Sunday, September 6, 2020

ಆರ್ಯಸಂಸ್ಕೃತಿ ದರ್ಶನ - 9 (Arya Samskruti Darshana - 9)

ಗುರು 
ಲೇಖಕರು :ಪ್ರೊ||ಎಸ್.ವಿ.ಚಾಮು


 
ಒಂದು ಪುರಾತನದೇಶದಲ್ಲಿ ಸಾಂಸ್ಕೃತಿಕ ಪರಿವರ್ತನೆಯುಂಟಾದಾಗ ಕೆಲವು ಘಟನೆಗಳು ಸಹಜವಾಗಿ ನಡೆಯುತ್ತವೆ. ಅವುಗಳಲ್ಲಿ ಮುಖ್ಯವಾದುದು ಹಳೆಯ ವಿಚಾರ, ಆಚರಣೆ, ನೀತಿ, ನಡತೆ ಮುಂತಾದವುಗಳಿಗೂ ಮತ್ತು ಹೊಸ ವಿಚಾರ ಮುಂತಾದವುಗಳಿಗೂ ಉಂಟಾಗುವ ಸಂಘರ್ಷ. ಹೊಸ ವಿಚಾರ ಇತ್ಯಾದಿಗಳನ್ನು ಪ್ರತೀಕಿಸುವವರು, ಹಳೆಯ ವಿಚಾರ ಇತ್ಯಾದಿಗಳ ಮೇಲೆ ಧಾಳಿ ನಡೆಸುವುದು ಅಂತಹ ಕಾಲಗಳ ಪ್ರೇಕ್ಷಣೀಯವಾದ ಚಟುವಟಿಕೆಯಾಗುತ್ತದೆ. ಈ ಧಾಳಿಯು ಅನೇಕಸ್ತರಗಳಲ್ಲಿ ನಡೆಯುತ್ತದೆ. ರಾಜಕೀಯಬಲ, ಸಾಹಿತ್ಯ, ವೃತ್ತಪತ್ರಿಕೆ, ಸಿನೇಮಾ ಮುಂತಾದವುಗಳು ಎಲ್ಲವೂ ಈ ಧಾಳಿಯಲ್ಲಿ ಭಾಗವಹಿಸುತ್ತವೆ. ಇದು ಈಗ ಐವತ್ತು ವರ್ಷಗಳಿಂದ ನಮ್ಮ ದೇಶದಲ್ಲಿ ನಿರಂತರವಾಗಿ ನಡೆದಿರುತ್ತದೆ. ಇಂದೂ ಅದು ಬಿರುಸಾಗಿಯೇ ನಡೆಯುತ್ತಿದೆ.

ಒಂದಾನೊಂದು ಕಾಲದಲ್ಲಿ ಅವು ಅರ್ಥವತ್ತಾಗಿದ್ದಾಗ, ಹಳೆಯ ವಿಚಾರ, ಆಚರಣೆ ಇತ್ಯಾದಿಗಳು ಹಲವು ಮುಖ್ಯವಾದ ಪದ(Key-words)ಗಳನ್ನು ಮುಂದಿಟ್ಟುಕೊಂಡೇ ತಮ್ಮನ್ನು ಪ್ರಸಾರಮಾಡಿಕೊಂಡವು. ಜೀವನದಲ್ಲಿ ಪದಗಳ ಪಾತ್ರವು ಎಷ್ಟು ಮಹತ್ವಪೂರ್ಣವಾದುದೆಂಬುದನ್ನು ನಾವು ತಿಳಿದೇ ಇರುತ್ತೇವೆ. ಈ ಸಂದರ್ಭದಲ್ಲಿ ನಾವು ಕ್ಯಾಪಿಟಲಸಂ, ಕಮ್ಯೂನಿಸಂ, ಸೋಷಲಿಸಮ್ ಮುಂತಾದ  ಪದಗಳನ್ನು ಸ್ಮರಿಸಿಕೊಳ್ಳಬಹುದು. ಅವು ಇಂದು ವ್ಯಾಪಕವಾದ ಬೇರೆ ಬೇರೆ ಜೀವನ ವ್ಯವಸ್ಥೆಗಳನ್ನು ಸೂಚಿಸುವಂತೆಯೇ ಹಿಂದಿನ ಕಾಲದ ವಿಚಾರಗಳೂ ಹಲವು ಪದಗಳನ್ನು ಆಶ್ರಯಿಸಿಯೇ ತಮ್ಮನ್ನು ವ್ಯಕ್ತಪಡಿಸಿಕೊಂಡವು. ಆದುದರಿಂದ ಹೊಸದನ್ನು ಬಯಸುವವರು, ಹಳೆಯದು ಹೋದ ಹೊರತು  ಹೊಸದು ಬರದು ಎಂದು ಭಾವಿಸಿ, ಹಳೆಯದನ್ನು ನಾಶಮಾಡಲು ಹಳೆಯ ಮೂಲ್ಯ, ದೃಷ್ಟಿ, ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುವ ಪದಗಳ ಕಡೆಗೆ ತಮ್ಮ ಕೂರಲಗುಗಳನ್ನು ಬಿಡುತ್ತಾರೆ.

