ಲೇಖಕಿ : ಯಶಸ್ವಿನಿ ಎಂ ಆರ್
ದೇವೇಂದ್ರನಿಂದಾದ ತನ್ನ ಮಗನ ಹತ್ಯೆಯಿಂದ ನೊಂದಿದ್ದ ತ್ವಷ್ಟೃವು(ಶುಕ್ರಾಚಾರ್ಯರ ಮಗ)ಪ್ರತೀಕಾರ ಬುದ್ಧಿಯಿಂದ ಯಾಗ ಮಾಡಿ ವೃತ್ರನೆಂಬ ದೈತ್ಯನನ್ನು ಪಡೆದನು. ಆತನು ದಿನೇದಿನೇ ಬೆಳೆಯುತ್ತ ಅಪಾರ ಶಕ್ತಿಯನ್ನು ಹೊಂದಿದನು. ದೇವತೆಗಳ ಸಂಚಾರಮಾರ್ಗವನ್ನು ಮುಚ್ಚಿ ಅವರಿಗೆ ಕೆಡಕುಂಟುಮಾಡುತ್ತಿದ್ದನು. ವೃತ್ರಾಸುರನ ಪ್ರಭಾವದಿಂದ ಭೂಲೋಕದ ಜನರೂ ಅಧರ್ಮಿಗಳಾಗಿ, ಆಡಂಬರದ ಜೀವನ ನಡೆಸುತ್ತಾ ಸದ್ವಿಷಯಗಳಲ್ಲಿ ಅನಾಸಕ್ತರಾದರು. ವೃತ್ರಾಸುರನ ಪರಾಕ್ರಮದಿಂದ ಯುದ್ಧದಲ್ಲಿ ಅಸುರರಿಗೆ ಜಯ ದೊರೆತು, ಅಧರ್ಮದ ಮೇಲುಗೈಯಾಗುವುದೆಂದು ದೇವತೆಗಳಿಗೆ ಚಿಂತೆಯಾಗಿತ್ತು.
ಈ ಸಮಸ್ಯೆಯ ಪರಿಹಾರಕ್ಕಾಗಿ ಇಂದ್ರನು ದೇವಗುರುವಿನ(ಬೃಹಸ್ಪತಿಯ) ಸಲಹೆಯಂತೆ ಶ್ರೀಮಹಾವಿಷ್ಣುವಿನ ಬಳಿ ಹೋದನು. ಅವನು ದಧೀಚಿ ಮಹರ್ಷಿಯ ತಪೋಬಲವನ್ನು ಪ್ರಶಂಸಿಸಿ ಅವರ ಸಹಾಯವನ್ನು ಪಡೆಯಲು ಸಲಹೆ ಇತ್ತನು. ದಧೀಚಿಗಳು, ತಮ್ಮ ಸಾಧನಾಶಕ್ತಿಯಿಂದ ವಜ್ರಕಾಯರಾಗಿದ್ದರು. ಮಹಾವಿಷ್ಣುವಿನ ಆದೇಶದಂತೆ ಇಂದ್ರನು ಬೃಹಸ್ಪತಿಸಮೇತನಾಗಿ ದಧೀಚಿಗಳ ಬಳಿಸಾರಿ, ಅವರನ್ನು ಸ್ತೋತ್ರ ಮಾಡುತ್ತಾನೆ. ಸ್ತೋತ್ರದಿಂದ ತೃಪ್ತರಾದ ಅವರಲ್ಲಿ ಇಂದ್ರನು ಶಸ್ತ್ರಗಳಲ್ಲಿಯೇ ಅತ್ಯುತ್ತಮವಾದ, ವಜ್ರಾಯುಧವನ್ನು ತಯಾರಿಸಲು ಅವರ ಬೆನ್ನುಮೂಳೆಗಳನ್ನು ಕರುಣಿಸಬೇಕಾಗಿ ಪ್ರಾರ್ಥಿಸಿಕೊಳ್ಳುತ್ತಾನೆ. ತತ್ಕ್ಷಣವೇ ಅವರು ಎಂದೋ ತ್ಯಜಿಸಲಿರುವ ನಶ್ವರದೇಹವನ್ನು ಧರ್ಮಸಂರಕ್ಷಣೆಗಾಗಿ ಇಂದೇ ತ್ಯಜಿಸುವುದು ಉತ್ತಮವೆಂದು ತೀರ್ಮಾನಿಸಿದರು. ತಾನು ಧ್ಯಾನಸಮಾಧಿಯಲ್ಲಿರುವಾಗ ಮೂಳೆಗಳನ್ನು ತೆಗೆದುಕೊಳ್ಳುವಂತೆ ಆದೇಶ ನೀಡಿದರು. ಅದರಂತೆಯೇ ಅವರ ಮೂಳೆಗಳಿಂದ ವಜ್ರಾಯುಧವನ್ನು ಮಾಡಿ ಇಂದ್ರನು ವೃತ್ರನ ಸಂಹಾರವನ್ನು ಮಾಡಿದನು.
ಅನೇಕ ತಾತ್ತ್ವಿಕರಹಸ್ಯಗಳನ್ನೊಳಗೊಂಡ ಈ ಕಥೆಯಮೂಲಕ ದಯೆ-ದಾನಗಳ ಬಗೆಗೆ ಗಮನಿಸುವುದಾದರೆ, ಸಾತ್ತ್ವಿಕ, ರಾಜಸ, ತಾಮಸಗಳೆಂಬ ಮೂರು ಬಗೆಯ ದಾನಗಳಲ್ಲಿ, ಫಲಾಪೇಕ್ಷೆಯಿಲ್ಲದ, ತನಗೆ ನಷ್ಟವಾದರೂ ಇತರರ ಒಳಿತಿಗಾಗಿ, ಸತ್ಪಾತ್ರರಿಗೆ ದಾನಮಾಡುವುದು ಸಾತ್ತ್ವಿಕದಾನದಲ್ಲೂ ಅತಿ ಶ್ರೇಷ್ಠವಾದದ್ದು. ಇಂತಹ ಪ್ರವೃತ್ತಿಗೆ ಮೂಲ ಆತ್ಮಸಾಕ್ಷಾತ್ಕಾರವಾದವರಿಗೆ ಸಹಜವಾಗಿ ಸಿದ್ಧಿಸುವ 'ದಯೆ'ಯೆಂಬ ಆತ್ಮಗುಣವೇ ಆಗಿದೆ. ಇದನ್ನು ಪ್ರಯತ್ನಪೂರ್ವಕವಾಗಿ ಅಭ್ಯಾಸಮಾಡಿದಾಗ, ಆತ್ಮಸಾಕ್ಷಾತ್ಕಾರದ ಸಾಧನೆಗೆ ಪುಷ್ಟಿಯನ್ನು ನೀಡುವುದೆಂಬುದೂ ಸತ್ಯ. ಆದ್ದರಿಂದಲೇ ಬ್ರಹ್ಮಜ್ಞಾನಿ, ದಧೀಚಿಯಲ್ಲಿ ಸಾತ್ತ್ವಿಕದಾನದ ಪ್ರವೃತ್ತಿ ಸಹಜವಾಗಿಯೇ ಮೂಡಿಬಂದಿತು.
ಸೂಚನೆ: 3/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.