Wednesday, September 9, 2020

ಮಾಡಿದ್ದುಣ್ಣೋ ಮಹಾರಾಯ (Madiddunno Maharya)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)

  

ಇದು ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ಸಾಮಾನ್ಯವಾಕ್ಯ.ಅಷ್ಟೇ ಅಸಾಮಾನ್ಯ ಅರ್ಥವನ್ನು ಒಳಗೊಂಡಿದೆ. ನಾವು ಮಾಡಿದ ಕರ್ಮವೇ ನಮಗೆ ಫಲವನ್ನು ನೀಡುತ್ತದೆ, ಅದನ್ನೇ ನಾವು ಅನುಭವಿಸಬೇಕು, ಹೊರತು ನಮ್ಮ ಸುಖದುಃಖಗಳಿಗೆ ಬೇರೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ನಮ್ಮ ಸುಖದುಃಖಗಳಿಗೆ ಕಾರಣ, ನಾವು ಮಾಡುವ ಕರ್ಮವೇ ಆಗಿದೆ ಎಂಬುದು ಈ ಮಾತಿನ ಅರ್ಥ. ಅದಕ್ಕೆ ರಾಮಾಯಣದ ಒಂದು ಪ್ರಸಂಗವನ್ನು ಗಮನಿಸಬಹುದು.

ದಶರಥ ಬೇಟೆಗಾಗಿ ಕಾಡಿಗೆ ಹೋಗಿದ್ದ. ಅಲ್ಲಿ ಶ್ರವಣಕುಮಾರನು ಅಂಧರಾದ ತನ್ನ ತಂದೆ-ತಾಯಿಯರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುತ್ತಿದ್ದ. ಅವರಿಗಾದ ಬಾಯಾರಿಕೆಯನ್ನು ಪರಿಹರಿಸುವ ದೃಷ್ಟಿಯಿಂದ ನೀರನ್ನು ತರಲು ನದಿಗೆ ಹೋದ. ಅಲ್ಲಿ ತಂಬಿಗೆಯಿಂದ ನೀರನ್ನು ತುಂಬುವಾಗ ಶಬ್ದವಾಗುತ್ತಿತ್ತು. ಈ ಶಬ್ದವನ್ನು ಕೇಳಿದ ದಶರಥನು ತನ್ನ ಶಬ್ದವೇದಿ ಬಾಣವನ್ನು ಯಾವುದೋ ಪ್ರಾಣಿ ಇರಬೇಕು ಎಂದು ಅಂದುಕೊಂಡು ಅತ್ತ ಬಿಟ್ಟನು. ಅದು ಶ್ರವಣಕುಮಾರನಿಗೆ ತಾಕಿ ಆತ ಪ್ರಾಣ ಬಿಡುವ ಸ್ಥಿತಿಯಲ್ಲಿ ಇದ್ದ. ಆ ಸಂದರ್ಭದಲ್ಲಿ ಬಂದ ದಶರಥನು ಕುಮಾರನ ಅವಸ್ಥೆಯನ್ನು ನೋಡಿ ತನ್ನಿಂದ ಆದ ಅಚಾತುರ್ಯ ಎಂದು ಮರುಗಿದನು. ಶ್ರವಣಕುಮಾರನ ಮಾತಿನಂತೆ ನೀರು ಕೊಡಲೆಂದು ದಶರಥನು ಅವನ ತಂದೆ ತಾಯಿಯ ಬಳಿಗೆ ಹೋದಾಗ ಮಗನ ಮರಣ ವಾರ್ತೆಯನ್ನು ತಿಳಿದು, ಅವರು ಅತ್ಯಂತ ಕ್ರೋಧದಿಂದ ದಶರಥನಿಗೆ ಶಾಪವನ್ನು ಇತ್ತರು -"ನೀನೂ ಕೂಡ ಒಮ್ಮೆ ಹೀಗೆ ಪುತ್ರವಿಯೋಗದಿಂದ ದುಃಖಿಸುವಂತೆ ಆಗಲಿ" ಎಂದು. ಇಲ್ಲಿ ದಶರಥನಿಗೆ ಶ್ರವಣಕುಮಾರನನ್ನು ಸಾಯಿಸಬೇಕೆಂದು ಯಾವುದೇ ಸಂಕಲ್ಪವಿರಲಿಲ್ಲ. ಆದರೂ ರಾಜನಾಗಿ ಬಾಣಪ್ರಯೋಗ ಮಾಡುವಾಗ ಅಸಾವಧಾನತೆ ತೋರಿದ. ಜೀವನದಲ್ಲಿ ಅಸಾವಧಾನತೆಯೇ ಕರ್ಮಪರಂಪರೆಗೆ ಕಾರಣವಾಗುತ್ತದೆ. ನಮಗೆ ಮೇಲ್ನೋಟದಲ್ಲಿ ದಶರಥನು ರಾಮನನ್ನು ಕಾಡಿಗೆ ಕಳಿಸಿದ. ಆಮೇಲೆ ರಾಮನ ವಿರಹದಿಂದ ಬಳಲಿ ಬಳಲಿ ಅವನು ಪ್ರಾಣವನ್ನು ಬಿಡುವಂತಾಯಿತು ಎನ್ನಿಸುತ್ತದೆ. ಇಲ್ಲಿನ ಹಿನ್ನೆಲೆ ಮತ್ತು ಮುನ್ನೆಲೆಯನ್ನು ವಿಚಾರಿಸಿದಾಗ ಅವನು ಮಾಡಿದ ಕರ್ಮದ ಫಲವೇ ಆಗ ಫಲಿಸಿದ್ದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇಲ್ಲಿ ಶ್ರವಣಕುಮಾರನ ತಂದೆ ತಾಯಂದಿರು ಅವನಿಗೆ ಶಾಪವಿತ್ತಂತೆ ಕಂಡರೂ ಕೂಡ ಅದು ವಿಧಿಯ ಲೆಕ್ಕಾಚಾರವೇ ಹೊರತು ಬೇರೇನೂ ಅಲ್ಲ. ದಶರಥನು ಉದ್ದೇಶ ಪೂರ್ವಕವಾಗಿ ಮಾಡದಿದ್ದರೂ ಅವನು ಅಸಾವಧಾನತೆಯಿಂದ ಮಾಡಿದ ಕರ್ಮಫಲವನ್ನು ಅವನು ಅನುಭವಿಸಲೇ ಬೇಕು. ಅಲ್ಲವೇ!.

