Sunday, October 18, 2020

ಆರ್ಯಸಂಸ್ಕೃತಿ ದರ್ಶನ - 15 (Arya Samskruti Darshana - 15)

ಮೌನವ್ಯಾಖ್ಯಾನದ ಮಹತ್ವ

ಲೇಖಕರು : ವಿದ್ವಾನ್ ಶ್ರೀ ಶೇಷಾಚಲ ಶರ್ಮಾ


 
ಗುರುವು ಶಿಷ್ಯರಿಗೆ ತತ್ತ್ವವನ್ನು ಉಪದೇಶಿಸುವ ಮಾರ್ಗಗಳು ಅಸಂಖ್ಯಾತವಾಗಿವೆ. ಚೋದಕ, ಬೋಧಕ ಮತ್ತು ಮೋಕ್ಷಪ್ರದ ಎಂದು ಮೂರು ವಿಧವಾದ  ಗುರುಗಳನ್ನು ಶಾಸ್ತ್ರವು ನಿರ್ದೇಶಿಸುತ್ತದೆ. ಚೋದಕನು ತತ್ತ್ವ ದರ್ಶನಕ್ಕೆ ಬೇಕಾದಪ್ರೇರಣೆಯನ್ನು ನೀಡುತ್ತಾನೆ. ಬೋಧಕನು "ನಾನಾ ದೇಶಿಕ ವಕ್ತ್ರಸ್ಥೈರುಪಾಯೈರ್ಯುಕ್ತಿ ಕಲ್ಪಿತೈಃ"-  ಎಂದು ಹೇಳುವಂತೆ ನಾನಾ ವಿಧವಾದ ಉಪಾಯಗಳಿಂದ ಶಿಷ್ಯನಿಗೆ ತತ್ತ್ವವನ್ನು ಬೋಧಿಸುತ್ತಾನೆ.  ಮೋಕ್ಷಪ್ರದನಾದ ಗುರುವು ಶಿಷ್ಯನಿಗೆ ಪರಮಾನಂದ ಪದವನ್ನು ಸಾಕ್ಷಾತ್ತಾಗಿ ದೊರಕಿಸಿಕೊಡುತ್ತಾನೆ. ಆದ್ದರಿಂದಲೇ "ಪರತತ್ವವೇ  ಮೋಕ್ಷಪ್ರದಗುರು" ಎಂಬುದಾಗಿ ಶಾಸ್ತ್ರಗಳು ಸಾರುತ್ತವೆ. ಪರಿಪೂರ್ಣ ಪರತತ್ತ್ವವನ್ನು ಸದಾ ಅನುಭವಿಸುತ್ತಾ, ಬ್ರಹ್ಮಭಾವದಿಂದ ಬೆಳಗುತ್ತಿರುವ ಸದ್ಗುರುವು ಚೋದಕನೂ , ಬೋಧಕನೂ ಆಗಿ ಕೊನೆಗೆ ಮೋಕ್ಷಪ್ರದನೂ ಆಗುತ್ತಾನೆ. ನೇರವಾಗಿ ಪರತತ್ತ್ವ  ಸ್ಥಿತಿಗೇರಿಸುವ ಉಪದೇಶ ವಿಧಿಗಳಲ್ಲಿ, ಮೌನವ್ಯಾಖ್ಯಾನದ ವಿಧಾನವು ಪರಮ ಶ್ರೇಷ್ಠವೂ ವಸ್ತು ನಿಷ್ಠವೂ ಆಗಿದೆ.

"ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ|
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನ ಸಂಶಯಾಃ||

ಇದೊಂದು ಆಶ್ಚರ್ಯದ ಸಂಗತಿ. ವಟವೃಕ್ಷದ (ಆಲದ ಮರದ)  ಬುಡದಲ್ಲಿ, ಗುರು ಶಿಷ್ಯರು ಆಸೀನರಾಗಿದ್ದಾರೆ. ಶಿಷ್ಯರಾದರೋ ಬಹಳ ವೃದ್ಧರಾದವರು, ಗುರುವು ಮಾತ್ರ ಯುವಕನಾಗಿದ್ದಾನೆ. ಗುರುವಿನ ವ್ಯಾಖ್ಯಾನ ವಿಧಾನವೆಂದರೆ, ಮೌನ. ಅದರಿಂದ ಶಿಷ್ಯರ ಸಮಸ್ತ ಸಂದೇಹಗಳು ನಿವೃತ್ತವಾದವು.

