ಲೇಖಕರು: ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಪಾರ್ವತೀ ದೇವಿಯು ಪರಮೇಶ್ವರನನ್ನು ಪತಿಯನ್ನಾಗಿ ಪಡೆಯಲು ತಪಸ್ಸೊಂದೇ ಏಕೈಕ ಸಾಧನವೆಂಬುದನ್ನು ಅರಿತು, ಪರಶಿವನನ್ನು ಹೊಂದಲು ಸಾಮಾನ್ಯರು ಊಹಿಸಲೂ ಸಾಧ್ಯವಾಗದಂತಹ ಅತ್ಯಂತ ಕಠಿಣವಾದ ತಪಸ್ಸನ್ನು ಆಚರಿಸುತ್ತಾಳೆ..ಅನೇಕ ದಿನಗಳವರೆಗೆ ಪಂಚಾಗ್ನಿಯ ಮಧ್ಯದಲ್ಲಿ ನಿಂತು, ತರಗೆಲೆಗಳನ್ನೇ ಆಹಾರವಾಗಿ ಸೇವಿಸಿ, ನಂತರ ಅವನ್ನೂ ತ್ಯಜಿಸಿ "ಅಪರ್ಣಾ" ಎಂಬ ಹೆಸರು ಪಡೆದು ಏಕಾಗ್ರವಾದ ಮನಸ್ಸಿನಿಂದ ಪರಮೇಶ್ವರನನ್ನೇ ಧ್ಯಾನಿಸುತ್ತಾಳೆ. ಅವಳ ತಪಸ್ಸಿನ ದಾರ್ಢ್ಯವನ್ನು ಪರೀಕ್ಷಿಸುವ ಸಲುವಾಗಿ ಪರಮೇಶ್ವರನು ಓರ್ವ ಬ್ರಹ್ಮಚಾರಿಯ ರೂಪದಲ್ಲಿ ಬಂದು, ಅವಳ ತಪಸ್ಸಿನ ಕಾರಣ ತಿಳಿದು - "ರಾಜಕುಮಾರಿಯಾದ ತ್ರಿಲೋಕ ಸುಂದರಿಯಾದ ನೀನೆಲ್ಲಿ? ಸ್ಮಶಾನವಾಸಿಯಾದ ಭಸ್ಮಧಾರಿಯಾದ ಆ ಪರಶಿವನಲ್ಲಿ"? ಇತ್ಯಾದಿಯಾಗಿ ಶಿವನನ್ನು ಅತಿಯಾಗಿ ನಿಂದಿಸಿ, ಅವನು ನಿನಗೆ ಯೋಗ್ಯವಾದ ವರನಲ್ಲ ಎನ್ನುತ್ತಾನೆ. ಇದನ್ನು ಸ್ವಲ್ಪವೂ ಸಹಿಸದ ಪಾರ್ವತಿಯು ತನ್ನೆರಡೂ ಕಿವಿಗಳನ್ನು ಮುಚ್ಚಿಕೊಂಡು "ಮಹಾತ್ಮರನ್ನು ನಿಂದಿಸುವುದು ಎಷ್ಟು ಪಾಪಕರವೋ ಆ ನಿಂದೆಯನ್ನು ಕೇಳಿಸಿಕೊಳ್ಳುವುದೂ ಅತ್ಯಂತ ಪಾಪಕರ. ಆ ಶಿವನ ಮಹಿಮೆಯನ್ನು ನೀನೇನು ಬಲ್ಲೆ? ನಿನ್ನ ದೃಷ್ಟಿಯಲ್ಲಿ ಅವನು ಹೇಗೇ ಇರಲಿ, ಅವನೇ ತ್ರಿಲೋಕನಾಥನಾದ ನನ್ನ ಸ್ವಾಮಿ" ಎಂಬುದಾಗಿ ಹೇಳಿ ತಪಸ್ಸನ್ನು ಮುಂದುವರೆಸಲು ಬೇರೆಡೆಗೆ ತೆರಳಲು ಸಿದ್ಧಳಾಗುತ್ತಾಳೆ. ಆಗ ಪರಮೇಶ್ವರನು ತನ್ನ ನಿಜಸ್ವರೂಪವನ್ನು ತೋರಿಸಿ ತನ್ನನ್ನು ಪಡೆಯುವ ಬಗ್ಗೆ ಅಚಲವಾದ ನಿರ್ಧಾರವನ್ನು ಹೊಂದಿರುವ ಪಾರ್ವತಿಯನ್ನು ವರಿಸುತ್ತಾನೆ.
ಪ್ರತಿಯೊಂದು ಜೀವಿಯ ಮಹಾಧ್ಯೇಯವು ಭಗವಂತನನ್ನು ಪಡೆಯುವುದೇ ಆಗಿದೆ. ಅದಕ್ಕೆ ಅನುಗುಣವಾದ ಅವಾಂತರ[ಅನ್ಯ] ಧ್ಯೇಯಗಳನ್ನು ಇಟ್ಟುಕೊಳ್ಳಬೇಕು ಎಂಬುದು ಈ ದೇಶದ ಋಷಿಗಳ ಅಭಿಮತ. ಶ್ರೀರಂಗಮಹಾಗುರುಗಳು- ಮನುಷ್ಯ ಜನ್ಮಸಿಕ್ಕಿದ ತಕ್ಷಣವೇ ಭಗವಂತನನ್ನು ಪಡೆಯುವ ಹಕ್ಕು ಬಂದು ಬಿಡುತ್ತದೆ. ಅದನ್ನು ಅಧಿಕಾರದಿಂದ ಚಲಾಯಿಸಬೇಕು. ಗಾಳಿಬಂದಾಗ ತೂರಿಕೊಂಡು ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದಿದ್ದರು. ಪಾರ್ವತಿಯ ತಪಸ್ಸು ನಮ್ಮೆಲ್ಲರಿಗೂ ಆದರ್ಶವಾಗಿದೆ. ಪ್ರಕೃತಿಯಲ್ಲಿ ಜೀವಿಸುವ ನಾವೆಲ್ಲಾ ಪ್ರಕೃತಿಸ್ವರೂಪಿಣಿಯಾದ ಪಾರ್ವತಿಯ ಅನುಗ್ರಹದಿಂದ ನಮ್ಮೊಳಗೇ ಚೈತನ್ಯಮಯವಾಗಿ ಬೆಳಗುತ್ತಿರುವ ಪರಶಿವನನ್ನು ಕಂಡು ವರಿಸುವಂತಾಗಲಿ. ಆ ಲಕ್ಷ್ಯಕ್ಕೆ ಅಭಿಮುಖವಾಗಿಯೇ ನಮ್ಮ ವ್ಯವಹಾರ ಜೀವನವನ್ನು ಹೊಂದಿಸಿಕೊಳ್ಳುವಂತಾಗಲಿ ಎಂದು ಪ್ರಾರ್ಥಿಸೋಣ. ಅವಳಂತೆ ಭಗವಂತನನ್ನೇ ಮನಸ್ಸಿನಲ್ಲಿ ಸದಾ ಚಿಂತಿಸುತ್ತಾ ಪರಮಾತ್ಮನನ್ನು ಹೊಂದಲು ಪ್ರಯತ್ನಿಸೋಣ.
ಸೂಚನೆ: 28/10/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.