Sunday, September 13, 2020

ಆರ್ಯಸಂಸ್ಕೃತಿ ದರ್ಶನ - 10 (Arya Samskruti Darshana - 10)

ಸರ್ವಧರ್ಮ ಸಮನ್ವಯ
ಲೇಖಕರು : ಪೂಜ್ಯ ವಿದ್ವಾನ್ ಶೇಷಾಚಲ ಶರ್ಮ 



ಧರ್ಮ ಎಂಬ ಶಬ್ಧವನ್ನು ಕೇಳಿದ ಕೂಡಲೇ ಮೊದಲಿಗೆ ನಮ್ಮ ಬುದ್ಧಿಗೆ ತೋರುವುದು ಹಿಂದೂ ಧರ್ಮ, ಮಹಮ್ಮದೀಯ ಧರ್ಮ, ಕ್ರಿಶ್ಚಿಯನ್ ಧರ್ಮ, ಮುಂತಾದವು. ಇದಕ್ಕೆ ಕಾರಣ ಆಂಗ್ಲ ಭಾಷೆಯ ರಿಲಿಜಿಯನ್ ಎಂಬ ಪದಕ್ಕೆ ಪರ್ಯಾಯವಾಗಿ ಧರ್ಮ ಎಂಬ ಶಬ್ಧವು ರೂಢಿಗೆ ಬಂದಿರುವುದೇ ಆಗಿದೆ. ಆಧುನಿಕ ವೈಜ್ಞಾನಿಕ ಸಂಪರ್ಕವಿಧಾನಗಳು ಪ್ರಪಂಚದ ಜನಾಂಗಗಳ ಭೌಗೋಳಿಕ ದೂರಗಳನ್ನು ತೊಡೆದು ಹಾಕಿ ಮಾನವರ ಪರಸ್ಪರ ಸಂಬಂಧ ಮತ್ತು ವ್ಯವಹಾರಗಳನ್ನು ಬಹಳ ಮಟ್ಟಿಗೆ ಸಮೀಪಗೊಳಿಸಿಬಿಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಜನಾಂಗದ ಧರ್ಮ, ಆಚಾರ ಮತ್ತು ವ್ಯವಹಾರಗಳು ಮತ್ತೊಂದು ಜನಾಂಗದ ಧರ್ಮ, ಆಚಾರ ಮತ್ತು ವ್ಯವಹಾರಗಳಿಂದ ಪ್ರಭಾವಿತವಾಗುವುದು ಸಹಜವಾಗಿಯೇ ಇದೆ. ಸಮಾಜಗಳಲ್ಲಿ ಪರಸ್ಪರ ಸಹಾನುಭೂತಿ, ತಾಳ್ಮೆಗಳು ಇರುವವರೆಗೂ ಬೇರೆ ಬೇರೆ ಧರ್ಮಗಳ ಪ್ರಭಾವಗಳು ನೆಮ್ಮದಿಯ ಜೀವನಕ್ಕೆ ತೊಡಕನ್ನುಂಟುಮಾಡುವುದಿಲ್ಲ. ಆದರೆ ಮಾನವ ಪ್ರಕೃತಿಯು ಸರ್ವತ್ರ ಸಮರಸವಾದುದೆಂದು ಹೇಳಲಾಗುವುದಿಲ್ಲ, ಕೆಲವೊಮ್ಮೆ ಧಾರ್ಮಿಕ ಮತಾಂದತೆಯು ಉಲ್ಬಣಗೊಂಡು ಸಾಮಾಜಿಕ ಮರ್ಯಾದೆಗಳು ಅಸ್ತವ್ಯಸ್ತವಾಗುತ್ತವೆ. ಧಾರ್ಮಿಕ ಸುಧಾರಕರೆನ್ನಿಸಿಕೊಂಡ ಕೆಲವು ವಿಶಿಷ್ಟ ವ್ಯಕ್ತಿಗಳು ಸಮಾಜದ ಒಳಿತನ್ನು ಸಾಧಿಸುವ ಉದ್ದೇಶದಿಂದ ಸರ್ವಧರ್ಮ ಸಮನ್ವಯ ವಾದವನ್ನು ಮುಂದಿಟ್ಟು ಜನತೆಗೆ ಹಿತೋಪದೇಶವನ್ನು ಮಾಡ ಹೊರಟರೂ ಅದು ಸಂಪೂರ್ಣ ಫಲಕಾರಿಯಾಗಿದೆ ಎಂದು ಹೇಳಲಾಗುವುದಿಲ್ಲ. ಈ ಸ್ಥಿತಿಯನ್ನು ಗಮನಿಸಿ ಕೆಲವು ರಾಷ್ಟ್ರಗಳಂತೂ ಧರ್ಮರಹಿತ ಅಥವಾ ಸೆಕ್ಯುಲರ್ ರಾಜ್ಯದ ಸಿದ್ಧಾಂತವನ್ನು ತಾಳಿವೆ. ಸೆಕ್ಯುಲರ್ ರಾಜ್ಯ ವ್ಯವಸ್ತೆಯನ್ನುಳ್ಳವೆನಿಸುವ ರಾಷ್ಟ್ರಗಳಲ್ಲೂ ಸಮಾಜದ ಸ್ತರದಲ್ಲಿ ಧಾರ್ಮಿಕ ಸಹನೆ-ಸಹಾನುಭೂತಿಗಳು ನೆಲೆಸಿವೆ ಎಂದು ಹೇಳಿಕೊಳ್ಳುವುದು ಕಷ್ಟವೇ ಎಂದು ಹೇಳಬಹುದು. ರಾಜಕೀಯ ದೃಷ್ಟಿಯಿಂದ ಸರ್ವಧರ್ಮ ಸಮನ್ವಯ ಸಿದ್ಧಾಂತವನ್ನು ವಿಮರ್ಶಿಸುವುದು ಪ್ರಕೃತ ಈ ಲೇಖನದ ಉದ್ದೇಶವಲ್ಲ. ಅಂತೂ ಮಾನವ ಪ್ರಕೃತಿಯು ಸಹಜವಾಗಿ ವೈಷಮ್ಯಯುಕ್ತವಾಗಿರುವುದರಿಂದ, ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಸರ್ವಧರ್ಮ ಸಮನ್ವಯದ ವಾದವು ಎಷ್ಟುಮಟ್ಟಿಗೆ ಸ್ಥಿರವಾಗುವುದೆಂಬುದು ಸಮಸ್ಯೆಯೇ ಆಗಿರುತ್ತದೆ. ಮಾನವ ಸಮಾಜವೇ ಏಕೆ, ಸಚೇತನವಾದ ಜೀವಿಗಳು ಮತ್ತು ಜಡ ವಸ್ತುಗಳಲ್ಲಿಯೂ ಕೂಡ ಪ್ರಕೃತಿ ವೈಷಮ್ಯದ ಕಾರಣದಿಂದ ಏರು ಪೇರುಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ಉಲ್ಬಣಗೊಂಡಾಗ ಜೀವನ ಮರ್ಯಾದೆಗಳು ಡೋಲಾಯಮಾನವಾಗುತ್ತವೆ.