ಪುರಾತನ ಭಾರತೀಯ ಸಂಸ್ಕೃತಿಯಲ್ಲಿ ಅಂತಹ ಹಲವು ಪದಗಳುಂಟು. ದೇವರು, ಗುರು, ಧರ್ಮ, ವರ್ಣ, ಆಶ್ರಮ, ಸಂಸ್ಕಾರ, ಯಜ್ಞ ಮುಂತಾದವು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತವೆ. ಆದುದರಿಂದಲೇ ಆಧುನಿಕ ವಿಚಾರಶೀಲರು ಈ ಪದಗಳನ್ನು ಪದೇ ಪದೇ ಕೆಣಕುತ್ತಾರೆ. ಆ ರೀತಿ ಮಾಡುವುದರ ಪ್ರಭಾವವು ಎಷ್ಟು ಮಾರಕವಾಗಿರಬಲ್ಲದು, ಅದರಿಂದ ಜನರ ನಂಬಿಕೆಗೆ ಎಷ್ಟು ಆಳವಾದ ಧಕ್ಕೆಯುಂಟಾಗಬಹುದು ಎಂಬುದನ್ನು ನಮ್ಮ ವಾಚಕರು ತಿಳಿದೇ ಇರುತ್ತಾರೆ.

ಅವುಗಳಲ್ಲಿ ಒಂದಾದ ಗುರು ಎಂಬ ಪದವೂ ಇಂದು ಇಂತಹ ಸಾಂಸ್ಕೃತಿಕ ಧಾಳಿಗೆ ವಿಷಯವಾಗಿರುತ್ತದೆ. ಸ್ವತಃ ಬಹಳ ಉತ್ತಮವಾದ ಪದವಾಗಿದ್ದರೂ, ಹಾಸ್ಯ ಮತ್ತು ಟೀಕೆಗಳಿಗೆ ವಸ್ತುವಾಗಿದೆ. ನಾವು ಟೀಕೆಗಳೆಲ್ಲವನ್ನೂ ತೆಗೆದುಕೋಡು ಇಲ್ಲಿ ಉತ್ತರಿಸುವ ಅಭಿಪ್ರಾಯವುಳ್ಳವರಾಗಿಲ್ಲ. ಅದರ ವಿಷಯದಲ್ಲಿ ಹಲವು ತಥ್ಯಾಂಶಗಳನ್ನು ವಾಚಕರ ಮುಂದಿರಿಸುವುದು ನಮ್ಮ ಉದ್ದೇಶವಾಗಿರುತ್ತದೆ. ಅವುಗಳನ್ನಿಟ್ಟುಕೊಂಡು ವಾಚಕರು ತಮ್ಮ ತಮ್ಮ ಉತ್ತರಗಳನ್ನು ತಾವೇ ಕಲ್ಪಿಸಿಕೊಳ್ಳುತ್ತಾರೆಂದು ನಂಬುತ್ತೇವೆ.

