Thursday, September 24, 2020

ವೆಂಕಟೇಶ ಬ್ರಹ್ಮರಥೋತ್ಸವದ ಅಂತರಾರ್ಥ (Venkatesha Brahmarathotsavada Antarartha)

 


  ಲೇಖಕರು:ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಬ್ರಹ್ಮರಥೋತ್ಸವ-ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ:

ರಥೋತ್ಸವಗಳು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ದೇವಸ್ಥಾನದ ಪೂಜೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಬ್ರಹ್ಮರಥೋತ್ಸವ ಇದಾಗಿದೆ. "ತೇರನೇರಿ ಬೀದಿಯಲಿ ಮೆರೆವ ರಂಗನ ನೋಡದ ಕಂಗಳಿದೇತಕೋ" ಎಂಬಂತೆ ವಿಶೇಷವಾಗಿ ರಥೋತ್ಸವದ ಬಗ್ಗೆ ದಾಸರು ಕೊಂಡಾಡಿದ್ದಾರೆ. ಆಗಮ ಶಾಸ್ತ್ರಗಳಲ್ಲಿ ರಥೋತ್ಸವದ ಬಗ್ಗೆ ಅದ್ಭುತವಾದ ಕೊಂಡಾಟವಿದೆ. ಎಷ್ಟರಮಟ್ಟಿನ ಕೊಂಡಾಟ ಎಂದರೆ "ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ" - ಆ ರಥದಲ್ಲಿ ಇರುವ ದೇವನನ್ನು ನೋಡಿದರೆ ಅವನಿಗೆ ಪುನರ್ಜನ್ಮವಿಲ್ಲ ಎಂದು ಘೋಷಣೆ ಮಾಡುತ್ತಾರೆ. ನಮಗೆಲ್ಲ ಆಶ್ಚರ್ಯವಾಗಬಹುದು. ಮೋಕ್ಷವನ್ನು ಹೊಂದಲು ಗುರುಗಳ ಅನುಗ್ರಹ, ಸಾಧನೆ, ಅನುಷ್ಠಾನ ವ್ರತ ನಿಯಮಗಳು, ಏಕಾಗ್ರತೆ, ಧ್ಯಾನ, ಯೋಗಾಭ್ಯಾಸ, ವೇದಾಧ್ಯಯನ ಇತ್ಯಾದಿ ಇಷ್ಟಾರು ವಿಸ್ತಾರವಾದ ಸಾಧನಾ ಮಾರ್ಗಗಳನ್ನು ಹೇಳಿದ್ದಾರೆ. ಅಷ್ಟೆಲ್ಲ ಕಷ್ಟವೇ ಇಲ್ಲದೇ ಮನೆ ಮುಂದೆ ಬಂದ ರಥದಲ್ಲಿರುವ ದೇವರನ್ನು ನೋಡಿದರೆ ಸಾಕು ಎಂದರೆ ಈ ಸಾಧನಾ ಮಾರ್ಗಗಳೆಲ್ಲ ಏಕೆ ಎನ್ನಿಸಬಹುದು.

ಯಾವುದು ಆ ರಥ?:

