ಒಮ್ಮೆ ಕಾಡಿನಲ್ಲಿ ಒಂದು ಗಂಡಭೇರುಂಡ ಪಕ್ಷಿಯು ಆಹಾರಕ್ಕಾಗಿ ಅರಣ್ಯದಲ್ಲೆಲ್ಲಾ ಹುಡುಕಾಡುತ್ತಿತ್ತು. ಮಾವಿನ ಹಣ್ಣಿನ ಮರವೊಂದು ಅದರ ಕಣ್ಣಿಗೆ ಕಾಣಿಸಿತು. ಮರದಕೆಳಗೆ ಬಿದ್ದ ಮಾವಿನಹಣ್ಣುಗಳನ್ನು ಎಡತಲೆಯ ಕೊಕ್ಕಿನಿಂದ ತಿನ್ನುತ್ತಿರಲು, ಬಲ ತಲೆಯು ಮರದ ಮೇಲಿನ ರಸಭರಿತ ಹಣ್ಣುಗಳನ್ನು ಕಂಡಿತು. ಅದರ ಮೇಲೇರಿ ಬಲತಲೆಯಿಂದ ರಸಭರಿತ ಹಣ್ಣುಗಳನ್ನು ತಿನ್ನತೊಡಗಿತು. ಹೀಗೆಯೇ ಕೆಲದಿನಗಳು ಎಡತಲೆಯು ಕೆಳಗೆಬಿದ್ದ ಹಣ್ಣುಗಳನ್ನು ತಿನ್ನುವುದನ್ನು ಮುಂದುವರೆಸಿತ್ತು, ಕಾರಣ ಕೆಳಗೆ ಬಿದ್ದು ಕೊಳೆತ ಹಣ್ಣಿನ ಹುಳಿರುಚಿಗೆ ಅದು ಒಗ್ಗಿಕೊಂಡಿತ್ತು. ಕಾಲಕ್ರಮೇಣ ಕೆಳಗೆಬಿದ್ದ ಹಣ್ಣುಗಳು ಖಾಲಿಯಾದವು. ಬಲತಲೆಯು ಯಾವಾಗಲೂ ರಸಭರಿತವಾದ ಮರದ ಮೇಲಿನ ಹಣ್ಣುಗಳನ್ನು ಮಾತ್ರ ತಿನ್ನುತಿತ್ತು. ಅವು ಖಾಲಿಯಾಗದೇ, ಅದಕ್ಕೆ ನಿರಂತರವಾಗಿ ರಸಭರಿತವಾದ ಹಣ್ಣುಗಳು ಸಿಕ್ಕುತ್ತಿದ್ದವು. ಹೋಗುತ್ತಿದ್ದುದು ಒಂದೇಹೊಟ್ಟೆಗಾದರೂ ಈ ವೈಶಿಷ್ಟ್ಯದಿಂದ ಕೂಡಿದ ಗಂಡಭೇರುಂಡ ಇದಾಗಿತ್ತು.
ಇದು ನಮ್ಮ ಕಥೆಯೇ. ಅರಣ್ಯವೆಂದರೆ ಈ ಸೃಷ್ಟಿ. ಗಂಡಭೇರುಂಡ ನಾವೇ. ಇನ್ನು ಎರಡುತಲೆಗಳೆಂದರೆ, ಇಂದ್ರಿಯ ಸುಖ ಮತ್ತು ಅತೀಂದ್ರಿಯ ಸುಖಪಡೆಯಲು ಇರುವ ನಮ್ಮ ಶರೀರದಲ್ಲಿನ ವ್ಯವಸ್ಥೆ. ಕೆಳಗೆಬಿದ್ದ ಮಾವಿನ ಹಣ್ಣು ತಕ್ಷಣವೇ ಕಾಣುವ ಇಂದ್ರಿಯ ಸುಖ, ಕಾಲಕ್ರಮೇಣ ಕೆಳಗೆಬಿದಿದ್ದ ಹಣ್ಣುಗಳು ಖಾಲಿಯಾಗುವುದೆಂದರೆ, ಇಂದ್ರಿಯ ಸುಖವು ಶಾಶ್ವತವಲ್ಲ ಮತ್ತು ದುಃಖಮಿಶ್ರಿತ. ಬಲತಲೆ, ಮರದಮೇಲೆ ರಸಭರಿತ ಹಣ್ಣು ಕಂಡಿತು