Sunday, October 4, 2020

ಅಕಾರ್ಪಣ್ಯ (Akaarpanya)

  ಲೇಖಕರು  - ವಿದ್ವಾನ್ ನರಸಿಂಹ ಭಟ್ ಬಡಗು
(ಪ್ರತಿಕ್ರಿಯಿಸಿರಿ lekhana@ayvm.in)


ಕೊಡದಿರುವುದು-ಕಾರ್ಪಣ್ಯ

'ಕಾರ್ಪಣ್ಯ' ಎಂದರೆ ಜಿಪುಣತನ, ದೀನಭಾವ, ತನ್ನಲ್ಲಿರುವುದನ್ನು ಮತ್ತೊಬ್ಬರಿಗೆ ಕೊಡದಿರುವುದು. ಈ ಸ್ವಭಾವಕ್ಕೆ ವಿರುದ್ಧವಾದುದನ್ನೇ 'ಅಕಾರ್ಪಣ್ಯ' ಎಂದು ಕರೆಯುತ್ತಾರೆ. ಪ್ರತಿಯೊಬ್ಬನೂ ಅಳವಡಿಸಿಕೊಳ್ಳಲೇಬೇಕಾದ ಗುಣ. ಮನುಷ್ಯನನ್ನು ಬಿಟ್ಟು ಉಳಿದ ಎಲ್ಲಾ ಜೀವಜಾತಿಗಳಲ್ಲೂ ಇದು ಸಹಜವಾದ ಒಂದು ಕ್ರಿಯೆ. ಅವುಗಳಲ್ಲಿ ಬೆಳೆಸಿಕೊಳ್ಳಬೇಕೆಂದಿಲ್ಲ. ಕೊಡುವುದಕ್ಕಾಗಿಯೇ ವೃಕ್ಷವು ಫಲಿಸುತ್ತದೆ, ನದಿ ಹರಿಯುತ್ತದೆ, ಮೇಘವು ಮಳೆ ಸುರಿಸುತ್ತದೆ, ಹಸು ಹಾಲನ್ನು ಕೊಡುತ್ತದೆ. ಬೀಜವು ಕಾಂಡಕ್ಕೆ, ಕಾಂಡವು ಶಾಖೆಗೆ, ಹೀಗೆ ಬೀಜದವರೆಗೂ ತನ್ನನ್ನು  ಕೊಟ್ಟುಕೊಳ್ಳುವುದರಿಂದಲೇ ವೃಕ್ಷದ ಬೆಳವಣಿಗೆಯನ್ನು ನಾವು ಕಾಣುತ್ತೇವೆ. ಹೀಗೆ ಸೃಷ್ಟಿಯಲ್ಲಿ ಎಲ್ಲ ಕಡೆಯೂ  ಕೊಡುವ ಧರ್ಮವಿದೆ.ಅವುಗಳ ಬದುಕೇ ಕೊಡುವುದಕ್ಕೋಸ್ಕರ. ತ್ಯಾಗವೇ ಜೀವನ

