Tuesday, September 22, 2020

ವಿಶ್ವ ಶಾಂತಿಗೆ ಭಾರತೀಯರ ಕೊಡುಗೆ (Vishwa shantige Bharatiyara Koduge)

ಲೇಖಕರು: ಶ್ರೀ ಜಿ. ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ವಿಶ್ವಶಾಂತಿ ದಿವಸವು ಸೆಪ್ಟಂಬರ್ ತಿಂಗಳಿನಲ್ಲಿ ಬರುವ ಒಂದು ಪ್ರಮುಖ ದಿನ. ಸಂಯುಕ್ತರಾಷ್ಟ್ರವು ಘೋಷಿಸಿರುವ ಈ ದಿನದಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತನ ಮಂಥನಗಳು ನಡೆಯುತ್ತವೆ. ವಿಶ್ವ ಶಾಂತಿಯ ಬಗ್ಗೆ ಇಂದು ಪ್ರಚಲಿತವಿರುವ ಚಿಂತನೆಯ ಸಾರವೆಂದರೆ - ಘರ್ಷಣೆ ಇಲ್ಲದಿರುವಿಕೆಯೇ ಶಾಂತಿ, ಸಾಮಾಜಿಕ ವರ್ಗಗಳಲ್ಲಿ ಘರ್ಷಣೆ ಇಲ್ಲದಿದ್ದರೆ ಮತ್ತು ರಾಷ್ಟ್ರಗಳ ನಡುವೆ ಯುಧ್ಧವಿಲ್ಲದಿದ್ದರೆ, ಅದೇ ವಿಶ್ವಶಾಂತಿ ಎನ್ನುವುದಾಗಿದೆ. ಈ ಚಿಂತನೆ ಮುಂದುವರೆದು ಯಾವ ರೀತಿಯ ಸಾಮಾಜಿಕ, ರಾಷ್ಟ್ರ ವ್ಯವಸ್ಥೆಯು ಈ ವಿಶ್ವ ಶಾಂತಿಗೆ ಪೂರಕ, ಯಾವುದು ಬಾಧಕ ಎನ್ನುವ ಬಗ್ಗೆ ಚರ್ಚೋಪಚರ್ಚೆಗಳು ನಡೆಯುತ್ತಿರುತ್ತವೆ. "ಪ್ರಜಾಪ್ರಭುತ್ವದ ದೇಶಗಳ ನಡುವೆ ಯುದ್ಧ ನಡೆದಿರುವ ಪ್ರಸಂಗಗಳು ಅಪರೂಪ, ಆದುದರಿಂದ ಪ್ರಜಾಪ್ರಭುತ್ವವೇ ವಿಶ್ವಶಾಂತಿಗೆ ಬುನಾದಿ" ಎಂದು ಕೆಲವರು ವಾದಿಸಿದರೆ, "ಕಮ್ಯೂನಿಸಮ್ ನ ರಾಷ್ಟ್ರಸ್ವಾಮ್ಯವೇ ವಿಶ್ವಶಾಂತಿಗೆ ಕೀಲಿಕೈ- ಏಕೆಂದರೆ, ಎಲ್ಲ ಸ್ವತ್ತೂ ರಾಷ್ಟ್ರಕ್ಕೇ ಸೇರಿಬಿಟ್ಟರೆ, ಸಮಾಜದಲ್ಲಿ ವರ್ಗಗಳೇ ಇರುವುದಿಲ್ಲ, ಮತ್ತು ಸ್ವತ್ತಿಗಾಗಿ ಕಿತ್ತಾಡುವ ವರ್ಗಗಳ ನಡುವಿನ ಘರ್ಷಣೆಯೂ ಇರುವುದಿಲ್ಲ" ಎಂದು ಇನ್ನು ಕೆಲವರು ವಾದಿಸುತ್ತಾರೆ. ಒಟ್ಟಾರೆ ಹೇಳುವುದಾದರೆ ಸಾಮಾಜಿಕ ವರ್ಗಗಳ ನಡುವೆ ಘರ್ಷಣೆ ಇಲ್ಲದಿರುವಿಕೆ, ರಾಷ್ಟ್ರಗಳ ನಡುವೆ ಯುದ್ಧವಿಲ್ಲದಿರುವಿಕೆಯೇ ಶಾಂತಿ ಎನ್ನುವುದು ಇಲ್ಲಿ ಎದ್ದು ತೋರುವ ಅಭಿಪ್ರಾಯವಾಗಿರುತ್ತದೆ. ಆದರೆ ಮಹರ್ಷಿಗಳ ಚಿಂತನೆಯು ಇಂದಿನ ಪ್ರಸ್ತುತ ಚಿಂತನೆಗಿಂತ ಬಹಳ ಆಳವಾಗಿದ್ದು, ವೈಜ್ಞಾನಿಕವೂ ಆಗಿದೆ. ಮಹರ್ಷಿಗಳು ವೈಯಕ್ತಿಕ ಮಟ್ಟದಲ್ಲಿ ಶಾಂತಿಯೆಂದರೇನು? ಅದನ್ನು ಸಾಧಿಸುವ ಬಗೆ ಹೇಗೆ? ಎಂಬುದನ್ನು ತಪಸ್ಯೆ ಹಾಗೂ ತಮ್ಮ ಮೇಧಾಬಲದಿಂದ ನಿಶ್ಚಯಿಸಿ ಈ ಶಾಂತಿಯನ್ನು ಸಂಸ್ಕೃತಿ ನಾಗರಿಕತೆಗಳ ಮೂಲಕ ಸಮಾಜ ಮತ್ತು ರಾಷ್ಟ್ರಮಟ್ಟದಲ್ಲಿ ಹರಡಿದ್ದಾರೆ.  


ಶಾಂತಿ ಎನ್ನುವ ಪದವೇ ಏನು ಹೇಳುತ್ತದೆಯೆಂದು ಗಮನಿಸುವುದಾದರೆ, ಅದು ಶಮ್ ಧಾತುವಿನಿಂದ ನಿಷ್ಪನ್ನವಾಗಿದ್ದು, ಕಡಿಮೆ ಮಾಡುವುದು ಅಥವಾ ಇಲ್ಲದಾಗಿ ಮಾಡುವುದು ಎನ್ನುವ ಅರ್ಥವನ್ನು ಹೊಂದಿದೆ. ಏನನ್ನು ಇಲ್ಲದಾಗಿ ಮಾಡುವುದು ಎಂದರೆ, ಮನೋವೃತ್ತಿಗಳನ್ನು ಇಲ್ಲದಾಗಿ ಮಾಡುವುದು. ಮನೋವೃತ್ತಿಗಳು ಇಲ್ಲವಾದಾಗ, ಸಮಾಧಿಸ್ಥಿತಿಯುಂಟಾಗಿ ಪರಮ ಶಾಂತಿ, ನೆಮ್ಮದಿ, ಅನಂದಗಳು ನೆಲೆಸುತ್ತದೆ. ಪಾತಂಜಲ ಯೋಗಸೂತ್ರವು "ಯೋಗಃ ಚಿತ್ತವೃತ್ತಿ ನಿರೋಧಃ" - ಚಿತ್ತವೃತ್ತಿಗಳು ಇಲ್ಲದಿರುವಿಕೆಯೇ- ಯೋಗ ಎಂದು ಘೋಷಿಸುತ್ತದೆ. ಈ ಶಾಂತಿಯು ವೈಯಕ್ತಿಕ ಮಟ್ಟದ ಅನುಭವ, ಅದನ್ನು ಸಮಾಜದಲ್ಲಿ, ರಾಷ್ಟ್ರಮಟ್ಟದಲ್ಲಿ ಹರಡಬೇಕಾದರೆ, ಈ ಶಾಂತಿಗೂ ಮತ್ತು ನಮ್ಮ ಜೀವನಕ್ರಮದ ಅಂಗಗಳಾದ ವ್ಯವಹಾರ, ಆಹಾರ, ವಿಹಾರ, ವಿಚಾರಗಳನ್ನೊಳಗೊಂಡ  ಸಂಸ್ಕೃತಿ-ನಾಗರಿಕತೆಗಳಿಗೂ ಸಂಬಂಧವೇನು ಎನ್ನುವುದನ್ನು ಅರ್ಥ ಮಾಡಿಕೊಂಡು ಯೋಗಕ್ಕೆ ಅವಿರೋಧವಾಗಿ ಜೀವನಕ್ರಮವನ್ನು ರೂಪಿಸಬೇಕಾಗುತ್ತದೆ.


