ಒಮ್ಮೆ ಶಿಕ್ಷಕರೊಬ್ಬರು "ಸತ್ಯಂ ವದ" ಎಂಬುದಾಗಿ ಕಾಪಿ ಬರೆಯಲು ಮೊದಲ ಸಾಲನ್ನು ತಿದ್ದಿಕೊಟ್ಟು ವಿದ್ಯಾರ್ಥಿಗೆ ಅದನ್ನು ಕೆಳಗಿನ ಸಾಲುಗಳಲ್ಲಿ ಅನುಕರಿಸುವಂತೆ ಆದೇಶಿಸಿದರು. ವಿದ್ಯಾರ್ಥಿಯು ಮನೆಗೆ ಬಂದು, ಕಾಪಿ ಬರೆಯಲು ಶುರು ಮಾಡಿದ. ಮೊದಲ ಸಾಲನ್ನು ಶಿಕ್ಷಕರು ತಿದ್ದಿಕೊಟ್ಟಿದ್ದನ್ನು ನೋಡುತ್ತಾ ಬರೆದ. ಮುಂದಿನ ಸಾಲುಗಳನ್ನು ಬರೆಯುವಾಗ ಶಿಕ್ಷಕರು ತಿದ್ದಿಕೊಟ್ಟಿದ್ದನ್ನು ನೋಡದೆ, ತಾನು ಹಿಂದೆ ಬರೆದ ಸಾಲುಗಳನ್ನು ನೋಡುತ್ತಾ ಬರೆಯಲು ಶುರು ಮಾಡಿದ. ಹೀಗೆ ಅರ್ಧ ಬರೆದು, ಪುಸ್ತಕ ಮುಚ್ಚಿಟ್ಟು, ಬೇರೆ ಕೆಲಸ ಮಾಡಲು ಹೊರಟ. ಮುಚ್ಚಿಡುವಾಗ, ಒಂದು ನೊಣ, ಪುಸ್ತಕದ ನಡುವೆ ಸೇರಿ ಸತ್ತುಹೋಯಿತು. ಮತ್ತೆ ವಿದ್ಯಾರ್ಥಿಯು ಬಂದು ಪುಸ್ತಕ ತೆರೆಯುವಾಗ ನೊಣ ಸತ್ತಿದ್ದು, ತಾನು ಬರೆದ ಕೊನೆಯ ಸಾಲಿನಲ್ಲಿ "ಸತ್ಯಂ ವಧ" ಎಂಬುದಾಗಿ ತೋರುವಂತೆ ಮಾಡಿತ್ತು. ವಿದ್ಯಾರ್ಥಿಯು ಹಿಂದಿನ ಸಾಲನ್ನು ನೋಡಿ ಬರೆಯುವ ಪ್ರವೃತ್ತಿಯವನಾದ್ದರಿಂದ, ಮುಂದೆ "ಸತ್ಯಂ ವಧ" ಎಂಬುದಾಗಿ ಕೊನೆಯವರೆಗೂ ಬರೆದ. "ಸತ್ಯವನ್ನು ಹೇಳು" ಎಂಬ ಮಾತು, "ಸತ್ಯವನ್ನು ಕೊಲ್ಲು" ಎಂಬುದಾಗಿ ರೂಪಾಂತರ ಹೊಂದಿಬಿಟ್ಟಿತ್ತು.