ಎಂದರೆ, ತಪಸ್ಯೆಯಿಂದ ಯೋಗದೃಷ್ಟಿಯಲ್ಲಿ ಊರ್ಧ್ವದಲ್ಲಿ ಕಾಣಬೇಕಾದ ಪರಂಜ್ಯೋತಿ ದರ್ಶನ. ಮೇಲೇರಿ ರಸಭರಿತವಾದ ಹಣ್ಣನ್ನೇ ತಿನ್ನುತ್ತಿತ್ತು ಎಂದರೆ ಬೇಕಾದಾಗ ಸ್ವ-ಇಚ್ಛೆಯಿಂದ ಯೋಗಮಾರ್ಗದಲ್ಲಿ ಹೋಗಿ ಪರಂಜ್ಯೋತಿಯಲ್ಲಿ ಲೀನವಾಗುತ್ತಿತ್ತು. ಆದರೂ ಖಾಲಿಯಾಗುತ್ತಿರಲಿಲ್ಲವೆಂದರೆ –ಪರಂಜ್ಯೋತಿಯ ಅನುಭವದ ಶಾಶ್ವತವಾದ ಪರಮಸುಖ. ಹೋಗುತ್ತಿದ್ದದ್ದು ಒಂದೇ ಹೊಟ್ಟೆ ಎಂದರೆ ಒಳಗಿರುವಜೀವಕ್ಕೆ. ಈ ವೈಶಿಷ್ಟ್ಯದಿಂದ ಕೂಡಿದ ಗಂಡಬೇರುಂಢವೆಂದರೆ, ಯೋಗ-ಭೋಗಾಯತನವಾದ ಈ ಶರೀರ. ಇಂತಹ ಜೀವನ ದೃಷ್ಟಿ ವಿರಳ. ಹಾಗೆಯೇ ಗಂಡಭೇರುಂಡವೂ ವಿರಳವೇ.
"ಜೀವನ ಒಂದು ಗಂಡ - ಭೇರುಂಡ ಪಕ್ಷಿಯಂತೆ ದ್ವಿಮುಖವಾದದ್ದು. ಒಂದು ಗಂಡ, ಇನ್ನೊಂದು ಭೇರುಂಡ. ಹೀಗೆ ದ್ವಿಮುಖ ಜೀವನದ ಈ ಪಕ್ಷಿ ಅಪ್ರತಿಹತವಾದ ನಡೆಯಿಂದ ದಿವಿಯನ್ನೂ ಭುವಿಯನ್ನೂ ಮುಟ್ಟಬಲ್ಲ ಭೂಸುರ ಪಕ್ಷಿಯಾಗಿದೆ. ಹೀಗೆಯೇ ಇಲ್ಲಿಯೂ ಏಕಶರೀರ, ಪ್ರವೃತ್ತಿ - ನಿವೃತ್ತಿ ಮಾರ್ಗಗಳೆಂಬ ದ್ವಿಮುಖ. ಎರಡಕ್ಕೂ ಹೊಂದಿಕೊಳ್ಳುವಂತೆ ಚತುರ್ಭದ್ರವನ್ನು ಸಾಧಿಸುವುದೇ ಧ್ಯೇಯ. ಅದಕ್ಕೊಸ್ಕರವಾಗಿ ಹೋರಾಟ, ಹಾರಾಟ ಎಲ್ಲವೂ ಇದೆ." ಎಂಬ ಯೋಗಿವರೇಣ್ಯ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯವಾಗಿದೆ.
ನಾವೆಲ್ಲರೂ, ನಮ್ಮ ದೇಶದ ಮಹರ್ಷಿಗಳಂತೆ ಯೋಗ-ಭೋಗಗಳಿಗೆ ಆಶ್ರಯವಾದ ನಮ್ಮಗಂಡಭೇರುಂಡ ರೂಪೀ ಶರೀರವನ್ನು ಇಹ-ಪರಜೀವನಗಳನ್ನು ಅನುಭವಿಸಲು ಯೋಗ್ಯವಾಗುವಂತೆ ಇಟ್ಟುಕೊಳ್ಳುವಂತಾಗಲಿ ಮತ್ತು ಮಹತ್ತರವಾದುದನ್ನು ಸಾಧಿಸುವಂತಾಗಲಿ.