Saturday, October 31, 2020

ನಿತ್ಯಜೀವನದಲ್ಲಿ ಅಷ್ಟಾಂಗಯೋಗ (Nityajivanadalli Astangayoga)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)ಅಷ್ಟಾಂಗ ಯೋಗದ ಎಂಟು ಅಂಗಗಳು ಹೇಗೆ ಜೀವನದಲ್ಲಿ ಸಹಜವಾಗಿ ಅಡಕವಾಗಿದವೆಯೆಂಬುದನ್ನು ಶ್ರೀರಂಗ ಮಹಾಗುರುಗಳು ಅನೇಕ ಉದಾಹರಣೆಗಳಿಂದ ಎತ್ತಿ ತೋರಿಸುತ್ತಿದ್ದರು. ಈ ಸಹಜತೆಯನ್ನು ನಿದ್ರೆಯ ಉದಾಹರಣೆಯಿಂದ ಗಮನಿಸಬಹುದು. ಗಾಢ ನಿದ್ರೆಯಲ್ಲಿಯೂ ಬಾಹ್ಯ ಪ್ರಜ್ಞೆ ಇರುವುದಿಲ್ಲವಾದುದರಿಂದ ಗಾಢನಿದ್ರೆಯನ್ನು ಜಾಡ್ಯನಿದ್ರೆಯೆಂದೂ ಸಮಾಧಿ ಸ್ಥಿತಿಯನ್ನು ಅಜಾಡ್ಯ ನಿದ್ರೆ ಅಥವಾ ಯೋಗನಿದ್ರೆಯೆಂದೂ ಕರೆಯುತ್ತಾರೆ. ಹೇಗೆ ಯೋಗದ ಎಂಟನೇ ಅಂಗವಾದ ಸಮಾಧಿಸ್ಥಿತಿಯನ್ನು ತಲುಪಲು ಮೊದಲ ಏಳು ಅಂಗಗಳು ಸಾಧನವಾಗಿವೆಯೋ ಹಾಗೆಯೇ ಗಾಢನಿದ್ರಾ ಸ್ಥಿತಿಯನ್ನು ತಲುಪಲೂ ಸಹ ಅಂಗಗಳಿವೆಯೆಂದು ಗಮನಿಸಬಹುದು. 

ಯಮ ಎಂದರೆ ಸಂಯಮ, ನಿಷೇಧ ರೂಪವಾದ ಉಪಾಯಗಳು ಗಾಢನಿದ್ರೆಗೂ ಬೇಕಾಗುತ್ತದೆ. ಹಗಲು ನಿದ್ರೆ ಮಾಡಬಾರದು, ರಾತ್ರಿ ವೇಳೆ, ನಿದ್ರೆಗೆ ಮುನ್ನ ಕಾಫಿ ಕುಡಿಯಬಾರದು ಮುಂತಾದವು ನಿದ್ರಾಂಗವಾದ ಯಮ. ನಿಯಮ - ದಿನದಲ್ಲಿ ಸ್ವಲ್ಪವಾದರೂ ದೈಹಿಕ ಪರಿಶ್ರಮವಿರಬೇಕು, ಮನಸ್ಸು, ಬುದ್ಧಿಗಳನ್ನು ಸಕ್ರಿಯವಾಗಿಟ್ಟುಕೊಳ್ಳಲು ಏನನ್ನಾದರೂ ಓದಬೇಕು ಮುಂತಾದ, ಆಚರಿಸಬೇಕಾದ ಉಪಾಯಗಳೇ ನಿದ್ರೆಗೆ ನಿಯಮವಾಗುತ್ತದೆ. ಆಸನ - ಮಲಗಿಕೊಂಡಿರುವ ಭಂಗಿಯೇ ನಿದ್ರೆಗೆ ಅತ್ಯಂತ ಸೂಕ್ತವಾದ ಆಸನ. ನಿದ್ರೆಯೇ ಸಹಜವಾಗಿ ಒಲಿದಿದ್ದರೆ, ಅದು ನಿಂತುಕೊಂಡಿರುವವರನ್ನೂ, ಕುಳಿತುಕೊಂಡಿರುವವರನ್ನೂ ತಾನಾಗಿಯೇ ಮಲಗಿಸಿಬಿಡುತ್ತದೆ. ಪ್ರಾಣಾಯಾಮ - ನಿದ್ರೆ ಬರುತ್ತಿದ್ದರೆ ನಮ್ಮ ಉಸಿರಾಟದ ಗತಿಯೂ ಬದಲಾಗುತ್ತಿರುತ್ತದೆ. ತಾಯಂದಿರು ಮಕ್ಕಳ ಉಸಿರಾಟದ ಬದಲಾವಣೆಯನ್ನು ಗಮನಿಸಿಯೇ ನಿದ್ರೆ ಬರುತ್ತಿದೆಯೆಂದು ಗುರುತಿಸಿ, ನಿದ್ರೆ ಮಾಡಿಸಿಬಿಡುತ್ತಾರೆ. ನಿದ್ರಾಹೀನತೆಯಿರುವವರು ಪ್ರಯತ್ನಪೂರ್ವಕವಾಗಿ ದೀರ್ಘ ಉಸಿರಾಟವನ್ನು ಮಾಡಿದರೆ ಉಸಿರಾಟದ ವೇಗ ಶಮನವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

