Wednesday, September 23, 2020

ಖಟ್ವಾ೦ಗನ ಆದರ್ಶ (Khatvaogana Adharsa)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)ಖಟ್ವಾ೦ಗ  ಮಹಾಪರಾಕ್ರಮಿಯಾದ ರಘುವಂಶದ ಚಕ್ರವರ್ತಿ. ಯುದ್ಧದಲ್ಲಿ ಅವನನ್ನು ಜಯಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.  ಅವನು ದೇವತೆಗಳ ಪ್ರಾರ್ಥನೆಯಂತೆ, ದೇವೆತೆಗಳ ಪರವಾಗಿ ಅನೇಕ ವರ್ಷಗಳ ಕಾಲ ಯುದ್ಧ ಮಾಡಿದನು. ತನ್ನ ಸಾಮರ್ಥ್ಯ ಮತ್ತು ಕೌಶಲ್ಯದಿಂದ ದೈತ್ಯರನ್ನು ಸಂಹರಿಸಿದನು. ತನ್ನ ಕರ್ತವ್ಯವನ್ನು ಮುಗಿಸಿ, ದೇವತೆಗಳು ಬೀಳ್ಕೊಡುವ ಸಮಯ. ಕೃತಜ್ಞರಾದ ದೇವತೆಗಳು ಆತನಿಗೆ ಏನಾದರೂ ಪ್ರತ್ಯುಪಕಾರ ಮಾಡಲು ಬಯಸಿದರು. ಆದರೆ ಖಟ್ವಾ೦ಗನಿಗೆ ಯಾವ ಬಯಕೆಯೂ ಇರಲಿಲ್ಲ. ಆತ ನಿರ್ಲಿಪ್ತ, ತೃಪ್ತ ಮನಸ್ಕನಾದ ರಾಜರ್ಷಿ.  ಕೊನೆಯಲ್ಲಿ "ತನ್ನ ಆಯುಷ್ಯ ಎಷ್ಟು ಉಳಿದಿದೆ?" ಎಂಬುದಾಗಿ ಮಾತ್ರ ಪ್ರಶ್ನಿಸಿದ. ದೇವತೆಗಳು ದಿವ್ಯ ದೃಷ್ಟಿಯಿಂದ ನೋಡಿ ಸ್ವಲ್ಪ ಗಾಬರಿಗೊಂಡರು. "ರಾಜನ್, ನಿನ್ನ ಆಯುಷ್ಯದಲ್ಲಿ ಒಂದು ಮುಹೂರ್ತ ಕಾಲ ಮಾತ್ರ ಉಳಿದಿದೆ !!" ಎಂಬ ಕಟು ಸತ್ಯವನ್ನು ತಿಳಿಸಿದರು. ಆದರೂ, ಖಟ್ವಾ೦ಗನ ಮುಖಮಂಡಲದಲ್ಲಿ ಸ್ವಲ್ಪವೂ ಬೇಸರ ಇರಲಿಲ್ಲ. ತುರ್ತಾಗಿ ತನ್ನ ವಾಸಸ್ಥಾನಕ್ಕೆ ತೆರಳಿದ. ಅರ್ಧ ಮುಹೂರ್ತ ಕಾಲದಲ್ಲಿ ಮನಸ್ಸನ್ನು ಸಂಯಮಿಸಿ, ಒಳಗೆ ಯೋಗಸ್ಥಿತಿಯಲ್ಲಿ ಮುಳುಗಿದ. ನಿಗದಿತ ಆಯುಷ್ಯಕಾಲ ಮುಗಿದು ಮೃತ್ಯು ಎಳೆದೊಯ್ಯುವ ಮುನ್ನವೇ, ತನ್ನ ಯೋಗಬಲದಿಂದ ಶರೀರವನ್ನು, ಧರಿಸಿದ ಬಟ್ಟೆಯಂತೆ ತ್ಯಾಗ ಮಾಡಿ ಪರಮಾತ್ಮನ ಪಾದವನ್ನು ಸೇರಿದ. ಶ್ರೀರಾಮನ ಪೂರ್ವಜನಾದ ಈ ರಘುವಂಶಿಯು ಕಾಳಿದಾಸನು ಹೇಳುವ "ಯೋಗೇನಾ೦ತೇ ತನುತ್ಯಜಾಮ್ " ಎನ್ನುವಂತೆ, ಯೋಗಬಲದಿಂದಲೇ ತನ್ನ ಶರೀರವನ್ನು ಕಳಚಿ ಹಾಕಿದ. 