ನಮ್ಮ ಬೌದ್ಧಿಕ ಚರಿತ್ರೆಯಲ್ಲಿ ಗುರು ಎಂಬ ಪದಕ್ಕಿಂತಲೂ ಮಾನನೀಯವಾದ ಬೇರೊಂದು ಪದವನ್ನು ನಾವು ಚಿಂತಿಸಲಾಗುವುದಿಲ್ಲ. ನಮ್ಮ ವಿದ್ಯಾ ಸಂಪ್ರದಾಯ ಮತ್ತು ಜ್ಞಾನ ಸಂಪ್ರದಾಯಗಳಲ್ಲಿ ಎರಡರಲ್ಲಿಯೂ ಅದು ಹೆಣೆದುಕೊಂಡಿರುವ ಪದವಾಗಿರುತ್ತದೆ. ವಿದ್ಯಾಸಂಪ್ರದಾಯದಲ್ಲಿ ಅದರ ಪಾತ್ರವನ್ನು ನಾವು ಇಲ್ಲಿ ಹೇಳ ಹೋಗುವುದಿಲ್ಲ. ಅದೊಂದು ಸ್ವತಂತ್ರವಾದ ಮತ್ತುವಿಸ್ತಾರವಾದ ವಿಷಯ. ಅದು ಜ್ಞಾನ ಸಂಪ್ರದಾಯದಲ್ಲಿ ತೆಗೆದುಕೊಂಡ ಅರ್ಥವನ್ನು ಇಲ್ಲಿ ಸಂಗ್ರಹವಾಗಿ ವಿಚಾರಿಸುತ್ತೇವೆ.
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ|
ಗುರುಸ್ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀಗುರವೇನಮಃ||

ಎಂಬ ಶ್ಲೋಕವು ನಮ್ಮ ದೇಶದಲ್ಲಿ ಆಬಾಲವ್ರುದ್ಧರಾಗಿ ಎಲ್ಲರಿಗೂ ಪರಿಚಿತವಾಗಿರುತ್ತದೆ. ಗುರುವು ತ್ರಿಮೂರ್ತಿ ಸ್ವರೂಪ, ಅವನು ಸಾಕ್ಷಾತ್ ಪರಂಬ್ರಹ್ಮ ಎಂಬುದು ಶ್ಲೋಕದ ಅಭಿಪ್ರಾಯ. ನಮ್ಮ ಜ್ಞಾನಸಾಹಿತ್ಯಗಳಲ್ಲೆ  ಹುಡುಕಿದರೆ ಇಂತಹ ಇನ್ನೂ ಅನೇಕ ಮಾತುಗಳು ಕಂಡುಬರುತ್ತವೆ.

ಇಂದಿನ ನವೀನವಾದ ವಾತಾವರಣದಲ್ಲಿ ಈ ಶ್ಲೋಕವು ಅನೇಕ ಪ್ರಶ್ನೆಗಳನ್ನು ಸಹಜವಾಗಿ ಏಳಿಸುತ್ತವೆ. ಮನುಷ್ಯನು ಹೇಗೆ ದೇವರಾಗಬಲ್ಲನು ಆ ರೀತಿ ಹೇ ಳುವುದು ಸರಿಯೇ ಮುಂತಾದ ಒಗಟೆಗಳು ಮುಂದೆ ಬಂದು ನಿಲ್ಲುತ್ತವೆ. ಈ ಸಂಶಯ ಮತ್ತು ಅಪನಂಬಿಕೆಗಳನ್ನು ದ್ರುಢಪಡಿಸುವ ಸನ್ನಿವೇಶಗಳೂ ಹಲವು ಇವೆ.