 ಪ್ರತ್ಯಾಹಾರ - ನಿದ್ರೆ ಮಾಡಬೇಕೆಂದರೆ, ಕೈ ಕಾಲುಗಳ ಕೆಲಸವನ್ನು ಬಿಟ್ಟು ಒಂದೆಡೆ ಮಲಗಿಕೊಳ್ಳುತ್ತೇವೆ. ಕಣ್ಣಿನ ಕೆಲಸ ಬಿಟ್ಟು, ಕಣ್ಣು ಮುಚ್ಚಿಕೊಳ್ಳುತ್ತೇವೆ. ಒಟ್ಟಾರೆ ಇಂದ್ರಿಯಗಳನ್ನು ಅವುಗಳ ವಿಷಯದಿಂದ ಹಿಂದಿರುಗಿಸುತ್ತೇವೆ. ಧಾರಣ, ಧ್ಯಾನ - ನಿದ್ರೆಯ ಸ್ಥಿತಿಯನ್ನು ಮನಸ್ಸಿನಲ್ಲಿ ಧರಿಸಿ ಉಳಿದ ಯೋಚನೆಗಳನ್ನು ಬಿಟ್ಟುಬಿಡುತ್ತೇವೆ. ನಿದ್ರಾ ಹೀನತೆಯಿರುವವರಿಗೆ ವೈದ್ಯರು "Counting the sheep" ಮೊದಲಾದ ಯಾವುದಾದರೂ ಒಂದು ವಿಷಯವನ್ನು ಮಾತ್ರ ಚಿಂತಿಸಲು ಹೇಳುತ್ತಾರೆ ಮತ್ತು ಇದರಿಂದ ನಿದ್ರೆ ಸುಲಭವಾಗುತ್ತದೆ. 

ಆದುದರಿಂದ ಅಷ್ಟಾಂಗ ಯೋಗವು ಯಾರೋ ಹಿಮಾಲಯದಲ್ಲಿ ಕುಳಿತಿರುವ ತಪಸ್ವಿಗಳಿಗೆ ಮಾತ್ರ ಸೀಮಿತವಾಗಿರದೇ ಎಲ್ಲರೂ ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ, ಅಳವಡಿಸಿಕೊಳ್ಳಬೇಕಾದ ಉಪಾಯಗಳ ಸಮೂಹವಾಗಿದೆ. ಮಹರ್ಷಿಗಳು ಈ ಉಪಾಯಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಹೆಣೆದಿದ್ದಾರೆ.

ಸೂಚನೆ: 31/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.