ಆ ರಥ ಯಾವುದು? ಉಪನಿಷತ್ತು ಅಪ್ಪಣೆ ಕೊಡಿಸಿದಂತೆ- ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವತು..ಜೀವನ ಯಾತ್ರೆಗೆ ಸಾಧನವಾದ ನಮ್ಮ ದೇಹವೇ ರಥವಾಗಿದೆ. ರಥಿಯೇ ಭಗವಂತನ ಅಂಶವಾದ ಜೀವನಾಗಿದ್ದಾನೆ. ನಿಶ್ಚಯಾತ್ಮಕವಾದ ಬುದ್ಧಿಯೇ ಸಾರಥಿ. ಮನಸ್ಸೇ ಕಡಿವಾಣ. ನಮ್ಮನ್ನು ಎಲ್ಲೆಡೆಗೆ ಒಯ್ಯುವ ಇಂದ್ರಿಯಗಳೇ ಕುದುರೆಗಳು. ಅರ್ಜುನನಂತೆ ನಮ್ಮ ಗಮ್ಯಸ್ಥಾನವಾದ ಪರಮಾತ್ಮನನ್ನೇ ಸಾರಥಿಯನ್ನಾಗಿ ಇಟ್ಟುಕೊಂಡರೆ ಅಂತಹ ರಥವು ದಾರಿ ತಪ್ಪದು. "ಜೀವನದ ಅಪಾರ್ಥಗಳನ್ನೆಲ್ಲ ಕಳೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಉದ್ದೇಶದಿಂದ ಅವನು ಪಾರ್ಥಸಾರಥಿಯನ್ನು ಇಟ್ಟುಕೊಂಡನಪ್ಪಾ" ಎಂಬುದು ಶ್ರೀರಂಗ ಮಹಾಗುರುಗಳ ಅಮೃತವಾಣಿ. ಅವನು ನರರಥದಲ್ಲಿರುವ ನಾರಾಯಣ. ನಮ್ಮ ಶರೀರರಥದ ಪ್ರತಿನಿಧಿಯೇ ಹೊರಗಿನ ರಥವಾಗಿದೆ. ರಥದ ಶಿಲ್ಪದಲ್ಲಿ ಕೆಳಸ್ತರದಲ್ಲಿ ಭೌತಿಕ ಜೀವನದ ಶಿಲ್ಪಗಳನ್ನೆಲ್ಲಾ ನೋಡಬಹುದು. ಅಲ್ಲಿ ಜುಗುಪ್ಸಿತವಾದ ಶಿಲ್ಪಗಳೂ ಇವೆ. ದೇವರ ರಥದಲ್ಲಿ ಇದೆಲ್ಲವೂ ಏಕೆ ಎಂದರೆ, ನಮ್ಮ ಶರೀರದಲ್ಲಿರುವ ವಿಷಯಗಳನ್ನು ಅಲ್ಲೂ ಚಿತ್ರಿಸಿದ್ದಾರೆ. ನಮ್ಮನ್ನೇ ಅಲ್ಲಿ ಪ್ರತಿನಿಧಿಸಿರುವುದು. ಆ ರಥ ಇಡೀ ಬ್ರಹ್ಮಾಂಡದ ಪ್ರತಿನಿಧಿಯಾಗಿರುವಂತೆಯೇ ಈ ಪಿಂಡಾಂಡದ ಪ್ರತಿನಿಧಿಯೂ ಆಗಿದೆ. ನಾವು ಸಂಸ್ಕಾರಗಳಿಗೆ ಒಳಪಡದೇ ಪಶುಭಾವದಲ್ಲೇ, ಇಂದ್ರಿಯಲಾಲಸೆಗಳಲ್ಲೇ ಜೀವನ ನಡೆಸುತ್ತಿದ್ದರೆ ಕೆಳಸ್ತರದ ಜೀವನ. ಮೇಲಿನ ಸ್ತರಗಳಲ್ಲಿ ಗುರು-ಶಿಷ್ಯರ, ದೇವತೆಗಳ, ತ್ರಿಮೂರ್ತಿಗಳ ಚಿತ್ರಗಳೆಲ್ಲವನ್ನೂ ನೋಡಬಹುದು. ಜೀವನದಲ್ಲಿ ಊರ್ಧ್ವ ದೃಷ್ಟಿ ಬೆಳೆಸಿಕೊಂಡು ಜೀವನ ಮೂಲದ ಕಡೆಗೆ ಹೆಜ್ಜೆಹಾಕುವ ಸಂಸ್ಕಾರಗಳನ್ನು ಬೆಳೆಸಿಕೊಂಡಾಗ ಅಂತರ್ದರ್ಶನಕ್ಕೆ ವಿಷಯ. ಅಲ್ಲಿ ನಮ್ಮನ್ನು ಆಳುವ ದೇವತೆಗಳ ದರ್ಶನವನ್ನೂ ಪಡೆಯಬಹುದು. ಅದಕ್ಕೂ ಮೇಲೆ ವಿಶ್ವಮೂಲನಾದ ನಾರಾಯಣನನ್ನೂ ನೋಡಬಹುದಾಗಿದೆ. ಹಾಗೆ ನೋಡುವಂತಾದರೆ ಪುನರ್ಜನ್ಮದ ಮಾತೇ ಇಲ್ಲ.

ಭಗವಂತನ ಮನೋರಥೋತ್ಸವ:

