Saturday, September 5, 2020

ಸಾಕ್ಷರತೆ - ಭಾರತೀಯ ದೃಷ್ಟಿ (Sakhsarate - Bharatiya drusti)

ಲೇಖಕರು: ಡಾII ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ :  lekhana@ayvm.in)

 

ಅಧ್ಯಾಪನವೃತ್ತಿಗಾಗಿ ಬೆಂಗಳೂರಿಗೆ ಬಂದ ಹೊಸದು. ಸೈಕಲ್ ತುಳಿಯುತ್ತಾ ಶಾಲೆಗೆ ಹೋಗುತ್ತಿದ್ದೆ. ಆಟೋ ಒಂದರ ಹಿಂದೆ ವಿಶೇಷವಾದ ಒಂದು ಪಂಕ್ತಿ ನನ್ನ ಕಣ್ಣನ್ನು ಸೆಳೆಯಿತು. 'ದುಡ್ಡೇ ದೊಡ್ಡಪ್ಪ; ವಿದ್ಯೆ ಅವರಪ್ಪ' ಎಂದು ಬರೆದಿತ್ತು.  ಅಧ್ಯಾಪನವೃತ್ತಿಯಲ್ಲಿರುವ ನನಗೆ ಸ್ವಾಭಾವಿಕವಾಗಿ ಇದು ತುಂಬಾ ಹಿಡಿಸಿತು. ಹಣವೇ ಪ್ರಧಾನವಾಗಿರುವ ಇಂದಿನ ಸಮಾಜದಲ್ಲಿ 'ದುಡ್ಡೇ ದೊಡ್ಡಪ್ಪ' ಎಂಬ ಗಾದೆಮಾತೇ ಸರ್ವತ್ರ ಪ್ರಚಲಿತವಾಗಿರುವಾಗ, ಆ ಗಾದೆ ಮಾತನ್ನು ಅತ್ಯುತ್ತಮವಾಗಿ ಮುಂದುವರೆಸಿ ಅದರ ಯೋಗ್ಯ ಸಮಾಪ್ತಿಯನ್ನು ಮಾಡಿದ್ದ ಈ ಮಾತನ್ನು ನೋಡಿ, ಆ ಆಟೋ ಚಾಲಕನ ಬಳಿಸರಿದು 'ಸರಿಯಾದ ಮಾತು ಸ್ವಾಮಿ' ಎಂದು ಅವನನ್ನು ಪ್ರಶಂಸಿಸಿದೆ. ಅದಕ್ಕವನು 'ತಾವು ಶಿಕ್ಷಕರೆಂದು ನಾನು ಭಾವಿಸುತ್ತೇನೆ ಸರ್. ನನ್ನಪ್ಪನೂ ಒಂದು ಸರ್ಕಾರಿ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಅವರು 'ದುಡ್ಡೇ ದೊಡ್ಡಪ್ಪ' ಎಂಬಷ್ಟೇ ಗಾದೆಯನ್ನು ಒಪ್ಪುತ್ತಿರಲಿಲ್ಲ. ಅದನ್ನು ಮುಂದುವರೆಸಿ 'ವಿದ್ಯೆ ಅವರಪ್ಪ' ಎಂದು ಪೂರ್ಣಮಾಡಿ ಹೇಳುತ್ತಿದ್ದರು. ಅವರ ಮಾತಿನಿಂದ ಪ್ರಭಾವಿತನಾದ ನಾನು ಅದನ್ನೇ ನನ್ನ ವಾಹನದ ಮೇಲೆ ಬರೆಸಿದ್ದೇನೆ' ಎಂದ.

