ದಧೀಚಿ ಮಹರ್ಷಿಯು ದೇವಕಾರ್ಯಕ್ಕಾಗಿ ತಮ್ಮ ಮೂಳೆಗಳನ್ನು ದಾನಮಾಡಿದರು. ಅದರಿಂದ ಕುಪಿತನಾದ ಅವರ ಮಗ ಪಿಪ್ಪಲಾದನು ಮಹಾದೇವನನ್ನು ಕುರಿತು ತಪಸ್ಯೆಯನ್ನಾಚರಿಸಿದ. ಪ್ರಸನ್ನನಾದ ಶಿವನು ವರವನ್ನು ದಯಪಾಲಿಸುತ್ತೇನೆಂದಾಗ ಪಿಪ್ಪಲಾದನು ದೇವತೆಗಳೆಲ್ಲರನ್ನೂ ನಾಶಮಾಡಬೇಕೆಂಬ ವರವನ್ನು ಕೇಳಿದ. ಮಹಾದೇವನು ಸೃಷ್ಟಿನಿಯಮವನ್ನು ಕೆಡಿಸುವುದು ಉಚಿತವಲ್ಲವೆಂದು ಆತನನ್ನು ಸಮಾಧಾನಗೊಳಿಸಲು ಎಷ್ಟು ಪ್ರಯತ್ನಿಸಿದರೂ ಆತ ಒಪ್ಪಲಿಲ್ಲ. ಮಹಾದೇವನು ತನ್ನ ಮೂರನೆಯ ಕಣ್ಣನ್ನು ದರ್ಶನಮಾಡಿದರೆ ಪಿಪ್ಪಲಾದನು ಕೇಳಿದ ವರವನ್ನು ನೀಡುವುದಾಗಿ ಒಪ್ಪಿದ. ಆ ದರ್ಶನಕ್ಕಾಗಿ ಪಿಪ್ಪಲಾದನು ಕಠಿಣ ತಪಸ್ಯೆಯನ್ನಾಚರಿಸಿ ಸಫಲಗೊಂಡ. ಆಗ ಶಿವನ ಮೂರನೆಯ ಕಣ್ಣಿನಿಂದ ರಾಕ್ಷಸನೊಬ್ಬ ಉದ್ಭವವಾದ. ಪಿಪ್ಪಲಾದನು ದೇವತೆಗಳನ್ನು ನಾಶಮಾಡುವಂತೆ ಆತನಿಗೆ ಆಜ್ಞಾಪಿಸಿದ. ಕೂಡಲೇ ರಾಕ್ಷಸನು ಪಿಪ್ಪಲಾದನನ್ನೇ ಕೊಲ್ಲಲು ಬಂದ. ಗಾಬರಿಗೊಂಡ ಪಿಪ್ಪಲಾದ "ಹೀಗೇಕೆ ಮಾಡುತ್ತಿರುವೆ?" ಎಂದ. ರಾಕ್ಷಸನು "ನಿನ್ನ ಆಜ್ಞೆಯಂತೆ ಮೊದಲು ನಿನ್ನೊಳಗಿರುವ ದೇವತೆಗಳನ್ನೇ ಕೊಲ್ಲುತ್ತೇನೆ" ಎಂದ. ಕೊನೆಗೆ ಮಹಾದೇವನನ್ನೇ ಮೊರೆಹೋಗಬೇಕಾಯಿತು. ಕೊನೆಗೆ ಈಶ್ವರನು, ಪಿಪ್ಪಲಾದನು ಕೋಪವನ್ನು ತ್ಯಜಿಸಿ ಸಮಾಧಾನಗೊಳ್ಳುವಂತೆ ಮಾಡಿದ.
