸ್ಫೂರ್ತಿಯನ್ನು ಭಗವಂತ ಭಗವತಿಯರು ನೀಡಲಿ ಎಂದು ಹಾರೈಸಿ, ಶ್ರೀಶ್ರೀರಂಗಗುರುಭಗವಂತನ ಮಂಗಳವಚನಸುಧೆಯನ್ನು ಆಸ್ವಾದಿಸುತ್ತಾ ಈ ಲೇಖನವನ್ನು  ಮುಗಿಸುತ್ತೇನೆ.
"ಸ್ತ್ರೀತ್ವವನ್ನು ಧರಿಸಿ, ಪರಮಪುರುಷನಿಗೆ ನರ, ನಾರಾಯಣ ಎರಡು ರೂಪಗಳಲ್ಲಿಯೂ ಭಾರ್ಯೆಯಾಗಿ ತ್ರಿಧಾಮದಲ್ಲಿಯೂ ಗೃಹಿಣಿಯಾಗಿದ್ದಾಳೆ ಸೀತೆ. ಅಂತಹ ಜಗನ್ಮಾತೆಯ ಗುಣಲಕ್ಷಣವನ್ನು ಧರಿಸಿದವಳೇ ಸ್ತ್ರೀ."

ಸ್ತ್ರೀಯು ಪುರುಷನ (ಪರಮಪುರುಷನ-ಶ್ರೀಪತಿಯ) ಆತ್ಮ (ಸತ್ಯ) ಕ್ರೀಡೆಗೂ, ಧರ್ಮರತಿಗೂ ಸಹ ಒಂದು ಸುಂದರವೂ ಮಂಗಳವೂ ಆದ ಗೃಹವಾಗಿದ್ದಾಳೆ. ಅಂತಃ ಬಹಿಃ ಸತ್ಯ-ಶಿವ-ಸೌಂದರ್ಯವನ್ನು  ಪ್ರಕಟಿಸುವವಳಾಗಿದ್ದಾಳೆ.
"ಮನೆಯಲ್ಲಿ ವಾಸಮಾಡುವ ದಂಪತಿಗಳ ವಿಷಯವೂ ರಮಣೀಯವಾಗಿದೆ. ಬ್ರಹ್ಮಚಾರಿಯು ಜ್ಞಾನಿಯಾದ ಗುರುವಿನಲ್ಲಿ ಶಿಕ್ಷಣ ಪಡೆದು, ಗುರುಕುಲದಲ್ಲಿದ್ದು ಜ್ಞಾನವನ್ನು ಪಡೆದವನು. ಜ್ಞಾನವೇ ಮುಖ್ಯವಾದುದು ಎಂದು ಅರಿತು ಜ್ಞಾನಕ್ಕೆ ಕ್ಷೇತ್ರವಾಗಿ ಪವಿತ್ರ ಸ್ಥಳವಾದ ಕಾಶಿಗೆ ಯಾತ್ರೆ ಹೊರಟನು. ಇದನ್ನು ತಿಳಿದ ಕನ್ಯಾಪಿತೃವು ಮುಂದೆ ಲಕ್ಶ್ಮೀರೂಪಳಾದ ಕನ್ಯೆಯನ್ನು ಇಟ್ಟುಕೊಂಡು ಜ್ಞಾನದ ಸಂತಾನವನ್ನು ಲೋಕದಲ್ಲಿ ಬೆಳಸಲು ಕನ್ಯಾದಾನ ಮಾಡಿದನು."

ದ್ಯಾವಾಪೃಥಿವ್ಯಾವಿವ ನಿತ್ಯಯುಕ್ತೌ ಕಲ್ಯಾಣದೌ ಪುಂಪ್ರಕೃತಿಸ್ವರೂಪೌ|
ಜಗತ್ರಯಾದ್ಯೌ ಗೃಹಿಣೌ ಸತಾಂ ವೋ ದಾಂಪತ್ಯಭಾವೇ ಪರಮಂ ಪ್ರಮಾಣಂ||

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಮಾರ್ಚ್ ಸಂಪುಟ:3 ಸಂಚಿಕೆ:8 ರಲ್ಲಿ ಪ್ರಕಟವಾಗಿದೆ.