ವಿದ್ಯೆ ಯಾರಿಗೆ ತಾನೆ ಬೇಡ? ವಿದ್ಯೆಯ ಮಹತ್ತ್ವವನ್ನು ಅರಿತಿರುವುದರಿಂದಲೇ ನಮ್ಮ ಸಮಾಜದಲ್ಲಿ ವಿದ್ಯೆಗೆ ಶ್ರೇಷ್ಠವಾದ ಸ್ಥಾನವಿದೆ. ಷೋಡಶಸಂಸ್ಕಾರಗಳಲ್ಲಿ, ವಿದ್ಯಾಭ್ಯಾಸಕ್ಕೆ ಮುನ್ನ ಬರುವ  ಸಂಸ್ಕಾರವೇ 'ಅಕ್ಷರಾಭ್ಯಾಸ'. ಸರ್ವರಿಗೂ ಇದನ್ನು ಉಂಟುಮಾಡುವ ಉದಾತ್ತ ಮನೋಭಾವದಿಂದ ಸರ್ಕಾರವೂ ಕೂಡ 'ಸಾಕ್ಷರತಾ ಮಿಷನ್' ಅಡಿಯಲ್ಲಿ ಅನೇಕಾನೇಕ ಯೋಜನೆಗಳನ್ನು ಹಮ್ಮಿಕೊಂಡು, ಅದಕ್ಕಾಗಿ ಪ್ರತಿವರ್ಷ ಬೊಕ್ಕಸದಿಂದ ಕೊಟ್ಯಂತರ ಹಣವನ್ನು ನಿಗದಿಪಡಿಸಿ, ಆ ಕಾರ್ಯದಲ್ಲಿ ತತ್ಪರವಾಗಿರುವುದು ಸ್ವಾಗತಾರ್ಹ ಮತ್ತು ಪ್ರಶಂಸನೀಯ.

ಇಂದು ಸಮಾಜದಲ್ಲಿ 'ಸಾಕ್ಷರ'ನೆಂದರೆ, 'ಅ ಆ ಇ ಈ' ಮುಂತಾದ ಅಕ್ಷರಗಳನ್ನೋ ಅಥವಾ 'A B C D' ಮುಂತಾದವುಗಳನ್ನೋ ಓದಲು ಬರೆಯಲು ತಿಳಿದಿರುವವನು, ಅಥವಾ ಸ್ವಲ್ಪ ಮುಂದುವರೆದು ಹೇಳಬೇಕೆಂದರೆ ಪದವಿಯನ್ನೋ, ಸ್ನಾತಕೋತ್ತರ ಪದವಿಯನ್ನೋ, ಪಿಹೆಚ್ಡಿಯನ್ನೋ ಪಡೆದಿರುವವನೆಂಬ ಅರ್ಥದಲ್ಲಿ ಬಳಸಿರುವುದನ್ನು ಕಾಣುತ್ತೇವೆ. ಅಥವಾ ಕನಿಷ್ಠಪಕ್ಷ ಹೆಸರನ್ನು ಓದಲು ಮತ್ತು ಬರೆಯಲು ಸಮರ್ಥನನ್ನಾಗಿ ಮಾಡುವುದೇ 'ಸಾಕ್ಷರತೆ' ಎಂದು ಕರೆಯುವುದಾಗಿದೆ. ಆಗಾಗ ಮಾಡುವ ಜನಗಣತಿಯಲ್ಲಿ ಅಕ್ಷರವಿತ್ತುಗಳ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದ್ದರೆ, 'ಸಾಕ್ಷರರು" ಎಂಬುದಾಗಿ ಅವರನ್ನು ಪರಿಗಣಿಸಿ, 'ಸಾಕ್ಷರತಾ ಮಿಷನ್' ಸಾರ್ಥಕವೆಂಬ ಮನೋಭಾವ. ಅದನ್ನು ರೂಪಿಸಿ, ಕಾರ್ಯಗತಮಾಡಿದವರಿಗೆ ತೃಪ್ತಿ. ವಿದ್ಯಾಭ್ಯಾಸಕ್ಕೆ ಮುನ್ನುಡಿಯಂತಿರುವ 'ಸಾಕ್ಷರತೆ'ಯೇ ವಿದ್ಯಾಭ್ಯಾಸವೆಂದು 'ಅರ್ಥಾಭಾಸ'ವಾಗಿದೆ.  ಇದರಿಂದ ಬುದ್ದಿಗೆ ಕಸರತ್ತೇ ಹೊರತು ಮನಸ್ಸಿಗಿಲ್ಲವಾಗಿದೆ. ಮನಸ್ಸಿಗೆ, ಹೃದಯಕ್ಕೆ ಸಂಸ್ಕಾರವನ್ನು ಉಂಟುಮಾಡದ 'ಸಾಕ್ಷರತೆ'ಯನ್ನು  ಸುಭಾಷಿತವೊಂದು 'ಸಾಕ್ಷರಾ ಹಿ ವಿಪರೀತತಾಂ ಗತಾಃ ಕೇವಲಂ ಜಗತಿ ತೇऽಪಿರಾಕ್ಷಸಾಃ' "'ಸಾಕ್ಷರಾ' ಎಂಬ ಪದವನ್ನು ಹಿಂದುಮುಂದಾಗಿ ಓದಿದಾಗ ಬರುವ 'ರಾಕ್ಷಸ'ರೇ ಇವರು" ಎಂದು ವರ್ಣಿಸಿದೆ.

