Saturday, September 5, 2020

ಮಾದಕವು ಮಾರಕ - ಯೋಗಾಭ್ಯಾಸ ತಾರಕ (Madakavu Maraka - Yogabhyasa Taraka)

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ನಳಕೂವರ-ಮಣಿಗ್ರೀವರ ಕಥೆ

ಕೈಲಾಸಪರ್ವತದ ಸಮೀಪದಲ್ಲಿ ಬೆಟ್ಟಗುಡ್ಡಗಳ ನಡುವೆ ಒಂದು ರಮ್ಯವಾದ ಅರಣ್ಯ. ಝುಳು ಝುಳುವೆಂದು ಮಂದಾಕಿನಿ ನದಿಯು ಹರಿಯುತ್ತಿತ್ತು. ಈ ಪವಿತ್ರವಾದ ಉಪವನದಲ್ಲಿ ಕುಬೇರನ ಪುತ್ರರಾದ ನಳಕೂವರ ಮತ್ತು ಮಣಿಗ್ರೀವ ಆನಂದದಿಂದ ವಿಹರಿಸುತ್ತಿದ್ದರು. ಇವರು ಕುಬೇರಪುತ್ರರಾದ್ದರಿಂದ ಧನಮದದಿಂದ ಕೊಬ್ಬಿ ಮೆರೆಯುತ್ತಿದ್ದರು. ರೂಪಸೌಂದರ್ಯದ ಗರ್ವವು ಮತ್ತಷ್ಟು ಉನ್ಮಾದ, ಅಹಂಕಾರಗಳನ್ನು ಕೆರಳಿಸಿತ್ತು. ವಾರುಣೀಎಂಬ ಮಾದಕದ್ರವ್ಯವನ್ನು ಸೇವಿಸಿ ಉನ್ಮತ್ತರಾಗಿದ್ದರು. ಸುತ್ತಲೂ ರೂಪವತಿಯರಾದ ಅಪ್ಸರೆಯರೊಡನೆ ಜಲಕ್ರೀಡೆಗೆ ಪವಿತ್ರ ಮಂದಾಕಿನಿಯಲ್ಲಿ ಇಳಿದರು.  ಮತ್ತಗಜದಂತೆ ನಿರ್ವಸ್ತ್ರರಾಗಿ ಇವರೆಲ್ಲರೂ ರತಿಕ್ರೀಡೆ, ಜಲಕ್ರೀಡೆಯಲ್ಲಿ ಮಗ್ನರಾಗಿದ್ದಾಗ, ದೇವರ್ಷಿ ನಾರದರು ಅಲ್ಲಿಗೆ ಆಗಮಿಸಿದರು. ನಾರದರನ್ನು ಕಂಡು ನಾಚಿಕೆ ಹಾಗೂ ಶಾಪಭಯದಿಂದ ಅಪ್ಸರೆಯರು ಬಟ್ಟೆಗಳಿಂದ ಮೈಮುಚ್ಚಿಕೊಂಡರು. ಆದರೆ ಕುಬೇರಪುತ್ರರು ನಿರ್ಲಜ್ಜರಾಗಿ ಹೊರಳಾಡುತ್ತಲೇ ಇದ್ದರು. ಅವರ ಉನ್ಮಾದವು ಮಿತಿಯನ್ನು ಮೀರಿತ್ತು. ನಿಯಂತ್ರಣ ತಪ್ಪಿದ ಮದಿಸಿದ ಆನೆಗಳಂತೆ ಆಡುತ್ತಿದ್ದ ಇವರನ್ನು ನಾರದರು ಜಂಟಿ ವೃಕ್ಷಗಳಾಗಿಬಿಡುವಂತೆ ಶಪಿಸಿದರು. ಆಗ ಪಶ್ಚಾತ್ತಾಪದಿಂದ ಪರಿಪರಿಯಾಗಿ ಬೇಡಿಕೊಂಡಾಗ ನಾರದರು ದೀರ್ಘಕಾಲದ ನಂತರ ಕೃಷ್ಣನಾಗಿ ಅವರಿಗೆ ಶ್ರೀಮನ್ನಾರಾಯಣನು ಮುಕ್ತಿ ಕೊಡುತ್ತಾನೆಂದೂ ತಿಳಿಸಿದರು. ಅಂತೆಯೇ ಬಾಲಕೃಷ್ಣನಾಗಿ ತಾಯಿ ಯಶೋದೆಯಿಂದ  ಒರಳಿಗೆ ಕಟ್ಟಲ್ಪಟ್ಟಿದ್ದಾಗ  ಭಗವಂತನು ನಾರದರ ಮಾತನ್ನು ಸತ್ಯವಾಗಿಸಿದನು. ಒರಳುಕಲ್ಲನ್ನು ಎಳೆದುಕೊಂಡು ಜೋಡಿಮರಗಳ ಮಧ್ಯೆ ನುಸುಳುತ್ತಿದ್ದಂತೆ ಮರಗಳು ಸೀಳಿಹೋಗಿ, ಕುಬೇರಪುತ್ರರ ಶಾಪವಿಮೋಚನವಾಯಿತು. ಅವರು ಶ್ರೀಕೃಷ್ಣನ ಪರಮಾನುಗ್ರಹಕ್ಕೆ ಪಾತ್ರರಾದರು. 


