Wednesday, October 14, 2020

ಕೃಷ್ಣನು ಅಹಂಕಾರಿಯೇ? (Krishnanu Ahankariye?)

ಲೇಖಕರು: ಯೋಗಶ್ರೀ. ಹೆಚ್. ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಒಂದು ಊರಿನಲ್ಲಿ ಧನಿಕ ವ್ಯಾಪಾರಿಯೊಬ್ಬನಿದ್ದನು. ಅವನ ಆಪ್ತಸ್ನೇಹಿತನೊಬ್ಬನು ಅವನನ್ನು 'ತುಂಬಾ ಕಷ್ಟದಲ್ಲಿದ್ದೇನೆ, ಸ್ವಲ್ಪ ಧನಸಹಾಯ ಮಾಡು' ಎಂದು ಪ್ರಾರ್ಥಿಸಿದನು. ಆಗ ಧನಿಕನು 'ನಾನು ಹೇಗಪ್ಪಾ ಶ್ರೀಮಂತನಾದೇನು? ನಾನೂ ಬಡವನೇ, ದರಿದ್ರನೇ' ಎಂದು ಹೇಳಿ ಅವನನ್ನು ನಿರಾಶೆಗೊಳಿಸಿದನು. ಸ್ನೇಹಿತನು 'ನಿನ್ನ ಬಳಿಯಲ್ಲಿ ಹೇರಳವಾಗಿ ಧನ-ಕನಕವಿದ್ದರೂ ನೀನೇಕೆ ದರಿದ್ರನೆಂದುಕೊಳ್ಳುವೆ?' ಎಂಬುದಾಗಿ ಆಕ್ಷೇಪಿಸಿದನು. ಅದಕ್ಕೆ ಅವನು, ತಾನು ಶ್ರೀಮಂತನೆಂದು ಹೇಳಿಕೊಳ್ಳುವುದು ಅಹಂಕಾರವಾಗುವುದು. ಆದ್ದರಿಂದ ವಿನಯದಿಂದ ದರಿದ್ರನೆಂದು ಹೇಳಿಕೊಂಡುದುದಾಗಿ ತಿಳಿಸಿದನು. ಇಲ್ಲಿ ಧನಿಕನ ನಡೆಯು ವಿನಯವಲ್ಲ; ಮೂರ್ಖತನ. ಧನವುಳ್ಳವನು   ಕಷ್ಟಕಾಲದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯನ ಕರ್ತವ್ಯ. ಮಾಡದಿದ್ದಲ್ಲಿ ಕರ್ತವ್ಯಭ್ರಷ್ಟತೆ. ಇಲ್ಲಿ ಅಹಂಕಾರದ ವಿಷಯವೇ ಬರುವುದಿಲ್ಲ.  

ಮೇಲಿನ ಕಥೆಯ ಮೂಲಕ ಶ್ರೀರಂಗಮಹಾಗುರುಗಳು ಒಬ್ಬ ಜಿಜ್ಞಾಸುವಿನ ಸಂಶಯನಿವಾರಣೆ ಮಾಡಿದರು. ಅವರ ಪ್ರಶ್ನೆ- ರಾಮನು ವಿನಯಶೀಲ, ಸತ್ಪುರುಷ. ತನ್ನ ಮಹಿಮೆಯನ್ನು ಎಂದಿಗೂ ಹೇಳಿಕೊಂಡವನಲ್ಲ. "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ" ಎಂದು ತಾನು ಮನುಷ್ಯಮಾತ್ರ, ದಶರಥಪುತ್ರ, ಧರ್ಮಪರಿಪಾಲಕ ಎನ್ನುತ್ತಿದ್ದನು. ಕೃಷ್ಣನಾದರೋ ಭಗವದ್ಗೀತೆಯಲ್ಲಿ ತಾನೇ ಪರಮಾತ್ಮ, ತನ್ನನ್ನು ಶರಣಾದವರು ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎನ್ನುತ್ತಾನೆ. ಕೃಷ್ಣನದು ಅನಾದರ್ಶವಾದ ಅಹಂಕಾರವಲ್ಲವೇ? ಎಂದು ತೋರಬಹುದು.

ಜ್ಞಾನಿಗಳು "ಅಹಂಕಾರವನ್ನು ಬಿಡಬೇಕು" ಎಂದಾಗ ಮನುಷ್ಯನು ತನ್ನ ದೇಹ-ಬುದ್ಧಿಗಳ "ಅಹಂ"ಅನ್ನು ತ್ಯಜಿಸಬೇಕೆಂದರ್ಥ. ತನ್ನದೇನೂ ಅಲ್ಲ, ಎಲ್ಲವೂ  ಹೃದಯಾಂತರ್ಗತವಾದ ಪರಮಾತ್ಮನದು ಎಂದು ತಿಳಿದಾಗ ಅದು ಅಹಂಕಾರವಾಗುವುದಿಲ್ಲ.

ಕೃಷ್ಣನಲ್ಲಿ ಬಹಳ ನಿಷ್ಠೆ-ನಂಬಿಕೆಗಳನ್ನು ಹೊಂದಿದ್ದ "ಕೃಪಣ"ನಾದ ಅರ್ಜುನನು ಅವನಲ್ಲಿ ಜ್ಞಾನ-ವಿವೇಕಗಳನ್ನು ಉಪದೇಶಮಾಡುವಂತೆ ಪ್ರಾರ್ಥಿಸಿದಾಗ, ಶ್ರೀಕೃಷ್ಣನು 'ನನಗೇನು ಜ್ಞಾನವಿದೆಯಪ್ಪಾ? ನಾನು ನಿನ್ನಂತೆಯೇ ಪಾಮರನು' ಎಂದಿದ್ದರೆ ಅವನೂ ಕಥೆಯಲ್ಲಿನ ಧನಿಕನಂತಾಗಿಬಿಡುತ್ತಿದ್ದ. ಸಕಾಲದಲ್ಲಿ ಸತ್ಯದ ಘೋಷಣೆ ಮಾಡುವುದು  ಅಹಂಕಾರವಾಗುವುದಿಲ್ಲ.

ಅವನು ಜ್ಞಾನನಿಧಿಯೇ ಆಗಿದ್ದನು. ಶರಣಾರ್ಥಿಗಳ ಪಾಪಕರ್ಮಗಳನ್ನು ತೊಳೆದುಹಾಕಿ ಅವರನ್ನು ಉದ್ಧಾರಮಾಡುವ ಸಂಕಲ್ಪದಿಂದ ಕೂಡಿದ್ದನು. ರಣರಂಗದಲ್ಲಿ  ಶೋಕ-ಮೋಹಗಳಿಂದ ಕರ್ತವ್ಯವಿಮುಖನಾದ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿ ಕರ್ತವ್ಯಪಥದಲ್ಲಿ ನಡೆಸಿದ ಪರಮಾಚಾರ್ಯ. ಹೀಗಿದ್ದುದರಿಂದಲೇ ಇವನಿಂದ ಭಗವದ್ಗೀತೆಯಂತಹ ಮಹದ್ವಾಣಿಯು ಲೋಕಕ್ಕೆ ಅರ್ಪಿತವಾಯಿತು. ಈ ನೇರದಲ್ಲಿ ಚಿಂತನೆ ಮಾಡಿದಾಗ ಶ್ರೀಕೃಷ್ಣನು ಅಹಂಕಾರಿ ಎನ್ನುವ ತಪ್ಪು ಗ್ರಹಿಕೆ ನಮ್ಮನ್ನು ಬಿಟ್ಟು ಹೋಗುತ್ತದೆ.


ಸೂಚನೆ: 14/10/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.