ಹಾಗಾದರೆ, 'ಅಕ್ಷರಾಭ್ಯಾಸ' ಅಥವಾ 'ಸಾಕ್ಷರತೆ' ಎಂಬುದರ ಬಗ್ಗೆ ಸನಾತನಾರ್ಯಭಾರತಮಹರ್ಷಿಗಳ ನೋಟವೇನಿತ್ತು ಎಂಬುದನ್ನು ಗಮನಿಸೋಣ. ಅಕ್ಷರಾಭ್ಯಾಸವು ಇತರ ಸಂಸ್ಕಾರಗಳಂತೆ ತನ್ನ ಮೂಲವನ್ನು ಮರೆತು 'ಪುನರಪಿ ಜನನಂ ಪುನರಪಿ ಮರಣಂ' ಎಂಬಂತೆ, ಭವಬಂಧನದಲ್ಲಿ ಸಿಲುಕಿ, ನರಳುತ್ತಿರುವ ಜೀವಿಗೆ ತನ್ನ ಮೂಲವನ್ನು ನೆನಪಿಗೆ ತಂದುಕೊಟ್ಟು ಒಳಗೆ ಬೆಳಗುತ್ತಿರುವ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಡುವ ಸಂಸ್ಕಾರವೇ ಆಗಿದೆ. 'ಕ್ಷರ'ವೆಂದರೆ 'ನಶ್ವರವಾದದ್ದು'.  'ಅಕ್ಷರ'ವೆಂದರೆ, 'ನ ಕ್ಷರಂತಿ ಇತಿ ಅಕ್ಷರಾಃ',  'ನಾಶವಿಲ್ಲದಿರುವುದು' 'ಶಾಶ್ವತವಾದದ್ದು' ಎಂದು ಅರ್ಥ. ನಮ್ಮ ಸಂಸ್ಕೃತಿಯಲ್ಲಿ 'ಅ ಆ' ಮುಂತಾದ ಅಕ್ಷರಗಳು ಸೃಷ್ಟಿಯಲ್ಲಿ ನಾಶರಹಿತವಾಗಿರುವ ತತ್ತ್ವಗಳನ್ನೂ, ನಿಯಮಗಳನ್ನೂ ಹೇಳುತ್ತವೆ. ಅಕ್ಷರಗಳೆಲ್ಲವೂ ದೇವತಾಸ್ವರೂಪಗಳೇ. ಗೀತಾಚಾರ್ಯನು ಭಗವದ್ಗೀತೆಯಲ್ಲಿ 'ಅಕ್ಷರಾಣಾಮ್ ಅಕಾರೊಽಸ್ಮಿ'' 'ಅಕ್ಷರಗಳಲ್ಲಿ 'ಅ'ಕಾರವಾಗಿದ್ದೇನೆ' ಎಂದು ಹೇಳಿದ್ದಾನೆ. ಪ್ರಣವ (ಓಂಕಾರ)ದಲ್ಲಿರುವ 'ಅ'ಕಾರವು ವಿಷ್ಣುವನ್ನೂ, 'ಉ'ಕಾರವು ಬ್ರಹ್ಮನನ್ನೂ ಮತ್ತು 'ಮ'ಕಾರವು ರುದ್ರನನ್ನೂ ಪ್ರತಿನಿಧಿಸುತ್ತದೆ. ಅಕ್ಷರಗಳ ಸಂಖ್ಯೆಯು ತತ್ತ್ವಗಳ ಸಂಖ್ಯೆಯಷ್ಟೇ ಇದೆ.  'ವಾಗೀಶ್ವರಿ'ಯನ್ನು 'ಲಿಪಿತನು' ಎಂದು ಆರಾಧಿಸಲಾಗಿದೆ. ಸರಸ್ವತಿಯ ಕೈಯ್ಯಲ್ಲಿರುವ ಅಕ್ಷ(ಜಪ)ಮಾಲೆಯು 'ಅ'ಕಾರಾದಿಯಾಗಿ 'ಕ್ಷ'ಕಾರಾಂತವಾದ ಅಕ್ಷರಮಾಲೆಯನ್ನೇ ಪ್ರತಿನಿಧಿಸುತ್ತದೆ.

