Tuesday, September 22, 2020

ಆಯಾಸಪಡದಿರುವಿಕೆ (Aaayasapadiruvike)

  ಲೇಖಕರು  - ವಿದ್ವಾನ್ ನರಸಿಂಹ ಭಟ್ ಬಡಗು
(ಪ್ರತಿಕ್ರಿಯಿಸಿರಿ lekhana@ayvm.in)
  

ಈಗ ನಾವು ವಿಚಾರಿಸಬೇಕಾದ ಆತ್ಮಗುಣ ಅನಾಯಾಸ. ಆಯಾಸಪಡದಿರುವುದು ಎಂದರ್ಥ. ಪ್ರತಿದಿನ ಪೂಜೆಯನ್ನು ಮಾಡಿ ಕೊನೆಯಲ್ಲಿ ನಾವು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ – "ಅನಾಯಾಸೇನ ಮರಣಂ" ಎಂದು. ಅಂದರೆ ಮರಣವನ್ನು ಹೊಂದಬೇಕಾದರೆ ಯಾವುದೇ ಬಗೆಯ ಕ್ಲೇಶವನ್ನು ಅನುಭವಿಸುವಂತಾಗಬಾರದು ಎಂದು. ಯಾವುದಾರೂ ಒಂದು ಕಾರ್ಯವನ್ನು ಮಾಡಲು ಎಷ್ಟು ಪ್ರಯತ್ನ ಬೇಕೋ ಅದಕ್ಕಿಂತಲೂ ಹೆಚ್ಚು  ಪಯತ್ನಪಟ್ಟರೆ ಅದನ್ನು 'ಆಯಾಸ' ಎಂದು ಕರೆಯುತ್ತೇವೆ. ನಮಗೆ ಒಂದು ಪ್ರಶ್ನೆ ಮೂಡುತ್ತದೆ. ಯಾವುದೇ ಕ್ಲೇಶವನ್ನು ಪಡದೆ ಕಾರ್ಯವನ್ನು ಮಾಡಲು ಸಾಧ್ಯವೇ? ಎಂದು. ಅನಾಯಾಸವಾಗಿ ಕೆಲಸವನ್ನು ಮಾಡುವುದು ಹೇಗೆ? "ಯದಾರಂಭೇ ಭವೇತ್ ಪೀಡಾ ನಿತ್ಯಮತ್ಯಂತಮಾತ್ಮನಃ | ತದ್ವರ್ಜಯೇತ್ ಧರ್ಮ್ಯಮಪಿ ಸೋಽನಾಯಾಸಃ ಪ್ರಕೀರ್ತಿತಃ ||" ಅಂದರೆ ಯಾವ ಕಾರ್ಯವನ್ನು ಆರಂಭ ಮಾಡುವಾಗ ನಮಗೆ ಒಂದು ಬಗೆಯ ವೇದನೆ ಬಹಳವಾಗಿ ಉಂಟಾಗುತ್ತದೆಯೋ, ಅದು ಧರ್ಮಕ್ಕೆ ಅನುಕೂಲವಾಗುವಂತಹ ಕಾರ್ಯವೇ ಆದರೂ ಅದನ್ನು ಮಾಡಬಾರದು, ಇದನ್ನೇ 'ಅನಾಯಾಸ' ಎಂದು ಕರೆಯುತ್ತಾರೆ. ಇದೂ ಒಂದು ಆತ್ಮಗುಣವಾಗಿದೆ.  

