Sunday, September 27, 2020

ಆರ್ಯಸಂಸ್ಕೃತಿ ದರ್ಶನ - 12 (Arya Samskruti Darshana - 12)

 ಮಹರ್ಷಿ ಸಂಸ್ಕೃತಿ  
ಲೇಖಕರು ;ಶ್ರೀ ಶ್ರೀರಂಗಪ್ರಿಯಸ್ವಾಮಿಗಳು 




ಮಾನವನ ಜೀವನದ ಬಗೆಯನ್ನು ವಿಚಾರ ಮಾಡುವಾಗ "ಸಂಸ್ಕೃತಿ" ಎಂಬ ಪದವು ವಿಶೇಷವಾಗಿ ಪ್ರಯೋಗಿಸಲ್ಪಡುತ್ತದೆ. ಈ ಅರ್ಥದಲ್ಲಿ "ಸಂಸ್ಕೃತಿ" ಎಂಬ ಪದವು ಸುಮಾರು ಐವತ್ತು –ನೂರು ವರ್ಷಗಳಿಂದೀಚೆಗೆ ಮಾತ್ರ ವಿಶೇಷವಾಗಿ ಬಳಕೆಗೆ ಬಂದಿದೆ. ಪಾಶ್ಚಾತ್ಯರ ಸಾಹಿತ್ಯ ಹಾಗೂ ನಾಗರೀಕತೆಗಳ ಪ್ರಭಾವ ಭಾರತೀಯರ ಮೇಲೆ ಆಗಿರುವುದು ಪ್ರತ್ಯಕ್ಷವಾದ ವಿಷಯವಾಗಿದೆ. ಇಂಗ್ಲಿಷ್ ಭಾಷೆಯ "culture" ಎಂಬ ಪದಕ್ಕೆ ಪರ್ಯಾಯವಾಗಿ ನಾವು ಇಂದು "ಸಂಸ್ಕೃತಿ"  ಎಂಬ ಪದವನ್ನು ಬಳಸುತ್ತಿದ್ದೇವೆ. "culture" ಎಂಬ ಪದಕ್ಕೂ ಮೂಲ ಲ್ಯಾಟಿನ್ ಭಾಷೆಯ "cult" ಅಥವಾ "cultus" ಎಂಬುದಾಗಿ ಭಾಷಾಸ್ವರೂಪಜ್ಞರು ಹೇಳುತ್ತಾರೆ.  "culture" ಎಂಬ ಪದಕ್ಕೆ ಇಂದಿರುವ  ಅರ್ಥವು ಹಿಂದೆ ಇರಲಿಲ್ಲ. ತಂತ್ರಾಚಾರ, ವ್ರತ, ಭೂಮಿಪೂಜೆ ಮುಂತಾದ ಅರ್ಥವನ್ನು ಕೊಡುತ್ತಿದ್ದ "culture"  ಪದವು ಕಾಲಕ್ರಮದಲ್ಲಿ Agriculture ( ಭೂ ವ್ಯವಸಾಯ)    ಮುಂತಾದ ಪದಗಳಿಗೆ ಅವಕಾಶ ಮಾಡಿಕೊಟ್ಟಿತು. ಹೀಗೆಯೇ ಮುಂದುವರಿದು Horticulture, Sericulture ಮುಂತಾದ ಪದಗಳು ಬಳಕೆಗೆ ಬಂದವು. ಮನುಷ್ಯನ ಜೀವನದ ವಿಧಾನವು ಬಗೆ ಬಗೆಯಾಗಿ ಬೆಳೆದಂತಲ್ಲಾ ಜೀವನದ ಬಗ್ಗೆ ಪರಿಷ್ಕಾರ ಮುಂತಾದವನ್ನೂ "culture" ಎಂಬ ಪದದಿಂದ ಕರೆಯವುದು ರೂಢಿಗೆ ಬಂತು. ಅದಕ್ಕೆ ಪರ್ಯಾಯವಾಗಿ ಸಂಸ್ಕೃತಿ ಎಂಬ ಪದ ನಮ್ಮ ದೇಶದಲ್ಲಿ ರೂಢಿಗೆ ಬಂದು ಇಂದು "ಸಂಸ್ಕೃತಿ " ಎಂಬ ಪದಕ್ಕೆ ಬಹು ವ್ಯಾಪಕವಾದ ಅರ್ಥ ಉಂಟಾಗಿದೆ.