ಸಾಕ್ಷರತೆ ವಿಷಯದಲ್ಲಿ ಶ್ರೀರಂಗಮಹಾಗುರುಗಳು ತಿಳಿಸಿದ ಎರಡು ಅಭಿಪ್ರಾಯಗಳನ್ನು ಇಲ್ಲಿ ಗಮನಿಸಬೇಕು. ಅಕ್ಷರಾಭ್ಯಾಸಕ್ಕಾಗಿ ರೋಮನ್ನರಿಂದ ಬಳಕೆಗೆ ಬಂದ A B C D ವರ್ಣಮಾಲೆಯನ್ನು ಕಲಿಯಬೇಕೆ? ಅಥವಾ 'ಅ ಆ ಇ ಈ' ಮುಂತಾದ ವರ್ಣಮಾಲೆಯನ್ನೇ? ಎಂಬ ಜಿಜ್ಞಾಸೆಯೇರ್ಪಟ್ಟಾಗ 'ರೋಮನ್ನರ ವರ್ಣಮಾಲೆಯಲ್ಲಿ ವರ್ಣಗಳಿಗೆ ಮೇಲೆ ಹೇಳಿದ ದೇವತಾಸ್ವರೂಪವಾಗಲೀ, ವೈಜ್ಞಾನಿಕ ವಿಶ್ಲೇಷಣೆಯಾಗಲೀ, ಹೊರಗಿನ ವ್ಯಾಕರಣ-ಧ್ವನಿಶಾಸ್ತ್ರಗಳ ಕ್ರಮಬದ್ಧತೆಯಾಗಲೀ ಕಂಡುಬರುವುದಿಲ್ಲ. ಭಾರತೀಯ ವರ್ಣಮಾಲೆಯಲ್ಲಿ ಈ ಎಲ್ಲವೂ ಅಡಕವಾಗಿದೆ. ಆದರೆ, ಲೋಕವ್ಯವಹಾರದ ದೃಷ್ಟಿಯಿಂದ ಆಂಗ್ಲಭಾಷೆಯನ್ನು ಕಲಿಯಬಹುದಷ್ಟೆ' ಎಂದಿದ್ದರು..