ಮದ - ಅನಿಯಂತ್ರಿತ ಇಂದ್ರಿಯಗಳಿಂದ ಚಿತ್ತವಿಕಾರವೇ 

ಮದ ಎಂಬ ಪದವು ಹರ್ಷ, ತೃಪ್ತಿ, ಗರ್ವ, ಜಾಡ್ಯ, ಚಿತ್ತವಿಕಾರವೆಂಬ ನಾನಾರ್ಥಗಳನ್ನು ಹೇಳುತ್ತದೆ. ತೃಪ್ತಿ ಹೇಗೆ ಉಂಟಾಗುತ್ತದೆ ? ಇಷ್ಟವಾದ ತಿಂಡಿತಿನಿಸುಗಳನ್ನು ಬಾಯಿಗೆಹಾಕಿ ಚಪ್ಪರಿಸಿದರೆ ಒಂದು ಸಂತೋಷವುಂಟಾಗುತ್ತದೆ. ಅಂತೆಯೇ ರಮಣೀಯ ದೃಶ್ಯ, ಇಂಪಾದ ಹಾಡು ಮೃದುವಾದ ಸ್ಪರ್ಶಗಳೆಲ್ಲವೂ ಆಮೋದವನ್ನುಂಟು ಮಾಡುತ್ತವೆ. ಇಂದ್ರಿಯಗಳು ಬಯಸುವ ಪದಾರ್ಥಸಿಕ್ಕಿದರೆ ಮನದಲ್ಲಿ ಹರ್ಷವು ಉಂಟಾಗುತ್ತದೆ. ತಿಂದುಮುಗಿದ ಕೂಡಲೇ 'ಅಯ್ಯೋ ಮುಗಿದು ಹೋಯಿತಲ್ಲ !' ಎಂಬ ವಿಷಾದ, ಮತ್ತೆ ಅದನ್ನು ಪಡೆಯಬೇಕೆಂಬ ತೀವ್ರವೇಗ ಉಂಟಾಗುತ್ತದೆ. ಅಡ್ಡದಾರಿಯಾದರೂ ಸರಿ, ಇಷ್ಟಾರ್ಥ ಪಡೆಯಲೇಬೇಕೆಂಬ ವೇಗವನ್ನು 'ಕಾಮ' ಎಂದು ಹೀನಾಯವಾಗಿ ಹೇಳುವುದುಂಟು. ಐಶ್ವರ್ಯ ಪಡೆದಬಳಿಕ ಗರ್ವದಿಂದ ಹಿಗ್ಗುತ್ತಾರೆ, ಮದದಿಂದ ಮೆರೆಯುತ್ತಾರೆ. ಇಷ್ಟಾರ್ಥ ಈಡೇರದೇ ಹೋದರೆ, ದುಃಖ, ಶೋಕಗಳು ಉಂಟಾಗುತ್ತವೆ. ಒಮ್ಮೊಮ್ಮೆ ಕ್ರೋಧವೂ  ಬರಬಹುದು. ದುಃಖ, ತಾಪಗಳು ತಡೆಯಲಾರದ ಪರಿಸ್ಥಿತಿಯಲ್ಲಿ ಕೃತಕವಾಗಿ ಅವನ್ನು ಮರೆಮಾಚಲು ಮಾದಕಪದಾರ್ಥಗಳನ್ನು ಸೇವಿಸಬಹುದು. ಇವು ಇಂದ್ರಿಯಗಳಲ್ಲಿ ಭ್ರಮೆಯನ್ನುಂಟು ಮಾಡಿ ಸ್ವಲ್ಪಕಾಲಕ್ಕೆ ನೋವಿನಿಂದ ಬಿಡುಗಡೆಯನ್ನು ಕೊಡಬಹುದು. ಮತ್ತೆ ಮತ್ತೆ ಸೇವಿಸಿದರೆ, ಈ ಮಾದಕ ದ್ರವ್ಯಗಳೇ ಚಟವಾಗಿ ಪರಿಣಮಿಸುತ್ತವೆ. ಚಿತ್ತದ ಭ್ರಾನ್ತಿಯಲ್ಲಿ ಹಗುರವಾಗಿ ತೇಲುವುದೇ ಹವ್ಯಾಸವಾಗುತ್ತದೆ. ಇಂದ್ರಿಯಗಳ ಬಯಕೆಯನ್ನು ಅಡಗಿಸಲಾರದೆ ಹುಟ್ಟುವ ದುಷ್ಪರಿಣಾಮಗಳ ಈ ಸಂಕೋಲೆ ಅತ್ಯಂತ ಭೀಕರ. ಇದನ್ನು ಇಂದ್ರಿಯಗ್ರಾಮದ ಮಾದಕ ಫಲವೆಂದೂ ಹೇಳಬಹುದು. ಈ ಮಾದಕ ದ್ರವ್ಯವು ನಮ್ಮ ಜೀವನಕ್ಕೆ ಮಾರಕವಾಗುತ್ತವೆ.     


ದಿವ್ಯಾನುಗ್ರಹದಿಂದ ಮದದಿಂದ ಮುಕ್ತಿ

ಇಂತಹ ಇಂದ್ರಿಯ ಬಯಕೆಯ ಗುಂಡಾರಣ್ಯದಲ್ಲಿ, ವಿಹರಿಸುತ್ತಾ, ಉನ್ಮತ್ತರಾಗಿ ಜೀವನ ಕಳೆಯುವ ನಾವೇ ಕುಬೇರಪುತ್ರರು. ಹತ್ತಿರದಲ್ಲೇ ಯೋಗಸಾಮ್ರಾಜ್ಯದ ರಂಗಭೂಮಿಯಾಗಿರುವ ನಮ್ಮ ಬೆನ್ನುಹುರಿ ಎಂಬ ಕೈಲಾಸಪರ್ವತವೂ ಇದೆ. ಕೈಲಾಸದಲ್ಲಿ ಶಿವನ ಆನಂದದ ಲಹರಿಯು ಹರಿಯುತ್ತದೆ. ಇದು ಗಂಗೆಯಾಗಿ ಮಂದಾಕಿನಿಯಾಗಿ ನಮ್ಮೊಳಗೇ ಹರಿಯುತ್ತಿದೆ. ಇದರ ಮೂಲ ಶಿವನೇ ಆಗಿದ್ದಾನೆ. ವಿಮಲಚಿತ್ತರಾಗಿ ಮಂದಾಕಿನಿಯಲ್ಲಿ ಮಿಂದರೆ ಆ ಪರಮಾನಂದವು ಲಭಿಸುತ್ತದೆ. ಆದರೆ ನಳಕೂವರನಂತೆ, ಇಂದ್ರಿಯಗಳ ಮತ್ತಿನಲ್ಲಿದ್ದರೆ ಅದರ ಲಾಭವು ದೋರಕುವುದಿಲ್ಲ. ಕೈಲಾಸದ ಉತ್ತುಂಗ ಶಿಖರದಲ್ಲಿ ದೊರಕುವ ಪರಮಾನಂದವು ಇಂದ್ರಿಯಗಳ ನಿಯಂತ್ರಣದಿಂದ ಮಾತ್ರ ಲಭಿಸುತ್ತದೆ. ಶ್ರೀ ಕೃಷ್ಣನ ಅನುಗ್ರಹದಿಂದ ಈ ಮದವು ನೀಗುತ್ತದೆ. ಇಂದ್ರಿಯಗಳ ಕುದುರೆಯ ಲಗಾಮನ್ನು ಶ್ರೀಕೃಷ್ಣನು ಹಿಡಿದರೆ, ರಥದಲ್ಲಿರುವವನ  ಜಯ ನಿಶ್ಚಿತ. ಅನಿಯಂತ್ರಿತ ಇಂದ್ರಿಯ ಕುದುರೆಗಳು ಮಾರಕ. ಕೃಷ್ಣನ ಹತೋಟಿಯಲ್ಲಿದ್ದರೆ ಜೀವನ ರಥಯಾತ್ರೆ ತಾರಕವಾಗುತ್ತದೆ. ಶ್ರೀಮದ್ಭಾಗವತವು ಮದ-ಅಹಂಕಾರಗಳ ವಿಮೋಚನದ ಈ ಕಥೆಯನ್ನು ಹೇಳುತ್ತದೆ. ಅಂತೆಯೇ, ಶಿವನ ಗಜಾಸುರಸಂಹಾರದ ಕಥೆಯೂ ಈ ತತ್ತ್ವವನ್ನೇ ಹೇಳುತ್ತದೆ. ಋಷಿಗಳು ಕೋಪಕ್ಕೆ ವಶರಾಗಿ ಗಜಾಸುರನೆಂಬ ಅಸುರನನ್ನು ಸೃಷ್ಟಿಸಲಾಗಿ, ಶಿವನು ಋಷಿಗಳ ಅಹಂಕಾರ-ಮದದ ಪ್ರತಿರೂಪವಾದ ಆನೆಯನ್ನು ಸಂಹರಿಸಿ, ಅದರ ಚರ್ಮವನ್ನು ಧರಿಸುತ್ತಾನೆ.                      

