Saturday, September 5, 2020

ಅನಸೂಯಾ (ಆತ್ಮಗುಣ) Anasuyaa(Athmaguna)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


'ಅನಸೂಯಾ' ಎಂಬುದೂ ಒಂದು ಆತ್ಮಗುಣ. ಅಸೂಯೆ, ಈರ್ಷ್ಯಾ, ಮಾತ್ಸರ್ಯ ಇವೆಲ್ಲಾ ಪರ್ಯಾಯಪದಗಳು. ಅಸೂಯೆಇಲ್ಲದಿರುವಿಕೆಯನ್ನು ಅನಸೂಯಾ ಎಂದು ಕರೆಯುತ್ತಾರೆ. "ಯೋ ಧರ್ಮಮರ್ಥಂ ಕಾಮಂ ಚ ಲಭತೇ ಮೋಕ್ಷಮೇವ ಚ | ನ ದ್ವಿಷ್ಯಾತ್ ತಂ ಸದಾ ಪ್ರಾಜ್ಞಃ ಸಾಽನಸೂಯಾ ಸ್ಮೃತಾ ಬುಧೈಃ ||" ಒಬ್ಬ ಒಳ್ಳೆಯ ಕಾರ್ಯವನ್ನು ಮಾಡುತ್ತಾನೆ, ಚೆನ್ನಾಗಿ ಸಂಪತ್ತನ್ನೂ ಗಳಿಸುತ್ತಾನೆ, ಸತ್ಕಾಮನೆಯನ್ನು ಪಡೆಯುತ್ತಾನೆ ಮತ್ತು ಇದರ ಫಲವಾಗಿ ಉತ್ತಮಲೋಕವನ್ನೂ ಪಡೆಯುತ್ತಾನೆ ಎಂದಾದರೆ ಅವನನ್ನು ನೋಡಿ ದ್ವೇಷಪಡದಿರುವುದನ್ನು 'ಅನಸೂಯಾ' ಎಂದು ಕರೆಯುತ್ತಾರೆ. ಬೇರೆಯವರು ಯಾವುದೋ ಸತ್ಕಾರ್ಯವನ್ನು ಮಾಡಿದಾಗ ಅಂತಹ ಕಾರ್ಯವನ್ನು ತಾನು ಮಾಡದೆ ಅವನನ್ನು ದ್ವೇಷಿಸುವುದು,  ಇನ್ನೊಬ್ಬರ ಏಳಿಗೆಯನ್ನು, ಒಳಿತನ್ನು ನೋಡಿ ಸಹಿಸಲಾಗದೇ ತನ್ನೊಳಗೇ ಯಾವುದೋ ಬಗೆಯಲ್ಲಿ ನೊಂದುಕೊಳ್ಳುವುದು, ಬೆಂದುಕೊಳ್ಳುವುದು, ಹೊಟ್ಟೆಕಿಚ್ಚುಪಡುವುದು- ಇದನ್ನೇ 'ಅಸೂಯಾ' ಎಂದು ಕರೆಯಲಾಗಿದೆ.

ಅಸೂಯಾರಹಿತನು ಸಾಮಾನ್ಯರಲ್ಲಿ ಸಾಮಾನ್ಯರ ಸಣ್ಣ ಗುಣವನ್ನೂ ಎತ್ತಿಹೇಳುತ್ತಾನೆ. ಮತ್ತು ಬೇರೆಯವರ ದೋಷ, ಪ್ರಮಾದಗಳಲ್ಲೇ ಸಂತೋಷಪಡುವುದಿಲ್ಲ. ಇಂತಹ ಸ್ವಭಾವವನ್ನೇ 'ಅನಸೂಯಾ' ಎಂದು ಕರೆಯಲಾಗಿದೆ. ಇದು ಸಜ್ಜನರ ಸ್ವಭಾವ. 'ಸ್ತುತಿ' ಎಂದರೆ ಹೊಗಳುವುದು. ವ್ಯಕ್ತಿಯಲ್ಲಿರುವ ಗುಣಗಳನ್ನು ಅತಿಶಯೋಕ್ತಿ ಇಲ್ಲದೆ ಉತ್ಕೀರ್ತನೆ ಮಾಡುವುದನ್ನು 'ಸ್ತುತಿ' ಎನ್ನುತ್ತಾರೆ. ಯಾರಾದರೂ ನಮ್ಮಲ್ಲಿರುವ ಗುಣವನ್ನು ಎತ್ತಿ ಹೇಳಿದಾಗ ಸಜ್ಜನರಿಗೆ,ಆ ಗುಣವನ್ನು ಬೆಳೆಸಿಕೊಳ್ಳಬೇಕು ಎಂಬ ಉತ್ಸಾಹವು ವೃದ್ಧಿಸುತ್ತದೆ.  