ಪರತತ್ತ್ವ ಜಿಜ್ಞಾಸುಗಳು ಈ ವಿಧವಾದ ಸನ್ನಿವೇಶವನ್ನು ಬಹಳ ಭಕ್ತಿ ಶ್ರದ್ಧೆಗಳಿಂದ ಅನುಸಂಧಾನ ಮಾಡುತ್ತಾರೆ. ಈ ಪದ್ಯವನ್ನು ಹಾಡಿ ಹಾಡಿ ನಲಿಯುತ್ತಾರೆ. ಮೌನ ವ್ಯಾಖ್ಯಾನದ ರಹಸ್ಯವು ಸಾಮಾನ್ಯ ಬುದ್ಧಿಗೆ ಎಟುಕುವುದಿಲ್ಲ. ಮೌನ ವ್ಯಾಖ್ಯಾನದ ರಹಸ್ಯವನ್ನು ಮೌನದಿಂದಲೇ ಭೇದಿಸಿ ಅರಿಯಬೇಕು. ಆಧುನಿಕ ವಿದ್ಯಾಭ್ಯಾಸ  ಕ್ಷೇತ್ರಗಳಲ್ಲಿ ಶಿಕ್ಷಣ ವಿಧಾನಗಳ ಬಗ್ಗೆ ಬಹಳ ಸಂಶೋಧನೆಗಳು ನಡೆದಿವೆ. ವೈಜ್ಞಾನಿಕವಾದ ಹೊಸ ಹೊಸ ಬೋಧನಾ ವಿಧಾನಗಳೂ ರೂಪಿತವಾಗಿವೆ ಮತ್ತು ಆಗುತ್ತಲಿವೆ. ಆದರೆ ಮೌನ ವ್ಯಾಖ್ಯಾನದ ರಹಸ್ಯವಾಗಲೀ, ಮಹತ್ವವಾಗಲೀ ಆಧುನಿಕ ವಿಜ್ಞಾನಿಯ ಅಥವಾ ಸಂಶೋಧಕನ ಮನಸ್ಸಿಗೆ ತಟ್ಟಿದೆ ಎಂದು ಹೇಳಲಾಗುವುದಿಲ್ಲ. ಉಪದೇಶ ವಿಧಾನಗಳಲ್ಲಿ ವಾಗ್ವಿಧಾನಕ್ಕೆ ಅನಿವಾರ್ಯವಾದ ಪ್ರಧಾನ ಸ್ಥಾನ ಇರುವುದು ಸರಿಯಷ್ಟೆ. ವಾಗ್ವಿಧಾನವು ಪ್ರಭಾವಯುತವೂ, ಸಫಲವೂ ಆಗುವುದಕ್ಕಾಗಿ, ಅದಕ್ಕೆ ಪೋಷಕವಾದ ಇತರ ಲೌಕಿಕ  ಸಾಧನೆಗಳನ್ನು ಬೋಧಕನು ಆಶ್ರಯಿಸುವುದು ಆವಶ್ಯಕವಾಗುತ್ತದೆ. ವೈಜ್ಞಾನಿಕ ವಿಧಾನದಿಂದ ಆ ರೀತಿಯ ಸಾಧನಗಳನ್ನು ಪ್ರಯೋಗಿಸಿ ಬೊಧನೆ ಮಾಡಿದರೆ, ಶಿಷ್ಯನ ಮನಸ್ಸಿನಲ್ಲಿ ಜ್ಞಾನದ ಪ್ರಬೋಧವು ಶೀಘ್ರವಾಗಿ ಆಗುವುದಷ್ಟೇ ಅಲ್ಲದೆ, ಸ್ಥಿರವಾಗಿ ನೆಲೆಗೊಳ್ಳುತ್ತದೆ. ಇದು ಆಧುನಿಕ ಮನೋವಿಜ್ಞಾನಕ್ಕೆ ಸಮ್ಮತವಾದ ಸಿದ್ಧಾಂತವಾಗಿದೆ.

