ಲೇಖಕರು : ಡಾ|| ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
"ಅಮ್ಮ ! ಪ್ರತಿದಿನವೂ ಏಕೆ ಹಲ್ಲುಜ್ಜಿ ಬಾಯಿಯನ್ನು ಮುಕ್ಕಳಿಸಬೇಕೆಂದು ಹೇಳುತ್ತೀಯೇ?" ಎಂದು ಪ್ರಶ್ನಿಸಿತು ಮುಗ್ಧ ಮಗುವೊಂದು. "ಬಾಯಿಯಲ್ಲಿ ಉದ್ಭವಿಸುವ ಕೀಟಾಣುಗಳನ್ನು ನಾಶಮಾಡಲು ಮಗು" ಎಂದಳು ತಾಯಿ. "ನಿನ್ನೆ ಇರುವೆಯನ್ನು ಹಿಂಸಿಸಬೇಡ ಎಂದು ಹೇಳಿದೆಯಲ್ಲಮ್ಮ !" ಕೊಂಚ ತಬ್ಬಿಬ್ಬಾದ ತಾಯಿ, " ಅಲ್ಲ ಮಗು, ಇರುವೆ ನಮಗೇನೂ ತೊಂದರೆ ಮಾಡಲಿಲ್ಲವಲ್ಲ".! ಮಗುವು ಕೊಂಚ ಆಲೋಚಿಸಿ "ಬೀದಿಯಲ್ಲಿ ಆಟವಾಡುವಾಗ -ನಮ್ಮನ್ನು ಉಪದ್ರವಿಗಳೆಂದು ಪಕ್ಕದ ಮನೆಯವರು ಹೇಳುತ್ತಾರಲ್ಲ:. ಆದರೆ ನಮಗೇನೋ ಅವರೇ ಕಿರುಕುಳ ಕೊಡುವಹಾಗೆ ಕಾಣುತ್ತದೆ. ಈಗ ಯಾರು ಯಾರನ್ನು ನಾಶ ಮಾಡಬೇಕು ?" ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವೇ ಸರಿ. ಹಿರಿಯರೂ ಕೆಲವೊಮ್ಮೆ ಇಂತಹ ಪ್ರಶ್ನೆಗಳನ್ನು ಮಾಡಬಹುದು. "ಯುದ್ಧವನ್ನೇಕೆ ಮಾಡಬೇಕು? ಗಡಿಯಲ್ಲಿ ಸೈನಿಕರೇಕೆ ಸಾಯಬೇಕು? ಭೂಮಿಗೋಸ್ಕರ ಸಾಯಬೇಕೇ? ಶತ್ರುವೆಂದು ಭಾವಿಸಲ್ಪಡುವವರೂ ಮನುಷ್ಯರಲ್ಲವೇ ? ಎಲ್ಲರೂ ಪರಸ್ಪರ ಪ್ರೀತಿಯಿಂದ ಇರುವುದೇ ಮೇಲು. 'ಅಹಿಂಸಾ ಪರಮೋ ಧರ್ಮ:' ಎಂದು ಹೇಳಿಲ್ಲವೆ ? ಆದ್ದರಿಂದ ಸರ್ವಪ್ರಯತ್ನದಿಂದಲೂ ಯುದ್ಧ-ಹಿಂಸೆಗಳನ್ನು ನಿಲ್ಲಿಸಬೇಕು." ಹೀಗೆಲ್ಲಾ ಹೇಳುವವರು ಅನೇಕರುಂಟು.
ಸನಾತನ ಭಾರತೀಯರ ಮೌಲಿಕ ಪರಿಕಲ್ಪನೆ ಅತ್ಯಂತ ವಿಶಾಲವಾದದ್ದು. ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ, ವಿಶ್ವ ಎಂಬ ಸ್ತರಗಳನ್ನು ವ್ಯಾಪಿಸಿ, ಅದನ್ನೂ ಮೀರಿ "ಧರ್ಮ"ವನ್ನು ಆಧಾರಸ್ತಂಭವಾಗಿ ಹೊಂದಿದೆ. ಧರ್ಮ ಎಂದರೆ "ಧರಿಸುವುದು", "ಪೋಷಿಸುವುದು". ಯಾವುದಿಲ್ಲವಾದರೆ ಪದಾರ್ಥವೇ ಇಲ್ಲದಂತಾಗುವುದೋ ಅದೇ ಧರ್ಮ. ಕಣ್ಣಿಗೆ ನೋಡುವುದು ಧರ್ಮ, ಕಿವಿಗೆ ಕೇಳುವುದು ಧರ್ಮ. ಮನುಷ್ಯನಿಗೇನು ಧರ್ಮ? ಯಾವುದಿಲ್ಲವಾದರೆ ನಾವು ಇಲ್ಲವಾಗುತ್ತೇವೆ ? ಪ್ರಾಣಿಯಲ್ಲಿನ "ಸತ್ತು" ದೇಹವನ್ನು ಬಿಟ್ಟು ಹೋದರೆ ಪ್ರಾಣಿ ಸತ್ತುಹೋಯಿತು ಎನ್ನುತ್ತೇವೆ. ಆದ್ದರಿಂದ ಮನುಷ್ಯನಲ್ಲಿರುವ "ಸತ್"ವಸ್ತು ಏನಿದೆಯೋ ಅದೇ ಅವನ ಧರ್ಮ. ಭಾರತೀಯ ಮಹರ್ಷಿಗಳು ಆ ಶಕ್ತಿರೂಪವಾದ ಸದ್ವಸ್ತುವನ್ನು ಜೀವ-ಆತ್ಮ-ಪರಮಾತ್ಮ-ಪರಂಬ್ರಹ್ಮ ಎಂದು ಬಗೆಬಗೆಯಾಗಿ ಕರೆಯುತ್ತಾರೆ. ಲೌಕಿಕ ಭಾಷೆಯಲ್ಲಿ ದೇವರು - ಭಗವಂತ ಎಂದೂ ಕರೆಯುವ ಆ ಶಕ್ತಿಯೇ ಪ್ರತಿಯೊಂದು ಪ್ರಾಣಿಯ 'ಧರ್ಮ'ವಾಗಿದೆ.