ಸಾಹಿತ್ಯದರ್ಪಣದಲ್ಲಿ ಇದರ ಬಗ್ಗೆ ಒಂದು ಮಾತು ಬರುತ್ತದೆ – ಅಸೂಯಾ ಅನ್ಯಗುಣರ್ಧೀನಾಮ್ ಔದ್ಧತ್ಯಾತ್ ಅಸಹಿಷ್ಣುತಾ" –ಬೇರೆಯವರ ಗುಣವನ್ನು ಮತ್ತು ಏಳಿಗೆಯನ್ನು ಕಂಡು ಸಹಿಸದಿರುವಿಕೆ. ಯಾವನಿಗೆ ತಾನು ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲವೋ ಅದೇ ಕಾರ್ಯವನ್ನು ಬೇರೆಯವರು ಮಾಡಿದಾಗ ಸಹಿಸಿಕೊಳ್ಳಲು ಆಗುವುದಿಲ್ಲ.  ತಾನು ಒಳ್ಳೆಯ ಕೆಲಸವನ್ನು ಮಾಡದೆ, ಇತರರು ಒಳ್ಳೆಯ ಕೆಲಸವನ್ನು ಮಾಡಿದಾಗ, ತನ್ನ ಮನಸ್ಸಿನಲ್ಲೇ ಬೆಂದು-ನೊಂದುಕೊಂಡರೆ, ಇದು ನಮ್ಮ ಮನಸ್ಸಿನ ಸ್ಥೈರ್ಯವನ್ನು ಹಾಳುಮಾಡುತ್ತದೆ. ಹೀಗೆ ಮಾಡುವುದರಿಂದ ತನ್ನಲ್ಲಿರುವ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಈ ಅಸಹಿಷ್ಣುತೆಗೆ ಕಾರಣ ಲೋಭ. ತಾವು ಯಾವುದೋ ಅಧಿಕಾರವನ್ನೋ, ಅಥವಾ  ಯಾವುದೋ ಸವಲತ್ತುಗಳನ್ನು ಪಡೆಯಲೋ ಇಂತಹ ನೀಚಕೃತ್ಯವನ್ನು ಮಾಡುತ್ತಾರೆ. ಇದರ ದುಷ್ಪರಿಣಾಮ ಕೇವಲ ಅವರಿಗಷ್ಟೇ ಅಲ್ಲ; ಅದು ಒಂದು ಸಾಮ್ರಾಜ್ಯವನ್ನೇ ಅಲುಗಾಡಿಸಬಲ್ಲದು. ಇದಕ್ಕೆ ಉತ್ತಮ ಉದಾಹರಣೆ, ರಾಮಾಯಣದಲ್ಲಿ ಬರುವ ಮಂಥರೆ. ಇಲ್ಲಿ ಮಂಥರೆಯು ತನ್ನ ರಾಣಿಯಾದ ಕೈಕೇಯಿಯ ಮಗನಾದ ಭರತನಿಗೆ ಪಟ್ಟಾಭಿಷೇಕವಾಗಬೇಕು ಎಂದು ಆಸೆಪಡುವಳು. ಒಂದುವೇಳೆ ಶ್ರೀರಾಮನಿಗೆ ಪಟ್ಟಾಭಿಷೇಕವಾದರೆ ತನಗೆ ಸಿಗಬೇಕಾದ ಸಂಪತ್ತು, ಅಧಿಕಾರ ಎಲ್ಲವೂ ಕೌಸಲ್ಯೆಯ ದಾಸಿಯ ಪಾಲಾಗುವುದು ಎಂದು ಶ್ರೀರಾಮನ ಪಟ್ಟಾಭಿಷೇಕವನ್ನು ಆಕೆ ಸಹಿಸುವುದಿಲ್ಲ. ಈ ಅಸಹನೆಯಿಂದ ತನ್ನ ರಾಣಿಯಾದ ಕೈಕೇಯಿಯ ಮನಸ್ಸನ್ನು ಹಾಳುಮಾಡಿ ದಶರಥನ ಬಳಿ ಎರಡು ವರಗಳನ್ನು ಕೇಳಿಸುತ್ತಾಳೆ. ಆಗ ಮುಗ್ಧೆಯಾದ ಕೈಕೇಯಿ, ಶ್ರೀರಾಮನ ವನವಾಸ ಮತ್ತು ಭರತನ ಪಟ್ಟ ಎಂಬ ಎರಡು ವರಗಳನ್ನು ಕೇಳುತ್ತಾಳೆ. ಶ್ರೀರಾಮನ ಪಟ್ಟಾಭಿಷೇಕದ ಬದಲು ಎಲ್ಲ ಅಯೋಧ್ಯಾಪುರಜನರು ಕಣ್ಣೀರಿನ ಸ್ನಾನ ಮಾಡಿದರು. ಇದು ಅಸೂಯೆ ಎಂಬ ದುರ್ಗುಣದ ಕಥೆ. ಇಂತಹ ದುರ್ಗುಣದಿಂದ ದೂರವಾಗಿ ಎಲ್ಲರ ಒಳಿತನ್ನು ಬಯಸುವುದೇ ಅನಸೂಯಾ. ಇದರಿಂದ ತಾನು ಮಾತ್ರವಲ್ಲ, ಎಲ್ಲರೂ ಆನಂದಪಡಬಹುದು. ಇಲ್ಲಿ ಭಾರತೀಯ ಸಂಸ್ಕೃತಿಯಲ್ಲಿರುವ ನಾಮಕರಣದ ವೈಶಿಷ್ಟ್ಯದ ಉದಾಹರಣೆಯಾಗಿ ಅತ್ರಿಮುನಿಯ ಪತ್ನಿಯ ಹೆಸರಾದ ಅನಸೂಯಾಳನ್ನು ಸ್ಮರಿಸಬಹುದು.  

ಸೂಚನೆ: 05/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.