ಕುಶಲಕರ್ಮವೇ ಅನಾಯಾಸ (ಯೋಗ)
ನಮಗೆ ಅತ್ಯಂತ ಮುಖ್ಯವಾಗಿ ಕೆಲಸ ಮಾಡಲು ಶರೀರ ಬೇಕು. ಶರೀರದಿಂದ ಕಾರ್ಯವನ್ನು ಮಾಡುವಾಗ ಅಂಗಾಂಗಗಳು ಬಳಲುವುದು ಸಹಜ. ಬಳಲಿಕೆ ಮಾತ್ರದಿಂದ ನಾವು ಅದನ್ನು ಆಯಾಸ ಎಂದು ಪರಿಗಣಿಸಲಾಗುವುದಿಲ್ಲ. ಈ ಬಳಲಿಕೆಯು ಮುಂದೆ ಯಾವುದಾದರೂ ಶಾರೀರಿಕವಾದ ಅನಾರೋಗ್ಯವನ್ನು ಉಂಟುಮಾಡುವಂತಾದರೆ ಅದನ್ನು ಆಯಾಸ ಎನ್ನಬೇಕಾಗುತ್ತದೆ. ಆಯುರ್ವೇದಾಚಾರ್ಯರಾದ ಚರಕರು ಯಾವುದು ಆರೋಗ್ಯ? ಯಾವುದು ಅನಾರೋಗ್ಯ? ಎಂಬುದನ್ನು ಸುಂದರವಾಗಿ ವಿವರಿಸಿದ್ದಾರೆ – ದೇಹದ ಏಳು ಬಗೆಯ ಧಾತುಗಳಲ್ಲಿ ಉಂಟಾಗುವ ವಿಷಮತೆಯನ್ನೇ 'ವಿಕಾರ' ಎಂದರು. ಅವುಗಳ ಸಾಮ್ಯವೇ 'ಪ್ರಕೃತಿ' ಎಂದು ಕರೆದರು. ಯಾವುದರಿಂದ ಸುಖವು ಲಭಿಸುವುದೋ ಅದನ್ನು ಪ್ರಕೃತಿ ಎಂದೂ, ಯಾವುದರಿಂದ ದುಃಖ ಉಂಟಾಗುವುದೋ ಅದನ್ನು ವಿಕಾರ ಎಂದೂ ಹೇಳುತ್ತಾರೆ. ಈ ವಿಕಾರವು ತತ್ಕ್ಷಣದಲ್ಲಿ ಉಂಟಾಗಬಹುದು ಅಥವಾ ಕಾಲಾಂತರದಲ್ಲೂ ಉಂಟಾಗಬಹುದು. ಕೆಲವೊಮ್ಮೆ ಕೆಲಸವನ್ನು ಮಾಡುವಾಗ ಆಯಾಸ ಉಂಟಾಗದಿರಬಹುದು. ಆದರೆ ಅದರ ಪ್ರಭಾವ ಮುಂದಿನ ದಿನಗಳಲ್ಲಿ ಕಾಣಬಹುದು. ಉದಾಹರಣೆಗೆ ಒಬ್ಬನು ತನ್ನ ಯಾವುದೋ ವೃತ್ತಿಯ ಕಾರಣಕ್ಕಾಗಿ ಪ್ರತಿನಿತ್ಯ ದೂರದ ಪ್ರಯಾಣ ಅಥವಾ ರಾತ್ರಿಯ ಪ್ರಯಾಣ ಮಾಡಬಹುದು. ಅದರ ದುಷ್ಪರಿಣಾಮವನ್ನು ಅವನು ಅನುಭವಿಸಬೇಕಾಗುತ್ತದೆ. ಇದನ್ನೇ ಮಹಾಭಾರತದಲ್ಲಿ ವಿದುರನೀತಿಯಲ್ಲಿ ಆರು ಬಗೆಯ ಸುಖವನ್ನು ಹೇಳುವಾಗ ಪ್ರತಿದಿನವೂ ದೂರದ ಪ್ರಯಾಣವನ್ನು ಮಾಡಬಾರದು ಎನ್ನಲಾಗಿದೆ. ಈ ಆಯಾಸವು ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳ ಅಥವಾ ಸತ್ತ್ವ, ರಜಸ್ಸು, ತಮಸ್ಸುಗಳೆಂಬ ತ್ರಿಗುಣಗಳ ವಿಷಮತೆಗೆ ಕಾರಣವಾಗಿರಬಹುದು. ಈ ವಿಷಮತೆಯೇ ಮುಂದೆ ಶಾರೀರ ರೋಗವಾದ ವ್ಯಾಧಿ ಮತ್ತು ಮಾನಸಿಕ ರೋಗವಾದ ಆಧಿಗೂ ಕಾರಣವಾಗುತ್ತದೆ. ಇದರಿಂದ ನಮಗೆ ಆತ್ಮಸ್ವರೂಪಾನುಭವಕ್ಕೆ – ಭಗವಂತನ ಸಾಕ್ಷಾತ್ಕಾರಕ್ಕೆ ಬೇಕಾದ ಸಾಧನೆಗೆ ವಿಘ್ನ ಉಂಟಾಗುತ್ತದೆ. ಯೋಗಸೂತ್ರದಲ್ಲಿ ವ್ಯಾಧಿಯು ಹೇಗೆ ಯೋಗವಿಘ್ನವಾಗುವುದು ಎಂಬುದನ್ನು ವಿವರಿಸಿದ್ದಾರೆ. ಆತ್ಮಸಾಧನೆಗೆ ಭಂಗ ತರುವ ಕೆಲಸವನ್ನು ಮಾಡದೇ, ಮಾಡುವ ಕೆಲಸವನ್ನು ನಾಜೂಕಾಗಿ, ಕುಶಲತೆಯಿಂದ ಮಾಡಬೇಕು. ಅದನ್ನೇ 'ಯೋಗ'( "ಯೋಗಃ ಕರ್ಮಸು ಕೌಶಲಮ್") ಎನ್ನುತ್ತಾರೆ. ಹೀಗೆ ಮಾಡಿದಲ್ಲಿ ಮೊದಲೇ ಹೇಳಿದಂತೆ ಆನಾಯಾಸವಾದ ಮರಣವೂ ಸಂಭವಿಸುತ್ತದೆ. ಅಮರತ್ವವೂ ಲಭಿಸುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.