ನಾವು ನಮ್ಮೊಳಗೇ, ಈ ನರರಥದಲ್ಲೇ ಅವನನ್ನು ನೋಡಬೇಕಾಗಿರುವುದು. ನಮ್ಮ ಜೀವನ ಯಾತ್ರೆಯೆಲ್ಲ ಅವನ ಉತ್ಸವವಾಗಬೇಕು. ನಮ್ಮ ನಡೆನುಡಿ, ಆಚಾರ-ವಿಚಾರ ಎಲ್ಲದರಲ್ಲೂ ಅಂತರಂಗದ ಸ್ವಾಮಿಯಾದ ಅವನ ಆಶಯವೇ ತುಂಬಿದ್ದರೆ ನಮ್ಮ ಜೀವನವೂ ನಿತ್ಯ ರಥೋತ್ಸವ. ನಮ್ಮ ನಮ್ಮ ಮನೋರಥಗಳ ಉತ್ಸವ ನಾವೀಗ ಮಾಡುತ್ತಿದ್ದೇವೆ. ಅದು ಭಗವಂತನ ಮನೋರಥದ ಉತ್ಸವವಾದಾಗ ಜೀವನ ಆನಂದಮಯ. ಹೀಗೆ ರಥೋತ್ಸವವನ್ನು ಋಷಿಗಳು ನಮ್ಮನ್ನು ನಮಗೆ ನೆನಪಿಸಲು, ನಮ್ಮ ಜೀವನದ ಗುರಿಯನ್ನು ನೆನಪಿಸಲು ತಂದಿದ್ದಾರೆ. ರಥೋತ್ಸವದಲ್ಲಿ ಭಾಗವಹಿಸಿದವರೆಲ್ಲರೂ "ಮಡಿ"ಯೇ. ರಥೋತ್ಸವದಿಂದ ಹಿಂತಿರುಗಿ ಬಂದು, ಮಡಿಗಾಗಿ ಸ್ನಾನ ಮಾಡಿದರೆ ಪಾಪಭಾಗಿಯಾಗುತ್ತೇವೆ ಎಂದು ಆಗಮಗಳು ಎಚ್ಚರಿಸುತ್ತವೆ. ರಥೋತ್ಸವದಲ್ಲಿ ರಥವನ್ನು ಎಳೆಯುವಾಗ ಎಲ್ಲರೂ ಬ್ರಹ್ಮಭಾವದಲ್ಲಿಯೇ ಇರುವುದರಿಂದ ಆ ಜಾಗದಲ್ಲಿ ಯಾವ ಮೈಲಿಗೆಯೂ ಇಲ್ಲ. ಅಲ್ಲಿ ಎಲ್ಲವೂ ಮಡಿಯಾಗಿರುತ್ತದೆ. ಭಗವಂತನ ಮನೋರಥವನ್ನು ಎಳೆಯುವ ಹಕ್ಕು ಎಲ್ಲರದೂ. ಎಲ್ಲರೂ ಅದರಲ್ಲಿ ಭಾಗವಹಿಸಿ ಕೃತಾರ್ಥರಾಗಬೇಕು. ರಥೋತ್ಸವದಲ್ಲಿ ಭಾಗವಹಿಸುವ ಎಲ್ಲರ ಕೆಲಸಗಳೂ ಪವಿತ್ರವೇ. ವೇದಮಂತ್ರಗಳನ್ನು ಹೇಳುವ ಬ್ರಾಹ್ಮಣರಿಂದ ನಾದಸ್ವರ ನುಡಿಸುವವರವರೆಗೆ ಎಲ್ಲ ಸೇವೆಗಳೂ ಶ್ರೇಷ್ಠವೇ. ಎಲ್ಲರ ಲಕ್ಷ್ಯವೂ ರಥಸ್ಥನಾದ ಗೋವಿಂದನೇ.

ಗರುಡ-ನಂದಿಯರ ಆವಾಹನೆ:

ರಥಗಳಲ್ಲಿ ಗರುಡನನ್ನು ಆವಾಹನೆ ಮಾಡುತ್ತಾರೆ. ಅವನೇ ವಿಷ್ಣುರಥ. ಆನೆ, ಕುದುರೆ ಇತ್ಯಾದಿ ಎಲ್ಲ ವಾಹನಗಳಲ್ಲೂ ವೈಷ್ಣವಾಗಮಗಳ ಪ್ರಕಾರ ಗರುತ್ಮಂತನನ್ನೇ ಆವಾಹನೆ ಮಾಡುತ್ತಾರೆ. ವೇದಮಯವಾದ ಪಕ್ಷಿಯೇ ಗರುಡ-ಗರುತ್ಮಂತ. ನಮ್ಮೊಳಗೆಯೂ ಪ್ರಾಣ ಅಪಾನಗಳೆಂಬ ಎರಡು ರೆಕ್ಕೆಗಳ ಪ್ರಾಣಶಕ್ತಿಯೇ ಗರುತ್ಮಂತ. ಅವನು ನಮ್ಮನ್ನು ಭೌತಿಕ-ಪಾರಮಾರ್ಥಿಕ ಕ್ಷೇತ್ರಗಳಿಗೆ ಒಯ್ಯಬಲ್ಲನು. ಆ ಶಕ್ತಿಯನ್ನು ಹೊರಗಿನ ರಥದಲ್ಲೂ ಆವಾಹನೆ ಮಾಡಬೇಕು. ಶೈವಾಗಮಗಳಲ್ಲಿ ನಂದಿಯನ್ನು ರಥದಲ್ಲಿ ಆವಾಹನೆ ಮಾಡುತ್ತಾರೆ. "ಮಹಾ ಜ್ಞಾನಾಕಾಶದಲ್ಲಿ ನಂದಿಯು ತನ್ನ ಸಕಲ ವಿಲಾಸಗಳಿಂದ ಮಹಾದೇವನನ್ನು ಒಯ್ಯುತ್ತಿದ್ದಾನೆ" ಎಂದು ಆ ದೇವ ದೇವನನ್ನು ಒಳಗೆ ಕಂಡು ಅನುಭವಿಸಿದ ಮಹಾತ್ಮರ ಮಾತು.