ದೇಶದಲ್ಲಿ ಗುರು ಎಂಬ ಹೆಸರನ್ನು ಹೊತ್ತವರ ಸಂಖ್ಯೆಗೆ ಕೊನೆಮೊದಲಿಲ್ಲ. ಅವರಲ್ಲಿ ಅನೇಕರು ಯೋಗ್ಯರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅವರ ಪೈಕಿ ಸಾಕಷ್ಟುಮಂದಿ ಜ್ಞಾನಿಗಳಾಗಿರುವುದಿರಲಿ, ಧಾರ್ಮಿಕವಾದ ನಡತೆಯಿಂದ ಸಹ ಕೂಡಿರುವುದಿಲ್ಲ. ಅವರು ಧನಲೋಲುಪರೂ, ಸುಖ ಲೋಲುಪರೂ ಆಗಿರುತ್ತಾರೆ. ಅವರ ಅನೀತಿ, ಅಕಾರ್ಯ, ಅಧರ್ಮಗಳೆಲ್ಲವೂ ಲೋಕಕ್ಕೆ ಪ್ರತ್ಯಕ್ಷವಾದ ವಿಷಯಗಳಾಗಿರುತ್ತವೆ.
ಪ್ರಾಯಃ ಇತರ   ಕಾಲಗಳಲ್ಲಿಯೂ ಅಂತಹವರು ಇಲ್ಲದಿರುತ್ತಿರಲಿಲ್ಲ. ಆದರೆ ಅವರ ದೋಷಗಳು ಇಂದಿನಷ್ಟು ವಿಸ್ತಾರವಾಗಿ ಪ್ರಚಾರವಾಗುತ್ತಿರಲಿಲ್ಲ. ಗೂಢವಾಗಿರುತ್ತಿದ್ದುವು. ಇಲ್ಲವೇ ಕೆಲವರಿಗೆ ಮಾತ್ರ ತಿಳಿದಿರುತ್ತಿದ್ದುವು.  

ಈಗಿನ ಸ್ಥಿತಿ ಬೇರೆ. ಕೈಯಲ್ಲಿ ಕ್ಯಾಮರಾಗಳನ್ನು ಹಿಡಿದುಕೊಂಡು ಪ್ರಚೋದಕವಾದ ಘಟನೆಗಳನ್ನು ಹುಡುಕಿ ಬಯಲಿಗೆ ತರುವುದರಲ್ಲಿ ಸರ್ವದಾ ನಿರತರಾದ ಪತ್ರಿಕೋದ್ಯಮಿಗಳು ಅಂತಹವರ ಹುಳುಕುಗಳನ್ನು ದೊಡ್ಡ ವರ್ಣಚಿತ್ರಗಳೊಡನೆ ವ್ಯಾಪಕವಾಗಿ ಪ್ರಚಾರಮಾಡುತ್ತಾರೆ. ಗುರು ಎನಿಸಿಕೊಂಡವರು ಧನಸಂಗ್ರಹಮಾಡಿ ವಿಲಾಸ ಜೀವನದಲ್ಲಿ ನಿರತರಾಗಿರುವುದು, ಸ್ವೇಚ್ಚಾಚರಣೆಯನ್ನುಪದೇಶಿಸುವುದು, ಕೊಲೆ, ವ್ಯಭಿಚಾರ, ರಾಜಕೀಯ ಇತ್ಯಾದಿಗಳಲ್ಲಿ ನಿರತರಾಗಿರುವುದು ಇತ್ಯಾದಿ ಅವರ ಪ್ರಯಾಸಗಳಿಂದ ಹೊರಬರುತ್ತವೆ.