ಆದರೆ ಮೌನ ವ್ಯಾಖ್ಯಾನವು ಸಹಜವೂ.ಸುಂದರವೂ, ಅತ್ಯಂತ ವಿಜ್ಞಾನಯುಕ್ತವೂ ಆಗಿದೆಯೆಂದ ತಿಳಿಯಬೇಕು. ಮೌನ ವ್ಯಾಖ್ಯಾನದ ಪ್ರಭಾವವಂತೂ ಅತ್ಯಧ್ಬುತವಾದುದು. ಇದರಲ್ಲಿ ಗುರುವು ತ್ರಿಮೂರ್ತಿ ಸ್ವರೂಪನೂ, ವಿದ್ಯಾಮಯನೂ,ಸಾಕ್ಷಾತ್ ತತ್ತ್ವಮಯನೂ ಆಗಿರುತ್ತಾನೆ. ಶಿಷ್ಯನು ಸರ್ವಭಾವದಿಂದ ಗುರುವನ್ನು ಆಶ್ರಯಿಸುವವನಾಗಿರಬೇಕು. ಸಾಮಾನ್ಯವಾಗಿ ಲೋಕ ಜೀವನದಲ್ಲಿ ಒಬ್ಬ ವ್ಯಕ್ತಿಯಲ್ಲಿ ಉಂಟಾಗುವ ಮನೋಭಾವಗಳು ಎದುರಾಳಿಯ ಮೇಲೆ ಕೂಡಲೇ ಪ್ರಭಾವ ಬೀರುವುದನ್ನು ನಾವು ಕಾಣತ್ತೇವೆ. ಸಂತೋಷದಿಂದ ಉಬ್ಬಿ ಮುಖದಲ್ಲೂ ಸಂತೋಷಮುದ್ರೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯನ್ನು ನೋಡಿದಕೂಡಲೇ, ಎದುರಾಳಿಯ ಮನಸ್ಸಿನಲ್ಲಿಯೂ ಸಂತೋಷಭಾವ  ಉಂಟಾಗಿ, ಮುಖದಲ್ಲಿ ನಗುವಿನ ಮುದ್ರೆ ಮೂಡುತ್ತದೆ. ಒಬ್ಬ ವ್ಯಕ್ತಿಯು ಕೋಪದಿಂದ ಕೆಂಪೇರಿದ ಮುಖವುಳ್ಳವನಾಗಿ ಛಡಪಡಿಸುತ್ತಿರುವುದನ್ನು ನೋಡಿದ ಕೂಡಲೇ ಎದುರಾಳಿಯ ಮನಸ್ಸಿನಲ್ಲಿಯೂ ಕೋಪಾಂಕುರವುಂಟಾಗಿ, ಮುಖಮುದ್ರೆ ಬದಲಾಯಿಸುವುದನ್ನು ಕಾಣುತ್ತೇವೆ. ಶೋಕಗ್ರಸ್ತನಾಗಿ ಕರುಣಾಕ್ರಂದವನ್ನು ಮಾಡುತ್ತಿರುವ ವ್ಯಕ್ತಿಯನ್ನು ನೋಡಿದ ಕೂಡಲೇ, ಹಾಗೆ ನೋಡಿದವವನ  ಹೃದಯವೂ ಕರಗಿ ಕರುಣ ಭಾವವನ್ನು ತಾಳುತ್ತದೆ. ಹಾಗೆ ಪ್ರತಿಕ್ರಿಯೆಯನ್ನು ಹೊಂದಬೇಕೆಂದು ಮಾತಿನಿಂದ ಯಾರೂ ಉಪದೇಶ ಮಾಡದಿದ್ದರೂ, ಇಂತಹ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿಯಲ್ಲುಂಟಾಗುವ ಲೌಕಿಕ ಭಾವಗಳು ಎದುರಾಳಿಯ ಮೇಲೆ ಪ್ರಭಾವ ಬೀರುವುದು ಸಹಜವಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿ ಎದರಾಳಿಯೂ ಸಂಸ್ಕಾರವಂತನಾಗಿರಬೇಕು. ಅಂದರೆ, ಸಂತೋಷ, ಕೋಪ, ಶೋಕ ಇತ್ಯಾದಿ ಮನೋಭಾವಗಳ ಸಂಸ್ಕಾರವಿಲ್ಲದವನು ಆಯಾಭಾವಗಳಿಂದ ಪ್ರಭಾವಿತನಾಗುವುದಿಲ್ಲ. ಉದಾಹರಣೆಗೆ-ಆಗತಾನೇ ಹುಟ್ಟಿದ ಮಗುವಿನ ಮುಂದೆ ಈ ರೀತಿಯ ಭಾವಗಳನ್ನು ಪ್ರದರ್ಶಿಸಿದರೆ, ಅದರ ಮೇಲೆ ಗಮನಾರ್ಹವಾದ ಯಾವ ಪ್ರಭಾವವೂ  ಉಂಟಾಗುವುದಿಲ್ಲ. ಅಂತೆಯೇ ಸ್ಥಿತಪ್ರಜ್ಞನಾದ ಯೋಗಿಯ ಮೇಲೂ ಈ ರೀತಿಯಾದ ಭಾವಗಳು ಬೀರಲಾರವು.