ಪ್ರತಿಯೊಂದು ಜೀವಿಯಲ್ಲಿಯೂ ಮೃತ್ಯುಭಯ ಸಹಜ. ಎಂದೋ ಘಟಿಸುವುದಕ್ಕೆ ಹೆದರುವ ನಾವು, ಇನ್ನು ಒಂದು ಗಂಟೆ ಕಾಲದಲ್ಲಿ ಮೃತ್ಯು ಕಾದಿದೆ ಎಂದು ತಿಳಿದರೆ?!  "ಹೆಂಡತಿ ಮಕ್ಕಳನ್ನು ಒಮ್ಮೆಯಾದರೂ ನೋಡಬೇಕು", "ಬಂಧು-ಬಾಂಧವರನ್ನು ಸಂಧಿಸಬೇಕು",  "ಇಷ್ಟು ದಿನ ಏನು ಸಾಧಿಸಿದೆ?" ಮುಂತಾದ  ಆಲೋಚನೆಗಳು ಮನಸ್ಸಿನಲ್ಲಿ ಮೂಡುವುದಲ್ಲವೇ?. ಏತನ್ಮಧ್ಯೆ ಯೋಗಸಾಧನೆ, ಸಮಾಧಿಗಳೆಂತು?

ತತ್ವಾತ್ಮಕವಾಗಿ ಗಮನಿಸುವುದಾದರೆ, ನಮ್ಮಲ್ಲಿ ಶರೀರ, ಇಂದ್ರಿಯ, ಮನೋಬುದ್ಧಿಗಳ ಸಹಜ ವಿಕಾಸಾಭಿವೃದ್ಧಿ ಮತ್ತು ಒಳತತ್ವ ದರ್ಶನಕ್ಕೆ ಸಹಾಯಕವಾದ ಶಕ್ತಿಗಳೇ ದೈವೀಶಕ್ತಿಗಳು. ಅಲ್ಲದೆ, ಅರಿಷಡ್ವರ್ಗದೆಡೆಗೆ ಸೆಳೆಯುವ ಶಕ್ತಿಗಳು ಆಸುರೀ ಶಕ್ತಿಗಳು. ಇಂದ್ರಿಯ ಭೋಗ ಮತ್ತು ಒಳತತ್ವ ದರ್ಶನಕ್ಕೆ ಅಡಚಣೆಯಿಲ್ಲದೆ, ವ್ಯವಹಾರ ನಿರ್ವಹಣೆಯೇ ಅಂತರಂಗದ ದೇವಾಸುರ ಯುದ್ಧ. ಇದರಲ್ಲಿ ದೇವತೆಗಳ ಜಯ ಸಾಧಿಸಿದವರಿಗೆ ಕೊನೆಗಾಲದಲ್ಲಿ ಸಮಸ್ಥಿತಿಯುಂಟು. ಸಂಯಮವುಂಟು.

ಶರೀರವೇ ನಮ್ಮ ಮನೆ. ಬ್ರಹ್ಮದಂಡವೇ ಮೂಲ ನೆಲೆ. ಅದರೊಳಗೆ ಪ್ರವೇಶ ಮಾಡಿ ಯೋಗದಿಂದ ಶರೀರ ತ್ಯಾಗ ಮಾಡಿದರೆ   "ಯೋಗೇನಾ೦ತೇ ತನುತ್ಯಜಾಮ್".  ಇದು ಆಗಬೇಕಾದರೆ,  ಬಾಲ್ಯದಲ್ಲಿ ಧಾತುಗತವಾಗುವಂತೆ ವಿದ್ಯೆಯ ಅಧ್ಯಯನವಾಗಿ, ಯೌವನದಲ್ಲಿ ಧರ್ಮದಿಂದ ಕೂಡಿದ ಅರ್ಥ-ಕಾಮಗಳನ್ನು ಅನುಭವಿಸಬೇಕು. ಜೀವನದ  ಗಾಡಿ ಓಡಿಸುವಾಗ ಧರ್ಮವೆಂಬ ನಿಯಂತ್ರಣವಿಲ್ಲದಿದ್ದರೆ ಅಪಘಾತವಾಗುವುದು  ಸರ್ವೇ ಸಾಮಾನ್ಯ . ವಾರ್ಧಕ್ಯದಲ್ಲಿ ಒಳತತ್ವ ಒಂದೇ ಸತ್ಯ ನಿತ್ಯ ಎಂದು ತಿಳಿದು, ಕೊನೆಯಲ್ಲಿ ಶರೀರ ಕವಚ ಸ್ವೇಚ್ಛೆಯಿಂದ ತೊರೆದವರೇ ಧೀರರು. ಖಟ್ವಾ೦ಗ,  ದದೀಚಿ ಮಹರ್ಷಿಗಳು ಮತ್ತು ಭೀಷ್ಮಾಚಾರ್ಯರಂತಹ ಧೀರರ ಹೆಜ್ಜೆಯಲ್ಲಿ ನಾವೂ ಬಾಳುವಂತಾಗಲಿ ಎಂದು ಆಶಿಸೋಣ.

ಸೂಚನೆ: 23/09/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.