 

ಯೋಗದಿಂದ ಅಪ್ರಾಕೃತ ಉನ್ಮಾದ

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಅರಿಷಡ್ವರ್ಗಗಳು - ಮನುಷ್ಯನ ಆರು ಶತ್ರುಗಳು. ಆಸೆಗಳನ್ನು ಈಡೇರಿಸಿ ಸಂತೋಷ ಪಡೆಯುವ ಪ್ರಯತ್ನ ಮಾಡುತ್ತಿರುವವರೆಗೂ ಈ ಶತ್ರುಗಳಿಂದ ಮುಕ್ತಿಯಿಲ್ಲ. ತಿಂಡಿ-ತಿನಿಸುಗಳನ್ನು ತಿಂದರೂ, ಸೌಂದರ್ಯವನ್ನು ಅನುಭವಿಸಿದರೂ ಸಂತೋಷವನ್ನನುಭವಿಸುವುದು ನಮ್ಮ ಮನಸ್ಸಲ್ಲವೇ ? ಹಳೆಯ ಸಂತೋಷದ ಸಂಗತಿಯನ್ನು ನೆನಪಿಸಿಕೊಂಡರೂ ಸಂತೋಷ ಉಂಟಾಗುತ್ತದೆಯಲ್ಲವೇ ? ಆದ್ದರಿಂದ ತೃಪ್ತಿ, ನೆಮ್ಮದಿಗಳು ನಮ್ಮೊಳಗೇ ಇದೆ. ಇಷ್ಟಾರ್ಥಸಿದ್ಧಿಯು ನಮ್ಮೊಳಗಿರುವ ಸಂತೋಷವನ್ನು ಪ್ರಚೋದಿಸುತ್ತವೆ ಅಷ್ಟೇ. ಲೈಟ್ ಬಲ್ಬಿನ ಸ್ವಿಚ್ ಆನ್ ಮಾಡಿದಹಾಗೆ. ಹೊರ ಅವಲಂಬನೆಯಿಲ್ಲದೆ ನಮ್ಮೊಳಗಿರುವ ಸಂತೋಷದ ಗಣಿಯನ್ನು ಅನುಭವಿಸುವುದು ಹೇಗೆ ? ಯೋಗ ಸಮಾಧಿಯ ಪರಮಾದ್ಭುತ ಸ್ಥಿತಿಯ ನೇರ ಪರಿಚಯವುಳ್ಳ ಶ್ರೀರಂಗ ಮಹಾಗುರುಗಳು ಈ ಕಲೆಯನ್ನು ಬಲ್ಲವರಾಗಿದ್ದರು. ಯೋಗಸಿದ್ಧಿಯಿಂದ ಒಳಗಿರುವ ಆನಂದಸಾಗರವನ್ನು ಅನುಭವಿಸಿ, ಇತರರನ್ನೂ ಅನುಭವಿಸುವಂತೆ ಮಾಡಬಲ್ಲರಾಗಿದ್ದರು. ಹೊರವಸ್ತುಗಳ ಭೋಗದಿಂದ ಪಡೆಯಬಹುದಾದ ಮಾನುಷಾನಂದಕ್ಕಿಂತ ಕೋಟಿ-ಕೋಟಿ ಪಟ್ಟು ಹಿರಿದಾದದ್ದಂತೆ ಈ ಒಳ ಆನಂದ ಎಂಬುದು ಉಪನಿಷದ್ವಾಣಿ ! ಯೋಗಿಯು ಒಳಆನಂದದಲ್ಲಿ ಕುಣಿದು-ಕುಪ್ಪಳಿಸುವಾಗ ಹೊರಲೋಕವು ಅವನನ್ನು ಉನ್ಮತ್ತನೆಂದೂ ಕರೆಯಬಹುದು. ಆದರೆ ಈ ಉನ್ಮಾದವು ಮಾರಕವಾಗುವುದಿಲ್ಲ. ಏಕೆಂದರೆ ನಶ್ವರವಾದ ಪದಾರ್ಥಗಳನ್ನು ಅವಲಂಬಿಸಿಲ್ಲ. ಇದು ಶಾಶ್ವತವಾದ ಆನಂದ. ಇಂತಹ ಉನ್ಮಾದವು ಭವತಾರಕ ! 


ಸೂಚನೆ: 05/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.