ಪಾಶ್ಚಾತ್ಯ ಭೂವಲಯದ ಜನರಲ್ಲಿ ಸಾಮಾಜಿಕ  ಜೀವನದ ಸಂಸ್ಕೃತಿಯು ಇನ್ನೂ ರೂಪಗೊಳ್ಳದೆಯಿದ್ದ ಬಹು ಹಿಂದಿನ ಕಾಲದಲ್ಲೇ ಭಾರತವರ್ಷದ ಪ್ರಾಚೀನ ಮಹರ್ಷಿಗಳು ಜೀವನದ  ರಹಸ್ಯಗಳನ್ನೆಲ್ಲಾ ಚೆನ್ನಾಗಿ ಅರಿತು ಜೀವನದ ಉತ್ತಮ ಆದರ್ಶಗಳನ್ನು ಮುಂದಿನ ಪೀಳಿಗೆಗಳಿಗೆ ಕೊಟ್ಟು ಹೋದರು. ಜೀವನವು ಪುರುಷಾರ್ಥಮಯವಾದುದೆಂದು ಸಾರಿದರು. ಭೌತಿಕ  ಜೀವನದ ಹಿಂಬದಿಯಲ್ಲಿ ಶಾಶ್ವತಸತ್ಯವಾಗಿ ಬೆಳಗುತ್ತಿರುವ ಚೈತನ್ಯ ಶಕ್ತಿಯನ್ನು ತಮ್ಮ ತಪೋಮಯವೂ   ಯೋಗಮಯವೂ ಆದ   ದೃಷ್ಟಿಯಿಂದ ಕಂಡುಕೊಂಡರು. " ತೇ ಧ್ಯಾನ ಯೋಗಾನುಗತಾ ಅಪಶ್ಯನ್ ದೇವಾತ್ಮ ಶಕ್ತಿಂ ಸ್ವಗುಣೈರ್ನಿಗೂಢಾಂ" ಎಂಬ ಉಪನಿಷದ್ವಾಣಿಯು ಪ್ರಾಚೀನ ಮಹರ್ಷಿಗಳ ಮಹಾಸಾಧನೆಯನ್ನು ಸೂಚಿಸುತ್ತದೆ. ವಿಶ್ವಧಾರಕವಾದ ಆ ಚೈತನ್ಯ ಶಕ್ತಿಯನ್ನು  ಗುರುತಿಸಿದ ಅವರು "ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ" , " ಧರ್ಮೇ ಸರ್ವಂ ಪ್ರತಿಷ್ಠಿತಂ", " ಧರ್ಮೇಣ ವಿಧೃತಾಃ ಪ್ರಜಾಃ" ಎಂದು ಮುಂತಾದಾಗಿ ಸಾರಿದರು. ಧರ್ಮವೇ ಜೀವನದ ಮೂಲವೆಂಬ ರಹಸ್ಯವನ್ನು ಅರಿತವರು ಆ ಮಹರ್ಷಿಗಳು. ಜೀವನದ ಪರಿಷ್ಕಾರಕ್ಕೆಲ್ಲಾ ಧರ್ಮವೇ ಮೂಲ ಸ್ರೋತಸ್ಸು. ಒಂದು ಬೀಜದಲ್ಲಿ ಅಡಗಿರುವ ಅದ್ಭುತವಾದ ಶಕ್ತಿಯೇ ಅಂಕುರಾದಿ ರೂಪವಾಗಿ ವಿಕಾಸಗೊಂಡು ಬೆಳೆಯುವ  ವೃಕ್ಷದ ಜೀವನಕ್ಕೆ ಮೂಲ. ವೃಕ್ಷದ ಎಲ್ಲಾ ಅವಸ್ಥೆಗಳಲ್ಲೂ ಬೀಜದ ಆ ಧರ್ಮವೇ ವಿಕಾಸಹೊಂದಿ ಬೆಳೆದು ಕೊನೆಗೆ ಮತ್ತೆ ಬೀಜ ರೂಪವಾಗಿ ಆ ಮೂಲರೂಪದಲ್ಲೇ ನೆಲೆ ನಿಲ್ಲುತ್ತದೆ. ಸಂಸ್ಕೃತಿ ಎಂಬ ಪದದಿಂದ ಇಂದು ನಾವು ಕಲ್ಪಿಸುತ್ತಿರುವ ಅರ್ಥಗಳನ್ನು ಇದಕ್ಕಿಂತಲೂ  ಇನ್ನೂ ಉತ್ತಮವಾಗಿಯೂ, ಬಹು ಗಂಭೀರವಾಗಿಯೂ ಧರ್ಮ ಎಂಬ ಪದವು ಹಿಂದೆ ತಿಳಿಸಿಕೊಡುತ್ತಿತ್ತು. ಆದರೆ  ಧರ್ಮದ ತತ್ತ್ವವೇನೆಂದು ಅರಿಯದೆ ಧರ್ಮದ ಬಗ್ಗೆ ತಪ್ಪು ಗ್ರಹಿಕೆಗಳನ್ನು ಬೆಳಸಿಕೊಂಡು, ಧರ್ಮ ಶಬ್ದವನ್ನು ಕೇಳಿದ ಮಾತ್ರಕ್ಕೇ ಬೇಸರ ಪಡುವಷ್ಟರ ಮಟ್ಟಿನ ದು:ಸ್ಥಿತಿ ಧರ್ಮಭೂಮಿಯಾದ ನಮ್ಮ ನಾಡಿನಲ್ಲಿ ಇಂದು ಉಂಟಾಗಿರುವುದು ಅತ್ಯಂತ ವಿಷಾದಕರವಾದ ಸಂಗತಿ.