 ನಮ್ಮ ದೇಹದಲ್ಲಿ ವಾತ, ಪಿತ್ತ, ಶ್ಲೇಷ್ಮಗಳೆಂಬ ತ್ರಿದೋಷಗಳು ಸದಾ ಕೆಲಸ ಮಾಡುತ್ತಿದ್ದು, ಇವು ಸಮ ಪ್ರಮಾಣದಲ್ಲಿದ್ದಾಗ ದೇಹವು ಪ್ರಸನ್ನವಾಗಿದ್ದು ಚಿತ್ತ ವೃತ್ತಿ ಕಡಿಮೆಯಾಗಿ ಸಮಾಧಿ ಸ್ಥಿತಿಗೆ ಪೋಷಕವಾಗಿರುತ್ತದೆ ಮತ್ತು ವಿಷಮ ಪ್ರಮಾಣದಲ್ಲಿದ್ದಾಗ ದೇಹವನ್ನು ಕೆರಳಿಸಿ, ಚಿತ್ತದವೃತ್ತಿಗಳನ್ನು ಹೆಚ್ಚು  ಮಾಡುತ್ತವೆ. ಹಾಗೆಯೇ, ಸತ್ತ್ವ, ರಜಸ್ ಮತ್ತು ತಮಸ್ ಎಂಬ ಮೂರೂ ಗುಣಗಳು ನಮ್ಮ ಮನಸ್ಸಿನ ಅವಸ್ಥೆಗೆ ಕಾರಣವಾಗಿರುತ್ತವೆ. ಸತ್ತ್ವವು ಪ್ರಧಾನವಾಗಿದ್ದಾಗ ಮನಸ್ಸು ಏಕಾಗ್ರವಾಗಿದ್ದರೆ, ರಜಸ್ಸು ಪ್ರಧಾನವಾಗಿದ್ದಾಗ ಮನಸ್ಸು  ಚಂಚಲವಾಗಿರುತ್ತದೆ ಮತ್ತು ತಮಸ್ಸು ಪ್ರಧಾನವಾಗಿದ್ದಾಗ ಮನಸ್ಸು ಜಡವಾಗಿರುತ್ತದೆ. ಮನಸ್ಸು ಸತ್ತ್ವಪ್ರಧಾನವಾಗಿದ್ದಾಗ ಸಮಾಧಿ ಸ್ಥಿತಿಗೆ ಪೋಷಕವಾಗಿರುತ್ತದೆ  ಹಾಗೂ ರಜಸ್ತಮೋಗುಣಗಳು ಪ್ರಧಾನವಾಗಿದ್ದಾಗ ಸಮಾಧಿಸ್ಥಿತಿಗೆ ಬಾಧಕವಾಗಿರುತ್ತದೆ.