ಇವೆಲ್ಲವೂ "ಗುರು" ಎಂಬ ಪದಕ್ಕೆ ದೊಡ್ಡಪೆಟ್ಟುಗಳಾದರೆ ಅದರಲ್ಲಿ ಆಶ್ಚರ್ಯವಿಲ್ಲ. ಜೊತೆಗೆ ಆಧುನಿಕ ವಿದ್ಯಾಭ್ಯಾಸ ಮತ್ತು ವಿಜ್ಞಾನಿಗಳು ಉಂಟುಮಾಡಿರುವ ಹೊಸ ದೃಷ್ಟಿಗಳು ಇದರಲ್ಲಿ ಉಳಿದಿರಬಹುದಾದ ನಂಬಿಕೆ ಏನಾದರೂ ಇದ್ದರೆ ಅದನ್ನು ಪೂರ್ತಿಯಾಗಿ ಅಳಿಸಲು ಸರ್ವದಾ ನಿರತವಾಗಿವೆ. ಎಲ್ಲ ಮನುಷ್ಯರೂ ಒಂದೇ, ಪ್ರತಿಯೊಬ್ಬರಲ್ಲಿಯೂ ಎಲ್ಲ ಸಾಮರ್ಥ್ಯಗಳೂ ಇವೆ. ವಿಶೇಷವಾದ ದೈವೀಸಾಮರ್ಥ್ಯವೆಂಬುದು ಬೇರೆ ಇಲ್ಲ, ಬ್ರಹ್ಮ, ವಿಷ್ಣು ಇತ್ಯಾದಿಗಳು ಕಲ್ಪನಾತ್ಮಕವಾದ ನಂಬಿಕೆಗಳು ಮುಂತಾದ ಪಾಠಗಳನ್ನು ಅವು ಹೇಳಿಕೊಡುತ್ತವೆ. ಆಧುನಿಕ ಪ್ರಜಾತಂತ್ರದ ವಿಚಾರಗಳೂ ಅದಕ್ಕೆ ಅನುಗುಣವಾಗಿಯೇ ಇದೆ.

ಈ ಕಾರಣಗಳಿಂದ ಗುರು ಎಂಬ ಪದಕ್ಕೆ ನಮ್ಮ ದೇಶದಲ್ಲಿದ್ದ ದೊಡ್ಡ ಅರ್ಥಗಳನ್ನು ನಾವು ಕಲ್ಪನೆಮಾಡಿಕೊಳ್ಳಲು ಅಸಮರ್ಥರಾಗಿರುತ್ತೇವೆ. ನಮ್ಮ ವಾತಾವರಣವು ಅದಕ್ಕೆ ವಿರೋಧವಾಗಿಯೇ ಇದೆ. "ದೇವತೆಗಳು ಮನಸ್ಸನ್ನು ಉದ್ಗೀಥವೆಂದು ಉಪಾಸನೆ ಮಾಡಿದರು, ಆಗ ಅಸುರರು ಬಂದು ಅದನ್ನ ಪಾಪದಿಂದ ತುಂಬಿದರು, ಆದುದರಿಂದಲೇ ಮನಸ್ಸು ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಯೋಚಿಸುತ್ತದೆ" ಎಂದು ಛಾಂದೋಗ್ಯದಲ್ಲಿ  ಓದುತ್ತೇವೆ. ನಮ್ಮ ಅವಸ್ಥೆಯೂ ಅದೇ. ಒಳ್ಳೆಯದನ್ನು  ನೋಡಲು ಪ್ರಯತ್ನಿಸಿದಾಗ ಕೆಟ್ಟದ್ದು ಮನಸ್ಸಿನಲ್ಲಿ ಎದ್ದು, ನಮ್ಮ ದೃಷ್ಟಿಯೆಲ್ಲವನ್ನೂ ಕಲುಷಿತವಾಗಿ ಮಾಡುತ್ತದೆ.
ಆದರೂ ಕೆಟ್ಟದ್ದನ್ನು ಒಂದು ಕಡೆ ಮಾಡಿ, ಒಳ್ಳೆಯದನ್ನ ತಿಳಿಯುವುದರಲ್ಲಿಯೇ ನಮ್ಮ ಜೀವನದ ಸಾರ್ಥಕತೆಯಿರುತ್ತದೆ. ಅದಕ್ಕೋಸ್ಕರ ಸತತವೂ ಪ್ರಯತ್ನಿಸಬೇಕಾಗಿದೆ. ವಸ್ತುತಃ ಗುರು ಎಂಬ ಪದವು ಭಾರತೀಯರ ಜ್ಞಾನೋಪಾಸನೆಯ ಸಾರವೆಲ್ಲವನ್ನೂ ಹೊತ್ತ ಪದ. ಆದುದರಿಂದ ಆ ಹಿನ್ನೆಲೆಯಲ್ಲಿ ಅದನ್ನು ಅರ್ಥ ಮಾಡಿಕೊಂಡಾಗ ತಾನೆ ಅದು ಶೋಭಿಸುತ್ತದೆ. ಮನುಷ್ಯನ ಹೃದಯಾಂತರಾಳದಲ್ಲಿ  ಪರಿಪೂರ್ಣವಾದ ಸತ್ಯವು ಗೂಢವಾಗಿರುತ್ತದೆ, ಅದನ್ನು ಮನುಷ್ಯನು ಸಾಕ್ಷಾತ್ಕರಿಸಬಹುದು, ಸಮುದ್ರದಲ್ಲಿ ಸೇರುವ ನದಿಯಂತೆ ಅವನು ಅದರೊಡನೆ ಒಂದಾಗಬಹುದು, ಅದರ ಅಮೃತಾನಂದಗಳನ್ನು ತನ್ನದಾಗಿ ಮಾಡಿಕೊಳ್ಳಬಹುದು ಎಂಬುದು ಆ ಸಂಪ್ರಾಯದ ಮೂಲಸಿದ್ಧಾಂತಗಳು. ಅಂತಹ ಅವರ್ಣನೀಯವಾದ ಸ್ಥಿತಿಯನ್ನು ಹೊದಿದ ಜ್ಞಾನಪುರುಷನು ಬೇರೊಬ್ಬನೂ ಆ ಜ್ಞಾನದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ, ಅವನು ಅದನ್ನು ಸಾಧಿಸಲು ಸಹಾಯಮಾಡಬಹುದು ಎಂಬುದೂ ನಮ್ಮ ದೇಶದಲ್ಲಿ ಬಹಳ ಹಿಂದಿನಿಂದ ಬಂದಿರುವ ನಂಬಿಕೆಯಾಗಿದೆ. ನಮ್ಮ ಜ್ಞಾನಸಾಹಿತ್ಯಗಳನ್ನು ವಿಚಾರಮಾಡಿದಾಗ ಅದೊಂದು ಸ್ವೇಚ್ಛೆಯಿಂದ ಮಾಡುವ ವ್ಯಾಪಾರವಾಗಿರದೆ, ಬಹಳ ಸೂಕ್ಷ್ಮವಾದ ಮತ್ತು ಬಹಳ ದುರ್ಲಭವಾದ ಆತ್ಮಜ್ಞಾನವನ್ನು ಅವಲಂಬಿಸಿದ ವಿಷಯವೆಂಬುದು ಸ್ಪಷ್ಟವಾಗುತ್ತದೆ.