ತೆಂಗಿನಕಾಯಿ ಎಂದು ವ್ಯವಹರಿಸಲು ಅದರೊಳಗಿನ ತಿರುಳೇ ಮುಖ್ಯ ಕಾರಣ. ತಿರುಳಿನೊಂದಿಗೆ ಇದ್ದಾಗ ಕರಟ, ಜುಂಗು, ಮಟ್ಟೆ ಮುಂತಾದವುಗಳೂ ತೆಂಗಿನಕಾಯಿ ಎಂಬ ಹೆಸರಿನಿಂದಲೇ ವ್ಯವಹರಿಸಲ್ಪಡುತ್ತವೆ. ಆಗ ಅವುಗಳಿಗೆ ಪೂಜ್ಯತೆಯೂ ಇರುತ್ತದೆ. ತಿರುಳಿನಿಂದ   ಬೇರ್ಪಟ್ಟಾಗ ಅವುಗಳ ಹೆಸರು, ಅವುಗಳನ್ನಿಡುವ ಸ್ಥಾನ, ಅವುಗಳ ಬಗ್ಗೆ ಇರುವ ಭಾವನೆ – ಎಲ್ಲವೂ ಬದಲಾಯಿಸುತ್ತದೆ. ಆದರೆ, ಭಿಕ್ಷುಕನು "ಧರ್ಮ ಮಾಡಿ ಬುದ್ಧಿ " ಎನ್ನುವಾಗ ಕೆಲವು ಪೈಸೆಗಳೆಂದೇ ಧರ್ಮ ಶಬ್ದಕ್ಕೆ ಅರ್ಥ. ಲೋಕದಲ್ಲಿ ಧಾರ್ಮಿಕವೆನಿಸುವ ಎಷ್ಟೋ ಕಾರ್ಯಗಳು, ತಿರುಳಾದ ಧರ್ಮವು ಅವುಗಳಲ್ಲಿ ಇಲ್ಲದಿದ್ದರೂ, ಕೇವಲ ರೂಢಿಯ ಬಲದಿಂದ ಧಾರ್ಮಿಕ ಕಾರ್ಯಗಳೆಂದು ಕರೆಯಲ್ಪಡುತ್ತದೆ. ವಾಸ್ತವಿಕವಾಗಿ ಅವು ಧರ್ಮ ಕಾರ್ಯಗಳೆನಿಸಬೇಕಾದರೆ, ಮೂಲಭೂತವಾದ ಧರ್ಮದೊಡನೆ ಅವುಗಳಿಗೆ ಸಂಬಂಧವಿರಬೇಕು. ಆ ಸಂಬಂಧ ತಪ್ಪಿಹೋಗಿರುವ ಕಾರಣದಿಂದಲೇ ಇಂದು ಧರ್ಮದ ಬಗ್ಗೆ ಇಷ್ಟು ಅವಹೇಳನವುಂಟಾಗಿರುವುದು ಎಂದು ಹೇಳಬಹುದು.

Culture  ಎಂಬ ಪದದ ಬಳಕೆಯ ಬಗ್ಗೆಯೂ ಹೇಳುವುದಾದರೆ, ಅದರ  ಘನತೆಯೂ ರೂಪಗೆಡದೆ ಉಳಿದುಕೊಂಡಿದೆಯೆಂದು ಹೇಳುವಂತೆ ಏನಿಲ್ಲ. ದಿವಂಗತ ಶ್ರೀ ಕೆ. ಎಮ್. ಮುನ್ಷಿಯವರು Culture ಎಂಬ ಪದದ ಸ್ಥಿತಿ ಏನಾಗಿದೆಯೆಂಬುದನ್ನು ವಿವರಿಸಿರುವುದನ್ನು ಗಮನಿಸಿ,  " If there is one word which has been widely misused during last fifteen years, it is the word "culture". Dance and music are culture  in cities like Delhi and Bombay. Cultural shows are performed everyday, none of which has hardly any element of culture. Often, they are characterised by want of it. I found the other day that "culture" tooth –picks were sold in the market. There are also cultural exchanges between nations, the object of which is to deprive us of our culture and spy upon our country. "(ಕಳೆದ ಹದಿನೈದು ವರ್ಷಗಳಲ್ಲಿ ಎಲ್ಲೆಲ್ಲೂ  ಬಹಳವಾಗಿ ಅಪಪ್ರಯುಕ್ತವಾಗಿರುವಒಂದು ಪದವೆಂದರೆ  "culture (ಸಂಸ್ಕೃತಿ ) "ಎಂಬುದು. ನಾಟ್ಯ ಮತ್ತು ಸಂಗೀತಗಳೂ "ಸಂಸ್ಕೃತಿ" ಆಗಿಬಿಟ್ಟಿವೆ.  ಡೆಲ್ಲಿ, ಬೊಂಬಾಯಿ ಮುಂತಾದ ಪಟ್ಟಣಗಳಲ್ಲಿ  ಪ್ರತಿದಿನವೂ ಸಾಂಸ್ಕೃತಿಕ ಮನರಂಜನೆ ದೃಶ್ಯಗಳು ಆಚರಿಸಲ್ಪಡುತ್ತವೆ. ಆದರೆ ಅವುಗಳಲ್ಲಿ ಸಂಸ್ಕೃತಿಯ ಮುಖ್ಯಾಂಶವೇ ಇರುವುದಿಲ್ಲ. ಕೆಲವು ಸಾರಿಯಂತೂ ಸಂಸ್ಕೃತಿ ಶೂನ್ಯತೆಯೇ ಅವುಗಳ ವಿಶಿಷ್ಟ ಲಕ್ಷಣವಾಗಿರುತ್ತದೆ. ಮೊನ್ನೆ ಒಂದು ದಿನ ಮಾರುಕಟ್ಟೆಯಲ್ಲಿ "ಕಲ್ಚರ್ ಹಲ್ಲುಕಡ್ಡಿಗಳು" ಮಾರಾಟವಾಗುತ್ತಿದ್ದನ್ನು  ಕಂಡೆ. ದೇಶಗಳು ಪರಸ್ಪರವಾಗಿ ಸಾಂಸ್ಕೃತಿಕ ವಿನಿಮಯಗಳನ್ನು ನಡೆಸುತ್ತಿವೆ. ಅದರ ಉದ್ದೇಶವೇನೆಂದರೆ ನಮ್ಮನ್ನು ಸಂಸ್ಕೃತಿಯಿಂದ ಬೇರ್ಪಡಿಸಿ ನಮ್ಮ ದೇಶದ ಮೇಲೆ ಗೂಢಚಾರಿಕೆಯನ್ನು ನಡೆಸುವುದೇ) ಎಂದು ಒಂದು ಪುಸ್ತಕದಲ್ಲಿ ಬರೆದಿದ್ದಾರೆ.

ಇರಲಿ, ಪ್ರಕೃತ ಸಂಸ್ಕೃತಿ ಎಂಬ ಪದದ ಬಗ್ಗೆ ದೋಷಾರೋಪಣೆಯೇನಿಲ್ಲ. ಶಬ್ದನಿಷ್ಪತ್ತಿಯ ದೃಷ್ಟಿಯಿಂದ ಅದಕ್ಕೆ ಪರ್ಯಾಯವಾಗಿ ನಿಲ್ಲಬಲ್ಲ  "ಸಂಸ್ಕಾರ" ಎಂಬ ಪದವು ಧರ್ಮ ಪದದಂತೆಯೇ ಪ್ರಾಚೀನ ಕಾಲದಲ್ಲೇ ಬಳಕೆಯಲ್ಲಿತ್ತು. ಒಂದು ವಸ್ತುವಿನಲ್ಲಿ ಆಗಂತುಕವಾಗಿ ಸಂಭವಿಸುವ ದೋಷಗಳನ್ನು ನಿವಾರಿಸಿ ಆ ವಸ್ತುವಿನ ಸಹಜವಾದ  ಸ್ವರೂಪಗುಣವು ಬೆಳಗುವಂತೆ ಮಾಡುವುದಕ್ಕೆ "ಸಂಸ್ಕಾರ" ಎಂದು ಹೆಸರು. ಹೀಗೆ ಆ ಜೀವನವನ್ನು ಎಲ್ಲ ಕ್ಷೇತ್ರಗಳಲ್ಲೂ ಪರಿಷ್ಕರಿಸಿ, ವ್ಯಕ್ತಿ, ಸಮಾಜ, ರಾಷ್ಟ್ರ-ಇಡೀ ವಿಶ್ವವನ್ನೇ ಸುಸಂಸ್ಕೃತವನ್ನಾಗಿ ಮಾಡುವಂತಹ ನಮ್ಮ "ಮಹರ್ಷಿ  ಸಂಸ್ಕೃತಿ " ಈ ದೃಷ್ಟಿಯಿಂದ ಅತ್ಯಂತ ಶ್ಲಾಘ್ಯವಾದುದೇ ಸರಿ.