ನಮ್ಮ ಶರೀರ-ಮಹಾತ್ಮರ ದೃಷ್ಟಿ:

ಜ್ಞಾನಿಗಳು ನಮ್ಮ ದೇಹವನ್ನು ರಥವಾಗಿ, ಏಣಿಯಾಗಿ, ದೋಣಿಯಾಗಿ, ವಿಮಾನವಾಗಿ ಕಂಡಿದ್ದಾರೆ. ಪೂಜ್ಯರಾದ ತುಳಸೀದಾಸರು ಮಾನವ ದೇಹವನ್ನು ನರಕ-ಸ್ವರ್ಗ-ಮೋಕ್ಷ ಎಲ್ಲಕ್ಕೂ ನಮ್ಮನ್ನು ಮುಟ್ಟಿಸುವ ಏಣಿ ಎಂದು ಕೊಂಡಾಡಿದ್ದಾರೆ. ಮಹತ್ತಾದ ಪುಣ್ಯವೆಂಬ ಹಣವನ್ನು ಕೊಟ್ಟು ಈ ಮಾನವ ಶರೀರವೆಂಬ ದೋಣಿಯನ್ನು ಪಡೆದಿದ್ದೇವೆ, ಈ ದೋಣಿ ಮುರಿದು ಹೋಗುವ ಮೊದಲೇ ಈ ಭವಸಾಗರವನ್ನು ದಾಟಬೇಕು ಎಂದು ಋಷಿಗಳು ಎಚ್ಚರಿಸುತ್ತಾರೆ. ಹಾಗೆಯೇ ಈ ನರರಥದಲ್ಲಿ ನಾರಾಯಣನ ಸಾರಥ್ಯವನ್ನು ಪ್ರಾರ್ಥಿಸಬೇಕಾಗಿದೆ. ಮಾರ್ಗದರ್ಶಕನೂ ಅವನೇ, ಗಮ್ಯಸ್ಥಾನವೂ ಅವನೇ.

ವೆಂಕಟೇಶ ರಥೋತ್ಸವ:

ಪ್ರಸ್ತುತ ತಿರುಪತಿಯಲ್ಲಿ ವೆಂಕಟೇಶ್ವರನ ರಥೋತ್ಸವವು ಸಂಪನ್ನವಾಗಲಿದೆ. ಏಳು ಬೆಟ್ಟದ ಒಡೆಯ. ನಮ್ಮೊಳಗಿನ ಸಪ್ತಚಕ್ರಗಳಿಗೂ ಆ ಲಕ್ಷ್ಮೀನಾರಾಯಣರೇ ಒಡೆಯರು. ಅವರ ಪರಮೋನ್ನತ ಸ್ಥಾನ ಸಹಸ್ರಾರಚಕ್ರ. ಅದು ವಿಷ್ಣುಲಕ್ಷ್ಮಿಯರ ನಿಕೇತನ. ಹೊರಗೂ ಏಳು ಬೆಟ್ಟದ ಮೇಲೆ ನೆಲೆಸಿದ್ದಾನೆ. ವಿಶ್ವವ್ಯಾಪಿ ಅವನು. ಅದಕ್ಕಾಗಿಯೇ ವಿಷ್ಣು ಎಂಬ ಹೆಸರು. ನಮ್ಮ ಮನೋರಥಗಳಲ್ಲಿ ಆ ವೆಂಕಟೇಶನನ್ನು ಕುಳ್ಳಿರಿಸಿ ಉತ್ಸವ ಆಚರಿಸೋಣ. ರಥೋತ್ಸವದ ಹಿಂದಿನ ಮಹರ್ಷಿಮನೋರಮವಾದ ದೃಷ್ಟಿಯನ್ನು ನೆನೆಯುತ್ತಾ ಸಕಲ ವೈಭವಗಳಿಂದ ಸಂಪನ್ನವಾಗುವ ವೆಂಕಟೇಶನ ರಥೋತ್ಸವದಲ್ಲಿ ಆನಂದದಿಂದ ಭಾಗವಹಿಸೋಣ. ಪ್ರತ್ಯಕ್ಷವಾಗಿ ಹೋಗಲಾಗದಿದ್ದರೂ ನಮ್ಮ ಮನೋಬುದ್ಧಿಗಳಿಂದ ಅವನ ತೇರನ್ನು ಎಳೆಯೋಣ.

ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.