ಈ ಜ್ಞಾನವನ್ನು ಯಾವನೂ ತನ್ನ ಕಾಲ ಮೇಲೆಯೇ ನಿಂತು ಪಡೆಯಲಾರನು, ಅದನ್ನು ಪಡೆಯಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯಾವಶ್ಯಕ ಎಂಬ ಮಾತನ್ನು ಅವು ಒತ್ತಿ ಹೇಳುತ್ತವೆ. ಇದು ನಿಜವೇ ಅಥವಾ ಅರ್ಥವಿಲ್ಲದ ಮಾತೇ ಎಂಬ ಪ್ರಶ್ನೆಯು ಅವು ಒತ್ತಿ ಹೇಳುತ್ತವೆ. ಅದೂ ಇಂದಿನ ಕಾಲದಲ್ಲಿ ಮನುಷ್ಯನು ತಾನು ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಭಾವನೆಯಿಂದ ಕೂಡಿರುವಾಗ, ಈ  ಪ್ರಶ್ನೆಯು ಬಹಳ ಪ್ರಾಮುಖ್ಯತೆಯನ್ನು ತೆಗೆದುಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಪುಸ್ತಕಗಳಿರಲಿಲ್ಲ, ಆದುದರಿಂದ ಜಿಜ್ಞಾಸುಗಳು ತಿಳಿದವರನ್ನಾಶ್ರಯಿಸಬೇಕಾಗಿದ್ದಿತು. ಇಂದು ಪುಸ್ತಕಗಳೇ ನಮ್ಮ ಗುರು ಎಂಬ ಅಭಿಪ್ರಾಯವನ್ನು ಒಬ್ಬ ಪಾಶ್ಚಾತ್ಯವಿದ್ವಾಂಸನು ವ್ಯಕ್ತಪಡಿಸಿರುತ್ತಾನೆ.

