Saturday, September 12, 2020

ಶೌಚ (ಆತ್ಮಗುಣ) Shovcha (Athmaguṇa)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶೌಚ-ಶುದ್ಧಿ-ಆಚಾರಶೌಚವು ಆತ್ಮಗುಣಗಳಲ್ಲಿ ಅತ್ಯಂತ ಶ್ರೇಷ್ಠವಾದುದು. ಶುದ್ಧವಾಗಿಡುವ ಪ್ರಕ್ರಿಯೆ ಅದು. ಸಾಮಾನ್ಯವಾಗಿ ಯಾವುದರಿಂದ ಶುದ್ಧಗೊಳಿಸುತ್ತೇವೋ ಅದನ್ನು ಶೌಚ ಎಂಬ ಪದದಿಂದ ಕರೆಯುವ ರೂಢಿ  ಉಂಟು. ಶುದ್ಧಿಯ ಪರಿಣಾಮದಿಂದ ಆತ್ಮಸ್ವರೂಪದ ಅರಿವಾಗುತ್ತದೆ. ಆದ್ದರಿಂದ ಇದನ್ನು ಆತ್ಮಗುಣವೆಂದು ಕರೆದಿದ್ದಾರೆ. ಶುದ್ಧಿಯ ಪ್ರಕ್ರಿಯೆಗೆ 'ಆಚಾರ' ಎಂಬ ಇನ್ನೊಂದು ಹೆಸರಿನಿಂದ ಕರೆಯುವುದು ವಾಡಿಕೆ. ಅತ್ಯಂತ ಪ್ರಸಿದ್ಧವಾದ ಮಾತೊಂದಿದೆ- "ಪಂಚೇಂದ್ರಿಯಸ್ಯ ದೇಹಸ್ಯ ಬುದ್ಧೇಶ್ಚ ಮನಸಸ್ತಥಾ | ದ್ರವ್ಯದೇಶಕ್ರಿಯಾಣಾಂ ಚ ಶುದ್ಧಿರಾಚಾರ ಇಷ್ಯತೇ" ಎಂದು. ಅಂದರೆ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳೆಂಬ ಐದು ಇಂದ್ರಿಯಗಳು, ದೇಹ, ಬುದ್ಧಿ, ಮನಸ್ಸು, ಪದಾರ್ಥ, ಪ್ರದೇಶ ಮತ್ತು ನಾವು ಮಾಡುವ ಕೆಲಸ ಇವುಗಳ ಶುದ್ಧಿಯನ್ನೇ 'ಆಚಾರ' ಎಂದು ಕರೆದಿದ್ದಾರೆ.

ಸತ್ಪರಿಣಾಮದಿಂದ ತ್ಯಾಜ್ಯವೂ ಪೂಜ್ಯ

ದ್ರವ್ಯಶುದ್ಧಿ, ಮನಸ್ಸಿನ ಶುದ್ಧಿ, ಮಾತಿನ ಶುದ್ಧಿ ಮತ್ತು ದೇಹಶುದ್ಧಿ ಎಂಬುದಾಗಿ ನಾಲ್ಕುಬಗೆಯ ಶೌಚವನ್ನು ಹೇಳಿದ್ದಾರೆ. ನಮ್ಮ ಪ್ರತಿನಿತ್ಯದ ಜೀವನದಲ್ಲಿ ಇವುಗಳ ಪಾತ್ರ ಮುಖ್ಯವಾದುದು. ಒಬ್ಬ ಆರೋಗ್ಯವಂತನಾಗಿ ಬದುಕಬೇಕಾದರೆ ಬಳಸುವ ಪದಾರ್ಥಗಳು ಶುದ್ಧವಾಗಿರಬೇಕು. ಯಾವುದು ಶುದ್ಧ? ಯಾವುದು ಅಶುದ್ಧ? ಎಂಬುದು, ಅದು ಕೊಡುವ ಪರಿಣಾಮದ ಮೇಲೆ ನಿರ್ಧಾರಿತವಾಗುತ್ತದೆ. ಹಸುವಿನ ಗೋಮೂತ್ರ ಮತ್ತು ಗೋಮಯ ಶುದ್ಧವಾದ ದ್ರವ್ಯ. ಇದು ಹಸುವಿನ ತ್ಯಾಜ್ಯವಾಗಿರಬಹುದು. ಆದರೆ ಇದರ ಬಳಕೆಯು ಸತ್ಪರಿಣಾಮವನ್ನುಂಟುಮಾಡುವುದು. ಜೇನುತುಪ್ಪವು ಜೇನುಹುಳುವಿನ ಎಂಜಲು. ಆದರೂ ಅದನ್ನು ನಾವು ದೇವರ ಪೂಜೆಗೆ ಯೋಗ್ಯಪದಾರ್ಥವೆಂದು ಪರಿಗಣಿಸುತ್ತೇವೆ. ಹೀಗೆ ತ್ಯಾಜ್ಯವೂ, ಪೂಜ್ಯವಾಗುವುದು- ಅದು ಕೊಡುವ ಪರಿಣಾಮದಿಂದ ಎಂಬುದನ್ನು ನಮ್ಮ ಋಷಿಗಳು ಮನಗಂಡರು.