ಧಾರ್ಮಿಕ ಸಹನೆಯನ್ನು ಬೋಧಿಸುವಾಗ ಧರ್ಮದ ಯಥಾರ್ಥ ಸ್ವರೂಪವನ್ನು ಅರಿತಿರಬೇಕು. ಕಾಲ, ದೇಶ, ಪ್ರಕೃತಿ ಮತ್ತು ಪರಿಸ್ಥಿತಿಗಳ ವಶದಿಂದ ಸಹಜವಾಗಿಯೇ ರೂಪಭೇದವನ್ನು ತಾಳುವ ಧರ್ಮವನ್ನು ಸಮನ್ವಯಗೊಳಿಸುವ ಪ್ರಯತ್ನದಲ್ಲಿ ವಿವೇಕ ಮತ್ತು ಜಾಗರೂಕತೆಗಳಿರಬೇಕು. ಧರ್ಮ ಸಮನ್ವಯ ಸಿದ್ಧಾಂತವನ್ನು ಯಾವ ಪ್ರಕರಣಕ್ಕೆ ಹೊಂದಿಸಬೇಕು, ಯಾವ ಪ್ರಕರಣದಲ್ಲಿ ಧರ್ಮ ಸಮನ್ವಯ ಸಿದ್ಧಾಂತವು ಫಲಕಾರಿಯಾಗುವುದಿಲ್ಲ ಎಂಬುದರ ಬಗ್ಗೆ ದೀರ್ಘದರ್ಶಿಯಾದ ವಿವೇಚನೆಯಿರಬೇಕು. ಇಲ್ಲದಿದ್ದರೆ ಸಮನ್ವಯವನ್ನು ಮಾಡಹೊರಟು ವೈಷಮ್ಯ ವಿರೋಧಗಳನ್ನು ಮತ್ತಷ್ಟು ಉಲ್ಬಣಗೊಳಿಸಿ ಸಾಮಾಜಿಕ ನೆಮ್ಮದಿಗೆ ಭಂಗ ಉಂಟುಮಾಡಿದಂತಾಗುತ್ತದೆ. ಉದಾಹರಣೆಗೆ ಭಗವದ್ಗೀತೆಯಲ್ಲಿ "ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ| ಶುನಿಚೈವ ಶ್ವಪಾಕೇಚ ಪಂಡಿತಾಃ ಸಮ ದರ್ಶಿನಃ ||"  (ವಿದ್ಯಾ ವಿನಯಗಳಿಂದ ಕೂಡಿದ ಬ್ರಾಹ್ಮಣ, ಗೋವು, ಆನೆ, ನಾಯಿ, ನಾಯಿಯನ್ನು ತಿನ್ನುವವ—ಇವರೆಲ್ಲರ ವಿಷಯದಲ್ಲಿಯೂ ಪಂಡಿತರು ಸಮದರ್ಶಿಗಳಾಗಿರುತ್ತಾರೆ) ಎಂಬ ಸಮದರ್ಶನ ಸಿದ್ಧಾಂತವು ಮಂಡಿಸಲ್ಪಟ್ಟಿದೆ. ಈ ಸಮದರ್ಶನದ ಯಥಾರ್ಥ ಸ್ವರೂಪವನ್ನು ಗಮನಿಸದೆ, ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಲೋಕ ಜೀವನದ ವಿಧಾನಗಳನ್ನು ಆದರ್ಶವಾಗಿಟ್ಟುಕೊಂಡು ಸಮನ್ವಯ ಮಾಡಹೊರಟರೆ  "ವಿನಾಯಕಂ ಪ್ರಕುರ್ವಾಣೋ ರಚಯಾಮಾಸ ವಾನರಂ" ಎಂಬ ಗಾದೆಗೆ ಅವಕಾಶ ಕೊಟ್ಟಂತಾಗುತ್ತದೆ. ಮೇಲಿನ ಗೀತಾ ಶ್ಲೋಕದಲ್ಲಿ ನಿರ್ದಿಷ್ಟರಾದ ಬ್ರಾಹ್ಮಣ, ಗೋವು, ಆನೆ, ನಾಯಿ, ನಾಯಿಯನ್ನು ತಿನ್ನುವವ—ಇವರನ್ನು ಸಮ ದೃಷ್ಟಿಯಿಂದ ಭಾವಿಸಬೇಕು