ನಮ್ಮ ಜೀವನಕ್ರಮವು ಈ ತ್ರಿದೋಷ, ತ್ರಿಗುಣಗಳ ಮೇಲೆ ಪರಿಣಾಮವನ್ನುಂಟು ಮಾಡುವುದಾಗಿದ್ದು ಈ ಪರಿಣಾಮಗಳನ್ನು ಆರ್ಷ ವಿಜ್ಞಾನವು ವಿವರಿಸುತ್ತದೆ. ಉದಾಹರಣೆಗೆ, ಸಾತ್ತ್ವಿಕ ಆಹಾರವಾದ ಹಸುವಿನ ಹಾಲು, ಜೇನುತುಪ್ಪಗಳು ಶರೀರದಲ್ಲಿ ಲಘುತ್ವವನ್ನುಂಟು ಮಾಡುವುದಲ್ಲದೇ, ಮನಸ್ಸು ತಿಳಿಯಾಗುವಂತೆ ಮಾಡಿದರೆ, ತಾಮಸ ಆಹಾರವಾದ ಎಮ್ಮೆಮೊಸರು, ತಂಗಳನ್ನ ಮೊದಲಾದವು ಶರೀರ, ಮನಸ್ಸುಗಳಲ್ಲಿ ಜಡತ್ವವನ್ನುಂಟು ಮಾಡುತ್ತದೆ. ಸಂಗೀತವನ್ನು ಶಾಸ್ತ್ರೀಯ ಕ್ರಮದಲ್ಲಿ ಅನುಸಂಧಾನ ಮಾಡಿದರೆ ಕಿವಿಗೂ ಇಂಪಾಗಿದ್ದು ಮನಸ್ಸನ್ನೂ ಅಂತರ್ಮುಖವಾಗಿಸುತ್ತದೆ. ಅಶಾಸ್ತ್ರೀಯ ಅನುಸಂಧಾನ  ಇಂದ್ರಿಯಗಳನ್ನು ಕೆರಳಿಸಿ ಚಿತ್ತವೃತ್ತಿಗಳನ್ನು ಜಾಸ್ತಿ ಮಾಡುತ್ತದೆ. ಸಾಹಿತ್ಯವು ಮನಸ್ಸಿಗೆ ಆಹಾರವಾದ ನವರಸಗಳನ್ನು ಒದಗಿಸುತ್ತದೆ. ಈ ನವರಸಗಳನ್ನು ಸಂಯೋಜಿಸಬೇಕಾದರೆ, ಅದ್ಭುತ, ರೌದ್ರ, ವೀರ ಮೊದಲಾದ ರಸಗಳಿಂದ ಯಥೋಚಿತವಾಗಿ ರಂಜಿಸಿ ಕೊನೆಗೆ ಶಾಂತರಸದಲ್ಲಿ ನಿಲ್ಲಿಸಿದರೆ ಚಿತ್ತವೃತ್ತಿಗಳು ಕಡಿಮೆ ಅಥವಾ ಇಲ್ಲವಾಗುತ್ತವೆ ಮತ್ತು ಸಂಯೋಜನೆ ಸರಿಯಿಲ್ಲದಿದ್ದರೆ ಮನಸ್ಸು ವಿಷಾದದಲ್ಲಿ ನಿಂತು ಚಿತ್ತವೃತ್ತಿಗಳು ಹೆಚ್ಚಲೂಬಹುದು. ರಾಮಾಯಣ, ಮಹಾಭಾರತ, ಶಾಕುಂತಲ, ರಘುವಂಶ ಮೊದಲಾದ ಆದರ್ಶ ಇತಿಹಾಸ, ಕಾವ್ಯ, ನಾಟಕಗಳೆಲ್ಲವೂ ಸಾಹಸ, ವಿರಹ, ಪ್ರಣಯ ಮುಂತಾದ ಪ್ರಸಂಗಗಳಿಂದ ಕೂಡಿದ್ದರೂ ಅಂತ್ಯದಲ್ಲಿ ಶಾಂತರಸವನ್ನೇ ಉಂಟು ಮಾಡುತ್ತವೆ. ಆದುದರಿಂದ ಮಹರ್ಷಿಗಳು ವೈಜ್ಞಾನಿಕ ಚಿಂತನೆಯನ್ನನುಸರಿಸಿ ನಮ್ಮ ದೇಹೇಂದ್ರಿಯ ಮನಸ್ಸುಗಳಿಗೆ ಪುಷ್ಟಿ, ರುಚಿ, ರಂಜನೆಗಳು ದೊರಕಿ ತನ್ಮೂಲಕ ಚಿತ್ತವೃತ್ತಿಗಳು ಕಡಿಮೆ ಅಥವಾ ಇಲ್ಲವಾಗಿಸುವಂತೆ ಜೀವನಕ್ರಮವನ್ನು