Wednesday, October 7, 2020

ಅಷ್ಟಾವಕ್ರನ ಆದರ್ಶ(Astaavakrana Adarsha)

ಲೇಖಕರು: ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)

a

ಉದ್ಧಾಲಕ ಮಹರ್ಷಿಗಳಿಗೆ ಕಹೋಳ ಎಂಬ ಶಿಷ್ಯನಿದ್ದನು. ಅವನು ಗುರುವು ಹೇಳಿಕೊಟ್ಟ ಪಾಠಗಳನ್ನು ಬಹಳ ಶ್ರದ್ದೆಯಿಂದ ಗ್ರಹಿಸುತ್ತಿದ್ದುದಲ್ಲದೇ ನಿತ್ಯವೂ ಗುರುವಿನ ಸೇವಾ ಕಾರ್ಯಗಳನ್ನುಭಕ್ತಿಯಿಂದ ಮಾಡಿ ಗುರುವಿನ ಪ್ರೀತಿಗೆ ಪಾತ್ರನಾಗಿದ್ದನು. ಆದರೆ ಅತಿಯಾದ ಕೋಪ ಅವನಲ್ಲಿದ್ದ ದೊಡ್ಡ ದೌರ್ಬಲ್ಯ.ಅವನು ಗುರುಕುಲವಾಸವನ್ನು ಮುಗಿಸಿ, ಸಕಲಶಾಸ್ತ್ರಗಳಲ್ಲಿ ಪಂಡಿತನಾಗಿ ಗುರುಗಳ ಅಪ್ಪಣೆಯನ್ನು  ಪಡೆದು ಸ್ವಗ್ರಾಮಕ್ಕೆ ತೆರಳಲು ಉದ್ಯುಕ್ತನಾದಾಗ ಮಹರ್ಷಿ ಉದ್ದಾಲಕರು ತಮ್ಮ ಸುಪುತ್ರಿಯನ್ನುಪ್ರಿಯಶಿಷ್ಯನಾದ ಕಹೋಳನಿಗೆ ಧಾರೆಯೆರೆದುಕೊಟ್ಟು ಇಬ್ಬರನ್ನೂ ಬೀಳ್ಕೊಡುತ್ತಾರೆ. "ನಿನ್ನ ದೌರ್ಬಲ್ಯವಾದಂತಹ ಶೀಘ್ರಕೋಪವನ್ನು ತ್ಯಜಿಸುವುದಕ್ಕೆ ಅನವರತವೂ ಪ್ರಯತ್ನಿಸು" ಎಂದು ಪ್ರೀತಿಯಿಂದಲೇ ಹೇಳಿಕಳಿಸಿದ್ದರು.ಕೆಲವು ವರ್ಷಗಳ ತರುವಾಯ ಕಹೋಳನು ಸ್ವಗೃಹದಲ್ಲಿ ವೇದಪಾರಾಯಣವನ್ನು ಮಾಡುತ್ತಿರುವ ಸಂದರ್ಭದಲ್ಲಿ ಅವನ ಪತ್ನಿ ಸುಜಾತೆಯ ಗರ್ಭದಲ್ಲಿ ಬೆಳೆಯುತ್ತಿರುವ ಜ್ಞಾನಿಯಾದಶಿಶುವು ಇವನ ವೇದ ಪಠಣದಲ್ಲಿ ಎಂಟು ಕಡೆ ದೋಷವನ್ನು ಗುರುತಿಸಿ ನಗುತ್ತದೆ. ಆಗ ಕಹೋಳನು ಗುರುಗಳ ಹಿತವಚನವನ್ನೂ ಮರೆತು ಕ್ರೋಧದಿಂದ ಕೆಂಡಾಮಂಡಲನಾಗಿ ತನ್ನ ಪತ್ನಿಯ ಗರ್ಭದಲ್ಲಿಜ್ಞಾನಿಯಾದ ಪುತ್ರನು ಬೆಳೆಯುತ್ತಿದ್ದಾನೆ ಎಂಬುದನ್ನು ತಿಳಿದು ಸಂತಸಪಡುವುದನ್ನು ಬಿಟ್ಟು, "ನನ್ನ ವೇದಪಠಣದಲ್ಲಿ ಎಂಟು ಕಡೆ ದೋಷವನ್ನು ಗುರುತಿಸಿದ ನಿನ್ನ ದೇಹದಲ್ಲಿ ಎಂಟು ಕಡೆ ವಕ್ರತೆಉಂಟಾಗಲಿ" ಎಂದು ಶಪಿಸುತ್ತಾನೆ. ಅದರ ಪರಿಣಾಮವಾಗಿ ಅವನ ಪುತ್ರನು ಎಂಟು ಕಡೆಗಳಲ್ಲಿ ವಕ್ರತೆಯ ಕಾರಣ ಅಷ್ಟಾವಕ್ರ ಎಂಬ ಹೆಸರನ್ನು ಹೊಂದಿ ಬಾಲ್ಯದಲ್ಲಿ ತನ್ನ ಸಹಪಾಠಿಗಳ ಪರಿಹಾಸ್ಯಕ್ಕೆಗುರಿಯಾದರೂ ಮಹಾ ಜ್ಞಾನಿಯಾಗಿ ಪೂಜಿತನಾಗಿ ಪ್ರಸಿದ್ಧನಾಗುತ್ತಾನೆ. 

ಈ ಉಪನಿಷತ್ ಕಥೆ ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಿದೆ. ಒಂದು ಚಿಕ್ಕ ದೌರ್ಬಲ್ಯವೂ ಮಹಾ ಅನರ್ಥಕ್ಕೆ ಕಾರಣವಾಗಬಹುದು. ಕ್ರೋಧವೂ ಕೂಡ ರೌದ್ರವೆಂಬ ರಸದ ಸ್ಥಾಯಿಭಾವ; ನಮ್ಮಜೀವನಕ್ಕೆ ನವರಸಗಳೂ ಅವಶ್ಯಕ. ಆದರೆ ಅವುಗಳು ಅಕಾಲದಲ್ಲಿ ಅಪಾತ್ರರ ಮೇಲೆ ಪ್ರಯೋಗಿಸಲ್ಪಡಬಾರದು. ಕಾಮಕ್ರೋಧಾದಿಗಳು ನಮ್ಮ ವಶದಲ್ಲಿರಬೇಕು ಅವುಗಳಿಗೆ ನಾವುವಶರಾದಾಗ ಆಪತ್ತು ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು.ಹೊರಗಿನ ದೇಹ ವಕ್ರವಾದರೂ ಅಷ್ಟಾವಕ್ರನ ಒಳಬೆಳಗುವ ಸತ್ಯದರ್ಶನದ ಮನಸ್ಸಿನ ಮಾರ್ಗ ನೇರವಾಗಿತ್ತು. ಅವನು ತನ್ನ ಸಾಧನೆಗೆ ದೇಹದ ವಕ್ರತೆಯು ಬಾಧಕವೆಂದುಕೊಳ್ಳಲಿಲ್ಲ. ಅವನುನಮಗೆಲ್ಲ ಆದರ್ಶವಾಗಲಿ.

ಸೂಚನೆ: 07/10/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.