ಮಹರ್ಷಿಗಳು ಜೀವನವು ಧರ್ಮ,ಅರ್ಥ, ಕಾಮ ಮತ್ತು ಮೋಕ್ಷವೆಂಬ ಪುರುಷಾರ್ಥ ಸಂಪತ್ತಿನಿಂದ ಬೆಳಗುವಂತೆ ಮಾಡಿದರು. ಅರ್ಥ, ಕಾಮಗಳನ್ನು ಅಸ್ಥಾನ ವೈರಾಗ್ಯದಿಂದ ತೆಗಳಲಿಲ್ಲ. ಧರ್ಮಕ್ಕೆ ವಿರೋಧವಿಲ್ಲದಂತೆ ಅರ್ಥ, ಕಾಮಗಳನ್ನು ಸೇವಿಸಿದರೇ, ಜೀವನಕ್ಕೆ ಪೂರ್ಣತೆಯೆಂದು ಬೋಧಿಸಿದರು. ಧರ್ಮ ಬೀಜದಿಂದ ಅಂಕುರಿಸಿ ಅರ್ಥ - ಕಾಮಗಳೆಂಬ ಕಾಂಡ-ಕೊಂಬೆಗಳಿಂದ ಬೆಳೆದ ಜೀವನ ವೃಕ್ಷದಲ್ಲಿ ಕಾಮದ ನೇರದಲ್ಲಿ ಒಂದು ಕಾಮ (ಅಲ್ಪ ವಿರಾಮ)ವನ್ನು ಹಾಕಿ, ಆ ಸ್ಥಳದಲ್ಲಿ ಮನಸ್ಸೆಂಬ ಪಕ್ಷಿಯು ಎಲ್ಲಿಂದಲೋ ದೋಷ ಬೀಜವನ್ನು ತಂದು ಹಾಕಿದರೆ ಅಲ್ಲಿಂದ ಮುಂದಕ್ಕೆ ಬದನಿಕೆಯಂತೆ ಕಾಮ, ಕ್ರೋಧ, ಲೋಭ, ಮೋಹಾದಿಗಳು ಜೀವನ ವೃಕ್ಷದಲ್ಲಿ ಬೆಳೆದು ಸಹಜವಾದ ಸತ್ಫಲವು ಬಿಡದೆ ದುಷ್ಟ ಫಲವೇ ಬಿಡುತ್ತದೆ. ಹೀಗೆ ಜೀವನವು ಕೆಟ್ಟುಹೋಗುತ್ತದೆ. ಆದ್ದರಿಂದ ಜೀವನ ವೃಕ್ಷದಲ್ಲಿ  ಬದನಿಕೆಗಳು ಬೆಳೆಯಲು ಅವಕಾಶ ಕೊಡಬಾರದು. ಧರ್ಮಕ್ಕೆ ವಿರೋಧವಿಲ್ಲದಂತೆ ಅರ್ಥ ಕಾಮಗಳನ್ನು ಸೇವಿಸಿ ಮೋಕ್ಷವೆಂಬ ಸತ್ಫಲದಲ್ಲಿ ನೆಲೆ ನಿಂತರೆ ಜೀವನವು ಪೂರ್ಣವಾಗಿ ತನ್ನ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇದೇ ಮಹರ್ಷಿಗಳ ಜೀವನದ ಸಂಸ್ಕೃತಿ.