ಈ ರೀತಿಯ ವೈಜ್ಞಾನಿಕ ಹಿನ್ನೆಲೆಯಲ್ಲಿ ಮೌನೋಪದೇಶದ ರಹಸ್ಯವನ್ನು ಅರಿಯುವುದು ಆವಶ್ಯಕ. ವಟವೃಕ್ಷದ ಬುಡದಲ್ಲಿ ಈ ಮೌನವ್ಯಾಖ್ಯಾನದ ಆಶ್ಚರ್ಯ ಘಟನೆಯನ್ನು ವರ್ಣಿಸುವುದರಲ್ಲಿ ಒಂದು ವಿಶೇಷ ರಹಸ್ಯವಿದೆ. ವಟ ವೃಕ್ಷವು ಬಿಳಲುಬಿಟ್ಟುಕೊಂಡು ಬೆಳೆಯುತ್ತಾ (ವಿಸ್ತರಿಸುತ್ತಾ) ಹೋಗುವ ಸ್ವಭಾವವುಳ್ಳದ್ದು. ಈ ಸಂಸಾರವೂ ಹಾಗೆಯೇ ವಿಸ್ತಾರ ಹೊಂದುತ್ತಿರುವುದು. ಹೀಗೆ ವಟವೃಕ್ಷವು ಸಂಸಾರದ ಸಹಜವಾದ ಪ್ರತೀಕವಾಗಿದೆ. ಇಂತಹ ವೃಕ್ಷದ ಮೂಲದಲ್ಲಿ ತತ್ತ್ವೋಪದೇಶಮಾಡಲು ಗುರುವು ಕುಳಿತಿರುವುದು, ಅಂತಹ ಉಪದೇಶವನ್ನು ಪಡೆಯಲು ಶಿಷ್ಯರು ಅಂತಹ ಗುರುವನ್ನು ಆಶ್ರಯಿಸಿರುವುದು:- ಈ ಗುರು ಶಿಷ್ಯ ಸಮಾಗಮ ಎಷ್ಟುಸಮಂಜಸವಾಗಿದೆ! ಎಂದಿಗೂ ಕಂದದಿರುವ ಜ್ಞಾನ ಪ್ರಬೋಧದ ತಾರುಣ್ಯ ಗುರುವಿನಲ್ಲಿ ತುಂಬಿದೆ. ಶಿಷ್ಯರಾದರೋ ಸಂಸಾರ ಚಕ್ರದಲ್ಲಿ ಸಿಕ್ಕಿ, ಬಳಲಿ, ಬೆಂಡಾಗಿ, ವೃದ್ಧರಾಗಿದ್ದಾರೆ. ತಾಪತ್ರಯದಿಂದ ಪೀಡಿತರಾದ ಅವರ ಶರೀರ, ಇಂದ್ರಿಯ, ಮನಸ್ಸು, ಬುದ್ಧಿಗಳು, ತತ್ತರಿಸಿ ಜೀರ್ಣವಾಗಿವೆ. ಆದರೆ ಈಗ ತತ್ತ್ವದ ಜಜ್ಞಾಸುಗಳಾದ ಅವರಲ್ಲಿ ಗುರುಭಕ್ತಿ,  ಪ್ರಾಮಾಣಿಕತೆ, ತತ್ತ್ವನಿಷ್ಠೆ, ಮುಂತಾದ ಉತ್ತಮ ಶಿಷ್ಯಗುಣಗಳು ಜಾಗೃತವಾಗಿವೆ. ಇಂತಹ ಸುಸಂಧರ್ಭದಲ್ಲಿ ಗುರು ಶಿಷ್ಯರಿಗೆ ನೇರವಾಗಿ ತತ್ತ್ವ ಬೋಧವುಂಟಾಗುವಂತೆ, ಮೌನವ್ಯಾಖ್ಯಾನದಿಂದ ಉತ್ತಮೋಪದೇಶವನ್ನು ಮಾಡುತ್ತಾನೆ. ಶಿಷ್ಯರು ಅತ್ಯಂತ ಪರಿಪಾಕ ಹೊಂದಿದ ಮನಸ್ಸುಳ್ಳವರಾಗಿ, ಪರತತ್ತ್ವಮಯನಾದ ಗುರುವಿಗೆ ಅಭಿಮುಖವಾಗಿ ಕುಳಿತಿದ್ದಾರೆ. ಶಿಷ್ಯರಿಗೆ ಮಾಡಬೇಕಾದ ಚೋದನೆ, ಬೋಧನೆಗಳೆರಡರ ಹಂತವನ್ನೂ ದಾಟಿಯಾಗಿದೆ. ಇನ್ನು ಉಳಿದಿರುವುದು, ನೇರವಾದ ಪರತತ್ತ್ವ ಪ್ರಾಪ್ತಿ,. ಕೂರ್ಮವು ತನ್ನ ಅಂಗಗಳನ್ನು ಒಳಗೆ ಎಳೆದುಕೊಳ್ಳುವಂತೆ, ಗುರುವು ಸಮಸ್ತ ಇಂದ್ರಿಯಗಳನ್ನೂ ಉಪಸಂಹಾರ ಮಾಡಿಕೊಂಡು, ಮನೋಬುದ್ಧಿಗಳನ್ನು ಪರಮಾತ್ಮನಲ್ಲಿ ನಿಲ್ಲಸಿ, ಸಹಜವಾದ ಮಹಾ ಮೌನದ ಸ್ಥಿತಿಯಲ್ಲಿದ್ದಾನೆ. ನಿವಾತ ದೀಪದಂತೆ ಒಳಗೆ ಬೆಳಗುತ್ತಿರುವ ಅಂತರ್ಜ್ಯೋತಿಯ ಪ್ರಕಾಶದಿಂದ ತುಂಬಿ ಹೋಗಿದ್ದಾನೆ. ಆ ಪರಮಾನಂದ ಭಾವಕ್ಕೆ ಸಹಜವಾದ ಶಾಂಭವೀ ಮುದ್ರೆಯು ಗುರುವಿನಲ್ಲಿ ಮೂಡಿದೆ. ಜಾಲಂಧರ, ಉಡ್ಡೀಯನ, ಮೂಲ ಎಂಬ ಮೂರು ಬಂಧಗಳು ಯೋಗೈಶ್ವರ್ಯ ಸಂಪನ್ನನಾದ ಗುರುವಿನ ಶ್ರೀ ವಿಗ್ರಹದಲ್ಲಿ ಸಹಜವಾಗಿ ಏರ್ಪಟ್ಟಿವೆ.

