ಭರತನಂತೆ ಶ್ರೀರಾಮನಲ್ಲಿಯೂ ಅತ್ಯಂತ ಪ್ರೀತಿಯಿಂದ ವರ್ತಿಸಿದ್ದ ಮಾತೆ ಕೈಕೇಯಿ ಅಂದು ನಿರ್ದಯವಾಗಿ ತನ್ನನ್ನು ಕಾಡಿಗೆ ಅಟ್ಟಿದಾಗ ಸ್ವಲ್ಪವೂ ಸಹನೆಯನ್ನು ಕಳೆದುಕೊಳ್ಳದೇ ನಾರುಮಡಿಯುಟ್ಟು ಕಾಡಿಗೆ ತೆರಳುತ್ತಾನೆ ಶ್ರೀರಾಮ. ತಾಯಿಯಾದ ಕೈಕೇಯಿಯ ಮೇಲೆ ಸಿಟ್ಟುಮಾಡಿಕೊಂಡು ಅವಳನ್ನು ನಿಂದಿಸಿ, ತನ್ನನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಲು ಬಂದಿದ್ದ ಭರತನಿಗೆ ತಿಳಿಹೇಳಿ, ತಾಯಿಯನ್ನು ಗೌರವದಿಂದ ಕಾಣಬೇಕೆಂದೂ ಹಾಗಿಲ್ಲದಿದ್ದರೆ ತನ್ನಿಂದ ಶಪಿತನಾಗುತ್ತಾನೆಂದೂ ಭರತನನ್ನು ಎಚ್ಚರಿಸಿ, ಧರ್ಮಪಥಭ್ರಷ್ಟನಾಗದಂತೆ ಕಾಪಾಡುತ್ತಾನೆ. ಈ ಮೊದಲು ಭರತನ ಬಗ್ಗೆ ಲಘುವಾಗಿ ಮಾತನಾಡಿದ್ದ ಲಕ್ಷ್ಮಣನನ್ನೂ ಶ್ರೀರಾಮನು ನಿಂದಿಸಿ ಪಥ ತಪ್ಪಿದ ಸಲಗವನ್ನು ನಿಯಂತ್ರಿಸುವ ಉತ್ತಮ ಮಾಹುತನಂತೆ ವರ್ತಿಸುತ್ತಾನೆ ಶ್ರೀರಾಮ.
ಮುಂದೆ ದಂಡಕಾರಣ್ಯದಲ್ಲಿ ಕಾಗೆಯ ರೂಪದಲ್ಲಿದ್ದು, ತನ್ನ ಮನದೆನ್ನೆಯಾದ ಸೀತೆಯನ್ನು ಹಿಂಸಿಸಿ ಅಪಚಾರವೆಸಗಿದ್ದ ಜಯಂತನನ್ನು ಸಂಹರಿಸಲು ತೃಣದಲ್ಲಿಯೇ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಪ್ರಯೋಗಿಸಿದಾಗ, ಎಲ್ಲಿಯೂ ರಕ್ಷಣೆ ಸಿಗದೆ ತನ್ನನ್ನೇ ಆಶ್ರಯಿಸಿ ಬಂದಾಗ ಅವನ ತಪ್ಪನ್ನು ಮನ್ನಿಸಿ ಕಾಪಾಡುತ್ತಾನೆ ಶ್ರೀರಾಮ.
ಲಂಕೆಗೆ ವಾನರ ಸೈನ್ಯವನ್ನು ಕರೆದೊಯ್ಯಲು ಸಮುದ್ರದಲ್ಲಿ ಸೇತುನಿರ್ಮಾಣಮಾಡಬೇಕಾದ ಸಂದರ್ಭ ಬಂದಾಗ ಶ್ರೀರಾಮನು ಸಮುದ್ರರಾಜನನ್ನು ಪ್ರಾರ್ಥಿಸುತ್ತಾನೆ. ತನ್ನ ಪ್ರಾರ್ಥನೆಗೆ ಸಕಾಲಕ್ಕೆ ಓಗೊಡದ ಸಮುದ್ರರಾಜನ ಮೇಲೆ ಕೋಪದಿಂದ ಬಾಣಪ್ರಯೋಗ ಮಾಡಲು ಮುಂದಾಗುತ್ತಾನೆ ಶ್ರೀರಾಮ. ತಪ್ಪಿನ ಅರಿವಾಗಿ ತನ್ನ ಪರಿವಾರದೊಡನೆ ಬಂದು ಶ್ರೀರಾಮನಿಗೆ ಶರಣಾದ ಸಮುದ್ರರಾಜನನ್ನು ಕ್ಷಮಿಸುತ್ತಾನೆ ಶ್ರೀರಾಮ.
ಸೀತಾಮಾತೆಯನ್ನು ಶ್ರೀರಾಮನಿಗೆ ಹಿಂದಿರುಗಿಸಬೇಕೆಂದು ತನ್ನ ಅಣ್ಣ ರಾವಣನಿಗೆ ಬುದ್ದಿವಾದ ಹೇಳಿ, ಅವನಿಂದಲೇ ತಿರಸ್ಕೃತನಾಗಿ ಶ್ರೀರಾಮನಲ್ಲಿ ಶರಣಾರ್ಥಿಯಾಗಿ ಬಂದ ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆ ಬೇಡವೇ ಎಂಬ ಜಿಜ್ಞಾಸೆಯುಂಟಾಗುತ್ತದೆ, ವಾನರಸೈನ್ಯದಲ್ಲಿ. ಆಗ ವಿಭೀಷಣನು ಶತ್ರುಪಕ್ಷದವನಾಗಿರುವುದರಿಂದ ವಿಶ್ವಾಸಕ್ಕೆ ಅರ್ಹನಲ್ಲವೆಂದೂ ಅವನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದು ಸೂಕ್ತವಲ್ಲವೆಂಬ ಅಭಿಪ್ರಾಯವು ಬಂದಾಗ, ಕರುಣಾಮೂರ್ತಿಯಾದ ಶ್ರೀರಾಮನು 'ವಿಭೀಷಣನಷ್ಟೇ ಏಕೆ (ಯದಿ ವಾ ರಾವಣಸ್ಸ್ವಯಮ್) ರಾವಣನೇ ಶರಣಾಗಿ ಬಂದರೂ ಅವನ ತಪ್ಪನ್ನೆಲ್ಲಾ ಮನ್ನಿಸಿ ರಕ್ಷಣೆ ನೀಡುತ್ತೇನೆ'ನ್ನುವ ಸಹನಾಮೂರ್ತಿ ಶ್ರೀರಾಮನಿಗೆ ಮತ್ತೊಂದು ನಿದರ್ಶನವು ಬೇಕೆ ? ಆದ್ದರಿಂದಲೇ ಶ್ರೀರಾಮನನ್ನು ವರ್ಣಿಸುವಾಗ " ಕ್ಷಮಯಾ ಪೃಥಿವೀಸಮಃ" ಎಂದಿದ್ದಾರೆ ನಾರದಮಹರ್ಷಿಗಳು.