ತನ್ನಲ್ಲಿರುವ ಪದಾರ್ಥವು ಅಲ್ಪವಾದರೂ ಸರಿ, ಅದನ್ನು ಸಂತೋಷವಾದ ಮನಸ್ಸಿನಿಂದ ಪ್ರತಿನಿತ್ಯವೂ ಬೇರೆಯವರಿಗೆ ಕೊಡಬೇಕು. ಇದನ್ನೇ 'ಅಕಾರ್ಪಣ್ಯ' ಎನ್ನುತ್ತಾರೆ. ಸನಾತನ ಸಂಸ್ಕೃತಿಯಲ್ಲಿ 'ಯಾಗ- ಹೋಮ' ಎಂಬ ಪ್ರಕ್ರಿಯೆ ಇದನ್ನೇ ಹೇಳುತ್ತದೆ. ದೇವತೆಯನ್ನು ಉದ್ದೇಶವಾಗಿಟ್ಟುಕೊಂಡು ಮಾಡುವ ತ್ಯಾಗವನ್ನೇ ಯಾಗ ಎಂದು ಕರೆಯಲಾಗುತ್ತದೆ. ದಾನವೆಂಬುದು ಪದಾರ್ಥಗಳ ಮೇಲೆ ನಮಗಿರುವ ಅಂಟನ್ನು ದೂರಮಾಡುತ್ತದೆ. 'ಇದಂ ನ ಮಮ-(ಇದು ನನ್ನದಲ್ಲ) ಎಂದು ದಾನ ಮಾಡುವಾಗ ಹೇಳುವುದು ರೂಢಿಯಲ್ಲಿ ಬಂದಿದೆ. ನಾನು ಕೊಡುವ ಯಾವ ದ್ರವ್ಯವೂ ನನ್ನದಲ್ಲ, ಇದೆಲ್ಲವೂ ಭಗವಂತನು ನಮ್ಮ ಉದ್ಧಾರಕ್ಕಾಗಿ ಕಾರುಣ್ಯದಿಂದ ಅನುಗ್ರಹಿಸಿದವುಗಳು. ಇತರರಿಗೆ ಕೊಟ್ಟು ನಾನು ಅನುಭವಿಸುತ್ತೇನೆ' ಎಂಬ ಭಾವವನ್ನು ಬೆಳೆಸಲು ಈ ಪದ್ಧತಿ ಬಂದಿದೆ. 'ಪ್ರತಿನಿತ್ಯ ಅತಿಥಿಸತ್ಕಾರವನ್ನು ಮಾಡಬೇಕು ಎಂಬ ಪದ್ಧತಿಯೂ ಇದೇ ನೇರದಲ್ಲಿ ಬಂದಿದೆ ಎಂಬುದಾಗಿ ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದುದನ್ನು ನಾವು ನೆನಪಿಸಿಕೊಳ್ಳಬಹುದು.

ಕೊಡುವುದಕ್ಕಾಗಿಯೇ ಸಂಗ್ರಹ

ಕಾಳಿದಾಸ ಮಹಾಕವಿಯು ರಘುವಂಶ ಮಹಾರಾಜರನ್ನು ವರ್ಣಿಸುವ ಸಮಯದಲ್ಲಿ "ತ್ಯಾಗಾಯ ಸಂಭೃತಾರ್ಥಾನಾಂ" ಎಂದು ಹೇಳುತ್ತಾನೆ. ರಘುವಂಶದ ರಾಜರು ಬೇರೆಯವರಿಗೆ ಕೊಡುವುದಕ್ಕಾಗಿಯೇ ದ್ರವ್ಯವನ್ನು ಸಂಗ್ರಹಿಸುತ್ತಿದ್ದರಂತೆ. ನಾವು ಕೊಡುವ ಭಾವವನ್ನು ಬೆಳೆಸಿಕೊಳ್ಳದಿದ್ದರೆ ಕೊನೆಗೆ ಪದಾರ್ಥಕ್ಕೆ ನಾಶವೇ ಗತಿ ಎಂದು ಸುಭಾಷಿತವು ಸುಂದರವಾಗಿ ಹೇಳುತ್ತದೆ. "ಇರುವೆ ಸಂಗ್ರಹಿಸಿದ ಧಾನ್ಯ, ಜೇನು ಸಂಗ್ರಹಿಸಿದ ತುಪ್ಪ, ಜಿಪುಣ ಸಂಗ್ರಹಿಸಿದ ಹಣ ಇವೆಲ್ಲವೂ ಸಮೂಲವಾಗಿ ನಾಶವಾಗುತ್ತವೆ" ಎಂದು. ನನ್ನದಲ್ಲ ಎಂಬ ಭಾವನೆಯನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು. ಆಗ ಪ್ರಪಂಚದ ಮೇಲಿನ ನಂಟು ತಾನಾಗಿಯೇ ದೂರವಾಗುತ್ತದೆ. ಸುಖವಾದ ನಿದ್ರೆಯು ಎಲ್ಲವನ್ನು ಬಿಟ್ಟಾಗ ಮಾತ್ರ ಬರುವುದು. ನಾನು ನಿದ್ರೆ ಮಾಡುತ್ತಿದ್ದೇನೆ ಎಂಬುವುದನ್ನೂ ಮರೆಯಬೇಕು. ಹೀಗೆ ಇಹವನ್ನು ಮರೆಯಲು ಪರವನ್ನು ಪಡೆಯಲು,  ಕೊಡುವ ಅಭ್ಯಾಸವಾಗಬೇಕು. ಇದು ಅಕಾರ್ಪಣ್ಯ ಎಂಬ ಆತ್ಮಗುಣದ ಲಕ್ಷಣ.

ಸೂಚನೆ: 03/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.