ಅವರ ಇನ್ನೊಂದು ಮಾತು -" ಅಳಿವಿಲ್ಲದಿರುವುದು, ಅಚ್ಯುತ, ಭಗವಂತ ಎಂದು ಬ್ರಹ್ಮವನ್ನು ಹೇಳುವಾಗ ಭಗವದ್ಗೀತೆಯಲ್ಲಿ 'ಅಕ್ಷರಂ ಬ್ರಹ್ಮ ಪರಮಮ್' ಎಂದು ಹೇಳಿದೆ.  ಹಾಗಾಗಿ ಅಕ್ಷರಗಳು ದೇವತಾಸ್ವರೂಪಗಳೇ ಆಗಿರುತ್ತಾ, 'ಅವುಗಳ ಉಚ್ಚರಣೆಯ ಮರ್ಮ, ಸ್ಥಾನ ಮತ್ತು ಭಾವಗಳನ್ನರಿತು ಉಚ್ಚರಿಸಿದಾಗ ನಮ್ಮ ದೇಹದಲ್ಲಿ ಆಯಾಯಾ ದೇವತಾಕೇಂದ್ರಗಳನ್ನು ತೆರೆಸಿ ಅಂತರ್ದರ್ಶನವನ್ನು ಮಾಡಿಸುತ್ತವೆ"  ಆದ್ದರಿಂದಲೇ 'ಅಮಂತ್ರಮಕ್ಷರಂ ನಾಸ್ತಿ' 'ಮಂತ್ರವಲ್ಲದ ಅಕ್ಷರವೇ ಇಲ್ಲ', ಎಂದು ಹೇಳಿರುವುದು.  

ಅಂತಹ ನಾಶರಹಿತನಾದ, ಅಕ್ಷರರೂಪಿಯಾದ, ಭಗವಂತನನ್ನು ತನ್ನೊಳಗೆ ಸಾಕ್ಷಾತ್ಕರಿಸಿಕೊಂಡಿರುವವನೇ 'ಅಕ್ಷರವಿತ್' ಎಂದು ಕರೆಸಿಕೊಳ್ಳಲು ಯೋಗ್ಯನಾಗಿರುವನು. ಲೋಕವ್ಯವಹಾರಕ್ಕಾಗಿ ನಾವು ಪ್ರಚಲಿತವಾಗಿರುವ ಭಾಷಾಜ್ಞಾನವನ್ನು ಪಡೆಯುವುದು ಸಾಕ್ಷರತೆಯೇ. ಅದರ ಉಪಯೋಗವನ್ನು ಅಲ್ಲಗಳೆಯುವಂತಿಲ್ಲ. ಆದರೆ ನಮ್ಮ ಜೀವನಕ್ಕೆ ಲೌಕಿಕವಲ್ಲದೆ, ಬೇರೆ ಆಯಾಮಗಳೂ ಇರುವುದರಿಂದ ಪರಿಪೂರ್ಣ ಮಾನವನಾಗಬೇಕಿದ್ದರೆ ಆ ಜ್ಞಾನದ ಅರಿವಿಗಾಗಿ ನಮ್ಮ ಋಷಿಗಳತ್ತ ಮುಖ ಮಾಡಬೇಕಾಗಿದೆ. ಅವರ ಆಶಯದ ಹಿನ್ನೆಲೆಯಲ್ಲಿ ಹೇಳುವುದಾದರೆ, ಜ್ಯೋತೀರೂಪಿಯಾಗಿ ಬೆಳಗುತ್ತಿರುವ ಆ ಭಗವಂತನೊಡನೆ ನಿರಂತರವಾಗಿ ಯಾವನು ಇರುವನೋ ಅವನನ್ನು ತಾನೇ 'ಸಾಕ್ಷರ'ನೆನ್ನಬಹುದು. ಆ ಭಗವಂತನೊಡನಿರುವ ಭಾವವೇ 'ಸಾಕ್ಷರತೆ' ಎಂಬುದೇ ಭಾರತೀಯ ದೃಷ್ಟಿ.

ಸೂಚನೆ: 05/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.