"ಜಾಲಂಧರೋಡ್ಡೀಯನ ಮೂಲಬಂಧಾನ್
ಜಲ್ಪಂತಿ ಕಂಠೋಧರ ಪಾಯು ಸಂಸ್ಥಾನ್|
ಬಂಧ ತ್ರಯೇಸ್ಮಿನ್ ಪರಿಚೀಯಮಾನೇ
ಬಂಧಃ ಕುತೋ ದಾರುಣ ಕಾಲ ಪಾಶಾತ್||

ಜೀವದೇವರ ಏಕೀಭಾವವನ್ನುಹೊಂದಿರುವ ಜ್ಞಾನ ಮುದ್ರೆ, ಆ ಜ್ಞಾನವನ್ನು ಸೂಚಿಸುವ ವ್ಯಾಖ್ಯಾಮುದ್ರೆಗಳು ಸಹಜವಾಗಿ ಶೋಭಿಸುತ್ತಿವೆ. ಗುರುವಿನ ಮುಖದಲ್ಲಿ ಬೆಳಗುತ್ತಿರುವ ಬ್ರಹ್ಮಾನಂದದ ಪ್ರಕಾಶವು, ಸುಕೃತಿ ಜೀವಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಗುರುವಿನ ಈ ಮೌನಮುದ್ರೆಯಲ್ಲಿ ವಿಶ್ವವನ್ನೇ ತನ್ನೆಡೆಗೆ ಎಳೆದಕೊಳ್ಳುವ ಯೋಗೈಶ್ವರ್ಯದ ಪ್ರಭಾವ ಅನಿರ್ವಚನೀಯವಾದುದು. ಗುರುವಿನ ಪರಮ ಕರುಣೆಗೆ ಪಾತ್ರರಾದ ಶಿಷ್ಯರು ಅವನ ಈ ಯೋಗೈಶ್ವರ್ಯದ ಪ್ರಭಾವಕ್ಕೆ ಸಿಕ್ಕಿದರು. ಶಿಷ್ಯರ ದೇಹ, ಪ್ರಾಣ, ಮನಸ್ಸು, ಇಂದ್ರಿಯ, ಬುದ್ಧಿಗಳು ಪಾವನವಾದವು. ಶುದ್ಧಾತ್ಮರಾದ ಅವರು ಗುರುವಿನೊಂದಿಗೆ ಏಕೀ ಭಾವವನ್ನು ಹೊಂದಿ, ತಾವೂ ಆ ಮಹಾಮೌನದ ಮುದ್ರೆಗೆ ಏರಿದರು. ತಿಳಿಯಬೇಕಾದುದನ್ನು ತಿಳಿದರು. ಪಡೆಯಬೇಕಾದುದನ್ನು ಪಡೆದು ಧನ್ಯರಾದರು. ಈ ಯೋಗೈಶ್ವರ್ಯದ ಸ್ಥಿತಿಯಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ. ಅದು ತತ್ತ್ವನಿರ್ಣಯದ ಸ್ಥಿತಿ. ಆ ಸ್ಥಿತಿಯಲ್ಲಿ ಹೃದಯಗ್ರಂಥಿಯು ಭೇದಗೊಂಡು, ಸಂಶಯಗಳೆಲ್ಲಾ ನಿರ್ಮೂಲಗೊಂಡು, ಸಕಲ ಕರ್ಮಗಳೂ ಕ್ಷಯ ಹೊಂದಿ, ಕೇವಲ ಪರಾತ್ಪರ ಸತ್ಯ ವಸ್ತುವಿನ ಸಾಕ್ಷಾತ್ಕಾರವೊಂದೇ  ನೆಲೆಗೊಳ್ಳುತ್ತದೆ:-

"ಭಿದ್ಯತೇ ಹೃದಯಗ್ರಂಥಿಃ   ಛಿದ್ಯಂತೇ ಸರ್ವ ಸಂಶಯಾಃ |
ಕ್ಷೀಯಂತೇ ಚಾಸ್ಯ ಕರ್ಮಾಣಿ, ತಸ್ಮಿನ್ ದೃಷ್ಟೇ ಪರಾವರೇ||"  

ಇದೇ ಗುರುವಿನ ಮಹಾ ಮೌನವ್ಯಾಖ್ಯಾನದ ಮಹಿಮೆ, ಯೋಗೇಶ್ವರನಾದ ಅಂತಹ ಗುರುವಿಗೆ ಪ್ರಾಣ ಪ್ರಣಾಮಗಳು. ಅಂತಹ ಗುರುವನ್ನು ಸರ್ವಭಾವಗಳಿಂದಲೂ ಉಪಾಸಿಸಿ, ತತ್ತ್ವ ಸಾಕ್ಷಾತ್ಕಾರ ಪಡೆದು ಧನ್ಯರಾದ ಶಿಷ್ಯರಿಗೂ ಪ್ರಾಣ ಪ್ರಣಾಮಗಳು:--

"ಗುರುರೇವ ಪರಂಬ್ರಹ್ಮ ಗುರುರೇವ ಪರಾಗತಿಃ|
ಗುರುರೇವ ಪರಾವಿದ್ಯಾ ಗುರುರೇವ ಪರಾಯಣಂ||"

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಸಂಪುಟ :3 ಸಂಚಿಕೆ:3 ರಲ್ಲಿ ಪ್ರಕಟವಾಗಿದೆ.