ಎಂಬ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಒಂದು ಸಭೆ ಸೇರಿಸಿ ಇವರೆಲ್ಲರಿಗೂ ಸಮಾನ ಗೌರವವನ್ನು ಸಲ್ಲಿಸುವುದು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಪ್ರಾಯೋಗಿಕವಾಗುವುದು ಸಾಧ್ಯವೇ? ಒಂದೇ ವೇದಿಕೆಯ ಮೇಲೆ ಉತ್ತಮವಾದ ಸಮಾನ ಕುರ್ಚಿಗಳನ್ನು ಆಸನಗಳನ್ನಾಗಿ ಕಲ್ಪಿಸಿ, ಸನ್ಮಾನಿತರಾಗುವ ಇವರೆಲ್ಲರನ್ನೂ ಕೂರಿಸುವುದು ಎಷ್ಟು ಹಾಸ್ಯಸ್ಪದವಾಗುತ್ತದೆ| ತೊಡಲು ಒಂದೇ ವಿಧವಾದ ಹೊಸ ವಸ್ತ್ರಗಳನ್ನು ಅವರಿಗೆ ಅರ್ಪಿಸಿದರೆ ಅವುಗಳನ್ನು ಅವರು ಧರಿಸುವುದೆಂತು? ಅಂತೆಯೇ ಅವರೆಲ್ಲರಿಗೂ ಸಮಾನವಾದ ಆಹಾರ ಪಾನೀಯಗಳನ್ನು ಒದಗಿಸಿ ಸಮದೃಷ್ಟಿಯನ್ನು ತೋರಿಸಿದರೆ ಎಂತಹ ಆಭಾಸವಾಗುತ್ತದೆ? ಆದ್ದರಿಂದ ಇಲ್ಲಿ ಗೀತೆಯ ಸಮದರ್ಶನದ ತತ್ತ್ವವೇನು? ಎಂಬುದನ್ನು ಬಹಳ ವಿವೇಕದಿಂದ ಅವಧರಿಸಬೇಕು. ಮೇಲಿನ ಉಪಚಾರಗಳಿಂದ ಗೀತೆಯ ಸಮದರ್ಶನ ಸಿದ್ಧಾಂತವು ಪ್ರಯೋಗಕ್ಕೆ ಬರುವುದಿಲ್ಲವೆಂದು ಗೀತೆಯನ್ನು ಹಳಿಯಹೊರಟರೆ ತಪ್ಪು ಯಾರದು? ಹಾಗಾದರೆ ಈ ಸಮದರ್ಶನ ಸಿದ್ಧಾಂತದ ಸಮಸ್ಯೆಯನ್ನು ಬಿಡಿಸುವುದೆಂತು ಎಂಬ ಪ್ರಶ್ನೆಯು ಸಹಜವಾಗಿಯೇ ಏಳಬಹುದು. ಗೀತಾಚರ್ಯನ ಹೃದಯವನ್ನು ಅರಿತುಕೊಂಡಾಗ ಮಾತ್ರ ಸಮರ್ಪಕವೂ ಸಮಾಧಾನಕರವೂ ಆದ ಉತ್ತರವು ದೊರಕುತ್ತದೆ. ಮೇಲೆ ನಿರ್ದಿಷ್ಟರಾದ ವ್ಯಕ್ತಿಗಳ ರೂಪ, ಸ್ವಭಾವ, ಆಹಾರ, ವಿಹಾರ, ವ್ಯವಹಾರಗಳೆಲ್ಲಾ ವಿಭಿನ್ನವಾಗಿದ್ದರೂ ಅವರಲ್ಲಿ ಎಲ್ಲ ಕಾಲ, ಎಲ್ಲ ಪರಿಸ್ಥಿತಿಗಳಲ್ಲೂ ಸಮಾನವಾಗಿ ಬೆಳಗುತ್ತಿರುವ ಚೈತನ್ಯ ತತ್ತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡು, ಆ ಜೀವವನ್ನು ಹತಗೊಳಿಸದಂತೆ ಅದಕ್ಕೆ ಹಿತವನ್ನುಂಟು ಮಾಡುವಂತಹ ಉಪಚಾರಗಳನ್ನು ಸಲ್ಲಿಸಿದರೆ, ಸಮದರ್ಶನ ಸಿದ್ಧಾಂತವನ್ನು ವಿರೋಧವಿಲ್ಲದಂತೆ ಪಾಲಿಸಿದಂತಾಗುತ್ತದೆ. ಇದರಿಂದ ವ್ಯವಹಾರಕ್ಕೂ ಬಾಧೆಇಲ್ಲ. ಪರಮಾರ್ಥಕ್ಕೂ ಹಾನಿ ಇಲ್ಲ. ಸಮ ಎಂದರೆ ಸರ್ವಭೂತಗಳಲ್ಲಿಯೂ ಅವಿಚ್ಚಿನ್ನವಾಗಿ ಬೆಳಗುತ್ತಿರುವ ಬ್ರಹ್ಮ ಚೈತನ್ಯ ಎಂಬುದಾಗಿ ಭಾಗವತದಲ್ಲಿ ವರ್ಣಿತವಾಗಿದೆ. ಸರ್ವಭೂತಗಳಲ್ಲಿಯೂ ಬ್ರಹ್ಮದರ್ಶನವನ್ನು ಮಾಡುವವನೇ ಸಮದರ್ಶಿ ಎನಿಸುವನು. ಇಂತಹ ಸಮದರ್ಶಿಯು ಮಾತ್ರ ಸಮಸ್ತ  ಭೂತ ಗಳಲ್ಲಿಯೂ ಬೆಳಗುತ್ತಿರುವ ಬ್ರಹ್ಮ ಶಕ್ತಿಯ ವಿಲಾಸಕ್ಕೆ ವಿರೋಧವುಂಟಾಗುವಂತಹ ಕಾರ್ಯವನ್ನು ಮಾಡುವುದಿಲ್ಲ. ಧರ್ಮ ಸಮನ್ವಯವನ್ನು ಅಪೇಕ್ಷಿಸುವವರಿಗೂ ಈ ದೃಷ್ಟಿ ಇರಬೇಕು. ವ್ಯವಹಾರದಲ್ಲಿ ಆಚಾರ ರೂಪದಲ್ಲಿರುವ ಕ್ರಿಯಾ ಕಲಾಪಗಳನ್ನೇ ಧರ್ಮವೆಂದು ಭಾವಿಸಿ ಅಂತಹ ಕ್ರಿಯಾ ಕಲಾಪಗಳನ್ನು ಒಂದರೊಡನೆ ಮತ್ತೊಂದನ್ನು ಸಂಕರಿಸಿ ಧಾರ್ಮಿಕ ಸಮನ್ವಯವನ್ನು ಸಾಧಿಸುವುದು ಮರೀಚಿಕಾ ಜಲದಿಂದ ಬಾಯಾರಿಕೆ ಇಂಗಿಸಿಕೋಂಡಂತೆ. ಸಮಸ್ತ ಭೂತಗಳನ್ನೂ ಒಂದಕ್ಕೊಂದು ವಿರೂಧವಿಲ್ಲದಂತೆ ಧರಿಸಿರುವ ಮಹಾಶಕ್ತಿಯೇ ಮೂಲ ಧರ್ಮ.  ಅದೇ ಕಾಲ, ದೇಶ, ದೇಹ, ಪರಿಸ್ಥಿತಿಗಳ ವಶದಿಂದ ಬೇರೆ ಬೇರೆಯಂತೆ ತೋರುತ್ತದೆ. ಆ ಮೂಲ ಸದ್ವಸ್ತುವು ಮರೆಯಾಗದಂತೆ ಜೀವನದಲ್ಲಿ ಬೆಳೆದು ಬಂದಿರುವುದೇ ಸನಾತನ ಧರ್ಮ. ಮೇಲುನೋಟದಿಂದ ಧರ್ಮ ಸ್ವರೂಪವನ್ನು ನಿರ್ಣಯಿಸುವುದು ಕಷ್ಟ. ಆದ್ದರಿಂದಲೇ " ಧರ್ಮಸ್ಯ ತತ್ತ್ವಂ ನಿಹಿತಂಗುಹಾಯಾಮ್" ಎಂದು ಹೇಳುವುದು. ಧರ್ಮ ಸಮನ್ವಯ ಮಾಡುವ ಪ್ರಯತ್ನದಲ್ಲಿ ಧರ್ಮ ಸಂಕರಕ್ಕೆ ಅವಕಾಶ ಮಾಡಿಕೊಟ್ಟು ಮೂಲ ಧರ್ಮ ಮರೆಯಾಗುವಂತೆ ಮಾಡಬಾರದು. ಮೂಲ ಧರ್ಮವು ಅವಿಕೃತವಾದ ಒಂದೇ ತತ್ತ್ವವಾದರೂ ಧರ್ಮದ ಪ್ರತೀಕಗಳು ವಿಭಿನ್ನವಾಗಿವೆ. ಪ್ರತೀಕಗಳನ್ನು