ಜೀವನದಲ್ಲಿ ಇಂತಹ ಸಂಸ್ಕೃತಿಯನ್ನು ಬೆಳೆಸುವುದಕ್ಕಾಗಿ ಸತ್ಯದರ್ಶಿಗಳಾದ ಮಹರ್ಷಿಗಳು ನಡೆ, ನುಡಿ, ನಾಡು, ವ್ಯಕ್ತಿ, ಸಮಾಜ- ಎಲ್ಲ ಕ್ಷೇತ್ರಗಳಲ್ಲಿಯೂ ಪರಿಷ್ಕಾರವನ್ನು ರೂಪಿಸಿದರು. ಅವರ ತಪೋಮಯ ಬಾಳಾಟದ ರಹಸ್ಯವನ್ನು ಅರಿಯದೆ ಅವರ ಸಂಸ್ಕೃತಿಯ ಬಗ್ಗೆ ಅವಹೇಳನೆ ಮಾಡುವುದು ಅವಿವೇಕದ ಪರಾಕಾಷ್ಠತೆಯೇ ಸರಿ.

ಇಡೀ ರಾಷ್ಟ್ರವನ್ನೇ ಧರ್ಮಭಾವನೆಯಿಂದ ತುಂಬಿ ಭೌತಿಕ ಕ್ಷೇತ್ರದಲ್ಲಿ ದೃಷ್ಟಿಯು ಹರಿಯುತ್ತಿರುವಂತೆ ಕಂಡರೂ ಉತ್ತಮ ಸಂಸ್ಕೃತಿಯ ಮೂಲಕ ಪರಾತ್ಪರ ಸತ್ಯವನ್ನು ಸಾಕ್ಷಾತ್ಕರಿಸುವ ಸುಂದರ ಸಂವಿಧಾನವನ್ನು ರೂಪಿಸಿದರು. ಅದರಿಂದಲೇ ಭಾರತವು ಕರ್ಮಭೂಮಿಯೂ, ಧರ್ಮಭೂಮಿಯೂ ಎನಿಸಿತು. ಎಲ್ಲೆಲ್ಲಿ ನೋಡಿದರೂ ದಿವ್ಯಭಾವವನ್ನು ಪ್ರಬೋಧಗೊಳಿಸುವಂತೆ ಪವಿತ್ರನಾಮಗಳಿಂದ ತೀರ್ಥ ಕ್ಷೇತ್ರಗಳು. ಅಂತರಂಗದ ಯೋಗಮಯ ಜೀವನದ ಉತ್ತುಂಗ ಶಿಖರದಲ್ಲಿ ಜ್ಯೋತಿರ್ಮಯವಾದ ಶಿವ ಶಕ್ತಿ   ತತ್ತ್ವಗಳು ಏಕೀ ಭೂತವಾಗಿ ಬೆಳಗುವ ಸತ್ಯಾರ್ಥವನ್ನು ಸೂಚಿಸುವುದಕ್ಕಾಗಿ ಉತ್ತರದ ಉತ್ತುಂಗ ಶಿಖರಕ್ಕೆ ಗೌರೀಶಂಕರ ಎಂಬ ದಿವ್ಯನಾಮವನ್ನಿಟ್ಟರು. ಚೈತನ್ಯಮಯವಾದ ಕುಂಡಲಿನೀ ಶಕ್ತಿಯು ಅಂತರಂಗದಲ್ಲಿ ಪ್ರಬೋಧಗೊಂಡು ಬೆಳಗುವ ಸತ್ಯವನ್ನು ಸೂಚಿಸುವುದಕ್ಕಾಗಿ ಸಮುದ್ರದಿಂದ ಎದ್ದ ಕೂಡಲೇ ಕಾಣುವ ಕ್ಷೇತ್ರಕ್ಕೆ ಕನ್ಯಾಕುಮಾರೀ ಎಂಬ ದಿವ್ಯ ನಾಮಧೇಯವನ್ನಿಟ್ಟರು. ಯೋಗಾಯತನವೂ ಶಿವ-ಶಕ್ತಿನಿಕೇತನವೂ ಆದ ಶರೀರಕ್ಷೇತ್ರದೊಳಗೆ ಉಂಟಾಗುವ ಜಾಲಂಧರ, ಉಜ್ಜಯಿನೀ (ಉಡ್ಡೀಯನ), ಮೂಲಬಂಧ ಮುಂತಾದ ಯೋಗದ ಸ್ಥಿತಿ (ಮುದ್ರೆ)ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅದೇ ಹೆಸರುಗಳನ್ನು ಆಯಾಸ್ಥಾನದ ಊರುಗಳಿಗೆ  ಇಟ್ಟರು. " ಜಾಲಂಧರೋಡ್ಡೀಯನ  ಮೂಲಬಂಧಾನ್ ಜಲ್ಪಂತಿ ಕಂಠೋದರ ಪಾಯು ಸಂಸ್ಥಾನ್| ಬಂಧತ್ರಯೇಸ್ಮಿನ್ ಪರಿಚೀಯಮಾನೇ ಬಂಧಃ ಕುತೋ ದಾರುಣ ಕಾಲಪಾಶಾತ್||" ಎಂಬುದಾಗಿ ಶ್ರೀಶಂಕರ ಭಗವತ್ಪಾದರು ಹೇಳಿದ್ದಾರೆ.  