ಅದಕ್ಕೆ ಶ್ರೀರಂಗ ಮಹಾಗುರುಗಳು ಹೀಗೆ ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದು. "ನಾವು ಮಾಡುವ ಪ್ರತಿಯೊಂದು ಕರ್ಮವೂ ಬ್ರಹ್ಮಾರ್ಪಿತವಾಗಬೇಕಾದರೆ ಅದಕ್ಕೆ ತಕ್ಕ ಯುಕ್ತಿ, ಯುಕ್ತಿಯನ್ನು ರೂಪಿಸುವಂತೆ ನಡೆಯುವ ಶಕ್ತಿ, ಇದರಲ್ಲಿ ಇರಬೇಕಾದ ನಿಜವಾದ ಅನುರಕ್ತಿ, ಕೊನೆಯಲ್ಲಿ ಮುಕ್ತಿ, ಅದಕ್ಕೆ ಅನುಕೂಲವಾದ ಮತ್ತು ಅವಿರೋಧವಾದ ಭುಕ್ತಿ ಇವೆಲ್ಲ ಧರ್ಮದೊಡನೆ ಹೊಂದಿಕೊಂಡಾಗ ಒಬ್ಬ ವ್ಯಕ್ತಿಗೆ ಸರ್ವತೋಭದ್ರವಾದ ಚತುರ್ಭದ್ರವಾದ ಒಂದು ಜೀವನ" ಎಂಬ ಕರ್ಮದ ಮರ್ಮವನ್ನು ಸುಂದರವಾಗಿ ನಿರೂಪಿಸಿದ್ದನ್ನು ಮರೆಯಲಾಗದು

ಸೂಚನೆ: 08/09/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.