ಶ್ರೀರಂಗಮಹಾಗುರುಗಳು ಈ ಕಥೆಯನ್ನು ಹೇಳುತ್ತಾ, ನಮ್ಮ ಸಂಪ್ರದಾಯಗಳು ಹೀಗೆ ಕಾಲಕ್ರಮದಲ್ಲಿ ಸತ್ಯಕ್ಕೆ ಸಲ್ಲದ ಬದಲಾವಣೆ ಹೊಂದಿದವು ಎಂದು ವಿವರಿಸುತ್ತಿದ್ದರು. ನಮ್ಮ ಮಹರ್ಷಿಗಳು ಅತಿ ದುರ್ಲಭವಾದ ಶಾಶ್ವತ ಸಂತೋಷವನ್ನು ಅಂತರಂಗದಲ್ಲಿ ಸಾಕ್ಷಾತ್ಕಾರ ಮಾಡಿಕೊಂಡು, ಅದನ್ನು ನಾವು ಅನುಭವಿಸುವಂತೆ ಮಾಡಲೋಸುಗ, ಸಂಪ್ರದಾಯಗಳ ರೂಪದಲ್ಲಿ ಕೆಲವು ಆಚರಣೆಗಳನ್ನು ತಂದರು. ಸಂಪ್ರದಾಯವೆಂದರೆ ಆ ಪದವೇ ಹೇಳುವಂತೆ "ಚೆನ್ನಾಗಿ ಕೊಡಲ್ಪಟ್ಟದ್ದು". ಅಂದರೆ ಮಹರ್ಷಿಗಳು ಅಂತ:ಸತ್ಯವನ್ನು ಅರಿತವರಾಗಿ, ಒಂದು ಮನೋಧರ್ಮದಿಂದ (ಸ್ಪಿರಿಟ್) ಕೊಟ್ಟಿದ್ದಾರೆ. ಅದು ಸಂತೋಷದ ಬಳಿ ಒಯ್ಯುವ ಮಾರ್ಗವೂ ಆಗಿತ್ತು. ನಾವು ಆಚರಿಸುವ ಹಬ್ಬ-ಹರಿದಿನಗಳು, ನಡೆ-ನುಡಿ, ಆಚಾರ-ವಿಚಾರ, ಪೂಜೆ-ಪುರಸ್ಕಾರಗಳು, ವಿದ್ಯೆ ಕಲೆಗಳೆಲ್ಲವೂ ಸಂಪ್ರದಾಯವೆಂಬ ನೆಲೆಗಟ್ಟಿನಲ್ಲಿ ಮಹರ್ಷಿಗಳು ತಂದಿದ್ದಾರೆ. ಮಹರ್ಷಿಗಳ ಮನಸ್ಸನ್ನು ಅರ್ಥ ಮಾಡಿಕೊಂಡು, ಅವರ ಮನೋಧರ್ಮವನ್ನರಿತು ಅವರು ಹೇಳಿದಂತೆಯೇ ಆಚರಿಸಿದ್ದರೆ, ಇಂದಿಗೂ ಅದೇ ಅಂತ:ಸುಖವನ್ನು ನೀಡುತ್ತಿತ್ತು. ಆದರೆ ಕಾಪಿ ಬರೆಯುವಾಗ, ತಾನು ಬರೆದ ಹಿಂದಿನ ಸಾಲು ನೋಡಿ ಬರೆದಂತೆ, ನಾವು ನಮ್ಮ ಹಿಂದಿನ ತಲೆಮಾರನ್ನು ಅನುಕರಿಸಿದ್ದೇವೆ. ಅವರು ಕರ್ಮಾಚರಣೆಯಲ್ಲಿ ವ್ಯತ್ಯಾಸ ಮಾಡಿದ್ದರೆ, ಅದನ್ನೂ ಹಾಗೆಯೇ ನಾವೂ ಅನುಸರಿಸುತ್ತಿದ್ದೇವೆ. ಒಬ್ಬ ಗೃಹಸ್ಥನ ಮನೆಯಲ್ಲಿ ತುಂಟ ಬೆಕ್ಕು ಇತ್ತು. ಶ್ರಾದ್ಧದ ಸಂದರ್ಭದಲ್ಲಿ ಬೆಕ್ಕಿನಿಂದ ತೊಂದರೆಯಾಗುತ್ತದೆಯೆಂದು, ಬೆಕ್ಕನ್ನು ಬುಟ್ಟಿಯಲ್ಲಿ ಮುಚ್ಚಿಡುತ್ತಿದ್ದನಂತೆ. ಮುಂದೆ, ಅವನ ಮಕ್ಕಳು ಶ್ರಾದ್ಧದಲ್ಲಿ ಒಂದು ಬೆಕ್ಕನ್ನು ಹಿಡಿದು ತಂದು, ಬುಟ್ಟಿಯಲ್ಲಿ ಮುಚ್ಚಿಟ್ಟು ಶ್ರಾದ್ಧ ಕಾರ್ಯ ಮಾಡಿದರಂತೆ. ಹೀಗೆ ಸಂಪ್ರದಾಯದಲ್ಲಿ ಕೆಲವು ಅನವಶ್ಯಕ ಕರ್ಮಗಳು ಸೇರಿಕೊಳ್ಳುವ ಸಂಭವವಿರುತ್ತೆ.
ಕರ್ಮಗಳನ್ನು ಮರ್ಮವರಿತು ಆಚರಿಸಬೇಕು ಎಂಬುದು ಶ್ರೀರಂಗಮಹಾಗುರುಗಳ ಸ್ಪಷ್ಟ ಅಭಿಪ್ರಾಯ. ಅವರ ಮಾತಿನಂತೆ ಸಂಪ್ರದಾಯಗಳ ಮರ್ಮ ಮತ್ತು ಋಷಿಗಳ ಮನೋಧರ್ಮ, ನಮ್ಮ ಮನಸ್ಸಿಗೆ ಬರುವಂತಾಗಲಿ ಎಂದು ಆಶಿಸೋಣ.
ಸೂಚನೆ: 03/09/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.