ಭಾರತ ಭೂಮಿಯಲ್ಲಿ ಬೆಳಗುವ ಐವತ್ತೊಂದು ಶಕ್ತಿಪೀಠಗಳೂ, ಪವಿತ್ರ ತೀರ್ಥಕ್ಷೇತ್ರಗಳೂ ಭಾರತ ಭೂಮಿಯ ಮೇಲೆ ಹರಿದ ಮಹರ್ಷಿಗಳ ಮನೋಧಾರೆಯ ಹಿರಿಮೆಯನ್ನು ಸೂಚಿಸುತ್ತಿವೆ. ಪವಿತ್ರ ಜಲದಿಂದ  ಜೀವನವನ್ನು ಪಾವನವನ್ನಾಗಿ ಮಾಡುವ ಗಂಗಾ ಮುಂತಾದ ಮಹಾನದಿಗಳ ನಾಮಧೇಯಗಳ ಹಿಂಬದಿಯಲ್ಲಿ ಮಹರ್ಷಿಗಳ ದಿವ್ಯ ಮನೋಭಾವವು ನೆಲೆಸಿದೆ. ಈ ದೃಷ್ಟಿಯಿಂದ ಒಮ್ಮೆ ಭಾರತ ಭೂಮಿಯತ್ತ ದೃಷ್ಟಿ ಹರಿಸಿದರೂ ನಾವು ಪವಿತ್ರರಾಗಿ ಮಹರ್ಷಿ ಸಂಸ್ಕೃತಿಯ ಉತ್ತುಂಗ ಶಿಖರಕ್ಕೇರಿ ಧನ್ಯತೆಯನ್ನು ಪಡೆದಂತೆ ಭಾಸವಾಗುತ್ತದೆ. ಆತ್ಮ ಜ್ಯೋತಿಯ ಮೂಲದಿಂದ ಜೀವನವು ಧರ್ಮಮಯವಾಗಿ ವಿಕಾಸಗೊಳ್ಳಬೇಕೆಂಬದು ಮಹರ್ಷಿಗಳ ಆದರ್ಶವೆಂದು ತಿಳಿಯಲಾಯಿತಷ್ಟೆ.  ತಾಯಿಯ ಗರ್ಭದಲ್ಲಿ ಬೆಳೆಯುವ ಚೇತನ ಶಿಶುವು ಎಂಟು ಒಂಭತ್ತನೆಯ ತಿಂಗಳಿನಲ್ಲಿ ಗರ್ಭದಲ್ಲಿರುವಾಗಲೇ ಆತ್ಮ ಜ್ಯೋತಿಯ ಸಾಕ್ಷಾತ್ಕಾರವನ್ನು ಪಡೆಯುತ್ತದೆಯೆಂದು ಗರ್ಭೋಪನಿಷತ್ತು ತಿಳಿಸುತ್ತದೆ. ಮುಂದೆ ಭೂಪತನ ಹೊಂದಿ ತಾನು ಮಾಯಾಜಾಲಕ್ಕೆ ಸಿಕ್ಕಿಬೀಳುವುದನ್ನು ಯೋಚಿಸಿ ಆ ಜೀವವು ತತ್ತರಿಸುತ್ತದೆ. ಗರ್ಭದಿಂದ ಬಿಡುಗಡೆ ಹೊಂದಿದಮೇಲೆಯೂ ಆಗ ತಾನು ಕಂಡ ಬ್ರಹ್ಮಜ್ಯೋತಿಯನ್ನೇ ಶರಣುಹೊಂದುವುದಾಗಿ ಪ್ರತಿಜ್ಞೆಮಾಡಿಕೊಂಡರೂ, ವೈಷ್ಣವೀ ಮಾಯೆಗೆ ಸಿಕ್ಕಿದ ತನ್ನ ಈ ಪ್ರತಿಜ್ಞೆಯನ್ನು ಮರೆತೇ ಬಿಡುತ್ತದೆ. ಆ ಜ್ಯೋತಿರ್ಮಯ ದೃಶ್ಯದಮೇಲೆ ಒಂದು ತೆರೆ ಬೀಳುತ್ತದೆ. "ತಮಸೋ ಮಾ ಜ್ಯೋತಿರ್ಗಮಯ"  ಎಂಬುದೇ ಮಹರ್ಷಿ ಹೃದಯದಲ್ಲಿ ಮೊಳುಗುತ್ತಿರುವ ಪ್ರಾರ್ಥನೆ- ಆಕಾಂಕ್ಷೆ. ಹುಟ್ಟಿದ ಶಿಶುವನ್ನು ಬಂಧು ಬಳಗದವರು ತಮ್ಮ ತಮ್ಮ ಭಾವಗಳಿಂದ ಆಕರ್ಷಿಸಿದಂತೆಯೆಲ್ಲಾ ಅದರ ಜೀವನವು ಕೇವಲ ಲೌಕಿಕ ವ್ಯಾಪಾರಗಳ ಕಡೆ ಹರಿದು ಬೆಳೆಯುತ್ತದೆ. ಆದರೆ, ಲೋಕದ ವ್ಯಾಪಾರಗಳನ್ನು ಅನಿವಾರ್ಯವಾಗಿ ನಡೆಸುತ್ತಿದ್ದರೂ, ಆತ್ಮಜ್ಯೋತಿಯತ್ತ ಜೀವನವು ಸಾಗಬೇಕೆಂಬುದೇ ಮಹರ್ಷಿ ಸಂಸ್ಕೃತಿಯ ಆದರ್ಶ. ಆದ್ದರಿಂದಲೇ ಸೂತಿಕಾಗೃಹದಲ್ಲಿ ತ್ರಿಕೋಣಾಕಾರವಾದ ಹಣತೆಯಲ್ಲಿ ಅಂಗುಷ್ಠಮಾತ್ರ ಜ್ಯೋತಿಯನ್ನು ಸೂಚಿಸುವಂತಹ ದೀಪಶಿಖೆಯನ್ನು ಹೊತ್ತಿಸಿಡುವುದು ನಮ್ಮ ಭಾರತದಲ್ಲಿ ಪ್ರಾಚೀನ ಪರಂಪರೆಯಲ್ಲಿ ಬಂದಿದೆ. ಒಮ್ಮೆ ಕಣ್ಣುಬಿಟ್ಟು ಆ  ದೀಪಶಿಖೆಯನ್ನು ನೋಡಿದ ಕೂಡಲೇ ಶಿಶುವು ಸಂತೋಷದಿಂದ ನಲಿಯುವುದನ್ನು ತಾಯಂದಿರು ಚೆನ್ನಾಗಿ ತಿಳಿಯಬಲ್ಲರು. ಆತ್ಮಜ್ಯೋತಿಯ ಸ್ಮರಣೆಯುಂಟಾಗುವುದರಿಂದಲೇ ಶಿಶುವು ಸಂತೋಷಪಡುವುದು. ವಿದ್ಯುದ್ದೀಪಗಳ ವಿಜೃಂಭಣೆಯಿಂದ  ಕಣ್ಣು ಕೋರೈಸುವ  ಸನ್ನಿವೇಶಗಳನ್ನು ಕಂಡ ಆಧುನಿಕ ಭಾರತೀಯನು ನವೀನ ನಾಗರೀಕತೆಯ ಹಿರಿಮೆಯನ್ನು ಕೊಂಡಾಡಬಹುದು. ಆದರೆ, ಜೀವನದ ಸತ್ಯವನ್ನು ಮರೆಸುವ ಈ ನವೀನ ಸಂಸ್ಕೃತಿಯು ವಸ್ತುತಃ ವಿಕೃತಿಯೇ ಸರಿ.

ಇದೇ ರೀತಿ ಮಹರ್ಷಿಗಳ ಸತ್ಯದರ್ಶನದ ದೃಷ್ಟಿಯನ್ನು ಹೊಂದಿ ಅವರ ಅಮರ ಸಂಸ್ಕೃತಿಯ ತತ್ತ್ವಗಳನ್ನು ಅರಿತರೇ ನಾವು ನಿಜವಾಗಿ "ಭಾರತ"ರೆನಿಸುತ್ತೇವೆ. ಮಹರ್ಷಿಗಳ ವಂಶದವರಾದ  ಭಾರತೀಯರು ಮತ್ತೆ ಮತ್ತೆ ಆ ಅಮರಸಂಸ್ಕೃತಿ ಸಂಪತ್ತನ್ನು ಜೀವನದಲ್ಲಿ ಬೆಳಗಿಸಿಕೊಂಡು ಧನ್ಯರಾಗುವಂತಾಗಲಿ.
||ಮಂಗಳಂ||

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ : ೦೩ ಸಂಚಿಕೆ: ೦೨ ಡಿಸೆಂಬರ್ :೧೯೮೦ ರಲ್ಲಿ ಪ್ರಕಟವಾಗಿದೆ.