ಆದರೆ ಗುರುವಿನ ಸಹಾಯವಿಲ್ಲದೆ ಜ್ಞಾನ ಭೂಮಿಯಲ್ಲಿ ಕಾಲಿಡಲಾಗುವುದಿಲ್ಲ ಎಂಬ ಅಭಿಪ್ರಾಯ ಸತ್ಯವಾದುದೆಂದು ನಾವು ತಿಳಿಯುತ್ತೇವೆ. ಮನುಷ್ಯನು ತನ್ನಿಂದ ಹೊರಗಿರುವ ಪದಾರ್ಥಗಳನ್ನು ತನ್ನ ಮನಸ್ಸು ಮುಂತಾದ ಕರಣಗಳಿಂದ ತಿಳಿದುಕೊಳ್ಳಬಹುದು. ಆದರೆ ಪರಿಪೂರ್ಣವಾದ ಜ್ಞಾನವೆಂಬುದು ಅವನ ಒಳಗೆ ಗೂಢವಾಗಿ ಅಡಗಿರುವಂತಹುದು. ಅದು ಅನೇಕ ಜನ್ಮಗಳ ಸುಕೃತದಿಂದ ಉಂಟಾಗುವ ಪಕ್ವತೆಯಿಂದ ಸಿಗುವ ವಿಷಯ. ಈಶ್ವರಾನುಗ್ರಹದಿಂದ ಲಭ್ಯವಾಗುವಂತಹದು. ಆದುದರಿಂದಲೇ ಯಾವನೂ ಸ್ವೇಚ್ಛೆಯಿಂದ ಆ ಜ್ಞಾನವನ್ನು ಪಡೆಯುವ ಮಾರ್ಗದಲ್ಲಿ ಕಾಲಿಡಲಾಗುವುದಿಲ್ಲ. ಕಾಲಿಡುವುದಿರಲಿ, ಒಳಪರಿಕ್ವತೆಯುಂಟಾಗದಿದ್ದರೆ ಅದರ ಕಲ್ಪನೆಯನ್ನು ಸಹ ಮಾಡಿಕೊಳ್ಳಲಾಗುವುದಿಲ್ಲ. ಏನಾದರೂ ಆ ಒಳ ಸತ್ಯಗಳನ್ನು ಕಂಡ ಗುರುವಿನ ಕೃಪಾದೃಷ್ಟಿಯು ಒಬ್ಬನ ಮೇಲೆ ಬಿದ್ದು, ಅವನ ಆಶ್ರಯ ಮತ್ತು ಮಾರ್ಗದರ್ಶನಗಳುಂಟಾದರೆ ಆಗ ಮಾತ್ರ ಅವನು ಆ ದಾರಿಯಲ್ಲಿ ನಡೆಯಲು ಶಕ್ತನಾಗತ್ತಾನೆ ಎಂಬುದು ಜ್ಞಾನಶಾಸ್ತ್ರಗಳ ನಿರ್ಧಾರ.
.
ಶಾಸ್ತ್ರಗಳು ಅಲ್ಲಿಗೆ ನಿಲ್ಲುವುದಿಲ್ಲ. ಅವು ಪರಿಪೂರ್ಣವಾದ ಸತ್ಯವನ್ನು ಮನುಷ್ಯನು  ಹೇಗೆ ತನ್ನ ಪ್ರಯತ್ನದಿಂದ ಹೊಂದಲಾರನೋ, ಹಾಗೆಯೇ ತನ್ನ ಇಚ್ಛೆಯಿಂದ ಕೊಡಲಾರನು, ಅದು ದೈವೇಚ್ಛೆಯಿಂದ, ದೈವಾನುಮತಿಯಿಂದ ಮತ್ತು ದೈವೀಪ್ರೇರಣೆಯಿಂದ ನಡೆಯುವ ಕೆಲಸ ಎಂಬುದನ್ನು ಉದ್ಘೋಷಿಸುತ್ತವೆ. ಮನುಷ್ಯರೂಪನಾದ ಗುರುವು ಜ್ಞಾನವನ್ನು ಕೊಡಲು ಕೇವಲ ಒಂದು ಮಾಧ್ಯಮ. ಎಲ್ಲಿ ಆ ಕೆಲಸವು ತೋರಿಕೆಯಾಗಿರದೆ ನಿಜವಾಗಿಯೂ ನಡೆಯುತ್ತದೆಯೋ ಅಲ್ಲೆಲ್ಲಾ ಅದನ್ನು ಕೊಡುವವನು ಅವ್ಯಕ್ತನೂ, ಅಂತರ್ಯಾಮಿಯೂ ಆದ ಆತ್ಮನೇ ವಿನಹ ಮನುಷ್ಯನಲ್ಲ. ಎಲ್ಲೆಲ್ಲಿ ಆತ್ಮಜ್ಞಾನವು ಪ್ರಕಟವಾಗುತ್ತದೆಯೋ ಅಲ್ಲೆಲ್ಲಾ, ಅದು ಯಾವುದೇ ಕಾಲವಾಗಿರಲಿ, ಯಾವುದೇ ದೇಶವಾಗಿರಲಿ, ವ್ಯಕ್ತಿಯು ಯಾವನೇ ಆಗಿರಲಿ ಅದು ಪ್ರಕಟವಾಗಲು ಕಾರಣ, ಸೃಷ್ಟಿ, ಸ್ಥಿತಿ, ಸಂಹಾರ ಕಾರಣನಾದ, ಸರ್ವಕ್ಕೂ ಈಶಾನನಾದ, ಮಹಾಕಾರುಣಿಕನಾದ ಆತ್ಮನೇ ಸರಿ. ಅವನೇ  ಗುರು, ಇದನ್ನೇ "ಸ ಏಷ ಪೂರ್ವೇಷಾಮಪಿ ಗುರುಃ ಕಾಲೇನ ಅನವಚ್ಛೇದಾತ್" ಎಂಬ ಪಾತಂಜಲಿಸೂತ್ರವು ಹೇಳುತ್ತದೆ, ಇದೇ ಗೀತೆಯ ಅಭಿಪ್ರಾಯವೂ ಆಗಿದೆ.