ರೂಪಿಸಿದ್ದಾರೆ. ಶ್ರೀರಂಗಮಹಾಗುರುಗಳ ಸರಳ ಮಾತುಗಳಲ್ಲಿ ಹೇಳುವುದಾದರೆ, ಮಹರ್ಷಿಗಳು ಜೀವನಕ್ರಮವನ್ನು ಯೋಗ-ಭೋಗಮಯವನ್ನಾಗಿಸಿ, ಭೋಗವನ್ನು ಯೋಗಕ್ಕೆ ಅವಿರೋಧವಾಗಿ ಅನುಭವಿಸುವಂತೆ ರೂಪಿಸಿದ್ದಾರೆ. ಶ್ರೀರಂಗ ಮಹಾಗುರುಗಳು ಯೋಗವು ಹೇಗೆ ಭಾರತೀಯರ ಚಿಂತನೆ, ಧಾರ್ಮಿಕ ಆಚರಣೆಗಳು, ಆಹಾರ ವ್ಯವಸ್ಥೆ, ವೇಷಭೂಷಣಗಳು, ಮನೋರಂಜನೆ, ಸಾಮಾಜಿಕ ವ್ಯವಸ್ಥೆ, ರಾಷ್ಟ್ರವ್ಯವಸ್ಥೆಯಲ್ಲೆಲ್ಲಾ ಹಾಸು ಹೊಕ್ಕಾಗಿದೆಯೆಂಬುದನ್ನು ವಿಸ್ತಾರವಾಗಿ, ವೈಜ್ಞಾನಿಕವಾಗಿ, ಪ್ರಯೋಗ ಸಹಿತವಾಗಿ ನಿರೂಪಿಸಿದ್ದಾರೆ.


ಧಾರ್ಮಿಕ ಕರ್ಮಗಳ ಕೊನೆಯಲ್ಲಿ ಒಂದು ಆಶೀರ್ವಚನವನ್ನು ಹೇಳುವುದುಂಟು - ಶಾಂತಿರಸ್ತು, ತುಷ್ಟಿರಸ್ತು, ಪುಷ್ಟಿರಸ್ತು, ಆಯುಷ್ಯಮಸ್ತು, ಅರೋಗ್ಯಮಸ್ತು, ಧನಧಾನ್ಯಾಭಿವೃದ್ಧಿರಸ್ತು, ಪುತ್ರಪೌತ್ರಾಭಿವೃದ್ಧಿರಸ್ತು, ಶಿವಂ ಕರ್ಮಾಸ್ತು, ಭಗವತ್ಪ್ರಸಾದ ಸಿದ್ಧಿರಸ್ತು ಎಂಬುದಾಗಿ. ಅಂದರೆ ಮೊದಲು ಶಾಂತಿಯನ್ನು ಅನುಭವಿಸಿದರೆ ಅದು ಮನಸ್ಸಿನಲ್ಲಿ ಹುರುಪು ಆನಂದಗಳನ್ನು ತುಂಬುತ್ತದೆ. ಈ ತುಷ್ಟಿಯಿಂದ ಶರೀರಕ್ಕೆ ಪುಷ್ಟಿ, ತನ್ಮೂಲಕ ಆಯುರಾರೋಗ್ಯ, ತನ್ಮೂಲಕ ಸತ್ಕರ್ಮಾಚರಣೆಯಿಂದ ಅನೇಕ ಲೌಕಿಕ ಲಾಭಗಳು ಮತ್ತು ಕೊನೆಯಲ್ಲಿ ಚಿತ್ತನಿವೃತ್ತಿ ರೂಪವಾದ ಭಗವತ್ಪ್ರಸಾದವೂ ದೊರಕುವಂತಾಗಲಿ ಎನ್ನುವುದು ಇಲ್ಲಿನ ಆಶಯ. ಅಂದರೆ, ಶಾಂತಿಯೇ ಸರ್ವ ಪುರುಷಾರ್ಥಫಲಗಳಿಗೂ ಮೂಲವಾಗಿದೆ.

ಹೀಗೆ, ಶಾಂತಿಯನ್ನೇ ಕೇಂದ್ರವನ್ನಾಗಿಯೂ, ಪರಮ ಲಕ್ಷ್ಯವನ್ನಾಗಿಯೂ ಇಟ್ಟುಕೊಂಡಿರುವ ಭಾರತೀಯ ಸಂಸ್ಕೃತಿಯೇ ನಮ್ಮ ದೇಶವು ವಿಶ್ವ ಶಾಂತಿಗೆ ಕೊಡುವ ಕೊಡುಗೆಯಾಗಿದೆ.

ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.