ಸಾಮಾನ್ಯವಾಗಿ ದೇವತೆಗಳೆಂದರೆ ಎಲ್ಲೋ ದೂರದಲ್ಲಿ ದೇವಲೋಕದಲ್ಲಿರುವವರು, ಹೋಮ ಹವನಾದಿಗಳಿಂದ ಪೂಜಿಸಿದಾಗ ಅಲ್ಲಿಂದಲೇ ನಮ್ಮನ್ನು ಅನುಗ್ರಹಿಸುವವರೆಂಬ ಕಲ್ಪನೆಯಿದೆ. ಆದರೆ ದೇವಲೋಕದ ದೇವತೆಗಳು ಶಕ್ತಿರೂಪದಲ್ಲಿ ನಮ್ಮೊಳಗೇ ಬೆಳಗುತ್ತಿರುವರು. ಸೃಷ್ಟಿಯಲ್ಲಿ ನಾನಾ ತರಹದ ಜವಾಬ್ದಾರಿಗಳನ್ನು ಹೊತ್ತು ನಡೆಸುವ ಕಾರ್ಯದಲ್ಲಿ ಸೃಷ್ಟೀಶನಿಂದ ನೇಮಕವಾಗಿರುವ ತತ್ತ್ವಗಳಿವು. ನಮ್ಮ ಇಂದ್ರಿಯ-ಬುದ್ಧಿ-ಮನಸ್ಸುಗಳೆಲ್ಲಕ್ಕೂ ಶಕ್ತಿಯನ್ನು ನೀಡಿ ನಮ್ಮನ್ನು ಕಾರ್ಯಗತಗೊಳಿಸುವವರು. ಇವರನ್ನು ಪೂಜಿಸಿ ನಮ್ಮ ಕೃತಜ್ಞತೆಯನ್ನರ್ಪಿಸಿ ತೃಪ್ತಿಗೊಳಿಸಿದರೆ ಅವರ ಅನುಗ್ರಹಕ್ಕೆ ಪಾತ್ರರಾಗಬಹುದು. ಇವರೆಲ್ಲರೂ ಪರಮಾತ್ಮನ ವಿಭೂತಿಗಳೇ ಆಗಿರುವುದರಿಂದ ದೇವತೆಗಳಿಗೆ ಮಾಡುವ ಪೂಜೆ-ನಮಸ್ಕಾರಗಳೆಲ್ಲವೂ ಅವರೊಳಗೆ ಅಂತರ್ಯಾಮಿಯಾಗಿರುವ ದೇವದೇವನನ್ನೇ ತಲುಪುತ್ತದೆ. ಅವರ ಮೂಲಕ ಅನುಗ್ರಹ ಮಾಡುವವನೂ ಪರಮಾತ್ಮನೇ.
ಇವೆಲ್ಲವೂ ಪುರಾಣಗಳಲ್ಲಿನ ಕಾಲ್ಪನಿಕ ಕಥಾಪಾತ್ರಗಳೆನ್ನುವ ಅಭಿಪ್ರಾಯದವರೂ ಉಂಟು. ಆದರೆ ನಮ್ಮ ಭೌತಿಕಶರೀರದೊಳಗೆ ದೈವಿಕ(ದೇವತಾಕೇಂದ್ರ)-ಆಧ್ಯಾತ್ಮಿಕ(ಪರಂಜ್ಯೋತಿಸ್ಥಾನ) ಕ್ಷೇತ್ರಗಳುಂಟೆಂಬುದು ಮಹರ್ಷಿಗಳು ಕಂಡರಿತ ಸತ್ಯ. ನಮ್ಮ ಶರೀರದಲ್ಲಿ ಮನಸ್ಸು-ಪ್ರಾಣಗಳು ಸಂಚರಿಸಬಹುದಾದ ಸಾವಿರಾರು ನಾಡೀಪಥಗಳುಂಟು. ಇಂದೂ ಸಹ ಧ್ಯಾನಾವಸ್ಥೆಯಲ್ಲಿ ಮನಸ್ಸು ನಿರ್ದಿಷ್ಟನಾಡೀಪಥಗಳಲ್ಲಿ ಸಾಗುವಾಗ ಆಕಾರ-ಆಭೂಷಣ-ಆಯುಧಗಳೆಲ್ಲದರ ಸಹಿತವಾದ ದೇವತೆಗಳ ದರ್ಶನ ಮಾಡಬಹುದು ಎಂಬುದು ಶ್ರೀರಂಗಮಹಾಗುರುಗಳ ಅನುಭವವಾಣಿ.ಇಂತಹ ದೇವತೆಗಳ ಪ್ರಸನ್ನತೆಯನ್ನು ಗಳಿಸಿ ಬಾಳನ್ನು ಬೆಳಗಿಸಿಕೊಳ್ಳೋಣ.
ಸೂಚನೆ: 23/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.