ಸಮನ್ವಯಗೊಳಿಸಿದರೆ ಧರ್ಮ ಸಮನ್ವಯವನ್ನು ಸಾಧಿಸಿದಂತೆ ಆಗುವುದಿಲ್ಲ. " ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ" ಎಂಬ ಭಗವದ್ವಾಣಿಯ ಅಭಿಪ್ರಾಯವನ್ನು ಚೆನ್ನಾಗಿ ಅರಿಯಬೇಕು. ವ್ಯವಹಾರದಲ್ಲಿ ಕಾಣ ಬರುವ ಧರ್ಮಾಚಾರಗಳನ್ನು ಬಿಟ್ಟುಬಿಡಬೇಕೆಂದು ಈ ಮಾತಿನ ತಾತ್ಪರ್ಯವಲ್ಲ.  ದೇಹಧರ್ಮ, ಇಂದ್ರಿಯ ಧರ್ಮ, ಮನೋಧರ್ಮ ಮುಂತಾದುವುಗಳಲ್ಲಿಯೇ ಆಸಕ್ತನಾಗಿರುವವನಿಗೆ ಆತ್ಮ ದರ್ಶನವಿಲ್ಲ. ದೇಹೇಂದ್ರಿಯಾದಿ ಧರ್ಮಗಳಲ್ಲಿಯೇ ಆಸಕ್ತನಾದವನಿಗೆ ಲೋಕದ ಕಡೆಗೆ ಆಕರ್ಷಣೆಯೇ ಪ್ರಬಲವಾಗಿರುತ್ತದೆ. ದೇಹಾದಿ ಧರ್ಮಗಳನ್ನು ದಾಟಿದರೆ ನಿರುಪಾಧಿಕವಾದ ಆತ್ಮಧರ್ಮವೊಂದೇ ಬೆಳಗುತ್ತದೆ. ಮೂಲ ತತ್ತ್ವವನ್ನು ಅರಿತವನು ಮಾತ್ರ ಧರ್ಮ ಸಮನ್ವಯದ ರಹಸ್ಯವನ್ನು ತಿಳಿದಿರುತ್ತಾನೆ.

"ಕತ್ತಲಲ್ಲಿ ಕಣ್ಣು ತೆರೆದು ನೋಡಿದರೂ ಏನೂ ಕಾಣುವುದಿಲ್ಲ. ಏನಾದರೂ ಕಾಣಬೇಕಾದರೆ ಬೆಳಕಿನ ಸಹಾಯ ಬೇಕು. ಅಂತೆಯೇ ಜ್ಞಾನದ ಬೆಳಕಿನಲ್ಲಿ ಜೀವನವನ್ನು ನೋಡಿ".
"ಜ್ಞಾನವನ್ನು ಹೊಂದುವ ವಿಧಾನವೇ ಯೋಗ. ಅದನ್ನು ಹೊಂದುವುದು ಸ್ತ್ರೀ ಪುರುಷರೆಲ್ಲರ ಹಕ್ಕು ಮತ್ತು ಕರ್ತವ್ಯ. ಜ್ಞಾನ ದೀಪವನ್ನು ನೋಡುವ ಕಣ್ಣೇ ಸತ್ಯವನ್ನು ನೋಡುವ ಕಣ್ಣು. ಅದನ್ನು ನೋಡಿ ಮಾಡುವ ಕೆಲಸವೇ ಧರ್ಮದ ಕೆಲಸ."

" ದೇಹ ಧರ್ಮ, ಇಂದ್ರಿಯ ಧರ್ಮ, ಮನೋಧರ್ಮ, ಬುದ್ಧಿಧರ್ಮ, ಎಲ್ಲ ಧರ್ಮಗಳೂ ಆತ್ಮನಲ್ಲಿ ನಿಲ್ಲಬೇಕು. ಹೀಗೆ ಎಲ್ಲ ಧರ್ಮಗಳೂ ಆತ್ಮ ಧರ್ಮದಲ್ಲಿ ಸಮಾನವಾಗಿ ಸಮನ್ವಯಗೊಂಡಾಗ ಅಲ್ಲಿ ಮಾತ್ರ ಸರ್ವಧರ್ಮ ಸಮನ್ವಯ ಸಾಧ್ಯ."

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಮಾರ್ಚ್ ಸಂಪುಟ:3 ಸಂಚಿಕೆ:5 ರಲ್ಲಿ ಪ್ರಕಟವಾಗಿದೆ.