Wednesday, September 16, 2020

ಮಾನವ ಜನ್ಮ ಬಲು ದೊಡ್ಡದು (Manava Janma Balu Doddadu)

ಲೇಖಕರು: ಯೋಗಶ್ರೀ. ಹೆಚ್. ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ದೇವರ್ಷಿ ನಾರದರು ಮಹಾವಿಷ್ಣುವಿನಲ್ಲಿ ನಾರಾಯಣಮಂತ್ರ-ಜಪದ  ಹಿರಿಮೆಯ ಬಗೆಗೆ ಪ್ರಶ್ನಿಸಿದರು. ಅದಕ್ಕೆ ಭಗವಂತನು ಒಂದು ಚಿಕ್ಕ ಹುಳುವನ್ನು ತೋರಿಸಿ  ಅದರ ಕಿವಿಯಲ್ಲಿ ಮಂತ್ರ-ಪಠಣ ಮಾಡುವಂತೆ ಹೇಳಿದನು. ಹಾಗೆ ಮಾಡಿದಾಗ ಆ ಹುಳು ತಕ್ಷಣವೇ ಮೃತಪಟ್ಟಿತು. ದುಃಖಿತರಾದ ನಾರದರು ಭಗವಂತನಿಗೆ ವಿಷಯವನ್ನು ತಿಳಿಸಿದರು. ಹೀಗೆ ಕ್ರಮಕ್ರಮವಾಗಿ ಒಂದು ಚಿಟ್ಟೆ, ಜಿಂಕೆ-ಮರಿ  ಹಾಗೂ ಒಂದು ನವಜಾತ-ಕರು ಇವುಗಳ  ಕಿವಿಯಲ್ಲಿ ಮಂತ್ರಪಠಣ ಮಾಡುವಂತೆ ಹೇಳಿದರು. ಹಿಂದಿನಂತೆ ಅವೂ ಮೃತವಾದವು. ಇದರಿಂದ ಬಹಳ ಖಿನ್ನರಾದ ನಾರದರು ವಿಷ್ಣುವಿನಲ್ಲಿ ತಿಳಿಸಿದರು. ಮಂದಸ್ಮಿತನಾದ ಭಗವಂತನು, ತನ್ನಲ್ಲಿ ಇಷ್ಟು ಬೇಗನೆ ನಂಬಿಕೆಯನ್ನು ಕಳೆದುಕೊಳ್ಳದೆ, ವಾರಣಾಸಿಯ ರಾಜನ ನವಜಾತ ಶಿಶುವಿನ ಕಿವಿಯಲ್ಲಿ ಕೊನೆಯ ಬಾರಿ ಮಂತ್ರೋಚ್ಚಾರವನ್ನು ಮಾಡುವಂತೆ ಹೇಳಿದನು. ಹಿಂಜರಿಕೆಯಿಂದಲೇ ಅವರು ಆ ಮಗುವಿನ ಕಿವಿಯಲ್ಲಿ ಮಂತ್ರವನ್ನು ಪಠಿಸಿದರು. ಆಶ್ಚರ್ಯವೆಂಬಂತೆ, ಆ ಮಗುವು ಕಣ್ತೆರೆದು ನೋಡಿ ನಾರದರಿಗೆ ನಮಿಸಿ "ನನ್ನ ಹಿಂದಿನ ಜನ್ಮಗಳಲ್ಲಿ ತಾವು ಕಿವಿಯಲ್ಲಿ ಮಂತ್ರಪಠಣವನ್ನು ಮಾಡಿದ್ದರ ಫಲವಾಗಿ ಹಂತ-ಹಂತವಾಗಿ ಉನ್ನತ ಜನ್ಮವನ್ನು ತಳೆದೆ. ಕೊನೆಯಲ್ಲಿ ಶ್ರೇಷ್ಠವಾದ ಮಾನವಜನ್ಮವನ್ನು ಹೊಂದಿರುವೆ. ಇದರಿಂದ  ಸಾಧನೆಯನ್ನು ಮಾಡಿ ಮೋಕ್ಷವನ್ನು ಪಡೆಯುವೆ"ನೆಂದಿತು.

ಮಾನವ ಜನ್ಮವೇಕೆ ಶ್ರೇಷ್ಠ? ಆಧುನಿಕರ ಪ್ರಕಾರ, ಮನುಷ್ಯ, ತನ್ನ ಮೇಧೆ, ಚಿಂತನೆಗಳಿಂದಾಗಿ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಆದರೆ ನಮ್ಮ ಸನಾತನಮಹರ್ಷಿಗಳ ಪ್ರಕಾರ-ಅತ್ಯದ್ಭುತವಾದ ಈ ಶರೀರ-ರಚನೆಯಿಂದ ಮಾತ್ರವೇ ಯೋಗ-ಭೋಗಗಳೆರಡನ್ನು ಪಡೆಯಬಹುದಾದ್ದರಿಂದಲೇ ಶ್ರೇಷ್ಠತೆ. ಮಹಾಕವಿ ಕಾಳಿದಾಸನು ಹೇಳಿರುವಂತೆ("ಶರೀರಮಾದ್ಯಂಖಲು ಧರ್ಮ ಸಾಧನಮ್") ಧರ್ಮಮಯ ಜೀವನಕ್ಕೆ  ಶರೀರ ಅತ್ಯಾವಶ್ಯಕ. ಅದರ ಮೂಲಕವೇ ಪರಮಾತ್ಮದರ್ಶನ ಸಾಧ್ಯ. ಪುಣ್ಯಫಲವಾಗಿ ಸ್ವರ್ಗ ಪ್ರಾಪ್ತಿಯಾದರೂ, ಪುಣ್ಯಕ್ಷಯದ ನಂತರ ಮಾನವಜನ್ಮ ತಾಳಿ ತಪಸ್ಸು-ಸಾಧನೆಗಳ ಮೂಲಕವೇ ಮೋಕ್ಷವನ್ನು ಪಡೆಯಬೇಕು. "ಮಾನವ ಜನ್ಮ ಬಲು ದೊಡ್ಡದು" ಎನ್ನುವ ದಾಸವಾಣಿ ಸ್ಮರಣೀಯ. ಶರೀರ ನೌಕೆಯ ಸಹಾಯದಿಂದ ಜೀವನವೆಂಬ ಭವಸಾಗರವನ್ನು ದಾಟಬಹುದು. ಈ ದೇಹವನ್ನು ಬರೀ ದೇಹವಾಗಿ ಮಾತ್ರ ನೋಡದೇ ಒಳಗಿರುವ ದೇಹಿಯ(ದೇವನ) ಗೇಹವಾಗಿ(ಮನೆಯಾಗಿ), ದೇವಾಲಯವಾಗಿ ನೋಡಬೇಕೆಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಸೂಚನೆ: 16/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.