ಆತ್ಮನೊಡನೆ ಒಂದಾದಾಗ ತಾನೆ ಗುರುವು ಜ್ಞಾನವನ್ನು ಕೊಡಲು ಸಮರ್ಥನಾಗುತ್ತಾನೆ. ಆದುದರಿಂದಲೇ ನಾವು ಉದಾಹರಿಸಿದ ಶ್ಲೋಕವು  ಗುರುವನ್ನು ಪರಬ್ರಹ್ಮನೇ ಸರಿ ಎಂದು ಹೊಗಳುತ್ತದೆ.
ಇದೊಂದು ಭಾರತೀಯ ಜ್ಞಾನೋಪಾಸಕರ ಹೃದಯವು ತಿಳಿದ ರಹಸ್ಯ. ಇದನ್ನರಿಯದೆ ಇಂತಹ ಉನ್ನತವಾದ ಅರ್ಥವುಳ್ಳ  ಪದವನ್ನು ಅವಹೇಳನ ಮಾಡಿದರೆ ನಮ್ಮ ಮಂದಮತಿತ್ವವನ್ನು ಹೊರಗೆ ಹೇಳಿಕೊಂಡಂತಾಗುತ್ತದೆ.  ಬೇರೇನಿಲ್ಲ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ  ಅಕ್ಟೋಬರ್ ೧೯೭೯ ಸಂಪುಟ:೦೧ ಸಂಚಿಕೆ :೧೨ ರಲ್ಲಿ ಪ್ರಕಟವಾಗಿದೆ.