ಧರ್ಮ ಉಳಿಯಲು ಬೇಕು ಶೌಚ

ಪ್ರತಿಯೊಂದು ಪದಾರ್ಥಕ್ಕೂ ಅದರದ್ದೇ ಆದ ಒಂದು ಧರ್ಮ-ಕಂಡೀಶನ್(condition) ಇರುತ್ತದೆ. ಅದು ಹಾಗೇ ಉಳಿಯಲು ಮತ್ತು ಹಾಳಾದ ಕಂಡೀಶನ್ನನ್ನು ಮತ್ತೆ ಜಾಗೃತಗೊಳಿಸಲು ನಾವು ಮಾಡುವ ವಿಧಾನವೇ ಶೌಚ. ಶರೀರಧರ್ಮ, ಮನೋಧರ್ಮ, ಇಂದ್ರಿಯಧರ್ಮ, ಆತ್ಮಧರ್ಮ ಎಂದು ಅವುಗಳಿಗೆ ಅವುಗಳದ್ದೇ ಆದ ಮೂಲಸ್ವರೂಪ ಇರುತ್ತದೆ. ಅದು ಯಾವುದೋ ಕಾರಣಕ್ಕೆ ಕೆಟ್ಟಿರುತ್ತದೆ. ಹೀಗೆ ಕೆಟ್ಟಂತಹ ಸ್ಥಿತಿಯನ್ನು ಸರಿಪಡಿಸಬೇಕು. ಆಗ ಅದು ತನ್ನ ಮೂಲರೂಪವನ್ನು ಪಡೆದು, ಆ ಪದಾರ್ಥವು ನಮ್ಮ ಉಪಯೋಗಕ್ಕೆ ಸಿಗುವಂತಾಗುವುದು. ನಾವು ಪ್ರತಿದಿನ ಅಡಿಗೆ ಮಾಡಲು ಪಾತ್ರೆಗಳನ್ನು ತೊಳೆಯುತ್ತೇವೆ. ಅಡಿಗೆಗೆ ಬೇಕಾದ ಪದಾರ್ಥಗಳನ್ನು ಶುಚಿಗೊಳಿಸುತ್ತೇವೆ. ಇವೆಲ್ಲಾ ಕಾರ್ಯಗಳು ಅಡಿಗೆ ಚೆನ್ನಾಗಿ ಆಗಲು, ಮಾಡಿದ ಅಡಿಗೆಯು ಭಗವತ್ಪ್ರೀತಿಕರವಾಗಿ ಆಗಿ, ಅದನ್ನು ಬಳಸಿದ ನಮಗೆ ಶಾರೀರಿಕ, ಮಾನಸಿಕ ಆರೋಗ್ಯವು ಲಭಿಸುವಂತಾಗಬೇಕು. ಹಾಗೆಯೇ ಅಡಿಗೆಯನ್ನು ಮಾಡಿ, ಕೊಳೆಯಾದ ಪಾತ್ರೆಗಳನ್ನು ಶುದ್ಧಿಗೊಳಿಸಿ ಮೊದಲಿನಂತೆ ಅಡಿಗೆ ಮಾಡಲು ಉಪಯೋಗವಾಗುವಂತೆ ತೊಳೆಯುತ್ತೇವೆ. ಒಂದುವೇಳೆ ಅವು ಮಲಿನವಾಗಿದ್ದರೆ ಅವುಗಳಿಂದ ಮಾಡಿದ ಅಡಿಗೆ ಹಾಳಾಗಿ ಭಗವಂತನ ನೈವೇದ್ಯಕ್ಕೂ ಯೋಗ್ಯವಾಗದೆ ಅದನ್ನು ಬಳಸಿದರೆ ನಮ್ಮ ಆರೋಗ್ಯಕ್ಕೂ ಹಾನಿಕಾರಕವಾಗುತ್ತದೆ. ಹಾಗಾಗಿ, ಶುದ್ಧಿ ಅಥವಾ ಶೌಚ ಎಂಬುದು ಅದರದರ ಸ್ವರೂಪವನ್ನು ಹಾಗೆಯೇ ಉಳಿಸಲು ಮತ್ತು ಹಾಳಾದ ಸ್ಥಿತಿಯನ್ನು ಪುನಃ ಸರಿಪಡಿಸಲು ಉಪಯೋಗವಾಗುತ್ತದೆ. ಆದುದರಿಂದ ನಮ್ಮ ಸಂಸ್ಕೃತಿಯಲ್ಲಿ ಆಚಾರಕ್ಕೆ ಅಷ್ಟೊಂದು ಪ್ರಾಧಾನ್ಯವಿದೆ. ಈ ಬಗ್ಗೆ ಶೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು " ಆಚಾರವಿಲ್ಲದಿದ್ದರೆ ಬರುವುದು ಗ್ರಹಚಾರವೇ" ಎಂದು. ಯೋಗಸೂತ್ರದಲ್ಲಿ ಶೌಚದ ಪರಿಣಾಮವನ್ನು ಒಂದೇ ಸೂತ್ರದಲ್ಲಿ ಹೀಗೆ ಹೇಳಿದ್ದಾರೆ- ಸತ್ತ್ವಶುದ್ಧಿ –ಸೌಮನಸ್ಯ-ಏಕಾಗ್ರ್ಯ-ಇಂದ್ರಿಯಜಯ- ಆತ್ಮದರ್ಶನಯೋಗ್ಯತ್ವಾನಿ ಚ" ಅಂದರೆ ಶೌಚವು ಸಾತ್ತ್ವಿಕಗುಣವನ್ನು ಉತ್ತೇಜನಗೊಳಿಸಿ, ಒಳ್ಳೆಯ ಮನಸ್ಸು, ಏಕಾಗ್ರತೆ, ಇಂದ್ರಿಯಗಳ ಹತೋಟಿ ಮತ್ತು ಕೊನೆಯಲ್ಲಿ ಆತ್ಮ(ಪರಮಾತ್ಮನ ದರ್ಶನಕ್ಕೆ ಯೋಗ್ಯತೆಯನ್ನು  ಕೊಡುತ್ತದೆ. ಇದೇ ತಾನೆ ಶೌಚ!

ಸೂಚನೆ: 12/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.