ನಮ್ಮಲ್ಲಿಯೇ ಇರುವ ಈ ಧರ್ಮವನ್ನು ತಪಸ್ಸಿನಿಂದ ಕಾಣಬಹುದು, ಅನುಭವಿಸಬಹುದು ಎಂಬುದು ಮಹರ್ಷಿಗಳ ಪ್ರಯೋಗದ ಫಲಿತಾಂಶ. ಈ ಮಾನವಶರೀರವೇ ನಮ್ಮ ಧರ್ಮವನ್ನು ಕಂಡರಿಯಲು ಪ್ರಮುಖ ಸಾಧನವಾದ್ದರಿಂದ ಇದನ್ನು ರಕ್ಷಿಸಿ ಪೋಷಿಸುವುದು ಧರ್ಮಕಾರ್ಯ. ಹಾನಿಮಾಡುವ ಕೀಟಾಣುಗಳ ನಾಶವೂ ಧರ್ಮ. ಮನಸ್ಸನ್ನು ಧರ್ಮದಿಂದ ವಿಮುಖ ಮಾಡುವ ಮಾಧ್ಯಮವೂ ಅಧರ್ಮ- ಧರ್ಮಕ್ಕೆ ವಿರುದ್ಧ ಎಂದರು. ಬಡವನಿಗೆ ಊಟ ಹಾಕಿದರೆ ಅವನ ಶರೀರಯಂತ್ರವನ್ನು ಕಾಪಾಡಿದಂತಾಯಿತು. ಆದ್ದರಿಂದ ಧರ್ಮಕಾರ್ಯವೆಂದರು. ಪ್ರತಿಯೊಂದು ಪ್ರಾಣಿಯಲ್ಲೂ ಈ ಸದ್ವಸ್ತುವನ್ನು ಕಂಡ ಮಹರ್ಷಿಗಳು ಅನಾವಶ್ಯಕವಾದ ಪ್ರಾಣಿಹಿಂಸೆಯನ್ನು ಅಧರ್ಮವೆಂದು ಗಣಿಸಿದರು. ಗುರುಕುಲವಾಸದಿಂದ ಒಳ ಧರ್ಮವನ್ನು ಕಾಣುವ ಅಭ್ಯಾಸವನ್ನು ಧರ್ಮವೆನ್ನುತ್ತೇವೆ. ಕಲಿಯುವ ಬ್ರಹ್ಮಚಾರಿ, ಕಲಿಸುವ ಗುರು, ಅವರ ಕಾರ್ಯಕ್ಷೇತ್ರವಾದ ಗುರುಕುಲವೆಲ್ಲವೂ ಧರ್ಮಕ್ಕೆ ಮೂಲವೆನ್ನುತ್ತದೆ ಭಾರತೀಯ ಸಂಸ್ಕೃತಿ. ಇವರ ರಕ್ಷಣೆ ಹಾಗೂ ಕಿರುಕುಳ ಕೊಡುವ ಆತತಾಯಿಗಳ ದಮನ ರಾಜನ ಧರ್ಮ. ಧರ್ಮರಾಷ್ಟ್ರವಾಗಿ ಬೆಳೆದುಬಂದ ಈ ಮಹರ್ಷಿಭಾರತಕ್ಕೆ ಸಲ್ಲಿಸಬೇಕಾದ ಕರ್ತವ್ಯ ಮಹತ್ತರವಾಗಿದೆ ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಭಾರತಭೂಮಿಯ ರಕ್ಷಣೆಯಲ್ಲಿ ಪ್ರಾಣತ್ಯಾಗಮಾಡುವ ವೀರಸೈನಿಕರ ಮಹಾಕಾರ್ಯವನ್ನು ಧರ್ಮಕ್ಕೆ ಸಲ್ಲಿಸಿದ ಕಾಣಿಕೆಯೆಂದು ಕೃತಜ್ಞತೆಯಿಂದ ಭಾವಿಸೋಣ.
ಸೂಚನೆ: 10/10/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.